ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂಥಿಂಥ ಉರಿಯಲ್ಲ

"ಶಮ್ಮಿ" ಅವರು ಬರೆದ 'ಅಂಥಿಂಥ ಉರಿಯಲ್ಲ' ಕವಿತೆ
'ಶಮ್ಮಿ'
ಇತ್ತೀಚಿನ ಬರಹಗಳು: 'ಶಮ್ಮಿ' (ಎಲ್ಲವನ್ನು ಓದಿ)

ಅಂತಿಂಥ ಉರಿಯಲ್ಲ
ಮೂಲದಿಂದ ಅನಾಹತದವರೆಗೂ
ಒಂದೇ ಸಮನೆ ಚಾಚಿ
ಬೆಂಕಿ ತನ್ನ ಬೆರಳದಳ
ಸಹಸ್ರಾರಕ್ಕೆ ಹತ್ತಿದ ದಾವಾನಲ

ಪಕ್ಕದಲ್ಲಿ ಕೂತವ ನೊಸಲುಗಣ್ಣ
ಮುಚ್ಚಿ ತುಸುವೇ ನಗುತ್ತಾನೆ
ನೀಲ ಕಂಠ ನೀವಿ ಕುಚೋದ್ಯ ನುಂಗುತ್ತಾನೆ
ಬಳ್ಳಿಬೇರುಗಳ ಜಟೆಯಲಿ
ರಭಸದಲ್ಲಿ ಬಿದ್ದು ಅವಸರದಿ ಬುವಿ
ಇಳಿಜಾರಿಗೆ ಓಡುವ ಹೆಣ್ಣ
ಕಣ್ಣಿನಲ್ಲಿ ಪ್ರೀತಿಸುವುದ ಎಂದು ಕಲಿತ ಈ ಮುಕ್ಕಣ್ಣ?

ನಾರು ಮಡಿ, ಶೀತಲ ಜಲಸ್ನಾನ
ಮತ್ತದರಲೇ ಅಡಿಗೆ…
ಬೇಯಿಸಿದ ಪಕ್ವಾನ್ನ ಗಣಗಳಿಗೆ
ಹಿಡಿಸುವುದಿಲ್ಲ
ಮೂಗು ದಿಟ್ಟಿಸುತ್ತ ಕೂತರೆ
ಕೈಲಾಸ ಉಣುವುದಿಲ್ಲ
ಚಕ್ರಗಳಿಗೆಲ್ಲ ಈಗ ಸಂಸಾರದ ಬಂಧನ
ಇಲ್ಲಿ ಆರು ತಿಂಗಳು ಶ್ರಾವಣ ವಸಂತ
ಉಳಿದಾರು ಬರೀ ಹಿಮ ,
ಮತ್ತವನೂ ಸಂತ

ಕಣ್ಣಲ್ಲೇ ಬೆಂಕಿ ಹೊತ್ತಿಸಿ
ಒಟ್ಟಿ ಸಿದ್ಧಿಗಳ ತಟ್ಟಂತ
ಅಡಿಗೆಯೇನೋ
ಮಾಡಿಬಿಡಬಹುದು
ಸಪ್ತನದಿಗಳ ಕರೆದು ಮಿಂದು
ಬೆಚ್ಚಗೆ ಉಯ್ಯಾಲೆಯೂ ಆಡಬಹುದು
ಮಕ್ಕಳಲಿ ಲೋಕವನು ಸುತ್ತಿ ಬರುವಂತೆ
ಸಲ್ಲಾಪ ಹೂಡ ಬಹುದು
ಕೊನೆಯಿರದ ಕನಸ ನನಸು
ಮಾಡಲೂ ಬಹುದು
ಕಾವ್ಯ ನೃತ್ಯಕೇಳಿಯ ಹಬ್ಬದಲಿ
ಮೈ ಮನಸ ಮರೆಸಬಹುದು…..

ಲೋಕಗಳ ಕರೆಯಲ್ಲಿ
ಕಿವಿಗೆ ಬೀಳುವ ಅರ್ತತೆಯ ನಾದದಲಿ
ಕತ್ತಲ ಲೋಕದಿಳಿಜಾರಿನಲಿ
ಜೀವಿಗಳ ಪ್ರಾರ್ಥನೆ ಸದಾ ರಿಂಗಣಿಸಿ
ಒಳಗೆ ಅಮ್ಮ ಸುಡುವಳು
ವೈತರಣಿ ಯ ಕೂಪದಲ್ಲಿ
ಬಿದ್ದ ಆತ್ಮಗಳ ಕೂಗು
ಕಲಕಿರಲು ಧ್ಯಾನಸ್ಥಿತಿ
ಜಗನ್ಮಾತೆ ಉರಿವಳು…

ಅಂಥಿಂಥ ಉರಿಯಲ್ಲ
ಇದು ತಾಯೊಡಲ ಉರಿ