ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತರ್ಮುಖಿ

ನಾ ದಿವಾಕರ

ಮಳೆಯಲಿ ಮಿಂದ ಕಂಬನಿ-
ಹನಿಯೊಳು ಶತಮಾನದ ವೇದನೆ
ಕೊಚ್ಚಿ ಹೋದರೇನು
ನಿಂತು‌ ನಿಲುಕದು ಪಯಣದ ಹಾದಿ ;
ಹಣೆಯ ಮೇಲಿನ ಹನಿಗೆ
ಕಣ್ ರೆಪ್ಪೆಯೇ ಸನಿಹದಾಸರೆ
ಬೆವರು-ಕಂಬನಿಗಳೇಕೆ ದೂರ
ಹಿಡಿ ಗಾತ್ರದ ಹೃದಯದಲಿ
ತುಡಿವ ನಾಡಿ,,,, ಮಿಡಿದುದೇ ಭಾಗ್ಯ ;

ಹಾಡುಹಕ್ಕಿಯ ಧ್ವನಿಗೆ
ತಾಳ ಮದ್ದಳೆಗಳ ಹಂಗಿರಲೇಕೆ
ಕಡಲನಪ್ಪುವ ನದಿ ಕಲರವಕೆ
ಜಲಚರಗಳ ಚಿಂತೆಯಿರಲಹುದೇ
ನಿಶ್ಶಬ್ಧತೆಯ ಕತ್ತಲ ಪಯಣದಲಿ
ಹೆಜ್ಜೆಗೆಟಕುವುದು ಏನಾದರೇನು
ಬದುಕು ನಿಗೂಢತೆಯ ಸಂತೆ
ಅನುಸಂಧಾನದ ಸರಕೆಲ್ಲವೂ
ಕ್ಷಣ ಮಾತ್ರದ ಕನಸುಗಳು ;

ಸಂಬಂಧಗಳ ಸರಪಳಿಯಲಿ
ಕೊಂಡಿಗಳದೇ ಹೆಣಭಾರ
ಬೆಸೆದ ಬೆರಳುಗಳ ನಡುವಿನ
ಸ್ವೇಧ ಕಣಗಳಿಗಾದರೂ
ತೊಗಲ ಹಂಗಿರಬಾರದೇ ?
ಬಾಂಧವ್ಯದ ಧಾರೆಯಲಿ
ಹರಿವುದು ಹೊಸೆದ ಬಂಧವೋ
ಬೆಸೆದ ಪ್ರೀತಿಯೋ,,, ಜಿಜ್ಞಾಸೆ
ಮುಳುಗಿ ತೇಲಿ ಮೇಲೆದ್ದಾಗ
ಎದುರಾದುದೆಲ್ಲವೂ ಮಿಥ್ಯೆ !