ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿನಮನ ಸಂಚಿಕೆ ಸಂಪಾದಕರ ಮಾತು

ವಿದ್ಯಾ ಭರತನಹಳ್ಳಿ
ಇತ್ತೀಚಿನ ಬರಹಗಳು: ವಿದ್ಯಾ ಭರತನಹಳ್ಳಿ (ಎಲ್ಲವನ್ನು ಓದಿ)

ಯಾರಾದರೂ ನಮ್ಮನ್ನಗಲಿದಾಗ ಅವರ ಕುರಿತು ಏನಾದರೂ ಬರೆಯುತ್ತೀರಾ ಅಂತ ಅಗಲಿದವರ ಹತ್ತಿರದವರ ಕೇಳುವುದುನಿಜಕ್ಕೂ ಸಂಕಟದ ವಿಷಯ. ಆದರೂ ಶ್ರದ್ಧಾಂಜಲಿಯನ್ನು ಈ ಮೂಲಕ ಅಂದರೆ ಅಕ್ಷರಗಳ ಮೂಲಕ ತೋರಿಸುವುದು ಅವರೆಡೆಗೆ ನಮಗಿರುವ ಗೌರವ ಪ್ರೀತಿಯನ್ನು ತೋರುತ್ತದೆ.
     ಅವತ್ತು ಹಲವರು ವಿಷ್ಣು ನಾಯ್ಕರು ಅಗಲಿದ ಸುದ್ದಿಯನ್ನು ಹೇಳಿದರು. ನನ್ನ ತಂದೆ ನಾ. ಸು ಭರತನಹಳ್ಳಿಯವರ ಆತ್ಮೀಯ ಸ್ನೇಹಿತರಾದ ವಿಷ್ಣು ನಾಯ್ಕರು ನನಗೂ ತಂದೆ ಸಮಾನರೇ! ಅಗಲಿದರು ಅನ್ನುವ ಸುದ್ದಿ ಅವರೊಂದಿಗಿನ ನೆನಪು ನನ್ನಲ್ಲಿ ಬಿಚ್ಚಿಕೊಳ್ಳುತ್ತಲಿತ್ತು. ನಾನು ಅವರನ್ನು ಚಿಕ್ಕವಳಿಂದಲೇ ನೋಡುತ್ತ ಬಂದಿದ್ದೇನೆ. ವಿಷ್ಣು ನಾಯ್ಕರು, ಆರ್. ವಿ. ಭಂಡಾರಿಯವರು,
ತಂದೆಯವರು ಮೂವರೂ ನಮ್ಮನೆಯ ಜಗುಲಿಯಲ್ಲಿ ಕುಳಿತು ಗಂಟೆಗಟ್ಟಲೆ ಕುಳಿತು ಮಾತಾಡುವುದನ್ನು ಕೇಳಿಸಿಕೊಂಡಿದ್ದೇನೆ. ಅಬ್ಬೆ ಮಾಡಿದ ಶಿರವನ್ನು ಬಡಿಸಿದ್ದೇನೆ.

ಮೊದಲು ಅಪ್ಪನೊಂದಿಗೆ ವೇದಿಕೆಯಲ್ಲಿ ಅವರನ್ನು ನೋಡುತ್ತಿದ್ದೆ. ಆ ನಂತರ ಕವಿಗೋಷ್ಠಿಗಳಲ್ಲಿ ಅವರೊಂದಿಗೇ ಕಿರಿಯವಳಾಗಿ ಕವಿತೆ ಓದಿದ್ದೇನೆ. ‘ ಕವಿತೆ ಚಂದ ಓದ್ತೆ’ ಹ್ಞ ಅಂತ ವಿಷ್ಣು ನಾಯ್ಕರಿಂದ ಬೆನ್ನು ತಟ್ಟಿಸಿಕೊಂಡಿದ್ದೇನೆ. ಆಮೇಲೆ ಅವರೊಮ್ಮೆ ಅಂಕೋಲಾದಲ್ಲಿ ತಾವು ನಡೆಸುವ ಕವಿಗೋಷ್ಠಿಗೆ ಕರೆದಾಗ ಸಂಯುಕ್ತ ಕರ್ನಾಟಕದಲ್ಲಿ ನಾನು ಉಪ ಸಂಪಾದಕಿಯಾಗಿದ್ದೆ. ಯಾವುದೋ ಕಾರಣಕ್ಕೆ ಹೋಗಲಾಗಲಿಲ್ಲ. ಅದು ಅವರಿಗೆ ಬೇಸರವಾಯಿತು. ಆಮೇಲೆ ನಾನು ಕದಂಬ ಕವಿಗೋಷ್ಠಿ, ಜಿಲ್ಲಾ, ತಾಲೂಕಾ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗೆ ಹೋಗಿ ಕವಿತೆ ಓದಿದಾಗ ಅಪ್ಪನ ಬಳಿ ಅಂದಿದ್ದರಂತೆ
“ವಿದ್ಯಾ ನಾ ಕರೆದರೆ ಮಾತ್ರ ಬರಲಿಲ್ಲ ” ಅಂತ. ನಾನು ಕ್ಷಮೆ ಕೇಳಿ ಪತ್ರ ಬರೆದಿದ್ದರೂ ಅವರು ಅದನ್ನು ಮನಸಲ್ಲಿಟ್ಟುಕೊಂಡಿದ್ದರು.
      ಅಪ್ಪನ ಹಾಗೆ ಹಾಫ್ ಕೋಟು ಧರಿಸಿ ಚಂದವಾಗಿ ಡ್ರೆಸ್ ಮಾಡುತ್ತಿದ್ದ ವಿಷ್ಣು ನಾಯ್ಕರನ್ನು ನೋಡುವುದೇ ಒಂದು ಖುಷಿ. ಮಾತಾಡಿಸಲು ಸ್ವಲ್ಪ ಭಯವೂ ಆಗುತ್ತಿತ್ತು. ಎಲ್ಲ ಸಮ್ಮೇಳನಗಳಲ್ಲಿ ರಾಘವೇಂದ್ರ ಪ್ರಕಾಶನದ ಸ್ಟಾಲ್ ಇರುತ್ತಿತ್ತು. ಅಲ್ಲಿಗೆ ತಪ್ಪದೇ ಭೇಟಿಕೊಟ್ಟು ಸ್ವಲ್ಪ ಹೊತ್ತು ಕವಿತಾ ಮೇಡಮ್ ಮತ್ತು ವಿಷ್ಣು ನಾಯ್ಕರೊಂದಿಗೆ ಮಾತಾಡಿ ಪುಸ್ತಕಗಳ ತರುತ್ತಿದ್ದೆ.
      
       ಜೋಯ್ಡಾದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾಸಾಹಿತ್ಯ ಸಮ್ಮೇಳನದಲ್ಲಿ ನನ್ನ ಕವಿತೆಯನ್ನು ನಾನು ಓದಿದ ಮೇಲೆ ಗಣೇಶ್ ದೇಸಾಯಿಯವರು ಅದನ್ನು ತುಂಬಾ ಚೆನ್ನಾಗಿ ಹಾಡಿದ್ದರು. ಅದರಲ್ಲೊಂದು ‘ಮುಂಗುಸಿಯ ಬಿಸಿ ಉಸಿರ ನಾಗಲೋಕ’ ಇಂಥದೇನೊ ಒಂದು ವಾಕ್ಯವಿತ್ತು. ಅದು ವಿಷ್ಣು ನಾಯ್ಕರಿಗೆ ತುಂಬ ಇಷ್ಟವಾಗಿ ಕವಿತೆಯಲ್ಲಿ ಒಂದು ಸಾಲು ಇಂಥದಿದ್ದರೂ ಸಾಕು,
ಆ ಕವಿತೆ ಯಶಸ್ವಿಯಾದ ಹಾಗೆ ಅಂತ ಹೇಳಿದ್ದರು. ಅಪ್ಪನಿಗೆ ತುಂಬಾ ಖುಷಿಯಾಗಿತ್ತು. ವಿಷ್ಣು ನಾಯ್ಕರು ಸುಮ್ಮನೇ ಹೊಗಳುವ ಮನುಷ್ಯರೇ ಅಲ್ಲ. ಚೆನ್ನಾಗಿಲ್ಲದಿದ್ದರೂ ಅದನ್ನೇ ಹೇಳುತ್ತಿದ್ದರು ಅಂತ ಹೇಳಿದ್ದರು.
         ವಿಷ್ಣು ನಾಯ್ಕರು ಅಗಲಿದರು ಅಂತ ಗೊತ್ತಾದಾಗಿಂದ ಒಂದೊಂದೇ ನೆನಪು ಬರುತ್ತಿದ್ದಾಗಲೇ ಡಾ. ಗೋವಿಂದ ಹೆಗಡೆಯವರ ಫೋನ್ ಬಂತು. ಇಬ್ಬರೂ ವಿಷ್ಣು ನಾಯ್ಕರ ಸಾಹಿತ್ಯ, ಸಂಘಟನೆ ಇತ್ಯಾದಿ ಮಾತಾಡುತ್ತಿದ್ದಾಗ nasuku.com ಅವರ ಕುರಿತು ವಿಶೇಷ ಸಂಚಿಕೆ ಮಾಡಿದರೆ ನೀನು ಸಂಪಾದನೆ ಮಾಡಿಕೊಡ್ತೀಯಾ? ಸಂಯುಕ್ತ ಕರ್ನಾಟಕ, ಕರ್ಮವೀರ, ಹಾಯ್
ಬೆಂಗಳೂರ್ ಲ್ಲೆಲ್ಲ ಉಪಸಂಪಾದಕಿಯಾಗಿ ಕೆಲಸ ಮಾಡಿದ ಅನುಭವ ಇದೆ ಹೇಗೂ ಅಂದರು. ಪ್ರೀತಿಯ ಬಂಧು, ನಿಡುಗಾಲದ ಮಿತ್ರ ಗೋವಿಂದ ಹೆಗಡೆಯವರಿಗೆ ಇಲ್ಲವೆನ್ನಲಾಗದೆ ಮತ್ತು ವಿಷ್ಣು ನಾಯ್ಕರ ಮೇಲಿನ ಪ್ರೀತಿಯಿಂದಾಗಿ ಒಪ್ಪಿಕೊಂಡುಬಿಟ್ಟೆ.

            ನಾನು ಕಳಿಸಿದ ಒಂದು ಮೆಸೇಜಿಗೆ ಸ್ಪಂದಿಸಿ ಹಿರಿ ಕಿರಿಯರೆಲ್ಲರೂ ಬರಹ ಕಳಿಸಿದರು. ಶ್ರೀಧರ ಬಳಗಾರರು ಫೋನ್ ಮಾಡಿ ಮಾತಾಡಿದರು. ಬರಹ ಕಳಿಸಿದರು. ಜಯಂತ ಕಾಯ್ಕಿಣಿಯವರು ತಕ್ಷಣ ಒಂದು ಶ್ರದ್ಧಾಂಜಲಿ ನೋಟ್ ಕಳಿಸಿ ತಮ್ಮದೊಂದು ಹಳೆಯ ಲೇಖನದ ಬಗ್ಗೆ ಹೇಳಿ ಬಳಸಿಕೊಳ್ಳಲು ಅನುಮತಿ ಕೊಟ್ಟರು. ಸುಬ್ರಾಯ ಮತ್ತಿಹಳ್ಳಿಯವರು ವಿಷ್ಣು ನಾಯ್ಕರ ಬಗ್ಗೆ ಬರೆದ ಕವಿತೆಯನ್ನು ಬಳಸಿಕೊಳ್ಳಲು ಅನುಮತಿ ಕೊಟ್ಟರು. ಸ್ನೇಹಿತೆ ಮಾಧವಿ ಭಂಡಾರಿಯವರು, ಕಿರಿಯ
ಗೆಳತಿಯರಾದ ನಾಗರೇಖಾ ಗಾಂವ್ಕರ್, ಶ್ರೀದೇವಿ ಕೆರೆಮನೆ, ದೀಪಾ ಹಿರೇಗುತ್ತಿ, ರೂಪಶ್ರೀ ಎಲ್ಲರೂ ಬರೆದು ಕಳಿಸಿದರು. ಇವೆಲ್ಲ ಸಾಧ್ಯವಾಗಿಸಿದ್ದು ವಿಷ್ಣು ನಾಯ್ಕರ ವ್ಯಕ್ತಿತ್ವ ಮತ್ತು ಅವರೆಲ್ಲರಿಗೂ ನನ್ನ ಮೇಲಿದ್ದ ಪ್ರೀತಿ ಕಾರಣವೆಂದು ಭಾವಿಸಿದ್ದೇನೆ. ಈ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.
             ಹೀಗೆ ವಿಷ್ಣು ನಾಯ್ಕರದ್ದು ಸಂಪಾದನೆ ಕಾರ್ಯ ನಡೆಯುತ್ತಿದ್ದಾಗಲೇ ಪ್ರಸಿದ್ಧ ಸಾಹಿತಿ ಕೆ. ಟಿ. ಗಟ್ಟಿಯವರೂ ನಮ್ಮನ್ನಗಲಿದರು. ಅವರ ಕುರಿತೂ ಮಾಡೋಣ ಅಂತ ಗೋವಿಂದ ಹೆಗಡೆಯವರು ಪ್ರಸ್ತಾಪಿಸಿ ಯಾರು ಯಾರನ್ನೆಲ್ಲ ಸಂಪರ್ಕಿಸಬಹುದೆಂದು ಸೂಚಿಸುತ್ತ ಅವರೆಲ್ಲರ ಫೋನ್ ನಂಬರ್ ದೊರಕಿಸಿಕೊಟ್ಟರು.
            ತ. ರಾ. ಸು.ಸ್ಮಾರಕ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಬಂದಾಗ ಉಡುಪಿಯ ರಥ ಬೀದಿಯಲ್ಲಿ ಕೆ. ಟಿ . ಗಟ್ಟಿಯವರಿಂದ ಬಹುಮಾನ ಸ್ವೀಕರಿಸಿದ್ದು , ಆ ನಂತರ ಒಟ್ಟಿಗೇ ಊಟ ಮಾಡಿದ್ದು ನೆನಪಾಯಿತು.           
            ನಾನು ಕೇಳಿದ ಕೂಡಲೇ ಗಟ್ಟಿಯವರ ಬಗ್ಗೆ ಮೊದಲು ಬರೆದು ಕಳಿಸಿದವರು ನನ್ನ ಪ್ರೀತಿಯ ಕವಿ ಸುಬ್ರಾಯ ಚೊಕ್ಕಾಡಿಯವರು. 85 ರ ಹರೆಯದಲ್ಲೂ ಸ್ವಲ್ಪವೂ ಬೇಸರಿಸದೆ ಬರೆದು ಕಳಿಸಿದ ಅವರಿಗೆ ಧನ್ಯವಾದಗಳು. ಗಿರಿಧರ ಕಾರ್ಕಳ ಅವರು ತಮ್ಮ ಬರಹವನ್ನು ಕಳಿಸಿದರಲ್ಲದೇ ಶ್ಯಾಮಲಾ ಮಾಧವರು ಗಟ್ಟಿಯವರ ಬಗ್ಗೆ ಬರೆದ ಬರಹಗಳ ಬಗ್ಗೆ ಗಮನ ಸೆಳೆದು ಅವರ ನಂಬರನ್ನೂ ಕಳಿಸಿದರು. ಅವರಿಗೂ ಧನ್ಯವಾದಗಳು. ಜನಾರ್ದನ ಭಟ್ ಅವರು ಕೆ. ಟಿ ಗಟ್ಟಿಯವರ ಕಥೆಗಳ ಬಗ್ಗೆ
ವಿಷದವಾಗಿ ಬರೆದು ಕಳಿಸಿದರು. ಇವರ ಬರೆಹ ಓದುತ್ತಿದ್ದಂತೆ ನಾನು ಓದಿ ಮರೆತ ಕಥೆಗಳೆಲ್ಲ ನೆನಪಾದವು. ಅವರಿಗೆ ಧನ್ಯವಾದಗಳು.

ಹಾಗೇ ಜ್ವರವಿದ್ದರೂ ಆಗುವುದಿಲ್ಲ ಅನ್ನದೇ ಎನ್. ಎಸ್. ಶ್ರೀಧರ ಮೂರ್ತಿಯವರು ಬರೆದು ಕಳಿಸಿದರು. ಅಲ್ಲದೇ ಕೆ. ಟಿ ಗಟ್ಟಿಯವರೊಡನೆ ನಿಕಟ ಸಂಪರ್ಕವಿಟ್ಟುಕೊಂಡಿದ್ದ ಶಮಾ ನಂದಿಬೆಟ್ಟ ಬರೆದರು.
ಕರ್ಮವೀರದಲ್ಲಿದ್ದಾಗ ಸಹೋದ್ಯೋಗಿಯಾಗಿದ್ದ ಹಿರಿಯರಾದ ಗಣೇಶ್ ಕಾಸರಗೋಡ್ ಅವರು ನಾನು ಕೇಳಿದ ತಕ್ಷಣ ಬರೆದು ಕಳಿಸಿದರು. ಅವರ ಅಭಿಪ್ರಾಯವನ್ನು ಗೌರವಿಸುತ್ತ ಧನ್ಯವಾದಗಳನ್ನು ಅರ್ಪಿಸುತ್ತೇನೆ.
            ಡಾ. ಗೋವಿಂದ ಹೆಗಡೆಯವರು ಇಬ್ಬರ ಕುರಿತೂ ಬರೆದ ಗಜಲ್ ಕಳಿಸಿದರು. ಇವರಿಗೆಲ್ಲರಿಗೂ ಧನ್ಯವಾದಗಳು.
             ಈ ಸಂಪಾದನಾ ಕಾರ್ಯ ಒಪ್ಪಿಕೊಂಡಿದ್ದಕ್ಕೆ ನನಗೆ ದೊಡ್ಡ ಲಾಭವಾಗಿದ್ದು ವೈದೇಹಿಯವರೊಂದಿಗೆ ಫೋನಲ್ಲಿ ಮಾತಾಡಿದ್ದು, ಶ್ಯಾಮಲಾ ಮಾಧವ, ಉಷಾ ರೈ ಇವರೆಲ್ಲರ ಪರಿಚಯವಾಗಿದ್ದು. ಆಗುವುದಿಲ್ಲ ಅಂದಿದ್ದರೆ ಏನೂ ಮಾಡಲಾಗುತ್ತಿರಲಿಲ್ಲ. ಪರಿಚಯವೇ ಇಲ್ಲದ ನನ್ನ ಕೋರಿಕೆಯನ್ನು ಮನ್ನಿಸಿ ಬರೆದ ಇವರುಗಳಿಗೆಲ್ಲ ರಾಶಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
            ಜಯಂತ ಕಾಯ್ಕಿಣಿಯವರ ಲೇಖನ ಒದಗಿಸಿದ ನಾಗಪತಿ ಹೆಗಡೆಯವರಿಗೂ,ಒಂದು ವಾರ ಇದೇ ಕೆಲಸದಲ್ಲಿ ವ್ಯಸ್ತಳಾದ ನನ್ನನ್ನು ಸಹಿಸಿಕೊಂಡ ಪತಿ ಉಮೇಶ್ ಹೆಗಡೆಯವರಿಗೂ ಕೃತಜ್ಞಳಾಗಿದ್ದೇನೆ.

ಕೆ.ಟಿ.ಗಟ್ಟಿಯವರ ಸಂದರ್ಶನ,ಅವರ ಬಗೆಗಿನ ಆಪ್ತ ಮಾತುಗಳನ್ನೊಳಗೊಂಡ ಸುದೀರ್ಘ ಬರಹವನ್ನು ಬಳಸಿಕೊಳ್ಳಲು ಅನುಮತಿ ನೀಡಿದ ನರೇಂದ್ರ ಪೈ ಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
            ವಿಷ್ಣು ನಾಯ್ಕರು ಮತ್ತು ಕೆ. ಟಿ. ಗಟ್ಟಿ ಇಬ್ಬರಿಗೂ ಹೃತ್ಪೂರ್ವಕ ಶ್ರದ್ಧಾಂಜಲಿಯನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ.
             ಇಂಥದೊಂದು ಅವಕಾಶ ಕೊಟ್ಟ nasuku.com e ಪತ್ರಿಕೆ ಸಂಪಾದಕರಾದ ಉತ್ತರ ಕನ್ನಡ ಜಿಲ್ಲೆಯವರೇ ಆದ ಈಗ ಹೈದರಾಬಾದ್ ವಾಸಿಯಾದ ವಿಜಯ ದಾರಿಹೋಕ ಅವರಿಗೂ ,ಡಾ. ಗೋವಿಂದ ಹೆಗಡೆಯವರಿಗೂ ಧನ್ಯವಾದಗಳನ್ನು
ಅರ್ಪಿಸುತ್ತೇನೆ.

ವಿದ್ಯಾ ಭರತನಹಳ್ಳಿ