ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೀಗೊಂದು ಪತ್ರ..

"ನಿನ್ನ ರೂಪವ ಮರೆತು ಹೊಸ ಚಿತ್ರ ಬರೆಯುತ್ತೇನೆ" ಎಂದು ಡೈರೆಕ್ಟ್ ಆಗಿ ದೇವರಿಗೆ ಪತ್ರ ಬರೆವ ಮೂಲಕ, ಲೇಖಕಿ ಅಂಜನಾ ಹೆಗಡೆ ಯವರು ಬಂಧಗಳ ತೊರೆವ ಕ್ಷಿಪ್ರ ಕ್ರಾಂತಿಗೆ ನಾಂದಿ ಹಾಡುತ್ತಾರೆ ಈ ಕವಿತೆಯ ಮೂಲಕ....
ಅಂಜನಾ ಹೆಗಡೆ
ಇತ್ತೀಚಿನ ಬರಹಗಳು: ಅಂಜನಾ ಹೆಗಡೆ (ಎಲ್ಲವನ್ನು ಓದಿ)

ಪ್ರೀತಿಯ ದೇವಾ,
ಸುಂದರ ಮುಂಜಾವಗಳಲ್ಲಿ
ನಿನ್ನ ಕಾಲಡಿಗಳಲ್ಲಿ ತಲೆಯೂರಿ
ಸುಖದ ಮರಣವ ನೀಡೆಂದು
ಬೇಡುತ್ತಿದ್ದ ಹೃದಯವನ್ನೀಗ
ಬರಿದು ಮಾಡಿದ್ದೇನೆ
ದನಿಯಾಗಬೇಕಿದೆ
ಸ್ವಾತಂತ್ರ್ಯದ ಸಾಂಗತ್ಯಕ್ಕೆ

ನರಕದ ಭೀತಿಯ ತೊರೆದು
ಮನದ ಮಾತಿಗೆ ಕಿವಿಯಾಗಿ
ವಿರಮಿಸಲಿಕ್ಕಿದೆ ತುಸು ಹೊತ್ತು;
ಒಮ್ಮೆ ಆಲಿಸುತ್ತೇನೆ
ನಿಜದ ಮಾತುಗಳ

ನಿನ್ನ ರೂಪವ ಮರೆತು
ಹೊಸ ಚಿತ್ರ ಬರೆಯುತ್ತೇನೆ
ಕುಂಚ ಹಿಡಿಯಬೇಕಿದೆ;
ಮರುಳಾಗಬೇಕಿದೆ ಒಮ್ಮೆ
ಬಣ್ಣಗಳ ಮೋಹಕ್ಕೆ

ನನ್ನ ಕಾಲಿಗೆ
ನನ್ನದೇ ರೆಕ್ಕೆ ಕಟ್ಟಿಕೊಳ್ಳುತ್ತೇನೆ
ಗಾಳಿ ಬೀಸಿದೆಡೆಗೆ ಹಾರಬೇಕಿದೆ
ಅಪ್ಪಣೆಗಳ ಮೀರಿ;
ತೂಗಲಿಕ್ಕಿದೆ ನನ್ನೆದೆಯ ಭಾರ

ದೇವಾ,
ಬರಿದಾದ ಹೃದಯಕ್ಕೀಗ
ಅಭಿಮಾನದ ಬೇಡಿ ತೊಡಿಸಿ
ರಕ್ತ-ಮಾಂಸಗಳ ಬಂಧ ಬಿಡಿಸಿ
ಆತ್ಮದೊಂದಿಗೆ ಬೆಸೆಯುತ್ತೇನೆ!
ಮರೆಯಲು ಬಿಡು
ದೈನ್ಯದ ಪಾಠಗಳ;
ಅಹಮ್ಮಿನ ಗೆಜ್ಜೆ ತೊಟ್ಟು
ನರ್ತಿಸಬೇಕಿದೆ
ನೆಲವೆಲ್ಲ ನಾನಾಗಿ!
ಧೂಳಾಗಿ ನೆಗೆದು
ನಿವಾತವಾಗುತ್ತೇನೆ