ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಾತೆಂದರೆ ಏನು ಗೂಗಲ್ ..

ನೂತನ ದೊಶೆಟ್ಟಿ ಅವರ ಹೊಸ ಕವಿತೆ...!
ನೂತನ ದೋಶೆಟ್ಟಿ
ಇತ್ತೀಚಿನ ಬರಹಗಳು: ನೂತನ ದೋಶೆಟ್ಟಿ (ಎಲ್ಲವನ್ನು ಓದಿ)

ಅಜ್ಜ ಮೂಗಿನ ಮೇಲೆ ಬೆರಳಿಟ್ಟು ಕೂತಿದ್ದಾನೆ,
ಮನೆಯಂಗಳದ ಮಾವಿನ ಮರ ಅವನ ಕನಸಿನಲ್ಲಿ….!

ನೂತನ ದೋಶೆಟ್ಟಿ ಅವರ ‘ಮಾತೆಂದರೆ ಏನು ಗೂಗಲ್’ ಕವಿತೆಯಿಂದ


ಜಗಮಗಿಸುವ ದೀಪಗಳು ನಗುತ್ತಿವೆ
ಹಾಗೆ ಅನ್ನಿಸುತ್ತಿರಬಹುದೆ?
ನದಿಗಳ ಕಣ್ಣೀರು ಕಾಣದಷ್ಟು
ದೂರದಲ್ಲಿವೆ ಅವು

ಮುಗಿಲೆತ್ತರದ ಸಿಮೆಂಟು ಗೋರಿಗಳಲ್ಲಿ
ಸುಖವೋ ಸುಖ
ಹಾಗೆ ಅನ್ನಿಸುತ್ತಿರಬಹುದೆ?
ಗುಬ್ಬಿಗಳು ಚದುರಿವೆ ಕಾಗೆಗಳು ಬೆದರಿವೆ
ಉಸಿರಾಡದ ಹಸುರಿಗೆ ಸೋಂಕು ರೋಗ

ತಣ್ಣನೆಯ ಗಾಳಿಯೆಂದರೆ ತಾನೆ
ಏರ್ ಕಂಡೀಷನ್ನಿಗೆ ಅನ್ನಿಸಿರಬಹುದೆ?
ಅಜ್ಜ ಮೂಗಿನ ಮೇಲೆ ಬೆರಳಿಟ್ಟು ಕೂತಿದ್ದಾನೆ
ಮನೆಯಂಗಳದ ಮಾವಿನ ಮರ ಅವನ ಕನಸಿನಲ್ಲಿ

ಅವನಿಗೆ ಕತೆ ಹೇಳಲೆ
ಬಾಯಿಪಾಠ ಮಾಡಿಸಲೇ
ಅಜ್ಜಿಗೆ ಅನ್ನಿಸಿರಬಹುದೆ?
ಮಾತೆಂದರೆ ಏನು ಗೂಗಲ್
ಮೊಮ್ಮಗು ಕೇಳುತ್ತದೆ.

ನಾನು ಹೀಗಿದ್ದೆನೆ
ಬದಲಾಗಿಬಿಟ್ಟೆನೆ
ಮಾತಿಗೆ ಅನ್ನಿಸಿರಬಹುದೆ?
ಮೈಂಡ್ ಯುವರ್ ಲ್ಯಾಂಗ್ವೇಜ್
ಹೆಂಡತಿ ಹೇಳುತ್ತಳೆ
ಯೂ ಬಿಚ್ ಎನ್ನುತ್ತಾನೆ ಗಂಡ.

ಪಬ್ಬು ಬಾರುಗಳಲ್ಲಿ
ಆ ಹುಡುಗಿಯ ಕುಲುಕಿಗೂ ಬೆಲೆ ಕಟ್ಟುತ್ತಾರೆ
ಹಾಗೆ ಅನ್ನಿಸುತ್ತಿರಬಹುದೆ?
ಮನೆಯಲ್ಲಿ ಸೂರೆ ಹೋಗುತ್ತಿರುವ ಸುಖ ಅಣಕಿಸುತ್ತಿದೆ.

ಮೌನ ದುಃಖಿಸುತ್ತಿದೆಯೊ
ನಗುತ್ತಿದೆಯೊ?
ಕಳೆದುಕೊಳ್ಳುವುದು ದುಃಖ
ಪಡೆಯುವುದು ಸಂತಸವೇ
ಏನು ಕಳೆದದ್ದು
ಯಾವುದು ಪಡೆದದ್ದು !!