ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ವೀಡನ್ ಚುನಾವಣಾ ಸಮರ ೨೦೨೨

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

೧೧ ಸೆಪ್ಟೆಂಬರ್ ೨೦೨೨ ಸ್ವೀಡನ್ ನಲ್ಲಿ ಈಗ ಸಾರ್ವತ್ರಿಕ ಚುನಾವಣೆ. ಸಾಮಾನ್ಯವಾಗಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ, ಸೆಪ್ಟೆಂಬರ್ ನ ಎರಡನೇ ರವಿವಾರ ಈ ಚುನಾವಣೆಗಳು ನಡೆಯುತ್ತವೆ. ಸುಮಾರು ೭೦ ಲಕ್ಷಕ್ಕೂ ಅಧಿಕ ನಾಗರಿಕರು ಚುನಾವಣೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.  ಸ್ವೀಡನ್ ಸಂಸತ್ತು ರಿಕ್ಸ್ ಡಾಗ್ ನ ೩೪೯ ಸ್ಥಾನಗಳಿಗಾಗಿ ಜೊತೆಗೆ ಲೋಕಲ್ ಮುನ್ಸಿಪಲ್ ಸ್ಥಾನಗಳಿಗಾಗಿ ಕೂಡ ಚುನಾವಣೆಯಲ್ಲಿ ಮತದಾನ ನಡೆಯಲಿದೆ.

ಸ್ವೀಡನ್ ನ ಪ್ರಮುಖ  ಪಕ್ಷಗಳು 

ಸೋಶಿಯಲ್ ಡೆಮೊಕ್ರಾಟ್ ಕಾರ್ಮಿಕ ಪಾರ್ಟಿ (S), ಲೆಫ್ಟ್ ಪಾರ್ಟಿ(v), ಗ್ರೀನ್ ಪಾರ್ಟಿ(MP) 

ಮಾಡರೇಟ್ ಪಾರ್ಟಿ(M), ಲಿಬರಲ್ ಪಾರ್ಟಿ(L),  ಸೆಂಟರ್  ಪಾರ್ಟಿ(C),ಕ್ರಿಶ್ಚಿಯನ್ ಡೆಮೋಕ್ರಾಟ್ (KD) 

ಹಾಗೂ  ಸ್ವೀಡನ್ ಡೆಮೋಕ್ರಾಟ್ ಪಾರ್ಟಿ (SD) .

ಪ್ರತಿ ಪಾರ್ಟಿಗೂ ತನ್ನದೇ ಆದ ವಿಚಾರ ಧಾರೆಗಳಿವೆ.

ಸ್ವೀಡನ್ ಅನ್ನು ಪ್ರಮುಖವಾಗಿ ಆಳಿದ ಪ್ರಮುಖ ಪಕ್ಷವಾದ ಸೋಶಿಯಲ್ ಡೆಮೊಕ್ರಾಟ್ (S) ಮುಖ್ಯವಾಗಿ ತುಸು ಎಡ ಹಾಗೂ ಸಮಾಜವಾದಿ ತತ್ವಗಳ ಪಾರ್ಟಿ.

ಲೆಫ್ಟ್ ಪಾರ್ಟಿ ತೀವ್ರ ಎಡ ಪರ.

ಗ್ರೀನ್ ಪಾರ್ಟಿ ಪರಿಸರ, ಮಾನವ ಹಕ್ಕುಗಳು ಇತ್ಯಾದಿ ವಿಷಯಗಳನ್ನು ಪ್ರಮುಖವಾಗಿ ಎತ್ತುವ ಪಾರ್ಟಿ.

ಕಳೆದೆರಡು ಚುನಾವಣೆಗಳಿಂದ ಸಮ್ಮಿಶ್ರ ಸರಕಾರದ ಯುಗ ಆರಂಭವಾದದ್ದರಿಂದ ಪ್ರಸ್ತುತ ಸರಕಾರ ಸೋಶಿಯಲ್ ಡೆಮೊಕ್ರಾಟ್ ದಾಗಿದ್ದು ಗ್ರೀನ್ ಪಾರ್ಟಿಯ ಬೆಂಬಲ ಹಾಗೂ ಲೆಫ್ಟ್ ಪಾರ್ಟಿಯ ಬಾಹ್ಯ ಬೆಂಬಲದಿಂದ ನಡೆಸಲಾಗುತ್ತಿದೆ. ಮಹಿಳಾ  ಪ್ರಧಾನಿ ಮ್ಯಾಗ್ದಲೀನಾ ಅಂಡರ್ಸನ್ ಪ್ರಸ್ತುತ ಚುನಾವಣೆಯಲ್ಲೂ ಪಕ್ಷದ ನಾಯಕತ್ವ ವಹಿಸಿದ್ದಾರೆ.

ಅತ್ತ ಮಾಡರೇಟ್ ಪಾರ್ಟಿ ಸ್ವಲ್ಪ ಸಾಂಪ್ರದಾಯಿಕ ಆದರೆ ಮುಕ್ತ ವ್ಯವಸ್ತೆ, ಖಾಸಗೀಕರಣದ ಬಗ್ಗೆ ಒಲವಿರುವ ವಿಚಾರ ಧಾರೆಯ ಪ್ರಮುಖ ವಿರೋಧ ಪಕ್ಷವಾಗಿದೆ.  

ವಿರೋಧಿ ಒಕ್ಕೂಟದಲ್ಲಿ ಇತರ ಪಾರ್ಟಿಗಳಾದ ಲಿಬರಲ್ ,ಸೆಂಟರ್  ಹಾಗೂ ಕ್ರಿಸ್ಟಿಯನ್ ಡೆಮೊಕ್ರಟಿಕ್ ಪಾರ್ಟಿಗಳೂ ಇವೆ.

ಸ್ವೀಡನ್ ಸಂಸತ್ತಿನಲ್ಲಿ ಯಾವುದೇ ಪಕ್ಷ ಪ್ರತಿನಿಧಿಸಬೇಕಾದರೆ ಕನಿಷ್ಯ ೪ ಪ್ರತಿಶತ ಮತಗಳನ್ನು ಪಡೆದಿರಲೇಬೇಕು. ಪುಟ್ಟ ಪುಟ್ಟ ಪಕ್ಷಗಳೆಲ್ಲ ಸಂಸತ್ತಿನಲ್ಲಿ ತುಂಬಿಕೊಳ್ಳುವುದನ್ನು ತಡೆಯುವುದು ಈ ಕನಿಷ್ಠ ಮತಗಳ ನಿಯಮದ  ಉದ್ದೇಶ. 

ಚುನಾವಣಾ ಸಮಯದಲ್ಲಿ ಅಲ್ಲಲ್ಲಿ ಸ್ಥಾನಿಕ ಚುನಾವಣಾ ಪೋಸ್ಟರ್ ಗಳನ್ನು ಕಾಣಬಹುದು.ಜೊತೆಗೆ ಅಲ್ಲಲ್ಲಿ ಪಕ್ಷಗಳ ಬೂತ್ ಗಳು ಇರುತ್ತವೆ. ಅಷ್ಟು ಬಿಟ್ಟರೆ ಸದ್ದು ಗದ್ದಲವೇನೂ ಇಲ್ಲ. ಸ್ವೀಡನ್ ರಾಜಕಾರಣದಲ್ಲಿ ಮಹಿಳೆಯರದೂ ಹೆಚ್ಚಿನ ಪಾಲು. ಎಲ್ಲ ರೀತಿಯ ವೃತ್ತಿ ಪರರು ಕಣದಲ್ಲಿ ಇದ್ದಾರೆ. ತೋಳ್ಬಲ ಹಣಬಲದ ರಾಜಕೀಯ ಇಲ್ಲ.

ಸ್ವೀಡನ್ ನಲ್ಲಿ ಸಂಪೂರ್ಣ ಪತ್ರಿಕಾ ಸ್ವಾತಂತ್ರ್ಯ ಅತ್ಯಂತ ಮಹತ್ತರವಾದದ್ದು. ಮಾಧ್ಯಮಗಳು, ಸಾರ್ವಜನಿಕರು ಅಗತ್ಯ ಬಿದ್ದರೆ, ಸರಕಾರದ ಯಾವುದೇ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ೧೭೬೬ ರಲ್ಲಿ ಜಗತ್ತಿನಲ್ಲಿ ಮೊದಲ ಬಾರಿಗೆ ಪತ್ರಿಕಾ ಸ್ವಾತಂತ್ರ್ಯದ ನಿಯಮಾವನ್ನು ಅಧಿಕೃತವಾಗಿ ಜಾರಿಗೆ ತಂದದ್ದು ಸ್ವೀಡನ್. ಇಂದಿಗೂ ಕೂಡ ಆ ವಿಷಯದಲ್ಲಿ ಕೊಂಚವೂ ವ್ಯತ್ಯಯವಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ.

ಪಕ್ಷಗಳು ಬೂತ್ ನ ಮೂಲಕ ಪ್ರಚಾರ ನಡೆಸುತ್ತಿರುವುದು

ಪ್ರಸ್ತುತ ಸಂಸತ್ತಿನ ಬಲಾಬಲ ಹೀಗಿದೆ.

ಆಡಳೀತಾರೂಢ ಒಕ್ಕೂಟ 

ಸೋಶಿಯಲ್ ಡೆಮೊಕ್ರಾಟ್ ಕಾರ್ಮಿಕ ಪಾರ್ಟಿ (S)-೧೦೦ , 

ಲೆಫ್ಟ್ ಪಾರ್ಟಿ(v)-೨೮, 

ಗ್ರೀನ್ ಪಾರ್ಟಿ(MP) -೧೬  

ಒಟ್ಟು ೧೪೪

ವಿರೋಧ ಪಕ್ಷಗಳ ಒಕ್ಕೂಟ 

ಮಾಡರೇಟ್ ಪಾರ್ಟಿ(M)-೭೦, 

ಲಿಬರಲ್ ಪಾರ್ಟಿ(L),  ೨೦

ಸೆಂಟರ್  ಪಾರ್ಟಿ(C), ೩೧

ಕ್ರಿಶ್ಚಿಯನ್ ಡೆಮೋಕ್ರಾಟ್ (KD) ೨೨

ಒಟ್ಟು ೧೪೩

ಇವೆರಡರ ಹೊರತಾಗಿ 

ಸ್ವೀಡನ್ ಡೆಮೋಕ್ರಾಟ್(SD) ೬೨ ಸ್ಥಾನಗಳನ್ನು ಹೊಂದಿವೆ.

ಈಗ ನಿಮಗೆ ಸ್ವೀಡನ್ ಡೆಮೊಕ್ರಾಟ್ ಬಗ್ಗೆ ಹೇಳಬೇಕು. ಇದೊಂಥರ ಹಿಂದಿನ ಜನ ಸಂಘ, ಈಗಿನ ಭಾಜಪಾ ಇದ್ದ ಹಾಗೆ.  ಸ್ವೀಡನ್ ಸ್ವೀಡಿಶ್ ಗೆ ಮಾತ್ರ ಎನ್ನುವ ರಾಷ್ಟ್ರೀಯತೆಯ ಸಿದ್ಧಾಂತದ ಜೊತೆಗೆ ಹುಟ್ಟಿಕೊಂಡ ಪಾರ್ಟಿ. ಹಾಗಾಗಿ ಉಳಿದ ಪಕ್ಷಗಳು ಬೆರೆಯಲಾರದಷ್ಟು ಅಸ್ಪ್ರಶ್ಯ ಪಕ್ಷ. ಆದರೆ ಕಳೆದ ಮೂರು ಚುನಾವಣೆಗಳಿಂದ ಅತ್ಯಂತ ವೇಗವಾಗಿ ವೃದ್ಧಿಸುತ್ತಿರುವ ಪಕ್ಷ ಇದಾಗಿದೆ.  ಅದಕ್ಕೆ ಕಾರಣ ವಿವರಿಸುವ ಮೊದಲು, ಪ್ರಸ್ತುತ ೨೦೨೨ ರ ಚುನಾವಣಾ ವಿಷಯಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣ.

ಈ ಬಾರಿಯ ಸ್ವೀಡನ್ ಚುನಾವಣೆಯು ಕಾನೂನು ಸುವ್ಯವಸ್ಥೆ, ಅನಿಯಂತ್ರಿತ ನಿರಾಶ್ರಿತರು, ಅಲ್ಲಲ್ಲಿ ಕಂಡು ಬಂದಿರುವ ಗುಂಪು ಘರ್ಷಣೆ, ಇತ್ತೀಚಿಗೆ ಹುಟ್ಟಿಕೊಂಡಿರುವ ಗನ್ ಸಂಸ್ಕೃತಿಯನ್ನು ಹತ್ತಿಕ್ಕುವುದು ಜೊತೆಗೆ ಸಿಕ್ಕಾಪಟ್ಟೆ ಏರುತ್ತಿರುವ ಪವರ್ ಬಿಲ್ ಕೂಡ ಮುಖ್ಯ ವಿಷಯಗಳಾಗಿವೆ. ಇದರ ಜೊತೆಗೆ ನ್ಯಾಟೋ ಸೇರ್ಪಡೆ ಹಾಗೂ ಸುರಕ್ಷಾ ನೀತಿಯನ್ನು ಕೂಡ ಚರ್ಚಿಸಲಾಗುತ್ತಿದೆ..

    

ಮ್ಯಾಗ್ದಲೆನಾ ಅಂಡರ್ಸನ್ , ಸೋಶಿಯಲ್ ಡೆಮೊಕ್ರಟಿಕ್ ನಾಯಕಿ ಹಾಗೂ ಪ್ರಸ್ತುತ ಪ್ರಧಾನಿ

 ಸ್ವೀಡನ್ ಅನ್ನು ಹೆಚ್ಚಾಗಿ ಅಳಿದ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಸಮಾಜ ಕಲ್ಯಾಣ ವ್ಯವಸ್ಥೆಯನ್ನು ರೂಪಿಸುವಲ್ಲಿ ಯಶಸ್ಸು ಕಂಡರೂ, ನಿರಾಶ್ರಿತರ ವಲಸೆ ನೀತಿಯಲ್ಲಿ ಎಡವಿದ್ದು ಇತ್ತೀಚಿನ ಕೆಲ ಅಹಿತಕರ ಸ್ಥಿತ್ಯಂತರಗಳಿಗೆ ಕಾರಣವಾಗಿದೆ. ದಶಕಗಳಿಂದ ಶಾಂತಿ, ಸುರಕ್ಷೆಗೆ ಹೆಸರುವಾಸಿಯಾಗಿದ್ದ ಸ್ವೀಡನ್ ನಲ್ಲಿ ೫-೬ ವರ್ಷಗಳ ಈಚೆಗೆ ಭಯೋತ್ಪಾದನೆ ಹಾಗೂ ಅಪರಾಧ ಪ್ರಕರಣಗಳು ಕಂಡು ಬರುತ್ತಿವೆ. ಎಪ್ಪತ್ತು ಎಂಬತ್ತರ ದಶಕಗಳಿಂದ ಮೊನ್ನೆ ಮೊನ್ನೆ ಯವರೆಗೂ ಸ್ವೀಡನ್ ಜಗತ್ತಿನ ಯುದ್ಧ ಹಾಗೂ  ಬಿಕ್ಕಟ್ಟುಗಳಿಗೆ ತುತ್ತಾಗಿರುವ ಅಫ್ಘಾನಿಸ್ತಾನ್,  ಸಿರಿಯಾ,ಲಿಬಿಯ, ಇರಾಕ್, ಸೋಮಾಲಿಯ, ಆಫ್ರಿಕಾ ಇತ್ಯಾದಿ ರಾಷ್ಟ್ರಗಳಿಂದ ಮಾನವೀಯತೆಯ ನೆಲೆಯಲ್ಲಿ ಸಹಸ್ರಾರು ನಿರಾಶ್ರಿತರುಗಳನ್ನು ಒಳಗೆ ಬಿಟ್ಟು ಕೊಂಡಿತು. ಇಂದಿಗೂ ಕೂಡ, ಅನೇಕರು ದುಡಿಯದೆ ಇದ್ದರೂ ಕೂಡ ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆಶ್ರಯ ಬೇಡಿ ಬಂದವರಿಗೆ ನೀಡುವ ಸುಸಜ್ಜಿತ ಅಪಾರ್ಟ್ ಮೆಂಟ್ ಗಳು,ದಿನ ನಿತ್ಯದ ಖರ್ಚುಗಳು, ಸೌಲಭ್ಯಗಳು ದೇಶದ ಕರ ಸಂದಾಯದಿಂದ ಬೊಕ್ಕಸದಿಂದಲೇ ಸಂದಾಯವಾಗುತ್ತದೆ.

ಹಾಗೆ ಬಂದವರೆಲ್ಲ ಸ್ವೀಡನ್ ನ  ಮುಖ್ಯ ವಾಹಿಯಲ್ಲಿ ಬೆರೆಯದೇ ಹೋದುದರಿಂದ, ಅಲ್ಲಲ್ಲಿ ಅವರದೇ ಕೇಂದ್ರಗಳು ಸೃಷ್ಟಿಯಾದವು. ಗುಂಪು ಗರ್ಷಣೆ, ಗನ್ ಸಹಿತ ಅಪರಾಧ ಪ್ರಕರಣಗಳಲ್ಲಿ ಈ ಹಿನ್ನೆಲೆಯವರು ಭಾಗಿಯಾಗುತ್ತಿದ್ದುದು ಮೂಲ ಸ್ವೀಡನ್ ಪ್ರಜೆಗಳ ಕಳವಳದ ಮೂಲವಾಗಿ ಪರಿಣಮಿಸಿದೆ.. ಇದರ ಬಗ್ಗೆ ಅಲಕ್ಷ ತಾಳಿದ ಸೋಶಿಯಲ್ ಡೆಮೊಕ್ರಾಟಿಕ್ ಪಕ್ಷದ ಬಗ್ಗೆ ಹುಟ್ಟಿಕೊಂಡ ತೀವ್ರ ಅಸಮಧಾನ, ಪ್ರತಿ ಚುನಾವಣೆಯಲ್ಲಿ ಅದರ ಮತಗಳ ಸಂಖ್ಯೆ ಇಳಿಯುತ್ತಿರುವುದೇ ಸಾಕ್ಷಿಯಾಗಿದೆ.

ಇತ್ತೀಚಿಗೆ ದಕ್ಷಿಣ ಸ್ವೀಡನ್ ಮಾಲ್ಮೋ ದಲ್ಲಿ ಕಂಡ ಗಲಭೆ ದೃಶ್ಯ. ಇತ್ತೀಚಿಗೆ ಹೆಚ್ಚುತ್ತಿರುವ ಗ್ಯಾಂಗ್ ಕ್ರೈಂ ಗಳು ಪೋಲೀಸರ ನಿದ್ದೆ ಗೆಡಿಸಿವೆ. ಅಂತಾರ್ಷ್ಟ್ರೀಯ ಘಾತುಕ ಶಕ್ತಿಗಳು ಬೆಂಬಲಿಸಿದ ಘರ್ಷಣೆಗಳು ಮೂಲತ: ಶಾಂತಿಯುತ ಸ್ವೀಡನ್ ನಲ್ಲಿ ಭವಿಷ್ಯದ ಬಗ್ಗೆ ಆತಂಕ ಉಂಟುಮಾಡುತ್ತಿದೆ. ಇದನ್ನು ಈಗಲೇ ಮಟ್ಟ ಹಾಕುವುದು ಮುಂದಿನ ಸರಕಾರದ ಮುಖ್ಯ ಗುರಿಗಳಲ್ಲೊ೦ದಾಗಿದೆ.

ಈ ನಡುವೆ ನಿರಾಶ್ರಿತರ ಸಮಸ್ಯೆಯ ಬಗ್ಗೆ ಹಿಂದಿನಿಂದಲೂ ಎಚ್ಚರಿಸುತ್ತ ಬಂದಿದ್ದ ಬಲ ಪಂಥೀಯ ಪಕ್ಷ ಸ್ವೀಡನ್ ಡೆಮೋಕ್ರಾಟ್. ತೀವ್ರ ಬಲ ಪಂಥದ ಪಕ್ಷವನ್ನೂ ಮುಂಚಿನಿಂದ ದೂರವಿಟ್ಟಿದ್ದರೂ ಇದೀಗ ಸ್ವೀಡನ್ನಿಗರು ಅನಿವಾರ್ಯವಾಗಿ ಬೆಂಬಲಿಸುತ್ತಿದ್ದಾರೋ ಎನ್ನಿಸುವಷ್ಟು ವೇಗವಾಗಿ ಪಕ್ಷ ಬಲವರ್ದಿಸಿಕೊಂಡಿದೆ. ೯೮ ರಲ್ಲಿ 0.೪ ಪ್ರತಿಶತ ದಷ್ಟೇ ಮತ ದೊರಕಿಸಿಕೊಂಡಿದ್ದ ಪಕ್ಷ ಈ ಬಾರಿ ಅತ್ಯಂತ ದೊಡ್ಡ ಪಕ್ಷವಾಗಿ ಹೊಮ್ಮುವ ಸಾಧ್ಯತೆ ಕೂಡ ಇಲ್ಲದಿಲ್ಲ. ಅನಿವಾರ್ಯವಾದರೆ  ಮಾಡರೇಟ್  ಪಕ್ಷ ಕೂಡ ಸ್ವೀಡನ್ ಡೆಮೊಕ್ರಾಟ್ ಜೊತೆಗೆ ಕೈ ಜೋಡಿಸಿ ಸರಕಾರ ರಚಿಸಿದರೆ ಅಚ್ಚರಿಯೇನಿಲ್ಲ.

   ಸ್ವೀಡನ್ ಡೆಮೊಕ್ರಾಟ್ ಪಕ್ಷದ ಮೂಲ ಸ್ಥಾಪಕರು ನಾಜಿ  ಫ್ಯಾಸಿಸ್ಟ್ ಬೆಂಬಲಿಗರೇ ಆಗಿದ್ದರೂ, ಅವರೆಲ್ಲ ಈಗ ಕಾಲವಾಗಿದ್ದಾರೆ. ಇತ್ತೀಚಿಗೆ ಎಲ್ಲರ ಪಕ್ಷವಾಗಲು, ರೇಸಿಸ್ಟ್ ಕೋಮುವಾದಿ ಪಾರ್ಟಿ ಎಂಬ ಕಳಂಕವನ್ನು ಹೊಡೆದೋಡಿಸಲು ಜಿಮ್ಮಿ ಒಕೆಸ್ಸನ್ ನಾಯಕತ್ವದ ಸ್ವೀಡನ್ ಡೆಮೊಕ್ರಾಟ್ ಬಹಳ ವರ್ಷಗಳಿಂದ ಶ್ರಮಿಸುತ್ತಿದ್ದು ಅದರಲ್ಲಿ ತಕ್ಕ ಮಟ್ಟಿಗೆ ಸಫಲವಾಗಿದ್ದು, ಹೆಚ್ಚುತ್ತಿರುವ ಬೆಂಬಲದಿಂದ ಸಾಬಿತಾಗುತ್ತಿದೆ. ಯಾರೇ ಬಂದರೂ, ಸ್ವೀಡನ್ ನ ಮುಖ್ಯ ವಾಹಿಯಲ್ಲಿ ಅವರು ಬೆರೆಯಬೇಕು, ಸ್ವೀಡನ್ ನ ಪಾರಂಪರಿಕ ರಾಷ್ಟ್ರೀಯತೆ, ಮೂಲ ಆಸಕ್ತಿಗಳನ್ನು ಕಾಪಾಡಬೇಕು ಎನ್ನುವುದು ಅವರ ಸಿದ್ಧಾಂತ. 

ಕ್ರಿಸ್ಟಿಯನ್ ಡೆಮೊಕ್ರಾಟಿಕ್ ಪಕ್ಷದ ಎಬ್ಬಾ ಬುಶ್ ಎಡಕ್ಕೆ, ಮಧ್ಯ ಸ್ವೀಡನ್ ಡೆಮೊಕ್ರಾಟ್ ನ ಜಿಮ್ಮಿ ಅಕೆಸ್ಸನ್ ಹಾಗೂ ಗ್ರೀನ್ ಪಾರ್ಟಿಯ ಮಾರ್ತಾ ಸ್ಟೆನೆವಿ ಬಲಕ್ಕೆ . ಚುನಾವಣಾ ಚರ್ಚೆಯಲ್ಲಿ

ಹೀಗೆ ಮೂರು ಆಯಾಮಗಳಿರುವ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ, ಅತಿ ದೊಡ್ಡ ಪಕ್ಷವಾಗಿದ್ದ ಸೋಶಿಯಲ್ ಡೆಮೋಕ್ರಾಟ್ , ಇತ್ತೀಚಿಗೆ ನ್ಯಾಟೋ ಸೇರ್ಪಡೆಯ ಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಸಫಲವಾದ ಮ್ಯಾಗ್ದಲೇನಾ ಅಂಡರ್ಸನ್ ಸರಕಾರಕ್ಕೆ ಅದೇನೂ ಚುನಾವಣೆಯಲ್ಲಿ ಹೆಚ್ಚಿನ ಪ್ರಯೋಜನವಗಲಿಕ್ಕಿಲ್ಲ. ಏಕೆಂದರೆ, ಮೂಲತ: ಸೋಶಿಯಲ್ ಡೆಮೊಕ್ರಾಟ್ ನ್ಯಾಟೋ ಸೇರ್ಪಡೆ ಮುಂಚಿನಿಂದಲೂ ವಿರೋಧಿಸುತ್ತಿದ್ದು, ಇತರ ಪಕ್ಷಗಳು ಹಾಗೂ ಜನಾಭಿಮತದಿಂದಾಗಿ ಒಪ್ಪಿಕೊಂಡು ನ್ಯಾಟೋ ಸೇರ್ಪಡೆಗೆ ಚಾಲನೆ ನೀಡಬೇಕಾಯ್ತು.

ಮಾಡರೇಟ್ ಪಾರ್ಟಿಯ ಉಲ್ಫ್ ಕ್ರಿಸ್ಟರ್ಸನ್ ಹಾಗೂ ಸೋಶಿಯಲ್ ಡೆಮೊಕ್ರಟಿಕ್ ನ ಮ್ಯಾಗ್ದಲೇನಾ ಅಂಡರ್ಸನ್ ಚರ್ಚೆಯಲ್ಲಿ ವಾದ ಮಂಡಿಸುತ್ತಿರುವುದು.

೧.ಹೀಗಾಗಿ ನಿರಾಶ್ರಿತ ವಲಸೆ, ಹೆಚ್ಚುತ್ತಿರುವ ಅಪರಾಧ ಪ್ರಕರಣದ ಹೊರತಾಗಿ ಇತರ ವಿಷಯಗಳಲ್ಲಿ ಸಾಧನೆ ತೋರಿದ್ದ ಸೋಶಿಯಲ್ ಡೆಮೊಕ್ರಟಿಕ್ , ಇತರ ಬೆಂಬಲಿತ ಪಕ್ಷಗಳೊಂದಿಗೆ  ಮತ್ತೆ ಅಧಿಕಾರ ಹಿಡಿಯುತ್ತಾ ?

೨.ಅಥವಾ ಪ್ರಮುಖ ವಿರೋಧ ಪಕ್ಷವಾದ ಮಾಡರೇಟ್ ಮತ್ತು ಮಿತ್ರ ಪಕ್ಷಗಳು ಸರಕಾರ ರಚಿಸುವಲ್ಲಿ ಯಶಸ್ವಿ ಆಗ್ತಾರಾ?

೩.ಇಲ್ಲವೇ ನಾಟಕೀಯವಾಗಿ ಬಲ ಪಂಥೀಯ ಸ್ವೀಡನ್ ಡೆಮೋಕ್ರಾಟ್ ಮಿಂಚಿನಂತೆ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿ ಸ್ವೀಡನ್ ನ ರಾಜಕೀಯ ವ್ಯವಸ್ಥೆಯನ್ನೇ ಬದಲಿಸುತ್ತಾ.. ?

ಕಾದು ನೋಡಬೇಕು. ಈ ಮೇಲೆ ತಿಳಿಸಿದ ಪ್ರತಿ ಪಕ್ಷಗಳಿಗೂ ಎಷ್ಟು ಸೀಟ್ ಗಳು ಸಿಗಬಹುದು ಎಂಬುದರ ಮೇಲೆ ಸರಕಾರ ರಚನೆ ನಿರ್ಧರಿತವಾಗಿದೆ.

ಇವತ್ತು ಎಲೆಕ್ಷನ್ ಮುಗಿದು ಎಕ್ಸಿಟ್ ಪೋಲ್ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ..


ನೀವು ಇಷ್ಟು ಓದುವ ಹೊತ್ತಿಗೆ ನಾನು ಚುನಾವಣೆಯಲ್ಲಿ ಮತ ನೀಡಲು ಅಣಿಯಾಗುತ್ತಿದ್ದೇನೆ. ೬ ನೆಯ ಇಯತ್ತೆಯಲ್ಲಿ ಓದುತ್ತಿರುವ ನನ್ನ ಮಗನ ವಿಚಾರವನ್ನು ಕೇಳಿದ್ದೇನೆ. ಸ್ವತಂತ್ರವಾಗಿ ಮೆಟ್ರೋದಲ್ಲಿ ಶಾಲೆಗೆ ಹೋಗಿ ಬರುವ  ಆತನ ಪ್ರಕಾರ, ಮಾಡರೇಟ್ ಪಕ್ಷದ ಪ್ರಣಾಳಿಕೆಯಲ್ಲಿ ಸ್ಥಳೀಯವಾಗಿ   ಹೊಸ ಮೆಟ್ರೋ ಲೈನ್ , ಸುರಕ್ಷೆ, ಹೊಸ ಆಟದ ಮೈದಾನಗಳು, ಹೊಸ ಸ್ವಿಮ್ಮಿಂಗ್ ಪೂಲ್ ಇತ್ಯಾದಿಗಳು ನಮೂದಿಸಿರುದರಿಂದ ಅದಕ್ಕೆ ವೋಟು ಹಾಕಬಹುದು ಎಂದು ಸಲಹೆ ಕೊಟ್ಟಿದ್ದಾನೆ. ಆತನ ಶಾಲೆಯಲ್ಲಿ ಕೂಡ ವಿವಿಧ ಪಕ್ಷಗಳು, ಚುನಾವಣೆ ಗಳ ಬಗ್ಗೆ ಪಾಠ ಇದ್ದು, ಅಣಕು ಚುನಾವಣೆ ಕೂಡ ನಡೆದು ಮಾಡರೇಟ್ ಪಕ್ಷಕ್ಕೆ ವೋಟು ನೀಡಿ ಬಂದಿದ್ದ. ಆದರೆ ಕೆಲ ದಿನಗಳಿಂದ  ಶಾಲೆಯಿಂದ ಬರುವಾಗ ಮಾಡರೇಟ್ ಪಕ್ಷದ ಬೂತ್ ನಲ್ಲಿ ಸಿಗುವ ಎರಡು ಕ್ಯಾಂಡಿ, ತಿನ್ನುತ್ತಾ ಬರುವುದನ್ನು ಕಂಡ ನನಗೆ , ಮಗನ ನಿಷ್ಠೆ ಯಾಕೆ  ಮಾಡರೇಟ್ ಕಡೆಗೆ ಹೋಯ್ತು ಎಂಬುದಕ್ಕೆ ಉತ್ತರ ಸಿಕ್ಕಿತು ಅಂದುಕೊಳ್ಳುವೆ. 🙂

   

ನಾನು ಮೂಲತಃ ಊಲೋಫ್  ಪಾಲ್ಮೆ  ಯ ಅಭಿಮಾನಿ. ಆತ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದ ಅಂತಾರಾಷ್ಟ್ರೀಯ ಖ್ಯಾತಿಯ ಧುರೀಣನಾಗಿದ್ದವ. ಎಪ್ಪತ್ತು ಎಂಬತ್ತರ ದಶಕದಲ್ಲಿ,  ಸಮಾಜ ಕಲ್ಯಾಣ ಹಾಗೂ ಅಂತ್ಯೋದಯ ಯೋಜನೆಗಳು, ವ್ಯವಸ್ಥೆಗಳು ಆ ಪರಿ ಸ್ವೀಡನ್ ನಲ್ಲಿ ಅನುಷ್ಟಾನಗೊಂಡವು ಎಂದರೆ, ಇಡೀ ಜಗತ್ತೆ ಬೆರಗು ಕಣ್ಣುಗಳಿಂದ ಸ್ವೀಡನ್ ಮಾದರಿಯ ಕಡೆಗೆ ನೋಡಲಾರಂಭಿಸಿತು. ಭಾರತದಲ್ಲಿ ರಾಜೀವ್ ಗಾಂಧಿ ಕೂಡ ಈ ಕಡೆ ಕಣ್ಣು ಹಾಯಿಸಿ , ನಾವೂ ಹಾಗೆ ಮಾಡಬೇಕು ಅಂದುಕೊಂಡಿದ್ದ.  ಇವತ್ತಿಗೂ ಸ್ವೀಡನ್ ನಲ್ಲಿ, ಕಾರ್ಮಿಕ ಸೌಲಭ್ಯಗಳು,ಪ್ರತಿ ಪ್ರಜೆಗೂ ಇರುವ ಮೂಲ ಸೌಲಭ್ಯ, ಆರೋಗ್ಯ ವಿಮೆ, ಉಚಿತ ಶಿಕ್ಷಣ, ಕನಿಷ್ಟ ಆದಾಯಗಳು, ಅರ್ಥಿಕ ಸಮತೋಲನ, ನಾಗರಿಕರಿಗೆ ಅದರಲ್ಲೂ ತಾಯಂದಿರಿಗೆ, ಮಕ್ಕಳಿಗೆ, ಅಗತ್ಯ ಹಣಕಾಸು ಸಹಾಯಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿರುವಲ್ಲಿ ಸೋಶಿಯಲ್ ಡೆಮೊಕ್ರಾಟ್ ಪಕ್ಷದ ಯೋಗದಾನ ಇದೆ.

    ಆದರೆ ಇಂದಿನ ಸ್ಥಿತಿಯನ್ನು ನೋಡಿದರೆ ನಿರಾಶ್ರಿತರ ವಿಷಯದಲ್ಲಿ ಪಕ್ಷ ಎಡವಿದ್ದು ಅದರ ಹಿನ್ನಡೆಗೆ ಕಾರಣವಾಗಿದೆ. ಇತ್ತೀಚಿಗೆ ಪ್ರಸ್ತುತ ನಾಯಕಿ ಮ್ಯಾಗ್ದಲೇನಾ ವಲಸೆ ವಿಷಯದಲ್ಲಿ ಕಟ್ಟು ನಿಟ್ಟಿನ ನೀತಿ ಪಾಲಿಸಬೇಕಿದೆ ಎಂದು ಹೇಳಿಕೆ ನೀಡಿದ್ದು ಗಮನಾರ್ಹ.

   ಪಾಲ್ಮೆಗಾಗಿ ಹಾಗೂ ಒಟ್ಟಾರೆ ಸಾಧನೆಗಳಿಗಾಗಿ  ನಾನು ಸೋಶಿಯಲ್ ಡೆಮೊಕ್ರಾಟ್ ಪಕ್ಷವೇ ಬರಲಿ ಎಂಬ ಒತ್ತಾಸೆಯಿದ್ದರೂ, ಈ ಒಂದು ಬಾರಿ ಮಾಡರೇಟ್ ಬಂದರೆ ಚಿಂತೆಯೇನಿಲ್ಲ.     ಆದರೆ ಸ್ವೀಡನ್ ಡೆಮೋಕ್ರಾಟ್ ಆಗಮನದ ನಂತರದ ಸಾಂಸ್ಥಿಕ ಬದಲಾವಣೆ, ದೂರಗಾಮಿ  ಪರಿಣಾಮಗಳು ಇನ್ನೂ ಅಸ್ಪಷ್ಟ. ಅದರ ನಾಯಕ ಜಿಮ್ಮಿ ಆಕೆಸ್ಸನ್ ಪ್ರೌಢನಾಗಿ ಕಾಣಿಸುತ್ತಿರುವುದು ಸಮಾಧಾನದ ಸಂಗತಿ. ಆದರೂ ಸ್ವೀಡನ್ ರಾಜಕಾರಣ ಕವಲು ದಾರಿಯಲ್ಲಿದೆ ಎಂಬುದು ಸ್ಪಷ್ಟ.

ಚಿತ್ರ ಸೌಜನ್ಯ ಗೆಟ್ಟಿ ಜೊನಾಥನ್ ನಕ್‌ಸ್ಟ್ರಾಂಡ್/ಎಎಫ್‌ಪಿ