ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅರಿವು – ಜೆಕೆ ಯವರ ದೃಷ್ಟಿಯಲ್ಲಿ

ಟಿ ಜಿ ಭಟ್ ಹಾಸಣಗಿ

ಅನುಭಾವದ ವ್ಯಾಖ್ಯೆ ಕಷ್ಟ. ಆದರೂ ಸ್ಥೂಲವಾಗಿ ಹೇಳುವುದಿದ್ದರೆ ಈ ವಿಶ್ವವನ್ನು ವ್ಯಾಪಿಸಿರುವ ಅಗೋಚರ ಹಾಗೂ ಇಂದ್ರಿಯಾತೀತವಾದ ಬೃಹತ್ ಚೈತನ್ಯ ಶಕ್ತಿಯ ನೇರ ಸಂಪರ್ಕಕ್ಕೆ ಬರುವ ವಿಶೇಷ ಸಾಮರ್ಥ್ಯ. ಅಂಥ ಸಾಮರ್ಥ್ಯವಿರುವವನೇ ‘ಅನುಭಾವಿ’. ಈ ವಿಶಿಷ್ಟ ಆಧ್ಯಾತ್ಮಿಕ ಶಕ್ತಿಯುಳ್ಳ ವ್ಯಕ್ತಿಗಳ ಸುದೀರ್ಘ ಪರಂಪರೆಯ ವಿವಿಧ ಧಾರೆಗಳು ವಿಶ್ವದ ವಿವಿಧ ದೇಶಗಳಲ್ಲಿ ಸಹಸ್ರಾರು ವರ್ಷಗಳಿಂದ ಹರಿದುಬಂದಿವೆ.ಪ್ರತಿಯೊಂದು ಕಾಲಘಟ್ಟದಲ್ಲಿ ಇಂಥವರು ಇದ್ದೇ ಇರುತ್ತಾರೆ ಎಂದು ಈ ಪರಂಪರೆಯ ಅನೇಕ ವಿಶಿಷ್ಟ ಪಂಥಗಳಲ್ಲಿ ನಂಬಿಕೆಯಿಟ್ಟವರು ನಂಬಿ ಬದುಕಿಕೊಂಡು ಬಂದಿದ್ದಾರೆ. ಸನಕಾದಿ ಯೋಗಿಗಳು, ಶ್ರೀಶಂಕರಾಚಾರ್ಯರ ಆದಿಯಾಗಿ ಆಚಾರ್ಯರುಗಳು, ನಾರದಾದಿ ಋಷಿಗಳು, ವಸಿಷ್ಠಾದಿ ಮುನಿಗಳು, ಇವರನ್ನು ಸ್ಮರಿಸಿ ದೇವತಾ ಉಪಾಸನೆ ಮಾಡುವ ಕ್ರಮದವರೆಗೆ, ನಿತ್ಯ ಬದುಕಿನ ಭಾಗವಾಗಿ ಭಾರತೀಯರಲ್ಲಿ ಇನ್ನೂ ಇದು ಜೀವಂತವಾಗಿದೆ. ಅಂದರೆ ‘ಸತ್ವ’ ಒಂದೇ ಆದರೂ ‘ಸ್ವರೂಪ’ ವಿಭಿನ್ನವಾಗಿರುವದರ ಸೂಚನೆ ಈ ಸ್ಮರಣೆಯಲ್ಲಿದೆ. ಆ ‘ದೇವತಾಶಕ್ತಿ’ಯ ಅನಿರ್ವಚನೀಯ ಅನುಭವಕ್ಕೆ ಪಕ್ವವಾಗುವ ಮನ ತೆರೆದುಕೊಂಡಿರಬೇಕಾದ ಜೀವದ ಸಿದ್ಧತೆಯ ಹೊಳಹು ಈ ನಿತ್ಯ ಕಲಾಪದ ಹಿನ್ನೆಲೆ. ಸಂತ, ಮಹಂತರು, ಶರಣರು, ದಾಸರು ಮೊದಲಾದವರೆಲ್ಲರೂ ಇಲ್ಲಿ ಭಾಗಿಗಳು.

ಈ ವೈವಿಧ್ಯಮಯ ಜೀವಂತ ಅನುಭಾವಿ ಧಾರೆಗಳಲ್ಲಿ ಜೆ ಕೆ ಅವರು ಅನುಪಮ,ವಿಶಿಷ್ಟ ಹಾಗೂ ಭಿನ್ನವೆಂದು ಕಾಣಲು ಕಾರಣ, ಅವರ ಜೀವಿತದ ಕಾಲಘಟ್ಟ, ಜೀವನದ ಘಟನಾವಳಿಗಳು ಹಾಗೂ ಅವರ ಸತ್ಯ ನಿರ್ವಚನದ ಶೈಲಿ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅತ್ಯಂತ ಶ್ರೀಮಂತ ಹಾಗೂ ವಿಶ್ವವ್ಯಾಪಕವಾಗಿ ಕೆಲವು ದಶಕಗಳಿಂದ ಬೆಳೆದು ಅವರನ್ನು ಕೇಂದ್ರೀಕರಿಸಿಕೊಂಡು ನಿಂತಿದ್ದ ಬೃಹತ್ ಸಂಸ್ಥೆಯನ್ನು ಅವರು ತ್ಯಜಿಸಿ ಹೊರಗೆ ಬಂದಿದ್ದು, ಅತ್ಯಂತ ಆಘಾತಕಾರಿ ಹಾಗೂ ಆಶ್ಚರ್ಯಕರವೆನಿಸಿತ್ತು. ಅನುಭವದ ಅಂತರ್ಯದ ಸಾಮರ್ಥ್ಯವಿರದ ಯಾರ್ಯಾರೂ ಮಾಡದ ಬಹುದೊಡ್ಡ ಸಾಹಸದ ಬೆರಗಿನ ತ್ಯಾಗವಾಗಿತ್ತು ಅದು.ಹಾಗೂ ಆ ಸಂಸ್ಥೆಯನ್ನು ವಿಸರ್ಜಿಸುವಾಗ ಅವರು ಮಾಡಿದ ಘೋಷಣೆ, ಭಾಷಣದ ತಿರುಳು ‘ಸತ್ಯವೆನ್ನುವುದು ದಾರಿಯೇ ಇರದ ಕಡಲು; ಪ್ರತಿಯೊಬ್ಬನು ತನಗೆ ತಾನೇ ಪಡೆದುಕೊಳ್ಳಬೇಕಾದ ನಿಧಿ; ಯಾರೊಬ್ಬನೂ ಇನ್ನೊಬ್ಬನಿಗೆ ಅದನ್ನು ತೋರಿಸಲು, ನೀಡಲು ಶಕ್ಯವಿಲ್ಲ’ಎಂದು ಹೇಳಿದ್ದು, ಹಾಗೂ ಇಂಥ ಭ್ರಮೆಯಿಂದ ಬಿಡುಗಡೆಗೊಳಿಸುವುದೇ ವಿಶ್ವಗುರುವಾಗಿ ಅಲ್ಲ, ಒಬ್ಬ ಸಾಮಾನ್ಯನಾಗಿ- ಜೆ.ಕೃಷ್ಣಮೂರ್ತಿಯಾಗಿ ತನ್ನ ಮುಂದಿನ ಬದುಕಿನ ಗುರಿ, ಮುಡಿಪು ಎಂದು ಆ ಸತ್ಯದ ‘ಅಗ್ನಿದಿವ್ಯ’ದಲ್ಲೆ ತಮ್ಮ ಇಡೀ ಜೀವಿತವನ್ನು ಅವರು ಬದುಕಿದ್ದು.

ಜೆ.ಕೆ.ಅನ್ನಿಬೆಸೆಂಟ್ ರೊಂದಿಗೆ

ಇಂಗ್ಲಿಷ್ ಭಾಷೆಯ ಮೇಲಿನ ಅವರ ಅಪಾರ ಪ್ರಭುತ್ವದ ಮೂಲಕ ತಮ್ಮ ಆ ‘ಸತ್ಯದರ್ಶನ’ವನ್ನು ಸುಮಾರು ಆರು ದಶಕಗಳ ಕಾಲ ಪರಿವ್ರಾಜಕರಂತೆ ಜಗತ್ತಿನಲ್ಲಿ ಸುತ್ತಿ ತಮ್ಮ ಬಳಿ ಬಂದವರಿಗೆಲ್ಲ ಹಂಚಿದರು. ಜೀವನದ ವಿವಿಧ ರಂಗಗಳ ಖ್ಯಾತ, ವಿಖ್ಯಾತ ಸಾಧಕರು ಅವರೊಡನೆ ಸಂವಾದ ಅಥವಾ ಮಾತಿನ ಮೌನ ಶ್ರವಣಗಳ ಮೂಲಕ ಬೆಳಕು ಕಂಡುಕೊಂಡಿದ್ದನ್ನು ಕಾಣುತ್ತೇವೆ.ಹೊಸದೇನನ್ನು ನಾನು ಹೇಳುತ್ತಿಲ್ಲ ಎಂದು ವಿನಯದಿಂದ ಹೇಳುತ್ತಿದ್ದ ಜೆ.ಕೆ. ಅವರಿಗೆ ಆ ‘ಅತೀತ’ವಾದದ್ದು ‘ಅನುಭವ’ಕ್ಕೆ ಬಂದಾಗ ಅದೇ “ಸತ್ಯ, ದೇವರು, ಪ್ರೇಮ, ಬ್ರಹ್ಮ ಚೈತನ್ಯ” ಇತ್ಯಾದಿ ಎಲ್ಲವೂ ಹೇಗೆ ಆಗಿರುತ್ತದೆ- ಕೇವಲ ಶಬ್ದಗಳಾಗಿ ಅಲ್ಲ, ಶಬ್ದದಾಚೆಗಿನ ‘ನಿಜ’ವಾಗಿ ಎಂದು ತೋರಿಸುವ ಶಕ್ತಿಯಿದ್ದಿತ್ತು. ಅದು ಮೌನ ವ್ಯಾಖ್ಯೆಯಾಗಿರುತ್ತಿತ್ತು. ಸರಳವಾದ ಸಂವೇದನಾ ಪೂರ್ಣವಾದ ಸಂವಾದ ಪ್ರೀತಿಯಿಂದ ಕೂಡಿದ ಸಂವಾದದ ಮೂಲಕ ಜೆ. ಕೆ. ಯವರು ‘ಸತ್ಯ’ ಅನುಭವಕ್ಕೆ, ಅರಿವಿಗೆ ಬರುವಂತೆ ಮಾಡುತ್ತಾರೆ.

ಮನುಷ್ಯನ “ಧೀ” ಶಕ್ತಿಯನ್ನು ಜಾಗೃತಗೊಳಿಸುವ ವಿಧಾನ ಜೆ ಕೆ ಅವರ “ದರ್ಶನ”ದ ಕೇಂದ್ರ ತತ್ವ. ‘ಧೀ’ ಶಕ್ತಿ ಎಂದರೆ ‘ಬುದ್ಧಿ’ಶಕ್ತಿ ಮಾತ್ರವಲ್ಲ, ಬುದ್ಧಿಶಕ್ತಿಯದೋ ವಿಶ್ಲೇಷಣೆ, ಕಾರ್ಯ ಮಾಡುವ ಸಾಮರ್ಥ್ಯ. ಶರೀರ ಇಂದ್ರಿಯಗಳು ಮನಸ್ಸು ಬುದ್ಧಿ ಇವುಗಳ ಆಚೆಗೂ ವಿಸ್ತಾರಗೊಂಡಿದೆ ‘ಧೀ’ ಶಕ್ತಿ. ಧೀ ಶಬ್ದದ ಮೂಲ-ಧೃತಿ, ಧ್ಯಾನ, ಧಾರಣ, ಧರಿತ್ರಿ, ಧರ್ಮ… ಹೀಗೆ ತುಂಬಾ ವ್ಯಾಪಕ ಅರ್ಥದ ಅಂತರಂಗದ ಚೈತನ್ಯ. ಈ ಧೀಶಕ್ತಿ .ಇದು ಸೀಮಿತವಾಗಿ ಯಾಂತ್ರಿಕವಾಗಿ ಕಾರ್ಯ ನಿರ್ವಹಿಸುವಂತಹದಲ್ಲ. ಈ ಮೇಲೆ ಹೆಸರಿಸಿದ ವಿವಿಧ ಅಂತರ್ಯದ ಶಕ್ತಿಗಳಂತೆ ಇದು ಅಪರಿಮಿತವೂ, ಅನುಪಮ ಸೀಮಾತೀತವೂ ಸದಾ ಸೃಜನಶೀಲವೂ ಆಗಿರುವಂಥ ಅಸಾಧಾರಣವಾದ ಮನುಷ್ಯನ ಸುಪ್ತ ಚೈತನ್ಯ ಧಾರೆ. ಜಾಗೃತ ಸ್ವಪ್ನ ಸ್ತರಗಳ ಮೀರಿ ಅಳತೆಗೆ ನಿಲುಕದ ಈ ಶಕ್ತಿಧಾರೆಯೇ ಜೀವಿಯ “ಅಸ್ತಿತ್ವ” ದ ಆಧಾರ. ಇದನ್ನು ಎಚ್ಚರಗೊಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯದೇ ಹೊರತು ಹೊರಗಿನ ಯಾವುದೇ ಬಗೆಯ ಅವಲಂಬನಗಳದ್ದಲ್ಲ.ಈ ‘ಶಬ್ದ’ಕ್ಕೆ ನಿಲುಕದ ಅಂತಃಸತ್ವವನ್ನು ಅದರ ವೈವಿಧ್ಯಮಯ ಸೃಜನಶೀಲ ಸಾಮರ್ಥ್ಯ, ಸೊಗಸುಗಳನ್ನು ಆಯಾ ವ್ಯಕ್ತಿ ಮಾತ್ರ ಸರಿಯಾಗಿ, ಸಮಗ್ರವಾಗಿ ಅನುಭವಿಸಿ ಅರಿಯಬಲ್ಲ, ಕಾಣಬಲ್ಲ. ತನ್ಮೂಲಕವೇ ತನ್ನ ಜೀವನ, ಜೀವನದ ಅರ್ಥಪೂರ್ಣ ವಿಕಸನಕ್ಕೆ ಧೈರ್ಯದಿಂದ ಅಡಿಯಿಡಬಲ್ಲ. ಜೆ ಕೆ ಅವರು ಅರಿವು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನಾವು ನಾವೇ ತಿಳಿದುಕೊಳ್ಳುವ ರೀತಿಯನ್ನು ನಿರೂಪಿಸುವುದು ಹೀಗೆ:

ನಮ್ಮನ್ನು ನಾವು ಅರಿತು ಕೊಳ್ಳುವುದು ಎಂದರೆ- ಈ ಜಗತ್ತಿನೊಂದಿಗಿನ ನಮ್ಮ ಸಂಬಂಧಗಳನ್ನು ಅರಿಯುವುದು. ಅದು ಕೇವಲ ವಿಚಾರ ಹಾಗೂ ಜನರ ಜಗತ್ತಿನೊಂದಿಗೆ ಮಾತ್ರವಲ್ಲ ನಮ್ಮ ಸುತ್ತಲಿನ ನಿಸರ್ಗದ ಹಾಗೂ ನಾವು ಹೊಂದಿರುವ ವಸ್ತುಗಳ ಜೊತೆಗೆ ನಮಗೆ ಇರುವ ಸಂಬಂಧಗಳನ್ನೂ ಅರಿಯುವುದು. ಈ ಅರಿಯುವಿಕೆಗೆ ವಿಶೇಷ ತಜ್ಞತೆ ಬೇಕಾಗುತ್ತದೆ ಎಂದೇನೂ ಇಲ್ಲ.ಆದರೆ ಅತ್ಯಂತ ಅವಶ್ಯವಾಗಿ ಬೇಕಾದದ್ದು ಬದುಕನ್ನು ಇಡಿಯಾಗಿ ಸಮಗ್ರವಾಗಿ ಗಮನಿಸುವಿಕೆ ಅಥವಾ ಅರಿಯುವಿಕೆ.
ನಾವು ನಮ್ಮ ಜ್ಞಾನೇಂದ್ರಿಯಗಳ ಮೂಲಕ ಸುತ್ತಲಿನ ಜಗತ್ತನ್ನು ಅರಿಯುತ್ತೇವಷ್ಟೇ. ಹೂಗಳ ಬಣ್ಣ ಆಕಾರ, ಗುಂಯ್‌ಗುಡುತ್ತಿರುವ ಭೃಂಗಗಳು, ಮುಳುಗುತ್ತಿರುವ ಬಂಗಾರ ಬಣ್ಣದ ಸೂರ್ಯ, ರಂಗುರಂಗಿನ ಮೋಡಗಳು ಹೊಸದಾಗಿ ಅರಳಿದ ಮಲ್ಲಿಗೆಯ ಘಮ ಘಮ ತಂಪಾಗಿ ಬೀಸುತ್ತಿರುವ ಮಂದಗಾಳಿ ಇತ್ಯಾದಿ ಸಾವಿರಾರು ಬಗೆಯ ಶಬ್ದ ರೂಪ ರಸ ವಾಸನೆ ಸ್ಪರ್ಶಗಳನ್ನು ಸ್ಥೂಲ ಹಾಗೂ ಸೂಕ್ಷ್ಮರೂಪಗಳಲ್ಲಿ ಅರಿಯುತ್ತಿರುತ್ತೇವಷ್ಟೇ.

ಅದೇ ರೀತಿ ಈ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುವ ಈ ದೇಹವನ್ನು ನಾವು ಅರಿಯಬಲ್ಲೆವು. ಈ ಎಲ್ಲ ಗ್ರಹಿಕೆಗಳು ಮೇಲ್ಪದರ ಮಟ್ಟದಲ್ಲೇ ಇದ್ದರೆ ಯಾವ ಗೊಂದಲವೂ ಇಲ್ಲ. ಮಲ್ಲಿಗೆ, ಮಲ್ಲಿಗೆ- ಮಟ್ಟಿ, ಮಲ್ಲಿಗೆ ಹೂಗಳಿಗೆ ಮುತ್ತಿಡುವ ದುಂಬಿಗಳು ಎಲ್ಲ ಅಲ್ಲಿವೆ ಎಂದು ಗ್ರಹಿಸಿದರೆ ಸರಿ, ನಾವು ಬಯಸಿರಲಿ ಬಯಸದಿರಲಿ, ಅವು ಅಲ್ಲಿವೆ; ಹೋಲಿಕೆ ಬೇಕು-ಬೇಡಗಳ ತುಯ್ದಾಟ ಇತ್ಯಾದಿ ಏನೂ ಇಲ್ಲದೆ ನಾವು ಅವುಗಳೊಡನೆ ಮಾನಸಿಕವಾಗಿ ಯಾವ ರೀತಿಯಲ್ಲೂ ತಳುಕು ಹಾಕಿಕೊಳ್ಳದೆಯೂ ಅವು ನಮ್ಮೆದುರೇ ಇವೆ. ಇವೆಲ್ಲ ಬಾಹ್ಯ ಇಂದ್ರಿಯ- ಗ್ರಹಿಕೆ ಅಥವಾ ಅರಿವು. ಇದೇ ತರಹ ಮಿನುಗುತ್ತಿರುವ ತಾರೆ, ಆಳವಾದ ಸಾಗರ, ಉತ್ತುಂಗ ಶಿಖರ, ಅಂತಿಮ ಹಂತದಲ್ಲಿರುವ ವೈಜ್ಞಾನಿಕ ನಿರೀಕ್ಷೆ ಇತ್ಯಾದಿಗಳೆಲ್ಲವನ್ನೂ ಸೇರಿಸಬಹುದು. ಹೀಗೆ ವಾಸ್ತವವಾಗಿ ಮೂರ್ತರೂಪದಲ್ಲಿ ಈ ಜಗತ್ತಿನಲ್ಲಿ ಏನೇನು ‘ಇವೆ’ಯೋ ಅವೆಲ್ಲವನ್ನೂ ನಾವು ಹೀಗೆ ಗಮನಿಸಬಹುದು, ಅರಿಯಬಹುದು.

ಈಗ ಎರಡನೆಯ ಹಂತ: ಇವುಗಳೆಲ್ಲದರ ಬಗ್ಗೆ ನೀವೇನು ಯೋಚಿಸುತ್ತೀರಿ? ನಿಮ್ಮ ಅನಿಸಿಕೆ ಏನು? ಎನ್ನುವಂತಹುದು ನಿಮ್ಮ ಮಾನಸಿಕ ಪ್ರತಿಸ್ಪಂದನ. ಇದಕ್ಕೆ ವಿಚಾರ ಅಥವಾ ಭಾವನೆ ಎಂದು ಕರೆಯುತ್ತೇವೆ. ವಸ್ತುವಿನ ಬಗ್ಗೆ ನಿಮ್ಮ ಇಂದ್ರಿಯಗಳ ಮೂಲಕ ಮಾಡಿದ ಗ್ರಹಿಕೆ (ಈ ಮೇಲಿನ ಪ್ಯಾರಾದಲ್ಲಿ ವಿವರಿಸಿದ ಹಾಗೆ) ಸರಳವಾದ ವಿಷಯ.’ಬಾಗಿಲು’ ಇದೆ, ಆದರೆ ಆ ‘ಬಾಗಿಲ’ ವರ್ಣನೆ ಬಾಗಿಲು ಅಲ್ಲ. ನೀವು ಭಾವನಾತ್ಮಕವಾಗಿ ಬಾಗಿಲ ವರ್ಣನೆಗೆ ಆರಂಭಿಸಿದರೆ ಅದರಲ್ಲಿ ನಿಜವಾದ ‘ಬಾಗಿಲು’ ಕಾಣುವುದಿಲ್ಲ. ಆ ವಿವರಣೆ ಒಂದು ಶಬ್ದ ಅಥವಾ ವೈಜ್ಞಾನಿಕ ವರ್ಣನೆ ಅಥವಾ ಭಾವನಾತ್ಮಕ ಪ್ರತಿಕ್ರಿಯೆ- ಯಾವುದೇ ಇರಬಹುದು ಆದರೆ ಅದಾವುದೂ ಬಾಗಿಲು ಅಲ್ಲ. ಈ ವಿಷಯವನ್ನು ಚೆನ್ನಾಗಿ ಅರಿತು ಕೊಳ್ಳದಿದ್ದರೆ ಮುಂದೆ ಹೆಚ್ಚೆಚ್ಚು ಗೊಂದಲವೇ ಉಂಟಾಗುತ್ತದೆ; ವಿವರಣೆ ಎಂದೂ ವಿವರಿಸಿದ ವಸ್ತು ಅಲ್ಲ.

ಮರ ಹೂ ದುಂಬಿ ಬಾಗಿಲು ಹಕ್ಕಿ- ಇತ್ಯಾದಿಗಳು ಇರುವುದರ ಅರಿವು ಜ್ಞಾನೇಂದ್ರಿಯಗಳ ಮೂಲಕ ಉಂಟಾಗಿ ಮನಸ್ಸಿನಲ್ಲಿದೆ ಅವುಗಳ ಬಗ್ಗೆ ನಮ್ಮ ಪ್ರತಿಕ್ರಿಯೆ ಅದು ವಿಚಾರ ಭಾವನೆ ಅನಿಸಿಕೆ ಆಗಿ ಕೂಡ ಇದೆ ಈ ಪ್ರತಿಸ್ಪಂದನೆ ಅಥವಾ ಪ್ರತಿಕ್ರಿಯೆಯ ಅರಿವನ್ನು ಎರಡನೆಯ ಮಟ್ಟದ ಅರಿವು ಎನ್ನಬಹುದು ಎಷ್ಟೋ ಬಾರಿ ನಾವು ಈ ಎರಡನೇ ಬಗೆಯ ಅರಿವನ್ನು, ಪ್ರತಿಕ್ರಿಯೆ ಅಥವಾ ಪ್ರತಿಸ್ಪಂದನೆಯನ್ನು ಗಮನಿಸಿರುವುದಿಲ್ಲ. ಈ ಎರಡೂ ಬಗೆಯ ಅರಿವು ಒಂದೇ ಕಾಲದಲ್ಲಿ ಆಗುವಂತಹುದು. ಹೊರಗಿನ ಮತ್ತು ಒಳಗಿನ ಅರಿವು ಎಂದು ವಿಂಗಡಿಸಲು ಬರದಂತಹುದು. ಮರವನ್ನು ನೋಡುತ್ತಿರುವ ಅರಿವು ಮಾತ್ರ ಇದ್ದು ಮಾನಸಿಕವಾಗಿ ಒಳಗೊಳ್ಳುವಿಕೆ ಇರದಿದ್ದಾಗ, ಸಂಬಂಧದಲ್ಲಿ ಒಡಕು ಅಥವಾ ವಿಭಜನೆ ಇರುವುದಿಲ್ಲ.ಯಾವಾಗ ಆ ಮರಕ್ಕೆ ಮನಸ್ಸಿನ ಪ್ರತಿಕ್ರಿಯೆ ಇರುತ್ತದೆಯೋ, ಆ ಪ್ರತಿಕ್ರಿಯೆ ಗತಕಾಲದ ಸ್ಮೃತಿಯಾಗಿ, ಹಳೆಯ ಅನುಭವವಾಗಿ, ಮನಸ್ಸನ್ನು ಬಂಧಿಸುತ್ತಿರುವುದರಿಂದ, ಆ ಸಂಬಂಧದಲ್ಲಿ ಒಡಕು ಅಥವಾ ವಿಭಜನೆಯ ಉಂಟಾಗುತ್ತದೆ. ಮರದ ಅರಿವು ಅಷ್ಟೇ ಇದ್ದಾಗ ಅದರ ಮೇಲೆ ಭಾಷ್ಯ ಟೀಕೆ, ಏನೂ ಇರುವುದಿಲ್ಲ. ಯಾವಾಗ ಮನಸ್ಸಿನ ಪ್ರತಿಕ್ರಿಯೆ ಮರದ ಬಗ್ಗೆ ಸೇರುತ್ತದೆ/ ಸೇರುವುದಿಲ್ಲ, ಸುಂದರವಾಗಿದೆ/ ಸುಂದರವಾಗಿಲ್ಲ, ಇತ್ಯಾದಿ ಇತ್ಯಾದಿ ಹುಟ್ಟಿಕೊಂಡಿತೋ ಆಗ ಆ ಅರಿವಿನಲ್ಲಿ ‘ನಾನು’ ಮತ್ತು ‘ನಾನಲ್ಲದ್ದು’ ಎಂಬ ವಿಭಾಗವಾಗುತ್ತದೆ. ‘ನಾನು’ ಮನಸ್ಸಿನ ಪ್ರತಿಕ್ರಿಯೆ, ನೋಡುತ್ತಿರುವ ಮರದಿಂದ ನಾನಲ್ಲದ್ದರಿಂದ ಭಿನ್ನವಾಗಿರುತ್ತದೆ.

ಹೀಗೆ ಮನಸ್ಸಿನ ಪ್ರತಿಕ್ರಿಯೆಯೇ ಎಲ್ಲ ಸಂದರ್ಭಗಳಲ್ಲಿಯೂ ‘ನಾನು’ ‘ನಾನಲ್ಲದ್ದು’ ಎಂಬುದರ ಒಡಕಿನ ಮೂಲ. ಇದೇ ನಾವು ನಮ್ಮ ಜಗತ್ತಿನೊಡನೆ ಇರಿಸಿಕೊಂಡಿರುವ ಸಂಬಂಧಗಳ ಸ್ವರೂಪ. ಇದು ವ್ಯಕ್ತಿ ಹಾಗೂ ಸಮುದಾಯಗಳನ್ನು ನಾವು ಸೃಷ್ಟಿಸುವ ರೀತಿ. ಜಗತ್ತನ್ನು ಅದು ಇರುವಹಾಗೆ ನೋಡದೇ, ಅದು ನೆನಪಿನಲ್ಲಿ ನನ್ನೊಂದಿಗಿನ ವಿವಿಧ ಸಂಬಂಧಗಳಲ್ಲಿ ಇರುವ ಹಾಗೆ ನೋಡುತ್ತೇವೆ.

ಬದುಕು ಎಂದರೆ ಸಂಬಂಧಗಳು. ಸದಾ ಚಲನಶೀಲವಾಗಿರುವ ಈ ಸಂಬಂಧಗಳನ್ನು ಅರಿಯಲು ಸಂವೇದನಾಶೀಲವಾದ, ಮೃದು ಕ್ರಿಯಾಶೀಲ ತಾಟಸ್ಥ್ಯ ದಿಂದ ಇರುವ ಅರಿವಿನೆಚ್ಚರ ಇರಲೇಬೇಕಾಗುತ್ತದೆ. ನಮ್ಮೊಳಗಿನ ಸಂಘರ್ಷ, ಯಾತನೆ, ದುಃಖಗಳನ್ನು ನಾವೇ ಬಗೆಹರಿಸಿಕೊಳ್ಳಲು ಅವುಗಳ ನಿಜಸ್ವರೂಪದ ದರ್ಶನ ಮಾಡಿಕೊಳ್ಳಬೇಕಿದ್ದರೆ, ಈ ಅರಿವು, ಶ್ರೇಷ್ಠತಮಮಟ್ಟದ ಧೀಮಂತಿಕೆ ಮಾತ್ರ ಸಹಾಯ ನೀಡಬಲ್ಲದು.

ಪ್ರೊಫೆಸರ್, ಡಾಕ್ಟರ್, ಇಂಜಿನಿಯರ್, ಉದ್ಯಮಿ, ವ್ಯಾಪಾರಿ, ಪುರೋಹಿತ ಇತ್ಯಾದಿ ಏನೇ ಆಗಲಿಕ್ಕೂ ವಿಶೇಷ ತಜ್ಞತೆ, ತರಬೇತಿ ಬೇಕಾಗುತ್ತದೆ. ಬುದ್ಧಿವಂತಿಕೆಯೂ ಬೇಕಾಗುತ್ತದೆ. ಆದರೆ ಸತ್ಯ ದೇವರು ಮುಂತಾದವುಗಳನ್ನು ಅರಿಯಲು ಬೇಕಾಗುವ ಈ ಶ್ರೇಷ್ಠತಮ ಧೀಮಂತಿಕೆಯನ್ನು ಯಾವುದೇ ಬಗೆಯ ಶಿಸ್ತಿನಿಂದ, ರೂಢಿಯಿಂದ, ವಿಶೇಷ ತಜ್ಞತೆ ಗಳಿಸಿಕೊಳ್ಳುವುದರ ಮೂಲಕ ಕರಗತ ಮಾಡಿಕೊಳ್ಳಲಿಕ್ಕೆ ಆಗುವುದಿಲ್ಲ. ನಮ್ಮ ವಿಚಾರ- ಭಾವನೆಗಳನ್ನೆಲ್ಲ ಎಚ್ಚರಿಕೆಯಿಂದ,ತಟಸ್ಥವಾಗಿ, ಕ್ಷಣಕ್ಷಣಕ್ಕೂ ಗ್ರಹಿಸುತ್ತ ಹೋಗಬೇಕು. ಇದು ನಿದ್ರೆಯಿಂದ ಎಚ್ಚರಿರುವಾಗ ಮಾತ್ರ ಮಾಡುವಂಥಹದಲ್ಲ. ಏಕೆಂದರೆ ಆಳಕ್ಕೆ ಹೋದಂತೆಲ್ಲ ನಾವು ಕನಸು ಕಾಣುವುದನ್ನು ಕಾಣಬಹುದು. ಕನಸೆಂದು ಭಾಷಾಂತರಿಸುವ ಎಲ್ಲ ಬಗೆಯ ಸಂಕೇತಗಳನ್ನೂ ಕಿತ್ತೊಗೆಯಬಹುದು. ಹೀಗೆ ಗುಪ್ತವಾಗಿ ಅರಿತಿರುವ ಎಲ್ಲವನ್ನೂ ಬಾಗಿಲು ತೆರೆದು ಅರಿಯುತ್ತೇವೆ. ಆದರೆ ಗೊತ್ತಿಲ್ಲದ್ದನ್ನು ಅರಿಯಲು ಬಾಗಿಲಾಚೆ ಬಹು ದೂರ ಹೋಗಬೇಕು ಅದು ಖಂಡಿತ ಕಷ್ಟವಾದದ್ದು. ಇದು ಗತ ಅನುಭವದ ಸ್ಮೃತಿಯಾಗಿರುವ, ಭೂತವೇ ಆಗಿರುವ ಮನಸ್ಸಿನಿಂದ ಶಕ್ಯವಿಲ್ಲ. ಆದ್ದರಿಂದ ಸತ್ಯದ -ಗೊತ್ತಿಲ್ಲದ ಆ ಅದರ ಅರಿವು ಮನಸ್ಸಿಂದ ಶಕ್ಯವಿಲ್ಲ. ಮನಸ್ಸಿನ ಸಕಲ ಪ್ರಕ್ರಿಯೆ ಅರಿತಾಗ ಮಾತ್ರ ಗೊತ್ತಿಲ್ಲದ್ದು ವೇದ್ಯವಾಗಲು, ಅರಿವಿಗೆ ಬರಲು ಶಕ್ಯ.


ಅರಿವು ಎಂದರೆ ಆತ್ಮಪರೀಕ್ಷೆ (introspection) ಎಂಬ ಭಾವನೆ ಉಂಟಾಗಬಹುದು. ಆದರೆ ಅವು ಬೇರೆ-ಬೇರೆ. ತನ್ನನ್ನೇ ತಾನು ಪರೀಕ್ಷಿಸಿಕೊಳ್ಳುವ ಆತ್ಮನಿರೀಕ್ಷಣೆ, ಒಂದು ಸುಧಾರಣೆ ಅಥವಾ ಬದಲಾವಣೆ ತರುವ ಸಲುವಾಗಿ ಮಾಡುವ ಕ್ರಿಯೆ.ಆದ್ದರಿಂದ ಅದಕ್ಕೊಂದು ಉದ್ದೇಶವಿದೆ. ಈಡೇರಿಸಿಕೊಳ್ಳುವ ಆಸೆ ಇದೆ ಸಿಟ್ಟು ಬಂದಾಗ ಆತ್ಮನಿರೀಕ್ಷಣೆ ಆರಂಭಿಸುವುದು,ಆ ಸಿಟ್ಟಿನಿಂದ ಪಾರಾಗಬೇಕು, ಸಿಟ್ಟನ್ನು ಬದಲಾಯಿಸಬೇಕು ಎಂಬ ಉದ್ದೇಶಕ್ಕಾಗಿ. ಈ ಗುರಿ ಸಾಧ್ಯವಾಗದಿದ್ದಾಗ ಮಾನಸಿಕ ಖಿನ್ನತೆ ಅಥವಾ ಚಿಂತಾಕುಲತೆ ಉಂಟಾಗುವುದು ಸಹಜ. ನಂತರ ಇದರ ವಿರುದ್ಧ ಹೋರಾಡಬೇಕಾಗುತ್ತದೆ-ಮನಸ್ಸು. ಹೀಗೆಯೇ ಸಂಘರ್ಷ ಮುಂದುವರಿಯುತ್ತದೆ.

ಆತ್ಮನಿರೀಕ್ಷಣೆ ಒಟ್ಟಿನಲ್ಲಿ ‘ಇದ್ದುದನ್ನು’ ಬದಲಾಯಿಸುವ ಬೇರೆ ‘ಇಲ್ಲದ್ದನ್ನು’ ಮಾಡುವ ತರುವ ಪ್ರಕ್ರಿಯೆ. ಇದು ಸಹಜವಾಗಿಯೇ ಈಡೇರಲಾಗದ ಆಸೆಯಾದ್ದರಿಂದ ಮನಸ್ಸು ಆಶಾಭಂಗಕ್ಕೆ ಗುರಿಯಾಗುವುದು ಸ್ವಾಭಾವಿಕ. ಅದರ ಪರಿಣಾಮ ಚಿಂತಾಕುಲತೆ. ಕೊನೆಗೂ ಈ ಆತ್ಮ ನಿರೀಕ್ಷಣೆಯು ‘ಬಿಡುಗಡೆ’ಗೊಳಿಸುವಂತಹದಲ್ಲ.

ಆತ್ಮನಿರೀಕ್ಷಣೆಯು ತನ್ನ ಪ್ರಗತಿಯಲ್ಲಿ ತೊಡಗಿಸಿಕೊಂಡಿರುವುದರಿಂದ, ತನ್ನಲ್ಲೇ ಗಮನ ಕೇಂದ್ರೀಕರಿಸಿಕೊಂಡಿರುವ ಪ್ರಕ್ರಿಯೆ. ತದ್ವಿರುದ್ಧವಾಗಿ ‘ಅರಿವು’ ತಟಸ್ಥ ಸ್ಥಿತಿಯಲ್ಲಿ ಖಂಡನೆ ಪ್ರಚೋದನೆ ದೃಢಪಡಿಸುವಿಕೆ, ಪ್ರತಿಪಾದನೆ, ವಿಮರ್ಶೆ- ಇತ್ಯಾದಿ ಏನೂ ಇಲ್ಲದೆ ಸ್ತಬ್ಧವಾಗಿ ನೋಡುವ ಪ್ರಕ್ರಿಯೆ ; ತನ್ನನ್ನು ತಾನು ಕೊನೆಗೊಳಿಸುವ ಪ್ರಕ್ರಿಯೆ.


ಅರಿವಿಗೆ ಸತ್ಯ ದರ್ಶನಕ್ಕೆ ‘ಜ್ಞಾನ’ ಅಡ್ಡಿಯಾಗುತ್ತದೆ. ಒಂದು ಹಂತದವರೆಗೆ ಜ್ಞಾನ ಅತ್ಯಂತ ಅವಶ್ಯಕ.ನಾವು ಭೌತಿಕ ಪ್ರಪಂಚದಲ್ಲಿ ಸಾಧಿಸಿರುವ ವೈಜ್ಞಾನಿಕ ಪ್ರಗತಿಗೆ, ವಿವಿಧ ಕ್ಷೇತ್ರಗಳಲ್ಲಿಯ ‘ಜ್ಞಾನ’ ಸಾಧನೆ ಅತ್ಯಂತ ಅಮೂಲ್ಯವಾದದ್ದೇ. ಆದರೆ ಈ ‘ಜ್ಞಾನ’ ಬದುಕಿನ ಒಂದು ‘ಅಂಶ’ ಮಾತ್ರ. ಅದೇ ‘ಸಮಸ್ತ’ ಬದುಕಲ್ಲ. ಆದರೆ ‘ಅಂಶ’ವೇ ಸಮಸ್ತವೆಂದು ಎಲ್ಲಕ್ಕಿಂತಲೂ ಮಹತ್ವದ ಸ್ಥಾನ ಕೇಳಲಾರಂಭಿಸಿದಾಗ ಬದುಕು ಟೊಳ್ಳಾಗಲಾರಂಭಿಸುತ್ತದೆ. ನಿರುತ್ಸಾಹ ತುಂಬುವ ಯಾಂತ್ರಿಕ ದಿನಚರಿಯಾಗುತ್ತದೆ. ಆದ್ದರಿಂದ ‘ಜ್ಞಾನ’ ಎನ್ನುವಂಥದ್ದು ಎಷ್ಟೇ ವಿಶಾಲವೂ, ಜಾಣ್ಮೆಯಿಂದ ಕೂಡಿದ್ದೂ ಆಗಿದ್ದರೂ ಸಹ ಮಾನವೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗುತ್ತದೆ. ಏಕೆಂದರೆ ‘ಸತ್ಯ’ವನ್ನು ಅರಿಯುವಲ್ಲಿ ಈ ‘ಜ್ಞಾನ’ ಸಹಾಯ ಮಾಡುವುದಿಲ್ಲ. ಕಾರಣವಿಷ್ಟೇ ಸತ್ಯ ಯಾವತ್ತೂ ‘ಜೀವಂತ’ ‘ನವನವೀನ’ವಾಗಿರುವಂತಹದು. ಈ ‘ಜೀವಂತ’ ‘ನವನವೀನ’ ಶಬ್ದಗಳು ನಿಂತಿರದಂತಹ, ಸತ್ತು ಹೋಗಿರದಂತಹ, ಮನಸ್ಸಿನಲ್ಲಿ ನೆಟ್ಟಿರುವಂತಹ ಯಾವುದೋ ನಿರ್ದಿಷ್ಟ ಸಂಗತಿ ವಿಷಯಗಳ ಸ್ಥಿತಿಯನ್ನು ಸೂಚಿಸುವಂತಹವು ಅಷ್ಟೇ. ಕ್ಷಣದಿಂದ ಕ್ಷಣಕ್ಕೆ ಹೊಸದಾಗಿ ಸತ್ಯವನ್ನು ಅರಿಯಬೇಕಾಗಿರುತ್ತದೆ. ಅದು ಒಂದನ್ನೇ ಪುನಃ ಪುನಃ ಅನುಭವಿಸುವಂತಹದಲ್ಲ. ನಿರಂತರತೆಯೂ ಅಲ್ಲ; ಸಾಧಿಸಬೇಕಾದ ಗುರಿಯೂ ಅಲ್ಲ; ಮನಸ್ಸು ಬೆಳೆದು ತಲುಪಬೇಕಾದ ಕೊನೆಯೂ ಅಲ್ಲ ಅದು ಕಾಲದ ಪರಿಧಿಯ ಆಚೆಗಿನದು. ಈ ಕ್ಷಣದಲ್ಲಿ ‘ಇದ್ದುದನ್ನು’ ಇದ್ದ ಹಾಗೇ ಆಮೂಲಾಗ್ರ ಗಮನಿಸಿ ಅರಿಯುವಂಥದ್ದು.