ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರೆಕ್ಕೆ ಇದ್ದರೆ ಚೆನ್ನಾಗಿತ್ತು

ಡಾ.ತನುಶ್ರೀ ಹೆಗಡೆ
ಇತ್ತೀಚಿನ ಬರಹಗಳು: ಡಾ.ತನುಶ್ರೀ ಹೆಗಡೆ (ಎಲ್ಲವನ್ನು ಓದಿ)

ಮೊಣಕಾಲುದ್ದದ ಅಂಗಿಯಲ್ಲಿ
ಅತ್ತಿಂದಿತ್ತ ಪುಟಿದೋಡುತ್ತಿದ್ದ ಪಾದಗಳಿಗೆ
ಮುಂಗಾಲುದ್ದದ ಲಂಗ ಅಡಿಗಡಿಗೂ ಸಿಕ್ಕಿ
ನಡಿಗೆಯನ್ನು ತುಂಡರಿಸಿದಾಗ
ಅನಿಸಿತ್ತು
ಏಳು ಸಾಗರ ಪರ್ವತದಾಚೆಯ ನಾಡಿಗೆ
ಗಮಿಸಿಬಿಡಬೇಕು ವೇಗದಲ್ಲಿ
ರೆಕ್ಕೆ ಇದ್ದರೆ ಚೆನ್ನಾಗಿತ್ತು

ಮನೆಯೆಲ್ಲ ತುಂಬಿ ಅಂಗಳದಲೆಲ್ಲ ಅನುರಣಿಸುತ್ತಿದ್ದ
ಕಾಲ್ಗೆಜ್ಜೆಯ ಕಿಂಕಿಣಿ
ಕಾಲುಂಗುರದ ನಿಗ್ರಹಕ್ಕೆ
ಉಲಿಗುಂದಿ ನಿಶ್ಶಬ್ಧವಾದಾಗ
ಅನಿಸಿತ್ತು
ದಾಟಿ ಬಯಲು ಭೂಮಿ ಬಾನ
ನಾದ ಮೊಳಗಿಸಬೇಕು ಗಟ್ಟಿಯಾಗಿ
ರೆಕ್ಕೆ ಇದ್ದರೆ ಚೆನ್ನಾಗಿತ್ತು

ಚಂಚಲ ಚಿಟ್ಟೆಯಂತೆ ಗಾಳಿಯಲ್ಲಿ ಪಟಪಟಿಸುತ್ತಿದ್ದ
ರಂಗುರಂಗಿನ ದುಪ್ಪಟ್ಟಾ
ಮಾನ ಹೊರುವ ಸೆರಗಾಗಿ
ಗಂಭೀರದಲಿ ಜೋತಾಡಿದಾಗ
ಅನಿಸಿತ್ತು
ತೇಲಿ ಬಿಡಬೇಕು ಸ್ವಚ್ಛಂದದಲಿ
ಹಗುರಾಗಿ ನವಿರಾಗಿ ಜೀವ ಜೀಕಲು
ರೆಕ್ಕೆ ಇದ್ದರೆ ಚೆನ್ನಾಗಿತ್ತು

ನಾಲ್ಕು ಗೋಡೆಯ ಜಗತ್ತಿಗೆ
ಕಿಟಕಿಗಳ ಒಡೆದ ಕಲಿಕೆಯ ಸುತ್ತಿಗೆ
ಪ್ರಪಂಚಕ್ಕೆ ಕದತೆರೆಯುವ ಮುನ್ನ
ಕಟ್ಟಳೆಗಳ ಇಕ್ಕಳಕ್ಕೆ ಸಿಕ್ಕಿ ಹೆಬ್ಬಾಗಿಲೇ ಕುಸಿದಾಗ
ಅನಿಸಿತ್ತು
ಮುಕ್ತವಾದ ಕನಸ ಲೋಕಕೆ
ನಿರಾತಂಕವಾಗಿ ಹಾರಿ ಹೋಗಲು
ರೆಕ್ಕೆ ಇದ್ದರೆ ಚೆನ್ನಾಗಿತ್ತು

ದಾರಿದೀಪಗಳು ಉದ್ದಕ್ಕೂ ಉರಿಯುತ್ತಿದ್ದರೂ
ಹೊಸ್ತಿಲ ದಾಟಲು ಬೆಳಕು ಸಾಲದಾದಾಗ
ಅನಿಸಿತ್ತು
ಹೆಣ್ಣು ಸಂಘರ್ಷವೇ ಹೀಗೆ
ಬಂಧನ ಬೇಕಿಲ್ಲ
ಬಿಡುಗಡೆಯೂ ಸುಖವಿಲ್ಲ
ಆದರೂ..
ಆ ಅಗಾಧದಲಿ ಲೀನವಾಗಲು
ರೆಕ್ಕೆ ಇದ್ದರೆ ಚೆನ್ನಾಗಿತ್ತು