ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅವಿಸ್ಮರಣೀಯ ಸಾಹಿತಿ ಮತ್ತು ಸಾಹಿತ್ಯ ಪರಿಚಾರಕ ವಿಷ್ಣು ನಾಯ್ಕ

ಟಿ ಜಿ ಭಟ್ ಹಾಸಣಗಿ

​ ನಮ್ಮ ಜಿಲ್ಲೆಯ ಹಿರಿಯ ಸಾಹಿತಿ, ಸಂಘಟಕ, ಪ್ರಕಾಶಕ – ಇತ್ಯಾದಿ ಬಹುಮುಖ ಪ್ರತಿಭೆಯ ದಿ. ಶ್ರೀ ವಿಷ್ಣು ನಾಯ್ಕರು ನನಗೆ “ಅನನ್ಯ” ವ್ಯಕ್ತಿಯಾಗಿ ಹಲವು ಸಲ ಬೆರಗು ಮೂಡಿಸಿದ್ದಾರೆ. ೧೯೭೪ ರಲ್ಲೇ ಅವರನ್ನೊಮ್ಮೆ ಕಂಡಿದ್ದರೂ, ಅವರು ೧೯೭೮ ರಿಂದ ನನಗೆ ಸಮೀಪದಿಂದ ನೋಡಬಲ್ಲ ಲವಲವಿಕೆಯ ಸಾಹಿತಿಗಳಾದರು. ಕುಮಟಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ ನಾನು ಕೆಲಸಕ್ಕೆ ಸೇರಿದಾಗ ಅಂಕೋಲೆಯಲ್ಲಿ ಅವರು, ಅವರ ಮಿತ್ರರು ಸಂಘಟಿಸುತ್ತಿದ್ದ ಎಲ್ಲಾ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇರುತ್ತಿತ್ತು. ಹೆಚ್ಚಿನಲ್ಲಿ ಪ್ರೇಕ್ಷಕನಾಗಿಯೇ ಭಾಗವಹಿಸಿದ್ದೇನೆ. ಒಟ್ಟೂ ಮರ‍್ನಾಲ್ಕು ಸಲ ನನಗೆ ನೇರವಾಗಿ ಭಾಗವಹಿಸಲು – ಕವಿತೆ ವಾಚನಕ್ಕೆ ಎರಡು ಸಲ ದಿ. ಎ. ಕೆ. ರಾಮಾನುಜನ್ ರವರ ಮೇಲೆ ಮಾತಾಡಲು ಒಂದು ಸಭೆಗೆ ನನ್ನನ್ನು ವಿಶೇಷವಾಗಿ ಆಮಂತ್ರಿಸಿದ್ದರು.

ಅವರನ್ನು ಕಂಡಾಗಲೆಲ್ಲಾ ನಾನು ಬಾಲ್ಯದಲ್ಲಿ ಕಂಡಿದ್ದ ದಿ. ಅನಕೃ ಅವರ ನೆನಪು ಬರುತ್ತಿತ್ತು. ಸದಾ ನೀಟಾಗಿ ಡ್ರೆಸ್ ಮಾಡಿಕೊಂಡು, ಉತ್ಸಾಹದ ಉತ್ಸವ ಮೂರ್ತಿಯ ಹಾಗೆ ಆಹ್ಲಾದಕರ ಮೂಡಿನಲ್ಲಿ ಇರುತ್ತಿದ್ದರು. ಒಮ್ಮೆ ಮಾತ್ರ ಅವರು ಬೇಜಾರು ಮಾಡಿಕೊಂಡದ್ದು ನೆನಪಿದೆ. ಅದು ಭಟ್ಕಳದಲ್ಲಿ ನಡೆದ ಅವರೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ. ಎರಡನೇ ದಿನ ಸಮ್ಮೇಳನದ ಅಧ್ಯಕ್ಷರ ಸಾಹಿತ್ಯ ಸಮೀಕ್ಷೆ, ಚರ್ಚೆ, ಸಂವಾದ ಕಾರ್ಯಕ್ರಮದಲ್ಲಿ. “ನನ್ನ ಶ್ರೀ ರಾಘವೇಂದ್ರ ಪ್ರಕಾಶನದಿಂದ ಸುಮಾರು ೧೨೦ ಹೊಸ-ಹಳೆ ಲೇಖಕರ ಕೃತಿಗಳನ್ನು ಪ್ರಕಟಿಸಿದ್ದೇನೆ. (ನನ್ನ ಕೃತಿ ಪ್ರಕಟಣೆಗೆ ನಾನು ವಿನಂತಿಸಿಕೊಂಡಿರಲಿಲ್ಲ) ಅವರಷ್ಟೇ ಜನ ಬಂದರೂ ಸಾಕಾಗಿತ್ತು. ನೋಡಿ ಹೇಗಿದೆ ಪ್ರಪಂಚ” ಎಂದು ಬೇಸರದಿಂದ ಹೇಳಿದ್ದರು.

ಅವರ ಸಂಘಟನಾ ಚಾತುರ್ಯ ಮೆಚ್ಚುವಂತಿತ್ತು. ಅವರ ಪ್ರಕಾಶನ ಸಂಸ್ಥೆಯ ಆಜೀವ ಸದಸ್ಯತ್ವ ಆಗ ಕೇವಲ ೧೦೦/- (ಒಂದು ನೂರು) ಮಾತ್ರ ಇತ್ತು. ನನ್ನ ಸಂಕೋಚ ಪ್ರವೃತ್ತಿಯಿಂದಾಗಿ ನಾನು ಮೂರು ಸಲ ಆಜೀವ ಸದಸ್ಯತ್ವ ಪಡೆದಿದ್ದೆ. ಕಾಯ್ಕಿಣಿ ಸಂಪುಟ (೧-೧೦),ಅವರದೇ ಸಮಗ್ರ ಕಾವ್ಯ, ಅಭಿನಂದನೆ ಗ್ರಂಥ, ಹೀಗೆ ಬೇರೆ ಬೇರೆ…. ನನಗೆ ಅವರ ಬಗೆಗಿನ ಗೌರವ, ಅವರ ಸಾಹಿತ್ಯ ಪ್ರೀತಿ, ಸಂಘಟನಾ ಸಾಮರ್ಥ್ಯದ ಕುರಿತಾಗಿ ಇರುವ ಆದರದಿಂದ ಇದನ್ನು ಉಲ್ಲೇಖಿಸುತ್ತಿದ್ದೇನೆ, ಅಷ್ಟೇ. ‘ಸಕಾಲಿಕ’ ಪತ್ರಿಕೆಗೆ ಸಹ ನಾನು ಕಾಯಂ ಚಂದಾದಾರನಾಗಿದ್ದು ಹಣ ಕಳಿಸಿದ್ದೆ. ಅವರ ‘ಸಾಹಸ’ ಪ್ರವೃತ್ತಿ ನನ್ನನ್ನು ವಿನೀತಗೊಳಿಸುತ್ತಿತ್ತು. ಜಿಲ್ಲೆಯ ಸಾಹಿತ್ಯ ಸಮೃದ್ಧಿಯಲ್ಲಿ ಅವರ ಪಾತ್ರ ದೊಡ್ಡದೇ.

​ತಮ್ಮ ಮನೆಗೆ “ಪರಿಮಳ” ವೆಂದು, ಪ್ರಕಾಶನ ಸಂಸ್ಥೆಗೆ “ಶ್ರೀ ರಾಘವೇಂದ್ರ ಪ್ರಕಾಶನ” ವೆಂದು ಹೆಸರಿಟ್ಟುಕೊಂಡರೂ ದಮನಿತರ, ಬಡವರ, ದಲಿತರ ಬಗೆಗಿನ ಕಾಳಜಿಯಿಂದಾಗಿ ಅಂಥವರ ಬವಣೆ ನಿರೂಪಿಸುವ ಹಲವು ನಾಟಕಗಳು, ಕವಿತೆಗಳು, ಲೇಖನಗಳನ್ನು ನಿರಂತರ ಸಮಾಜವಾದಿ ಧೋರಣೆಯಲ್ಲಿ ಬರೆದ ಕ್ರಿಯಾಶೀಲ ಚೈತನ್ಯ ಅವರದಾಗಿತ್ತು. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಅಂಕೋಲೆ, ಹೊನ್ನಾವರಕ್ಕಿಂತ ಮುಂಚೂಣಿಯಲ್ಲಿತ್ತು, ಆರಂಭದ ದಿನಗಳಲ್ಲಿ. ದಿ. ದಿನಕರ ದೇಸಾಯಿಯವರಂತೆ ದಿ. ವಿಷ್ಣು ನಾಯ್ಕರೂ ಅಂಕೋಲೆಯು ಜಿಲ್ಲೆಗೆ ನೀಡಿದ ಅವಿಸ್ಮರಣೀಯ ಅನನ್ಯ ಸಾಹಿತಿ ಹಾಗೂ ಸಾಹಿತ್ಯ ಪರಿಚಾರಕರು