ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೊಳೆದ ಬೇರೊಂದು ಲೋಕ….

ಎಂಥ ಮಿಂಚಿನ ತಿಳಿವು! ಡಾ. ಕೆ.ಪಿ.ನಟರಾಜ ಅವರ ಈ ಕವಿತೆ ನಿಮ್ಮನ್ನು ಬೇರೆಯದೇ ಗಹನವಾದ ಲೋಕಕ್ಕೆ ಕೊಂಡೊಯ್ದು ಚಿಂತನೆಯ ಕೊಡಿ ಹಚ್ಚುವಲ್ಲಿ ಶಕ್ತವಾಗುತ್ತದೆ.. ಡೀಪ್ ಇನ್ ಸೈಟ್ ಇರುವ ಒಂದು ಕಾವ್ಯ...ಓದುಗರ ಅವಗಾಹನೆಗೆ...
ಡಾ. ಕೆ.ಪಿ. ನಟರಾಜ
ಇತ್ತೀಚಿನ ಬರಹಗಳು: ಡಾ. ಕೆ.ಪಿ. ನಟರಾಜ (ಎಲ್ಲವನ್ನು ಓದಿ)

“ಬದುಕು – ಸಾವು ಎಂಬುದಿಲ್ಲ. ಅನುಭವದ ಪ್ರವಾಹದಲ್ಲಿ ಪ್ರಪಂಚ ಪೂರ್ಣವಾದ ವಸ್ತು. ಆದರೆ ಮನುಜನ ಮನಸ್ಸು ಪ್ರಪಂಚದ ಈ ಚಮತ್ಕಾರವನ್ನು ಸಾವು – ಬದುಕು ಎಂದು ವಿಭಾಗಿಸುತ್ತದೆ “
*ಮಸನೊಬು ಫುಕುವೊಕಾ


ಸಿಟ್ಟಲ್ಲಿ ಸೆಡವಲ್ಲಿ,
ಸುಡುವ
ಹೊಟ್ಟೆ ಕಿಚ್ಚುಗಳಲ್ಲಿ
ಇಷ್ಟಾನಿಷ್ಟಗಳಲ್ಲಿ
ಉರಿವ ಕೋಪ
ತಾಪ ಗಳಲ್ಲಿ
ಮುಖ ಭಂಜನೆಯಲ್ಲಿ
ಬದುಕು
ಸಿಕ್ಕುಸಿಕ್ಕಾಗಿರುವಾಗ
ಯಾಕೋ
ಕತ್ತೆತ್ತಿ ನೋಡಲಾಹಾ
ಚಂದ್ರಲೋಕ!!

ಮುಂದೊಮ್ಮೆ
ಅದು ನಮ್ಮ
ತಂಗುದಾಣವಲ್ಲವೆ
ಎಂಬ ತಿಳಿವೊಂದು
ಹೊಳೆ ಹೊಳೆದು
ನೆಮ್ಮದಿಯ ನಿಲುವೊಂದು
ನೆಲೆಗೆ ಬಂದು..

ಎಂಥ ಚಂದದ ಚಂದ್ರ
ಜಗದ ತಿಂಗಳ ಲಾಂದ್ರ
ಸುತ್ತಲೂ ಆವರಿಸಿ
ಜಗದ್ವಿಸ್ತರ!!

ನೆಲವೆ ನಮ್ಮ
ಸ್ಥಿರ ನೆಲೆಯಲ್ಲ
ಆಗಸವೂ ನಮ್ಮದೇ
ಇಲ್ಲಿಂದ ಮುಂದೆ
ಅಲ್ಲಿಗೋಟ!

ಹಗಲು ರಾತ್ರಿಗಳ
ಮಾಯೆ ಮುಚ್ಚುಗೆಯಲ್ಲಿ
ನಾವೆಲ್ಲ ವಿಶ್ವಮಾಂತ್ರಿಕನ
ಕೈಯ ಮಾಟ

ಎಂಥ ಮಿಂಚಿನ ತಿಳಿವು!

ಮುಖದ ಗಂಟುಗಳನ್ನ
ಬಿಡಿಸಿತಾಹಾ!

ಸುಡುವ
ಭೂಮಿಯ ಮೇಲೆ
ಬಿರುಮಳೆಗಳುದುರಿ
ದಟ್ಟ ವ್ರುಕ್ಶಾರಣ್ಯಗಳ
ಹಸಿರು ಗರಿಗೆದರಿ
ಬೆಟ್ಟಗಳ ನೆಲೆಯಿಂದ
ತುಂಬುನದಿಗಳು ಹರಿದು
ಧ್ರುವದಿಂದ ಧ್ರುವದತ್ತ
ಬಯಲ ಗಾಳಿಗಳು
ಮೊರೆದು ..

ಯಾಕೊ ಕತ್ತೆತ್ತಿ
ನೋಡಲಾಹಾ
ಚಂದ್ರಲೋಕ!

ಇಲ್ಲಿಗೂ ಅಲ್ಲಿಗೂ
ಸೇತುಗಟ್ಟಲಿ ಪಯಣ
ಮ್ರುತ್ಯುವಿನ ಮುರಿತಕ್ಕೆ
ದಕ್ಕದಿರಲೋ ಗೆಲುವು

ಇಲ್ಲಿಂದ ಅಲ್ಲಿಗೆ
ಅಲ್ಲಿಂದ ಇಲ್ಲಿಗೆ
ಸಾಗಿರಲಿ
ಹರಿಗಡಿಯದೀ
ಪಯಣವು!!