ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಮ್ಮಲ್ಲೇ ಇಹುದೇ ನಮ್ಮ ಸುಖ!

ಶ್ರೀರಕ್ಷಾ ನಾಯ್ಕ್
ಇತ್ತೀಚಿನ ಬರಹಗಳು: ಶ್ರೀರಕ್ಷಾ ನಾಯ್ಕ್ (ಎಲ್ಲವನ್ನು ಓದಿ)

ಅಂದು ಭಾನುವಾರ ರಜೆ. ಹೀಗೆ ಮಾರ್ನಿಂಗ್ ವಾಕಿಗೆ ಅಂತ ಹೋಗಿದ್ವಿ ನಾನು ಮತ್ತೆ ನನ್ನ ಗೆಳತಿ ಪಾರ್ಕಿಗೆ. ನಮ್ಮ ಉತ್ತರ ಕರ್ನಾಟಕದಲ್ಲಿ ಬೆಳಗ್ಗೆ ಎದ್ದರೆ ಸಾಕು ತಿಂಡಿಗಿಂತ ಚಹಾ ಬೇಕು. ನಮಗೂ ಹಾಗೆ ಬೆಂಗಳೂರಲ್ಲಿ ಇದ್ದರೂ ಕಾಫಿಗಿಂತ ಹೆಚ್ಚು ಚಹಾ. ಅಲ್ಲಿ ಸ್ವಲ್ಪ ಸುತ್ತಾಡುತ್ತ ಇರುವಾಗ ನನ್ನ ಗೆಳತಿ ತರುತ್ತೇನೆ ಅಂತ ಹೋದಳು. ನಾನು ಅಲ್ಲೇ ಒಂದು ಬೆಂಚಿನ ಮೇಲೆ ಕುಳಿತೆ , ವಿಷಯವೇನೆಂದರೆ ಅವಳ ಗೆಳೆಯ ಸಿಕ್ಕಿ ಅವಳು ಮಾತಿಗಿಳಿದಿದ್ದಳು. ಅದಕ್ಕಾಗಿ ನಾನು ಅವಳಿಗೆ ಕಾಯಲೇ ಬೇಕಾಯಿತು. ಒಂದು ಐದು ನಿಮಿಷದ ನಂತರ ಒಬ್ಬ ವಯಸ್ಸಾದ ತಾತ ನನ್ನ ಪಕ್ಕ ಬಂದು ಕುಳಿತರು. ಹಾಗೇ ಇಬ್ಬರಲ್ಲೂ ಮುಗುಳುನಗೆಯ ವಿನಿಮಯವೂ ಆಯಿತು. ಆಗ ಆ ತಾತ, “ಹೆಸರೇನು ? ಇಲ್ಲಿಯವರೇನಾ ?” ಅಂತ ಪ್ರಶ್ನೆ ಹಾಕಿದರು. “ಅಲ್ಲ ತಾತ ನಮ್ಮದು ಧಾರವಾಡ ಕಲೀಲಿಕ್ಕೆ ಅಂತ ಬಂದಿರೋದು ಅಷ್ಟೇ” ಅಂದೆ.

“ಕಲೀಬೇಕು, ಈಗಿನ ಮಕ್ಕಳು ಕಲಿತು ಒಳ್ಳೆಯ ಕೆಲಸಕ್ಕೆ ಸೇರಬೇಕು ಜೀವನ ಸುಖವಾಗಿರುತ್ತದೆ” ಅಂದರು. ಅವರ ಮಾತು ಸಹಜವಾಗಿದ್ದರೂ ನನಗೇಕೋ ಅದು ತರ್ಕಕ್ಕೆ ಬೀಳಿಸಿತು. “ತಾತ ಕಲಿತ ಮಾತ್ರಕ್ಕೆ , ಕೆಲಸಕ್ಕೆ ಸೇರಿದ ಮಾತ್ರಕ್ಕೆ ಜೀವನ ಸುಖವಾಗಿರುತ್ತದೆ ಅಂತ ಹೇಗೆ ಹೇಳ್ತೀರಾ ?!”

“ಯಾಕೆ ಮಗು ಈ ಪ್ರಶ್ನೆ ?!” ಅಂದರು.

“ನಾವು ಈಗ ಸುಖವಾಗಿಲ್ಲವೇ ತಾತ, ಬರೀ ಹಣ ಕೆಲಸದಿಂದ ಮಾತ್ರ ಸುಖವೇ ?” ಅಂದೆ.

“ಅಯ್ಯೋ ಹುಚ್ಚು ಹುಡ್ಗಿ ಹಣ ವಿದ್ಯೆ ಇದ್ದರೆ ಸುಖ ತಂತಾನೇ ಬರುತ್ತೆ ಈಗಿನ ಕಾಲದಲ್ಲಿ ಅದಕ್ಕೇನೇ ಬೆಲೆ ಜಾಸ್ತಿ” ಅಂದರು, “ಪ್ರೀತಿ ಮಾನವೀಯತೆ ಸಂಬಂಧಗಳು ನೆಮ್ಮದಿ ನೀಡದೇ?” ಕೇಳಿದೆ.

“ಪ್ರೀತಿ ಸ್ವಾರ್ಥವಾಗಬಾರದು. ಮಾನವೀಯತೆ ಡಾಂಭಿಕವಾಗಬಾರದು, ಇನ್ನೂ ಸಂಬಂಧಗಳು ಹೆಸರಿಗಷ್ಟೇ ಸೀಮಿತವಾಗಬಾರದು. ನಿನ್ನದಿನ್ನೂ ಚಿಕ್ಕ ವಯಸ್ಸು ಕಾಲ ಬದಲಾದಂತೆ ಎಲ್ಲವೂ ತಿಳೀತದೆ ಎಲ್ಲವನ್ನು ನಂಬೋ ವಯಸ್ಸು ನಿಮ್ಮದು. ಎಲ್ಲವನ್ನೂ ತಾಳೆ ಮಾಡಿದ ವಯಸ್ಸು ನಮ್ಮದು. ಜೀವನ ಹೀಗೆ ಅಂತ ಹೇಳುವುದಕ್ಕೆ ಆಗಲ್ಲ ಮಗು.”

“ನಿಮ್ಮ ಪ್ರಕಾರ ಸುಖ ಅಂದ್ರೆ ಏನು ತಾತ ?” ಯಾಕೋ ಆ ತಾತನಲ್ಲಿ ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ದೊರಕುತ್ತದೆ ಎನ್ನುವ ನಂಬಿಕೆ.

“ಸಮಯ ಇದೆಯೇ ?” ಕೇಳಿದರು.

“ಹ್ಞೂ ಇದೆ ಯಾಕೆ?”

“ಈಗಿನವರಿಗೆ ಸಮಯ ಇರೋದಿಲ್ಲ. ಬರೀ ತಮ್ಮ ಕೆಲಸ ಮನೆ ಅಂತ ತಮ್ಮ ಪಾಡಿಗೆ ತಾವಿರುತ್ತಾರೆ. ನೀನು ಹೀಗಿರುವಾಗ ಒಂದು ಪ್ರಶ್ನೆ ಕೇಳಿದೆ ನೋಡು. ಹ್ಞಾ ! ಸುಖ , ನಿಮ್ಮ ಸಮಯವೇ ಸುಖ ಮಗು. ನೀನೆಷ್ಟು ಸಮಯ ನಿನಗೆ ಕೊಡುತ್ತೀಯಾ ಅಂದರೆ ಕೆಲಸದ ಹೊರತು ನಿನಗೆ ನೀನು ಸಮಯ ಕೊಡುವುದೇ ಸುಖ”

“ಮತ್ತೆ ನಮ್ಮವರಿಗಾಗಿ?”

“ನಿನಗೆ ನೀನು ಸಮಯ ಕೊಡುವುದೆಂದರೆ ಅಲ್ಲಿ ಎಲ್ಲವೂ ನಿನಗೆ ಹತ್ತಿರವಾದದ್ದೇ” ಅಂದರು.

“ಮತ್ತೆ ಆಗ ಕೆಲಸ ವಿದ್ಯೆಯಿಂದ ಜೀವನ ಸುಖವಾಗಿರುತ್ತೆ ಅಂತ ಹೇಳಿದ್ರಿ!”

“ನಿನ್ನ ನಿಷ್ಠೆ ನಿನಗೆ ಬಲ ನಿನ್ನ ತಂದೆ ತಾಯಿ ಕಷ್ಟ ಪಟ್ಟಿರುತ್ತಾರೆ. ನೀನು ಒಂದು ಸ್ಥಾನದಲ್ಲಿದ್ದರೆ ಅವರಿಗೂ ಹೆಮ್ಮೆ, ನಿನಗೂ ಸಹ. ಅದೇ ಕಲಿಯದೇ ಕೂರು ಹೀಯಾಳಿಸುವರು, ನಿಂದನೆ ಅನೇಕ ಪದಗಳು ನಿನ್ನ ಪಾಲಾಗುತ್ತವೆ. ಅದರಿಂದ ನಿನಗೆ ನೋವು ನಿನ್ನವರಿಗೂ ನೋವು. ಒಂದು ಘಳಿಗೆಗೆ ನಿನ್ನವರನಿಸಿಕೊಂಡವರಿಗೂ ನೀನು ಬೇಸರವಾಗುತ್ತಿ. ಆದರೆ ಆ ನಿನ್ನ ಸೋಲಿಗೂ ನಿನ್ನ ಬೆನ್ನ ಹಿಂದೆ ಇರ್ತಾರಲ್ಲ ಅವರು ಹಿತೈಷಿಗಳು” ಅಂದರು.

“ನಿಮ್ಮ ಮಾತು ಮತ್ತೆ ಅಲ್ಲಿಗೆ ಬಂತಲ್ಲ ತಾತ ಹಣ ದುಡಿಮೆ..! ಪ್ರೀತಿಗೆ ಜಾಗ?”

“ಅದು ನೀನೇ ಮಾಡ್ಕೋಬೇಕು. ನಿನ್ನವರನ್ನು ನೋಡಿಕೊಳ್ಳಲಾಗದೇ ಇರುವುದಕ್ಕೆ ಪ್ರೀತಿ ಅಂತಾರೇನು? ಅವರ ಖುಷಿಗೆ ಕಾರಣವಾಗುವುದೇ ನಿಜವಾದ ಪ್ರೀತಿ, ಕೊರತೆ ಇದ್ದರೂ ಕೇಳದೇ ಅರ್ಥಮಾಡಿಕೊಳ್ಳುತ್ತಾರಲ್ಲ ಅದು ಪ್ರೀತಿ, ನಿನ್ನ ಗಳಿಕೆಯಲ್ಲಿ ಅವರು ಚಿಂತೆಯಿಲ್ಲದೇ ಇರ್ತಾರಲ್ಲ ಅದು ಮಗು ನಿನಗೆ ಸುಖ ನೆಮ್ಮದಿ ಕೊಡುವುದು. ಹಣ ಏನು ಹೇಗಾದರೂ ಸಂಪಾದನೆ ಮಾಡ್ತಾರೆ. ಪ್ರೀತಿ ! ನೀನು ಅವರಿಗೆ ತೋರಿಸೋ ಕಾಳಜಿ, ನೀನು ಬಿಡುವಿಲ್ಲದಿದ್ದರೂ ಕೊಡೋ ಸಮಯ ನೀನು ಅವರಿಗೆ ತಂದು ಹಾಕ್ತೀಯಲ್ಲ, ಅದಕ್ಕಿಂತ ಹೆಚ್ಚು ಸಂತೋಷ ಅವರಿಗೆ ನಿನ್ನೊಂದಿಗೆ ಇದ್ದಾಗ ಆಗ್ತದೆ” ಮಾತು ನಿಲ್ಲಿಸಿದರು. “ತಾತ ಥ್ಯಾಂಕ್ಯು ಹಣಗಳಿಸಿ ಅವರಿಗೆ ದುಡ್ಡು ಕಳಿಸಿದರೆ ಮುಗೀತು ಅನ್ಕೊಂಡಿದ್ದೆ. ನೀವು ಗ್ರೇಟ್ ತಾತ ನನ್ನವರಿಗಾಗಿ ಇವತ್ತಿಂದ ಸಮಯ ಕೊಡುತ್ತೇನೆ ” ಅಂದೆ.

ಅಷ್ಟೇ ಮುಗುಳುನಗೆ ಅವರದ್ದು.

“ಆಯ್ತು ತಾತ ಸಮಯ ವ್ಯರ್ಥ ಅನಿಸಲಿಲ್ಲ ನನಗೆ, ಬರ್ತೀನಿ ಮತ್ತೆ ಇಲ್ಲೇ ಸಿಗುವ”. ಅಲ್ಲಿಂದ ಹೊರಡುವಾಗ, “ಹುಷಾರು ಮಗು” ಅಂದರು.

ಏನೋ ನೆಮ್ಮದಿ ಆವರಿಸಿತ್ತು. ಅದೇ ಗುಂಗಲ್ಲಿ ನನ್ನ ಚಹಾ ಜೊತೆಗೆ ಗೆಳತಿಯನ್ನು ಸಹ ಅಲ್ಲೇ ಮರೆತು ಬಂದುಬಿಟ್ಟೆ. ಮನೆಗೆ ಬಂದ ಮೇಲೆ ಅವಳ ನೆನಪಾಯಿತು. ಯಾಕೆಂದರೆ ಬೀಗ ಅವಳ ಹತ್ತಿರ ಇತ್ತಲ್ಲ! ಅವಳು ಬಂದ ಮೇಲೆ ಮಂಗಳಾರತಿಯೂ ಆಯಿತು, ಓಲೈಸಿ ರಮಿಸುವ ಹೊತ್ತಿಗೆ ಸಮಯವಾಗಿದ್ದೇ ತಿಳಿಯಲಿಲ್ಲ. ಬೇಗ ಬೇಗ ರೆಡಿಯಾಗಿ ತಿಂಡಿಗೆ ತೆರಳಿದೆವು.

ಅಂದಿನ ದಿನ ವಿಶೇಷವಾಗಿ ಬೇರೂರಿತ್ತು.