ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೇಮ ಲಾಸ್ಯ

ಸೌಮ್ಯಶ್ರೀ ಚಿಕ್ಕಮಠ
ಇತ್ತೀಚಿನ ಬರಹಗಳು: ಸೌಮ್ಯಶ್ರೀ ಚಿಕ್ಕಮಠ (ಎಲ್ಲವನ್ನು ಓದಿ)

ನಿನ್ನ ಮಾತುಗಳೆಂದರೆ,
ಹೃದಯವೆಂಬ ಬರಡು ಭೂಮಿ ಮೇಲೆ ಸೋನೆ ಮಳೆ ಸುರಿದಂಗೆ..

ನಿನ್ನ ಪ್ರತೀ ನಡಿಗೆಯ ಸ್ಪರ್ಶವೆಂದರೆ,
ನೆಂದ ಮಣ್ಣಿಗೆ ಪ್ರೇಮದ ಶಾಯಿಯ ಗುರುತಿದ್ದಂತೆ..

ನೀ ಬಂದಿದ್ದು, ಕಾಡಿ ನುಸುಳಿ – ನಡುವ ಸುಳಿಯಲ್ಲಿ,
ಬಿದ್ದ ಮಳೆಯ ಮುತ್ತುಗಳನ್ನ ಆಯ್ದುಕೊಳ್ಳಲೆಂದೇ..

ನನ್ನ ಹಸಿಹೆರಳ ತುದಿಯಗುಂಟ,
ಪನ್ನೀರ ಹನಿಗಳೊಂದೊಂದೇ ಸೋರಿ ನೆಲದೆದೆಗೆ ತಾಕಿ ಘಮ್ಮೆದ್ದಂತೆ..

ನಾ ಕೈ ಕೊಸರಿ ನಡೆದಷ್ಟು ದೂರ,
ಮಳೆಗೆ ಕೈ ಮುಗಿದು ಬೇಡಿದ್ದು ನೀ, ಬಿಟ್ಟುಬಿಡದೇ ಹಿಂಬಾಲಿಸಲೆಂದೆ..

ನನ್ನ ಪಾದದಂಗಾಲಕ್ಕಂಟಿದ ಕೆಂದೆಸರು,
ಕ್ರಮೇಣ ಪ್ರೇಮಲಾಸ್ಯಕ್ಕೆ ತಯಾರಾದ ಸೂಚನೆಯಂತೆ..

ಮತ್ತೆ ಮತ್ತೆ ಮುಂಗಾರು..!