ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಿಕಾಗೋ ಸಂದೇಶದ ಭ್ರಾತೃತ್ವ ಕಥನ

ಡಾ. ಎಚ್.ಎನ್. ಮುರಳೀಧರ
ಇತ್ತೀಚಿನ ಬರಹಗಳು: ಡಾ. ಎಚ್.ಎನ್. ಮುರಳೀಧರ (ಎಲ್ಲವನ್ನು ಓದಿ)

ಸ್ವಾಮಿ ವಿವೇಕಾನಂದರು 1893ರಲ್ಲಿ ಶಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸಗಳಿಗೆ ಈಗ ನೂರಿಪ್ಪತ್ತೈದು ತುಂಬಿದೆ. ಶಿಕಾಗೋ ಉಪನ್ಯಾಸವೆಂದಾಕ್ಷಣ ನಮ್ಮ ಸ್ಮರಣೆಗೆ ಬರುವುದು ಅಮೆರಿಕದ ಸೋದರ ಸೋದರಿಯರೆ…(Sisters and Brothers of America……) ಎಂಬ ಸಂಬೋಧನೆ; ಇನ್ನು ಕೆಲವೊಮ್ಮೆ, ಆ ಸಂಬೋಧನೆಗೆ ದೊರೆತ ಸುದೀರ್ಘ ಕರತಾಡನ. ಇವು ಒಂದು ರೀತಿಯಲ್ಲಿ ಅವರ ಮಾತುಗಳಿಗೆ ಒಂದು ಜಾನಪದೀಯ ಸ್ವರೂಪವನ್ನೇ ಒದಗಿಸಿಬಿಟ್ಟಿವೆ. ಸಮಕಾಲೀನ ಸನ್ನಿವೇಶದಲ್ಲಿ ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳಿಗೇ ಒಂದು ಬಗೆಯ ಜಾನಪದೀಯತೆ ಪ್ರಾಪ್ತವಾಗಿರುವುದರಿಂದ ಇದು ಸಹಜವೂ ಆಗಿದೆ. ಆದರೆ ಇವೆಲ್ಲದರ ನಡುವೆಯೇ ನಾವು ಅವರ ಉಪನ್ಯಾಸಗಳ ಪಠ್ಯಕ್ಕೆ ನೇರವಾಗಿ ಮುಖಾಮುಖಿಯಾಗುವ ಅಗತ್ಯವೂ ಇದೆ. ಇದು ಅವರನ್ನು ನಿರಂತರ ವರ್ತಮಾನಕ್ಕೆ ಅನ್ವಯವಾಗುವಂತೆ ಮಾಡುವ ಒಂದು ಶೋಧದ ದಾರಿಯಾಗಿದೆ.


ಜನಪ್ರಿಯವಾದ ಗ್ರಹಿಕೆಯಲ್ಲಿ ನಾವು `ಶಿಕಾಗೋ ಉಪನ್ಯಾಸ’ ಎಂದು ಏಕವಚನದಲ್ಲಿ ವ್ಯವಹರಿಸಿದರೂ ಅವರು ಸಮ್ಮೇಳನದಲ್ಲಿ ಆರು ಸಂದರ್ಭಗಳಲ್ಲಿ ಆಡಿದ ಮಾತುಗಳು ದಾಖಲಾಗಿವೆ.

1. ಸ್ವಾಗತಕ್ಕೆ ಸ್ಪಂದನೆ (ಸೆಪ್ಟೆಂಬರ್, 11)

2. ಭಿನ್ನಮತಕ್ಕೆ ಕಾರಣ (ಸೆಪ್ಟೆಂಬರ್, 15)

3. ಹಿಂದೂಧರ್ಮದ ಮೇಲಿನ ಪ್ರಬಂಧ (ಸೆಪ್ಟೆಂಬರ್, 19)

4. ಧರ್ಮವು ಭಾರತದ ತುರ್ತು ಅಗತ್ಯವಲ್ಲ (ಸೆಪ್ಟೆಂಬರ್, 20)

5. ಬೌದ್ಧಧರ್ಮವು ಹಿಂದೂಧರ್ಮದ ಸಾಫಲ್ಯ (ಸೆಪ್ಟೆಂಬರ್, 26)

6. ಅಂತಿಮ ಅಧಿವೇಶನದ ನುಡಿ (ಸೆಪ್ಟೆಂಬರ್, 27)

ಸಂವಾದದ ಮುಖವಾಣಿ

ಇವುಗಳಲ್ಲಿ ಮೊದಲನೆಯ ಉಪನ್ಯಾಸವು ಮುಖ್ಯವಾಗಿ ತನ್ನ ಸಂಬೋಧನೆಯ ಕಾರಣದಿಂದಲೇ ಜನಮಾನಸದಲ್ಲಿ ಸ್ಮರಣೀಯವಾಗಿದೆ. ಹಾಗೆ ನೋಡಿದರೆ ಈ ಸಂಬೋಧನೆಗೊಂದು ರೂಪಕಾತ್ಮಕ ಮಹತ್ತ್ವವಿದೆ. ಏಕೆಂದರೆ ಇಲ್ಲಿ ಎರಡು ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕøತಿ-ನಾಗರಿಕತೆಗಳ ನಡುವಣ ಸಂವಾದವಿದೆ. ಇಲ್ಲಿಯವರೆಗೆ ಸಂವಾದಕ್ಕೆ ತೆರೆದುಕೊಳ್ಳದೆ ಪರಸ್ಪರ ವಿರುದ್ಧ ಧ್ರುವಗಳಂತಿದ್ದ ಸಂಸ್ಕೃತಿಗಳನ್ನು ಈ ಸಂಬೋಧನೆ ಮುಖಾಮುಖಿಯಾಗಿಸಿದೆ; ಭ್ರಾತೃತ್ವದ ಸೇತುವೆಯ ಮೂಲಕ ಈ ಜನಾಂಗಗಳನ್ನು ವಿಶಾಲವಾದ ಮಾನವತೆಯ ಪರಿಧಿಯಲ್ಲಿ ಒಗ್ಗೂಡಿಸಿದೆ. ಈ ಮುಖಾಮುಖಿಯ ಸ್ವರೂಪವನ್ನು ಸೋದರಿ ನಿವೇದಿತಾ ಅತ್ಯಂತ ಸಮರ್ಥವಾಗಿ ಗುರುತಿಸಿದ್ದಾರೆ. ಅಲ್ಲಿ ನೆರೆದಿದ್ದ ಸಭೆ ಎಲ್ಲ ಅರ್ಥಗಳಲ್ಲಿಯೂ ಪಾಶ್ಚಾತ್ಯ ಪ್ರಜ್ಞೆಯ ಪ್ರಾತಿನಿಧಿಕ ರೂಪವಾಗಿತ್ತು. ಅಲ್ಲದೆ ಸ್ವತಃ ಶಿಕಾಗೋ ನಗರವೇ ಐರೋಪ್ಯ ನಾಗರಿಕ ಪ್ರಜ್ಞೆಯ ಪ್ರವಾಹದ ಎಲ್ಲ ಧಾರೆಗಳನ್ನು ತನ್ನೊಳಗೆ ಸೇರಿಸಿಕೊಂಡು ಐತಿಹಾಸಿಕವಾಗಿಯೂ ಭೌಗೋಳಿಕವಾಗಿಯೂ ಈ ಪ್ರಾತಿನಿಧ್ಯಕ್ಕೆ ಅರ್ಹವಾಗಿತ್ತು. ಇಷ್ಟೆಲ್ಲದರ ಮೇಲೆ ಅದು ಬದುಕಿನ ಹೊಸದೊಂದು ಅರ್ಥಕ್ಕೆ ಹಸಿದು ಕುಳಿತಿತ್ತು. ಇಂತಹ ಸಭೆಗೆ ಮುಖಮಾಡಿ ನಿಂತ ಸ್ವಾಮಿ ವಿವೇಕಾನಂದರ ಹಿಂದಾದರೋ ಸಾವಿರಾರು ವರ್ಷಗಳಿಂದ ಹರಿದು ಬಂದ ಪೌರ್ವಾತ್ಯದ ಪ್ರಜ್ಞಾ ಪರಂಪರೆಯಿತ್ತು. ಮಾನವನ ಬದುಕಿನ ಸಾರ್ಥಕತೆಯ ಅನ್ವೇಷಣದ ಹಲವು ದಾರಿಗಳ ಹೆಜ್ಜೆ ಗುರುತುಗಳಿದ್ದವು. ಆ ಎಲ್ಲ ಸಾಧನೆ-ಸಿದ್ಧಿಗಳಿಗೆ ಸ್ವಾಮಿಜಿಯವರು ವಾಹಕ ಮಾತ್ರವಾಗಿ ನಿಂತಿದ್ದರು. ಒಬ್ಬ ವ್ಯಕ್ತಿಗಿಂತ ಹೆಚ್ಚಾಗಿ, ಸಮಗ್ರ ಭಾರತದ ಧಾರ್ಮಿಕ ಪ್ರಜ್ಞೆ, ಶತಮಾನಗಳಿಂದ ರೂಪುಗೊಳ್ಳುತ್ತ ಬಂದಿದ್ದ ಸಮಸ್ತ ಜನಸಮುದಾಯದ ಸಂದೇಶ ಅವರ ಮೂಲಕ ಮಾತನಾಡಿತು.1 ಹೀಗಾಗಿ ಆ ಸುಮುಹೂರ್ತದಲ್ಲಿ ಅಲ್ಲಿ ಸಂಭವಿಸಿದ್ದು ಎರಡು ಭೂಖಂಡಗಳ ನಡುವಣ ಸಂವಾದವೂ ಹೌದು.

ಇಷ್ಟರ ಮೇಲೆ ಈ ಸಂವಾದವೆನ್ನುವುದು ಸಂಬೋಧಿತ ಸಮುದಾಯದ ಅಗತ್ಯ ಮಾತ್ರವಾಗಿರದೆ ಸಂಬೋಧಕ ಸಮುದಾಯದ ಅಗತ್ಯವೂ ಆಗಿತ್ತು. ಏಕೆಂದರೆ ಪರಸ್ಪರ ಸಂಬೋಧಿಸಿಕೊಂಡಲ್ಲದೆ ಯಾವ ದಾರ್ಶನಿಕತೆಯೂ ವಿಶ್ವಾತ್ಮಕ ಸ್ವರೂಪವನ್ನು ಪಡೆಯಲಾರದು; ನಿರ್ದಿಷ್ಟ ಕಾಲದೇಶಗಳ ಗಡಿಗಳನ್ನು ದಾಟಿ ಸರ್ವಸಾಮಾನ್ಯತೆಯ ಸ್ತರಕ್ಕೆ ವಿಸ್ತರಿಸಲಾರದು; ಎಲ್ಲಕ್ಕಿಂತ ಮುಖ್ಯವಾಗಿ, ಮನುಷ್ಯ-ಮನುಷ್ಯರನ್ನು ಕೂಡಿಸಲಾರದು. ಹೀಗಾಗಿ ಸ್ವಾಮಿ ವಿವೇಕಾನಂದರ ಸಂಬೋಧನೆಯೆನ್ನುವುದು ಸ್ವಯಂ ಹಿಂದೂ ಧಾರ್ಮಿಕತೆಯೇ ತನ್ನನ್ನು ತಾನು ಮರುರೂಪಿಸಿಕೊಳ್ಳುವ ಸಾಂದರ್ಭಿಕತೆಯೂ ಆಗಿತ್ತು. ಸೋದರಿ ನಿವೇದಿತೆಯ ಮಾತುಗಳಲ್ಲಿ ಹೇಳುವುದಾದರೆ, ಸ್ವಾಮಿ ವಿವೇಕಾನಂದರು ಮಾತನಾಡಲು ಪ್ರಾರಂಭಿಸಿದಾಗ, ಅದು ಹಿಂದೂ ಧರ್ಮದ ಧಾರ್ಮಿಕತೆಯ ಬಗೆಗಿನ ಮಾತಾಗಿತ್ತು; ಆದರೆ ಅವರು ಮಾತುಗಳನ್ನು ಮುಗಿಸಿದಾಗ ಹಿಂದೂ ಧರ್ಮವೇ ಸೃಷ್ಟಿಯಾಗಿತ್ತು.2

ಈ ಹಿನ್ನೆಲೆಯಲ್ಲಿ ನೋಡಿದಾಗ ಸ್ವಾಮಿ ವಿವೇಕಾನಂದರು ಕೇವಲ ಹಿಂದೂ ಧರ್ಮವನ್ನು ವ್ಯಾಖ್ಯಾನಿಸದೆ, ಹಿಂದೂ ಧರ್ಮವನ್ನೂ ಒಳಗೊಂಡಂತೆ ಯಾವುದೇ ಧರ್ಮವು ತನ್ನ ದೇಶಕಾಲನಿಷ್ಠ ವಿಶಿಷ್ಟತೆಗಳನ್ನು ಉಳಿಸಿಕೊಂಡೂ ವಿಶ್ವಾತ್ಮಕ ಮಾನವತೆಯ ಪ್ರತಿಪಾದನೆಗೆ ಅನುಗುಣವಾಗಿ ವಿಸ್ತರಿಸಬೇಕಾದ ಅಗತ್ಯ ಹಾಗೂ ಅದರ ವಿಧಾನಗಳ ಬಗೆಯನ್ನು ವ್ಯಾಖ್ಯಾನಿಸಿದರೆಂದು ಹೇಳಬೇಕಾಗುತ್ತದೆ. ಈ ಪರಿಪ್ರೇಕ್ಷ್ಯದಲ್ಲಿಯೇ ಅವರ ಸಂದೇಶಗಳ ಸ್ವರೂಪವನ್ನು ಗ್ರಹಿಸಿಕೊಳ್ಳಬೇಕಾದ ಜರೂರು ಕೂಡ ಇದೆ. ಈ ದೃಷ್ಟಿಯಿಂದ ನೋಡಿದಾಗ ಅವರು ಒಂದು ಕಡೆ ಐರೋಪ್ಯ ವರ್ಗವನ್ನು ಸಂಬೋಧಿಸಿದ ಉಸಿರಿನಲ್ಲಿಯೇ ಇನ್ನೊಂದು ಕಡೆ ಭಾರತೀಯ ಹಿಂದೂ ಸಮಾಜವನ್ನೂ ಸಂಬೋಧಿಸಿದರೆಂದು ಹೇಳಬೇಕಾಗುತ್ತದೆ. ಯಾವುದು ಐರೋಪ್ಯ ವರ್ಗಕ್ಕೆ ಸಂಬೋಧನೆಯೋ ಅದು ಸ್ವಯಂ ಹಿಂದೂಧರ್ಮಕ್ಕೆ ಸ್ವಗತವಾಗಿ ಪರಿಣಮಿಸಬೇಕಾದ ಅಗತ್ಯತೆಯೂ ಇಲ್ಲಿ ಎದ್ದುಕಾಣುತ್ತದೆ; ಇದು ಹಿಂದೂ ಧರ್ಮವು ತನ್ನನ್ನು ತಾನು ಪುನಾರಚಿಸಿಕೊಳ್ಳಲು ನೀಡಿದ ಪಂಥಾಹ್ವಾನವಾಗಿಯೂ ಕಾಣುತ್ತದೆ. ಅವರ ಪ್ರಾರಂಭದ ಮಾತುಗಳಲ್ಲಿಯೇ ಇದರ ಸೂಚನೆಯನ್ನು ಗ್ರಹಿಸಬಹುದು.

ಮೊದಲ ಭಾಷಣದ ಪ್ರಾರಂಭದಲ್ಲಿ ಕೃತಜ್ಞತಾ ಸಮರ್ಪಣೆಯ ನುಡಿಗಳಿವೆ. ಆದರೆ ಆ ನುಡಿಗಳ ಮೂಲಕವಾಗಿ ಸ್ವಾಮಿಜಿಯವರು ತಮ್ಮನ್ನು ತಾವು ಯಾವ ರೀತಿ ಗುರುತಿಸಿಕೊಂಡಿದ್ದರೆಂಬ ಅಸ್ಮಿತೆಯೊಂದರ ಸೂಚನೆಯೂ ದಾಖಲಾಗುತ್ತದೆ. ಅವರು ತಮ್ಮನ್ನು ತಾವು ಅತ್ಯಂತ ಪ್ರಾಚೀನ ಸಂನ್ಯಾಸೀ ಪರಂಪರೆ ಮತ್ತು ಧರ್ಮಗಳ ಸದಸ್ಯನನ್ನಾಗಿ ಮಾತ್ರವಲ್ಲದೆ ಎಲ್ಲ ವರ್ಗಗಳು ಹಾಗೂ ಪಂಥಗಳಿಗೆ ಸೇರಿದ ಕೋಟ್ಯನುಕೋಟಿ ಹಿಂದೂಗಳಲ್ಲಿ ಒಬ್ಬನನ್ನಾಗಿಯೂ ಗುರುತಿಸಿಕೊಂಡು ಅವರೆಲ್ಲರ ಮುಖವಾಣಿಯಾಗುತ್ತಾರೆ. ಹೀಗಾಗಿಯೇ ಅವರ ವ್ಯಕ್ತಿಗತ ಅಸ್ತಿತ್ವಕ್ಕೊಂದು ಸಾಮುದಾಯಿಕ ನೆಲೆಗಟ್ಟು ದೊರೆಯುವುದಲ್ಲದೆ ಅವರ ವಿಚಾರಗಳಿಗೆ ಪ್ರಾತಿನಿಧಿಕ ಮೌಲ್ಯವೂ ಸಿದ್ಧಿಸುತ್ತದೆ. ಹೆಮ್ಮೆಯ ಮೂಲ ಅವರ ಮುಂದಿನ ಮಾತುಗಳು ಮೇಲ್ನೋಟಕ್ಕೆ ಸರಳವಾದ ಹೇಳಿಕೆಗಳಂತೆ ಕಂಡರೂ ಅವುಗಳ ಮೂಲಕ ಎಲ್ಲ ಕಾಲಗಳ ಎಲ್ಲ ದೇಶಗಳ ಧರ್ಮಾನುಯಾಯಿಗಳು ಗಮನಿಸಲೇಬೇಕಾದ ಮೌಲ್ಯವೊಂದರ ಸ್ಥಾಪನೆಯಾಗುತ್ತದೆ. ಅವರು ಹೇಳುತ್ತಾರೆ.

ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕಾರಾರ್ಹವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರಭಾಷೆಗೆ exclusion’ (ಹೊರಗಿಡುವುದು, ಬಹಿಷ್ಕರಿಸುವುದು) ಎಂಬ ಪದವನ್ನು ಅನುವಾದಿಸಲು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದವನೆಂದು ಹೇಳಲು ನನಗೆ ಹೆಮ್ಮೆಯೆನಿಸುತ್ತದೆ. ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವನ್ನಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು…’’3 ಸ್ವಾಮಿಜಿಯವರ ಈ ಮಾತುಗಳಲ್ಲಿ ಧರ್ಮಾಭಿಮಾನವೆನ್ನುವುದು ಹೊಸ ವ್ಯಾಖ್ಯಾನಕ್ಕೆ ಒಳಗಾಗುತ್ತಿದೆ. ಅಥವಾ ಅದರ ರೂಢಿಯ ಅರ್ಥದ ತಿದ್ದುಪಡಿಯಾಗುತ್ತಿದೆ ಎಂದರೂ ಸರಿಯೆ. ಸಾಮಾನ್ಯವಾಗಿ ಹೆಮ್ಮೆ ಅಥವಾ ಅಭಿಮಾನವನ್ನು ಶ್ರೇಷ್ಠತೆಯೊಂದಿಗೆ ತಳುಕು ಹಾಕಲಾಗುತ್ತದೆ. ಉಳಿದವುಗಳಿಗಿಂತ ತನ್ನದು ಶ್ರೇಷ್ಠವೆಂಬ ಕಾರಣಕ್ಕಾಗಿ ಹೆಮ್ಮೆಪಡಲಾಗುತ್ತದೆ. ಆದರೆ ಈ ಧೋರಣೆ ಇಲ್ಲಿ ಪಲ್ಲಟಗೊಂಡಿದೆ. ಸ್ವಾಮಿಜಿಯವರ ಹೆಮ್ಮೆಗೆ ಕಾರಣವಾಗಿರುವುದೇನೆಂದರೆ ಅವರ ಧರ್ಮ ಎಲ್ಲವನ್ನೂ ಸ್ವೀಕರಿಸುತ್ತದೆ ಮತ್ತು ಗೌರವಿಸುತ್ತದೆ ಎನ್ನುವುದು. ಇಲ್ಲಿ ತನ್ನ ಧರ್ಮದ ಸತ್ಯ ಉಳಿದೆಲ್ಲ ಧರ್ಮಗಳ ಸತ್ಯದ ಮೇಲೆ ನಿಂತಿದೆ. ತನಗಿಂತ ಭಿನ್ನವಾದ ಆಕಾರಗಳನ್ನೂ ಆಚರಣೆಗಳನ್ನೂ ಮಾನ್ಯ ಮಾಡುವುದರಲ್ಲಿ ಈ ಸತ್ಯದ ವಿಸ್ತರಣೆಯಿದೆ. ಹೀಗಾಗಿ ಧರ್ಮದ ಸತ್ಯವನ್ನು ಸ್ವೀಕರಣೆ ಸಹಿಷ್ಣುತೆಗಳೊಂದಿಗೆ ಸಮೀಕರಿಸಿದ್ದರಲ್ಲಿ ಹೆಮ್ಮೆಯ ಬಗೆಗಿನ ಮರುವ್ಯಾಖ್ಯಾನವಿದೆ. ಈ ಮರುವ್ಯಾಖ್ಯಾನವು ಒಂದು ಐತಿಹಾಸಿಕ ಅಗತ್ಯವೂ ಆಗಿದ್ದಿತು. ಐತಿಹಾಸಿಕ ಹಿನ್ನೆಲೆಯಲ್ಲಿಯೇ ಒಂದು ಕಟುಸತ್ಯವನ್ನು ಸ್ವಾಮಿಜಿಯವರು ಬಿಚ್ಚಿಡುತ್ತಾರೆ.

ಗುಂಪುಗಾರಿಕೆ, ಮತಭ್ರಾಂತಿ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆ ಬಹುಕಾಲದಿಂದ ಈ ಸುಂದರ ಪೃಥ್ವಿಯನ್ನು ಆಕ್ರಮಿಸಿಕೊಂಡಿವೆ. ಅವು ಭೂಮಿಯನ್ನು ಹಿಂಸೆಯಿಂದ ತುಂಬಿ, ಮತ್ತೆ ಮತ್ತೆ ಮಾನವನ ರಕ್ತದಿಂದ ತೋಯಿಸಿವೆ; ನಾಗರಿಕತೆಯನ್ನು ನಾಶಮಾಡಿವೆ; ದೇಶದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿವೆ. ಈ ಘೋರ ರಕ್ಕಸರಿರದಿದ್ದಲ್ಲಿ ಮಾನವಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಪಾಲು ಮುಂದುವರಿಯುತ್ತಿತ್ತು. ಆದರೆ ಈಗ ಅದರ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಗೌರವಾರ್ಥವಾಗಿ ಇಂದು ಬೆಳಗ್ಗೆ ಮೊಳಗಿದ ಘಂಟಾನಾದವು ಎಲ್ಲ ಮತಾಂಧತೆಗೆ, ಖಡ್ಗ ಅಥವಾ ಲೇಖನಿಗಳ ಮೂಲಕ ಸಂಭವಿಸುವ ಎಲ್ಲ ಹಿಂಸೆ-ದ್ವೇಷಗಳಿಗೆ, ಹಾಗೂ ಒಂದೇ ಗುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ-ಮನಸ್ತಾಪಗಳಿಗೆ ಮೃತ್ಯುಘಾತವನ್ನೀ ಯುವುದೆಂದು ಆಶಿಸುತ್ತೇನೆ.’’4 ಬಾವಿಯೊಳಗಿನ ಕಪ್ಪೆ ಇದು ಸ್ವಾಮೀಜಿಯವರಶಿಕಾಗೋ ಸಂದೇಶ’ದ ಪ್ರಧಾನ ಶ್ರುತಿಯೇ ಆಗಿದೆ. ಸೆಪ್ಟೆಂಬರ್ 15ರ ಅಧಿವೇಶನದಲ್ಲಿ ಅವರು ಹೇಳಿದ ಕೂಪಮಂಡೂಕ’ದ ಕಥೆಯಲ್ಲಿ ಇದು ಅದ್ಭುತ ನಾಟಕೀಯ ಅಭಿವ್ಯಕ್ತಿಯನ್ನು ಪಡೆದುಕೊಂಡಿದೆ. ಕೊನೆಯಲ್ಲಿ ಕಥೆಯನೀತಿ’ಯನ್ನು ಅವರೇ ಹೀಗೆ ನಿರೂಪಿಸುತ್ತಾರೆ:

ಮೊದಲಿನಿಂದಲೂ ಕಷ್ಟ ಇದೇ. ನಾನೊಬ್ಬ ಹಿಂದೂ. ನಾನು ನನ್ನದೇ ಆದ ಸಣ್ಣ ಬಾವಿಯಲ್ಲಿ ಕುಳಿತು ಇಡೀ ಪ್ರಪಂಚ ನನ್ನ ಸಣ್ಣಬಾವಿಯೆಂದು ಯೋಚಿಸುತ್ತೇನೆ. ಕ್ರೈಸ್ತನು ಅವನ ಸಣ್ಣ ಬಾವಿಯಲ್ಲಿ ಕುಳಿತು ಇಡೀ ಪ್ರಪಂಚ ತನ್ನ ಸಣ್ಣ ಬಾವಿಯೆಂದು ಯೋಚಿಸುತ್ತಾನೆ. ಮಹಮದೀಯನು ತನ್ನ ಸಣ್ಣಬಾವಿಯಲ್ಲಿ ಕುಳಿತು ಅದನ್ನೇ ಇಡೀ ಪ್ರಪಂಚವೆಂದು ಭಾವಿಸುತ್ತಾನೆ. ನಮ್ಮ ಈ ಸಣ್ಣ ಸಣ್ಣ ಜಗತ್ತುಗಳ ತಡೆಗೋಡೆಗಳನ್ನು ಒಡೆದು ಬೀಳಿಸಲು ಮಾಡುತ್ತಿರುವ ಪ್ರಯತ್ನಕ್ಕಾಗಿ ಅಮೆರಿಕನ್ನರಾದ ನಿಮಗೆ ನಾನು ಧನ್ಯವಾದ ಸಲ್ಲಿಸಬೇಕು. ನಿಮ್ಮ ಉದ್ದೇಶವು ಈಡೇರುವಂತೆ ಮುಂದೆ ದೇವರು ನಿಮಗೆ ನೆರವಾಗುವನೆಂದು ಆಶಿಸುತ್ತೇನೆ.’’

ಸ್ವಾಮಿ ವಿವೇಕಾನಂದ

5 ಸೆಪ್ಟೆಂಬರ್ 19ರ ಅಧಿವೇಶನದಲ್ಲಿ ಸ್ವಾಮಿಜಿಯವರು ಹಿಂದೂಧರ್ಮದ ಮೇಲಿನ ಪ್ರಬಂಧವೊಂದನ್ನು ಮಂಡಿಸಿದ್ದಾರೆ. ಸಾಕಷ್ಟು ಸುದೀರ್ಘವಾದ ಈ ಪ್ರಬಂಧ ಮೇಲ್ನೋಟಕ್ಕೆ ಹಿಂದೂ ಧರ್ಮದ ತಾತ್ತ್ವಿಕತೆಯ ಮುಖ್ಯಾಂಶಗಳ ನಿರೂಪಣೆಯಾಗಿ ಕಾಣುತ್ತದೆ. ಆದರೆ ವಾಸ್ತವವಾಗಿ ಇದನ್ನು ಹಿಂದೂ ತಾತ್ತ್ವಿಕತೆಯ ಸಮಕಾಲೀನ ಪುನರ್‍ಸೃಷ್ಟಿಯೆಂದೇ ಪರಿಗಣಿಸಬೇಕಾಗುತ್ತದೆ. ಯಾವುದೇ ತಾತ್ತ್ವಿಕತೆಯನ್ನು ಅದರ `ಸಣ್ಣ ಬಾವಿ’ಯಿಂದ ಹೊರತರಬೇಕೆಂಬ ಕಾಳಜಿಯ ಆನ್ವಯಿಕ ನಿದರ್ಶನವಾಗಿ ಈ ಪ್ರಬಂಧ ಬಹಳ ಮುಖ್ಯವಾಗುತ್ತದೆ. ಹಿಂದೂ ತಾತ್ತ್ವಿಕತೆಯ `ವಿಶಾಲೀಕರಣ’ದ ಪ್ರಕ್ರಿಯೆ ಇಲ್ಲಿ ಪ್ರಾರಂಭವಾಗಿದೆ. ಈ `ವಿಶಾಲೀಕರಣ’ಕ್ಕೆ ಸಜ್ಜುಗೊಳ್ಳಲು ಅನುವಾಗುವಂತೆ ಅದರ ಸೈದ್ಧಾಂತಿಕ ಮರುನಿರೂಪಣೆ ಈ ಪ್ರಬಂಧದಲ್ಲಿದೆ. ಹೀರಿಕೊಂಡರೆ ಉಳಿಗಾಲ ಈ ದಿಸೆಯಲ್ಲಿ ಸ್ವಾಮಿಜಿಯವರು ಗಮನಿಸುವ ಒಂದು ಮುಖ್ಯವಾದ ಸಂಗತಿ ಯೆಂದರೆ ಈ ಧರ್ಮದ ಹೀರಿಕೊಳ್ಳುವ ಸ್ವಭಾವ. ಅವರ ಪ್ರಕಾರ ಈ ಧರ್ಮವು ಬೆಳೆದದ್ದು ಮತ್ತು ಉಳಿದದ್ದು ಈ ಹೀರಿಕೊಳ್ಳುವಿಕೆಯಿಂದಾಗಿಯೆ.

ಜಗತ್ತಿನಲ್ಲಿ ಹೀರಿಕೊಳ್ಳದ ಧರ್ಮಗಳೆಲ್ಲವೂ ಕಾಲಾನಂತರದಲ್ಲಿ ಹೇಳ ಹೆಸರಿಲ್ಲದಂತಾದುವು ಎಂಬ ಐತಿಹಾಸಿಕ ಸತ್ಯದ ಕಡೆಗೆ ಇಲ್ಲಿ ಅವರು ನಮ್ಮ ಗಮನವನ್ನು ಸೆಳೆಯುತ್ತಾರೆ. ಈ ಹೀರಿಕೊಳ್ಳುವಿಕೆಯ ಗುಣ ಇದಕ್ಕೆ ಪ್ರಾಪ್ತವಾದದ್ದು ಹೇಗೆ ಎಂಬುದನ್ನು ವಿಶ್ಲೇಷಿಸುತ್ತ, ಅದಕ್ಕೆ ಅನುಗುಣವಾದ ಸೈದ್ಧಾಂತಿಕ ನೆಲೆಗಟ್ಟನ್ನು ಈ ಧರ್ಮದ ಒಡಲೊಳಗಿನಿಂದ ನಿಷ್ಪನ್ನಗೊಳಿಸಲು ತೊಡಗುತ್ತಾರೆ. ಈ ಸಂದರ್ಭದಲ್ಲಿ ಅವರು ಹಾಕಿಕೊಳ್ಳುವ ಪ್ರಶ್ನೆ ಇದು: ಇಲ್ಲಿ ವೈವಿಧ್ಯವಿದೆ; ವೈರುಧ್ಯಗಳೂ ಇವೆ. ಅತಿ ಮೂರ್ತತೆಯಿಂದ ಅಮೂರ್ತತೆಯವರೆಗೆ ಇವುಗಳ ಹರಹಿದೆ. ಸ್ಥೂಲ ವಿಗ್ರಹಾರಾಧನೆಯಿಂದ ವೇದಾಂತದ ಸೂಕ್ಷ್ಮ ಜಿಜ್ಞಾಸೆಯವರೆಗೆ ವಿಭಿನ್ನ ಸ್ತರಗಳಿವೆ. ಬೌದ್ಧರ ಅಜ್ಞೇಯತಾವಾದವಿದೆ; ಜೈನರ ನಾಸ್ತಿಕವಾದವಿದೆ. ಹಾಗಾದರೆ ಒಂದರಿಂದೊಂದು ದೂರವಾಗಿ ಸಿಡಿಯುವ ಈ ಎಲ್ಲ ತ್ರಿಜ್ಯಗಳು ಪರಸ್ಪರ ಸಂಧಿಸುವ ಕೇಂದ್ರಬಿಂದು ಎಲ್ಲಿದೆ? ಅಪರಿಹಾರ್ಯವೆಂದು ತೋರುವ ಈ ಎಲ್ಲ ವೈರುದ್ಧ್ಯಗಳು ವಿಶ್ರಾಂತಿಗೆ ಬರಬಹುದಾದ ಸಾಮಾನ್ಯ ನೆಲೆಗಟ್ಟು ಎಲ್ಲಿದೆ? ಈ ಶೋಧದ ಕಡೆಗೆ ಸ್ವಾಮಿಜಿಯವರ ಜಿಜ್ಞಾಸೆ ಸಾಗುತ್ತದೆ. ಈ ಶೋಧದ ಪ್ರಕ್ರಿಯೆಯಲ್ಲಿಯೇ ನವವೇದಾಂತದ ರೂಪುರೇಷೆಗಳು ಆಕಾರವನ್ನು ಪಡೆಯುತ್ತ ಹೋಗುತ್ತವೆ. ವೇದಗಳೆಂದರೆ ಪುಸ್ತಕಗಳಲ್ಲ ಈ ನಿಟ್ಟಿನಲ್ಲಿ ಸ್ವಾಮೀಜಿಯವರು ಮಾಡುವ ಮೊದಲ ಕೆಲಸವೆಂದರೆ ವೇದದ ಮರುವ್ಯಾಖ್ಯಾನ. ರೂಢಿಗತವಾಗಿ ವೇದಗಳು ಪುಸ್ತಕಗಳಾಗಿ ಪ್ರತಿಷ್ಠಾಪಿಸಲ್ಪಟ್ಟಿವೆ. ಆದರೆ ಸ್ವಾಮೀಜಿಯವರು ವೇದಗಳಿಗೆ ಅವುಗಳ ಪುಸ್ತಕರೂಪದಿಂದ ಬಿಡುಗಡೆಯನ್ನು ಕೊಡುತ್ತಾರೆ. ವೇದಗಳೆಂದರೆ ಪುಸ್ತಕಗಳಲ್ಲ; ವಿವಿಧ ಕಾಲಘಟ್ಟಗಳಲ್ಲಿ ವಿವಿಧ ವ್ಯಕ್ತಿಗಳಿಂದ ಅನಾವರಣಗೊಂಡ ಆಧ್ಯಾತ್ಮಿಕ ನಿಯಮಗಳ ಭಂಡಾರವೇ ವೇದಗಳು. ಗುರುತ್ವಾಕರ್ಷಣ ನಿಯಮವು ಅದರ ಶೋಧಕ್ಕೆ ಮೊದಲೂ ಹೇಗಿದ್ದಿತೋ, ಸಮಗ್ರ ಮಾನವತೆಯೇ ಅದನ್ನು ಮರೆತುಬಿಟ್ಟರೂ ಅದು ಹೇಗೆ ಅಸ್ತಿತ್ವದಲ್ಲಿ ಮುಂದುವರಿಯುವುದೋ ಹಾಗೆಯೇ ಆಧ್ಯಾತ್ಮಿಕ ಜಗತ್ತನ್ನಾಳುವ ನಿಯಮಗಳೂ ಕೂಡ…’’6
ವೇದಗಳನ್ನು ಪುಸ್ತಕರೂಪದಿಂದ ಬಿಡುಗಡೆ ಮಾಡುವುದೆಂದರೆ ಸತ್ಯದ ಸಾರ್ವತ್ರಿಕತೆಯನ್ನು ಮಾನ್ಯ ಮಾಡುವುದೇ ಆಗಿದೆ. ವೇದದ ಕೊನೆಯ ಪುಟವಿನ್ನೂ ಬರೆಯಲ್ಪಟ್ಟಿಲ್ಲ’ ಎನ್ನುವುದು ಅವರ ಇನ್ನೊಂದು ಮಾತು. ಈ ದೃಷ್ಟಿಯಿಂದ ನೋಡಿದಾಗ ವೇದವೆನ್ನುವುದು ದೇಶಕಾಲಬದ್ಧವಾದ ಸಾಹಿತ್ಯರಾಶಿಯಾಗದೆ ವಿಶ್ವಾತ್ಮಕವಾಗುತ್ತದೆ. ಪವಿತ್ರಗ್ರಂಥಗಳನ್ನು ಹೀಗೆ ಅರ್ಥೈಸಿಕೊಂಡಾಗ ಮಾತ್ರ ಅವುಗಳ ನಡುವಿನ ಕಾಲದೇಶನಿಬದ್ಧವಾದ ವೈರುದ್ಧ್ಯಗಳನ್ನು ಮೀರಿದ ಶಾಶ್ವತ ಸತ್ಯದ ಗ್ರಹಿಕೆ ಸಾಧ್ಯವೆನ್ನುವುದು ಸ್ವಾಮಿಜಿಯವರ ಅಭಿಮತ.7 ಈ ಶಾಶ್ವತ ಸತ್ಯಗಳನ್ನು ಅನಾವರಣಗೊಳಿಸಿದವರು ಋಷಿಗಳೆಂದಾದರೆ8 ಎಲ್ಲ ಕಾಲಗಳ ಎಲ್ಲ ದೇಶಗಳ ದ್ರಷ್ಟಾರರೂ ಋಷಿಗಳ ಪಂಕ್ತಿಗೆ ಸೇರುತ್ತಾರೆ. ವೇದಗಳನ್ನೂ ಋಷಿಗಳನ್ನೂ ಹೀಗೆ ಗ್ರಹಿಸಿಕೊಂಡಾಗ ಒಂದು ಪುಸ್ತಕಕ್ಕೆ ಮಾತ್ರ ಸತ್ಯದ ಸ್ವಾಮ್ಯವೆಂಬ ಅಧಿಕಾರವಾದವೂ ನಿರಾಕರಣೆಗೊಳ್ಳುತ್ತದೆ. ಹೀಗಾಗಿ ಇದು ಧರ್ಮಗಳವೈಶ್ವೀಕರಣ’ದ ನಿಟ್ಟಿನಲ್ಲಿ ಸ್ವಾಮಿಜಿಯವರಿಟ್ಟ ಒಂದು ಮುಖ್ಯವಾದ ಹೆಜ್ಜೆಯಾಗಿದೆ.

ಸೃಷ್ಟಿಯು ಸ್ವತಂತ್ರ

ಸತ್ಯವು ಅನಾದಿಯೂ ಅನಂತವೂ ಎನ್ನುವುದಾದರೆ ಏನೂ ಇಲ್ಲದ ಸ್ಥಿತಿಯೊಂದಿರಲು ಸಾಧ್ಯವಿಲ್ಲ. ಹೀಗಾಗಿ ಸೃಷ್ಟಿಯೂ ಕೂಡ ಅನಾದಿ ಮತ್ತು ಅನಂತವೇ ಆಗಬೇಕಾಗುತ್ತದೆ. ಹೀಗಾದಾಗ ಅದು ತನ್ನ ಅಸ್ತಿತ್ವಕ್ಕಾಗಿ ಸೃಷ್ಟಿಕರ್ತನೊಬ್ಬನನ್ನು ಅವಲಂಬಿಸಿಕೊಳ್ಳುವುದಿಲ್ಲ. ಈ ಪ್ರಮೇಯದ ಮೂಲಕ ಸ್ವಾಮಿಜಿಯವರು ಸೃಷ್ಟಿಗೆ ಸೃಷ್ಟಿಕರ್ತನಿಂದಲೂ ಬಿಡುಗಡೆಯನ್ನು ಕಲ್ಪಿಸುತ್ತಾರೆ. ಇದರ ಹಿಂದಿನ ಅವರ ಉದ್ದೇಶವೂ ಸ್ಪಷ್ಟವಾಗಿಯೇ ಇದೆ. ಸೃಷ್ಟಿಯಿಂದ ಸೃಷ್ಟಿಕರ್ತನನ್ನು ಬಿಡಿಸುವುದೆಂದರೆ ಸೃಷ್ಟಿಯಲ್ಲಿನ ತಾರತಮ್ಯಗಳಿಂದ ಸೃಷ್ಟಿಕರ್ತನನ್ನು ಬಿಡಿಸುವುದೂ ಆಗಿದೆ. ಸೃಷ್ಟಿಯಲ್ಲಿ ಕೆಲವರನ್ನು ಸುಖಿಗಳನ್ನಾಗಿಯೂ ಕೆಲವರನ್ನು ದುಃಖಿಗಳನ್ನಾಗಿಯೂ ಮಾಡುವ ನಿರಂಕುಶ ಪರಮಾಧಿಕಾರದಿಂದಲೂ ಇದು ಆತನನ್ನು ದೂರಮಾಡುತ್ತದೆ.

ಮಾನವನ ಬಿಡುಗಡೆ

ಈ ತಾತ್ತ್ವಿಕತೆಯ ಪ್ರತಿಪಾದನೆಗೆ ಸ್ವಾಮಿಜಿಯವರಲ್ಲಿ ಇನ್ನೊಂದು ಆಯಾಮವೂ ಪ್ರಾಪ್ತವಾಗುತ್ತದೆ. ಅದು ಮನುಷ್ಯನನ್ನೂ ಸೃಷ್ಟಿಯಿಂದ ಸ್ವತಂತ್ರನನ್ನಾಗಿಸುತ್ತದೆ. ಈ ಸ್ವಾತಂತ್ರ್ಯದ ಸ್ಥಾಪನೆಯೇ ಸ್ವಾಮಿಜಿಯವರ ಉದ್ದೇಶವೂ ಆಗಿದೆ. ಅವರ ಪ್ರಕಾರ ಮನುಷ್ಯನ ಅಸ್ತಿತ್ವಕ್ಕೆ ಎರಡು ನೆಲೆಗಳಿವೆ. ಒಂದು ನೆಲೆಯಲ್ಲಿ ಅವನು ಶರೀರ ಮಾನವನಾಗಿದ್ದರೆ ಇನ್ನೊಂದು ನೆಲೆಯಲ್ಲಿ ಅವನು ವಿಶ್ವಮಾನವನಾಗಿದ್ದಾನೆ. ವ್ಯಕ್ತಿಗತ ನೆಲೆಯಲ್ಲಿ ಶರೀರಗಳು ಹುಟ್ಟುತ್ತವೆ ಮತ್ತು ಸಾಯುತ್ತವೆ. ಏಕೆಂದರೆ ಸೃಷ್ಟಿಯೆಂದರೆ ಸಂಘಟನೆ ಮತ್ತು ವಿಘಟನೆಗಳ ಸರಣಿಯೇ ಆಗಿದೆ. ಆದರೆ ವಿಶ್ವಮಾನವನಾಗಿ ಅವನಿಗೆ ಅನಂತ ಶರೀರಗಳಿವೆ. ಹೀಗಾಗಿ ವಿಶ್ವಮಾನವಪ್ರಜ್ಞೆಯೆನ್ನುವುದು ಅನಂತತೆಯ ಪ್ರಜ್ಞೆಯೂ ಆಗಿದೆ. ಸೃಷ್ಟಿಯ ಸ್ತರದಲ್ಲಿನ ಸಂಘಟನೆ – ವಿಘಟನೆಗಳು ಅಲ್ಲಿ ಆತನನ್ನು ಬಾಧಿಸಲಾರವು. ಸಂಕುಚಿತವಾದ ಶರೀರಗತ ಪ್ರಜ್ಞೆಯೆಂಬ ಸೆರೆಮನೆಯ ದುಃಸ್ಥಿತಿಯಿಂದ ಪಾರಾಗಿ ಅಲ್ಲಿ ಅವನು ವಿಶ್ವಾತ್ಮಕ ಅಸ್ಮಿತೆಯ ಬಿಡುಗಡೆಯ ಸ್ತರಕ್ಕೆ ಏರುತ್ತಾನೆ. ಈ ಸ್ವಾತಂತ್ರ್ಯವೇ ಎಲ್ಲ ಅಸ್ತಿತ್ವದ ಅಂತಿಮ ಗುರಿ.
ಈ ಪ್ರತಿಪಾದನೆಯನ್ನು ಸ್ವಾಮೀಜಿಯವರು ಮುಂದಿಡುತ್ತಿರುವುದು ಸಿದ್ಧಾಂತೀಕರಣ’ದ ದೃಷ್ಟಿಯಿಂದ ಅಲ್ಲ. ಅವರ ಮುಂದೆ ಸಮಸ್ತ ಮಾನವಕೋಟಿಯ ನೋವು-ಸಂಕಟಗಳಿವೆ. ಇಲ್ಲಿ ಅವರು ಸಂಕಟಪೀಡಿತ ಮಾನವನ ಪ್ರತಿನಿಧಿಯಾಗಿ ಮಾತನಾಡುತ್ತಿದ್ದಾರೆ. ವಿಶ್ವಧರ್ಮಸಮ್ಮೇಳನದಂತಹಸೈದ್ಧಾಂತಿಕ’ ವೇದಿಕೆಯಲ್ಲಿಯೂ ಅವರು ಮಾನವನ ನೋವಿಗೆ ದನಿಯಾಗಿದ್ದಾರೆ. ಅವರ ಪ್ರಕಾರ ಮಾನವನನ್ನು ನೋವಿನಿಂದ ಬಿಡುಗಡೆ ಮಾಡುವುದೇ ಧರ್ಮದ ನಿಜವಾದ ಗುರಿಯೂ ಆಗಿದೆ. ಮಾನವಅಸ್ತಿತ್ವದ ಸ್ವರೂಪವನ್ನು ಅನಂತತೆಯಲ್ಲಿ ಸ್ಥಾಪಿಸುವುದರಿಂದ ಮಾತ್ರವೇ ಇದು ಸಾಧ್ಯ. ಇದು ಸಿದ್ಧಾಂತವಲ್ಲ; ಸಾಕ್ಷಾತ್ಕರಿಸಿಕೊಳ್ಳಬೇಕಾದ ಸತ್ಯ. ಈ ಸಾಕ್ಷಾತ್ಕಾರದಲ್ಲಿಯೂ ಎಲ್ಲ ಧಾರ್ಮಿಕತೆಯ ಮೂಲವಿದೆ; ಎಲ್ಲ ನೈತಿಕತೆಯ ಮೂಲವೂ ಇದೆ. ವ್ಯಾವಹಾರಿಕ ಅನುಷ್ಠಾನದ ಹಂತದಲ್ಲಿ ಇದೇ ವಿಶ್ವಭ್ರಾತೃತ್ವವೂ ಆಗಿದೆ.

ವಿರುದ್ಧವಲ್ಲ, ಪೂರಕ

ಈ ಹಿನ್ನೆಲೆಯಲ್ಲಿ ನೋಡಿದಾಗ ವಿಶಿಷ್ಟ ಮಾನವ ಹಾಗೂ ವಿಶ್ವಾತ್ಮಕ ಮಾನವನ ನಡುವಿನ ಅಗಾಧ ವಿಸ್ತಾರದಲ್ಲಿ ಎಲ್ಲ ಆಕಾರಗಳು, ಆಚರಣೆಗಳು, ಅನುಷ್ಠಾನಗಳು, ನಂಬಿಕೆಗಳು ತಮ್ಮ ತಮ್ಮ ನೆಲೆಯನ್ನು ಕಂಡುಕೊಳ್ಳುತ್ತವೆ. ಇಲ್ಲಿ ಯಾವುದೂ ಒಂದಕ್ಕೆ ಇನ್ನೊಂದು ವಿರೋಧವಲ್ಲ; ಒಂದು ತ್ಯಾಜ್ಯವಾಗಿ ಇನ್ನೊಂದು ಸ್ವೀಕಾರಾರ್ಹವಲ್ಲ; ಒಂದನ್ನು ಖಂಡಿಸಿ ಇನ್ನೊಂದನ್ನು ಮಂಡಿಸಲಾಗುವುದಿಲ್ಲ.
ಹಿಂದುವಿನ ಪ್ರಕಾರ ಮನುಷ್ಯ ಅಸತ್ಯದಿಂದ ಸತ್ಯದ ಕಡೆಗೆ ಪಯಣಿಸುತ್ತಿಲ್ಲ; ಬದಲಾಗಿ ಸತ್ಯದಿಂದ ಸತ್ಯದ ಕಡೆಗೆ, ಕೆಳಸ್ತರದ ಸತ್ಯದಿಂದ ಮೇಲಿನ ಸ್ತರದ ಸತ್ಯದ ಕಡೆಗೆ ಸಾಗುತ್ತಿದ್ದಾನೆ. ಅವನ ದೃಷ್ಟಿಯಲ್ಲಿ ಎಲ್ಲ ಧರ್ಮಗಳು, ಕಾಡುಜನರ ಆರಾಧನೆಯಿಂದ ಹಿಡಿದು ಅತ್ಯುನ್ನತ ಅದ್ವೈತದವರೆಗಿನ ಎಲ್ಲವೂ, ಮಾನವನ ಮನಸ್ಸು ಅನಂತವನ್ನು ಗ್ರಹಿಸಲು ಮತ್ತು ಅನುಭವಿಸಲು ಮಾಡಿದ ಬೇರೆ ಬೇರೆ ಪ್ರಯತ್ನಗಳು. ಈ ಪ್ರಯತ್ನಗಳಲ್ಲಿ ಪ್ರತಿಯೊಂದೂ ತನ್ನ ತನ್ನ ಹುಟ್ಟು ಹಾಗೂ ಸಂಪರ್ಕಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತದೆ; ಮತ್ತು ಇವುಗಳಲ್ಲಿ ಪ್ರತಿಯೊಂದೂ ಪ್ರಗತಿಯ ಹಂತವೊಂದರ ಕುರುಹಾಗಿದೆ. ಪ್ರತಿಯೊಂದು ಚೇತನವೂ ಒಂದು ಗರುಡನ ಮರಿಯಂತೆ; ಹೆಚ್ಚು ಹೆಚ್ಚು ಶಕ್ತಿಯನ್ನು ಒಗ್ಗೂಡಿಸಿಕೊಳ್ಳುತ್ತ, ಮೇಲಕ್ಕೆ ಮತ್ತೂ ಮೇಲಕ್ಕೆ ಹಾರುತ್ತ ಕಡೆಗೆ ಉಜ್ವಲ ಸೂರ್ಯನನ್ನು ತಲುಪುತ್ತದೆ.’’9 ಹಿಂದೂ ತಾತ್ತ್ವಿಕತೆಯ ಪ್ರಕಾರ ಇಡೀ ಧಾರ್ಮಿಕ ಪ್ರಪಂಚವೆಂಬುದು ಕೇವಲ ಒಂದು ಪ್ರಯಾಣವಿದ್ದಂತೆ. ಅದು ವಿಧವಿಧದ ಸನ್ನಿವೇಶಗಳು ಹಾಗೂ ಸಂದರ್ಭಗಳ ಮೂಲಕವಾಗಿ ಬಂದ ವಿಧವಿಧದ ಸ್ತ್ರೀಪುರುಷರು ಒಂದೇ ಗುರಿಯೆಡೆಗೆ ಮಾಡುತ್ತಿರುವ ಪ್ರಯಾಣವಾಗಿದೆ. ಪ್ರತಿಯೊಂದು ಧರ್ಮವೂ ಭೌತಿಕ ಮನುಷ್ಯನ ಮೂಲಕ ದೇವರೊಬ್ಬನನ್ನು ವಿಕಸನಗೊಳಿಸುತ್ತಿದೆ. ಒಬ್ಬನೇ ದೇವರೇ ಅವರೆಲ್ಲರ ಸ್ಫೂರ್ತಿದಾತನಾಗಿದ್ದಾನೆ. ಹಾಗಾದರೆ ಇಷ್ಟೆಲ್ಲ ವೈರುದ್ಧ್ಯಗಳಿರುವುದೇಕೆ? ಹಿಂದುವಿನ ಪ್ರಕಾರ ಅವೆಲ್ಲವೂ ತೋರಿಕೆಗಳಷ್ಟೆ. ಒಂದೇ ಸತ್ಯವು ಬಗೆಬಗೆಯ ಸ್ವಭಾವಗಳ ಬೇರೆಬೇರೆ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಸಂದರ್ಭದಲ್ಲಿ ಈ ವೈರುದ್ಧ್ಯಗಳು ಕಾಣಿಸಿಕೊಳ್ಳುತ್ತವೆ.’’10

ವಿಶ್ವಧರ್ಮದ ಸಂವಿಧಾನ

ಶಿಕಾಗೋ ಸಮ್ಮೇಳನದಲ್ಲಿ ಸ್ವಾಮಿಜಿಯವರು ಪ್ರಸ್ತುತಿಪಡಿಸಿದ ಹಿಂದೂ ತಾತ್ತ್ವಿಕತೆಯನ್ನು ಈ ಎಲ್ಲ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಒಂದು ಸಂಗತಿಯಂತೂ ಸ್ಪಷ್ಟವಾಗುತ್ತದೆ. ಅವರ ಪ್ರಕಾರ ಧರ್ಮದ ವ್ಯಾಖ್ಯಾನವೆಂದರೆ ಮನುಷ್ಯನ ಬಗೆಗಿನ ವ್ಯಾಖ್ಯಾನವೇ ಆಗಿದೆ. ಪ್ರತಿಯೊಂದು ಜೀವಿಯೂ ತನ್ನ ತನ್ನ ಶರೀರದಲ್ಲಿ ಕೇಂದ್ರವನ್ನು ಹೊಂದಿರುವ, ಆದರೆ ಎಲ್ಲಿಯೂ ಪರಿಧಿಯೇ ಇಲ್ಲದ ವೃತ್ತವಾಗಿದ್ದಾನೆ’ ಎಂಬ ಅವರ ವ್ಯಾಖ್ಯೆ ವಿಶಿಷ್ಟವಾದುದಾಗಿದೆ. ಹೀಗಾಗಿ, ಅವರ ಪ್ರಕಾರ ಧರ್ಮವೆನ್ನುವುದಕ್ಕೆ ನಿರ್ವಾತದಲ್ಲಿ ಅಸ್ತಿತ್ವವಿಲ್ಲ. ಅದು ವಿಶಿಷ್ಟಮಾನವನನ್ನು ವಿಶ್ವಮಾನವನೊಂದಿಗೆ ಕೂಡಿಸುವ ಕೊಂಡಿಯಾಗಿ ಕೆಲಸ ಮಾಡಬೇಕು. ಇಲ್ಲಿ ಅದು ಎದುರಿಸಬೇಕಾದ ಮುಖ್ಯವಾದ ಸವಾಲೊಂದಿದೆ. ಅದು ಅಸಂಖ್ಯ ಮಾನವರ ಅಸಂಖ್ಯ ವೈಶಿಷ್ಟ್ಯಗಳನ್ನು ಮಾನ್ಯ ಮಾಡಬೇಕು. ಹಾಗೇ ಮಾಡುತ್ತಲೇ ಅವುಗಳ ಮೂಲಕ ವಿಶ್ವಸಾಮಾನ್ಯತೆಯೊಂದನ್ನು ನಿಷ್ಪನ್ನಗೊಳಿಸಬೇಕು. ತಮ್ಮ ವಿಶ್ವಧರ್ಮ ಸಮ್ಮೇಳನದ ಸಂದೇಶದಲ್ಲಿ ಸ್ವಾಮಿಜಿಯವರು ಆ ಕೆಲಸವನ್ನು ಮಾಡಿದರು. ತಮ್ಮ ಪ್ರಬಂಧದ ಕೊನೆಯಲ್ಲಿ ಅವರುವಿಶ್ವಧರ್ಮ’ದ ಪರಿಕಲ್ಪನೆಯನ್ನು ಹೀಗೆ ಮಂಡಿಸುತ್ತಾರೆ:
ಒಂದು ವಿಶ್ವಧರ್ಮ ಎನ್ನುವಂಥದಿದ್ದರೆ –
ಅದು ದೇಶಕಾಲಗಳಲ್ಲಿ ಅಸ್ತಿತ್ವವನ್ನು ಹೊಂದಿರುವುದಿಲ್ಲ. ಅದು ತಾನು ಪ್ರತಿಪಾದಿಸುವ ಭಗವಂತನಂತೆಯೇ ಅನಂತವಾಗಿರುತ್ತದೆ.
ಆ ಧರ್ಮಸೂರ್ಯನ ಬೆಳಕು ಕೃಷ್ಣನ ಅನುಯಾಯಿಗಳ ಮೇಲೂ ಬೆಳಗುತ್ತದೆ, ಕ್ರಿಸ್ತನ ಅನುಯಾಯಿಗಳ ಮೇಲೂ ಬೇಳಗುತ್ತದೆ; ಸಂತರ ಮೇಲೂ ಬೆಳಗುತ್ತದೆ, ಪತಿತರ ಮೇಲೂ ಬೆಳಗುತ್ತದೆ.
ಅದು ಬ್ರಾಹ್ಮಣವೊ [=ವೈದಿಕ] ಬೌದ್ಧವೋ ಕ್ರೈಸ್ತವೋ ಮಹಮ್ಮದೀಯವೋ ಆಗಿರದೆ ಇವೆಲ್ಲದರ ಒಟ್ಟು ಮೊತ್ತವಾಗಿರುತ್ತದೆ; ಮತ್ತು ಇಷ್ಟೆಲ್ಲ ಇದ್ದೂ ಪ್ರಗತಿಗೆ ಅನಂತ ಅವಕಾಶವಿರುತ್ತದೆ.
ಅದು ವೈಶಾಲ್ಯದಲ್ಲಿ ತನ್ನ ಅನಂತ ಬಾಹುಗಳಿಂದ ಪ್ರತಿಯೊಬ್ಬ ವ್ಯಕ್ತಿಯನ್ನೂ ತಬ್ಬಿಕೊಳ್ಳುತ್ತದೆ, ಪ್ರತಿಯೊಬ್ಬನಿಗೂ ಜಾಗವನ್ನು ಕೊಡುತ್ತದೆ. ಪಶುಪ್ರಾಯ ಸ್ಥಿತಿಗಿಂತ ಅಷ್ಟೇನೂ ಮೇಲಿಲ್ಲದ ನೀಚತಮ ಕಾಡುಮನುಷ್ಯನಿಂದ ಹಿಡಿದು, ತನ್ನ ಹೃದಯ-ಬುದ್ಧಿಗಳ ಸದ್ಗುಣಗಳ ಔನ್ನತ್ಯದಿಂದ ಮಾನವತೆಗಿಂತ ಸ್ವಲ್ಪ ಹೆಚ್ಚಾಗಿಯೆ ಮೇಲಿದ್ದು, ಇವನು ಮನುಷ್ಯನೇ ಎಂದು ಸಮಾಜವೇ ಬೆರಗುವಡುವಂತೆ ಮಾಡುವ ಅತ್ಯುನ್ನತ ವ್ಯಕ್ತಿಯವರೆಗೆ ಪ್ರತಿಯೊಬ್ಬನನ್ನೂ ಸ್ವೀಕರಿಸುತ್ತದೆ.
ಅದು ತನ್ನ ನಿರ್ವಹಣೆಯಲ್ಲಿ ಹಿಂಸೆಗಾಗಲಿ ಅಸಹಿಷ್ಣುತೆಗಾಗಲಿ ಎಡೆ ಮಾಡಿಕೊಡದ ಧರ್ಮವಾಗಿರುತ್ತದೆ.
ಅದು ಪ್ರತಿಯೊಬ್ಬ ಸ್ತ್ರೀ ಮತ್ತು ಪುರುಷನಲ್ಲಿಯೂ ದಿವ್ಯತೆಯನ್ನು ಗುರುತಿಸುತ್ತದೆ.
ಅದರ ಇಡೀ ವ್ಯಾಪ್ತಿ, ಇಡೀ ಶಕ್ತಿ, ಮಾನವತೆ ತನ್ನ ನೈಜವೂ ದಿವ್ಯವೂ ಆದ ಸ್ವಭಾವವನ್ನು ಸಾಕ್ಷಾತ್ಕರಿಸಿಕೊಳ್ಳಲು ನೆರವಾಗುವಂತೆ ರೂಪುಗೊಳ್ಳುತ್ತದೆ.11
ಧಾರ್ಮಿಕತೆಯ ಅನುಷ್ಠಾನ ಭ್ರಾತೃತ್ವದಲ್ಲಿ
ಇದು ವಿಶ್ವಧರ್ಮದ ಸಂವಿಧಾನವೂ ಹೌದು; ವಿಶ್ವಮಾನವತೆಯ ಸಂವಿಧಾನವೂ ಹೌದು. ಹೀಗಾಗಿ ಇಲ್ಲಿ ಧರ್ಮದ ವಿಸ್ತಾರವೆಂದರೆ ಅದು ಮಾನವನ ವಿಸ್ತಾರವೇ ಆಗಿದೆ. ಆದರೆ ಈ ವಿಸ್ತರಣೆಯೆನ್ನುವುದು ಅಮೂರ್ತತೆಯಲ್ಲಿ ಸಂಭವಿಸುವಂಥದಲ್ಲ. ಅದಕ್ಕೆ ಅತ್ಯಂತ ಮೂರ್ತವಾದ, ಮನುಷ್ಯವಾಸ್ತವದ ನೆಲೆಗಳಿವೆ. ವಿಶ್ವಧರ್ಮವೆನ್ನುವುದು ಇಲ್ಲಿನ ಆಶಯವಾದರೆ (vision) ಅದು ಅನುಷ್ಠಾನ ಸಾಧ್ಯವಾಗುವುದು (mission) ಮಾತ್ರ ವಿಶ್ವಭ್ರಾತೃತ್ವದ ಮೂಲಕವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಿಶ್ವಧರ್ಮವಾಗಲಿ ವಿಶ್ವಮಾನವತೆಯಾಗಲಿ ವಿಶ್ವಭ್ರಾತೃತ್ವದ ಮೂಲಕವೇ ತಲುಪಬೇಕಾದ ಗಮ್ಯಗಳೂ ಆಗಿವೆ. ಹೀಗಾಗಿ ಇದರ ಪ್ರಕಾರ ಎಲ್ಲಿ ಮಾನವತೆಯನ್ನು ಯಾವುದೇ ಕಾರಣಕ್ಕಾಗಿ ವಿಭಜಿಸಲಾಗುವುದೋ ಅಲ್ಲಿ ಧಾರ್ಮಿಕತೆಯಿರಲು ಸಾಧ್ಯವಿಲ್ಲ. ಸೋದರಿಯರೆಂದು, ಸೋದರರೆಂದು ಗುರುತಿಸುವುದೆಂದರೆ ಅವರನ್ನು ಒಂದು ಮನೆಯ ಸದಸ್ಯರೆಂದು ಗುರುತಿಸುವುದೂ ಆಗಿದೆ. ಇಷ್ಟರ ಮೇಲೆ ಅವರನ್ನು ಹೀಗೆ ಗುರುತಿಸುವುದು ಸಾಮಾಜಿಕ ಸೌಜನ್ಯದ ಅಥವಾ ರೀತಿರಿವಾಜುಗಳ ಕಾರಣಕ್ಕಾಗಿಯಲ್ಲ. ಇದಕ್ಕೆ ಎಲ್ಲ ಮನುಷ್ಯರ ಆಂತರಿಕತೆಯ ಮೂಲಕ ಹಾಸುಹೊಕ್ಕಾಗಿರುವ ಅಸ್ತಿತ್ವಾತ್ಮಕವಾದ ನೆಲೆಗಟ್ಟಿದೆ. ಸ್ವಾಮಿಜಿಯವರ ಪ್ರಕಾರ ಧರ್ಮವೆಂದರೆಯೇ ಈ ಹಾಸುಹೊಕ್ಕುಗಳ ಭಾಗವಾಗಿ ತನ್ನನ್ನು ಗುರುತಿಸಿಕೊಳ್ಳುವುದಾಗಿದೆ. ಹೀಗಾಗಿ ಇಲ್ಲಿಯ ವಿಶ್ವಧರ್ಮಕ್ಕೆ ಲೋಕವಾಸ್ತವತೆಯ ವಿಸ್ತರಣೆಯಿದೆ. ಅದು ಇಡೀ ವಿಶ್ವವನ್ನು, ಅದರ ಎಲ್ಲ ವೈಶಿಷ್ಟ್ಯಗಳು ಹಾಗೂ ಅನನ್ಯತೆಗಳೊಂದಿಗೆ, ಒಂದು’ ಮನೆಯನ್ನಾಗಿ ಮಾಡುತ್ತದೆ. ಆ ಮೂಲಕ ಧರ್ಮವನ್ನು ಪ್ರೀತಿಯೊಂದಿಗೆ ಸಮೀಕರಿಸುತ್ತದೆ.

ಈ ಮೂಲಕ ನೋಡಿದಾಗ,ಅಮೆರಿಕದ ಸೋದರ ಸೋದರಿಯರೆ’ ಎನ್ನುವುದು ಸ್ವಾಮಿಜಿಯವರ ಸಂದೇಶದ ಪ್ರಾರಂಭಿಕ ಸಂಬೋಧನೆ ಮಾತ್ರವಾಗಿರದೆ ಅಂತಿಮವಾದ ನಿರ್ಣಯವೂ ಆಗಿದೆ. ಹಾಗೆ ನೋಡಿದರೆ ಈ ಸಂಬೋಧನೆಯೆನ್ನುವುದು ಅವರ ಪಾಲಿಗೆ ಆಯ್ಕೆಯ ಸಂಗತಿಯಾಗದೆ ಅವರ ಸಂದೇಶಕ್ಕೆ ಅತ್ಯಗತ್ಯವಾದ ಅಭಿವ್ಯಕ್ತಿರೂಪವೇ ಆಗಿದೆ. ಇಷ್ಟಲ್ಲದೆ ಈ ಸಂಬೋಧನೆಗೆ ಇನ್ನೊಂದು ಮಗ್ಗಲೂ ಇದೆ. ಒಂದು ನೆಲೆಯಲ್ಲಿ ಈ ಸಂಬೋಧನೆ ಭ್ರಾತೃತ್ವದ ಒಂದು ಸೂಚಕ ಮಾತ್ರವೇ ಆಗಿದೆ. ಇನ್ನೊಂದು ನೆಲೆಯಲ್ಲಿ ಇದಕ್ಕೆ ಈ ಸೂಚಕತೆಯನ್ನು ಮೀರಿದ ಸೂತ್ರದ ಸ್ವರೂಪವೂ ಇದೆ. ಈ ಸಂಬೋಧನೆಯಲ್ಲಿನ ಅಮೆರಿಕದ’ ಎಂಬ ವಿಶೇಷಣಕ್ಕೆ ಬದಲಾಗಿ ಆ ಜಾಗದಲ್ಲಿ ಇನ್ನಾವುದೇ ಪ್ರದೇಶ ಅಥವಾ ಧರ್ಮ ಅಥವಾ ಜನಾಂಗದ ಹೆಸರನ್ನು ವಿಶೇಷಣವಾಗಿ ಬಳಸಬಹುದಾದ ಸಾಧ್ಯತೆಯನ್ನು ಅದು ಪ್ರಕಟಿಸುತ್ತದೆ; ಅಷ್ಟೇ ಅಲ್ಲ, ಹಾಗೆ ಬಳಸಲು ಸಾಧ್ಯವಾದಾಗಲೇ ಆ ಸಂಬೋಧನೆ ಅಂತಿಮವಾಗಿ ಸಾರ್ಥಕವಾಗುತ್ತದೆ. ಭ್ರಾತೃತ್ವದ ಕಥನ ಸ್ವಾಮಿ ವಿವೇಕಾನಂದರ ಶಿಕಾಗೋ ಸಂದೇಶದ ಕಥನವನ್ನು ಸಾಮಾನ್ಯವಾಗಿ ಹಿಂದೂ ಧಾರ್ಮಿಕತೆಯ ಕಥನವನ್ನಾಗಿ ನೋಡಲಾಗುತ್ತದೆ. ಆದರೆ ನಾವು ಈವರೆಗೆ ಗಮನಿಸಿರುವ ತಾತ್ತ್ವಿಕತೆಯ ಬೆಳಕಿನಲ್ಲಿ ನೋಡುವುದಾದರೆ,ಅದು. ಹಿಂದೂ ಧಾರ್ಮಿಕತೆಯೂ ಒಳಗೊಂಡಂತೆ ಯಾವುದೇ ಧಾರ್ಮಿಕತೆಯು ವಿಶ್ವಸಾಮಾನ್ಯವಾಗುವ ಅರ್ಹತೆಯನ್ನು ಪಡೆಯಬೇಕಾದರೆ ಅದರೊಳಗೆ ಸಂಭವಿಸಲೇಬೇಕಾಗಿರುವ ಪರಿಷ್ಕರಣದ ಅಗತ್ಯಕ್ಕಾಗಿ ನೀಡಿದ ಒಂದು ಪಂಥಾಹ್ವಾನವಾಗಿದೆ. ಅಲ್ಲದೆ ಈ ಪರಿಷ್ಕರಣವನ್ನು ಅದು ಐಚ್ಛಿಕವಾಗಿಸದೆ ಆಧುನಿಕ ಯುಗದ ಐತಿಹಾಸಿಕ ಅಗತ್ಯವನ್ನಾಗಿ ಮಾಡುತ್ತದೆ. ಹೀಗೆ ಪರಿಷ್ಕರಣಗೊಳ್ಳದಿದ್ದರೆ ಅವು ತಮ್ಮ ತಮ್ಮ ಸಣ್ಣ ಬಾವಿಗಳಲ್ಲಿ ಕೊಳೆತು ನಾರಬೇಕಾದೀತೆಂಬ ಎಚ್ಚರಿಕೆಯನ್ನೂ ನೀಡುತ್ತದೆ.

ಹೀಗಾಗಿ ಶಿಕಾಗೋ ಸಂದೇಶದ ಕಥನವೆನ್ನುವುದು ವಿಶ್ವಭ್ರಾತೃತ್ವದ ರಚನೆಗಾಗಿ ನೀಡಿದ ಆಹ್ವಾನವೊಂದರ ಕಥನವಾಗಿದೆ. ಅದು ಯಾವುದೇ ಮತ-ಧರ್ಮ-ಜನಾಂಗ-ಸಿದ್ಧಾಂತ-ಆಚರಣೆಗಳ ವಿರುದ್ಧವಾದ ಖಂಡನೆಯ ಕಥನವಾಗದೆ ಸಂವಾದದ ಕಥನವಾಗಿದೆ. ಅದು ಯಾರನ್ನೂ ಪ್ರತಿಸ್ಪರ್ಧಿಯನ್ನಾಗಿ ಪರಿಗಣಿಸದ ಪ್ರೀತಿಯ ಕಥನವೂ ಆಗಿದೆ. ಇನ್ನಾವುದೇ ತಾತ್ತ್ವಿಕತೆಗೆ ಪ್ರತಿಕಥನವಾಗದೆ ಅದು ಎಲ್ಲ ತಾತ್ತ್ವಿಕತೆಗಳೊಂದಿಗಿನ ಸಹಕಥನವಾಗಿದೆ. ಆದ್ದರಿಂದ ಇಲ್ಲಿ ವಿಜಯಕ್ಕಿಂತಲೂ ವಿಕಾಸವೇ ಮುಖ್ಯವಾಗಿದೆ. ವಿಶ್ವಧರ್ಮ ಸಮ್ಮೇಳನದ ಮುಕ್ತಾಯದ ಅಧಿವೇಶನದಲ್ಲಿ ಸ್ವಾಮಿಜಿಯವರಾಡಿದ ಮಾತುಗಳು ಇದನ್ನು ಸಂದೇಹಕ್ಕೆಡೆಯಿಲ್ಲದಂತೆ ರುಜುವಾತುಪಡಿಸಿವೆ.

ವಿಶ್ವಧರ್ಮಸಮ್ಮೇಳನವು ಜಗತ್ತಿಗೆ ಏನನ್ನಾದರೂ ತೋರಿಸಿಕೊಟ್ಟಿದ್ದರೆ ಅದು ಇದು: ಪಾವಿತ್ರ್ಯ, ಪರಿಶುದ್ಧತೆ ಮತ್ತು ಔದಾರ್ಯಗಳು ಜಗತ್ತಿನಲ್ಲಿ ಯಾವುದೋ ಒಂದು ಮತ ಪಂಥಕ್ಕೆ ಮಾತ್ರ ಸೇರಿದ ಸ್ವತ್ತಲ್ಲ ಹಾಗೂ ಪ್ರತಿಯೊಂದು ಧರ್ಮವೂ ಅತ್ಯಂತ ಉದಾತ್ತಚರಿತರಾದ ಸ್ತ್ರೀಯರು ಮತ್ತು ಪುರುಷರನ್ನು ನಿರ್ಮಿಸಿದೆ ಎಂಬುದನ್ನು ಅದು ಜಗತ್ತಿಗೆ ಸಾಬೀತುಪಡಿಸಿದೆ. ಈ ಸಾಕ್ಷ್ಯದ ಸಮಕ್ಷಮದಲ್ಲೂ ಯಾರಾದರೊಬ್ಬನು ಕೇವಲ ತನ್ನ ಧರ್ಮವೊಂದು ಮಾತ್ರ ಉಳಿಯಬೇಕು, ಉಳಿದುದೆಲ್ಲವೂ ವಿನಾಶ ಹೊಂದಬೇಕು ಎಂದು ಕನಸು ಕಂಡರೆ, ಅವನ ಬಗ್ಗೆ ನಾನು ನನ್ನ ಹೃದಯಾಂತರಾಳದಿಂದ ಅನುಕಂಪವನ್ನು ತೋರುತ್ತೇನೆ; ಅಲ್ಲದೆ ಅವನಿಗೆ ತಿಳಿಸುತ್ತೇನೆ – ಪ್ರತಿಯೊಂದು ಧರ್ಮದ ಧ್ವಜದ ಮೇಲೆಯೂ, ಪ್ರತಿರೋಧದ ನಡುವೆಯೂ, ಶೀಘ್ರವೇ ಬರೆಯಲ್ಪಡುವುದೇನೆಂದರೆ,ಸಹಾಯವೇ ಹೊರತು ಕಿತ್ತಾಟವಲ್ಲ’, ಅರಗಿಸಿಕೊಳ್ಳುವುದೇ ಹೊರತು ವಿನಾಶವಲ್ಲ,’ಸಾಮರಸ್ಯ-ಶಾಂತಿಗಳೇ ಹೊರತು ವೈಮನಸ್ಯವಲ್ಲ’.’’12

ಸ್ವಾಮಿಜಿ

ಉಲ್ಲೇಖಗಳು ಮತ್ತು ಟಿಪ್ಪಣಿಗಳು
1. . The Complete works of Swami Vivekananda, (Kolkata, Advaita Ashrama, 2015) Vol. I pp.x-xii.,
2.
3. Lakshmi Nivas Jhunjhunjunwala, The world Parliament of Religions, 1983, (Kolkata, Advaita Ashrama, 2010), P.70, 2010)
4. ಅದೇ, ಪು. 71.
5. ಅ.W.I.P.5
6. ಅದೇ ಪು. 6-7.
7. ಜೊತೆಗೆ ನೋಡಿ: `…. ಅನಾದಿ ಅನಂತ ಅಲೌಕಿಕ ಸದಾಸ್ಮಿತ ಜ್ಞಾನರಾಶಿಗೆವೇದ’ ಎಂದು ನಾಮಧೇಯ…. ವೇದನಾಮಕ ಶಬ್ದರಾಶಿಯ ವಿಚಾರವಾಗಿ ಇನ್ನೊಂದು ವಿಷಯವನ್ನು ತಿಳಿದು ನೆನಪಿನಲ್ಲಿಡಬೇಕು. ಏನೆಂದರೆ, ಆ ಶಬ್ದರಾಶಿಯಲ್ಲಿ ಯಾವ ಭಾಗವು ಲೌಕಿಕವೊ, ಯಾವ ಭಾಗವು ಬರಿಯ ಅರ್ಥವಾದ’ ಅಥವಾ ಐತಿಹ್ಯ ಮಾತ್ರವೊ ಆ ಭಾಗಗಳುವೇದ’ವಲ್ಲ. ದೇಶ, ಕಾಲ, ಪಾತ್ರಾತೀತವಾದ ಅತೀಂದ್ರಿಯ ಜನ್ಯವಾದ ಅಲೌಕಿಕ ಜ್ಞಾನಭಾಗಕ್ಕೆ ಮಾತ್ರ `ವೇದ’ ಎಂದು ಹೆಸರು. (ಕುವೆಂಪು, ಶ್ರೀರಾಮಕೃಷ್ಣ ಪರಮಹಂಸ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 1973, ಪು. 243-244)
8. ಅ.W. I.P.7 ಪೂರ್ವೋಕ್ತ.
9. ಅದೇ, ಪು. 17.
10. ಅದೇ, ಪು. 18.
11. ಅದೇ, ಪು. 19.