ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೆನಪುಗಳ ಬಿಚ್ಚಿಟ್ಟ ‘ಬಣ್ಣದ ಕೊಡೆ’

ಗೀತಾ ಡಿಸಿ

“ಸುಖದುಃಖದ ಪ್ರತಿಮೆಗಳು ನಮ್ಮ ಜೀವನದ ಸುತ್ತ ಮುತ್ತ ಸುತ್ತುತ್ತಲೇ ಇರುತ್ತವೆ. ಜೀವನದ ರಂಗಮಂಚದ ಮೇಲೆ ಬಯಲಾಟದ ಪಾತ್ರಗಳಂತೆ ನಾವು ಕುಣಿಯುತ್ತಲೇ ಇರುತ್ತೇವೆ. ನಮ್ಮ ಬಾಲ್ಯವೂ ಸದಾ ಸುಖದ ಗೂಡೇ ಆಗಿತ್ತೆಂದು ಹೇಳುವುದು ಹೇಗೆ? ಕಷ್ಟದ ಕಾರ್ಮೋಡಗಳು ಅದೆಷ್ಟು ಸಲ ತಿಳಿಬಾನನ್ನು ಕಾಡಿಲ್ಲ. ಮತ್ತೆ ಮರೆಯಾಗಿಲ್ಲ. ‘Every cloud has a silver lining’ ಎಂಬ ಆಂಗ್ಲ ಗಾದೆ ಎಷ್ಟು ಸತ್ಯ ಅಲ್ಲವೇ? ಬೇಂದ್ರೆಯವರು ಹೇಳುವಂತೆ ‘ಸುಖ ತಾನು ಬರುವಾಗ ಗುಳೇ ಎತ್ತಿ ಬರುವುದೋ’ ಅದು ಹಾಗೆ ಸುಖವೇ ಆಗಲಿ ದುಃಖವೇ ಆಗಲಿ ಅವುಗಳು ಸಾಲಾಗಿಯೇ ಕಾಡುವುದು ಹೆಚ್ಚು. ಬಾಲ್ಯದಲ್ಲಿ ಮೋಜು, ಮಸ್ತಿ, ಮುಂಗೋಪಗಳು ಇದ್ದರೂ ನೋವು ನಿರಾಶೆ ಸುಖದ ಕ್ಷಣಭಂಗುರತೆಯ ಮನನ ಮಾಡಿಕೊಟ್ಟ ವಿಧಿ ಬರೆ ಎಳೆದ ದಿನಗಳು ಇಲ್ಲದಿರಲಿಲ್ಲ. ಇವೆಲ್ಲವೂ ಇದ್ದಾಗಲೇ ಬದುಕು. ಬದುಕು ಬಯಲ ನಾಟಕ. ಅದು ಜೀವನದಿಂದ ಹೊರತಾದ ಯಾವುದನ್ನೂ ಪ್ರದರ್ಶಿಸುವುದಿಲ್ಲ.” –ಇದು ನಾಗರೇಖಾ ಗಾಂವಕರ ಅವರ ಇತ್ತೀಚಿನ ಪುಸ್ತಕವಾದ ‘ಬಣ್ಣದ ಕೊಡೆ’ಯಲ್ಲಿನ ಮಾತುಗಳು. ಅವರ  ಬಾಲ್ಯದ ಅನುಭವ ಲೋಕ ಇಲ್ಲಿದೆ. ವೈವಿಧ್ಯಮಯ ಅನುಭಗಳನ್ನು ಬಿಚ್ಚಿಡುತ್ತಲೇ  ಓದುಗರನ್ನೂ ಅವರವರ ಬಾಲ್ಯದ ‘ಬಣ್ಣಗಳ ಲೋಕ’ಕ್ಕೆ ತೆರೆದುಕೊಳ್ಳುವಂತೆ ಮಾಡುವುದು ಈ ಪುಸ್ತಕದ ವಿಶೇಷ.

ಸಾಮಾನ್ಯವಾಗಿ ಯಾರದ್ದೇ ಬಾಲ್ಯದ ನೆನಪುಗಳನ್ನು ಓದುವಾಗ, ನೋಡುವಾಗ ಅಥವಾ ಕೇಳುವಾಗ ನಮ್ಮ ಬಾಲ್ಯದ ನೆನಪುಗಳೂ ನಮ್ಮ ಮನಸ್ಸಿನಲ್ಲಿ  ಹಾದುಹೋಗುವುದು ಸಹಜ. ಎಷ್ಟೋ ವೇಳೆ ಬರೀ ಹಾದುಹೋಗುವುದಷ್ಟೇ ಅಲ್ಲ, ಆ ಭಾವದಂಗಳಕ್ಕೇ ನಾವು ಧುಮಿಕಿಬಿಟ್ಟಿರುತ್ತೇವೆ! ಬಾಲ್ಯವೆನ್ನುವ ಲೋಕವೇ ಹಾಗೇ. ಅಥವಾ ಎಲ್ಲರ ಬಾಲ್ಯದ ಅನುಭವಗಳ ಶಕ್ತಿಯೇ ಅಂಥದ್ದಿರಬೇಕು. ಕುಟುಂಬದಲ್ಲಿ ಎಷ್ಟೇ ತಾಪತ್ರಯಗಳಿದ್ದಾಗಲೂ ಅವುಗಳನ್ನು ಅಂಟಿಸಿಕೊಳ್ಳದ ಮಕ್ಕಳು, ತಮ್ಮ ಸುತ್ತಲಿನ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗ್ರಹಿಸುವುದು, ಅನುಕರಿಸುವುದು, ಅನುಕರಣೆ ಮಾಡುವುದು, ಅಥವಾ ಆ ವರ್ತನೆಗಳನ್ನು ಮೀರಿಕೊಳ್ಳುವುದು ನಡೆದೇ ಇರುತ್ತದೆ.

ಬಾಲ್ಯದ ಆಟೋಟಗಳು, ಪ್ರಭಾವಿಸುವ ಮನೆಯ ಹಿರಿಕಿರಿಯರು, ಶಾಲೆಯ ಕಲಿಕಾ ಅನುಭವಗಳು, ಮೇಷ್ಟ್ರುಗಳು, ಸ್ನೇಹಿತರು, ಅನೇಕ ವ್ಯಕ್ತಿಗಳು, ದೊಡ್ಡವರಿಂದಾಗಿಯೇ ಮಕ್ಕಳು ಬಾಲ್ಯದಲ್ಲಿ ವಿನಾಕಾರಣ ಅನುಭವಿಸಿರಬಹುದಾದ ಸಂಕಟಗಳು, ನೋವು, ನಲಿವುಗಳು, ಆಗಿನ ತುಂಟಾಟಗಳು, ಹುಡುಗು ಬುದ್ಧಿಯ ಅವಾಂತರಗಳು, ವಾರಗೆಯವರೊಂದಿಗಿನ ಹುಸಿ ಹೊಡೆದಾಟ-ಬಡಿದಾಟಗಳು, ಬಣ್ಣ ಬಣ್ಣದ, ಚಿತ್ರ ವಿಚಿತ್ರದ ಮುಗ್ಧ ಮನದ ಮಾಸದ ನೆನಪುಗಳು… ಒಂದೇ? ಎರಡೇ? ಬದಲಾದ ಕಾಲ-ದೇಶಕ್ಕನುಗುಣವಾಗಿ ಅದೆಷ್ಟು ಬಗೆಬಗೆಯ ಬಾಲ್ಯಗಳು ಜಗತ್ತಿನಾದ್ಯಂತ ಹರಡಿಕೊಂಡಿವೆ!

ಕೆಲವರ ಬಾಲ್ಯದ ಅನುಭವಗಳು ನಮ್ಮವೇ ಎನಿಸುವಷ್ಟು ಆಪ್ತವೆನಿಸಿಬಿಡುತ್ತವೆ! ಇನ್ನು ಕೆಲವರ ಬಾಲ್ಯದ ಅನುಭವಗಳು ‘ಅದೆಷ್ಟೊಂದು ಸಮೃದ್ಧ’ ಎನಿಸಿದರೆ, ಮತ್ತೆ ಕೆಲವರ ಬಾಲ್ಯದ ಕಡುಕಷ್ಟಗಳನ್ನು ಕಂಡಾಗ ಕಣ್ಣುಗಳು ತೇವಗೊಳ್ಳುತ್ತವೆ; ಕೆಲವಂತೂ ಹೀಗೂ ಉಂಟಾ? ಎನ್ನುವ ಆಶ್ಚರ್ಯವನ್ನೇ ನಮ್ಮ ಮುಂದೆ ಸುರಿಯುತ್ತವೆ. ನಿಜಕ್ಕೂ ನಮ್ಮ ಜೀವಿತಾವಧಿಯಲ್ಲಿ ನಮ್ಮೊಳಗೆ ಅಚ್ಚಳಿಯದೆ ಬದುಕಿನ ಹೆಜ್ಜೆ ಗುರುತುಗಳಾಗಿ, ಅಚ್ಚರಿಯಾಗಿ  ಉಳಿದುಬಿಡುವ ಬದುಕಿನ ಶಕ್ತಿಯೆಂದರೆ, ಈ ಬಾಲ್ಯದ ಅನುಭವಗಳು. ನಮಗೆ ಅರಿವಿಲ್ಲದೆಯೇ ನಮ್ಮ ವ್ಯಕ್ತಿತ್ವ ರೂಪುಗೊಳ್ಳಲು ನಮ್ಮ ನಮ್ಮ ಬದುಕಿಗೆ ಗಟ್ಟಿತಳಪಾಯವಾಗಿ ನಿಲ್ಲುವುದು ಆ ಅನುಭವಗಳೇ. ಬಾಲ್ಯದಲ್ಲಿ ನಾವು ಕಂಡುಂಡ ನೋವು-ನಲಿವುಗಳು ನಮ್ಮೊಳಗೆ ಅಚ್ಚೊತ್ತಿ, ನಾವು ಬೆಳೆದಂತೆಲ್ಲಾ ನಮ್ಮ ವ್ಯಕ್ತಿತ್ವವೂ ರೂಪುಗೊಳ್ಳಲು ಸಹಕರಿಸುತ್ತವೆ ಎನಿಸುತ್ತದೆ.

ಈ ಜಗತ್ತಿನಲ್ಲಿ ಹುಟ್ಟಿ ಬೆಳೆದು ಬದುಕು ಸಾಗಿಸಿದ ಪ್ರತಿಯೊಬ್ಬರೂ ತಮ್ಮ ತಮ್ಮ ನೆನಪಿನ ಗಣಿಯಲ್ಲಿರುವ ಬಾಲ್ಯದ ಅನುಭವಗಳನ್ನು ತಮ್ಮದೇ ರೀತಿಯಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಸಹಜವಾಗಿ ಹಂಚಿಕೊಳ್ಳುವುದು ಒಂದಾದರೆ(ಎಷ್ಟೋ ಜೀವಗಳಿಗೆ ಹೇಳಿಕೊಳ್ಳುವ ಅವಕಾಶವೇ ಒದಗಿ ಬರದಿರುವುದೂ ಇದೆ), ಇನ್ನೊಂದು, ನಮ್ಮ ಸಮಾಜದ ಆಲೋಚನಾಕ್ರಮದ ದಿಕ್ಕನ್ನೇ ಬದಲಿಸಿದ ಧಾರ್ಮಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ… ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರ ಅಂದರೆ, ಸಮಾಜ ಸುಧಾರಕರು, ಸಾಧಕರು, ಅಧ್ಯಾತ್ಮ ಚಿಂತಕರು, ರಾಜಮಹಾರಾಜರು, ರಾಜಕಾರಣಿಗಳು, ಅನೇಕ ಕವಿಗಳು, ಕಲಾವಿದರು, ಚಿಂತಕರು, ಬರಹಗಾರರು ಜೊತೆಗೆ ಸಮಾಜವನ್ನು ಹಾಳುಗೆಡವಿದವರನ್ನೂ ಒಳಗೊಂಡ ವೈವಿಧ್ಯಮಯ ಆಲೋಚನೆಗಳುಳ್ಳ ಯಾರೆಲ್ಲರ ಬಾಲ್ಯದ ಅನುಭವಗಳು  ಬಾಯಿಂದ ಬಾಯಿಗೆ ಕಥೆಗಳಾಗಿ, ದಂತಕಥೆಗಳಾಗಿ, ಪುರಾಣ ಪುಣ್ಯ ಕಥೆಗಳಾಗಿ, ಇತಿಹಾಸವಾಗಿ ನಮ್ಮೊಂದಿಗೆ ಹರಡಿಕೊಂಡಿವೆ. ಜೊತೆಗೆ, ಸೃಜನಶೀಲ ಬರಹಗಳು, ಪುಸ್ತಕಗಳು, ಸಿನೆಮಾಗಳು, ಸಾಕ್ಷ್ಯ ಚಿತ್ರಗಳು, ನಾಟಕಗಳು,  ಸಂದರ್ಶನಗಳು, ಇತ್ತೀಚಿನ ಕೆಲವು ಟಿ.ವಿ.ಶೋಗಳು(ಉದಾ:ವೀಕೆಂಡ್ ವಿತ್ ರಮೇಶ್) ಮುಂತಾದ ಹತ್ತು ಹಲವು ರೂಪಗಳಲ್ಲಿ ಅನೇಕರ ಬಾಲ್ಯದ ಅನುಭವಗಳು ಜನಮನವನ್ನು ತಲುಪಿ ಜಗತ್ತಿನಾದ್ಯಂತ ದೊಡ್ಡ ಚರಿತ್ರೆಯನ್ನೇ ಸೃಷ್ಟಿಸಿವೆ; ಸೃಷ್ಟಿಸುತ್ತಲೂ ಇವೆ.

ಚಿತ್ರ ಕೃಪೆ : https://joseartgallery.com/artwork/contemporary-art-still-life-nostalgia

ಇವೆಲ್ಲವೂ ನಮ್ಮ ನಡುವೆ ಅಥವಾ ನಮ್ಮೊಳಗೇ ಇರಬಹುದಾದ ಒಳಿತು ಕೆಡುಕುಗಳನ್ನು ತೂಗಿ ನೋಡಿಕೊಳ್ಳಲು ನಾನಾ ರೂಪದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಾ ನೆನಪುಗಳ ಕೈದೀವಿಗೆಯಾಗಿ ನಮ್ಮ ನಮ್ಮ ಬದುಕಿನುದ್ದಕ್ಕೂ ಜೊತೆಯಾಗಿರುತ್ತವೆ.

೨೦ನೇ ಶತಮಾನದ ಆರಂಭದ ಕಾಲ, ಪಾಶ್ಚಾತ್ಯರ ಪ್ರಭಾವದಿಂದಾಗಿ ಅನೇಕ ಬೆರಗು ಮತ್ತು ಬದಲಾವಣೆಗಳನ್ನು ಕಂಡ ಕಾಲ. ಕನ್ನಡ ಸಾಹಿತ್ಯ ಲೋಕವೂ ಇಂಥ ವಿದ್ಯಮಾನಗಳಿಗೆ ತನ್ನನ್ನು ಒಪ್ಪಿಸಿಕೊಂಡ ಕಾಲವದು. ಆ ಹೊತ್ತಿಗಾಗಲೇ ಪದ್ಯರೂಪ ರಚನೆಯಿಂದ ತನ್ನನ್ನು ಬಿಡಿಸಿಕೊಂಡು ಗದ್ಯರೂಪ ರಚನೆಗೆ ಹೊರಳಿಕೊಂಡು ಲೇಖನ, ಪ್ರಬಂಧ, ಸಣ್ಣಕತೆ, ಕವನ, ಕಾದಂಬರಿಗಳ ಜೊತೆಗೆ  ಜೀವನಚರಿತ್ರೆ, ಆತ್ಮಚರಿತ್ರೆಗಳೂ ಸಾಹಿತ್ಯ ಪ್ರಕಾರಗಳಾಗಿ ಅಧಿಕೃತವಾಗಿ ರೂಪು ಪಡೆದುಕೊಂಡವು.

ಕನ್ನಡ ಕಾವ್ಯಗಳಲ್ಲಿ ಕವಿಗಳು ತಮ್ಮ ಬಗ್ಗೆ ಅಲ್ಪಸ್ವಲ್ಪ ಹೇಳಿಕೊಂಡಿರುವವರಾದರೂ ಜೀವನ ಚರಿತ್ರೆ
/ಆತ್ಮಚರಿತ್ರೆಗಳಲ್ಲಿ ಕಾಣಿಸಿಕೊಂಡ ಬಾಲ್ಯದ ಅನುಭವಗಳು ಕನ್ನಡ ಭಾಷೆ ಹಾಗೂ ಸಾಹಿತ್ಯದ ಭಾವಕೋಶವನ್ನು ಹಿಗ್ಗಿಸಿವೆ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ, ವಿಶೇಷ ವ್ಯಕ್ತಿಗಳೆನಿಸಿದವರ ಹಾಗೂ ಸಮಾಜಕ್ಕೆ ವಿಶೇಷವಾಗಿ ಕೊಡುಗೆಗಳನ್ನಿತ್ತ ಹಿರಿಯರನ್ನು ಪರಿಚಯಿಸುವ, ಪರಿಚಯಿಸಿಕೊಳ್ಳುವ, ತಮ್ಮ ಬದುಕನ್ನು ತಾವೇ ಆತ್ಮಾವಲೋಕನ ಮಾಡಿಕೊಳ್ಳುವ, ತಾವು ನಡೆದು ಬಂದ ಹಾದಿಯನ್ನು ನೆಪಿಸಿಕೊಳ್ಳುವ ಪರಿಪಾಠ ಜೀವನ ಚರಿತ್ರೆ, ಆತ್ಮಚರಿತ್ರೆ/ಆತ್ಮಕಥೆಯಾಗಿ, ಅದರ ಭಾಗವಾಗಿ ಬಾಲ್ಯದ ಅನುಭವಗಳು ಕಾಣಿಸಿಕೊಂಡವು. ಸಾಮಾನ್ಯರಲ್ಲಿ ಸಾಮಾನ್ಯವಾಗಿ ಹುಟ್ಟಿದ ಮಗುವೊಂದು  ಸಮಾಜದಲ್ಲಿ ಉನ್ನತ/ವಿಶೇಷ ವ್ಯಕ್ತಿಯಾಗಿ,  ರೂಪುಗೊಂಡಾಗ ತನ್ನ ಬದುಕಿನ ಆರಂಭದ ಅನುಭವಗಳು ಹೇಗಿತ್ತೆನ್ನುವುದು ಸ್ವತಃ ತನಗೋ ಹಾಗೂ ಕುತೂಹಲಗೊಂಡ ಸಮಾಜಕ್ಕೊ ಬೇಕಾಗಿ ಚಾರಿತ್ರಿಕ ದಾಖಲೆಗಳಾಗಿ ನಮ್ಮೊಂದಿಗೆ ಉಳಿದು ಬೆಳೆಯುತ್ತಾ ಬಂದಿವೆ. ಉದ್ದೇಶ ಏನೇ ಆಗಿರಲಿ, ಅವು ಹೊಸ ಪೀಳಿಗೆಗೆ ಸ್ಫೂರ್ತಿಯಾಗಿ, ಪ್ರೇರಣೆಯಾಗಿ ಉಳಿದಿರುವುದಂತೂ ಸತ್ಯ.  ಇಂತಹ ನಾವು ಕೇಳಿದ, ಓದಿದ, ನೋಡಿದ ಅನೇಕರ  ಬಾಲ್ಯದ ಅನುಭವಗಳು ನಮ್ಮೊಳಗೆ ಅಚ್ಚಳಿಯದೆ ಉಳಿದುಬಿಡುತ್ತವೆ. ಗಾಂಧೀಜಿಯವರ ‘ನನ್ನ ಸತ್ಯಾನ್ವೇಷಣೆ’, ಕುವೆಂಪು ಅವರ ‘ನೆನಪಿನ ದೋಣಿಯಲ್ಲಿ’, ಶಿವರಾಮ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಭಾವ’, ಅ.ನ.ಕೃ. ಅವರ ‘ಬರಹಗಾರನ ಬದುಕು’, ಎ.ಎನ್.ಮೂರ್ತಿರಾವ್ ಅವರ ‘ಸಂಜೆಗಣ್ಣಿನ ಹಿನ್ನೋಟ’, ಎಸ್.ಎಲ್. ಭೈರಪ್ಪನವರ ‘ಭಿತ್ತಿ’, ಬೀಚಿ ಅವರ ‘ಭಯಾಗ್ರಫಿ’, ಪಿ.ಲಂಕೇಶರ ‘ಹುಳಿ ಮಾವಿನ ಮರ’, ಎಚ್. ನರಸಿಂಹಯ್ಯನವರ ‘ಹೋರಾಟದ ಬದುಕು’, ಡಾ. ನಾಗಲೋಟಿಮಠರ ‘ಬಿಚ್ಚಿದ ಜೋಳಿಗೆ’, ಯು.ಆರ್. ಅನಂತಮೂರ್ತಿಯವರ ‘ಸುರಗಿ’, ಗುಲಾಮ ಪದ್ಧತಿಯ ವಿರುದ್ಧ ಸೆಣೆಸಿದ ಕಪ್ಪು ಮಹಿಳೆಯರ ಆತ್ಮಕಥೆಗಳನ್ನೊಳಗೊಂಡ ‘ಕಪ್ಪುಹಕ್ಕಿಯ ಬೆಳಕಿನ ಹಾಡು’- ಅನುವಾದ: ಎಂ.ಆರ್. ಕಮಲ, ಸಿದ್ದಲಿಂಗಯ್ಯನವರ ‘ಊರು ಕೇರಿ’, ಗಿರೀಶ್ ಕಾರ್ನಾಡರ ‘ಆಡಾಡತಾ ಆಯುಷ್ಯ’,  ಕುಂ.ವೀರಭದ್ರಪ್ಪನವರ ‘ಗಾಂಧಿ ಕ್ಲಾಸು’, ಸುಬ್ರಾಯ ಚೊಕ್ಕಾಡಿಯವರ ‘ಕಾಲದೊಂದೊಂದು ಹನಿ’, ಕರ್ನಾಟಕ ಲೇಖಕಿಯರ ಸಂಘ ಪ್ರಕಟಿಸಿದ ಅನೇಕ ಮಹಿಳೆಯರ ಅನುಭವ ಕಥನವುಳ್ಳ ‘ಲೋಕ ಲೇಖ’ ಗಳು, ಪ್ರತಿಭಾ ನಂದಕುಮಾರ್ ಅವರ ‘ಅನುದಿನದ ಅಂತರಗಂಗೆ’, ವಿಜಯಮ್ಮ ಅವರ ‘ಕುದಿ ಎಸರು’, ಬಿ. ಜಯಶ್ರೀ ಅವರ ‘ಕಣ್ಣಾಮುಚ್ಚೆ.. ಕಾಡೇಗೂಡೇ..’, ಸರಸ್ವತಿ ಶ್ರೀನಿವಾಸರಾಜು ಅವರ ‘, ‘ಸೋಜಿಗದ ಬಳ್ಳಿ’ ಇವುಗಳೊಂದಿಗೆ, ಸೋಮಾಲಿಯಾ ದೇಶದ, ಅಲೆಮಾರಿ ಬುಡಕಟ್ಟಿನ, ಅನಕ್ಷರಸ್ಥ ಹೆಣ್ಣುಮಗಳು, ಜಾಗತಿಕ ಮಟ್ಟದಲ್ಲಿ ರೂಪದರ್ಶಿಯಾಗಿ ಪ್ರಸಿದ್ಧಳಾದ ವಾರಿಸ್ ಡೇವಿಸಳ ‘ಡೆಸೆರ್ಟ್ ಫ್ಲವರ್'(ಕನ್ನಡಕ್ಕೆ ‘ಮರುಭೂಮಿಯ ಹೂ’  ಎನ್ನುವ ಹೆಸರಿನಲ್ಲಿ ಡಾ. ಎನ್. ಜಗದೀಶ್ ಕೊಪ್ಪ ಅನುವಾದಿಸಿದ್ದಾರೆ.)….ಮುಂತಾದವು ಈ ಕ್ಷಣಕ್ಕೆ  ನೆನಪಾಗುತ್ತಿರುವ ಕೆಲವು ಪುಸ್ತಕಗಳು.

ಬಾಲ್ಯದ ಅನುಭವಗಳನ್ನು ಹಂಚಿಕೊಳ್ಳಲು ಈಗ ಅತಿದೊಡ್ಡ ಸಾಧನೆಯ  ಹಿರಿತನವೇ ಆಗಿರಬೇಕೆಂದೇನಿಲ್ಲ. ಅಂಕಣಗಳ ರೂಪದಲ್ಲಿ, ಫೇಸ್ಬುಕ್ ಪುಟಗಳಲ್ಲಿ, ಬ್ಲಾಗುಗಳಲ್ಲಿ, ಅನೇಕ ಪತ್ರಿಕೆಗಳಲ್ಲಿ ಕಿರಿಯ ಬರಹಗಾರರ ಮೂಲಕವೂ ಬೆಳಕು ಕಾಣುತ್ತಿವೆ. ಪತ್ರಿಕೆಗಳೂ ಯುವ ಬರಹಗಾರರಿಗೆ ಬರೆಯಲು ಅನುವು ಮಾಡಿಕೊಡುತ್ತಿವೆ.

ಇಲ್ಲಿಯೇ ಕೆಲವು ಮಾತುಗಳನ್ನು ಹೇಳಿಬಿಡಬೇಕು.ಇತ್ತೀಚೆಗೆ ಬರೆಯುತ್ತಿರುವವರಲ್ಲಿ ಕಥೆ, ಅನುಭವ ಕಥನ, ಲೇಖನ, ಪ್ರಬಂಧ, ಅಂಕಣ ಬರಹಗಳ ಮೂಲಲಕ್ಷಣಗಳ ಗಡಿಗೆರೆಗಳು ತೆಳುವಾಗುತ್ತಿದೆಯೇ? ಅಥವಾ ಇಲ್ಲವಾಗುತ್ತಿದೆಯೇ? ಬರೆದವರು ಇದು ಇಂತಹ ಪ್ರಕಾರವೆಂದು ಸೂಚಿಸಿದರೆ ಮಾತ್ರ ಅಂತಹ ಪ್ರಕಾರವೆಂದು ಓದಿಕೊಳ್ಳುವಂತಾಗುತ್ತಿದೆಯೇ? ಎನಿಸುತ್ತಿರುವುದು ಹೌದು. ಯಾಕೆಂದರೆ, ಅಂಕಣ ಬರಹಗಳನ್ನು ಬಿಡಿಬಿಡಿ ಲೇಖನಗಳಾಗಿ, ಕಥೆಗಳಾಗಿ, ಪ್ರಬಂಧಗಳಾಗಿ, ಅನುಭವ ಕಥನಗಳಾಗಿ ಓದಿಕೊಳ್ಳಬಹುದಾಗಿದೆ. (‘ಈ ಕಥೆ ಹೇಗಿದೆ ಓದಿ ತಿಳಿಸಿ, ಎಂದ ಕೆಲವರು ಆ ‘ಕಥೆ’ಯನ್ನು  ಪ್ರಬಂಧ ಸ್ಪರ್ಧೆಗೆ ಕಳಿಸಿ, ಬಹುಮಾನ ಪಡೆದ ಉದಾಹರಣೆಗಳೂ ಇವೆ!) ಬಹುಶಃ ಇಂಥವುಗಳನ್ನು ನಾನ್ ಫಿಕ್ಷನ್ ಗುಂಪಿಗೆ ಸೇರಿಸಬಹುದೇನೋ..? ಇರಲಿ…

ಇಷ್ಟೆಲ್ಲಾ ಹೇಳಲು ಕಾರಣ, ಈ ಮೊದಲು ಉಲ್ಲೇಖಿಸಿದ ನಾನು ಇತ್ತೀಚೆಗೆ ಓದಿದ ನಾಗರೇಖಾ ಗಾಂವಕರ ಅವರ ಬಾಲ್ಯದ ಅನುಭವಗಳನ್ನು ದಾಖಲಿಸಿರುವ ‘ಬಣ್ಣದ ಕೊಡೆ’ ಪುಸ್ತಕ.

ಚಿತ್ರ ಕೃಪೆ : ಡಾ. ವಿಶ್ವನಾಥ ಬದಿಕಾನ

ಬದುಕಿನ ಬಿಸಿಲು, ಮಳೆ, ಗಾಳಿಗಳನ್ನೆದುರಿಸಲು, ನಮ್ಮನ್ನು ರಕ್ಷಿಸಿಕೊಳ್ಳಲು ಬಣ್ಣದ ಕನಸುಗಳನ್ನು ಕಾಣಲು, ವ್ಯಕ್ತಿತ್ವ ರೂಪಿಸಿಕೊಳ್ಳಲು ಎಲ್ಲರ ಬಾಲ್ಯದಲ್ಲೂ ಅವರವರದ್ದೇ ಆದ ‘ಬಣ್ಣದ ಕೊಡೆಗಳು’ ಇದ್ದೇ ಇರುತ್ತವೆ. ನಾಗರೇಖಾ ಅವರು ತಮ್ಮ ಬಾಲ್ಯದ ಸಂತೋಷ, ಸಂಭ್ರಮ, ನೋವು, ನಲಿವು, ಕಿತ್ತಾಟ, ಕಷ್ಟ, ನಷ್ಟ, ಸುಖ, ದುಃಖ, ದೌರ್ಬಲ್ಯ, ಕುತೂಹಲ, ಬೆರಗು ಅದೆಷ್ಟೊಂದು ಬಣ್ಣದ ಅನುಭವಗಳನ್ನು ಮುಚ್ಚು ಮರೆಯಿಲ್ಲದೆಯೇ ನಮ್ಮ ಮುಂದೆ ಬಿಚ್ಚಿಡುವ ಪ್ರಾಮಾಣಿಕ ಪ್ರಯತ್ನವನ್ನು ಉದ್ವೇಗವಿಲ್ಲದೇ, ಅತಿಭಾವುಕತೆಯಿಲ್ಲದೇ ಸಮಚಿತ್ತದಿಂದ ಓದುಗರ ಮುಂದಿಡುತ್ತಾರೆ. “ಬದುಕಿನ ಬಂಡಿಯ ದಾರಿಯುದ್ದಕ್ಕೂ ಸಿಗುವ ಹಲವಾರು ಪಾತ್ರಗಳು, ಅವುಗಳ ನೆನಪು ನಾವು ನೆನೆಸಿಕೊಂಡಷ್ಟು ಹೊಸ ಸಂಗತಿಗಳಾಗುತ್ತ ಹೊಸ ವಿಚಾರಗಳಿಗೆ ಪ್ರಚೋದನೆಯಾಗುತ್ತ, ಧೀಶಕ್ತಿಗೆ ಬಲ ತುಂಬುತ್ತಾ ಜೀವನ ಎದುರಿಸುವ ಛಲ ತುಂಬುತ್ತವೆ. ಎಲ್ಲ ಪಾತ್ರಗಳಿಗೂ ನಾವು ಋಣಿಗಳಾಗಲೇ ಬೇಕು.” ಎನ್ನುವಲ್ಲಿ  ನಾಗರೇಖಾ ಅವರ ವ್ಯಕ್ತಿತ್ವ ಕಾಣಿಸುತ್ತದೆ.

ಒಂದು ಕಾಲಕ್ಕೆ ಹಳ್ಳಿಗಳಲ್ಲಿ ಮನೆ, ಹೊಲ-ಗದ್ದೆಗಳ  ಕೆಲಸಗಳಲ್ಲಿ ತೊಡಗಿಸಿಕೊಂಡೇ  ಓದುವ ಅನಿವಾರ್ಯತೆಯಿತ್ತು.  ಕಷ್ಟ ಸುಖಗಳ  ನಡುವೆಯೇ ಬದುಕನ್ನು ಕಟ್ಟಿಕೊಳ್ಳುವುದರಲ್ಲಿ ಹೇಳಲಾಗದ ಸಂಭ್ರಮವಿತ್ತೆಂಬುದನ್ನು ಹಾಗೂ ಈಗಿನ ಮಕ್ಕಳು ತಮ್ಮ ಹೆಚ್ಚಿನ ಕಾಲವನ್ನು ಓದಿಗಾಗಿಯೇ ಮೀಸಲಿರಿಸಿದರೂ ಸಮೃದ್ಧ ಬಾಲ್ಯದಿಂದ ವಂಚಿತರಾಗುತ್ತಿರುವುದಲ್ಲದೆ, ಬದುಕು ಕಟ್ಟಿಕೊಳ್ಳಲು ಹೆಣಗಬೇಕಾಗಿರುವ ಸ್ಥಿತಿಯೊದಗಿರುವುದನ್ನು ವಿಷಾದದೊಂದಿಗೆ, ಮಕ್ಕಳಿಗೆ ಅಂತಹ ಸಮೃದ್ಧತೆಯನ್ನು ಕಟ್ಟಿಕೊಡದಿದ್ದುದು ದೊಡ್ಡವರಾದ ನಾವೇ ಅಲ್ಲವೇ? ಹೀಗೇಕೆ? ಎನ್ನುವ ಪ್ರಶ್ನೆ ನಮ್ಮೊಳಗೆ ಕಾಡುವಂತೆ ಮಾಡುತ್ತದಲ್ಲದೇ, ಬದಲಾದ ಕಾಲಮಾನದಲ್ಲಿ ಯಾವುದು ಸರಿ? ಯಾವುದು ತಪ್ಪೆಂಬ ಚಿಂತನೆಗೂ ಹಚ್ಚುತ್ತದೆ.

ಮುಗ್ಧವಾದ ಮಗುವಿನ ಮನಸ್ಸು ವಿನಾಕಾರಣ ಎಷ್ಟೋ ವೇಳೆ ತನ್ನದಲ್ಲದ ತಪ್ಪಿಗೆ ನೋಯುತ್ತಿರುತ್ತದೆ. ಅವುಗಳಲ್ಲಿ ನಾವು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಬಣ್ಣ ಕೂಡ ಒಂದು. ಮಕ್ಕಳು ನಲುಗಲು ಸ್ವಲ್ಪ ಕಪ್ಪಾಗಿದ್ದರೆ ಸಾಕು! ಈ ಕಪ್ಪುಬಣ್ಣಕ್ಕೆ ಅದಾರು, ಯಾವಾಗ ಶಾಪವಿಟ್ಟರೋ!  ಅನೇಕ ಬಣ್ಣಗಳಲ್ಲಿ ಅದೂ  ಒಂದು ಎಂಬ ಅರಿವಿದ್ದರೂ ಅದರ ಬಗ್ಗೆ ಏನೋ ಅಸಡ್ಡೆ. ಕಪ್ಪಾಗಿರುವ ರಾಮ, ಕೃಷ್ಣ, ಶಿವರನ್ನು ದೈವೀಕರಿಸಿ ಒಪ್ಪಿಕೊಂಡಿದ್ದರೂ (ಈ ಕುರಿತು ರಾಮಮನೋಹರ ಲೋಹಿಯಾರ ಲೇಖನವನ್ನು ಗಮನಿಸಬಹುದು.),  ನಮ್ಮ ಜನಪದರು ‘ಆಕಳು ಕಪ್ಪಾದರೆ ಹಾಲು ಕಪ್ಪೇ?’ ಎಂದೆಲ್ಲ ಹಾಡಿದ್ದರೂ ಈ ಕಪ್ಪು ಬಣ್ಣದ ಬಗ್ಗೆ ಇಂದಿಗೂ ಒಂದು ರೀತಿಯ ಅವಜ್ಞೆಯೇ! ಈಗಂತೂ ಕಪ್ಪಗಿರುವವರನ್ನೆಲ್ಲಾ ಬೆಳ್ಳಗಾಗಿಸಲು ಕಾಸ್ಮೆಟಿಕ್ ಜಗತ್ತೇ ಟೊಂಕ ಕಟ್ಟಿ ನಿಂತಂತಿದೆ! ಅಂತಹ ಭ್ರಮೆಗೆ ಸಿಕ್ಕವರೂ ಸಾಕಷ್ಟು ಜನರಿದ್ದಾರೆ. ದೂರದ ಕಪ್ಪು ಜನಾಂಗದ ಕಡು ಕಷ್ಟಗಳು ಒಂದು ರೀತಿಯದಾದರೆ, ನಮ್ಮಲ್ಲೂ  ಕಪ್ಪೆಂದು ಜರಿಯುವ, ಹಂಗಿಸುವ, ಆಡಿಕೊಳ್ಳುವ, ರೇಗಿಸುವವರಿಗೇನೂ ಕಡಿಮೆ ಇಲ್ಲ. ಇಂಥ ಭಾವನೆಗಳನ್ನು ಕಳೆಯಬೇಕಾದ ಮನೆಯವರೇ ಅದರಲ್ಲೂ ಹಿರಿಯರು/ಹೆತ್ತವರೇ ಮನೆಗೂಸನ್ನು ಬಣ್ಣದ ಕಾರಣಕ್ಕೆ ತಮಾಷೆಗೆಂದೇ ರೇಗಿಸಿದರೂ ಪುಟ್ಟ ಹಾಗೂ ಸೂಕ್ಷ್ಮ ಮನಸ್ಸುಗಳು ತಡೆದುಕೊಳ್ಳುತ್ತವಾದರೂ ಹೇಗೆ? ಜೊತೆ ಮಕ್ಕಳೊಂದಿಗೆ ಹೋಲಿಸಿಕೊಂಡು  ಬೇಗ ಘಾಸಿಗೊಳ್ಳುತ್ತವೆ, ಸಂಕಟಪಡುತ್ತವೆ. ಬದುಕಿನ ಸರಿತಪ್ಪುಗಳನ್ನು ನಿರ್ಧರಿಸುವ ಪ್ರಬುದ್ಧತೆ, ಸಮಚಿತ್ತತೆ ಆ ಮಗುವಿಗೆ ಬರುವವರೆಗೂ ಘಾಸಿಗೊಳ್ಳುವುದು ತಪ್ಪುವುದಿಲ್ಲ.  ಚಿಕ್ಕ ವಯಸ್ಸಿನಲ್ಲೇ ತಮಾಷೆಗೆಂದೋ, ಬೇಕೆಂದೋ ಸುತ್ತಲಿನವರು ಆಡಿಕೊಳ್ಳುವ ಮಾತುಗಳು ಮುಗ್ಧ ಮನಸ್ಸಿನ ಮೇಲೆ ಮಾಯದ ಗಾಯದ ಗುರುತುಗಳಂತೆ ಉಳಿದುಬಿಡುತ್ತವೆ! ಇಂಥದ್ದು ನಾಗರೇಖಾರ ಬದುಕಿನಲ್ಲೂ ಆಗಿಹೋಗಿದ್ದನ್ನು ದಾಖಲಿಸುತ್ತಾರೆ.

“ಸಾವು ನೋವು ಬದುಕಿನ ಒಂದು ಭಾಗ ಎಂಬ ಅರಿವು ಮೂಡುತ್ತಾ ಬಂದರೂ ಆ ಸಂದರ್ಭದಲ್ಲಿ ಆ ಕ್ಷಣಕ್ಕೆ ಆದು ಭೀಕರ ನೋವು ಕೊಡುತ್ತಲೇ ಇರುತ್ತದೆ. ಕಳೆದುಕೊಂಡಿದ್ದರ ಬಗ್ಗೆ ಆಗಾಗ ನೆನಪು ಮರುಕಳಿಸಿ ಕಣ್ಣೀರ ಹನಿಯೊಂದು ಸ್ಥಿತಪ್ರಜ್ಞತೆಯ ನಡುವೆಯೂ ನುಸುಳುತ್ತದೆ. ‘ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ’ ಎಂಬ ನುಡಿಯಂತೆ ಬದುಕು ಬರೆದಷ್ಟೇ ದಿನ. ಅಲ್ಲಿಯೇ ಜೀವನದ ಸುಗ್ಗಿಯೂ, ಕೊನೆಯಾತ್ರೆಯ ತಾಲೀಮು ನಡೆಯುತ್ತದೆ.” ಎನ್ನುವ ಎಚ್ಚರ ಲೇಖಕಿಗಿರುವುದರಿಂದಲೇ, ಕಡುಕಷ್ಟವನ್ನೂ ಸಮಚಿತ್ತದಿಂದ ಸ್ವೀಕರಿಸಲು ಸಾಧ್ಯವಾಗಿರಬೇಕೆನಿಸುತ್ತದೆ. ಅಪ್ಪ, ಅಮ್ಮ, ಅಣ್ಣಂದಿರು, ಅಕ್ಕಂದಿರೊಡನೆ ಒಡನಾಡುವ ಸಂತೋಷ, ಕೀಟಲೆ, ತಮಾಷೆಗಳೊಡನೆ, ಬದುಕಿನ ಬವಣೆ,  ಜಂಜಾಟಗಳೊಂದಿಗೆ ದುತ್ತನೆರಗುವ ಅಪ್ಪನ ಸಾವು, ಅಮ್ಮನ ಗಟ್ಟಿತನ, ಅನಿರೀಕ್ಷಿತವಾಗಿ ಎದುರಿಸಬೇಕಾಗಿಬರುವ ಬದುಕಿನ ಜವಾಬ್ದಾರಿಗಳು, ಇವುಗಳ ಜೊತೆ ಜೊತೆಗೇ ಸಾಮಾನ್ಯವಾಗಿ ಹಳ್ಳಿ ಮಕ್ಕಳಿಗೆ ಇಂಗ್ಲೀಷೆಂದರೆ ಇರುವ ಭಯದೊಂದಿಗೇ ಓದಿನ ಕಡೆಗೂ ಗಮನಹರಿಸಿ, ಇಂಗ್ಲಿಷ್ ಅಧ್ಯಾಪಕಿಯಾಗುವುದೆಂದರೆ, ಅಷ್ಟು ಸಲೀಸೇನಲ್ಲ.

ಒಟ್ಟು ಇಪ್ಪತ್ಮೂರು ಭಾಗಗಳಲ್ಲಿ ಬಿಚ್ಚಿಕೊಂಡಿರುವ ‘ಬಣ್ಣದ ಕೊಡೆ’ಯಲ್ಲಿ ಇಂತಹ ಅನೇಕ ಅನುಭವಗಳಿವೆ. ಪ್ರತಿ ಭಾಗದ ಕೊನೆಗೂ ಆಯಾ ಅನುಭವಗಳ ಮೂಲಕ ಬದುಕಿನ ದೊಡ್ಡ ತತ್ವವನ್ನೇ ಸಾರುವ ಚಿಂತನೆಗಳೊಂದಿಗೆ, ಪ್ರಾದೇಶಿಕವಾಗಿ ಬಳಸುವ ಕೆಲವು ಶಬ್ದಗಳಿಗೆ ಅಡಿಟಿಪ್ಪಣಿಯಲ್ಲಿ ಅರ್ಥ ಕೊಟ್ಟಿರುವುದು ಇಲ್ಲಿನ ವಿಶೇಷ.

“ಬಾಲ್ಯ ಎಷ್ಟೊಂದು ಸುಂದರವಿತ್ತು. ಸಂತಸದ ಗೂಡಾಗಿತ್ತು. ಕನಸಿನ ಮಹಲಾಗಿತ್ತು. ಯಾವ ತೆಗಳಿಕೆ ಹೊಗಳಿಕೆ ಕೊಂಕು, ಕಟಕಿ… ಉಹುಂ.. ಇಲ್ಲ. ಯಾವುದೂ ದೀರ್ಘವಾಗಿ ಕಾಡಿದ್ದಿಲ್ಲ. ತಂದೆ ತಾಯಿ ಒಡಹುಟ್ಟಿದವರ ಕೂಡಾ ಬೆಸೆದ ಆ ಬಾಂಧವ್ಯಗಳೆಲ್ಲ ಈಗ ಕಳಚಿಹೋಗಿದೆ. ಹೆತ್ತವರು ಕಾಲನ ಕೂಗಿಗೆ ಓಗೊಟ್ಟು ನಡೆದರೆ ಒಡಹುಟ್ಟಿದವರೂ ನಮ್ಮಂತೆ ಅವರವರ ಜಂಜಾಟದ ಜಗತ್ತಿನಲ್ಲಿ ವ್ಯಸ್ತ. ಆಗೊಮ್ಮೆ ಈಗೊಮ್ಮೆ ಮುಖ ನೋಡುವುದ ಬಿಟ್ಟರೆ ಒಟ್ಟಿಗಿರುವ ಅವಕಾಶಗಳು ಕಡಿಮೆ. ಇವೆಲ್ಲವನ್ನೂ ಕೂಡಿಸುವ ಹಾಗಾಗಿ ಬಾಲ್ಯ ಮತ್ತೊಮ್ಮೆ ಬರುವುದಾದರೆ ಬೇಡ ಎನ್ನುವವರಾರು?” ಎನ್ನುವುದರ ಮೂಲಕ ಎಲ್ಲರೂ ಒಂದಲ್ಲಾ ಒಂದು ದಿನ ಎದುರಿಸಲೇ ಬೇಕಾದ ಸತ್ಯವನ್ನು ಜೊತೆಗೆ  ನಮ್ಮ ಬದುಕಲ್ಲೂ ಮತ್ತೊಮ್ಮೆ ಬಾಲ್ಯ ಬರುವಂತಾಗಬಾರದೇ ಎಂದೆನಿಸಿಬಿಡುತ್ತದೆ.

ನಾಡಿನ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಅವರ ಮುನ್ನುಡಿ, ಸ್ಮಿತಾ ಅಮೃತರಾಜ್ ಅವರ ಬರಹಗಳು ‘ಬಣ್ಣದ ಕೊಡೆ’ಗೆ ಮೆರುಗನ್ನು ಕೊಟ್ಟಿವೆ.
ನಾಗರೇಖಾರ ಮುಂದಿನ ಬದುಕೆಲ್ಲಾ ಸುಖ ಸಂತೋಷದಿಂದ ಕೂಡಿರಲಿ.