ಎನ್.ಎಸ್.ಶ್ರೀಧರ ಮೂರ್ತಿ
ಶ್ರೀ ಎನ್.ಎಸ್.ಶ್ರೀಧರ ಮೂರ್ತಿ ಅವರು ನಾಡು ಕಂಡ ಬಹುಮುಖ ಪ್ರತಿಭಾನ್ವಿತ ವ್ಯಕ್ತಿತ್ವಗಳಲ್ಲಿ ಒಬ್ಬರು.ಬಿ.ಎ.ಪದವಿಯಲ್ಲಿ ಎಂಟನೇ ರ‍್ಯಾಂಕ್ ಮತ್ತು ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ‍್ಯಾಂಕಿನೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು. ಮಲ್ಲಿಗೆ ಮಾಸ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದ ಅವರು ಮಂಗಳ ವಾರಪತ್ರಿಕೆ ಸಂಪಾದಕರಾಗಿ, ವಿಜಯವಾಣಿ ದಿನ ಪತ್ರಿಕೆ ಪುರವಣಿ ಸಂಪಾದಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತಿಯ ನಿರ್ದೇಶಕರಾಗಿ ಕಾರ್ಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ‘ಕನ್ನಡ ಜಾಗೃತಿ’ ಪತ್ರಿಕೆಯ ಸಂಪಾದಕರಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿರುವ ಇವರು ಸಾಹಿತ್ಯ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅವರ ನಾಲ್ಕು ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿದ್ದು ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ ಹೀಗೆ ವಿವಿಧ ಪ್ರಕಾರಗಳಲ್ಲಿ ಐವತ್ತು ಕೃತಿಗಳು ಅಚ್ಚಾಗಿವೆ.