- ಸುಳ್ಳಾಡಬೇಡ ಕನ್ನಡಿ - ಜುಲೈ 22, 2023
ಬೆಳಗೆದ್ದು ಕಂಡರೆ
ಮತ್ತೆ ಸುಳ್ಳಾಡಿದೆ ಕನ್ನಡಿ,
ಇದ್ದುದನ್ನು ಇದ್ದಂತೆ
ಹೇಳಿಬಿಡುವ ಕನ್ನಡಿ…
ಯಾರ ಮೆಚ್ಚಿಸುವ ಹಂಗು ನಿನಗಿದೆ ಕನ್ನಡಿಯೇ
ನನ್ನ ಮೆಚ್ಚಿಸುವುದಂತೂ
ನಿನ್ನ ಪಾಡಲ್ಲವಲ್ಲ!
ನಾನೆಲ್ಲಿ ಸುಳ್ಳಾಡಿದೆ? ಪ್ರತಿಭಟಿಸಿತು ಕನ್ನಡಿ…
ನನ್ನ ಕಣ್ಣುಗಳ ಮಸೂರ ನಿನ್ನೊಳಗನ್ನು ಹೊಕ್ಕು
ಕಂಡಾಗ ಕಂಡಿದ್ದನ್ನು ಹೇಳಬಾರದೆ?
ತಣ್ಣಗಾದೆ..ಸ್ತಂಭಿತಳಾದೆ
‘ನನ್ನೊಳಗನ್ನು ಹೊಕ್ಕೆಯಾ ನೀನು?’
ಮತ್ತಲ್ಲವೇನು ನಿನ್ನ ನೀ
ನನ್ನೆದುರು ತೆರೆದಾಗ
ನೇರ ನಿನ್ನ ಹೃದಯಕ್ಕೆ ದಾರಿ
ಹೌದೆ ಕನ್ನಡಿಯೇ? ಈಗ ಹೇಳು ನನ್ನಾತ್ಮ ನಿನ್ನಳವಿಗೆ ಬಂತೆ?
ಮಸ್ತಿಷ್ಕದಿಂದ ಇಳಿದು
ಹರಿವಲೆಗಳೇ ನನ್ನ
ಹೃದಯವನ್ನಾಳುವ
ಭಾವಸೆಲೆಯ ಮೂಲ!
ಅದು ತಿಳಿಯಿತೇ?
ಸಾಗರದ ಗಳಂತೆ
ಉಕ್ಕುಕ್ಕಿ ಬಂದು
ನನ್ನ ಚಿತ್ತ
ಅಲ್ಲೋಲ ಕಲ್ಲೋಲಗೊಳಿಸುವ ಭಾವನೆಗಳ ಜಾಡು ತಿಳಿಯಿತೇ?
ಅಥವಾ…
ಚಂದಿರನ ಹಾಲ್ಬೆಳಕಿನಂತೆ
ಚಿತ್ತಭಿತ್ತಿಯಾಳದಲ್ಲಿ
ಜೀವ ಚೇತನಕ್ಕೆ
ಬೆಳಕಿನಾಸರೆಯಿತ್ತು
ಕೈಚಾಚಿ ಕರೆದೊಯ್ವ
ನನ್ನ ಅಂತ:ಸಾಕ್ಷಿ
ನಿನಗಲ್ಲಿ ಭೇಟಿ ಆಯಿತೇ?
ಹೇಳು ಕನ್ನಡಿಯೇ
ನನ್ನೊಳಗೆ ನೀನೇನು ಕಂಡೆ?
ಸುಖದ ಹೂವುಗಳೂ,
ನರಳಿದ ನೋವುಗಳೂ ,
ಬುದ್ಧಿ-ತರ್ಕ,ವಿಚಕ್ಷಣೆಯ ಸಾಂಗತ್ಯಗಳಿದ್ದುವೆ ಅಲ್ಲಿ?
ಸರಿ-ತಪ್ಪು-ಒಪ್ಪುಗಳ
ನೆರಳಿತ್ತೇ ಅಲ್ಲಿ?
ಎಲ್ಲ ಸರಿ..ಎಲ್ಲವೂ ಸರಿಯೆಂದು ನನ್ನ ನಂಬಿಸಬೇಡ ಕನ್ನಡಿ, ಹುಲುಜೀವ
ನಾ…ರೋಷ,ದ್ವೇಷಗಳು,
ಮೂರ್ಖ ಚಿಂತನೆಗಳು
ಮೋಹಮಾಯೆಗಳ ಹೊಳಹು ಅಲ್ಲಿಲ್ಲವೇ? ಅರಿಷಡ್ವರ್ಗಗಳ
ಪಡಿಯಚ್ಚಿನ ಪಾಲಿಲ್ಲವೇ…?
ಇದ್ದುದನ್ನು ಇದ್ದಂತೆ ಹೇಳು ಕನ್ನಡಿಯೇ, ನೀ ಚಂದ ನೀ ಸುಂದರಿಯೆಂತೆಂದು
ನನ್ನ ನಂಬಿಸದಿರು.
ಹಿಗ್ಗು ಹಾಸದಿರು..ಮರುಳು ಮಾಡದಿರು ಸುಳ್ಳಾಡಬೇಡ
ಕನ್ನಡಿ!
ಬಿನ್ನಹಕೆ ಬಾಯುಂಟು
ಕೆಲವೊಮ್ಮೆ,
ಕೇಳು!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ