ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತೆಲುಗು ಸಾಹಿತ್ಯ ನಡೆದು ಬಂದ ದಾರಿ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಈ ಸಭೆಯಲ್ಲಿ ನೆರೆದ ಎಲ್ಲ ಸಹೃದಯರಿಗೆ ಸಪ್ರೇಮ ನಮಸ್ಕಾರಗಳು. ಮೊಟ್ಟಮೊದಲಿಗೆ ಈ ರೀತಿ ನಿಮ್ಮೆಲ್ಲರ ಜೊತೆ ಈ ಸಂಜೆ ಕಳೆಯುವ ಸುಸಂದರ್ಭ ಒದಗಿಸಿದ ವಾಸವಿ ಕಲಾ ವೇದಿಕೆ ಮತ್ತು ಭಾರತೀಯ ವೈದ್ಯಕೀಯ ಸಂಘ ಕರ್ಣಾಟಕ ರಾಜ್ಯ ಶಾಖೆ, ಕನ್ನಡ ವೈದ್ಯ ಬರಹಗಾರ ಸಮಿತಿಯವರಿಗೆ ನನ್ನ ಅನೇಕ ವಂದನೆಗಳು. ವೈದ್ಯರಾಗಿದ್ದು ಈ ಸಮಿತಿಯವರು ತಾವು ಮಾಡಿದ ಶಸ್ತ್ರ ಚಿಕಿತ್ಸೆಗಳು ಮಾತ್ರವಲ್ಲದೇ  ಇತರರ ಮನಸ್ಸುಗಳಲ್ಲಿಯ ಸಾಹಿತ್ಯವನ್ನು ಬಗೆದು ನೋಡುತ್ತಿರುವುದು ಒಂದು ಸ್ವಾಗತಾರ್ಹ ವಿಷಯ.  ಸಮಿತಿಯ ಅಧ್ಯಕ್ಷರಾದ ಡಾ. ವೀಣಾ ಎನ್.ಸುಳ್ಯ ಅವರು ನನ್ನ ಬಗ್ಗೆ ವಿಷಯ ಸೇಕರಿಸಿ, ನನ್ನ ನಂಬರ್ ಪಡೆದು, ಸಂಪರ್ಕಿಸಿ ಈ ಸಭೆಯಲ್ಲಿ ಮಾತಾಡುವಂತೆ ಮಾಡಿದ್ದಾರೆ. ಅವರಿಗೆ ವಿಶೇಷ ಧನ್ಯವಾದ. 

ಚಂದಕಚರ್ಲ ರಮೇಶ ಬಾಬು

ಇಲ್ಲಿ ನೆರೆದ ಸಹೃದಯರಲ್ಲಿ ನಾನು ಒಂದು ಮಾತು ಹೇಳಬೆಕಾಗಿದೆ. ನಾನು ಕನ್ನಡದವನು. ನನ್ನ ಮನೆ ಮಾತು ಕನ್ನಡ. ಗಡಿನಾಡು ಜಿಲ್ಲೆಯಾದ ಬಳ್ಳಾರಿಯಲ್ಲಿ ಹುಟ್ಟಿ, ತೆಲುಗು ನಾಡಿನಲ್ಲಿ ಬೆಳೆದದ್ದರಿಂದ ನಾನು ನನ್ನ ಶಾಲಾ ಜೀವನದಲ್ಲಿ ತೆಲುಗು ಮಾಧ್ಯಮದಲ್ಲಿ ಓದಬೇಕಾಯಿತು. ಆ ರೀತಿಯಾಗಿ ನಾನು ತೆಲುಗು ಸಾಹಿತ್ಯಕ್ಕೆ ಪರಿಚಿತನಾದೆ. ಆಗಾಗ ನನ್ನ ನೆಂಟರಿರುತ್ತಿದ್ದ ಬಳ್ಳಾರಿ, ಹೊಸಪೇಟೆಗಳಿಗೆ ರಜೆಗಳಲ್ಲಿ ಹೊದಾಗ ಕನ್ನಡ ಪತ್ರಿಕೆಗಳು ಓದುವ ಹವ್ಯಾಸ ವಿಟ್ಟುಕೊಂಡಿದ್ದು ಕನ್ನಡ ಓದಲು ಕಲಿತೆ. ಗ್ರಾಮೀಣ ಬ್ಯಾಂಕಿನಲ್ಲಿ ಕೆಲಸ ಮಾಡಿದಾಗ ಕನ್ನಡದಲ್ಲೇ ಅರ್ಜಿಗಳನ್ನು ತೆಗೆದುಕೊಳ್ಳುತ್ತಿದ್ದು ಕನ್ನಡ ಬರವಣಿಗೆಯನ್ನು ಸುಧಾರಿಸಿಕೊಂಡೆ. ಸಾಹಿತ್ಯಾಸಕ್ತನಾದ್ದರಿಂದ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದುತ್ತ ಕನ್ನಡದಲ್ಲಿ ಕವಿತೆ, ಲೇಖನ ಬರೆದೆ. ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ ಅನುವಾದ ಮಾಡಲಾರಂಭಿಸಿದೆ. ಇದು ಇಂದಿನ ಈ ನನ್ನ ಭಾಷಣಕ್ಕೆ ನಾನು ಪಡೆದ ಅರ್ಹತೆ. ಇವತ್ತಿನ ಈ ಸೆಷನ್ ಮುಗಿದಮೇಲೆ ಅದೆಷ್ಟರ ಮಟ್ಟಿಗೆ ನಾನು ಕೃತಕೃತ್ಯನಾದೆ ಎಂದು ನೀವು ತಿಳಿಸಬಹುದು. 

ದಕ್ಷಿಣ ಭಾರತದ ಭಾಷೆಗಳಲ್ಲಿ ತಮಿಳು ಅತೀ ಹಳೆಯ ಭಾಷೆಯಂಬ ಹಿರಿಮೆ ಪಡೆದಿದೆ. ನಂತರ ಬರುವುದು ಕನ್ನಡ. ನಂತರದ ಸ್ಥಾನ ತೆಲುಗು ಭಾಷೆ. ಈ ಮೂರೂ ಅಲ್ಲದೇ ಮತ್ತೊಂದು ಭಾಷೆಯಾಗಿರುವ ಮಲೆಯಾಳಂ ಸಹ ಅಭಿಜಾತ ಭಾಷೆಗಳೆಂದು ಗುರುತಿಸಲ್ಪಟ್ಟಿವೆ. ತೆಲುಗು ಮತ್ತು ಕನ್ನಡ ಭಾಷೆಗಳ ಸಂಬಂಧ ಮತ್ತಷ್ತು ಆಪ್ತ. ಯಾಕೆಂದರೆ ಅವುಗಳ ಲಿಪಿಗಳಲ್ಲಿರುವ ಸಾಮ್ಯತೆ. ಅನೇಕ ವರ್ಣಮಾಲೆಯ ಅಕ್ಷರಗಳು ಎರಡೂ ಭಾಷೆಗಳಲ್ಲಿ ಸಮ ಕಾಣುತ್ತವೆ. ಕೆಲ ವರ್ಷಗಳ ಹಿಂದೆ ಎರಡೂ ಭಾಷೆಗಳಿಗೆ ಒಂದೇ ಲಿಪಿಯನ್ನು ಉಪಯೋಗಿಸುವಂತೆ ಮಾಡುವ ದಿಕ್ಕಿನಲ್ಲಿ ಪ್ರಯತ್ನ ನಡೆದಿತ್ತು. 

ಜಿನವಲ್ಲಭನು ೧೦ನೆಯ ಶತಮಾನದಲ್ಲಿ ಕೆತ್ತಿಸಿದ ಶಾಸನದಲ್ಲಿ ತೆಲುಗು ಭಾಷೆಯ ಕಂದ ವೃತ್ತದ ಪದ್ಯಗಳಿದ್ದರೂ ಅದು ತೆಲುಗು ಸಾಹಿತ್ಯವೆಂದು ಇತಿಹಾಸಕಾರರು ಪರಿಗಣಿಸದೇ, ತೆಲುಗು ಸಾಹಿತ್ಯದ ಉಗಮವನ್ನು ಇತಿಹಾಸಕಾರರು ೧೧ನೆಯ ಶತಮಾನದಿಂದ ಅಳೆಯುತ್ತಾರೆ. ಅದಕ್ಕೂ ಮುಂಚಿನಿಂದ ಸಾಹಿತ್ಯ ಇದ್ದಿದ್ದರೂ ಅದು ಗ್ರಂಥಸ್ತವಾಗಿದ್ದಿಲ್ಲ ಎಂದು ನಂಬಲಾಗಿದೆ. ಹಾಗಾಗಿ ೧೧ನೆಯ ಶತಮಾನದಲ್ಲಿ ತೆಲುಗಿನ ಆದಿಕವಿಯಾದ ನನ್ನಯ ಭಟ್ಟಾರಕ ಮತ್ತು ಅವರಿಗೆ ಸಹಾಯಕರಾದನಾರಾಯಣ ಭಟ್ಟಾರಕರು ಮಹಾಭಾರತವನ್ನು ಆಂಧ್ರೀಕರಿಸಿದ್ದೇ ಮೊದಲ ತೆಲುಗು ಸಾಹಿತ್ಯ ಅಥವಾ ತೆಲುಗು ಕಾವ್ಯ ಎಂದು ಪರಿಗಣಿಸುತ್ತಾರೆ. ಅಲ್ಲಿಯ ವರೆಗೆ ಸಂಸ್ಕೃತದಲ್ಲಿರುವ ಕಾವ್ಯಗಳನ್ನು ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆ ಮಾಡುವುದು ಅಪರಾಧ ಎಂದೇ ಪರಿಗಣಿಸಲಾಗುತ್ತಿತ್ತು. ಆ ತರದ ಅಪವಿತ್ರ ಕಾರ್ಯಕ್ಕೆ ರಾಜಾಶ್ರಯ ದೊರೆಯುತ್ತಿರಲಿಲ್ಲ. “ಲತಾ ವನಿತಾ ಕವಿತಾ” ಈ ಮೂರಕ್ಕೂ ಆಶ್ರಯ ಅಗತ್ಯ ಎನ್ನುವುದು ಕವಿ ವಾಣಿ. ಹಾಗಾಗಿ ತೆಲುಗು ಸಾಹಿತ್ಯ ಇದಕ್ಕೂ ಮುಂಚೆ ಅರಳಲಿಲ್ಲ. ಆದರೆ ವೇಂಗಿ ದೇಶದ ರಾಜನಾದ ರಾಜರಾಜ ನರೇಂದ್ರನ ಬೆಂಬಲದಿಂದ ನನ್ನಯ ಮಹಾಭಾರತದ ಮೊದಲ ಎರಡು ಪರ್ವಗಳನ್ನ ಮತ್ತು ಅರ್ಧದಷ್ಟು ಅರಣ್ಯ ಪರ್ವವನ್ನ ತೆಲುಗಿಗೆ ತಂದು ಅದನ್ನು ಮೊದಲ ಕಾವ್ಯವಾಗಿಸಿದ. ಹಾಗೆ ನನ್ನಯ ತೆಲುಗ ಆದಿಕವಿಯಾದ. ಕನ್ನಡಕ್ಕೆ ಪಂಪನು ಹೇಗೋ ತೆಲುಗಿಗೆ ನನ್ನಯ. 

ನಂತರ ಶಿವಕವಿ ಯುಗವು ( ೧೧೦೦-೧೨೨೫) ಬಂತು. ಕನ್ನಡ ನಾಡಿನಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಪ್ರಭಾವ ತೆಲುಗು ರಾಜ್ಯಗಳ ಗಡಿನಾಡಿನಲ್ಲಿ ಪಸರಿಸಿ, ಅದು ಸಾಹಿತ್ಯಕ್ಕೂ ಹರಡಿತ್ತು. ಅದರಿಂದ ಪ್ರೇರಣೆಗೊಂಡು ಹೊರಬಂದ ಕೃತಿಗಳು ಪಾಲ್ಕುರಿಕಿ ಸೋಮನಾಥನು ಬರೆದ ಬಸವ ಪುರಾಣ,ಪಂಡಿತಾರಾಧ್ಯ ಚರಿತ್ರ, ಮಲ್ಲಮ್ಮದೇವಿ ಪುರಾಣಂ, ಅನುಭವ ಸಾರಂ, ಚನ್ನಮಲ್ಲು ಸೀಸಮುಲು, ವೃಷಾಧಿಪ ಶತಕಂ,ದ್ವಿಪದೆಯಲ್ಲಿ ಸೋಮನಾಥ ಶತಕ ಹೇಳಿಕೊಳ್ಳುವಂಥವುಗಳು.ದ್ವಿಪದಿಗಳು ತೆಲುಗು ಕಾವ್ಯಕ್ಕೆ ಸೋಮನಾಥನು ನೀಡಿದ ಕೊಡುಗೆಗಳು. ಇದಲ್ಲದೆ ಲಿಂಗನಾಮಾತ್ಯನು ಬರೆದ ವೀರಮಾಹೇಶ್ವರಾಚಾರ ಸಂಗ್ರಹಸಹ ಈ ಯುಗದ ಸಾಹಿತ್ಯ ಕೊಡುಗೆ. ಈ ಯುಗದಲ್ಲಿ ತುಂಬಾ ಶತಕಗಳು ಬಂದ ದಾಖಲೆ ಇದೆ. ಇವುಗಳ ಬಗ್ಗೆ ಮುಂದೆ ನೋಡೋಣ. 

ಇವರುಗಳ ನಂತರ ೧೩ ಮತ್ತು ೧೪ನೆಯ ಶತಮಾನಗಳಲ್ಲಿ ಇದ್ದಂಥ ಇಂದಿನ ನೆಲ್ಲೂರು ಪ್ರಾಂತ್ಯದ ರಾಜನಾದ ಮನಮಸಿದ್ಧಿ ಮಹಾರಾಜರ ಆಶ್ರಯದಲ್ಲಿದ್ದ ತಿಕ್ಕನ ಸೋಮಯಾಜಿ ನನ್ನಯ ಅಪೂರ್ಣವಾಗಿ ಬಿಟ್ಟಿದ್ದ ಮಹಾಭಾರತವನ್ನು ಕೈಗೆತ್ತಿಕೊಂಡು ೧೫ ಪರ್ವಗಳನ್ನು ಆಂಧ್ರೀಕರಿಸಿ  ಮುಗಿಸಿದ. ಅಲ್ಪ ಪದಗಳಲ್ಲಿ ಅನಲ್ಪ ಅರ್ಥಗಳನ್ನು ಕೊಡುವಂಥ ಸಾಮರ್ಥ್ಯವಿದ್ದ ಕವಿ ಎಂದೇ ಹೆಸರು ಪಡೆದಿದ್ದಾರೆ. ಇದಲ್ಲದೆ ಈತ ನಿರ್ವಚನೋತ್ತರ ರಾಮಾಯಣವನ್ನು ಬರೆದಿದ್ದಾನೆ. 

ನಂತರ ೧೪ನೆಯ ಶತಮಾನದಲ್ಲಿ ನನ್ನಯ ಭಟ್ಟಾರಕನು ಅರ್ಧಕ್ಕೆ ಬಿಟ್ಟುಹೋದ ಅರಣ್ಯಪರ್ವವನ್ನು ಎರ್ರಾಪ್ರೆಗ್ಗಡ ಅಥವಾ ಎರ್ರನ ಎಂಬ ಕವಿ ಪೂರ್ತಿಗೊಳಿಸಿ ಮಹಾಭಾರತದ ಸಂಪೂರ್ಣ ಅನುವಾದ ಓದುಗರಿಗೆ ತಲುಪಿಸಿದ. ಈತ ಪ್ರೋಲಯ ವೇಮಾರೆಡ್ಡಿ ಆಸ್ಥಾನದಲ್ಲಿದ್ದ. ಎರ್ರನನ ವಿಶೇಷವೆಂದರೆ ನನ್ನಯನ ಶಬ್ದಗತಿ, ತಿಕ್ಕನನ ಭಾವಗತಿ ಎರಡರನ್ನೂ ಮೇಳವಿಸಿ ಬರೆದ ಶೈಲಿ. ಈತನಿಗೆ ಪ್ರಬಂಧ ಪರಮೇಶ್ವರ ಎಂಬ ಬಿರುದಿದೆ. 

ಈ ಕವಿತ್ರಯರ ಮಾರ್ಗದರ್ಶನದಲ್ಲಿ ಅನೇಕ ಇತರೆ ಕವಿಗಳು ಅನೇಕ ಪದ್ಯಕಾವ್ಯಗಳನ್ನು ಬರೆದರು. ಅವುಗಳೆಲ್ಲ ಪುರಾಣಗಳ ಆಧಾರಿತ ಕಾವ್ಯಗಳೇ. ಹಾಗಾಗಿ ೧೩ ಮತ್ತು ೧೪ನೆಯ ಶತಮಾನಗಳನ್ನು ಪುರಾಣ ಯುಗ ಎಂದು ಕರೆಯಲಾಗಿದೆ.

ನಂತರದ ೧೫ನೆಯ ಶತಮಾನ ಶ್ರೀನಾಥ ಕವಿಯ ಮತ್ತು ಅವನ ಬಾವನಾದ ಬಮ್ಮೆರ ಪೋತನರದ್ದು. ಬಮ್ಮೆರ ಪೋತನ ತೆಲುಗಿಗ ತಂದ ಶ್ರೀಮದ್ಭಾಗವತಂ ತೆಲುಗು ಜನರ ಹೃದಯಗಳಲ್ಲಿ ಅತ್ಯುನ್ನತ ಸ್ಥಾನ ಪಡೆದಿದೆ. ವ್ಯಾಸನಂಥವರಿಗೇ ಭಾಗವತ ರಚನೆ ಮನಸ್ಸಿಗೆ ತಂಪನ್ನು ನೀಡಿತ್ತು. ಅದೇ ತಂಪನ್ನು ಪೋತನ ತನ್ನ ಸಕ್ಕರೆ ಗುಳಿಕೆಗಳಂಥ ಮಧುರ ಪದ್ಯಗಳಿಂದ ತೆಲುಗು ಭಕ್ತ ಹೃದಯಗಳಿಗೆ ತಂದೊಪ್ಪಿಸಿದ. “ಇಂದುಗಲಡಂದು ಲೇಡನಿ ಸಂದೇಹಮು ವಲದು” ಮತ್ತು “ ಮಂದಾರ ಮಕರಂದ ಮಾಧುರ್ಯಮುನ ತೇಲು” ಎನ್ನುವ ಭಕ್ತ ಪ್ರಹ್ಲಾದನ ಪದ್ಯಗಳು, “ಲಾವೊಕ್ಕಿಂತಯು ಲೇದು, ಧೈರ್ಯಮು ವಿಲೋಲಂಬಯ್ಯೆ” ಎನ್ನುವ ಗಜೇಂದ್ರ ಮೋಕ್ಷದ ಪದ್ಯ, ಅದೇ ಕತೆಯ “ಸಿರಿಕಿಂಜೆಪ್ಪಡು”ಎನ್ನುವ ಪದ್ಯ, “ಕಲಯೋ ವೈಷ್ಣವ ಮಾಯಯೋ”ಎನ್ನುವ ಕೃಷ್ಣನ ಬಾಲಲೀಲೆಯ ಪದ್ಯ ತೆಲುಗು ರಾಜ್ಯಗಳ ಭಕ್ತರು ದಿನ ನಿತ್ಯ ನೆನೆಯುವ ಪದ್ಯಗಳು. ಈ ಸಿರಿಕಿಂಜೆಪ್ಪಡು ಪದ್ಯಕ್ಕೆ ಸಂಬಂಧಪಟ್ಟ ಒಂದು ಪ್ರಹಸನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಈ ಪದ್ಯದಲ್ಲಿ ಗಜೇಂದ್ರನ ಮೊರೆಯನ್ನು ಕೇಳಿ ಅವನನ್ನು ರಕ್ಷಿಸಲು ನಾರಾಯಣ ಧಾವಿಸಿ ಬಂದ ಎಂದು ಹೇಳಬೇಕಾದಲ್ಲಿ ಪೋತನ ಈ ಸುಂದರ ಪದ್ಯವನ್ನು ಬರೆದಿದ್ದಾರೆ. ಇದರ ಅರ್ಥ ತನ್ನ ಭಕ್ತನನ್ನು ಕಾಪಾಡುವ ಭರ ಹೇಗಿತ್ತೆಂದರೆ ನಾರಾಯಣ ತನ್ನ ಮಡದಿಯಾದ ಲಕ್ಷ್ಮಿಗೂ ಹೇಳನು, ಶಂಖ ಚಕ್ರಗಳನ್ನೂ ಧರಿಸನು, ಯಾವ ಪರಿವಾರವನ್ನಾಗಲಿ ಗರುಡನನ್ನಾಗಲಿ ಕರೆಯುವುದಿಲ್ಲ, ಕಿವಿಗಳ ಮೇಲೆ ಬೀಳುತ್ತಿರುವ ಕೂದಲನ್ನು ಸಹ ಸರಿಮಾಡೆನು, ಯಾವುದೋ ವಿವಾದದಲ್ಲಿ ಹಿಡಿದೆಳೆದ ಲಕ್ಷ್ಮೀದೇವಿಯ ಸೆರಗನ್ನು ಸಹ ಬಿಡುವುದಿಲ್ಲ ಎಂದು ಉತ್ಪ್ರೇಕ್ಷೆಮಾಡಿ ಬರೆಯುತ್ತಾರೆ. ಆ ಪದ್ಯವನ್ನು ತನ್ನ ಬಾವಮೈದುನನಾದ ಶ್ರೀನಾಥನಿಗೆ ಕೇಳಿಸಿದಾಗ ಶ್ರೀನಾಥ ತನ್ನ ಬಾವನನ್ನು ಗೇಲಿ ಮಾಡುತ್ತ “ಬಾವಾ ! ನಿಮ್ಮದು ತುಂಬಾ ಅತಿರೇಕವಾಯಿತು. ಯಾರಾದರೂ ಅಷ್ಟು ಮೈಮೇಲೆ ಎಚ್ಚರಿಕೆ ಇಲ್ಲದೇ ಬರುತ್ತಾರಾ?” ಎನ್ನುತ್ತಾನೆ. ತುಂಬಿದಕೊಡವಾದ ಪೋತನ ನಕ್ಕು ಸುಮ್ಮನಿದ್ದರೂ ಆತನ ಮಗ ಮಲ್ಲನಗೆ ಅದು ಚುಚ್ಚುತ್ತದೆ. ತನ್ನ ಸೋದರ ಮಾವನಿಗೆ ಪಾಠ ಕಲಿಸಬೇಕೆಂದು ಎಣಿಸಿ ಅವರಿಬ್ಬರೂ ಊಟಕ್ಕೆ ಕೂತಾಗ ಒಂದು ಕಲ್ಲನ್ನು ಎತ್ತಿ ಬಾವಿಗೆ ಹಾಕಿ, ಓಡುತ್ತ ಬಂದು “ಮಾಮಾ! ನಿನ್ನ ಮಗ ಬಾವಿಯಲ್ಲಿ ಬಿದ್ದ” ಎನ್ನುತ್ತಾನೆ. ಕಂಗೆಟ್ಟ ಶ್ರೀನಾಥನು ಎಂಜಲು ಕೈಯಲ್ಲೇ ಬಾವಿಯ ಹತ್ತಿರ ಓಡಿಹೋಗಿ “ನನ್ನ ಮಗ ಬಾವಿಯಲ್ಲಿ ಬಿದ್ದಿದ್ದಾನೆ. ಯಾರಾದರೂ ಕಾಪಾಡಿ” ಎನ್ನುತ್ತ ಬಾವಿಯ ಸುತ್ತ ತಿರುಗಲಾರಂಭಿಸುತ್ತಾನೆ. ಅಲ್ಲಿ ಜನ ಸಂದಣಿಯಾಗುತ್ತೆ. ಆ ಸಂದಣಿಯಲ್ಲಿ ಆತನಿಗೆ ತನ್ನ ಮಗ ಕಾಣುತ್ತಾನೆ. ಆಗ ಮಲ್ಲನ ಬಂದು ಹೇಳುತ್ತಾನೆ “ಮಾಮಾ! ನಿನ್ನ ಮಗ ಬಾವಿಗೆ ಬಿದ್ದ ಎಂದು ಕೇಳಿದ ತಕ್ಷಣ ನೀನೂ ಪೂರ್ವ ಪರ ಆಲೋಚಿಸದೆ ಎಂಜಲು ಕೈಯಲ್ಲೇ ಓಡಿಬಂದು ಎಲ್ಲರನ್ನೂ ಸಹಾಯ ಮಾಡಿ ಸಹಾಯ ಮಾಡಿ ಅಂತ ಕಿರಿಚಿಕೊಳ್ಳುತ್ತಿದ್ದಿಯಲ್ಲ. ಅದೇ ರೀತಿ ತನ್ನ ಭಕ್ತರನ್ನು ತನ್ನ ಮಕ್ಕಳೆಂದೇ ಭಾವಿಸುವ ಶ್ರೀಹರಿ ಅಷ್ಟು ತರಾತುರಿಯಲ್ಲಿ ಬಂದದ್ದು” ಎಂದು ಹೇಳಿದಾಗ ಶ್ರೀನಾಥ ತನ್ನ ಬಾವನನ್ನು ಕ್ಷಮೆ ಕೇಳಿದ್ದ.

ತನ್ನ ಬಾವಮೈದುನನಾದ ಮತ್ತು ಮಹಾನ್ ಕವಿಯಾದ ಶ್ರೀನಾಥನು,ಭಾಗವತವನ್ನು ರಾಜನಿಗೆ ಅಂಕಿತ ಕೊಟ್ಟು ಆತನ ಆಶ್ರಯ ಪಡೆಯುವಂತೆ ಹೇಳಿದಾಗ ’ಬಾಲರಸಾಲಸಾಲ ನವ ಪಲ್ಲವ ಕಾವ್ಯ ಕನ್ಯಕನ್ ಕೂಳಲಕಿಚ್ಚಿ’ ಎಂದು ಹೇಳುತ್ತ ತನ್ನ ಕೃತಿ ರಾಮಚಂದ್ರನಿಗಲ್ಲದೇ ಬೇರಾರಿಗೂ ಅಂಕಿತ ಕೊಡುವುದಿಲ್ಲ ಎನ್ನುತ ತನ್ನ ಕೃತಿಯಬಗ್ಗೆ ದಿಟ್ಟತನ ತೋರಿದ ಮಹಾನ್ ಭಕ್ತ ಮತ್ತು ಅಷ್ಟೇ ಮಹಾನ್ ಕವಿ ಪೋತನ. ಇವನು ತೆಲಂಗಾಣಾ ರಾಜ್ಯದ ಬಮ್ಮೆರ ಗ್ರಾಮದವನು. 

ಶ್ರೀನಾಥ ಕವಿ

ಕವಿ ಶ್ರೀನಾಥನು ಸಹ ಕಾವ್ಯರಚನೆಯಲ್ಲಿ ನಿಸ್ಸೀಮನು. ಬಾಲ್ಯದಲ್ಲೇ ಬೃಹತ್ಕಾವ್ಯವನ್ನು ಬರೆದ ಹೆಗ್ಗಳಿಕೆ ಇವನದು. ಇವನ ಕಾಲದಲ್ಲೇ ದಿವ್ಯ ಪ್ರಬಂಧನ ಶೈಲಿಗೆ ಆದರಣೆ ದೊರೆಯಿತು. ಶೃಂಗಾರ ನೈಷಧಮು, ಮರುತ್ತರಾಟ್ಚರಿತ್ರ, ಶಾಲಿವಾಹನ ಸಪ್ತಶತಿ ಮುಂತಾದ ೧೩ ಕಾವ್ಯಗಳನ್ನು ರಚಿಸಿದ ಖ್ಯಾತಿ ಈತನದು. ಕಾಶೀಖಂಡನ ಕಾವ್ಯದಲ್ಲಿ ಆತ ಹೇಳಿದ ಪದ್ಯ”ಚಿನ್ನಾರಿ ಪೊನ್ನಾರಿ ಚಿರುತ ಕೂಕಟಿನಾಡು” ಎನ್ನುವ ಪದ್ಯ, ಮತ್ತು ಆತನ ಚಾಟು ಪದ್ಯಗಳಲ್ಲಿ “ಸಿರಿಗಲವಾನಿಕಿ ಚೆಲ್ಲುನು” ಪದ್ಯ ತೆಲುಗುನಾಡಿನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಪದ್ಯಗಳು. 

ಇದೇ ಸಮಯದಲ್ಲಿದ್ದ ಇತರೆ ಕವಿಗಳಾದ ಜಕ್ಕನ, ಗೌರನ, ಗೋನ ಬುದ್ಧಾರೆಡ್ಡಿ ಸಹ ಕಾವ್ಯಗಳನ್ನು ಬರೆದು ತೆಲುಗು ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ಕೊಟ್ಟರು. ಗೋನ ಬುದ್ಧಾರೆಡ್ಡಿ ಬರೆದ ರಂಗನಾಥ ರಾಮಾಯಣಂ ತೆಲುಗಿನ ಮೊದಲ ರಾಮಾಯಣ ಎಂದು ಹೆಸರುವಾಸಿಯಾಗಿದೆ. ಇವರುಗಳ ಈ ಕಾವ್ಯ ಯುಗವನ್ನು “ಮಧ್ಯಯುಗ” ಎಂದು ಹೇಳಲಾಗಿದೆ.

ನಂತರ ಬಂದದ್ದು ೧೬ ಮತ್ತು ೧೭ನೆಯ ಶತಮಾನದ ಶ್ರೀ ಕೃಷ್ಣದೇವರಾಯನ ಕಾಲದ “ಪ್ರಬಂಧ ಯುಗ”.  ಈ ರಾಜನ ಹೆಸರು ಕೇಳದ ಕನ್ನಡಿಗರಿಲ್ಲ. ಈಚೆ ಕನ್ನಡದವರು ಆಚೆ ತೆಲುಗಿನವರು ತಮ್ಮವನೆನ್ನುವ ಮಹಾರಾಜ ಕೃಷ್ಣದೇವರಾಯ. ಸ್ವತಃ ಕವಿಯಾದ ಈತತನ್ನ ರಾಜಧಾನಿಯಾದ ಹಂಪೆಯಲ್ಲಿ ಕಾವ್ಯ ವಾಚನಕ್ಕಾಗಿಯೇ ಒಂದು ಮಂಟಪ ಕಟ್ಟಿಸಿ ಅದಕ್ಕೆ “ಭುವನ ವಿಜಯ ಸಭಾ ಮಂಟಪ” ಎಂದು ಹೆಸರಿಟ್ಟು, ಅದರಲ್ಲಿ ಕಾವ್ಯ ರಚನೆಯಲ್ಲಿ ಪ್ರಬುದ್ಧರಾದ ಎಂಟು ಜನ ಕವಿಗಳನ್ನು ಅವರುಗಳಿಗೆ ಅಷ್ಟ ದಿಗ್ಗಜಗಳೆಂದು ಹೆಸರಿಟ್ಟು ದಿನವೂ ಕಾವ್ಯ ಗೋಷ್ಠಿ ನಡೆಸುತ್ತಿದ್ದ. ಆ ಎಂಟು ಜನ ಕವಿಗಳ ಹೆಸರು ಹೀಗಿವೆ. ಅಲ್ಲಸಾನಿ ಪೆದ್ದನ, ನಂದಿ ತಿಮ್ಮನ, ಧೂರ್ಜಟಿ, ಮಾದಯ್ಯಗಾರಿ ಮಲ್ಲನ, ರಾಮರಾಜ ಭೂಷಣುಡು, ಅಯ್ಯಲರಾಜು ರಾಮಭದ್ರುಡು, ಪಿಂಗಳಿ ಸೂರನ, ತೆನಾಲಿ ರಾಮಕೃಷ್ಣುಡು. ಎಲ್ಲರೂ ಶ್ರೇಷ್ಠ ತೆಲುಗು ಕಾವ್ಯಗಳನ್ನ ರಚಿಸಿದ್ದಾರೆ. ಅಲ್ಲಸಾನಿ ಪೆದ್ದನ ಬರೆದ ಮನುಚರಿತ್ರದಲ್ಲಿಯ ಪ್ರವರಾಖ್ಯನ ಪಾತ್ರ ತೆಲುಗಿನವರ ಮೇಲೆ ಎಷ್ಟು ಪ್ರಭಾವ ಬೀರಿದೆಯೆಂದರೆ, ಹೆಣ್ಣಿನ ಬಗ್ಗೆ ಅತೀ ಸಂಯಮ ತೋರುವವನನ್ನು ಪ್ರವರಾಖ್ಯ ಎಂತಲೇ ಕರೆಯುವುದು ವಾಡಿಕೆಯಾಗಿದೆ. ನಂದಿ ತಿಮ್ಮನ ಬರೆದ ಪಾರಿಜಾತಾಪಹರಣಮು ಕಾವ್ಯ  ಕೃಷ್ಣದೇವರಾಯನಿಗೆ ಅವನ ರಾಣಿಯ ಬಗ್ಗೆ ತಾಳಿದ ಮುನಿಸನ್ನು ದೂರ ಮಾಡಿತೆಂದು ಹೇಳುತ್ತಾರೆ. ಮನುಚರಿತ, ವಸುಚರಿತ್ರ, ರಾಜಶೇಖರ ಚರಿತ್ರಮು, ಕಾಳಹಸ್ತಿ ಮಹಾತ್ಮ್ಯಮು, ಸಕಲ ಕಥಾ ಸಂಗ್ರಹಮು, ರಾಘವ ಪಾಂಡವೀಯಂ, ಪಾಂಡುರಂಗ ಮಹಾತ್ಮ್ಯಂ ಇವೆಲ್ಲವು ಆ ಯುಗದಲ್ಲಿ ಬರೆಯಲಾದ ಮಹಾನ್ ಕೃತಿಗಳು. ತೆನಾಲಿ ರಾಮಕೃಷ್ಣನ ಕತೆಗಳಂತೂ ಕನ್ನಡ ಮತ್ತು ತೆಲುಗು ನಾಡುಗಳಲ್ಲಿ ಮನೆ ಮಾತಾಗಿವೆ. ಕೃಷ್ಣದೇವರಾಯನು ತೆಲುಗಿನಲ್ಲಿ “ಆಮುಕ್ತ ಮಾಲ್ಯದ” ಎನ್ನುವ ಕಾವ್ಯವನ್ನು ರಚಿಸಿ ತೆಲುಗು ಸಾಹಿತ್ಯಕ್ಕೆ ತನ್ನ ಕೊಡುಗೆಯಾಗಿಸಿದ್ದಾನೆ. ಹಾಗಂತ ಈತನ ಆಸ್ಥಾನದಲ್ಲಿ ಕನ್ನಡ ಕವಿಗಳು ಇರಲಿಲ್ಲವೆಂದಲ್ಲ. ಕುಮಾರ ವ್ಯಾಸ, ನರಹರಿ, ಭೀಮಕವಿ,ಪದ್ಮಕ್ಕ, ಮಲ್ಲನಾರ್ಯ,ಸಿಂಗಿರಾಜ, ಚಾಮರಸ,ಕಲ್ಲುಮಠದ ಪ್ರಭುದೇವ ಇನ್ನೂ ಅನೇಕ ವೀರಶೈವ ಮತ್ತ ವೈಷ್ಣವ ಕವಿಗಳು, ವಚನಕಾರರು ರಾಜನ ಪೋಷಣೆಯಲ್ಲಿದ್ದರು. ಕುಮಾರ ವ್ಯಾಸನ ಭಾರತ, ನರಹರಿಯ ತೊರವಿ ರಾಮಾಯಣ ಪ್ರಸಿದ್ಧಿಪಡೆದ ಕೃತಿಗಳು. ಅನೇಕ ವಚನ ಸಾಹಿತ್ಯ ಸಹ ಹೊರಹೊಮ್ಮಿತ್ತು. ಇವರ ಕಾಲದಲ್ಲೇ ವ್ಯಾಸ ತೀರ್ಥರು, ಪುರಂದರ ದಾಸರು ಮತ್ತು ಕನಕದಾಸರು ದಾಸ ಸಾಹಿತ್ಯವನ್ನು ಪ್ರಸಿದ್ಧಿಗೊಳಿಸಿದ್ದರು. 

ಇಲ್ಲಿ ಪಂಪನಿದ್ದ ತೆಲಂಗಾಣ ಪ್ರಾಂತ್ಯಕ್ಕೂ, ಹಂಪೆಗೂ ಒಂದು ಸಾಮ್ಯ ಕಾಣುತ್ತದೆ. ಪಂಪನಿದ್ದ ನಾಡು ತೆಲುಗು ನಾಡು. ಅಲ್ಲಿಯ ರಾಜರು ಕನ್ನಡದ ಚಾಳುಕ್ಯರು. ಆಸ್ಥಾನ ಭಾಷೆ ಕನ್ನಡ. ಹಾಗಾಗಿ ತೆಲುಗು ಮಾತನಾಡುವ ಆ ನಾಡಿನಲ್ಲಿ ಕನ್ನಡ ಕಾವ್ಯ ಅರಳಿತ್ತು. ಹಂಪೆ ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯ. ರಾಜ ತೆಲುಗು ಕವಿ. ಆತ  ತೆಲುಗು ಕವಿವರ್ಯರ ಪೋಷಕ. ಹಾಗಾಗಿ ಅಲ್ಲಿ ಜಾಸ್ತಿ ತೆಲುಗು ಕಾವ್ಯಗಳು ಹೊರಬಂದಿದ್ದವು.

ಈ ಪ್ರಮಾಣದಲ್ಲಿ ಕಾವ್ಯ ರಚನೆಯಾದ ಈ ಶತಮಾನ ಸ್ವರ್ಣ ಯುಗವೆಂದೇ ಪ್ರಸಿದ್ಧಿಯಾಗಿದೆ. 

೧೭ನೆಯ ಮತ್ತು ೧೮ನೆಯ ಶತಮಾನಗಳಲ್ಲಿ ಪದ ಸಾಹಿತ್ಯದ ಬೆಳವಣಿಗೆ ಕಂಡಿತು. ತ್ಯಾಗರಾಜರು, ಅನ್ನಮಾಚಾರ್ಯುಲು, ಮೈಸೂರು ವಾಸುದೇವಾಚಾರ್ಯರು ತಮ್ಮ ಕೀರ್ತನೆಗಳನ್ನು ತೆಲುಗಿನಲ್ಲಿ ಬರೆದರು. ಇವರ ಕೀರ್ತನೆಗಳು ಇಂದಿಗೂ ಸಂಗೀತ ಪಾಠಗಳಲ್ಲಿ ಮತ್ತು ಕರ್ನಾಟಕ ಸಂಗೀತ ಕಚೇರಿಗಳಲ್ಲಿ ಮೊಳಗುತ್ತಿರುವುದು ನಮಗೆಲ್ಲ ತಿಳಿದ ಸಂಗತಿಯೇ. ಇವರೆಲ್ಲರಿಗೂ ಸಂಗೀತದಲ್ಲಿ ಗುರುವಿನ ಸ್ಥಾನ ಪಡೆದ ಪುರಂದರ ದಾಸರನ್ನು ನೆನೆಯುವುದು ಕನ್ನಡಿಗರಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. 

ಮುಂದಿನ ಎರಡು ಶತಮಾನಗಳು ಅಂದರೆ ೧೮ ಮತ್ತು ೧೯ನೆಯ ಶತಮಾನದ ಕೊನೆಯವರೆಗೂ ಯಾವುದೇ  ಹೇಳಿಕೊಳ್ಳುವಂಥ ಸಾಹಿತ್ಯ ಪುರೋಗತಿ ದಾಖಲೆಯಾಗಿಲ್ಲ. ಇದನ್ನು ಸಾಹಿತ್ಯದ ಕ್ಷೀಣ ಯುಗವೆಂದೇ ಕರೆದಿದ್ದಾರೆ. 

ಮುಂದೆ ಬರುವುದು ಆಧುನಿಕ ಯುಗ.

ಅದಕ್ಕೆ ಪದಾರ್ಪಣೆ ಮಾಡುವ ಮೊದಲು, ತೆಲುಗಿನ ಜನರಿಗೆ ಪದ್ಯಗಳ ಬಗ್ಗೆ ಇರುವ ಮೋಹದ ಬಗ್ಗೆ ಸ್ವಲ್ಪ ನೋಡೋಣ. ನಾವು ಇನ್ನುವರೆಗೆಕಂಡಹಾಗೆ ಬಹುಶಃ ಎಂಟು  ಶತಮಾನಗಳು ತೆಲುಗಿನಲ್ಲಿ ಪದ್ಯಗಳೇ ರಾಜ್ಯವಾಳಿವೆ. ಅವುಗಳಲ್ಲಿ ಸಹ ಪೌರಾಣಿಕ ಪದ್ಯಗಳೇ ಜಾಸ್ತಿ. ಇಲ್ಲಿಯ ಕವಿಗಳಿಗೆ ಪದ್ಯಗಳೆಂದರೆ ತುಂಬಾ ಪ್ರೀತಿ. “ಪದ್ಯಂ ತೆಲುಗುವಾಡಿ ಸೊತ್ತು” ಎಂದು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕವಿ ಎನಿಸಿಕೊಳ್ಳುವವನು ಯಾರೇ ಆಗಿರಲಿ, ಒಂದು ಛಂದೋಬದ್ಧವಾದ ಪದ್ಯ ಬರೆಯದೇ ತೃಪ್ತಿ ಪಡುವುದಿಲ್ಲ. ಛಂದಸ್ಸು ಕನ್ನಡ ಛಂದಸ್ಸಿನಂತೆಯೇ ಗುರು ಲಘುಗಳ ವಿಭಜನೆ, ಯತಿ, ಪ್ರಾಸ ಮೊದಲಾದ ನಿಯಮಗಳ ಮೇಲೆ ಸಾಗುತ್ತದೆ. ತೆಲುಗಿನಲ್ಲಿ ತ್ರಿಪದಿಗಳಿಲ್ಲ. ದ್ವಿಪದಿ, ನಾಲ್ಕು ಸಾಲುಗಳ ಪದ್ಯಗಳು ಪ್ರಚಲಿತ. ಚಂಪಕಮಾಲ, ಉತ್ಪಲಮಾಲ, ಶಾರ್ದೂಲ, ಮತ್ತೇಭ, ಮತ್ತಕೋಕಿಲ ಮುಂತಾದ ಉದ್ದ ಪದ್ಯಗಳು, ತೇಟಗೀತಿ, ಆಟವೆಲದಿ, ಕಂದಮು ತರದ ಚಿಕ್ಕ ಪದ್ಯಗಳು, ಸೀಸ ಪದ್ಯ ಎನ್ನುವ ಇವೆರಡರ ಸಮ್ಮಿಶ್ರ ಪದ್ಯ ಇವೆಲ್ಲವೂ ನಮಗೆ ಸಿಕ್ಕುತ್ತವೆ. ಇವಿಗಳಲ್ಲಿ ಕಂದ ಪದ್ಯ ತುಂಬಾ ನಿಯಮಗಳಿಂದ ಕೂಡಿದ್ದು. ಅದಕ್ಕೇ “ಕಂದಮು ವ್ರಾಸಿನವಾಡೇ ಕವಿ” ಎನ್ನುವ ನಾಣ್ಣುಡಿ ಇದೆ. 

ರಂಗಭೂಮಿಯ ಪೌರಾಣಿಕ ನಾಟಕಗಳಿಗೆ ಈ ಪದ್ಯಗಳೇ ಜೀವಾಳ. 

ಅದೇ ರೀತಿಯಾಗಿ ೧೨ನೆಯ ಶತಮಾನದಲ್ಲಿ ಪ್ರಾರಂಭವಾದ ಶತಕ ಪದ್ಯಗಳ ಪ್ರಕ್ರಿಯೆ ಇನ್ನೂ ವರೆಗೆ ಕವಿಗಳ ಗಮನವನ್ನು ಸೆಳೆಯುತ್ತಲೇ ಇದೆ. ಇಂದಿಗೂ ತೆಲುಗು ರಾಜ್ಯಗಳ ಯಾವ ಮೂಲೆಯಲ್ಲಿಯೋ ಒಂದು ಶತಕದ ಆವಿರ್ಭಾವವಾಗುತ್ತಿರುತ್ತದೆ ಎಂದರೆ ಆಶ್ಚರ್ಯವೇನಲ್ಲ. ಇದೊಂದು ಸಜೀವ ಸ್ರವಂತಿಯಂತೆ ಅವಿಚ್ಛಿನ್ನವಾಗಿ ಸಾಗುತ್ತಿರುವ ಪ್ರಕ್ರಿಯೆ ಎಂದು ಪರಿಶೋಧಕರು ಹೇಳಿದ್ದಾರೆ. 

ಶತಕಗಳು ಕಥಾ ಪ್ರಾಧಾನ್ಯವಾಗಲಿ, ಪ್ರಬಂಧ ಪ್ರಧಾನವಾಗಲಿ, ಸಂಗೀತ ಪ್ರಧಾನವಾಗಲಿ ಇರುವುದಿಲ್ಲ. ಸಂಖ್ಯಾಪರವಾಗಿ ತೆಲುಗಿನಲ್ಲಿ ಬಂದಷ್ಟು ಶತಕಗಳು ಮತ್ಯಾವ ಸೋದರ ಭಾಷೆಗಳಲ್ಲಿ ಬಂದಿಲ್ಲ. ಉಳಿದ ಪದ್ಯ ಸಾಹಿತ್ಯಕ್ಕಿರುವಂತೆ ಲಾಕ್ಷಣಿಕ, ಅಲಂಕಾರಿಕ ನಿಯಮಗಳು ಶತಕ ಪದ್ಯಗಳಿಗಿರುವುದಿಲ್ಲ. ಬರೀ ಛಂದಸ್ಸಿಗೆ ಅನುಗುಣವಾಗಿದ್ದರೆ ಆಯಿತು. ಆದರೆ ಇವಕ್ಕಿರುವ ಕೆಲ ಲಕ್ಷಣಗಳು ಈ ರೀತಿ ಇವೆ. ೧.ಸಂಖ್ಯಾ ನಿಯಮ- ಶತಕ ಪದ್ಯಗಳು ಬರೆಯುವವರು ಕಡ್ಡಾಯವಾಗಿ ನೂರು ಪದ್ಯ ಬರೆಯಲೇ ಬೇಕು. ೨.ಮಕುಟ ನಿಯಮ- ಪ್ರತಿ ಪದ್ಯದ ಕೊನೆಯಲ್ಲಿ ಮಕುಟವಿರಲೇಬೇಕು. ಇದು ಸಹ ಎಲ್ಲ ಪದ್ಯಗಳಲ್ಲಿ ಒಂದೇ ರೀತಿ ಇರಬೇಕು. ಅದೇ ಪದದ ಅರ್ಥ ಬರುವ ಇನ್ನೊಂದು ಪದ ಸಹ ಬಳಸಲಿಕ್ಕಿಲ್ಲ. ೩.ವೃತ್ತ ನಿಯಮ- ಎಲ್ಲ ಪದ್ಯಗಳು ಒಂದೇ ವೃತ್ತದಲ್ಲಿರಬೇಕು. ೪. ರಸ ನಿಯಮ- ಪದ್ಯ ರಚನೆ ಮಾಡುವವರು ತಾವು ಯಾವ ರಸದಲ್ಲಿ ತಮ್ಮ ಪದ್ಯಗಳನ್ನು ಬರೆಯಲು ಶುರು ಮಾಡುತ್ತಾರೋ ಉಳಿದವುಗಳನ್ನು ಸಹ ಕಡ್ಡಾಯವಾಗಿ ಅದೇ ರಸದಲ್ಲಿ ಬರೆಯಬೇಕು.(ಉದಾ. ಭಕ್ತಿ ರಸ, ಶೃಂಗಾರ ರಸ, ನೀತಿ ರಸ ಮೊ||) ೫. ಭಾಷಾ ನಿಯಮ: ಶತಕಗಳೆಲ್ಲವೂ ಕಾವ್ಯ ಭಾಷೆಯಲ್ಲಿಯೇ ಇರಬೇಕು. ಪಾಲ್ಕುರಿಕಿ ಸೋಮನಾಥ ಬರೆದ ವೃಷಾಧಿಪ ಶತಕವೇ ತೆಲುಗಿನಲ್ಲಿಯ ಸಂಪೂರ್ಣ ಶತಕ. ಭಾಷಾ ಪರಿಶೋಧಕರು ಕಂಡುಹಿಡಿದ ಅಂಶವೆಂದರೆ ಈ ಶತಕಗಳಲ್ಲಿ ಹೆಚ್ಚಿನ ಸಂಖ್ಯೆಯವು ಶಿವ ಯುಗದಲ್ಲಿಯೇ ಬಂದಿವೆ. ಇದ ಬಹುಶಃ ಕಲ್ಯಾಣ ಕ್ರಾಂತಿಯ ಪ್ರಭಾವವೂ ಇರಬಹುದು ಎಂದು ಎಣಿಸಲಾಗುತ್ತಿದೆ. ಅದೇ ರೀತಿ ತೆಲುಗಿನಲ್ಲಿ ಶತಕ ಬರೆದ ವೇಮನನಪದ್ಯಗಳಿಗೂ, ಕನ್ನಡದ ಸರ್ವಜ್ಞನ ಪದಗಳಿಗೂ ತುಲನಾತ್ಮಕ ಅಧ್ಯಯನ ನಡೆಯುತ್ತಿದೆ. ಇಬ್ಬರೂ ಸಮಾಜದಲ್ಲಿಯ ಹಲವಾರು ಲೋಪದೋಷಗಳ ಬಗ್ಗೆ ಒಂದೇ ರೀತಿ ಸ್ಪಂದಿಸಿ ಪದ್ಯಗಳನ್ನು ಬರೆದದ್ದು ಕಾಣುತ್ತದೆ. ಬೇರೇ ಬೇರೇ ರಾಜ್ಯಗಳಿಗೆ ಸೇರಿದ ಮತ್ತು ಭಿನ್ನ ಹಿನ್ನೆಲೆಗಳಿರುವ ಈ ಇಬ್ಬರೂ ಸಮಾಜದಲ್ಲಿಯ ಕುಂದು ಕೊರತೆಗಳಿಗೆ ಸಮಾನವಾಗಿ ಸ್ಪಂದಿಸಿ ತಮ್ಮ ಪದಗಳ ಮೂಲಕ ಸಮಾಜವನ್ನು ಎಚ್ಚರಿಸಿದ ರೀತಿ ತುಂಬಾ ಅಚ್ಚರಿಯನ್ನುಂಟು ಮಾಡುತ್ತದೆ. ಇತಿಹಾಸಕರರ ಪ್ರಕಾರ ಈ ಶತಕ ಪದ್ಯಗಳೇ ಸಮಾಜದಲ್ಲಿಯ ಆಚಾರಗಳನ್ನು ನಿಶಿತವಾಗಿ ವಿಮರ್ಶಿಸಿವೆ. ಸಾವಿರಾರು ಶತಕ ಪದ್ಯಗಳು ತೆಲುಗು ಸಾಹಿತ್ಯದಲ್ಲಿ ಕಾಣಸಿಗುತ್ತವೆ.

ಕನ್ನಡದಲ್ಲಿರುವಂತೆಯೇ ಸಂಧಿಗಳು, ಸಮಾಸಗಳು, ಛಂದಸ್ಸು ತೆಲುಗಲ್ಲೂ ಇವೆ. ಇವು ಕಾವ್ಯದ ಮತ್ತು ಭಾಷೆಯ ಸೊಬಗನ್ನು ಹೆಚ್ಚಿಸುತ್ತ ಸಾಹಿತ್ಯಕ್ಕೆ ಅನೇಕ ಪ್ರಕ್ರಿಯೆಗಳನ್ನು ಪ್ರಯೋಗಿಸಲು ಎಡೆ ಮಾಡಿಕೊಟ್ಟಿವೆ. 

ಈಗ ಆಧುನಿಕ ಯುಗಕ್ಕೆ ಬರೋಣ.

೧೮೭೫ ನಂತರದ್ದು ತೆಲುಗು ಸಾಹಿತ್ಯದಲ್ಲಿ ಆಧುನಿಕ ಯುಗ ಎಂದು ಕರೆಸಿಕೊಳ್ಳುತ್ತಿದೆ. ಈ ಯುಗದಲ್ಲಿ ತೆಲುಗು ಸಾಹಿತ್ಯ ತನ್ನ ಪ್ರಕ್ರಿಯೆ, ಶೈಲಿ, ವಸ್ತು ಎಲ್ಲ ಆಯಾಮಗಳಲ್ಲೂ ಬದಲಾವಣೆ ಕಂಡು ಇತ್ತೀಚೆಗೆ ಹೊರಬರುತ್ತಿದ್ದ ಸಾಹಿತ್ಯಕ್ಕೆ ಬಾಗಿಲಾಯಿತು. ಈ ಬದಲಾವಣೆಯ ಹಿನ್ನೆಲೆ ರಾಜಕೀಯ, ಸಾಮಾಜಿಕ, ಚಳುವಳಿಗಳು, ಆಂಗ್ಲಭಾಷೆಯ ಪ್ರಭಾವ ಎಲ್ಲವೂ ಕಾರಣವಾಗಿ ನಿಲ್ಲುತ್ತವೆ. ಕಾವ್ಯದ ಜೊತೆಗೆ ಕಥೆ, ಕಾದಂಬರಿಗಳು ಸೇರಿಕೊಂಡವು. ಗಿಡುಗು ರಾಮಮೂರ್ತಿ ಪಂತುಲು, ಗುರಜಾಡ ಅಪ್ಪಾರಾವು ರಂತಹ ವ್ವಾವಹಾರಿಕ ಭಾಷಾವಾದಿಗಳು ತುಂಬಾ ಶ್ರಮಪಟ್ಟು ವ್ಯಾವಹಾರಿಕ ಭಾಷೆಯನ್ನು ಸಾಹಿತ್ಯದಲ್ಲಿ ಪ್ರವೇಶ ಮಾಡಿಸಿದರು. 

ತೆಲುಗು ಕವಿತೆಗೆ ಪದ್ಯಗಳೇ ದಿಕ್ಕು ಎನ್ನುವ ಸಂಪ್ರದಾಯ ಶೈಲಿಯನ್ನು ಮೆಟ್ಟಿ ನಿಂತದ್ದು ವಚನ ಕವಿತೆ ಅಥವಾ ಪ್ರಗತಿ ಪರ ಕಾವ್ಯ ಸಾಹಿತ್ಯ.ಈ ಆಧುನಿಕ ಯುಗದಲ್ಲೇ ಅಭ್ಯುದಯ ರಚಯಿತಲ ಸಂಘಂ(ಅರಸಂ), ವಿಪ್ಲವ ರಚಯಿತಲ ಸಂಘಂ(ವಿರಸಂ) ಪ್ರಾರಂಭವಾಗಿ ತಮ್ಮ ವಿಚಾರಧಾರೆಗಳನ್ನು ಸಾಹಿತ್ಯದಲ್ಲಿ ತುಂಬಿದವು. ಛಂದೋಬದ್ಧ ಕಾವ್ಯದಿಂದ ಮುಕ್ತ ಮನಸ್ಸಿನ ಅಭಿವ್ಯಕ್ತಿ ಇವೆರಡರ ಉದ್ದೇಶವಾಗಿತ್ತು. ಇದಕ್ಕೆ ತೆಲುಗಿನಲ್ಲಿ ವಚನ ಕವಿತೆ ಎಂದು ಹೆಸರು ಬಂತು.

ಪ್ರಗತಿಪರ ಅಥವಾ ನವ್ಯ ಬರಹಗಾರರಲ್ಲಿ ಮೊದಲಿಗರು ದೇವರಕೊಂಡ ಬಾಲ ಗಂಗಾಧರ ತಿಲಕ್, ಅಜಂತಾ, ಶ್ರೀಶ್ರೀ. ಇವರುಗಳಲ್ಲಿ ಶ್ರೀ ಶ್ರೀಯವರು ತಮ್ಮನ್ನು ಕ್ರಾಂತಿಕಾರಿ ಸಾಹಿತ್ಯದೊಂದಿಗೆ (ವಿರಸಂ) ಗುರುತಿಸಿಕೊಂಡರು. ವಿರಸಂ ಅವರ ಸಾಹಿತ್ಯ ಬಂಡಾಯಕ್ಕೆ, ಸಾಹಸಕ್ಕೆ, ಧಿಕ್ಕಾರಕ್ಕೆ ಪ್ರತೀಕೆಯಾಗಿ ನಿಂತಿತು. ಅವರು ಬರೆದ ಮಹಾ ಪ್ರಸ್ಥಾನಂ ಈ ರೀತಿಯ ಸಾಹಿತ್ಯದಲ್ಲಿ ಮೈಲುಗಲ್ಲಾಗಿದೆ. “ಪದಂಡಿ ಮುಂದುಕು ಪದಂಡಿ ತೋಸುಕು, ಪದಂಡಿ ಪೋದಾಂ ಪೈಪೈಕಿ” ಎನ್ನುವ ಕವಿತೆ ಕ್ರಾಂತಿಕಾರಿ ಗೀತೆಯಾಗಿ ಮಾರ್ಪಟ್ಟು ಅನೇಕ ಚಳುವಳಿಗಳ ಹೋರಾಟ ಗೀತೆಯಾಗಿದೆ. 

ನವ್ಯ ಕವಿತಾ ಪದ್ಧತಿಗಳಲ್ಲಿ ಬರೆದ ಖಂಡ ಕಾವ್ಯ “ತೃಣ ಕಂಕಣಂ” ಬರೆದ ರಾಯಪ್ರೋಲು ಸುಬ್ಬಾರಾವ್ ಅವರು ಈ ತರದ ಖಂಡಕಾವ್ಯಗಳಿಗೆ ಪೀಠಿಕೆ ಹಾಕಿದರು. ಅವರು ಬರೆದ “ಏ ದೇಶಮೇಗಿನಾ ಎಂದು ಕಾಲಿಡಿನಾ” ಎಂಬ ಜನ್ಮಭೂಮಿ ಗೀತೆ ತೆಲುಗರು ಬಹಳ ಹಾಡಿಕೊಳ್ಳುವ ಪ್ರೇರಣಾ ಗೀತೆಯಾಗಿದೆ. ಅವರನ್ನು ನವ್ಯ ಕವಿತಾ ಪಿತಾಮಹ ಎಂದು ಕರೆಯುತ್ತಾರೆ. 

ಕವಿ ದೇವರಕೊಂಡ ಬಾಲ ಗಂಗಾಧರ್ ತಿಲಕ್

ಪ್ರಗತಿಪರ ಕವಿಗಳಲ್ಲಿ ತಿಲಕ್ ಅವರು ತುಂಬಾ ಹೆಸರು ಮಾಡಿದರು. ಅವರ ಕವಿತೆಗಳಲ್ಲಿ ತುಳುಕಿದ ಮಾರ್ದವ, ನವಿರಾದ ಭಾವನೆಗಳು, ಸಮಾಜದಲ್ಲಿಯ ಎಲ್ಲ ವರ್ಗದವರನ್ನೂ ಅವಲೋಕಿಸಿ ಅವರ ಬಗ್ಗೆ ಬರೆದ ಕವಿತೆಗಳು ಅವರನ್ನು ಮೇಲ್ಮಟ್ಟದಲ್ಲಿ ನಿಲ್ಲಿಸುತ್ತವೆ. ಅವರು ಬರೆದ “ಅಮೃತಂ ಕುರಿಸಿನ ರಾತ್ರಿ” ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಿಗುವ ಹೊತ್ತಿಗೆ ಅವರು ಮೃತರಾಗಿದ್ದರು. ಮತ್ತೊಬ್ಬ ಪ್ರಗತಿಪರ ಕವಿಯಾದ ಪೆನುಮರ್ತಿ ವಿಶ್ವನಾಥ ಶಾಸ್ತ್ರಿಯವರು ತಮ್ಮ ಕಾವ್ಯ ನಾಮವಾದ ಅಜಂತಾದಿಂದಲೇ  ಪ್ರಸಿದ್ಧರಾದವರು. ಅವರ “ಸ್ವಪ್ನಲಿಪಿ” ಕವಿತಾ ಸಂಕಲನಕ್ಕೆ ಸಹ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಹಾಗೆಯೇ ಏಲ್ಚೂರಿ ಸುಬ್ರಮಣ್ಯಂ, ಕುಂದುರ್ತಿ ಆಂಜನೇಯುಲು, ಬೆಲ್ಲಂಕೊಂಡ ರಾಮದಾಸು ಅವರ ಸಂಯುಕ್ತ ಕವನ ಸಂಕಲನ “ನಯಾಗರಾ” ಮೊದಲ ಅಭ್ಯುದಯ ಕವಿತಾ ಸಂಕಲನವೆಂದು ದಾಖಲಾಗಿದೆ. ಅಭ್ಯುದಯ ವಾದ ಕ್ರಮೇಣ ಕ್ರಾಂತಿಕಾರಿ ವಾದಕ್ಕೆ ಎಡೆ ಕೊಟ್ಟು ಅದರ ಪರ್ಯಾಯವಾಗಿ ಹೋಗಿದೆ.. 

ದೇವುಲಪಲ್ಲಿ ಕೃಷ್ಣಶಾಸ್ತ್ರಿ

ಇದಲ್ಲದೆ ತೆಲುಗಿನಲ್ಲಿ ಅಪುರೂಪವೆನಿಸಿದ ಭಾವ ಮತ್ತು ಪ್ರೇಮ ಕವಿತ್ವದಲ್ಲಿ ಹೆಸರು ಗಳಿಸಿದವರು ದೇವುಲಪಲ್ಲಿ ಕೃಷ್ಣಶಾಸ್ತ್ರಿ. ಅವರು” ಆಂಧ್ರಾ ಶೆಲ್ಲಿ” ಅಂತಲೇ ಹೆಸರಾದವರು. ಲಲಿತ, ಸರಳ ಮತ್ತು ಸುಂದರ ಪದಗಳಿಂದ ಕವಿತೆಗಳನ್ನು ಹೆಣೆಯುತ್ತಿದ್ದರು. ಅನೇಕ ಪ್ರಣಯ, ವಿರಹ ಗೀತೆಗಳನ್ನು, ಚಿತ್ರ ಗೀತೆಗಳನ್ನು ಬರೆದರು. ಅವರು ಬರೆದ ಕಾವ್ಯ “ಕೃಷ್ಣಪಕ್ಷಂ” ತುಂಬಾ ಪ್ರಚಲಿತವಾಗಿದೆ. ತಮ್ಮ ಕವಿತೆಗಳಷ್ಟೇ ಅಲ್ಲದೆ ಸಮಾಜ ಮುಖಿ ಕಾರ್ಯಗಳಲ್ಲಿ ಸಹ ಅವರು ತೊಡಗಿಕೊಂಡಿದ್ದು ಅನೇಕ ವೇಶ್ಯಾವಿವಾಹಗಳನ್ನು ಮಾಡಿಸಿದ್ದಿದೆ. 

ಇದರ ರೀತೆಯಲ್ಲೇ ದಲಿತ ಸಾಹಿತ್ಯವೂ ತೆಲುಗು ಸಾಹಿತ್ಯದಲ್ಲಿ ತನ್ನ ಜಾಗ ಪಡೆಯಿತು. ತೆಲುಗು ದಲಿತ ಮೌಕಿಕ ಸಾಹಿತ್ಯಕ್ಕೆ ೧೫೦೦ ವರ್ಷಗಳ ಇತಿಹಾಸ ಇದೆಯೆಂದು ತಿಳಿದರೂ ಅದು ಲಿಖಿತ ದಾಖಲೆಗಳಿಲ್ಲದೇ ಕಳೆದ ೩೦೦ ವರ್ಷಗಳ ಇತಿಹಾಸವಷ್ಟೇ ಗಣನೆಗೆ ಬಂದಿದೆ. ಪೋತುಲೂರಿ ವೀರಬ್ರಹ್ಮಂ ಅವರ ಕಾಲಜ್ಞಾನ ಪದಗಳು ಇದಕ್ಕೆ ನಾಂದಿ ಎಂದು ತಿಳಿಯಬಹುದು. ದಲಿತರ ಸಮಸ್ಯೆಗಳ ಬಗ್ಗೆ ಬರೆದವರಲ್ಲಿ ಗಿಡುಗು ರಾಮಮೂರ್ತಿ ಪಂತುಲು, ಗುರಜಾಡ ಅಪ್ಪಾರಾವು, ಉನ್ನವ ಲಕ್ಷ್ಮೀನಾರಾಯಣರನ್ನು ಹೆಸರಿಸಬಹುದಾಗಿದೆ. ಉನ್ನವ ಅವರ “ಮಾಲಪಲ್ಲಿ” ಕಾದಂಬರಿ ಈ ದಿಶೆಯಲ್ಲಿಯ ಸಾಹಸ ಹೆಜ್ಜೆ. ವಿರಸಂ ಕವಿಗಳಾದ ಶ್ರೀ ಶ್ರೀ, ಚೆರಬಂಡರಾಜು ಸಹ ತಾವು ಬರೆದ ಪ್ರಗತಿಶೀಲ ಮತ್ತು ಕ್ರಾಂತಿಕಾರಿ ಸಾಹಿತ್ಯದಲ್ಲಿ ದಲಿತರ ಬವಣೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. 

ದಲಿತರು ತಾವೇ ಸ್ವಯಂ ತಮ್ಮ ಕಷ್ಟಗಳನ್ನು ಸಾಹಿತ್ಯ ರೂಪದಲ್ಲಿ ಬರೆಯುವುದು ಸ್ವಾಂತಂತ್ರ್ಯೋದ್ಯಮದಿಂದಲೇ ಪ್ರಾರಂಭವಾಯಿತು. ಜಾಲ ರಂಗಸ್ವಾಮಿ, ಕುಸುಮ ಧರ್ಮನ್ನ ಕವಿ, ನಕ್ಕಾ ಚಿನ ವೀರಯ್ಯ, ನೂತಕ್ಕಿ ಅಬ್ರಹಾಂ, ಕೊಲಕಲೂರಿ ಇನಾಕ್, ಸತೀಶ್ ಚಂದರ್, ಪ್ರೇಮಯ್ಯ, ಬೋಯಿ ಭೀಮನ್ನ, ಎಂಡ್ಲೂರಿ ಸುಧಾಕರ್ ಇವರೆಲ್ಲರೂ ಈ ರೀತಿಯ ಸಾಹಿತ್ಯ ಬರೆದವರೇ ಆಗಿದ್ದಾರೆ. ಸಾಂಪ್ರದಾಯಕ ಸಾಹಿತ್ಯದಿಂದ ಹೊರಬಂದು ದಲಿತ ಸಾಹಿತ್ಯಕ್ಕೆ ಒಂದು ಘನತೆಯನ್ನು ತಂದ ಕೀರ್ತಿ ಮಾತ್ರ ಕವಿ ಗುರ್ರಂ ಜಾಷುವಾ ಅವರದ್ದೇ. ಗಬ್ಬಿಲಂ, ಫಿರದೌಸಿ, ಕಾಂದಿಶೀಕುಡು ಮೊದಲಾದ ತಮ್ಮ ರಚನೆಗಳಿಂದ ದಲಿತ ಸ್ವರವನ್ನು, ಗಳವನ್ನು ಅವರು ಎಲ್ಲರಿಗೂ ಕೇಳಿಸಿದರು. ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪದ್ಮಭೂಷಣ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಂಯುಕ್ಕ ಆಂಧ್ರ ರಾಜ್ಯದ ಮೇಲ್ಮನೆಯ್ ಸದಸ್ಯಾರಾಗಿ ನೇಮಕಾತಿ ಪಡೆದಿದ್ದಾರೆ. ಅವರ ಹೆಸರಿನಲ್ಲಿ ಪ್ರಶಸ್ತಿಗಳಿವೆ. 

ಮತ್ತೊಂದು ಹೆಸರಿಸಬಹುದಾದ ಸಾಹಿತ್ಯ ತೆಲಂಗಾಣಾ ರಾಜ್ಯದ ಸಾಯುಧ ಹೋರಾಟದ ಚಳುವಳಿ ಗೀತೆಗಳು.  ನಿಜಾಮರ ಮತ್ತು ಸಂಸ್ಥಾನಾಧೀಶರ ದುರಾಡಳಿತದಿಂದ ಬೇಸತ್ತ ತೆಲಂಗಾಣ ಪ್ರಾಂತ್ಯದ ರೈತರು ಬಂಡಾಯವೆದ್ದು ಅವರ ಸೊಂಟ ಮುರಿದರು. ಆ ಹೋರಾಟದಲ್ಲಿ ಅವರಿಗೆ ಹುಮ್ಮಸ್ಸು ತುಂಬಿದ್ದೇ ಈ ಹಾಡುಗಳು. ಇಂದಿಗೂ ಸಹ ತೆಲಂಗಣಾ ಜನರು ತುಂಬಾ ಇಷ್ಟಪಟ್ಟು ಈ ಹಾಡುಗಳನ್ನು ಹಾಡಿಕೊಳ್ಳುತ್ತಾರೆ. ಈ ಹಾಡುಗಳು ತೆಲಂಗಾಣಾ ರಾಜ್ಯ ಸಾಧನೆಯಲ್ಲಿ ಸಹ ಜನರನ್ನು ಉತ್ತೇಜಿಸಲು ಸಹಾಯಕವಾಗಿವೆ. ಈ ಹಾಡುಗಳು ಕಟ್ಟಿದವರಲ್ಲಿ ಇತ್ತಿಚೆಗೆ ತೀರಿಕೊಂಡ ಗದ್ದರ್ ಅವರು ಆದ್ಯರಾಗಿ ನಿಲ್ಲುತ್ತಾರೆ. ಅದೇ ರೀತಿ ಗೋರಂಟಿ ವೆಂಕನ್ನ ಸಹ ಉದ್ಯಮ ಗೀತೆಗಳನ್ನು ಹಾಡುತ್ತ ಪ್ರೇರಣೆ ನೀಡುತ್ತಾರೆ. 

ಆಧುನಿಕ ಸಾಹಿತ್ಯದಲ್ಲಿ ಕಾದಂಬರಿಗಳು ಕೂಡಾ ಸೇರ್ಪಡೆಯಾದವು. ಇವುಗಳಲ್ಲಿ ನರಹರಿ ಗೋಪಾಲಕೃಷ್ಣಮೂರ್ತಿ ಯವರು ಬರೆದ ಶ್ರೀ ರಂಗರಾಜ ಚರಿತ್ರ ಮೊದಲ ಕಾದಂಬರಿಯಾದರೆ ಕಂದುಕೂರಿ ವೀರೇಶಲಿಂಗಂ ಅವರು ಬರೆದ ರಾಜಶೇಖರ ಚರಿತ್ರ ಮೊದಲ ಸಾಮಾಜಿಕ ಕಾದಂಬರಿ ಎಂಬ ಶ್ರೇಯ ಪಡೆದಿವೆ. ಅನೇಕ ಕಾದಂಬರಿಕಾರರು ತೆಲುಗು ಸಾಹಿತೀ ಪೀಠವನ್ನು ಅಲಂಕರಿಸಿದ್ದಾರೆ. ೧೩ ಸಂಪುಟಗಳಲ್ಲಿ ಸಮಗ್ರ ಆಂಧ್ರ ಸಾಹಿತ್ಯಂ ಬರೆದ ಭಾಗವತುಲ ಸದಾಶಿವಶಂಕರ ಶಾಸ್ತ್ರಿಯವರು (ಕಾವ್ಯ ನಾಮ ಆರುದ್ರ) ಅವುಗಳನ್ನು ಆಕರ ಗ್ರಂಥಗಳನ್ನಾಗಿಸಿದ್ದಾರೆ. 

ಮತ್ತೊಂದು ಪ್ರಯೋಗವೆಂದರೆ ನಾಟಕಗಳು. ನಾಟಕಾಂತಂ ಹಿ ಸಾಹಿತ್ಯಂ ಎನ್ನುತ್ತಾನೆ ಕಾಲಿದಾಸ. ಅಂದರೆ ಎಲ್ಲ ಸಾಹಿತ್ಯ ಪ್ರಕ್ರಿಯಗಳಲ್ಲೂ ಕೊನೆಯಲ್ಲಿ ಮುಟ್ಟಬೇಕಾಗಿದ್ದು ನಾಟಕ ಅಂತ. ನಮಗೆಲ್ಲ ತಿಳಿದ ಹಾಗೆ ನಾಟಕಗಳು ದೃಶ್ಯ, ಶ್ರವಣ ರೂಪಕಗಳು. ರಸಾತ್ಮಕ ಕಾವ್ಯ ರೂಪಗಳು. ಹದಿನಾರನೆಯ ಶತಮಾನದಿಂದ ಒಂದಲ್ಲ ಮತ್ತೊಂದು ರೂಪದಲ್ಲಿ ವೇದಿಕೆಗಳ ಮೇಲೆ ಕಾಣಿಸಿಕೊಳ್ಳುತ್ತಿದ್ದ ಪ್ರದರ್ಶನಗಳು ಕೊನೆಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ವಿಷಯಗಳನ್ನೊಳಗೊಂಡ ನಾಟಕಗಳಾಗಿ ನಮ್ಮೆದುರು ನಿಲ್ಲುತ್ತವೆ. ತೆಲುಗು ನಾಟಕಗಳು ಈ ಆಧುನಿಕ ಯುಗದಲ್ಲೇ ಮೊದಲಾಗಿವೆ ಎಂದು ಭಾವಿಸಲಾಗಿದೆ. ಚಲನ ಚಿತ್ರಗಳು, ದೂರದರ್ಶನ ಮಾಧ್ಯಮಗಳು ನಾಟಕ ಕಲೆಯನ್ನು ಹಿನ್ನೆಲೆಗೆ ಸೇರಿಸಿವೆ. ತೆಲುಗು ರಂಗಭೂಮಿ ಇದಕ್ಕೆ ಹೊರತಲ್ಲ. 

ಇವಲ್ಲದೇ ತೆಲುಗು ಸಾಹಿತ್ಯದಲ್ಲಿ ತುಂಬಾ ಪ್ರಚಲಿತವಾದ ಅಷ್ಟಾವಧಾನ, ಶತಾವಧಾನ ಸಾಹಿತ್ಯ ಪ್ರಕ್ರಿಯೆಗಳು, ಸಮಸ್ಯಾ ಪೂರಣ, ಬುರ್ರಕಥ, ಹರಿಕಥ ಹೀಗೇ ಸಾಹಿತ್ಯದ ಮಾಧುರ್ಯವನ್ನು ಜನರಿಗೆ ತಲುಪಿಸುವ ಅನೇಕ ಮಾಧ್ಯಮಗಳು ತೆಲುಗು ಸಾಹಿತ್ಯದಲ್ಲಿ ಕಾಣುತ್ತವೆ. 

ನಮ್ಮ ದೇಶದ ಸಾಹಿತ್ಯಕ್ಕೆ ಸಲ್ಲುವ ಅತ್ಯುನ್ನತ ಪ್ರಶಸ್ತಿಯಾದ “ಜ್ಞಾನಪೀಠ”ಪ್ರಶಸ್ತಿ ತೆಲುಗಿನಲ್ಲಿ ಮೂವರಿಗೆ ಬಂದಿದೆ. ವಿಶ್ವನಾಥ ಸತ್ಯನಾರಾಯಣ ಅವರ ಶ್ರೀಮದ್ರಾಮಾಯಣ ಕಲ್ಪವೃಕ್ಷಂಗೆ, ಡಾ.ಸಿ.ನಾರಾಯಣರೆಡ್ಡಿ ಅವರ ವಿಶ್ವಂಭರಕ್ಕೆ ಮತ್ತು ರಾವೂರಿ ಭರದ್ವಾಜ ಅವರ “ಪಾಕುಡು ರಾಳ್ಳು”ಕೃತಿಗೆ. 

ಅದರಲ್ಲಿ ಶ್ರೀಮದ್ರಾಮಾಯಣ ಕಲ್ಪವೃಕ್ಷಂ ಗ್ರಾಂಧಿಕ ಭಾಷೆಯಲ್ಲಿದೆ(ಹಳಗನ್ನಡದ ತರಾ). ಶ್ರಿ ವಿಶ್ವನಾಥ ಸತ್ಯನಾರಾಯಣ ಅವರು ಇದೇ ಅಲ್ಲದೇ ಕಾದಂಬರಿ, ನಾಟಕ, ಅನುವಾದ, ವಿಮರ್ಶೆ ಹೀಗೆ ಅನೇಕ ಪುಸ್ತಕಗಳನ್ನು (೧೧೫) ಬರೆದಿದ್ದಾರೆ. ಕವಿಸಾಮ್ರಾಟ್ ಬಿರುದು ಪಡೆದಿದ್ದಾರೆ. ಕಿನ್ನೆರಸಾನಿ ಪಾಟಲು, ವೇಯಿ ಪಡಗಲು, ಏಕವೀರ, ಚೆಲಿಯಲಿಕಟ್ಟ ಮೊದಲಾದ ಅನೇಕ ಬರಹಗಳು ಅವರ ಬರಹದ ವೈವಿಧ್ಯತೆಯನ್ನು ತೋರುತ್ತವೆ. 

ಡಾ.ಸಿ.ನಾರಾಯಣ ರೆಡ್ಡಿ ಅವರು ಸಹ ಸ್ವತಃ ಕವಿಯೇ ಆದರೂ ಗೇಯ ಕಾವ್ಯ, ವಚನ ಕಾವ್ಯ, ಗದ್ಯ ಕೃತಿಗಳು, ಯಾತ್ರಾ ಕಥನಗಳು, ಸಂಗೀತ ನೃತ್ಯ ರೂಪಕಗಳು ಹೀಗೆ ಅನೇಕ ವೈವಿಧ್ಯ ಪ್ರಕ್ರಿಯೆಗಳಲ್ಲಿ (೮೭) ತಮ್ಮ ಸಾಹಿತ್ಯವನ್ನು ವಿಸ್ತರಿಸಿದ್ದಾರೆ. ಅವರು ಬರೆದ ವಿಶ್ವಂಭರ ಪದ್ಯ ಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತ್ತು. ಇವರು ರಾಜ್ಯಸಭಾ ಸದಸ್ಯರಾಗಿ ಸಹ ಇದ್ದವರು. 

ರಾವೂರಿ ಭರದ್ವಾಜ ಅವರು ಸಹ ಭಾವ ಕವಿ. ಅದರ ಜೊತೆಗೆ ಕಾದಂಬರಿ, ರೇಡಿಯೋ ಕಥೆಗಳು, ನಾಟಕಗಳು, ವಿಮರ್ಶೆ, ಮಕ್ಕಳ ಕಥೆಗಳು ಹೀಗೆ ಇವರು ಸಹ ೧೮೭ ಪುಸ್ತಕಗಳನ್ನು ಬರೆದಿದ್ದಾರೆ.  ಚಲನ ಚಿತ್ರ ರಂಗಕ್ಕೆ ಸಂಬಂಧಪಟ್ಟ ಅವರ ಪಾಕುಡು ರಾಳ್ಳು ( ಪಾಚಿಹಿಡಿದ ಬಂಡೆಗಳು) ಪುಸ್ತಕಕ್ಕ್ಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತ್ತು.  

ಇನ್ನು ಇತ್ತೀಚೆಗೆ ಹೊಸ ಹೊಸ ಪ್ರಕ್ರಿಯೆಗಳಾದ ಹೈಕು, ನಾನಿ, ಲಿಮರಿಕ್, ಗಜಲ್ ಪದ್ಧತಿಗಳಲ್ಲಿ ತೆಲುಗು ಸಾಹಿತ್ಯ ಹೊರಹೊಮ್ಮುತ್ತಿದೆ. ಯುವ ಸಾಹಿತಿಗಳು ತಮ್ಮ ಮನೋಭಾವನೆಗಳನ್ನು ಹೊರಹಾಕಲು ಇವುಗಳ ಜಾಡನ್ನು ಹಿಡಿದಿದ್ದಾರೆ. ಒಂದು ಕಟ್ಟುನಿಟ್ಟಾದ ಚೌಕಟ್ಟಿನಲ್ಲಿ ಪ್ರಾರಂಭವಾದ ಸಾಹಿತ್ಯ ಆ ನಿಯಮ ನಿಬಂಧನೆಗಳಿಂದ ಹೊರಬಂದು ಭಾವನೆಗಳ ಅಭಿವ್ಯಕ್ತಿಗೆ ಆದ್ಯತೆ  ಕೊಡುತ್ತ ತನ್ನದೇ ಆದ ನಿಯಮಗಳನ್ನು ಸೃಷ್ಟಿಸಿಕೊಳ್ಳುತ್ತ ಸಾಹಿತ್ಯ ನಡೆಯುತ್ತಿದ್ದೆ. ಈ ದಾರಿ ಅನಂತ. ಹೊಸ ಹೊಸ ಪ್ರಕ್ರಿಯೆಗಳನ್ನು ತನ್ನಲ್ಲಿ ಅಳವಡಿಕೊಳ್ಳುತ್ತ ಸಾಹಿತ್ಯ ತನ್ನ ಪಯಣವನ್ನು ಮುಂದುವರೆಸುತ್ತಿರುತ್ತದೆ. 

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದ. ನಾನೇನೂ ಭಾಷಾ ಪಂಡಿತನಲ್ಲ. ನಾನು ನಿಮ್ಮ ಮುಂದಿಟ್ಟ ವಿಷಯಗಳೇ ಕೊನೆಯಲ್ಲ. ಒಂದು ಸಾವಿರ ವರ್ಷಗಳ ಸಾಹಿತ್ಯವನ್ನು ಒಂದು ಗಂಟೆಯೊಳಗೆ ಹಿಡಿದಿಡುವುದು ಎಂದರೆ ಸಮುದ್ರದಲ್ಲಿ ಕವಡೆ ಆರಿಸುವುದಿದ್ದ ಹಾಗೆ. ಹಾಗೂ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ ಎಲ್ಲ ಕವಿಗಳನ್ನು ಬರಹಗಾರರನ್ನು ನೆನೆಯುವುದು ಸಹ ಈ ಅಲ್ಪ ಕಾಲ ಪರಿಮಿತಿಯಲ್ಲಿ ಆಗುವ ಕೆಲಸವಲ್ಲ. ಈ ಮಾತುಕತೆ ನಿಮಗೆ ಹೇಗನಿಸಿತೋ ಗೊತ್ತಿಲ್ಲ. ಇದರಲ್ಲಿ ತಪ್ಪುಗಳಿದ್ದಲ್ಲಿ ಅವೆಲ್ಲ ನನ್ನವೇ. ಹಿಡಿಸಿದ ವಿಷಯ ನಿಮ್ಮ ಹಿರಿಯ ಮನಸ್ಸಿನ ಕನ್ನಡಿ. ನಮಸ್ಕಾರ. 

(ಈ ಮಾತುಕತೆ ವಾಸವಿ ಕಲಾ ವೇದಿಕೆ ಮತ್ತು ಭಾರತೀಯ ವೈದ್ಯಕೀಯ ಸಂಘ ಕರ್ಣಾಟಕ ರಾಜ್ಯ ಶಾಖೆ, ಕನ್ನಡ ವೈದ್ಯ ಬರಹಗಾರ ಸಮಿತಿಯವರ ನೇತೃತ್ವದ ಯೂ ಟ್ಯೂಬಿನಲ್ಲಿ ಸಿಗುತ್ತದೆ. )