ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಧೆ ಎಂಬ ಕೃಷ್ಣನ ತೋರುವ ಕಣ್ಣು

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ಶ್ರೀಕೃಷ್ಣನ ಜೊತೆಗೆ ವರ್ಣಿತವಾಗಿರುವ ವ್ಯಕ್ತಿ ಎಂದರೆ ರಾಧೆ, ದೈವಿಕ ಪ್ರೇಮದ ಸಂಕೇತವಾಗಿ ಇವಳನ್ನು ವರ್ಣಿಸಲಾಗಿದೆ. ಎಷ್ಟರ ಮಟ್ಟಿಗೆ ಎಂದರೆ ರಾಧಾಕೃಷ್ಣ ಎಂಬ ಅಭೇದಭಾವವೇ ನಮ್ಮಲ್ಲಿದೆ. ಜನಪದರಲ್ಲಿ ಆಕೆ ಭಕ್ತಿಗೆ ರೂಪಕ. ಗುಜರಾತಿನ ರಾಸಲೀಲೆಗೆ ರಾಧೆಯೇ ನಾಯಕಿ. ಇತ್ತೀಚಿನ ದಿನಗಳಲ್ಲಿ ರಾಧೆಗೆ ಪ್ರತ್ಯೇಕ ದೇಗುಲಗಳೂ ಕೂಡ ನಿರ್ಮಾಣವಾಗಿವೆ. ಇಷ್ಟೆಲ್ಲಾ ಪ್ರಸಿದ್ಧವಾಗಿರುವ ರಾಧೆಯ ವಿವರವಿರಲಿ ಉಲ್ಲೇಖ ಕೂಡ ವಿಷ್ಣುಪುರಾಣದಲ್ಲಾಗಲಿ, ಮಹಾಭಾರತ ಹರಿವಂಶಗಳಲ್ಲಾಗಲಿ ಹೋಗಲಿ ಶ್ರೀಕೃಷ್ಣನ ಸಂಕೀರ್ತನೆಗೆಂದೇ ರೂಪುಗೊಂಡ ಭಾಗವತದಲ್ಲಾಗಲಿ ಇಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು. ಅಲ್ಲಿ ರುಕ್ಮಿಣಿ, ಸತ್ಯಭಾಮೆಯರಿದ್ದಾರೆ ಜಾಂಬವತಿಯ ಉಲ್ಲೇಖವೂ ಇದೆ. ನರಕಾಸುರನ ಸೆರೆಯಿಂದ ಬಿಡಿಸಿದ ಹದಿನಾರು ಸಾವಿರ ಕನ್ಯೆಯರ ವಿಚಾರವಿದೆ. ಶ್ರೀಕೃಷ್ಣ ಅವರನ್ನು ವಿವಾಹವಾದ ಪ್ರಸಂಗವೂ ಇದೆ. ಆದರೆ ರಾಧೆಯ ಉಲ್ಲೇಖವೇ ಇಲ್ಲ. ಈಗ ಪ್ರಸಿದ್ಧವಾಗಿರುವ ಕಥೆಗಳ ಪ್ರಕಾರ ರಾಧೆ ಗೋಕುಲದ ಒಬ್ಬ ಗೋಪಿಕಾ ಸ್ತ್ರೀ. ಅಲ್ಲಿದ್ದಾಗ ಶ್ರೀಕೃಷ್ಣ ತೀರಾ ಚಿಕ್ಕವನು. ರಾಧೆ ಮಥುರೆಗೆ ಬಂದ ಉಲ್ಲೇಖ ಈಗಿನ ಕಥೆಗಳಲ್ಲೂ ಇಲ್ಲ. ಅಂದರೆ ಪ್ರೇಮ ಪ್ರಸಂಗ ಹೇಗೆ ಸಾಧ್ಯ? ಎಂದು ಯೋಚಿಸಿದಾಗ ತರ್ಕ ತಪ್ಪಿದ ಭಾವ ಬರುತ್ತದೆ. ಆದರೆ ಇದೇ ರಾಧೆಯ ಪಾತ್ರದ ಹಿಂದಿನ ತಾತ್ವಿಕತೆ ಅದು ದೈವಿಕ ಪ್ರೇಮದ ರೀತಿ.

ರಾಧೆಯ ಕಥೆ ಪ್ರಸಿದ್ಧವಾಗಿದ್ದು ಜಯದೇವ ಕವಿಯ ‘ಗೀತ ಗೋವಿಂದ’ದಿಂದ. ರಾಧಾ ಕೃಷ್ಣರ ಪ್ರಣಯ ಮತ್ತು ಶೃಂಗಾರ ಭಾವಗಳು ಅಲ್ಲಿ ವರ್ಣಿತವಾಗಿದೆ. ದೈಹಿಕ ಪ್ರೇಮದ ವಿವರಗಳನ್ನು ನೀಡುತ್ತಲೇ ದೈವತ್ವಕ್ಕೆ ಏರುವುದು ಇಲ್ಲಿನ ವಿಶೇಷ. ರಾಧಾ ಮಾಧವರ ಪ್ರೇಮ ವಿಲಾಸವನ್ನು ಅಲೌಕಿಕ ನೆಲೆಯಲ್ಲಿ ನೋಡಲು ಪ್ರೇರಣೆ ದೊರಕಿರುವುದೇ ಇಲ್ಲಿ. ಅದರಲ್ಲಿಯೂ ರಾಧೆಯ ಅಭಿಸಾರಿಕಾ ಭಾವದ ಕುರಿತು ‘ಗೀತಗೋವಿಂದ’ದಲ್ಲಿ ಹೆಚ್ಚಿನ ಗೀತೆಗಳು ಇರುವುದರಿಂದ ರಾಧೆಯನ್ನು ಮುಂದೆ ಅಭಿಸಾರಿಕಾ ಭಾವಕ್ಕೆ ರೂಪಕವನ್ನಾಗಿಯೂ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಬೆಳೆಯಿತು. ಆದರೆ ಗೀತ ಗೋವಿಂದದಲ್ಲಿ ಕಥೆ ಇರಲಿಲ್ಲ. ಹೆಚ್ಚು ಕಡಿಮೆ ಇದೇ ಕಾಲದಲ್ಲಿದ್ದ ನಿಂಬಾರ್ಕ ಎನ್ನುವ ಕವಿ ‘ರಾಧಾ ಚರಿತೆ’ಎನ್ನುವ ಕಾವ್ಯವನ್ನು ರಚಿಸಿದ್ದಾನೆ. ಇಲ್ಲಿ ಈಗ ಪ್ರಚಲಿತವಿರುವ ರಾಧೆಯ ಕಥೆ ಮೊಟ್ಟ ಮೊದಲ ಸಲ ದೊರಕುತ್ತದೆ. ಅಲ್ಲಿಂದ ಮುಂದೆ ರಾಧೆಯ ದೈವಿಕ ಪ್ರೇಮವನ್ನು ಕುರಿತ ಭಕ್ತಿ ಪರಂಪರೆ ಬೆಳೆದು ಬಂದಿದೆ. ಅಂದರೆ ರಾಧೆಯ ಉಲ್ಲೇಖ ಕಾಣಿಸುವುದೇ ಹನ್ನೆರಡನೇ ಶತಮಾನದಿಂದೀಚೆಗೆ. ಅದಕ್ಕಿಂತಲೂ ಮುಂಚೆ ಎಲ್ಲಾದರೂ ರಾಧೆಯ ಉಲ್ಲೇಖ ದೊರಕಬಹುದೆ ಎಂದು ಹುಡುಕುತ್ತಿದ್ದ ಸಂಶೋಧಕರಿಗೆ ಇತ್ತೀಚೆಗೆ ಹತ್ತನೇ ಶತಮಾನದ್ದು ಎಂದು ಊಹಿಸಲಾಗಿರುವ ‘ಬ್ರಹ್ಮ ವೈವರ್ತ ಪುರಾಣ’ಎಂಬ ಕಾವ್ಯ ದೊರಕಿದೆ. ಇದರ ಕರ್ತೃ ಯಾರು ಎನ್ನುವುದರ ಕುರಿತು ಸಾಕಷ್ಟು ಚರ್ಚೆಗಳೂ ನಡೆಯುತ್ತಿವೆ. ಈ ಪುರಾಣದಲ್ಲಿ ಬ್ರಹ್ಮಕಾಂಡ, ಪ್ರಕೃತಿ ಕಾಂಡ, ಗಣೇಶ ಕಾಂಡ ಮತ್ತು ಕೃಷ್ಣ ಜನ್ಮಕಾಂಡ ಎನ್ನುವ ನಾಲ್ಕು ಭಾಗಗಳಿವೆ. ಇದರಲ್ಲಿನ ನಾಲ್ಕನೇ ಭಾಗದಲ್ಲಿ ರಾಧೆಯ ಕುರಿತ ಉಲ್ಲೇಖವಿದೆ.

‘ಬ್ರಹ್ಮವಿವರ್ತ ಪುರಾಣ’ದ ಪ್ರಕಾರ ವಿಷ್ಣುಲೋಕಕ್ಕಿಂತಲೂ ಮೇಲೆ ‘ಗೋಲೋಕ’ವಿದೆ. ರಾಧಾ ಕೃಷ್ಣರು ಅಲ್ಲಿ ವಾಸವಾಗಿದ್ದಾರೆ. ಕೃಷ್ಣನೊಡನೆ ಏಕಾಂತದಲ್ಲಿದ್ದಾಗ ಬಂದ ಅಗಸ್ತ್ರ್ಯ ಮುನಿಗಳ ಮೇಲೆ ರಾಧೆ ಕೋಪಿಸಿಕೊಳ್ಳುತ್ತಾಳೆ. ಅವರೂ ಪ್ರತಿಯಾಗಿ ಭೂಲೋಕದಲ್ಲಿ ಹುಟ್ಟುವಂತೆ ಅವಳನ್ನು ಶಪಿಸುತ್ತಾರೆ. ರಾಧೆಯನ್ನು ಹಿಂಬಾಲಿಸಿ ಶ್ರೀಕೃಷ್ಣನೂ ಭೂಲೋಕದಲ್ಲಿ ಅವತಾರವನ್ನು ಎತ್ತುತ್ತಾನೆ. ಈ ಪುರಾಣದಲ್ಲಿ ಬ್ರಹ್ಮನೇ ರಾಧಾ ಮಾಧವರ ವಿವಾಹವನ್ನು ನೆರವೇರಿಸುತ್ತಾನೆ. ಒಂದು ತಿಂಗಳ ಕಾಲ ಭೂಲೋಕದಲ್ಲಿ ಲೀಲೆಯನ್ನು ನಡೆಸಿದ ನಂತರ ರಾಧೆ ತನ್ನ ಲೋಕಕ್ಕೆ ಹಿಂದಿರುಗುತ್ತಾಳೆ. ಹಿಂದಿರುಗುವ ಮುನ್ನ ತನ್ನ ಶಕ್ತಿಯನ್ನು ಪಾಂಚಜನ್ಯವಾಗಿ ಮಾರ್ಪಡಿಸಿ ಶ್ರೀಕೃಷ್ಣನಿಗೆ ನೀಡುತ್ತಾಳೆ. ಇದರಿಂದಲೇ ಶ್ರೀಕೃಷ್ಣನು ತನ್ನ ಅವತಾರದ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾನೆ.

ಕಮಲಾದಾಸ್ ರಾಧೆಯ ಕುರಿತ ಚಿಂತನೆಯನ್ನು ವಿಶ್ಲೇಷಿಸುತ್ತಾ ಹೇಳುತ್ತಾರೆ ‘ಎಲ್ಲಾ ಭಾರತೀಯರ ನಾರಿಯರ ಮನದಲ್ಲಿಯೂ ರಾಧೆ ಇದ್ದಾಳೆ.’ ಇದನ್ನು ಕಾಮವೆಂದು ಭಾವಿಸಬೇಕಾಗಿಲ್ಲ, ಅದೊಂದು ಅಲೌಕಿಕ ಭಾವ. ಇದನ್ನು ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ‘ಜೀವನವೆಲ್ಲಾ ಗೋಕುಲವಾಗಿ/ಒಲವೇ ಯಮುನಾ ನದಿಯಾಗಿ/ ನಾವೇ ರಾಧಾ-ಮಾಧವರಾಗಿ ಆಡುವ ಮಾತೇ ಪ್ರೇಮ ವಿಲಾಸ’ ಎಂದು ಸೊಗಸಾಗಿ ಹಿಡಿದಿಟ್ಟಿದ್ದಾರೆ. ಪು.ತಿ.ನ ಅವರ ‘ಗೋಕುಲ ನಿರ್ಗಮನ’ದಲ್ಲಿ ರಾಧೆ ‘ಜಗತ್ತಿನ ಪಾಪವನ್ನು ತೊಳೆಯಲು ಬಂದಿರುವ ಯಮುನೆಯನ್ನು ಕೊಡದಲ್ಲಿ ಹಿಡಿದಿಡುವುದು ಸಾಧ್ಯವೆ? ಜಗತ್ತನ್ನೇ ಉದ್ದರಿಸಲು ಬಂದಿರುವ ಕೃಷ್ಣನನ್ನು ನನ್ನವನು ಎಂದು ತಡೆದು ನಿಲ್ಲಿಸುವುದು ನ್ಯಾಯವೇ’ಎಂದು ಕೇಳುತ್ತಾಳೆ. ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರು ‘ರಾಧೆ’ಯನ್ನು ಕೃಷ್ಣನ ತೋರುವ ಕಣ್ಣು ಎಂದು ವರ್ಣಿಸಿರುವುದರ ಅರ್ಥ ಇರುವುದು ಇಂತಹ ನೆಲೆಯಲ್ಲಿಯೇ.