ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀ ಕೆ ಟಿ ಗಟ್ಟಿಯವರಿಗೆ ನುಡಿನಮನ

ಉಷಾ ಪಿ ರೈ
ಇತ್ತೀಚಿನ ಬರಹಗಳು: ಉಷಾ ಪಿ ರೈ (ಎಲ್ಲವನ್ನು ಓದಿ)

           ಸನ್ಮಾನ್ಯ ಶ್ರೀ ಕೆ ಟಿ ಗಟ್ಟಿಯವರು ಇತಿಯೋಪಿಯಾದಿಂದ ಉಡುಪಿಗೆ ಬಂದು ನೆಲೆಸಿದಂದಿನಿಂದಲೂ ನಮ್ಮ ಮನೆಯವರಿಗೆಲ್ಲರಿಗೂ ಆತ್ಮೀಯವಾಗಿದ್ದವರು. ನನ್ನ ತಮ್ಮಂದಿರಿಗೆ ನನ್ನ ಅಮ್ಮನಿಗೆ ಹತ್ತಿರವಾಗಿದ್ದರು. ನಾನು ಉಡುಪಿಗೆ ಹೋದಾಗ ಅವರನ್ನು ಭೇಟಿಯಾಗುತ್ತಿದ್ದೆ. ನನ್ನ ತಂದೆ ಶ್ರೀ ಕೆ. ಹೊನ್ನಯ್ಯ ಶೆಟ್ಟಿಯವರು ನಡೆಸುತ್ತಿದ್ದ ನವಯುಗ ವಾರಪತ್ರಿಕೆಯಲ್ಲಿ ಅವರ ಮೊದಲ ಬರಹಗಳು ಪ್ರಕಟವಾಗಿದ್ದವು ಎಂದು ಹೇಳುತ್ತಿದ್ದರು. ಆಗ ಚಿಕ್ಕ ಹುಡುಗನಾಗಿದ್ದ ಅವರಿಗೆ ನನ್ನ ತಂದೆಯ ಎದುರು ನಿಂತು ಮಾತಾಡಲು ಭಯವಾಗುತ್ತಿತ್ತಂತೆ. ಅವರು ದೊಡ್ಡ ಕಾದಂಬರಿಕಾರನಾಗಿ ಹಿಂತಿರುಗಿ ಬರುವಾಗ ನನ್ನ ತಂದೆ ಇರಲಿಲ್ಲ. ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು.

      ಸನ್ಮಾನ್ಯ ಗಟ್ಟಿಯವರ ಮೊದಲ ಕಾದಂಬರಿ

“ಶಬ್ದಗಳು” ಓದಿದಂದಿನಿಂದಲೂ ನಾನವರ ಅಭಿಮಾನಿಯಾಗಿದ್ದೆ. ಅವರ ಹೆಚ್ಚಿನ ಪುಸ್ತಕಗಳನ್ನು ನಾನು ಓದಿದ್ದೆ. ಓದುವ ಅಭ್ಯಾಸವೇ ಇಲ್ಲದಿದ್ದ ನನ್ನವರ ಕೈಗೆ “ಶಬ್ದಗಳು” ಕಾದಂಬರಿಯನ್ನು ಕೊಟ್ಟು ಓದುವಂತೆ ಒತ್ತಾಯಿಸಿದ್ದೆ. ಅಮೇಲಿನಿಂದ ಅವರೂ ಗಟ್ಟಿಯವರ ಅಭಿಮಾನಿಯಾಗಿದ್ದರು.

    ಶ್ರೀ ಗಟ್ಟಿಯವರನ್ನು  ಭೇಟಿಯಾದಾಗ ನಾನು ಬರೆಯಲು ಸುರುಮಾಡಿದ್ದೆ ಮಾತ್ರ. ನನ್ನ ಮೂರನೇ ಕಾದಂಬರಿ ‘ಉತ್ತರಣ’ ಕ್ಕೆ ಮುನ್ನುಡಿ ಬರೆಯಲು ಅವರನ್ನು ಕೇಳಲು ಅವರು ನನ್ನ ತಂದೆಯನ್ನು ನೋಡಿ ಭಯಪಟ್ಟಷ್ಟೇ ನಾನೂ ಭಯಪಟ್ಟಿದ್ದೆ. ಆದರೆ  ಅವರು ಖುಷಿಯಿಂದ  ಮುನ್ನುಡಿ ಬರೆದು ಕೊಟ್ಟಿದ್ದರು. ಅದು ಅವರ ದೊಡ್ಡತನ. ತುಂಬಾ ಕಿರಿಯರನ್ನು ಪ್ರೋತ್ಸಾಹಿಸಿದ್ದಾರೆ ಶ್ರೀ ಗಟ್ಟಿಯವರು.

    ‘ಶಬ್ದಗಳು’, ‘ಅಬ್ರಾಹ್ಮಣ’ ಕಾದಂಬರಿಗಳಿಂದ ಓದುಗರನ್ನೆಲ್ಲ ಸೆಳೆದಿದ್ದ ಸನ್ಮಾನ್ಯ ಗಟ್ಟಿಯವರು ಮುಂದಿನ ಎಲ್ಲಾ ಕಾದಂಬರಿಗಳು, ವೈಚಾರಿಕ ಬರಹಗಳು, ನಾಟಕಗಳು, ಸಣ್ಣಕತೆಗಳಿಂದ ಓದುಗರ ಮನಗೆದ್ದಿದ್ದರು. ಅವರ ಜೊತೆಗೆ ಸದಾ ನಿಂತವರು ಅವರ ಮಡದಿ ಯಶೋದಾರವರು. ನಾವು ಅವರನ್ನು ಅವರ ಉಜಿರೆಯ ‘ವನಶ್ರೀ’ ಯಲ್ಲೂ ಭೇಟಿಯಾಗಿದ್ದೆವು. ಮಂಗಳೂರಿಗೆ ಬಂದಾಗ ಅವರನ್ನು ಭೇಟಿಯಾಗುತ್ತಿದ್ದೆವು. ನಮಗೆ ಅಪಘಾತವಾಗಿದ್ದಾಗ ನಮ್ಮನ್ನು ನೋಡಲು ಬೆಂಗಳೂರಿಗೆ ಇಬ್ಬರೂ ಬಂದಿದ್ದರು. ನನಗೊಬ್ಬ ಹಿರಿಯಣ್ಣನಂತಿದ್ದರು. ಯಾವಾಗಲೂ ನಮ್ಮ ಆರೋಗ್ಯದ ಬಗ್ಗೆ, ಬರಹದ ಬಗ್ಗೆ ವಿಚಾರಿಸುತ್ತಿದ್ದರು. ಧೈರ್ಯ ಹೇಳುತ್ತಿದ್ದರು .

       ಕಳೆದ ವರ್ಷ ನಾನು ಮಂಗಳೂರಿಗೆ ಬಂದು ನೆಲೆಸಿದಾಗ ಅವರನ್ನು ನೋಡಲು ಹೋಗಿದ್ದೆ. ಆಗ ಅವರು ಎಲ್ಲದರಿಂದಲೂ ದೂರವಾಗಿ ಎಲ್ಲಾ ಮರೆತಿರುವುದನ್ನು ನೋಡುವಾಗ ತುಂಬಾ  ನೋವಾಗಿತ್ತು. ಆಗಲೇ ನಾವು ಒಬ್ಬ ಉತ್ತಮ ಲೇಖಕರನ್ನು ಕಳೆದು ಕೊಂಡಿದ್ದೆವು. ಯಶೋದಾ ಕೂಡಾ ಜರ್ಜರಿತರಾಗಿದ್ದರು. ಅವರ ಸಾವು ಜೀವನಕ್ಕೊಂದು ಅಂತ್ಯ ಮಾತ್ರ. ಆದರೆ ಅವರು ಬಿಟ್ಟು ಹೋಗಿರುವ ದೊಡ್ಡ ಸಾಹಿತ್ಯ ಬಂಡಾರವೇ ಅವರನ್ನು ನೆನಪಿಸುತ್ತಾ ಕನ್ನಡ ಸಾಹಿತ್ಯ ಲೋಕದಲ್ಲಿದೆ. ಸನ್ಮಾನ್ಯ ಕೆ. ಟಿ. ಗಟ್ಟಿಯವರು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ ಯಾವಾಗಲೂ ಸಾಹಿತ್ಯಾಸಕ್ತರ ಜೊತೆಗಿರುತ್ತಾರೆ.

ಅವರಿಗೆ ಗೌರವ ಪೂರ್ವಕ ಅಂತಿಮ ನಮನಗಳು.🙏🙏🙏🙏🙏