ಡಾ ಎಚ್ಚೆಸ್ ಕೃಷ್ಣಸ್ವಾಮಿ ಅಯ್ಯಂಗಾರ್, (೧೯೨೦-೨೦೨೦) ಅವರ ಜನ್ಮ ಶತಮಾನೋತ್ಸವ ಸಮಾರಂಭ
“ ಎಚ್ಚೆಸ್ಕೆ ಅಕ್ಷರ ನಮನ” ಕಾರ್ಯಕ್ರಮ ; ದಾಖಲೆಯ ೫೬ ಕೃತಿಗಳ ಬಿಡುಗಡೆ
ಕೊರೊನ ಸಂದರ್ಭದಲ್ಲಿ ಮೂಡಿಬಂದ ಅಪೂರ್ವ ಅಕ್ಷರ ನಮನ.
ಖ್ಯಾತ ಅರ್ಥಶಾಸ್ತ್ರಜ್ಞ, ಅಂಕಣಕಾರ, ಅಧ್ಯಾಪಕ, ಅನುವಾದಕ, ಕವಿ, ಲಲಿತ ಪ್ರಬಂಧಕಾರ, ರಾಜಕೀಯ , ಸಾಮಾಜಿಕ ವಿಶ್ಲೇಷಕ, ಕಾದಂಬರಿಕಾರ, ವಿಶ್ವಕೋಶಗಳ ಸಂಪಾದಕ ಮತ್ತು ಬ್ಯಾಂಕಿಂಗ್ ನಿಘಂಟು, ಬ್ಯಾಂಕಿಂಗ್ ಪ್ರಪಂಚದ ಸಂಪಾದಕರಾಗಿದ್ದ ಪ್ರಾಚಾರ್ಯ ಎಚ್ಚೆಸ್ಕೆ ಎಂದು ಪ್ರಸಿದ್ದರಾಗಿದ್ದ, ಡಾ ಎಚ್ಚೆಸ್ ಕೃಷ್ಣಸ್ವಾಮಿ ಅಯ್ಯಂಗಾರ್ (೨೬-೦೮-೧೯೨೦ ರಿಂದ ೨೯-೦೮-೨೦೦೮), ಅವರ ಜನ್ಮ ಶತಾಬ್ದಿಯ ಅಂಗವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿ ಹಾಗೂ ಸಾಹಿತ್ಯ ದಾಸೋಹ ವೇದಿಕೆಯು “ಎಚ್ಚೆಸ್ಕೆ ಅಕ್ಷರ ನಮನ”ಎಂಬ ವಿನೂತನ ಕಾರ್ಯಕ್ರಮವನ್ನು ಬುಧವಾರ ತಾ೨೬.೦೮.೨೦ ರಂದು ಸಂಜೆ ೫.೩೦ ಕ್ಕೆ ಅಂತರ್ಜಾಲ ನೇರಪ್ರಸಾರದಲ್ಲಿ ಹಮ್ಮಿಕೊಂಡಿತ್ತು. ೫೪ ಜನ ವೇದಿಕೆಯ ಸದಸ್ಯರು ಈ ಕಾರ್ಯಕ್ರಮದಲ್ಲಿ ತಮ್ಮ ಸ್ವಂತಕೃತಿಗಳನ್ನು ಬಿಡುಗಡೆ ಮಾಡಿದರು. ವೇದಿಕೆ ಕವಿಗಳ ಸಂಕಲನ, ʼಸರಸಮ್ಮನ ಸತ್ಕಾರ ; ಸರಪಳಿಗೆ ಸತ್ಕಾರʼ, ಹಾಗೂ ವಿವಿಧ ಆಂಗ್ಲ ಬ್ಯಾಂಕಿಂಗ್ ಲೇಖನಗಳ ಅನುವಾದ ಕೃತಿಯೂ ಈ ಸಂದರ್ಭದಲ್ಲಿ ಲೋಕಾರ್ಪಣೆಯಾಯಿತು.
ಡಾ ಪ್ರಧಾನ ಗುರುದತ್ತರವರು ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಪಾ ರಾಜಗೋಪಾಲ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಮಂಜುಳಾ ಮರಾಠೆಯವರ ಪ್ರಾರ್ಥನೆಯ ನಂತರ ಶ್ರೀ ಎಚ್ ಎಲ್ ಗುರುಪ್ರಸಾದ್ ರವರು ಸ್ವಾಗತಿಸಿದರು. ವೇದಿಕೆಯ ಪ್ರಧಾನ ಸಂಚಾಲಕರಾದ ಶ್ರೀ ಬೆಂ.ಶ್ರೀ ರವೀಂದ್ರರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಭಾಷಣ ಮಾಡಿದ ,ಪ್ರಾಚಾರ್ಯ ಎಚ್ಚೆಸ್ಕೆಯವರ ಒಡನಾಡಿಯೂ ಆಗಿದ್ದ ಮುಖ್ಯ ಅತಿಥಿ ಡಾ ಪ್ರಧಾನ ಗುರುದತ್ತರವರು ಎಚ್ಚಸ್ಕೆಯವರ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು. ” ಹೊಗಳಿಕೆಗೂ ಮಿಗಿಲೀತನ ಸಾಧನೆ” ಎಂದು ಗಾಂಧೀಜಿಯವರ ಬಗ್ಗೆ ಪುತಿನ ರವರು ಹೇಳಿದ ಮಾತನ್ನು ಎಚ್ಚೆಸ್ಕೆ ಯವರಿಗೂ ಹೇಳಬಹುದೆಂದರು. ಪತ್ರಿಕೆ ಮಾರುತ್ತಿದ್ದ ಹುಡುಗ ಪತ್ರಿಕೆಗೆ ಜೀವನಾಡಿಯಾದ ಅಂಕಣಗಾರನಾಗಿ , ಕನ್ನಡದ ಶ್ರೇಷ್ಠ ಬಹುಶ್ರುತ, ಬಹುಮುಖಿ ಬಹಗಾರನಾಗಿ ರೂಪುಗೊಂಡ , ಸಂಕಷ್ಟದ ನಡುವಿನಲ್ಲಿ ಅರಳಿದ ಹೋರಾಟದ ಬದುಕು ಅವರದೆಂದರು. ದೀರ್ಘ ಕಾಲ ಅಂಕಣ ಬರೆದು ಪತ್ರಿಕೋದ್ಯಮ ಇತಿಹಾಸದಲ್ಲೇ ಅಪೂರ್ವ ದಾಖಲೆ ಸೃಷ್ಟಿಸಿದ ಎಚ್ಚೆಸ್ಕೆಯವರು ಕಾವ್ಯ, ಕಥೆ ಕಾದಂಬರಿ ನಾಟಕ ವಿಚಾರ ವಿಮರ್ಶೆ ಶಾಸ್ತ್ರಗ್ರಂಥ ಎಲ್ಲ ಕ್ಷೇತ್ರಗಳಲ್ಲೂ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ ಎಂದರು.
ನೀತಿ ನಿಯಮಕ್ಕೆ ಕಟ್ಟು ಬಿದ್ದು ಶಿಸ್ತಿ ಜೀವನ ನಡೆಸಿದ ಎಚ್ಚೆಸ್ಕೆ, ನಿಯಮಕ್ಕೆ ಭಂಗ ಉಂಟಾದಾಗ ಜೀವನ ನಿರ್ವಹಣೆ ಬಗ್ಗೆ ಯೋಚಿಸದೇ ಬನುಮಯ್ಯ ಕಾಲೇಜಿನ ಪ್ರಾಂಶುಪಾಲವೃತ್ತಿಗೆ ರಾಜೀನಾಮೆ ಇತ್ತು ಹೊರಬಂದರು.ನಂತರ ಮೈಸೂರು ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಸಂಪಾದಕರಾಗಿ ವಿಶ್ವಕೋಶದ ಹನ್ನೆರಡು ಸಂಪುಟಗಳನ್ನು ಹೊರತಂದರು.೧೯೬೬ ರಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಸ್ವೀಕಾರವಾದಾಗ, ವ್ಯಾವಹಾರಿಕ ಕನ್ನಡ ,ಆಡಳಿತ ಕನ್ನಡ ಎಂಬ ಎರಡು ಪುಸ್ತಕ ಬರೆದು ನಾಂದಿ ಹಾಡಿದರು.ಬ್ಯಾಂಕಿಂಗ್ ನಿಘಂಟಿನ ರೂವಾರಿಯಾದ ಇವರು ಬ್ಯಾಂಕಿಗ್ ಪ್ರಪಂಚದ ಸಂಪಾದಕರಾಗಿ, ಬ್ಯಾಂಕಿಂಗ್ ಕಮ್ಮಟಗಳ ನಿರ್ದೇಶಕರಾಗಿ ಜ್ಞಾನ ಕ್ಷೇತ್ರದಲ್ಲಿ ಪಾರಿಭಾಷಿಕ ಶಬ್ದ ಸೃಷ್ಟಿಸಿ ಕೊಡುವ ಮಹತ್ತರ ಕೆಲಸ ಮಾಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆಗೆ ನೀರೆರೆದು ಬೆಳೆಸಿದ್ದಾರೆ. ಸಮದರ್ಶಿಯಾಗಿ ವಾರದಿಂದ ವಾರಕ್ಕೆ ,ವಾರದ ವ್ಯಕ್ತಿ ಅಂಕಣ ಗಳ ಮೂಲಕ ಜನರಿಗೆ ಅರಿವು ಮೂಡಿಸುತ್ತಿದ್ದರು. ಇವರ ಲೇಖನ ಸಂಪುಟಗಳನ್ನು ಓದಿ ಐಎ ಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾದ ಉದಾಹರಣೆಗಳಿವೆ.ಇವರನ್ನು ಜಂಗಮ ವಿಶ್ವಕೋಶ , ನಡೆದಾಡುವ ವಿಶ್ವ ಕೋಶ, ಮುಕ್ತ ವಿಶ್ವ ವಿದ್ಯಾಲಯವಿದ್ದಂತೆ ಎಂದು ಬಣ್ಣಿಸಲಾಗಿದೆ. ಗೂಗಲ್ ವಿಕಿಪೀಡಿಯಾ ಗಳಿಲ್ಲದ ಕಾಲದಲ್ಲಿ ವಿಷಯ ಸಂಗ್ರಹಿಸಿ ನೀಡುತ್ತಿದ್ದ ಪರಿ ಅದ್ಭುತ.ಜೀವಂತ ಐತಿಹ್ಯ ವಾಗಿ ಬದುಕಿದ ಅವರನ್ನು ಶಿಷ್ಯರು ಜ್ಞಾಪಿಸಿಕೊಂಡು ಅಕ್ಷರ ನಮನ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು. ಎಚ್ಚೆಸ್ಕೆ ಯವರ ಒಡನಾಟ ದೊರೆತುದು ತಮ್ಮ ಭಾಗ್ಯ ಎಂದ ಅವರು ಎಚ್ಚೆಸ್ಕೆ ಎಲ್ಲರ ಮನದಲ್ಲಿ ಬದುಕಿದ್ದಾರೆ,ದೀರ್ಘಕಾಲ ಬದುಕಿರುತ್ತಾರೆ ಎಂದರು.
ಹಲವಾರು ಖ್ಯಾತ ಲೇಖಕರು, ಹೊಸ ಲೇಖಕರಗಳೂ ಸೇರಿದಂತೆ ೫೪ ವೇದಿಕೆ ಸದಸ್ಯರು ತಮ್ಮ ಸ್ವಂತಕೃತಿಗಳನ್ನು ಬಿಡುಗಡೆ ಮಾಡಿದರು.
ಇದೊಂದು, ದಾಖಲೆಯ ಕಾರ್ಯಕ್ರಮ, ಒಬ್ಬ ಸಾಹಿತಿಗೆ “ಅಕ್ಷರ ನಮನ” ಸಲ್ಲಿಸಿರುವ ಕಾರ್ಯಕ್ರಮವೇ ಅಪೂರ್ವ, ಅದರಲ್ಲಿಯೂ ೫೪ ಲೇಖಕರು ತಮ್ಮ ಕೃತಿ ಬಿಡುಗಡೆಯ ಮೂಲಕ ʼಆಕ್ಷರ ನಮನ” ಸಲ್ಲಿಸಿರುವುದು ಮಹತ್ವದ ಸಂಗತಿಯೆಂದು ಡಾ ಪ್ರಧಾನ ಗುರುದತ್ತ ತಿಳಿಸಿದರು..
ಸಾರ್ವಜನಿಕ ಕಾರ್ಯಕ್ರಮಗಳು ನಿಷೇಧವಾಗಿರುವ, ಈ ವಿಶ್ವಸಾಂಕ್ರಾಮಿಕದ ಸಂದರ್ಭದಲ್ಲಿ, ಅಂತರ್ಜಾಲದ ಸಮಾರಂಭದ ಮೂಲಕ, ತಮ್ಮ ಕೃತಿಗಳನ್ನು ತಾವೇ ಬಿಡುಗಡೆ ಮಾಡಿದ್ದು ಬಹಳ ಸಂತೋಷದ ವಿಷಯವೆಂದು ಲೇಖಕರು ಅಭಿಪ್ರಾಯಪಟ್ಟರು.
ಶ್ರೀ ಪಾ ರಾಜಗೋಪಾಲ್ ರವರು ಅಧ್ಯಕ್ಷ ಭಾಷಣ ಮಾಡಿ ಪ್ರಾಚಾರ್ಯ ಎಚ್ಚೆಸ್ಕೆಯವರು,ಶಿಷ್ಯರು ಮಾಡುತ್ತಿರುವ ಈ ಕಾರ್ಯಕ್ರಮವನ್ನು ಮೆಚ್ಚುತ್ತಾರೆ ಎಂದರು.ಶ್ರೀಮತಿ ಶ್ರವಣಕುಮಾರಿಯವರು ವಂದನಾರ್ಪಣೆ ಮಾಡಿದರು.
ಬೆಂಶ್ರೀ ರವೀಂದ್ರ
ಪ್ರಧಾನ ಸಂಚಾಲಕ/ ೨೬-೦೮-೨೦೨೦
ಹೆಚ್ಚಿನ ಬರಹಗಳಿಗಾಗಿ
ಹಿಂದಿ ಹೇರಿಕೆ ಸರಿಯೇ?
ಸ್ವೀಡನ್ ಚುನಾವಣಾ ಸಮರ ೨೦೨೨
ಸ್ವಾತಂತ್ರ್ಯದ ಅಮೃತೋತ್ಸವ – ೭೫ ರ ಭಾರತ