ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ/ ವಸಾಹತೋತ್ತರ ಸಾಮಾಜಿಕ ಚಲನೆಗಳು…

ಗೀತಾ ಡಿಸಿ

ಈ ಆಧುನಿಕ, ಆಧುನಿಕೋತ್ತರ, ವಸಾಹತು, ವಸಾಹತುಶಾಹಿ, ವಸಾಹತೋತ್ತರ, ಸ್ತ್ರೀವಾದ, ವಾಸ್ತವವಾದ, ಅಸ್ತಿತ್ವವಾದ, ರಾಚನಿಕವಾದ, ಸಂರಂಚನೋತ್ತರವಾದ, ಪ್ರಜ್ಞಾಪ್ರವಾಹತಂತ್ರ – ಇವೇ ಮೊದಲಾದ ವಾದ/ಇಸಂ ಎಂದು ನಾವೇನು ಗುರುತಿಸುತ್ತೇವೆ, ಎಲ್ಲವೂ ಪಾಶ್ಚಿಮಾತ್ಯರ ಕೊಡುಗೆಯೇ.
ಭಾರತವನ್ನಾಳಿದ ಬ್ರಿಟಿಷರ ಆಳ್ವಿಕೆಯ ಕಾಲ ವಸಾಹತು ಕಾಲ. ಅನಂತರದ್ದೆಲ್ಲಾ ವಸಾಹತೋತ್ತರವೇ. ಸರಳವಾಗಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾನಂತರ ಎಂದಿಟ್ಟುಕೊಳ್ಳಬಹುದು.

ಬದಲಾವಣೆ ಜಗದ ನಿಯಮ. ಇಡೀ ಜಗತ್ತಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಚಲನೆಯಲ್ಲಿ ಯಾವುದೇ ಸ್ಥಿತ್ಯಂತರಗಳಾದರೂ ಆಯಾ ಕಾಲದ ಸಾಮಾಜಿಕ ಚಿಂತಕರು, ಕವಿಗಳು, ಬರಹಗಾರರು, ವಿಜ್ಞಾನಿಗಳು, ಆ ಕಾಲಘಟ್ಟದ ಸೂಕ್ಷ್ಮಗಳನ್ನು, ಬದುಕಿನ ಏರಿಳಿತಗಳನ್ನು, ಹೊಸ ಆಲೋಚನೆಗಳನ್ನು, ಮುನ್ನೋಟಗಳನ್ನು, ಹುಡುಕಾಟಗಳನ್ನು, ಆವಿಷ್ಕಾರಗಳನ್ನು, ಹಲವಾರು ಕಾಣ್ಕೆಗಳನ್ನು ಕಟ್ಟಿಕೊಡುತ್ತಿರುತ್ತಾರೆ. ಈ ಮೊದಲು ಹೇಳಿದ ವಾದಗಳೆಲ್ಲ ಹಾಗೆ ಹುಟ್ಟಿದವುಗಳೇ. ಇಂಥ ವಾದಗಳು ವಸಾಹತುಶಾಹಿ ಅಥವಾ ಜಾಗತೀಕರಣದ ಪ್ರಭಾವದಿಂದ ಹಲವು ದೇಶಗಳಿಗೆ ತಲುಪಿ, ಅಲ್ಲಿನ ಚಿಂತಕರನ್ನು ಪ್ರಭಾವಿಸಿ, ಆಯಾ ದೇಶಕಾಲಕ್ಕನುಗುಣವಾಗಿ ರೂಪಾಂತರಗೊಂಡು ಅವುಗಳದ್ದೇ ಆದ ರೀತಿಯಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುತ್ತವೆ. ಪ್ರಸ್ತುತ ವಿಷಯದ ಆಧುನಿಕೋತ್ತರ ಅಥವಾ ವಸಾಹತೋತ್ತರದ ಚಿಂತನೆಗಳು ನಮ್ಮ ಕನ್ನಡದ ಚಿಂತಕರನ್ನು ಪ್ರಭಾವಿಸಿದ್ದು ಹೇಗೆ? ಅವು ನಮ್ಮ ಸಾಹಿತ್ಯದ ಮೇಲೆ ಬೀರಿದ ಪ್ರಭಾವ ಯಾವ ರೀತಿಯದ್ದು? ಇವು ಕನ್ನಡ ಸಾಹಿತ್ಯದಲ್ಲಿ ಉಂಟುಮಾಡಿದ ಸಾಮಾಜಿಕ ಸಂಚಲನೆಗಳೇನು? ಎನ್ನುವುದರ ಹುಡುಕಾಟ ಈ ಲೇಖನದ ಉದ್ದೇಶ.

ಮೊದಲಿಗೆ ‘ಆಧುನಿಕ’ ‘ಆಧುನಿಕತೆ’ ಅಥವಾ ‘ಆಧುನಿಕ ದೃಷ್ಟಿಕೋನ’ ಎಂದರೇನು? ಈ ಆಧುನಿಕ/ಆಧುನಿಕೋತ್ತರ ಚಿಂತನೆಗಳು ಆರಂಭಗೊಳ್ಳುವುದು ಯಾವ ಕಾಲಘಟ್ಟದಿಂದ? ಅವು ನಮ್ಮ ಕನ್ನಡ ನಾಡಿನ ಸಾಮಾಜಿಕ ಸಂಚಲನೆಗೆ ಕಾರಣವಾದ ಬಗೆ ಹೇಗೆ? ಅವು ಕನ್ನಡ ಸಾಹಿತ್ಯದ ಮೇಲೆ ಬೀರಿದ ಪ್ರಭಾವಗಳೇನು? ಎನ್ನುವ ಒಂದಿಷ್ಟು ಆಲೋಚನೆಗಳನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಇದೊಂದು ಸುದೀರ್ಘವಾದ ಅಧ್ಯಯನದ ವಿಷಯವಾಗಿದ್ದು, ಇಲ್ಲಿನ ಲೇಖನದ ಮಿತಿಗೆ ಅನುಗುಣವಾಗಿ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.

ಆಧುನಿಕತೆಯ ಸ್ವರೂಪ:

‘ಆಧುನಿಕತೆ’ಯನ್ನು ಹಲವು ಆಯಾಮಗಳಲ್ಲಿ ವಿಶ್ಲೇಷಿಸಿಕೊಳ್ಳಲು ಅವಕಾಶವಿದೆ.

* ಆಧುನಿಕತೆ ಎಂದರೆ ‘ಹೊಸತು’, ‘ಸದ್ಯದ್ದು’  ಎನ್ನುವುದು ಪದಶಃ ಅರ್ಥ.

* ಬೆಂಕಿ, ಮನೆ, ವ್ಯವಸಾಯ, ಹಣ, ವ್ಯವಹಾರ, ವ್ಯಾಪಾರ, ಕುಟುಂಬ, ಸಮಾಜ, ವಿಜ್ಞಾನ, ತಂತ್ರಜ್ಞಾನ ಇವೇ ಮುಂತಾದ ಮನುಷ್ಯರ ಹೊಸ ಹೊಸ ಆವಿಷ್ಕಾರದ ಪರಿಕಲ್ಪನೆಗಳೆಲ್ಲವೂ ಆಯಾ ಕಾಲಕ್ಕೆ ಆಧುನಿಕವೇ.

* ಪರಂಪರೆಯಲ್ಲಿ ಆಗಿಹೋದ ಪ್ರಜ್ಞಾವಂತರ ವಿಚಾರಗಳು ಪ್ರಸ್ತುತ ಸಂದರ್ಭಕ್ಕೆ ಮುಖ್ಯವೆನಿಸಿದರೆ ಅದೂ ಆಧುನಿಕವೇ.

* ‘ಆಧುನಿಕ’ವೆಂದರೆ ಸಾಮಾನ್ಯವಾಗಿ ಭೌತಿಕವಾದ(materialistic), ಅಭಿವೃದ್ಧಿ, ಪ್ರಗತಿ, ಇನ್ಸ್ಟ್ರುಮೆಂಟಲ್ (instrumental) ಎನ್ನುವ ಅರ್ಥದಲ್ಲಿ ಯೋಚಿಸುತ್ತಿರುತ್ತೇವೆ; ಬಳಸುತ್ತಿರುತ್ತೇವೆ. 

* ಆಧುನಿಕವೆಂದರೆ, ಯಾವಾಗಲೂ ಒಂದು ಕಾಲಘಟ್ಟದೊಳಗೆ ಬೇರೂರಿರುವ ಜಡಗೊಂಡ ಆಲೋಚನೆಗಳಿಂದ ಬಿಡುಗಡೆಗೊಳ್ಳುವುದು. ಅಂಥ ಜಡಗೊಂಡ
ಆಲೋಚನೆಗಳನ್ನು ದಾಟಿ/ ಮೀರಿ ಹೊರಬರುವ ಹೊಸದಾದ ಅರ್ಥಪೂರ್ಣ ಆಲೋಚನೆಗಳನ್ನು ಸೃಸ್ಟಿಸಿಕೊಳ್ಳುವುದಾಗಿರುತ್ತದೆ. 

* ಆಧುನಿಕವೆಂದರೆ, ನಿನ್ನೆಗಳ (ಭೂತಕಾಲದ) ಸಿಕ್ಕುಗಳಿಂದ ಬಿಡಿಸಿಕೊಂಡು ಹೊಸತೊಂದು ವಿಚಾರಕ್ಕೆ ವರ್ತಮಾನದಲ್ಲಿ ತೆರೆದುಕೊಳ್ಳುವ ಹಾಗೆ ಮಾಡುವಂಥದ್ದು. 

* ಆಧುನಿಕ ಮನಸ್ಸು ಯಾವಾಗಲೂ ಆಯಾ ಕಾಲದ ಕೊಳಕುಗಳಿಂದ, ಸಂಕುಚಿತ ಮನೋಭಾವನೆಗಳಿಂದ, ಸ್ವಾರ್ಥ ಚಿಂತನೆಗಳಿಂದ ಹೊರಬರಲು ಪ್ರಯತ್ನಿಸುತ್ತಿರುತ್ತದೆ.  ಇಂಥದ್ದನ್ನು ನಮ್ಮ ಜನಪದರು ಕಾವ್ಯ, ಕಥೆ, ಪುರಾಣ, ಮಾತು, ಗಾದೆ, ನುಡಿಗಟ್ಟುಗಳ ಮೂಲಕ; ಸಾಮಾಜಿಕ ಚಿಂತಕರು, ಭಾಷಣ, ಬರವಣಿಗೆ, ಚಳುವಳಿಗಳ ಮೂಲಕ; ಸೃಜನಶೀಲ ಬರಹಗಾರರು, ಕಾವ್ಯ, ನಾಟಕ, ಪ್ರಬಂಧ, ಕಾದಂಬರಿ, ಲೇಖನಗಳು ಮುಂತಾದ ಸಾಹಿತ್ಯ ಪ್ರಕಾರಗಳ ಮೂಲಕ; ಕಲಾವಿದರು ಸಂಗೀತ, ಚಿತ್ರ, ನೃತ್ಯ, ಶಿಲ್ಪ, ಸಿನೆಮಾ ಮುಂತಾದುವುಗಳ ಮೂಲಕ ಕಾಣಿಸುತ್ತಿರುತ್ತಾರೆ. ಇಲ್ಲಿ ಜಗತ್ತಿನಾದ್ಯಂತ ನಡೆದಿರುವ ಯಾವುದೇ ಚಳುವಳಿಗಳು, ಹೋರಾಟಗಳನ್ನು, ಭಾರತದ ಭಕ್ತಿ ಪರಂಪರೆಗಳು, ಬುದ್ಧನಿಂದ ಮೊದಲುಗೊಂಡು ವಚನಕಾರರು, ಕೀರ್ತನೆಕಾರರು, ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಗಳು, ಅಸ್ಪೃಶ್ಯತೆ ವಿರುದ್ಧ ನಡೆದ ಅಂಬೇಡ್ಕರರ ಹೋರಾಟ, ಕನ್ನಡದ ಸಾಮಾಜಿಕ ಹಾಗೂ ಸಾಹಿತ್ಯಕ ಚಳುವಳಿಗಳನ್ನು ಗಮನಿಸಬಹುದು. 

* ಸಾಹಿತ್ಯದ ಅಧ್ಯಯನದ ಸಂದರ್ಭದಲ್ಲಿ ಕೈಗಾರಿಕಾ ಕ್ರಾಂತಿಯ ನಂತರದ ಕಾಲಘಟ್ಟವನ್ನು  ‘ಆಧುನಿಕ ಕಾಲ’ ಎಂದು ಗುರುತಿಸಿಕೊಳ್ಳಲಾಗಿದೆ. ಅಂದರೆ ಹದಿನೆಂಟನೇ ಶತಮಾನದಿಂದ ಆರಂಭವಾದ ನಗರೀಕರಣ, ಔದ್ಯೋಗೀಕರಣ, ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರಗಳಲ್ಲಾದ ಅಸಾಧಾರಣ ಬೆಳವಣಿಗೆಗಳು, ಅವು ರೂಪಿಸಿದ ದೃಷ್ಟಿಕೋನವನ್ನು ‘ಆಧುನಿಕ ದೃಷ್ಟಿಕೋನ’ ಎಂದು ಕರೆದುಕೊಳ್ಳಲಾಗಿದೆ.

* ಸಾಮಾನ್ಯವಾಗಿ, ಈ ಆಧುನಿಕ ಹಾಗೂ ಆಧುನಿಕೋತ್ತರ ಎನ್ನುವ ಚಿಂತನೆಗಳು ಎಲ್ಲಾ ಕಾಲದಲ್ಲಿಯೂ ಎರಡೆರಡು ರೀತಿಯಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುತ್ತವೆ.

ಒಂದು:

ಈ ಹಿಂದೆ ಹೀಗಿತ್ತು ಎನ್ನುವ ನಾವೇ ಕಟ್ಟಿಕೊಂಡ ಮೌಲ್ಯಗಳು, ಜೀವನದ ರೀತಿನೀತಿಗಳು, ಆಚರಣೆ, ಸಂಪ್ರದಾಯಗಳಿಗೆ ಅನುಗುಣವಾಗಿ ನಾವು ಬದುಕಬೇಕು, ಹಳತನ್ನು ಬಿಡಬಾರದೆನ್ನುವ ಆಲೋಚನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ತವಕದ್ದು. ಉದಾಹರಣೆಗೆ ಮಹಿಳಾ ಚಳುವಳಿಯ ನಂತರ ಶಿಕ್ಷಣ, ಉಡುಪುಗಳನ್ನು ಧರಿಸುವಲ್ಲಿ ಎಷ್ಟೇ ಬದಲಾವಣೆ ಕಂಡಿದ್ದರೂ, ಹೆಣ್ಣಾದವಳು  ಗಂಡಿಗೆ ಸರಿಸಮಾನವಾಗಿ ಅವನಷ್ಟೇ ಕೆಲವೊಮ್ಮೆ ಅವನಿಗಿಂತ ಹೆಚ್ಚಾಗಿ ದುಡಿದರೂ, ಕುಟುಂಬದಲ್ಲಿ ಅವನೇ ಯಜಮಾನನಾಗಿ, ಕುಟುಂಬದ ಕೆಲಸಗಳಿಗೆ ಇವಳೇ ಹೊಣೆಗಾರಳಾದರೂ, ಅವಳು ಗೌಣವಾಗಿ ಉಳಿದುಬಿಡುವ ಪರಿಪಾಠವೇ ನಮ್ಮಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಕುಟುಂಬದಲ್ಲಿ  ಹೆಣ್ಣಾದವಳು  ತಗ್ಗಿ ಬಗ್ಗಿ ನಡೆಯಬೇಕು, ಎದುರಾಡಬಾರದು, ಪ್ರಶ್ನಿಸಬಾರದೆಂಬ ನಿರೀಕ್ಷೆ ಇರುತ್ತದೆ. ಅನೇಕ ಸಂಪ್ರದಾಯಗಳು, ಆಚರಣೆಗಳು, ಮಡಿ-ಮೈಲಿಗೆ, ವ್ರತ-ಕಥೆ, ಅಡುಗೆ-ಅಲಂಕಾರ ಇವೇ ಮುಂತಾದುವುಗಳ ಒಟ್ಟು ನಿರ್ವಹಣೆಯಲ್ಲಿ ಹೆಚ್ಚಿನ  ಜವಾಬ್ದಾರಿ ಸಾಮಾನ್ಯವಾಗಿ ಹೆಣ್ಣಿನ ಹೆಗಲೇರಿರುತ್ತದೆ. ಮದುವೆಗೆ ಮೊದಲು ಅತ್ಯಾಧುನಿಕ ಉಡುಪುಗಳಾದ ಜೀನ್ಸ್, ಪ್ಯಾಂಟು ಟೀ ಶರ್ಟ್ ಇತ್ಯಾದಿ ಉಡುಪುಗಳನ್ನು ತೊಡುವ  ಹೆಣ್ಣುಮಕ್ಕಳಿಂದ ಮದುವೆಯಾದ ಕೂಡಲೆ ಸಾಂಪ್ರದಾಯಿಕವಾದ ಸೀರೆ ಒಡವೆಗಳನ್ನು ತೊಡುವುದನ್ನು ನಿರೀಕ್ಷಿಸಲಾಗುತ್ತದೆ. ಅಂದರೆ, ಮೇಲ್ನೋಟಕ್ಕೆ ಎಷ್ಟೇ ಆಧುನಿಕಗೊಂಡರೂ ಆಲೋಚನೆಯಲ್ಲಿ ಸಂಪ್ರದಾಯವನ್ನು ನಿರೀಕ್ಷಿಸಲಾಗುತ್ತದೆ.  ಇಂಥವುಗಳ ಹಿಂದೆ ಒಂದು ವ್ಯವಹಾರದ ತಂತ್ರ ಹಾಗೂ ರಾಜಕೀಯ ಇಚ್ಛಾಶಕ್ತಿಯೂ ಕೆಲಸ ಮಾಡುತ್ತಿರುತ್ತದೆನ್ನುವುದನ್ನು ಗಮನಿಸಬೇಕು. ಸರಳವಾಗಿ ಹೇಳುವುದಾದರೆ ಬದಲಾಗುತ್ತಿರುವ ವರ್ತಮಾನದ ರೀತಿ ನೀತಿಗೆ, ಈ ಹಿಂದಿನ ಭೂತಕಾಲದ ರೀತಿನೀತಿಯನ್ನು, ಆಲೋಚನೆಗಳನ್ನು, ಆಚರಣೆಗಳನ್ನು ಹೇರುವುದು. ಇದು ಧರ್ಮ ಮತ್ತು ರಾಜಕಾರಣದ ತಂತ್ರದ ಭಾಗವಾಗಿ, ಹಳೆಯ ಆಚರಣೆಗಳನ್ನು ಉಳಿಸಿಕೊಳ್ಳುವ ಮೂಲಕ ಹುಸಿ ‘ಸ್ವದೇಶ ಪ್ರೇಮ’ವನ್ನು ಮೆರೆಯುವ ತವಕವಾಗಿಯೂ ಕಾಣಿಸಿಕೊಳ್ಳುತ್ತಿರುತ್ತದೆ.

ಇನ್ನೊಂದು:

ಇದೇ ರಾಜಕೀಯ ಇಚ್ಛಾಶಕ್ತಿಯು ಇದಕ್ಕೆ ವಿರುದ್ಧವಾಗಿ ಜಾಗತೀಕರಣದ ಹೆಸರಿನಲ್ಲಿ ಪಾಶ್ಚಾತ್ಯರ ನಡಾವಳಿಗಳನ್ನು ಅನುಕರಿಸಲು ಪ್ರೇರೇಪಿಸುತ್ತಿರುತ್ತದೆ. ತಿನ್ನುವ ಆಹಾರಕ್ರಮದಿಂದ ಮೊದಲುಗೊಂಡು, ಉಡುಪು ನಿತ್ಯ ಬಳಕೆಯ ವಸ್ತುಗಳು ಒಟ್ಟಾರೆ ಆಲೋಚನಾಕ್ರಮವನ್ನೇ ಒಪ್ಪಿಕೊಳ್ಳುವುದು ಮಾತ್ರವಲ್ಲ, ಅಲ್ಲಿನ ಕಂಪನಿಗಳನ್ನೇ ಇಲ್ಲಿಗೆ ಕರೆದು ಕೈಗಾರಿಕೆಗಳನ್ನು ಸ್ಥಾಪಿಸಿ ಬೆಳೆಸಿ ಅವುಗಳಿಗೆ ತಕ್ಕ ಹಾಗೆ ಯುವಪೀಳಿಗೆಯನ್ನು ಶಿಕ್ಷಣದ ಮೂಲಕ ತಯಾರು  ಮಾಡುತ್ತಿರುತ್ತದೆ. ಒಟ್ಟು ಜೀವನಕ್ರಮದ ದಿಕ್ಕೇ ಬದಲಾಗಿಬಿಡುವ ಅನಿವಾರ್ಯತೆಯನ್ನು ಸೃಷ್ಟಿಸುತ್ತಿರುತ್ತದೆ. ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕೆಂದುಕೊಳ್ಳುವವರೂ ಕೂಡ ಈ ಎರಡನೇ ಆಲೋಚನೆಗೇನು ಹೊರತಾದವರಲ್ಲ! ತಮ್ಮ ಮಕ್ಕಳನ್ನು ಕಷ್ಟಪಟ್ಟಾದರೂ, ಸಾಲ ಮಾಡಿಯಾದರೂ ಸರಿ ಇಂಗ್ಲಿಷ್ ಶಾಲೆಗಳಿಗೆ ಸೇರಿಸಬೇಕು, ವಿದೇಶಿ ಕಂಪೆನಿಗಳಲ್ಲಿ ಉದ್ಯೋಗ ಹಿಡಿದು ವಿದೇಶದಲ್ಲಿ ನೆಲೆಸಿದರೂ ಸರಿ,  ಒಟ್ಟು ಹೆಚ್ಚಿನ ಹಣ ಸಂಪಾದಿಸಬೇಕೆನ್ನುವ ಮಹದಾಸೆ, ಪ್ರತಿಷ್ಠೆಯನ್ನು ಇಟ್ಟುಕೊಂಡವರೇ. ಅಂದರೆ ಇಂಥವರ ಪ್ರಕಾರ ಪಾಶ್ಚಿಮಾತ್ಯರ ಎಲ್ಲ ಅನುಕರಣೆಗಳೂ ಆಧುನಿಕವೇ!

ಪ್ರಚಲಿತದಲ್ಲಿರುವ ಇಂಥೆಲ್ಲಾ ವಿಚಾರಗಳನ್ನು ಗಮನಿಸಿಯೇ ಕನ್ನಡ ಸಾಹಿತ್ಯದಲ್ಲಿ ಇವುಗಳ ಪ್ರತಿಫಲನದಿಂದಾಗಿ ಉಂಟಾಗಿರುವ ಸಾಮಾಜಿಕ ಚಲನೆಗಳಾವುವೆಂಬುದನ್ನು ಗುರುತಿಸಬೇಕಾಗುತ್ತದೆ.

ಪ್ರಸ್ತುತ ವಿಷಯ ‘ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಸಾಮಾಜಿಕ ಚಲನೆಗಳು’ ಎಂದಿದೆ.  ‘ಆಧುನಿಕೋತ್ತರ’ (ಆಧುನಿಕ+ಉತ್ತರ) ಕಾಲವನ್ನು ಎಲ್ಲಿಂದ ಮತ್ತು  ಹೇಗೆ  ಗುರುತಿಸಿಕೊಳ್ಳಬೇಕು ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಈ ಗೊಂದಲವನ್ನು ಡಾ. ಸಿ. ಎನ್. ರಾಮಚಂದ್ರನ್ ಅವರು ತಮ್ಮ ‘ವಸಾಹತೋತ್ತರ ಚಿಂತನೆ’ ಪುಸ್ತಕದಲ್ಲಿ ಪಾಶ್ಚಾತ್ಯರ ಚಿಂತನೆಗಳೇನಿತ್ತು ಎನ್ನುವುದನ್ನು ಹೀಗೆ ಪ್ರಸ್ತಾಪಿಸುತ್ತಾರೆ:  “ಮನರಂಜನೆಯೇ ಮುಖ್ಯವಾಗಿರುವ ಜನಪ್ರಿಯ ಸಾಹಿತ್ಯ, ಸಂಗೀತ ಇವೆಲ್ಲವೂ ಶ್ರೇಷ್ಠ ಸಂಸ್ಕೃತಿಯ ಶತ್ರುಗಳೆಂಬುದು ಲೀವಿಸ್, ರಿಚರ್ಡ್ಸ್, ಎಲಿಯಟ್ ಮುಂತಾದ ಆಧುನಿಕತಾವಾದಿಗಳ ನಿಲುವು. -ಈ ನಿಲುವನ್ನು ವಿರೋಧಿಸುವ ವೈಚಾರಿಕತೆಯನ್ನು ‘ಆಧುನಿಕೋತ್ತರವಾದ’ ಎಂದು ಗುರುತಿಸಬಹುದು. ಇಲ್ಲಿ ‘ಉತ್ತರ’ ಶಬ್ದಕ್ಕೆ ಎರಡು ಅರ್ಥಗಳಿವೆ. ‘ನಂತರ’ ಮತ್ತು ‘ವಿರುದ್ಧ’.  ಅರ್ಥಾತ್ ಆಧುನಿಕವಾದದ ನಂತರ ಬಂದ ಮತ್ತು ಅದನ್ನು ವಿರೋಧಿಸುವ ವೈಚಾರಿಕತೆಯೇ ‘ಆಧುನಿಕೋತ್ತರವಾದ’” ಎನ್ನುತ್ತಾರೆ. ಬಹುಶಃ ಇದನ್ನೇ ಇಲ್ಲೂ ಗಮನದಲ್ಲಿಟ್ಟುಕೊಳ್ಳಬಹುದು ಎನಿಸುತ್ತದೆ. ಯಾವುದೇ ಕಾಲದ ಆಲೋಚನಾಕ್ರಮ/ಚಿಂತನಾಕ್ರಮ ಕೇವಲ ಆ ಕಾಲಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಭೂತ-ವರ್ತಮಾನ-ಭವಿಷ್ಯತ್ತುಗಳೆಲ್ಲವನ್ನೂ ಒಳಗೊಂಡಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಅಂದರೆ, ಸದ್ಯದ ಸಾಮಾಜಿಕ ವ್ಯವಸ್ಥೆಗಳ ಬಗೆಗಿನ ಚಿಂತನೆಗಳಿಗಿಂತ ಬುದ್ಧ, ವಚನಕಾರರು, ಪಂಪ, ಕುಮಾರವ್ಯಾಸ, ಕುವೆಂಪು, ಕಾರಂತ ಮುಂತಾದವರು ಬದುಕು ಹಾಗೂ ಸಮಾಜದ ಬಗೆಗೆ ತಳೆದ ಚಿಂತನೆಗಳು ನಮ್ಮನ್ನು ಪ್ರಭಾವಿಸಬಹುದು; ಇದು ಒಂದು ಹೊಸ ಸಾಮಾಜಿಕ ಸಂಚಲನವನ್ನೇ ಹುಟ್ಟು ಹಾಕಿಬಿಡಬಹುದು. ಇಲ್ಲಿನ ‘ಆಧುನಿಕೋತ್ತರ’ ಎನ್ನುವುದನ್ನು ‘ವಸಾಹತೋತ್ತರ’ ಎಂದಿಟ್ಟುಕೊಳ್ಳುವುದೇ ಹೆಚ್ಚು ಸೂಕ್ತವೆನಿಸುತ್ತದೆ.  ಇನ್ನೂ ಸರಳವಾಗಿ ‘ಸ್ವಾತಂತ್ರ್ಯಾನಂತರದ ಕನ್ನಡ ಸಾಹಿತ್ಯದಲ್ಲಿನ ಸಾಮಾಜಿಕ ಚಲನೆಗಳು’ ಎಂದೂ ಕರೆದುಕೊಳ್ಳಬಹುದು.

ಇಂತಹ ವೈಚಾರಿಕತೆಯುಳ್ಳ ಆಧುನಿಕೋತ್ತರವಾದದ ಚಿಂತನೆಗಳು ಕನ್ನಡ ಸಾಹಿತ್ಯದಲ್ಲಿ ಪ್ರಕಟಗೊಂಡಿರುವ ಬಗೆ ಹೇಗೆ ಎಂದು ಗಮನಿಸುವುದಾದರೆ, ಸಾಮಾನ್ಯವಾಗಿ ಒಂದು ಸಮಾಜ ಜೀವಂತಿಕೆಯಿಂದ, ಕ್ರಿಯಾಶೀಲತೆಯಿಂದ ಕೂಡಿರುತ್ತದೆಂದರೆ, ಅಲ್ಲಿನ ಕಲೆ, ಸಾಹಿತ್ಯ, ಸಂಗೀತ ಒಟ್ಟಾರೆ ಅಲ್ಲಿನ ಶ್ರೀಮಂತ ಸಂಸ್ಕೃತಿಯಿಂದಾಗಿ.  ಚರಿತ್ರೆಯಲ್ಲಿ ದಾಖಲಾಗಿ ಉಳಿಯುವುದು ಕೂಡ ಶ್ರೇಷ್ಠತೆಯ, ಅರ್ಥಪೂರ್ಣ ಮೌಲ್ಯಗಳನ್ನು ಎತ್ತಿ ಹಿಡಿಯುವ ಸೃಜನಶೀಲ ಕಲೆಗಳೇ. ಇವುಗಳಲ್ಲಿ ಸಾಹಿತ್ಯವೂ ಸೇರುವುದರಿಂದ, ಆಧುನಿಕತೆ/ಆಧುನಿಕೋತ್ತರ  ಪ್ರಕ್ರಿಯೆಯಲ್ಲೂ ಸಹಜವಾಗಿಯೇ ಸಾಹಿತ್ಯ ಪಠ್ಯಗಳ ಅಧ್ಯಯನವೂ  ಮುಖ್ಯವೆನಿಸುತ್ತವೆ. ಜೊತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಮ್ಮ ಬದುಕಿನ ಆಲೋಚನಾಕ್ರಮದ ದಿಕ್ಕನ್ನೇ ಬದಲಿಸಿಬಿಡುವ ಶಕ್ತಿಯೂ ಸಾಹಿತ್ಯ ಕೃತಿಗಳಿಗಿರುತ್ತದೆ. ಉದಾಹರಣೆಗೆ ಮನುಷ್ಯರ ವ್ಯಕ್ತಿತ್ವಗಳನ್ನು ಅನಾವರಣಗೊಳಿಸುವ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳು. ಜನಮನವನ್ನು ತಲುಪುವ ಇವುಗಳ ಪಾಠಾಂತರಗೊಂಡ ನಾಟಕಗಳು; ಜನಪದ ಮಹಾಕಾವ್ಯಗಳು, ಕನ್ನಡ ನಾಡು, ನುಡಿಗೆ  ಸಂಬಂಧಿಸಿದ ಜನಪದ ಗೀತೆಗಳು, ಕನ್ನಡ ಭಾವಗೀತೆಗಳು, ದೇಶಭಕ್ತಿ ಗೀತೆಗಳು, ಕನ್ನಡ ಸಾಹಿತ್ಯದಲ್ಲಿ ಹೊಸ ಸಂಚಲನ ಉಂಟುಮಾಡಿದ ಸಾಹಿತ್ಯಕ ಚಳುವಳಿಗಳಾದ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ, ಮಹಿಳಾ ಚಳುವಳಿಗಳೊಂದಿಗೆ, ಭಾಷಾ ಚಳುವಳಿ, ರೈತ ಚಳುವಳಿಗಳನ್ನೂ ಇದರ ಭಾಗವಾಗಿ ಬಂದ ಬರಹಗಳನ್ನೂ ಗಮನಿಸಬಹುದು.

ಬ್ರಿಟೀಷ್ ಚಕ್ರಾಧಿಪತ್ಯದಿಂದ ಬಿಡಿಸಿಕೊಂಡು ಸ್ವತಂತ್ರವಾದ ಭಾರತ, ಪಾಶ್ಚಿಮಾತ್ಯರ ಬೃಹತ್ ಕೈಗಾರಿಕೋದ್ಯಮದಿಂದ, ಹಾಗೂ ಮೆಕಾಲೆಯ ಇಂಗ್ಲಿಷ್ ಶಿಕ್ಷಣ ಪದ್ಧತಿಯಿಂದ ಮುಕ್ತಿ ಹೊಂದಲಿಲ್ಲ. ‘ಕೈಗಾರಿಕೆಗಳು, ಅಣೆಕಟ್ಟುಗಳು ನಮ್ಮ ದೇವಸ್ಥಾನಗಳು’ ಎನ್ನುವ ಘೋಷಣೆಯೊಂದಿಗೆ ಆರಂಭಗೊಂಡ ಯಂತ್ರನಾಗರೀಕತೆ ಹಾಗೂ ಪ್ರಾದೇಶಿಕ ಭಾಷೆ- ಸಂಸ್ಕೃತಿಗಳ ಪುರೋಗಾಮಿ ಚಲನೆಗಳಿಗೆ ಪೆಟ್ಟು ಕೊಡುತ್ತಿರುವ ಇಂಗ್ಲಿಷ್ ಮಾದ್ಯಮ ಶಿಕ್ಷಣ ವ್ಯವಸ್ಥೆ ಹೊಸ ಸಾಮಾಜಿಕ ಸಂಚಲನೆಗೆ ನಾಂದಿ ಹಾಡಿದವು. (ಆಧುನಿಕತೆಯ ಭಾಗವಾಗಿ ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆ ಹಾಗೂ ಇಂಗ್ಲಿಷ್ ಶಿಕ್ಷಣ ಪದ್ಧತಿ ಇಂದಿಗೂ ಚಾಲ್ತಿಯಲ್ಲಿರುವುದನ್ನು ಗಮನಿಸಬಹುದು.) ಇಂಥದ್ದರ ಪರಿಣಾಮ ಏನಾಗಿರುತ್ತದೆಂಬುದನ್ನರಿತ ನಮ್ಮ ನಾಡಿನ ಚಿಂತಕರು, ಕರ್ನಾಟಕ ಏಕೀಕರಣಕ್ಕಾಗಿ ನಾಡು-ನುಡಿಯ ಮಹತ್ವವನ್ನು ಸಾರುವುದರ ಮೂಲಕ, ನಮ್ಮ ಭಾಷೆಯಿಂದಲೇ ಕಲಿಯುವ ಶಿಕ್ಷಣ ಹೇಗಿರಬೇಕೆನ್ನುವ ವಿಚಾರಕ್ಕೆ ಸಂಬಂಧಿಸಿದ ಚಿಂತನೆಗಳು ಹುಟ್ಟಿದ್ದು ಇಂದಿಗೂ ಸ್ಥಳೀಯ ಜ್ಞಾನ ಪರಂಪರೆಯ ಸಾಕ್ಷಿಪ್ರಜ್ಞೆಯಾಗಿ ಉಳಿದುಕೊಂಡಿದೆ. ಆದರೆ, ನಮ್ಮದೇ ಭಾಷೆಯ ಮೂಲಕ ಜ್ಞಾನ ಸಂಪತ್ತಿನ ಹೊಸ ಚಿಂತನೆಗಳನ್ನು ಬಿತ್ತುವುದರಲ್ಲಿ ಸೋತಿರುವುದು ಇಂದು ಮತ್ತೂ ಢಾಳಾಗಿ ಕಾಣಿಸುತ್ತಿದೆ. ಈ ಸಂಬಂಧ ಇಪ್ಪತ್ತನೆಯ ಶತಮಾನದ ಆರಂಭದ ಬರಹಗಾರರ ಚಿಂತನೆಗಳನ್ನು ಗಮನಿಸಬಹುದು. ಬಿಎಂಶ್ರೀ ಅವರ ‘ಕನ್ನಡ ಮಾತು ತಲೆ ಎತ್ತುವ ಬಗೆ’; ಕುವೆಂಪು ಅವರ ‘ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯದ ಅವಶ್ಯಕತೆ’, ‘ಮಕ್ಕಳಿಗೇಕೆ ವೈಚಾರಿಕತೆ?’, ‘ಮಕ್ಕಳ ಸಾಹಿತ್ಯಕ್ಕೆ ಆಧುನಿಕ ಮೌಲ್ಯಗಳು’, ‘ಕನ್ನಡ ದೀಕ್ಷೆ’ ಮುಂತಾದ ಬರಹಗಳು; ಡಿವಿಜಿಯವರ ರಾಷ್ಟ್ರಕನಿಗೆ ಸಾಹಿತ್ಯ ಬೇಕೆ?’; ಬೇಂದ್ರೆಯವರ ನಾಡು–ನುಡಿಗೆ ಸಂಬಂಧಿಸಿದ ವಿಚಾರಗಳು, ‘ಕನಸಿನೊಳಗೊಂದು ಕಣಸು’ ಮುಂತಾದ ಕವಿತೆಗಳು; ಜಿ.ಪಿ.ರಾಜರತ್ನಂ ಅವರ ‘ಕನ್ನಡ ಪದಗೊಳ್’; ಮಾಸ್ತಿಯವರ ‘ಸಾಹಿತ್ಯದ ಅವಶ್ಯಕತೆ’; ಆಧುನಿಕ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವ ಟಿ.ಪಿ. ಕೈಲಾಸಂ ಅವರ ‘ಟೊಳ್ಳು-ಗಟ್ಟಿ’– ಇವೇ ಮುಂತಾದ ಬರಹಗಳನ್ನು ಗಮನಿಸಬಹುದು. ವಿಪರ್ಯಾಸವೆಂದರೆ, ಪಾಶ್ಚಾತ್ಯರ ಅನುಕರಣೆಯೇ ಆಧುನಿಕತೆ ಎಂದು ಭಾವಿಸಿರುವ ಪರಿಣಾಮ, ನಿಜವಾಗಿಯೂ ಹೊಸ ಚಿಂತನೆಗಳನ್ನು ಬಿತ್ತುವ ನಮ್ಮ ನಾಡಿನ ಹಿರಿಯರ ಚಿಂತನೆಗಳನ್ನು ಗಾಳಿಗೆ ತೂರಿದ್ದೇವೆ!

ಕಾಲಕಾಲಕ್ಕೆ ನಮ್ಮ ಸಮಾಜದಲ್ಲಿ  ಲಿಂಗ, ಜಾತಿ, ವರ್ಗ ವ್ಯವಸ್ಥೆಯಲ್ಲಿ  ಬೇರೂರಿರುವ ಶ್ರೇಷ್ಠ-ಕನಿಷ್ಠವೆಂಬ ತರತಮ ಭಾವಗಳು, ಜೀತಪದ್ಧತಿ, ಜಮೀನ್ದಾರಿ ಪದ್ಧತಿ ಮುಂತಾದ ಸಾಮಾಜಿಕ ಸಮಸ್ಯೆಗಳಿಗೆ ಕನ್ನಡ ಸಾಹಿತ್ಯ ಹಾಗೂ ನಾಡಿನ ಚಳುವಳಿಗಳು ಸ್ಪಂದಿಸುತ್ತಾ ಬಂದಿವೆ. ಶಿವರಾಮ ಕಾರಂತರ ‘ಚೋಮನ ದುಡಿ’, ‘ಸರಸಮ್ಮನ ಸಮಾಧಿ’, ಕುವೆಂಪು ಅವರ ‘ಸಾಲದ ಮಗು’,  ನಗರೀಕರಣ ಹುಟ್ಟು ಹಾಕಿದ ಆರ್ಥಿಕ ಕಂದರವನ್ನು ಸೃಷ್ಟಿಸಿದ್ದನ್ನು ಸಾರುವ ‘ಕಲ್ಕಿ’, ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ.’ ಎನ್ನುವ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಆರಂಭದ ಸಾಲುಗಳು, ಅವರ ‘ಜಲಗಾರ’ ನಾಟಕ ಮಾತ್ರವಲ್ಲದೆ, ನವೋದಯದ ಬಹುತೇಕ ಸಾಹಿತ್ಯ ಕೃತಿಗಳಿಗೆ ಪ್ರಾತಿನಿಧಿಕವಾಗಿ ಆಡಿದ ಮಾತುಗಳಂತಿವೆ. ಇದು ಆ ಕಾಲಕ್ಕೆ ಮಾತ್ರವಲ್ಲ, ಇಂದಿಗೂ ಪ್ರಸ್ತುತವಾಗಿಯೇ ಕಾಣಿಸುತ್ತಿದೆ.

ಅನಂತರ ನಮ್ಮ ಸಮಾಜದ ಗತಿಬಿಂಬವನ್ನು ಕಾಣಿಸುವ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿದ ಸಾಹಿತ್ಯ ಚಳುವಳಿಗಳ ಭಾಗವಾಗಿ ಬಂದ ಅನೇಕ ಸಾಹಿತ್ಯ ಕೃತಿಗಳಿವೆ; ಚಿಂತನೆಗಳಿವೆ. ಕೆಲವನ್ನು ಹೆಸರಿಸುವುದಾದರೆ, ಪುತಿನರ ‘ಗೋಕುಲ ನಿರ್ಗಮನ’ ನಾಟಕ, ಇದೇ ಹೆಸರಿನ ಕೆವಿ. ಸುಬ್ಬಣ್ಣನವರ ಲೇಖನ, ಯು. ಆರ್. ಅನಂತಮೂರ್ತಿಯವರ ‘ಸಂಸ್ಕಾರ’, ‘ಭಾರತೀಪುರ’ದಂತಹ ಕಾದಂಬರಿಗಳು, ಪೂರ್ಣಚಂದ್ರತೇಜಸ್ವಿಯವರ ‘ಅಬಚೂರಿನ ಪೋಸ್ಟ್ ಆಫೀಸು’ ಕಥಾಸಂಕಲನ, ‘ಚಿದಂಬರ ರಹಸ್ಯ’, ‘ಪರಿಸರದ ಕಥೆಗಳು’, ಗೋಪಾಲಕೃಷ್ಣ ಅಡಿಗರ ‘ನಡೆದು ಬಂದ ದಾರಿ’ ಕವನ ಸಂಕಲನ, ವೀಣಾ ಶಾಂತೇಶ್ವರ ಅವರ ಕಥೆಗಳು,  ವೈದೇಹಿಯವರ ಕಥೆಗಳು ಹಾಗೂ ‘ತಿಳೀಸಾರು’, ‘ನೋಡಬಾರದು ಚೀಲದೊಳಗಣನು’ ದಂತಹ ಕವಿತೆಗಳು, ಪ್ರತಿಭನಂದಕುಮಾರರ ‘ನಾವು ಹುಡುಗಿಯರೇ ಹೀಗೆ’  ಕವನ ಸಂಕಲನ, ಎಚ್. ನಾಗವೇಣಿ ಅವರ ‘ಧಣಿಯರ ಬೆಳ್ಳಿಲೋಟ’, ದೇವದಾಸಿ ಪದ್ಧತಿಯ ಒಳಹೊರಗನ್ನು ಬಿಚ್ಚಿಡುವ ಗೀತಾ ನಾಗಭೂಷಣರ ಕಥೆಗಳು, ‘ಬದುಕು’ ಕಾದಂಬರಿ, ಬಿ.ಟಿ. ಜಾಹ್ನವಿಯವರ ‘ಕಳ್ಳುಬಳ್ಳಿ’, ದು. ಸರಸ್ವತಿಯವರ ‘ಬಚ್ಚೀಸು’, ಕೊರತ್ಕಲ್ ಶ್ರೀನಿವಾಸರ ‘ಧಣಿಯರ ಸತ್ಯನಾರಾಯಣ’, ಕುಂ.ವಿ. ಅವರ ‘ದೇವರ ಹೆಣ’, ದೇವನೂರು ಮಹದೇವರ ‘ಒಡಲಾಳ ಮತ್ತು ಇತರ ಕಥೆಗಳು’, ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’… ಮುಂತಾದ  ಕೃತಿಗಳು ಚಳುವಳಿಗಳ ಪ್ರಭಾವದಿಂದಾಗಿ, ಅವುಗಳ ಭಾಗವಾಗಿ ಹುಟ್ಟಿದ್ದಲ್ಲದೆ, ಅದುವರೆಗೂ ಬೇರೂರಿದ್ದ ಲಿಂಗ-ಜಾತಿ-ವರ್ಗ, ಮೌಢ್ಯಾಚಾರಣೆಗಳ ಬಗೆಗಿನ ಅನೇಕ ಆಲೋಚನೆಗಳಿಗೆ ಸಾಣೆಹಿಡಿದು ಹೊಸ ಬಗೆಯ ಚಿಂತನೆಗೆ ಅನುವುಮಾಡಿಕೊಡುತ್ತವೆ; ಸಾಮಾಜಿಕ ಸಂಚಲನೆಗೆ  ಕಾರಣವಾಗುತ್ತವೆ.

ಸಾಮಾಜಿಕ ಚಲನೆಯಲ್ಲಿ ಚಳುವಳಿಗಳ ಪಾತ್ರ:

ಬಂಡಾಯ- ದಲಿತ ಚಳುವಳಿ:
೨೦ನೇ ಶತಮಾನದ ೭೦-೮೦ರ ದಶಕದಲ್ಲಿ ಕರ್ನಾಟಕ ಕಂಡ ಚಳುವಳಿಗಳಲ್ಲಿ ದಲಿತ, ಬಂಡಾಯ, ಮಹಿಳಾ ಚಳುವಳಿಗಳು  ಅದುವರೆಗೂ ಬೇರೂರಿದ್ದ ಆಲೋಚನಾಕ್ರಮದ ದಿಕ್ಕನ್ನೇ ಬದಲಿಸಿ ಹೊಸ ಪರಿಯ ಸಾಮಾಜಿಕ ಸಂಚಲನೆಗೆ ಕಾರಣವಾದುವು.

ಇವುಗಳನ್ನು ಇಲ್ಲಿ ಒಂದಿಷ್ಟು ವಿಸ್ತರಿಸಿಕೊಳ್ಳಬಹುದು. 

ಈ ಚಳುವಳಿಗಳಿಗೆ ಮೊದಲಿದ್ದ ನವೋದಯ ಹಾಗೂ ನವ್ಯ ಕಾವ್ಯದ ಪರಿಭಾಷೆಗೆ ವಿರುದ್ಧವಾದ ಹೊಸ ಕಾವ್ಯ/ಸಾಹಿತ್ಯದ ಪರಿಭಾಷೆ ಹುಟ್ಟಿದ್ದು ದಲಿತ-ಬಂಡಾಯ ಚಳುವಳಿಯ ಸಂದರ್ಭದಲ್ಲಿ. ‘ಕಲೆ ಕಲೆಗಾಗಿ ಅಲ್ಲ ಬದುಕಿಗಾಗಿ’ ಎನ್ನುವ ತತ್ತ್ವವನಿಟ್ಟುಕೊಂಡು, ಸಾಹಿತ್ಯ ಕೇವಲ ಸಾಹಿತ್ಯಕ್ಕಾಗಿ ಸಾಹಿತ್ಯ ಎಂದು ಹುಟ್ಟಿಕೊಳ್ಳದೆ, ಎಲ್ಲರ ಬದುಕು ಹಸನಾಗಬೇಕು ಎಂಬ ಆಶಯದೊಂದಿಗೆ ಬಂಡಾಯ ಸಾಹಿತ್ಯ ಜನ್ಮ ತಾಳುತ್ತದೆ. ಆ ಸಂದರ್ಭದಲ್ಲಿ ಡಿ.ಆರ್. ನಾಗರಾಜರು ಕರೆಕೊಟ್ಟ, ಇಂದಿಗೂ ಒಂದು ನುಡಿಗಟ್ಟೆಂಬಂತೆ ಚಾಲ್ತಿಯಲ್ಲಿರುವ ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಧ್ಯೇಯವಾಕ್ಯದೊಂದಿಗೆ  ನೊಂದವರ, ಬೆಂದವರ ದನಿಯಾಗಿ ಅಕ್ಷರರೂಪ ಪಡೆದುಕೊಳ್ಳುತ್ತದೆ ಬಂಡಾಯ ಸಾಹಿತ್ಯ. ಇದಕ್ಕೆ ಮುಖ್ಯ ಕಾರಣ, ಸ್ವಾತಂತ್ರ್ಯಾನಂತರ ಭಾರತ ಎಲ್ಲ  ಕ್ಷೇತ್ರಗಳಲ್ಲೂ ಸಮಾನತೆಯನ್ನು ಕಾಣದೆ, ಪಾಶ್ಚಾತ್ಯರ ಯಂತ್ರ ನಾಗರೀಕತೆಯ ಪ್ರಭಾವದಿಂದಾಗಿ ಸಮಾಜದಲ್ಲಿ ಬಂಡವಾಳಶಾಹಿ ವ್ಯವಸ್ಥೆಗೆ ಕುಮ್ಮಕ್ಕು ಕೊಟ್ಟು, ಉಳ್ಳವರು, ಇಲ್ಲದವರೆನ್ನುವ ವರ್ಗ ವ್ಯವಸ್ಥೆಯನ್ನು ಸೃಷ್ಟಿಸಿದ ಸರ್ಕಾರದ ವಿರುದ್ಧ, ಇಲ್ಲಿನ ಅನ್ಯಾಯದ ವಿರುದ್ಧ ಬಂಡೆದ್ದು, ಸಾಮಾಜಿಕ ಚಳುವಳಿಯಾಗಿ ರೂಪುಗೊಂಡದ್ದು ಮಾತ್ರವಲ್ಲ, ಸಾಹಿತ್ಯದ ಮೂಲಕವೂ ಇಲ್ಲಿನ ಶೋಷಣೆಯ ವಿರುದ್ಧ ಪ್ರತಿಭಟನೆಗಳಾಗಿದ್ದು ಚಾರಿತ್ರಿಕ ದಾಖಲಾಗಿದೆ. ಇದರ ಮುಂದುವರಿದ ರೂಪವಾಗಿ, ‘ಭಾರತ ಜಾತ್ಯತೀತ ರಾಷ್ಟ್ರ’ ಎನ್ನುವುದು ಕೇವಲ ಘೋಷಣೆಯಾಗಿದ್ದರೆ ಮಾತ್ರ ಸಾಲದು, ಪ್ರಾಯೋಗಿಕವಾಗಿಯೂ ಜಾರಿಗೊಳ್ಳಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಹುಟ್ಟಿದ್ದು ದಲಿತ ಚಳುವಳಿ. ಇಲ್ಲಿ ಕೂಡ ಕಾವ್ಯ/ಸಾಹಿತ್ಯ ಕೇವಲ ಸಾಹಿತ್ಯಕ್ಕಾಗಿ ಹುಟ್ಟಿಕೊಳ್ಳದೆ, ಅದಕ್ಕೊಂದು ರಾಜಕೀಯ ಪರಿಭಾಷೆಯ ಲೇಪವನ್ನು ಮೆತ್ತಿಕೊಂಡೇ ಮೈದಾಳುತ್ತದೆ.

1. “ಇಕ್ರಲಾ ವದಿರ್ಲಾ
ಈ ನನ್ ಮಕ್ಕಳ ಚರ್ಮ ಎಬ್ರಲಾ” ಹಾಗೂ
2. “ದಲಿತರು ಬರುವರು ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ” (ನನ್ನ ಜನಗಳು ಮತ್ತು ಇತರ ಕವಿತೆಗಳು- ಡಾ. ಸಿದ್ಧಲಿಂಗಯ್ಯ, ೨೦೦೫)
ಎನ್ನುವಂಥ ಕಲ್ಪನೆಗೂ ಮೀರಿದ ಸಾಲುಗಳು ಕನ್ನಡ ಸಾಹಿತ್ಯ ಲೋಕವನ್ನು ಮಾತ್ರವಲ್ಲ, ರಾಜಕೀಯ ವಲಯ/ಆಡಳಿತ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿದ್ದರೂ ಆಶ್ಚರ್ಯವಿಲ್ಲ.

ಡಾ. ಸಿದ್ದಲಿಂಗಯ್ಯ

ಸಿದ್ದಲಿಂಗಯ್ಯನವರ ‘ನನ್ನ ಜನಗಳು’ ಸಂಕಲನದ ಕವಿತೆಗಳು ದಲಿತ ಚಳುವಳಿಗೆ  ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ದಿಕ್ಕು ತೋರಿದ್ದಲ್ಲದೆ, ಅನೇಕ ಸಾಮಾಜಿಕ ಬದಲಾವಣೆಗಳಿಗೂ ಕಾರಣವಾಗುತ್ತವೆ. ಇದನ್ನು ಡಿ.ಆರ್. ನಾಗರಾಜರು ಹೀಗೆನ್ನತ್ತಾರೆ:
ಆಧುನಿಕ ಭಾರತದ ದಲಿತಾನುಭವಕ್ಕೆ ಭಿನ್ನವಾದ ಸಾಮಾಜಿಕ ಹಾಗೂ ರಾಜಕೀಯ ವಾತಾವರಣವು ಏರ್ಪಟ್ಟ ಮೇಲೆ, ವಸಾಹತುಶಾಹಿ ಜಗತ್ತಿನ ಅನುಭವ ಸೇರಿಕೊಂಡ ನಂತರ ದಲಿತ ಸಂವೇದನೆಗೆ ವಿಶೇಷವಾದ ವೈಚಾರಿಕವಾದ ಭಾಷಿಕ ವಿನ್ಯಾಸ ಸಾಧ್ಯವಾದದ್ದು ಚಾರಿತ್ರಿಕವಾದುದು. ಲೌಕಿಕದ ಭಾಷಿಕ ಸ್ವಾತಂತ್ರ್ಯ ಆಕಸ್ಮಿಕವೋ ಎಂಬಂತೆ ದಲಿತರಿಗೆ ಸಾಧ್ಯವಾದದ್ದೇ ಒಂದು ದೊಡ್ಡ ದಿಗ್ವಿಜಯ, ಹಾಗಾಗಿಯೇ ದಲಿತ ಲೇಖಕರ ಭಾಷಿಕ ಮೊನಚಿಗೆ ಸದಾ ದಂಗೆಯ ದಾಹ. ಯಾವತ್ತೂ ಪ್ರಶ್ನಿಸುವ ಹಟ ಕೂಡ. ಆದರೆ ಈ ದಂಗೆ, ಈ ಹಟ, ಈ ಹಕ್ಕೊತ್ತಾಯ, ಈ ಆಕ್ರಂದನ, ಈ ಪ್ರತಿರೋಧ ಒಳಗೆ ಮಾತ್ರ ತಾಯ ಪ್ರೀತಿಯನ್ನೂ ಕನಸನ್ನೂ ಒಟ್ಟಿಗೆ ಬೆಸೆದುಕೊಂಡು ಅನಾವರಣಗೊಂಡಿರುತ್ತವೆ. ಈ ಮಾತಿಗೆ ಸಿದ್ಧಲಿಂಗಯ್ಯನವರ ಯಾವುದೇ ಕವಿತೆಯನ್ನಾದರೂ ಪರೀಕ್ಷಿಸಬಹುದು. ಅಂದರೆ; ಏಕಕಾಲಕ್ಕೆ ಒಂದು ರಾಜಕೀಯ ಸ್ಪೇಸ್ (space) ಅನ್ನೂ ಸಾಮಾಜಿಕ ರಚನೆಯನ್ನೂ ದಂಗೆಯ ಜೀವನ್ಮರಣದ ಸವಾಲನ್ನೂ ಸೃಷ್ಟಿಸಿಕೊಂಡೇ ತನ್ನವರಿಗಾಗಿ ಎದುರಾಳಿಗಳ ಮುಂದೆ ಎದೆ ಕೊಡುವಂಥದು. ಹೀಗಾಗಿ ಇದು ‘ಕಾವ್ಯ’ದ ಜವಾಬ್ದಾರಿಯ ಆಚಿನದು. ಸಿದ್ಧಲಿಂಗಯ್ಯನವರ ಕಾವ್ಯ ಈ ಅರ್ಥದಲ್ಲಿ ಸಮಷ್ಟಿಯ ದಂಗೆ, ಆಧುನಿಕ ಭಾರತ ಸೃಷ್ಟಿಸಿದ ಭಾಷಿಕ ಸ್ವಾತಂತ್ರ್ಯದ ಕಿಡಿ. ಆದರೆ ಈ ಕಿಡಿ ಸುಡುವಂಥದಲ್ಲ; ನೋಡುಗರಿಗೆ ಅದು ಸುಡುವಂತೆ ಕಾಣುವುದು ದಿಟ. ಒಳಗೆ ಮಾತ್ರ ಮಾನವೀಯತೆಯ ಹಸಿವಿನಿಂದ ಮೌನವಾಗಿ ಉರಿಯುವ ಈ ಬೆಳಗು ಮನುಷ್ಯನಾದವನ ಆತ್ಯಂತಿಕ ಪ್ರಭೆ. ಸಿದ್ದಲಿಂಗಯ್ಯನವರ ಈ ಪ್ರಭೆಯು ಇಡೀ ಕನ್ನಡ ಕಾವ್ಯವನ್ನೆ ತನ್ನ ಸಮುದಾಯದ ಮೂಲಕ ವಿಸ್ತರಿಸಿದೆ.” (ಡಾ. ಸಿದ್ಧಲಿಂಗಯ್ಯನವರ
‘ನನ್ನ ಜನಗಳು ಮತ್ತು ಇತರ ಕವಿತೆಗಳು’  ಸಂಕಲನದ ಡಿ.ಆರ್.ಎನ್. ಅವರ ಮುನ್ನುಡಿ, ೨೦೦೫)

ಭಾರತದ ಸಂದರ್ಭದಲ್ಲಿ ಮಹಿಳಾ ಚಳುವಳಿಗಳು ಹುಟ್ಟಿಕೊಳ್ಳಲು ಇಲ್ಲಿನ ಸಮಾಜದ ಸ್ವರೂಪವೇ ಕಾರಣವಾಗಿದೆ. ಅನೇಕ ಜಾತಿ, ಮತ, ಪಂಥ, ಧರ್ಮಗಳನ್ನೊಳಗೊಂಡ, ಅವುಗಳದೇ ಆದ ಕಟ್ಟುಪಾಡುಗಳು, ಆಚರಣೆಗಳು, ನಂಬಿಕೆಗಳನ್ನು ಇಟ್ಟುಕೊಂಡ ಬಹುರೂಪಿ ಸಂಸ್ಕೃತಿಯ ಅಸಮಾನ ನೆಲೆಗಳ ಆಗರ ಈ ಭಾರತ. ಇಲ್ಲಿನ ಸಮುದಾಯಗಳ ನಡುವಿನ ಸಂಘರ್ಷವೂ ಸಹ ಈ ಅಸಮಾನ ನೆಲೆಗಳ ವೈರುಧ್ಯಗಳಿಂದಲೇ ಹುಟ್ಟಿಕೊಂಡವುಗಳಾಗಿವೆ. ಇಲ್ಲಿನ ಸಮಾಜದ ಬದುಕು ಲಿಂಗ-ಜಾತಿ-ವರ್ಗಗಳ ತಾರತಮ್ಯವನ್ನು ತನ್ನ ಒಡಲಿನಲ್ಲಿಯೇ ಇಟ್ಟುಕೊಂಡಿದೆ. ಇದರೊಂದಿಗೆ ಸಂಪತ್ತಿನ ಕ್ರೋಡೀಕರಣ ವ್ಯವಸ್ಥೆಗಳು ಹುಟ್ಟುಹಾಕಿರುವ ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಎಂಬ ವಾಸ್ತವಗಳು ಸಾಮಾಜಿಕ ಜೀವನದಲ್ಲಿ ಅನೇಕ ಬಿರುಕುಗಳಿಗೆ ಕಾರಣವಾಗಿವೆ. ಲಿಂಗ-ಜಾತಿ-ವರ್ಗದ ಅಧಿಕಾರಯುತ ತಾರತಮ್ಯಗಳ ಧೋರಣೆಯಿಂದಾಗಿ ಹುಟ್ಟಿಕೊಳ್ಳುವ ಸಮಸ್ಯೆಗಳು ಆಧುನಿಕವಾದ ಸೆಕ್ಯುಲರ್ ರಾಜ್ಯದ ಸಂದರ್ಭಗಳಲ್ಲೂ ಹೊಸ ಸ್ವರೂಪವನ್ನು ಪಡೆದುಕೊಂಡು ಅಸಮಾನ ನೆಲೆಗಳ ತೀವ್ರತೆಗೆ ದಾರಿ ಮಾಡಿಕೊಟ್ಟಿದೆ. ಯಜಮಾನಿಕೆ ಧೋರಣೆಯುಳ್ಳ ಅಸಮಾನತೆಯ ಬೀಜಗಳು ಸಮಾಜದ ಎಲ್ಲಾ ವಲಯಗಳಲ್ಲೂ ಮೊಳೆತು ಹೆಮ್ಮರವಾಗಿ ಬೆಳೆದು, ಬದುಕಿನ ಆಧಾರ ಸ್ತಂಭಗಳಾಗಿ, ಬದುಕನ್ನು ಜತನದಿಂದ ಕಾಯ್ದು ಮುನ್ನಡೆಸಬೇಕಾಗಿರುವ ಗಂಡು-ಹೆಣ್ಣುಗಳಲ್ಲಿ ಸಾಮರಸ್ಯವೇ ಸಾಧ್ಯವಿಲ್ಲವೇನೋ ಎಂಬಂತಹ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರುವುದು ಆತಂಕದ ಮತ್ತು ವಿಷಾದದ ಸಂಗತಿಯಾಗಿದೆ. ಈ ಕುರಿತು ಯೋಚಿಸುವಾಗ, ಇತಿಹಾಸದುದ್ದಕ್ಕೂ ಧಾರ್ಮಿಕ ಚೌಕಟ್ಟುಗಳು, ಸಾಮಾಜಿಕ, ಆರ್ಥಿಕ, ರಾಜಕೀಯ, ಭಾಷಿಕ ನೆಲೆಗಳು, ಸಾಂಸ್ಕೃತಿಕ ನಡಾವಳಿಗಳು ಹೆಣ್ಣನ್ನು ನಡೆಸಿಕೊಂಡಿರುವ ರೀತಿ ಯಾವುದೆಂಬುದು ಮುಖ್ಯವಾಗುತ್ತದೆ. ಸಾಮರಸ್ಯದ ದಾರಿಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಶೋಷಿತ ಸಮುದಾಯಗಳು ಹಾಗೂ ಅವುಗಳ ಪರವಾಗಿ ಮುಂಚೂಣಿಯಲ್ಲಿ ನಿಂತ ವ್ಯಕ್ತಿಗಳು, ಸಂಘಟನೆಗಳು ತಮ್ಮದೇ ಆದ ಹೋರಾಟ ಹಾಗೂ ಚಳುವಳಿಗಳ ಮೂಲಕ ಪ್ರತಿಭಟಿಸುತ್ತಾ ಬಂದಿರುವುದನ್ನು ಕಾಣಬಹುದು.

ಆಧುನಿಕ ಸಂದರ್ಭದಲ್ಲಿ ಅಂದರೆ, ಕೈಗಾರಿಕೀಕರಣದ ನಂತರ ಸೃಷ್ಟಿಯಾದ ಜಗತ್ತಿನ ಮೂರನೇ ವರ್ಗದ ದೇಶಗಳ ಸಾಮಾಜಿಕ ಬಿಕ್ಕಟ್ಟುಗಳು ಈ ಅಸಮಾನ ನೆಲೆಯನ್ನು ಮತ್ತೊಂದು ರೀತಿಯಲ್ಲಿ ಪೋಷಿಸುತ್ತಿವೆ. ಜಾಗತಿಕ ಅಧಿಕಾರಕ್ಕೆ ಪೈಪೋಟಿ ನಡೆಸುತ್ತಿರುವ ದೇಶಗಳು ವಸಾಹತೀಕರಣ, ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಮೂಲಕ ಏಕರೂಪಿ ಸಂಸ್ಕೃತಿಯ ಕಲ್ಪನೆಯನ್ನು ವ್ಯವಸ್ಥಿತವಾಗಿ ಹೇರುತ್ತಿರುವುದು ಅಸಮಾನ ನೆಲೆಗಳ ತೀವ್ರ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತಿದೆ. ಯಾಕೆಂದರೆ ಉಳ್ಳವರು, ಬಲಾಢ್ಯರು‌ ಮಾತ್ರ ಇದರೊಂದಿಗೆ ಭಾಗಿಯಾಗಲು ಅವಕಾಶವನ್ನು ಒದಗಿಸಿಕೊಡುತ್ತದೆ. ಹುಸಿ ಸ್ವದೇಶಿವಾದ ಮತ್ತು ಹುಸಿ ರಾಷ್ಟ್ರೀಯತೆಗಳ ಮೂಲಕ ಪ್ರಭುತ್ವವು ಈ ಪ್ರಕ್ರಿಯೆಯೊಂದಿಗೆ ಕೈ ಜೋಡಿಸುವುದರಿಂದ ‘ವಿಶ್ವ ಭ್ರಾತೃತ್ವ’ದ ಸ್ಲೋಗನ್ನುಗಳು ಮಾರುಕಟ್ಟೆ ಒಡೆಯರಿಂದ ಚಾಲನೆಗೆ ಬರುತ್ತವೆ. ಇಂಥದ್ದನ್ನು ಒಪ್ಪಿಕೊಳ್ಳುವ ಮತ್ತು ವಿರೋಧಿಸುವ ಸಮುದಾಯಗಳ ನಡುವಿನ ಸಂಘರ್ಷ ನೆನ್ನೆ ಮೊನ್ನೆಯದಲ್ಲ. ಯಾವುದೇ ಬಗೆಯ ಪ್ರಭುತ್ವ, ಒಡೆತನ ಹೇರುವ ಒತ್ತಡಗಳನ್ನು ಒಪ್ಪಿಕೊಳ್ಳದ ಮನಸ್ಸುಗಳು ಅದರ ವಿರುದ್ಧ ಧ್ವನಿ ಎತ್ತುತ್ತಿರುತ್ತವೆ. ಇದರಿಂದಾಗಿ ಕಾಲಕಾಲಕ್ಕೆ ಅನೇಕ ಬದಲಾವಣೆಗಳು, ಹೊಸ ಹೊಸ ಮೌಲ್ಯಗಳು ಹುಟ್ಟಿಕೊಳ್ಳುತ್ತವೆ. ಈ ಎಲ್ಲದರ ಹಿನ್ನೆಲೆ ಮಹಿಳಾ ಚಳವಳಿಗಳಿಗೂ  ಇದೆ ಎಂಬುದನ್ನು ಗಮನಿಸಬೇಕಾಗುತ್ತದೆ.

ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ಚಲನೆಯಲ್ಲಿ ಹುಟ್ಟಿದ  ಹೊಸ ಚಿಂತನೆಗಳು ಹಾಗೂ ಆದ ಬದಲಾವಣೆಗಳನ್ನು ಹೀಗೆ ಗುರುತಿಸಬಹುದು:

೧. ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿ, ಮುನ್ನಡೆಸುವ ಜವಾಬ್ದಾರಿ ಇಲ್ಲಿನ ಶೋಷಣೆಗೊಳಗಾಗಿದ್ದ ಹಿಂದುಳಿದ, ದಲಿತ, ಮಹಿಳೆಯರದ್ದೂ ಆಗಿರುವುದರಿಂದ ವ್ಯವಸ್ಥೆಯ ಯಜಮಾನಿಕೆಯ ಧೋರಣೆಗಳನ್ನು ಪ್ರಶ್ನಿಸುವಂತಾಯಿತು.

೨. ಅಸ್ತಿತ್ವವೇ ಇಲ್ಲದೆ ಬದುಕುತ್ತಿದ್ದ ಶೋಷಿತರು, ದಲಿತರು, ಹಿಂದುಳಿದವರು, ಮಹಿಳೆಯರ ಬದುಕಿಗೊಂದು ಘನತೆ, ಗೌರವ ಸಿಕ್ಕಿ, ಮುನ್ನೆಲೆಗೆ ಬರುವಂತಾಯಿತು.

೩. ಹೋರಾಟಗಳಿಂದಾಗಿ ದಲಿತ, ಮಹಿಳಾ ಪರ ಕಾನೂನುಗಳು ಸೃಷ್ಟಿಗೊಂಡು ನ್ಯಾಯಕ್ಕಾಗಿ ಹೋರಾಡಲು ಹಕ್ಕು ದೊರೆತಂತಾಯಿತು.

೪. ಅನೇಕ ಸೃಜನಶೀಲ ಪ್ರತಿಭೆಗಳು ಮುನ್ನೆಲೆಗೆ ಬರುವಂತಾಯಿತು.

೫. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ದಲಿತರು, ಶೋಷಿತರು, ಹಿಂದುಳಿದವರು, ಮಹಿಳೆಯರು ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸುವಂತಾಯಿತು.

೬. ಮಹಿಳೆಯರೂ  ಯಾರ ಹಂಗಿಲ್ಲದೆಯೂ ಅತ್ಯಂತ ಘನತೆಯಿಂದ ಧೈರ್ಯವಾಗಿ, ದಿಟ್ಟತನದಿಂದ ಬದುಕುವ ಆತ್ಮವಿಶ್ವಾಸ ಹೆಚ್ಚಾಗುವಂತಾಯಿತು.

ಇದೀಗ ನವಉದಾರೀಕರಣ, ನವಜಾಗತೀಕರಣ, ನವಬಂಡವಾಳಶಾಹಿ ವ್ಯವಸ್ಥೆಯ ಕಾಲಘಟ್ಟದಲ್ಲಿದ್ದೇವೆ. ಪಶ್ಚಿಮದ ಆರ್ಥಿಕ ವ್ಯವಸ್ಥೆ ಇಡೀ ಭಾರತವನ್ನು ಆಕ್ರಮಿಸಿಕೊಂಡಿದೆ. ಸ್ಥಳೀಯ ಅಂಗಡಿ ಮುಂಗಟ್ಟುಗಳು ಮಗುಚಿಕೊಳ್ಳುತ್ತಿವೆ. ಇದರ ಲಕ್ಷ್ಯವೇ ಇಲ್ಲದಂತೆ, ದೊಡ್ಡ ದೊಡ್ಡ ಮಾಲುಗಳಲ್ಲಿ, ‘ಶಾಪಿಂಗ್’ ಮಾಡುವುದು ಪ್ರತಿಷ್ಠೆಯ, ಹೆಮ್ಮೆಯ ವಿಷಯವಾಗಿ ಮಾರ್ಪಟ್ಟಿದೆ! ಇದಕ್ಕಿಂತಲೂ ಹೆಚ್ಚಾಗಿ ಪ್ರಕೃತಿಯಲ್ಲಿನ ಸಂಪತ್ತಿನ ಲೂಟಿಯಾಗುತ್ತಿದೆ. ಗಾಯದ ಮೇಲೆ ಬರೆ ಎಳೆದಂತೆ, ಪ್ರಾಕೃತಿಕ ವಿಕೋಪಗಳಿಂದ ಜನಸಾಮಾನ್ಯರ, ಬುಡಕಟ್ಟು ಜನಾಂಗದವರ ಬದುಕುಗಳೇ ಬುಡಮೇಲಾಗುತ್ತಿವೆ. ‘ವಸಾಹತೋತ್ತರ’ ಎನ್ನುವುದು ಇಂದು ಕೇವಲ ಬ್ರಿಟಿಷರ ಆಳ್ವಿಕೆಯ ಫಲವಾಗಿ ಮಾತ್ರ ಉಳಿದುಕೊಂಡಿರದೆ, ರೂಪಾಂತರಗೊಂಡಿರುವುದನ್ನು ಗಮನಿಸಬೇಕು. ಗಾಂಧೀಜಿಯ ಸ್ವದೇಶಿ ಚಳುವಳಿ, ಉಪ್ಪಿನ ಸತ್ಯಾಗ್ರಹ, ವಿದೇಶಿ ಬಟ್ಟೆಗಳನ್ನು ಸುಟ್ಟು, ಚರಕವನ್ನು ಸ್ವಾವಲಂಬಿ ಚಿಂತನೆಯಾಗಿ ಸ್ವೀಕರಿಸಿದ ಬಗೆ… ಇಂಥೆಲ್ಲಾ ಚಿಂತನೆಗಳು ತೂರಿ ಹೋಗಿ, ಇಂದು ಅಪಾರ ಜನಶಕ್ತಿಯನ್ನು ಹೊಂದಿರುವ ನಮ್ಮ ದೇಶ ಸ್ವಯಂ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳಲಾಗದೆ, ಪ್ರತಿಭಾ ಪಲಾಯನಕ್ಕೆ ತತ್ತರಿಸಿ,  ನಮ್ಮ ಮಕ್ಕಳ ಬದುಕು ಕಟ್ಟಲು ವಿದೇಶಿ ಕಂಪನಿಗಳ ಮೊರೆಹೊಕ್ಕಿದೆ. ಒಂದು ಕಾಲಕ್ಕೆ ಬಡತನ ಸ್ವಾಭಿಮಾನದ ಸಂಕೇತವಾಗಿ, ಅಲ್ಲೊಂದು  ಪ್ರಾಮಾಣಿಕತೆ ಇರುತ್ತಿತ್ತು. ಈಗ ‘ಹೇಗಾದರೂ’ ಹಣ ಮಾಡುವ ಹುಚ್ಚು,  ಕಣ್ಣು ಕುಕ್ಕುವ ಶ್ರೀಮಂತಿಕೆಗೆ ಮನಸೋತು ತೆಗೆದುಕೊಳ್ಳುವ ನಿರ್ಧಾರಗಳು ಅನೇಕರ  ಬದುಕುಗಳನ್ನೇ ಕಸಿದು ಬುಡಮೇಲು ಮಾಡುವಂತಾಗಿದೆ. ಇದಕ್ಕೆ ಹೊಸ ತಲೆಮಾರಿನ ನಾಗರೇಖಾ ಗಾಂವಕರ ಅವರ ‘ಶುಗರ್ ಬೇಬಿ’ ಕಥೆಯನ್ನು ಗಮನಿಸಬಹುದು.

ನಗರಗಳು ಬೆಳೆದಂತೆಲ್ಲ ಇಡೀ ಹಳ್ಳಿಗಳೇ ವೃದ್ಧಾಶ್ರಮದ ತಾಣಗಳಂತಾಗುತ್ತಿವೆ. ಇಂಥದ್ದನ್ನು ಸೃಷ್ಟಿಸುತ್ತಿರುವ  ಹುಂಬತನದ ಮನಸ್ಥಿತಿಗೆ ಪರಂಪರೆಯ ಜ್ಞಾನ ಮೂಲದ ಅಗತ್ಯ ಬೇಕೆನಿಸುತ್ತಿಲ್ಲ. ಅಂತಹ ವಿಚಾರಗಳನ್ನು ಅನುಷ್ಠಾನಕ್ಕೆ ತಂದುಕೊಳ್ಳುವ ವ್ಯವಧಾನವೂ ಇದ್ದಂತಿಲ್ಲ. ಚಳುವಳಿಗಳೆಲ್ಲ ಅರ್ಥ ಕಳೆದುಕೊಂಡು ಸತ್ತಂತಿರುವ ಈ ಹೊತ್ತಿನಲ್ಲಿ, ಪ್ರಭುತ್ವವನ್ನು ಪ್ರಶ್ನಿಸಬಾರದೆನ್ನುವ ವಾತಾವರಣದಲ್ಲಿ ಈ ಎಲ್ಲವನ್ನೂ ಕಾಣಿಸುವಂತಿರುವ ಎಂ.ಎಸ್. ಕೆ. ಪ್ರಭು ಅವರ ‘ಬಕ’ ನಾಟಕ ಈ ಹೊತ್ತಿನಲ್ಲಿ ನೆನಪಾಗುತ್ತಿದೆ.

ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತಿರುವ ಈ ಹೊತ್ತಿನಲ್ಲಿ ಹುಟ್ಟುವ ಸಾಹಿತ್ಯ ಕೃತಿಗಳಾದರೂ ಹೇಗಿರುತ್ತವೆ? ಎಂದು ಗಮನಿಸಿದಾಗ, ಸಾಹಿತ್ಯ ಕೃಷಿಯೇನೋ ವಿಫುಲವಾಗಿಯೇ ಇದೆ. ಚಳುವಳಿಯ ಗಟ್ಟಿ ದನಿ ಇಲ್ಲದಿದ್ದರೂ ಮೆಲುದನಿಯಲ್ಲಿ ಹೇಳಬೇಕಾದುದನ್ನು ಹೇಳುವ, ಪರೋಕ್ಷವಾಗಿ ಪ್ರಶ್ನಿಸುವ ಚಿಂತನೆಗಳಂತೂ ಇವೆ. ಕತೆ, ಕಾವ್ಯ, ನಾಟಕ, ಪ್ರಬಂಧ, ಕಾದಂಬರಿ, ನೀಳ್ಗತೆ, ಅನುಭವ ಕಥನ, ಪತ್ರಿಕೋದ್ಯಮ ಹೀಗೆ ಎಲ್ಲ ಪ್ರಕಾರಗಳಲ್ಲೂ ಯಾವ ಸಿದ್ಧ ಮಾದರಿಗಳನ್ನೂ ಇಟ್ಟುಕೊಳ್ಳದೆ, ಸಾಹಿತ್ಯ ರಚನೆಗೆ ತೊಡಗಿರುವ ಹೊಸ ಪೀಳಿಗೆಯ ಬರಹಗಳಿಗೆ ಸಾಮಾಜಿಕ ಜಾಲತಾಣಗಳು, ಅಂತರ್ಜಾಲ ಪತ್ರಿಕೆಗಳು ಅವಕಾಶ ಮಾಡಿಕೊಟ್ಟಿವೆ. ಇಲ್ಲಿ ವಿಶೇಷವಾಗಿ ಗಮನಿಸಬಹುದಾದುದೇನೆಂದರೆ, ಒಂದು ಕಾಲಕ್ಕೆ ಮಹಿಳಾ ಸಮಸ್ಯೆಯನ್ನು ಮಹಿಳೆಯರೇ ಹೇಳಿಕೊಳ್ಳಬೇಕಾಗಿತ್ತು. ಈಗ ಹೆಣ್ಣಿನ ಸಂಕಟಗಳನ್ನು, ಭಾವನೆಗಳನ್ನು ಪುರುಷರು, ಗಂಡಿನ ಭಾವನೆಗಳನ್ನು ಅಭಿವ್ಯಕ್ತಿಸುತ್ತಿರುವ ಮಹಿಳೆಯರೂ ಕಾಣಿಸುತ್ತಿರುವುದು ಆಶಾದಾಯಕ. ಹೆಣ್ಣಿನ ಸಂಕಟವನ್ನು ನಿರೂಪಕಿಯಾಗಿ ಅಭಿವ್ಯಕ್ತಿಸುವ ಅಜಿತ್ ಹೆಗಡೆ ಹರೀಶಿಯವರ ‘ಕನ್ನಡಿಗಂಟಿದ ಬಿಂದಿ’ ಕಥೆ ಗಮನ ಸೆಳೆಯುತ್ತದೆ. ಕೊರೋನಾದಂತಹ ಮಹಾರೋಗಕ್ಕೆ ತುತ್ತಾದ ಉತ್ಸಾಹಿ ಯುವಕನೊಬ್ಬನ ಒಳತೋಟಿಯನ್ನು, ಆತನಿಗೆ ರೋಗವಿಲ್ಲದಿದ್ದಾಗ, ರೋಗವಿದ್ದಾಗ ಸುತ್ತಲಿನ ಹತ್ತಿರದವರೆಂದುಕೊಂಡವರು ನಡೆದುಕೊಳ್ಳುವ ರೀತಿ ಹಾಗೂ ಮನುಷ್ಯ ಸಂಬಂಧಗಳನ್ನು ನಾಗರೇಖಾರ ‘ಜೀವನ್ಮರಣದ ಸಂತೆಯಲ್ಲೊಂದು ದಿನ’ ಕಥೆ ಅನಾವರಣಗೊಳಿಸುತ್ತದೆ.

‘ಆಧುನಿಕ’ ಆಲೋಚನೆಗಳಿಗೆ, ನಡೆನುಡಿಗಳಿಗೆ ಮನಸೋತದ್ದರಿಂದಾಗಿ ಪ್ರಾದೇಶಿಕ ಭಾಷೆ, ಆಹಾರಕ್ರಮ, ಆರೋಗ್ಯ, ಶಿಕ್ಷಣ ವ್ಯವಸ್ಥೆ, ವೈದ್ಯಪದ್ಧತಿ, ವ್ಯಾಪಾರ, ವ್ಯವಹಾರ, ಹಳ್ಳಿಗಳಲ್ಲಿನ ಅತಂತ್ರ ಬದುಕು, ನಗರಗಳ ಬೆಳವಣಿಗೆ, ಒಟ್ಟು ಬದುಕಿನ ಕ್ರಮಗಳ ಮೇಲಾಗಿರುವ ಪ್ರಭಾವಗಳು, ಪರಿಣಾಮಗಳನ್ನು ಕುರಿತ ಅನೇಕ ಸಾಹಿತ್ಯ ಕೃತಿಗಳೊಂದಿಗೆ, ತೇಜಸ್ವಿ, ನಾಗೇಶ್ ಹೆಗಡೆಯಂಥವರ ಪರಿಸರದ ಕಥೆಗಳು, ಲೇಖನಗಳೂ ಮುಖ್ಯವೆನಿಸುತ್ತವೆ. ಜೊತೆಗೆ ಆಧುನಿಕತೆಯ ಪ್ರಭಾವದ ಕೊಡುಗೆಯೇ ಆದ ಅಪನಂಬಿಕೆ, ಕುಟುಂಬದ ವಿಘಟನೆ, ಅದರೊಳಗಿನ ಸಮಸ್ಯೆಗಳು, ಸಂಕಟಗಳನ್ನೆಲ್ಲ ಅನೇಕ ಸಾಹಿತ್ಯ ಕೃತಿಗಳು ತೆರೆದಿಡುತ್ತವೆ.

ಇಂದು ತಂತ್ರಜ್ಞಾನ ಹಾಗೂ ಮನುಷ್ಯ ಸಂಬಂಧಗಳು ಮುಖಾಮುಖಿಯಾಗಿವೆ. ಎಷ್ಟೋ ವೇಳೆ ಬಳಿಯಲ್ಲಿರುವವರನ್ನು ಬದಿಗೆ ಸರಿಸಿ, ಗುರುತು ಪರಿಚಯವಿರದ ಮುಖಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಂದಿಸಲು ಹಾತೊರೆಯುವ ಮನೋಭಾವವೊಂದು ಸದ್ದಿಲ್ಲದೆಯೇ ಸೃಷ್ಟಿಗೊಂಡಿದೆ. ಇದೊಂದು ಇಂದಿನ ಬದುಕಿನಕ್ರಮದ ರೂಪಕವಾಗಿಯೂ ಕಾಣುತ್ತಿದೆ. ಯಾರು, ಯಾರಿಗಾಗಿ ಯಾಕಾಗಿ ತುಡಿಯುತ್ತಿದ್ದಾರೆ? ಎಂದು ಕೊಳ್ಳುವಾಗ, ಥಟ್ಟನೆ ನೆನಪಾಗುವುದು  ಆರ್. ವಿಜಯರಾಘವನ್ ಅವರ ಇತ್ತೀಚಿನ ಕಥೆ ‘ಜಮೀಲಾ’. ಅಕಸ್ಮಾತ್ತಾಗಿ ಫೇಸ್ಬುಕ್ನಲ್ಲಿ ನಿರೂಪಕನಿಗೆ ಸಿಕ್ಕ ಜಮೀಲಾ, ದೂರದ ದೇಶವೊಂದರ ನಿವಾಸಿ. ಈತನೊಂದಿಗೆ, ವೈಯಕ್ತಿಕ ಸಂಕಷ್ಟಗಳನ್ನು ಹಾಗೂ ಸಾಮಾಜಿಕವಾಗಿ ಬೇರೂರಿರುವ ಅಲ್ಲಿನ ಜನಾಂಗೀಯ ದ್ವೇಷ, ಮನುಷ್ಯ ಸಂಬಂಧಗಳ ತುಡಿತಗಳನ್ನು ಹಂಚಿಕೊಳ್ಳುತ್ತಿರುತ್ತಾಳೆ. ಅದಕ್ಕೆ ಸಹಜವಾಗಿಯೇ ಸ್ಪಂದಿಸುವ ನಿರೂಪಕನ ಹೃದಯವೂ ಮಿಡಿಯುತ್ತಿರುತ್ತದೆ. ಎಷ್ಟೇ ಆಧುನಿಕಗೊಂಡರೂ, ರಾಷ್ಟ್ರ-ಧರ್ಮ-ಭಾಷೆ ಮತ್ತು ಚರ್ಮದ ಬಣ್ಣಗಳ ಕಾರಣದಿಂದ ಕೆಲವರನ್ನು ಹೊರಗಿಟ್ಟು, ಮತ್ತೆ ಕೆಲವರನ್ನು ಒಳಸೇರಿಸಿಕೊಳ್ಳುವ ಪರಿಪಾಠ, ಸಾಮಾಜಿಕ ಧೋರಣೆ ಇನ್ನೂ ವಿಶ್ವಾದ್ಯಂತ ಜೀವಂತವಾಗಿರುವುದನ್ನು ಕಾಣಿಸುತ್ತದೆ. ಅತ್ಯಂತ ಸೂಕ್ಷ್ಮದ ವಿಚಾರಗಳನ್ನೂ ಕಥೆ, ನಿರ್ಭಾವುಕವಾಗಿ ಕಟ್ಟಿ ಕೊಡುವುದು ಇದರ ಹೆಚ್ಚುಗಾರಿಕೆ.  ನಿರೂಪಕ ಎಲ್ಲಿಯೂ ಭಾವಾವೇಶಕ್ಕೆ ಒಳಗಾಗದೆ, ’ಅನ್ಯ’ರ ಮೇಲೆ ನಡೆಯುವ ಕ್ರೌರ್ಯವನ್ನು ಸರಳವಾಗಿ ನಿರೂಪಿಸುತ್ತಾನೆ. ನಿರೂಪಕ ಮತ್ತು ಜಮೀಲಾ ಬೇರೆ ಬೇರೆ ದೇಶ, ಧರ್ಮಗಳಿಗೆ ಸೇರಿದವರಾದರೂ ಮಾನವೀಯತೆಗೆ, ಸಾಮಾನ್ಯ ಜನರ  ನೋವಿಗೆ ಮಿಡಿಯುವ ಜೀವಗಳು. ಇಲ್ಲಿ ತಂತ್ರಜ್ಞಾನ ಸದ್ದಿಲ್ಲದೆಯೇ, ಎರಡು ಭಿನ್ನ ದೇಶ, ಕಾಲಗಳನ್ನು ಬೆಸೆಯುವ, ಲಿಂಗಾತೀತವಾಗಿ ಯಾವ ನಿರೀಕ್ಷೆಗಳಿಲ್ಲದೆ ಬದುಕುವ, ಕೇವಲ ಎರಡು ಜೀವಗಳ  ಮನಸಿನಾಳದ ಒತ್ತಡಗಳನ್ನು ಪರಸ್ಪರ ತಲುಪಿಸುವ ವಾಹಕವಾಗಿರುವುದು, ಹಾಗೂ  ಅದೂ ಕಥೆಯೊಳಗಿನ ‘ನಿಶ್ಶಬ್ದ’ವಾಗಿ ಬಹುಮುಖ್ಯ ಪಾತ್ರಗಿರುವುದು ವಿಶೇಷವೆನಿಸುತ್ತದೆ; ಬಹುಶಃ ವಿಶ್ವ ಮಾನವ ಪ್ರಜ್ಞೆ ಎಂದರೆ ಇದೇ ಇರಬೇಕು ಎಂದೂ ಅನಿಸುತ್ತದೆ. ಕಥೆ ಸುಖಾಂತ್ಯ ಕಂಡರೂ ನಮ್ಮೊಳಗನ್ನು ಆಳವಾಗಿ ಕಲಕಿ, ನಾಗರಿಕರೆನಿಸಿಕೊಂಡ ನಾವು ನಿಜಕ್ಕೂ ಎತ್ತ ಸಾಗುತ್ತಿದ್ದೇವೆ ಎನಿಸುತ್ತದೆ.

ಮನುಷ್ಯ ಸಂಬಂಧಗಳ ಸೂಕ್ಷ್ಮಗಳನ್ನು ಕಾಣಿಸುವ ಹೊಸತಲೆಮಾರಿನ ಅನೇಕ ಬರಹಗಾರರು ಗಮನಸೆಳೆಯುತ್ತಾರೆ. ಪ್ರಾತಿನಿಧಿಕವಾಗಿ ಈ ತಕ್ಷಣಕ್ಕೆ ಕೆಲವರನ್ನು ಹೆಸರಿಸುವುದಾದರೆ, ಗೀತಾ ವಸಂತ, ನೂತನ ದೋ ಶೆಟ್ಟಿ, ನಾಗರೇಖಾ ಗಾಂವಕರ,  ಸಿಂಧೂ ರಾವ್, ಮಾಲಿನಿ ಗುರುಪ್ರಸನ್ನ, ಜ.ನಾ.ತೇಜಶ್ರೀ, ಪಿ. ಚಂದ್ರಿಕಾ, ಗೋವಿಂದ ಹೆಗಡೆ, ಡಾ. ಅಜಿತ್ ಹೆಗಡೆ ಹರೀಶಿ, ಡಾ. ವಿ.ಎ. ಲಕ್ಷ್ಮಣ್,  ಟಿ.ಜಿ. ಹರೀಶ, ಚಿದಾನಂದ ಸಾಲಿ, ರಾಜು ಹೆಗಡೆ, ನಂದಿನಿ ಹೆದ್ದುರ್ಗ ವಿದ್ಯಾರಶ್ಮಿ, ರೇಣುಕಾ ರಮಾನಂದ, ಸ್ಮಿತಾ ಅಮೃತರಾಜ್, ಶ್ರೀದೇವಿ ಕೆರೆಮನೆ, ಪೂರ್ಣಿಮಾ ಸುರೇಶ್, ಕುಸುಮಾ ಆಯರಹಳ್ಳಿ, ಶುಭಶ್ರೀ ಭಟ್, ಮಂಜುಳಾ ಹಿರೇಮಠ​… ಮುಂತಾದವರು ಸಾಹಿತ್ಯದ ವಿವಿಧ ಪ್ರಕಾರಗಳ ಬರವಣಿಗೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ, ಮೂಡಿಸುತ್ತಿದ್ದಾರೆ.

ಕಾಲ ಯಾವುದೇ ಆಗಿರಲಿ, ಹೊರಗಿನ ಲೋಕ ಎಷ್ಟೇ ಕ್ರೌರ್ಯದಿಂದ ಕೂಡಿದ್ದರೂ, ಜಡಗೊಂಡಿದ್ದರೂ, ಸಾಹಿತ್ಯ ಎಲ್ಲಾ ಕಾಲಕ್ಕೂ ಸಲ್ಲುವ ಮನುಷ್ಯರೊಳಗಿನ ಆರ್ದ್ರ ಪ್ರೀತಿಗೆ ಸದಾ ಕಾಲ ತುಡಿಯುತ್ತಿರುತ್ತದೆ. ಅಂಥದನ್ನು ಓದುಗರಲ್ಲೂ ಬಿತ್ತಿ, ಜೀವಂತಿಕೆಯನ್ನುಳಿಸುತ್ತದೆ ಎನ್ನುವುದೇ ಸಾಹಿತ್ಯದ ಹೆಗ್ಗಳಿಕೆ.

(ದಿನಾಂಕ:೨೮.೧೦.೨೦೨೧ ರಂದು ಶೇಷಾದ್ರಿಪುರಂ ಕಾಲೇಜಿನ ಅಂತರ್ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ ಲೇಖನ​)

*****

ಪರಾಮರ್ಶನ ಗ್ರಂಥಗಳು:

೧. ವಸಾಹತೋತ್ತರ ಚಿಂತನೆ – ಡಾ.  ಸಿ.ಎನ್. ರಾಮಚಂದ್ರನ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೦೨
೨. ಹೊಸಗನ್ನಡ ಸಾಹಿತ್ಯ ಸಮೀಕ್ಷೆ– ಜಿ.ಎಸ್. ಶಿವರುದ್ರಪ್ಪ, ಸಪ್ನ ಬುಕ್ ಹೌಸ್, ೨೦೧೬.
೩. ಹೊಸಗನ್ನಡ ಸಾಹಿತ್ಯ – ಎಲ್.ಎಸ್. ಶೇಷಗಿರಿರಾಯ, ಸಪ್ನ ಬುಕ್ ಹೌಸ್, ೨೦೧೬.
೪. ಶತಮಾನದ ಸಾಹಿತ್ಯ ವಿಮರ್ಶೆ– ಸಂ. ಡಾ. ಎಚ್.ಎಸ್. ರಾಘವೇಂದ್ರರಾವ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೦೧.
೫. ಸಾಹಿತ್ಯ ವಿಮರ್ಶೆ– ಡಾ.  ಸಿ.ಎನ್. ರಾಮಚಂದ್ರನ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೦೮
೬. ನನ್ನ ಜನಗಳು ಮತ್ತು ಇತರ ಕವಿತೆಗಳು- ಡಾ. ಸಿದ್ಧಲಿಂಗಯ್ಯ, ಕ್ರಾಂತಿಸಿರಿ  ಪ್ರಕಾಶನ, ೨೦೦೫.
೭. ಮಹಿಳಾ ಸಾಹಿತ್ಯ ಚರಿತ್ರೆ– ಎಚ್. ಎಸ್. ಶ್ರೀಮತಿ(ಸಂ), ಪ್ರಸಾರಾಂಗ,  ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೬