- ಬೇಸರವ ಕಡಿಮೆ ಮಾಡುವ ಮಲಾಮು… - ಮಾರ್ಚ್ 13, 2023
- ಕೆಟ್ಟ ಚಟವೇತಕೆ? - ಜೂನ್ 20, 2022
- ಭರವಸೆಯ ದಾರಿ… - ಆಗಸ್ಟ್ 24, 2021
ಅದೆಷ್ಟೇ ಬಾರಿ ಯೋಚಿಸಿದರೂ
ನನ್ನ ಪಾಲಿಗೆ ಒಗಟಾಗಿಯೇ ಉಳಿದುಬಿಟ್ಟ
ವಿಚಿತ್ರ ಮನಸ್ಥಿಯ ಹೊತ್ತ ಮಾನವ…
ಅಲ್ಲೊಬ್ಬ ಎಲ್ಲರೆದುರು
ಬಂಡೆಗಲ್ಲಿನವನಂತೆ ತೋರಿ
ಮನೆಯ ದೂರದರ್ಶನದ
ಪರದೆಯ ಎದುರು ಕೂತು
ಗಳಗಳನೆ ಅಳುತಿದ್ದಾನೆ…
ಸದಾ ಅಳುಮುಂಜಿಯಂತೆ
ನಮ್ಮೆದುರೇ ಇರುವ ಇನ್ನೊಬ್ಬ
ಕಠಿಣ ಪರಿಸ್ಥಿತಿಯೊಂದರಲ್ಲಿ
ಛಲಗಾರನೆಂಬಂತೆ ಛಂಗನೆ ಎದ್ದುನಿಂತು
ಬುಸುಗುಡುತಿದ್ದಾನೆ….
ನ್ಯಾಯವನ್ನೇ ಧ್ಯೇಯವಾಗಿಸಿಕೊಂಡವನೊಬ್ಬ
ಕೆಲಸಕ್ಕೆ ನ್ಯಾಯ ಕೊಡಿಸುವ ಸಲುವಾಗಿ
ಅನ್ಯಾಯ ಮಾಡಲು ಸಿದ್ಧನಾಗಿದ್ಧಾನೆ…
ಸದಾ ಅನ್ಯಾಯವನ್ನೇ ಮಾಡಿ
ತಿರುಗುವ ಮತ್ತೊಬ್ಬ
ಲಾಭಕ್ಕಾಗಿ ನ್ಯಾಯದ ಕೈ ಹಿಡಿದು
ಎಲ್ಲರೆದುರು ದೊಡ್ಡವನಾಗಿ ಬೀಗುತಿದ್ದಾನೆ…
ಕೋಟಿಗಟ್ಟಲೆ ಅಂತಸ್ತಿನ ಒಡೆಯನೊಬ್ಬನಿಗೆ
ಬದುಕು ಕಟ್ಟಿಕೊಳ್ಳುವ ಪರಿಯೇ
ತಿಳಿಯುತಿಲ್ಲ…
ಬಡತನದ ಬೇಗೆಯಲ್ಲಿ ಬೇಯುತಿದ್ದವನೊಬ್ಬ
ಹಸನಾಗಿ ಬದುಕ ಸಾಗಿಸಿಕೊಂಡು ಹೋಗುತಿದ್ದಾನೆ…
ನೊಂದು ಹೋದ ಮನಸ್ಸು ಇಲ್ಲೊಬ್ಬನಿಗೆ
ಪಿತ್ರಾರ್ಜಿತ ಆಸ್ತಿಯನ್ನ ತೊರೆದು
ಇನ್ನೆಲ್ಲೋ ನೆಲೆಸುವಂತೆ ಮಾಡಿದೆ…
ಆದರೆ ಮತ್ತೊಬ್ಬನ ಮನಸು
ಇನ್ನಾರದೋ ಆಸ್ತಿಯನ್ನು
ತನ್ನದೆಂದು ತಿಂದು ತೇಗಿ
ಅಹಂಕಾರದಲಿ ನಗುತಲಿದೆ…
ಪ್ರೀತಿಸಿಯೇ ಮದುವೆಯಾಗುವ
ಕನಸು ಹೊತ್ತ ಅದೆಷ್ಟು ಜನ
ಹಿರಿಯರ ನಿಶ್ಚಯಕೆ ತಲೆಬಾಗಿಲ್ಲ ಹೇಳಿ??..
ಅಂತೆಯೇ ನಕ್ಕಿದ್ದು ಇದೆ,
ಪ್ರೀತಿಯೆಂದರೆ ಓಡುವ ಮಂದಿ
ಅದೇ ಪ್ರೇಮ ಸಾಗರದಲ್ಲಿ
ಬಿದ್ದು ಎದ್ದು ಒದ್ದಾಡಿದ್ದು ಕೇಳಿ…
ಇಂತಹ ಮನಸ್ಥಿತಿಯನ್ನೇ
ತಲೆ ಕೆಳಗಾಗಿಸುವ ಪರಿಸ್ಥಿತಿ
ತಮ್ಮ ಬದುಕನ್ನ ತಾವೇ
ಕೊನೆಗಾಣಿಸಿಕೊಂಡಂತಹ
ಕೆಲ ಮೂರ್ಖ ಜನಗಳದ್ದು…
ಒಟ್ಟಿನಲ್ಲಿ ಮಾನವ ಜಾತಿಯನ್ನ
ಸೃಷ್ಟಿಸಿದ ಭಗವಂತ
ಅದೇತಕೆ ಮನಸಿಗೆ
ಗೊಸುಂಬೆಯಂತೆ
ಬಣ್ಣ ಬದಲಾಯಿಸುವ
ಶಕ್ತಿಯನ್ನು ಕೊಟ್ಟನೋ ಏನೋ?
ಬಹುಶಃ ಇಂತಹ ಮನಸ್ಥಿಯ
ಹುಚ್ಚಾಟಗಳೇ
ಆತನ ಬೇಸರವ ಕಡಿಮೆ ಮಾಡುವ
ಮಲಾಮು ಆದರೂ ಆದೀತು…
ಆದರೂ ಮನಸ್ಸಿನ ಈ ಸರ್ಕಸ್
ನಮ್ಮನ್ನೇ ಆಟವಾಡಿಸುತಿರುವುದಂತು ಸುಳ್ಳಲ್ಲ…
ಕೊನೆವರೆಗೂ ನಿಷ್ಕಲ್ಮಶ ಮಗುವಿನಂತೆಯೇ
ಮನಸು ಇದ್ದಿದ್ದರೆ
ಬಹುಶಃ ನಗಬಹುದಿತ್ತೇನೋ
ನಾವು ಪೂರ್ತಿ ಬದುಕೆಲ್ಲ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ