ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬದುಕಿನ ಫಿಲಾಸಫಿ ಹೊದ್ದ ‘ಬೈ 2 ಕಾಫಿ’

ಗೀತಾ ಡಿಸಿ

ಈ ಕಾಲನೆಂಬ ಬ್ರಹ್ಮಾಂಡದೊಡಲಲ್ಲಿ ಅದೇನೇನು ಅಡಗಿದೆಯೋ! ಆಡಂ ಮತ್ತು ಈವ್‌ರ ಆದಿಯಾಗಿ ನಿಧನಿಧಾನವಾಗಿ ಸಮಾಜವೆಂಬ ಸಂಸ್ಥೆ ರೂಪುಗೊಳ್ಳುತ್ತಾ ಕಾಲಕಾಲಕ್ಕೆ ತನ್ನ ಒಳಿತಿಗೋ, ಕೆಡುಕಿಗೋ, ತನ್ನ ಸ್ವಾಸ್ಥ್ಯಕ್ಕೋ, ಅಧಿಕಾರಕ್ಕೋ, ಸಮಾಧಾನಕ್ಕೋ, ಶಾಂತಿಗೋ, ನಂಬಿಕೆಗೋ, ಸ್ವಪ್ರತಿಷ್ಟೆಗೋ… ಹೀಗೆ ಯಾವುದೋ ಒಂದು ಕಾರಣಕ್ಕೆ ತಾನು ಹೀಗಿರಬೇಕೆಂಬ ನಿಯಮಗಳನ್ನು ಸೃಷ್ಟಿಸಿಕೊಳ್ಳುತ್ತಾ ಸಾಗುತ್ತಲೇ ಇದೆ. ಹಾಗೆ ಒಂದು ತಲೆಮಾರಿನಲ್ಲಿ ಸೃಷ್ಟಿಗೊಂಡ ನಿಯಮಗಳು ಅದರ ಮುಂದಿನ ತಲೆಮಾರಿನ ಕಾಲಕ್ಕೆ ಮುರಿದು ಬಿದ್ದು, ಮತ್ತೆ ಹೊಸತೊಂದು ಸೃಷ್ಟಿಯಾಗಿ, ಮತ್ತೊಂದನ್ನು ಅಲಂಕರಿಸಿಕೊಳ್ಳುತ್ತಾ ಮುಂದೆ ಹೆಜ್ಜೆ ಹಾಕುತ್ತಿರುತ್ತದೆ.

ಪ್ರತಿಕಾಲವೂ ತನ್ನದೇ ಆದ ಒಂದಲ್ಲಾ ಒಂದು ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ, ಕೌಟುಂಬಿಕ ಸಂಘರ್ಷವುಳ್ಳ ಮನಸ್ಥಿತಿಯನ್ನು ಹೊದ್ದ ತೊಳಲಾಟದಿಂದ ಕೂಡಿದ್ದು, ಇದು ಪ್ರತಿ ಮಗು/ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತಿರುತ್ತದೆ. ಇದರ ಪರಿಣಾಮವಾಗಿ ಸಮಾಜದಲ್ಲಿ ಅನೇಕ ರೀತಿಯ ಹೊಸ ಹೊಸ ವಿಚಾರಗಳು, ಸಂಘರ್ಷಗಳು ಹುಟ್ಟುತ್ತಾ, ಹೊಸತಾದುದೇ ರೂಢಿಯಾಗುತ್ತಾ, ಮುಂದೊಂದು ದಿನ ಅದೂ ಹಳತಾಗುತ್ತಾ ಕೊನೆಗೆ ಸಾಮಾಜಿಕವಾಗಿ ದಾಖಲಾಗಿ ತನ್ನ ಹೆಜ್ಜೆಯ ಗುರುತೂರುತ್ತಾ, ಎಷ್ಟೋ ವೇಳೆ ಕೆಲವು ಹಳತಾದುದೂ ಮತ್ತೆ ಮುನ್ನೆಲೆಗೆ ಬಂದು ಪುನರಾವರ್ತನೆಗೊಂಡು ಸಾಗುತ್ತಿರುತ್ತವೆ. ನಮ್ಮಲ್ಲಿರುವ ಲಿಂಗ-ಜಾತಿ-ವರ್ಗ-ಧರ್ಮ, ಮದುವೆ, ಕುಟುಂಬ ಸಂಬಂಧಿತ ಸಂಘರ್ಷಗಳನ್ನೆಲ್ಲ ಈ ಹಿನ್ನೆಲೆಯಲ್ಲಿ ಗಮನಿಸಬಹುದು.

ಸಾಮಾನ್ಯವಾಗಿ ಅನೇಕ ಕಟ್ಟುಕಟ್ಟಳೆಗಳನ್ನು ಹೊಂದಿರುವ ಸಮಾಜದಲ್ಲಿ/ಕುಟುಂಬದಲ್ಲಿ ಯಾರೊಂದಿಗೂ ಹೇಳಿಕೊಳ್ಳಲಾಗದ, ವ್ಯಕ್ತಿಯೊಳಗಿನ ಅಂತರಂಗದ ತೊಳಲಾಟಗಳು ಎಲ್ಲಾ ಕಾಲಕ್ಕೂ ಇದ್ದೇ ಇರುತ್ತವೆ. ಅಂತಹ ಅನೇಕರ ತೊಳಲಾಟಗಳು ಸಾರ್ವತ್ರಿಕವಾಗಿ ಸಮಾಜದಲ್ಲಿ ಬೇರೂರಲು ಸಾಹಿತ್ಯ, ಸಿನಿಮಾ, ರಂಗಭೂಮಿಯಂತಹ ಸೃಜನಶೀಲ ಕಲಾಮಾಧ್ಯಮಗಳು ಮುನ್ನೆಲೆಯಲ್ಲಿದ್ದು ಸಹಕರಿಸುತ್ತಿರುತ್ತವೆ; ಹೊಸ ಪ್ರಕ್ರಿಯೆಗಳ ಸಂಚಲನಕ್ಕೆ ಕಾರಣವಾಗುತ್ತಿರುತ್ತವೆ.

ಸೃಜನಶೀಲ ಮನಸ್ಸುಗಳು ತಮ್ಮ ಹಿಂದಿನ ತಲೆಮಾರಿನ ಭಾವನಾತ್ಮಕ ವಿಚಾರಗಳನ್ನು ವೈಜ್ಞಾನಿಕ ತರ್ಕದೊಂದಿಗೆ ಮುಂದಿಟ್ಟು ಪ್ರಶ್ನಿಸುತ್ತಲೇ ಹೊಸತೊಂದನ್ನು ಹುಟ್ಟುಹಾಕುತ್ತಿರುತ್ತವೆ. ಹುಟ್ಟಿದ ಹೊಸ/ಆಧುನಿಕ ಮನಸ್ಥಿತಿಯ ಆಲೋಚನೆಯನ್ನೂ ಕೂಡ ಅದರ ಮುಂದಿನ ತಲೆಮಾರು ಪ್ರಶ್ನಿಸುತ್ತದೆ. ಹೀಗೆ ಪ್ರತಿ ಹೊಸ ತಲೆಮಾರಿಗೂ ತಮ್ಮ ಹಿಂದಿನ ಆಲೋಚನೆಗಳೆಲ್ಲವೂ ಸಂಪ್ರದಾಯವಾಗಿಯೋ, ಗೊಡ್ಡಾಗಿಯೋ ಕಾಣುತ್ತಿರುತ್ತವೆ!

ಹೀಗೆ ಬದಲಾಗುವ ಕಾಲಮಾನಕ್ಕನುಗುಣವಾಗಿ ಆಲೋಚನಾಕ್ರಮಗಳೂ ಬದಲಾಗಿ ಯಾವುದು ಸರಿ? ಯಾವುದು ತಪ್ಪು? ಎನ್ನುವ ಜಿಜ್ಞಾಸೆಯೊಂದಿಗೇ ಎಷ್ಟೋ ಕಾಲ ಸರಿದುಹೋಗಿರುತ್ತದೆ. ಸಮಾಜದ ‘ಒಪ್ಪಿತ ಮೌಲ್ಯ’ಗಳನ್ನು ಮೀರಲಾಗದೆ, ತಮ್ಮೊಳಗೆ ತಮ್ಮ ಹಿರಿಯರು ಸೃಷ್ಟಿಸಿದ/ಒಪ್ಪಿಕೊಂಡ ಸಂಪ್ರದಾಯಗಳನ್ನು ಅರಗಿಸಿಕೊಳ್ಳಲೂ ಆಗದೇ ಒದ್ದಾಡುವ ಜೀವಗಳೆಷ್ಟೋ! ಎಲ್ಲೋ ಕೆಲವೊಬ್ಬರು ಇರುವ ಒಂದೇ ಬದುಕನ್ನು ತಮ್ಮಿಚ್ಛೆಯಂತೆ ಬದುಕುವ ಗಟ್ಟಿ ನಿರ್ಧಾರದೊಂದಿಗೆ ತಮ್ಮೊಳಗನ್ನು ತಾವೇ ಮೀರಿಕೊಳ್ಳುವ ಪ್ರಯತ್ನ ಮಾಡುವುದುಂಟು. ತಮಗೆ ಬೇಕಾದ ಹೊಸತನ್ನು ತಮ್ಮದೇ ರೀತಿಯ ಹೋರಾಟದೊಂದಿಗೆ ಸೃಷ್ಟಿಸಿಕೊಳ್ಳುತ್ತಾ ಸಾಗುವಾಗ ವ್ಯಕ್ತಿಗತವಾದದ್ದು ನಿಧಾನವಾಗಿ ಸಾರ್ವತ್ರಿಕಗೊಳ್ಳುವುದನ್ನೂ ಕಾಣಬಹುದು.

ಒಂದು ಕಾಲಕ್ಕೆ ಮಧ್ಯಮ ವರ್ಗದ ಕುಟುಂಬಗಳಲ್ಲಿ ಮನೆಯ ಯಜಮಾನನ ತೀರ್ಮಾನವೇ ಅಂತಿಮವಾಗಿರುತ್ತಿತ್ತು. ಶಾಸನವೇ ಆಗಿರುತ್ತಿದ್ದ ಆ ತೀರ್ಮಾನಗಳನ್ನು ಮನೆಯಲ್ಲಿ ಉಳಿದವರೆಲ್ಲರೂ ಮರುಮಾತಿಲ್ಲದೆ ಇಷ್ಟವಿರಲಿ, ಇಲ್ಲದಿರಲಿ ಎದುರಾಡದೆ ಒಪ್ಪಿಕೊಳ್ಳಬೇಕಾಗುತ್ತಿತ್ತು. ದನಿಯೆತ್ತಿ ಮಾತನಾಡುವುದಾಗಲಿ, ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸುವುದಕ್ಕಾಗಲೀ ಅವಕಾಶವಿರುತ್ತಿರಲಿಲ್ಲ.

‘ಪ್ರತಿಯೊಂದನ್ನೂ ಪ್ರಶ್ನಿಸಿಯೇ ನಿಮಗೊಗ್ಗಿದರೆ ಮಾತ್ರ ಒಪ್ಪಿಕೊಳ್ಳಿ’ ಎನ್ನುವ ಆಧುನಿಕ ಶಿಕ್ಷಣ ಪದ್ಧತಿಯ ಪ್ರಶ್ನಿಸುವ ಮನೋಭಾವವುಳ್ಳ ಅಘೋಷಿತ ನಿಯಮವೊಂದು ನಮ್ಮ ನಡುವೆ ಹರಿದಾಡಿದ ಪರಿಣಾಮ, ದನಿಯಿಲ್ಲದ ಅನೇಕರಿಗೆ ದನಿ ಸಿಕ್ಕು ತಮ್ಮೊಳಗಿನ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಾಗಿದೆ. ಆದರೆ, ಈಗಲೂ ನಾವು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದಿದ್ದರೂ, ತಂತ್ರಜ್ಞಾನದ ತುತ್ತತುದಿಯಲ್ಲಿ ಬದುಕುತ್ತಿದ್ದೇವೆಂದು ತೋರಿದರೂ, ವಾಸ್ತವದಲ್ಲಿ ಅನೇಕ ಸಂಪ್ರದಾಯಗಳನ್ನು ಜೋಪಾನವಾಗಿ ಕಾಪಿಟ್ಟುಕೊಂಡಿರುವವರೇ. ಯಾಕೆಂದರೆ ಆಧುನಿಕ ಆಲೋಚನಾಕ್ರಮದ ದಿಕ್ಕು ಬದಲಾದರೂ ಸಂಪ್ರದಾಯದ ಕಟ್ಟುಕಟ್ಟಳೆಗಳು ಅಷ್ಟು ಸುಲಭದಲ್ಲಿ ಬದಲಾಗುವುದಿಲ್ಲ. ಉದಾಹರಣೆಗೆ, ಮಧ್ಯಮ ವರ್ಗದ ಕುಟುಂಬಗಳಲ್ಲಿ ‘ಮದುವೆ’ ಎಂದರೆ ಸಾಕು ಈಗಲೂ ಸಮಾಜ/ಕುಟುಂಬದ ಕಟ್ಟುಗಳನ್ನು ಮೀರಿಕೊಳ್ಳುವುದು ಅಷ್ಟು ಸುಲಭವಲ್ಲ. ಲಿಂಗ, ಜಾತಿ, ವರ್ಗ, ಗೋತ್ರ, ಜಾತಕ, ಶಾಸ್ತ್ರ ಮುಂತಾದುವುಗಳನ್ನೆಲ್ಲಾ ಮೀರಿ ಹುಡುಗ/ ಹುಡುಗಿ ಅವರಿಷ್ಟಪಟ್ಟವರನ್ನು ಮದುವೆ ಮಾಡಿಕೊಳ್ಳುವುದಿರಲಿ, ಆ ಕುರಿತು ತಮ್ಮ ಅಭಿಪ್ರಾಯಗಳನ್ನು, ಭಾವನೆಗಳನ್ನು, ತಮ್ಮೊಳಗಿನ ಸಮಸ್ಯೆಗಳನ್ನು ತಮ್ಮ ಕುಟುಂಬದವರೊಡನೆ ಮುಕ್ತವಾಗಿ ಹಂಚಿಕೊಳ್ಳುವ ಅವಕಾಶವನ್ನೇ ಮಕ್ಕಳಿಗೆ ಕಲ್ಪಿಸಿಕೊಟ್ಟಿರುವುದಿಲ್ಲ. ಈಗಲೂ ನಮ್ಮ ಸಮಾಜ ಎಷ್ಟೇ ಆಧುನಿಕಗೊಂಡರೂ ಮಕ್ಕಳು ಮುಕ್ತವಾಗಿ ದೊಡ್ಡವರೆದುರು ತಮ್ಮ ಮನಸ್ಸು ಬಿಚ್ಚಿ ತಮ್ಮಿಚ್ಛೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಿಲ್ಲ.

ಬದಲಾದ ಆಧುನಿಕ ಕಾಲಮಾನದಲ್ಲಿ ಹದಿಹರೆಯದ ಮನೋಲೋಕವನ್ನು ಸಂಪ್ರದಾಯಸ್ಥ ಮನಸ್ಸು ಹಾಗೂ ಸಂಪ್ರದಾಯಸ್ಥ ಮನಸ್ಸನ್ನು ಆಧುನಿಕ ಮನಸ್ಸು ಪರಸ್ಪರ ಮುಖಾಮುಖಿಯಾಗುವುದನ್ನು ಅಂದರೆ, ಏಕಕಾಲಕ್ಕೆ ಎರಡು ತಲೆಮಾರಿನ ನಡುವೆ ನಡೆಯುವ ತಿಕ್ಕಾಟ, ಮನದಾಳದ ತಳಮಳ, ತೊಳಲಾಟ, ಹೊಯ್ದಾಟಗಳನ್ನು, ಪರಸ್ಪರ ನಿಭಾಯಿಸಿಕೊಳ್ಳುವ ಪರಿಯನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಈಗಾಗಲೇ ಆರು ಪ್ರದರ್ಶನಗಳನ್ನು ಕಂಡ, ಅಭಿಷೇಕ್ ಅಯ್ಯಂಗಾರ್ ರಚಿಸಿ, ನಿರ್ದೇಶಿಸಿರುವ ‘By 2 ಕಾಫಿ’ ನಾಟಕ ನಮ್ಮ ಮುಂದೆ ಅನಾವರಣಗೊಳಿಸುತ್ತದೆ. ಅಥವಾ ನಮ್ಮ ಕಣ್ಣಮುಂದೆ ತೀರಾ ಸಹಜವಾಗಿ ಎಂಬಂತೆ ಘಟಿಸಿಬಿಡುತ್ತದೆ ಎನ್ನವುದೇ ಹೆಚ್ಚು ಸೂಕ್ತವೇನೋ!

ನಗರದ ಮಧ್ಯಮ ವರ್ಗದ ಕುಟುಂಬವೊಂದರ ಭಾರತದ ತಾಯಿ ಮತ್ತು ಉನ್ನತ ಶಿಕ್ಷಣ ಪಡೆದು ಅಮೆರಿಕದಲ್ಲಿ ನೆಲೆಯೂರಿ, ಆಗಾಗ್ಗೆ ತನ್ನಮ್ಮನನ್ನು ಕಾಣಲು ಬರುವ ಅವಳ ಮಗನ ನಡುವಿನ ಭಾವನಾತ್ಮಕ ಸಂಘರ್ಷದ ಕಥಾಹಂದರವುಳ್ಳ ನಾಟಕ ‘By 2 ಕಾಫಿ’.

ನಮ್ಮ ಆಧುನಿಕ ಸಮಾಜ ತನ್ನೊಳಗೆ ಇನ್ನೂ ಯಾವ ಯಾವ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿದೆಯೋ, ತಮ್ಮೊಳಗಿನ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅದೆಷ್ಟು ಜೀವಗಳು ತಳಮಳಿಸುತ್ತಿವೆಯೋ, ಒಪ್ಪಿಕೊಳ್ಳಲು ಇನ್ನೂ ಹಿಂಜರಿಯುತ್ತಿವೆಯೋ ಅಂಥದನ್ನು ಲೋಕದ ಒಳಗಣ್ಣಿಗೆ ಕಾಣಿಸುವಂತೆ ಮಾಡಿರುವ ಪ್ರಯತ್ನ ನಾಟಕದ್ದು. ‘ಹೌದಲ್ಲಾ! ಇಷ್ಟು ಸಹಜವಾದುದು ನಮ್ಮ ಅರಿವಿಗೆ ಬಂದೇ ಇರಲಿಲ್ಲವಲ್ಲ!’ ಎಂದು ಆಲೋಚನೆಗೂ ಹಚ್ಚುತ್ತದೆ.

ಭಾರತೀಯ ಪರಂಪರೆಯಲ್ಲಿ ಈಗಾಗಲೇ ಬಿಂಬಿತಗೊಂಡಿರುವ ‘ತಾಯಿ’ಯ ಪರಿಕಲ್ಪನೆಯ ಪ್ರತಿರೂಪ ಈ ನಾಟಕದ ತಾಯಿ/ಅಮ್ಮ. ತನ್ನೊಳಗೆ ಭಾವನೆಗಳನ್ನೇ ಹೊದ್ದವಳು. ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದರೂ, ತನಗಾಗಿ ಮಗನಿಂದ ಏನನ್ನೂ ನಿರೀಕ್ಷಿಸದೆ, ಮಗನ ಒಳಿತಿಗಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟವಳು. ಅವನ ಮೇಲೆ ಪ್ರೀತಿಯ ಮಳೆಯನ್ನೇ ಸುರಿಯುವ ಭಾವನಾಜೀವಿಯಾದ ಅವಳಿಗೆ ಮಗನೇ ಸರ್ವಸ್ವ. ಅಧ್ಯಾಪಕಿಯಾಗಿ ಉನ್ನತ ಹುದ್ದೆಯಲ್ಲಿದ್ದರೂ ಇಲ್ಲಿನ ಪ್ರತಿ ಘಟನೆಗೂ ತಾನು ನಂಬುವ ಸಂಪ್ರದಾಯಗಳನ್ನು, ಶಾಸ್ತ್ರಗಳನ್ನು ತಳುಕು ಹಾಕುವವಳು. ಸದ್ಯ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿರುವ ಮಗ ಈ ಸಲ ಭಾರತಕ್ಕೆ ತನ್ನನ್ನು ನೋಡಲು ಬಂದಾಗ, ಏನಾದರೂ ಮಾಡಿ ಅವನ ಮದುವೆ ಮಾಡಿಸಲೇಬೇಕೆಂದು, ಅದಕ್ಕೂ ಮೊದಲು ಮಗನನ್ನು ಮದುವೆಗೆ ಒಪ್ಪಿಸಲು ತನ್ನ ಮನೆದೇವರಿಗೆ ಹರಕೆ ಹೊತ್ತು, ಮಗನ ಜಾತಕ ಹಿಡಿದು ಕಂಡವರಿಗೆಲ್ಲಾ ತೋರಿಸುತ್ತಾ, ಅವನ ಬಗ್ಗೆ ಎಲ್ಲೆಡೆ ಹೆಮ್ಮೆಯಿಂದ ಹೇಳುತ್ತಾ, ಬಹುತೇಕ ತಾಯಂದಿರಂತೆ ಸದಾ ತನ್ನ ಪ್ರೀತಿಯ, ಪರ್ಫೆಕ್ಟ್ ಮಗನ(ಸದಾ ತನ್ನ ಮಗ ಹಾಗಿರಬೇಕೆನ್ನುವುದು ಅವಳ ಬಯಕೆ.) ಭವಿಷ್ಯದ ಬಗ್ಗೆ ಚಿಂತಿಸುವವಳು; ಸದಾ ಆತನ ಸಾಧನೆಯ ಬಗ್ಗೆ ಸಾರುವ ಮಾತಿನ ಚಪಲವುಳ್ಳವಳು.

ಮಗನೋ ಅವಳ ಈ ಆಲೋಚನೆಗಳಿಗೆ ತದ್ವಿರುದ್ಧ! ತನ್ನ ಮದುವೆಯ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡ ಅವನಮ್ಮನ ಸಂಪ್ರದಾಯಸ್ಥ ಆಲೋಚನೆಗಳಿಂದ ದೂರ ಉಳಿದವನು. ಅಮ್ಮ ಹುಡುಕುವ ಹುಡುಗಿ, ಮದುವೆಯಿಂದ ತಪ್ಪಿಸಿಕೊಳ್ಳಲು ಹಾಗೂ ತನ್ನೊಳಗಿನ ತಾಕಲಾಟವನ್ನು ಅಮ್ಮನಿಗೆ ಹೇಳಲಾಗದೆ, ಒಳಗೇ ಒದ್ದಾಡುವ ಇವನು ತುಂಬಾ ಪ್ರಾಕ್ಟಿಕಲ್. ಆದರೆ, ತನಗೆಂದು ಏನನ್ನೂ ಬಯಸದ ನಿಸ್ವಾರ್ಥಿ ಅಮ್ಮನೆಂದರೆ ಅವನಿಗೆ ಅತ್ಯಂತ ಪ್ರೀತಿ, ಗೌರವ, ಹೆಮ್ಮೆ ಮತ್ತು ಕಾಳಜಿ. ಆ ಸಲಿಗೆಯಲ್ಲೇ ಅವಳ ಹರಕೆ, ಸಂಪ್ರದಾಯಗಳನ್ನು ಪ್ರಶ್ನಿಸುವುದಲ್ಲದೆ, ತನ್ನ ಆಲೋಚನೆಗಳನ್ನು ಅವಳಿಗೆ ಅರ್ಥವಾಗುವಂತೆ ತಿಳಿಹೇಳಲು ಪ್ರಯತ್ನಿಸುವವ. ಕುಟುಂಬ, ಮನೆ, ಮದುವೆ, ಗಂಡ, ಹೆಂಡತಿ, ಮಕ್ಕಳು, ಬಾಂಧವ್ಯ, ಸಂಗಾತಿ, ಸಂಬಂಧ– ಇಂಥವುಗಳಿಗೆ ಅಮ್ಮನಿಗೆ ಅವಳದ್ದೇ ಆದ ಸಮರ್ಥನೆ ಇದ್ದರೆ, ಮಗನಿಗೆ ಇವನದ್ದೇ ಸಮರ್ಥನೆಯಿದೆ!

ಅಮ್ಮನ ಪ್ರೀತಿಗೆ ಕಟ್ಟುಬಿದ್ದು ವಾಡಿಕೆಯಂತೆ ಬೆಂಗಳೂರಿಗೆ ಬಂದಿರುವ ಮಗ, ಅವಳೊಂದಿಗೆ ಮನೆದೇವರಿಗೆ ಹರಕೆ ಸಲ್ಲಿಸಲು ಒಲ್ಲದ ಮನಸ್ಸಿನಿಂದಲೇ ಹೊರಟಿದ್ದಾನೆ. ರಾತ್ರಿ ಪಯಣದಲ್ಲಿ ಕಾರು ಕೆಟ್ಟು ನಿಂತು, ಅದು ರಿಪೇರಿಯಾಗುವವರೆಗೆ ಅಲ್ಲೇ ಹತ್ತಿರದ ಡಾಬವೊಂದರಲ್ಲಿ ‘ಬೈ ಟು ಕಾಫಿ’ ಕುಡಿಯುತ್ತಾ ಕಳೆಯುವ ಸಮಯದಲ್ಲಿ ಅವರಿಬ್ಬರ ನಡುವೆ ನಡೆಯುವ ಮಾತುಕತೆಗಳು, ಸಂಘರ್ಷಗಳೆಲ್ಲಾ ಅಲ್ಲೇ ಗಿಟಾರ್ ನುಡಿಸುವ ಕಲಾವಿದ(ಇದು ನಾಟಕದ ಸಂಗೀತ ಸಂಯೋಜನೆಯಾಗಿಯೂ ಆಗಿದೆ), ಕಾಫಿ ಹುಡುಕಿ ಬಂದು ಜಗಳವಾಡಿಕೊಂಡು ಎದ್ದುಹೋಗುವ ಎಳೆಯ ವಯಸ್ಸಿನ ಗಂಡಹೆಂಡತಿ, ಮತ್ತು ತನ್ನ ಮಗನಿಗೆ ಸೊಸೆಯಾಗಬಹುದೇ ಎಂದು ಆಲೋಚಿಸಲು ಅನುವುಮಾಡಿಕೊಡುವ ಅಮ್ಮನ ಕಣ್ಣಿಗೆ ಬೀಳುವ ಯುವತಿ ಹಾಗೂ ಪ್ರೇಕ್ಷಕರಾದ ನಮ್ಮನ್ನು ಸಾಕ್ಷಿಯನ್ನಾಗಿಸುತ್ತವೆ.

ಅಭಿಷೇಕ್ ಅಯ್ಯಂಗಾರ್

ಅಲ್ಲಿ ಟೈಂ ಪಾಸಿಗೆಂದು ಅಮ್ಮ- ಮಗ ಕುಡಿಯುವ ‘ಬೈ ಟು ಕಾಫಿ’ ನೋಡನೋಡುತ್ತಿದ್ದಂತೆಯೇ ಬದುಕಿನ ಫಿಲಾಸಫಿಯಾಗಿ ಬದಲಾಗಿ ‘ಕಾಫಿ’ ಯೊಂದಿಗೆ ಇಡೀ ನಾಟಕವೇ ಒಂದು ರೂಪಕವಾಗಿಬಿಡುತ್ತದೆ! ‘ಡಿಕಾಕ್ಷನ್ ಮತ್ತು ಹಾಲು ಹದವಾಗಿ ಬೆರೆತರೆ ಹೇಗೆ ಒಂದೊಳ್ಳೆಯ ಕಾಫಿ ತಯಾರಾಗುತ್ತದೆಯೋ ಹಾಗೆ ಈ ಬದುಕಿನಲ್ಲೂ ಗಂಡ-ಹೆಂಡತಿ ಹದವಾಗಿ ಬೆರೆತು ಬಾಳಿದರೆ ಒಂದೊಳ್ಳೆಯ ಸಂಬಂಧವಾಗಿ ಪರಸ್ಪರ ಹಂಚಿ ಕುಡಿಯುವ ರುಚಿಕಟ್ಟಾದ ‘ಬೈ ಟು ಕಾಫಿ’ಯಾಗುತ್ತದೆ. ಇದರಲ್ಲಿ ಬದುಕಿನ ತತ್ವವೇ ಅಡಗಿದೆ’ ಎನ್ನುವುದು ಅಮ್ಮನ ವಾದ. ಅದುವರೆಗೂ ಹಾಲಿಲ್ಲದೆ ಬರೀ ಕಹಿ ಡಿಕಾಕ್ಷನ್ ಮಾತ್ರ ಕುಡಿದೆನೆನ್ನುವ ಮಗ, ‘ಕೇವಲ ಜಾತಕದಿಂದ ಹೊಂದಾಣಿಕೆಯಾಗುತ್ತದೆಂದು ನಂಬಿ, ಗೊತ್ತಿಲ್ಲದ ಯಾರನ್ನೋ ಮದುವೆಯಾಗಿ, ಸಂಸಾರ ಸುಖಮಯವಾಗಿರುತ್ತದೆಂದು ಮಾತಾಡುವುದು ಅಮ್ಮಂದಿರ ಹುಸಿ ನಂಬುಗೆಯ ಆಶಯ/ಕನಸಷ್ಟೇ. ವಾಸ್ತವದಲ್ಲಿ ಹಾಗಿರದು’ ಎನ್ನುವುದನ್ನು ತನ್ನಮ್ಮನಿಗೆ ಮನದಟ್ಟು ಮಾಡಿಸಲು ಪ್ರಯತ್ನಿಸುತ್ತಾನೆ. ‘ಹೋಗಲಿ ಯಾರಾದರೂ ಹುಡುಗಿಯನ್ನು ಇಷ್ಟಪಟ್ಟಿದ್ದರೆ ತಿಳಿಸು, ಅವಳನ್ನೇ ಬೇಕಾದರೆ ಸೊಸೆಯೆಂದು ಮನೆ ತುಂಬಿಸಿಕೊಳ್ಳುತ್ತೇನೆ’ ಎನ್ನುವಲ್ಲಿಗೆ ಬಂದು, ಪೀಡಿಸುತ್ತಿದ್ದ ಅಮ್ಮನಿಗೆ, ಇನ್ನೂ ಯಾವ ಸಂಗಾತಿಯೂ ತನಗಿಲ್ಲವೆಂದು ತನ್ನೊಳಗೆ ಅಡಗಿಸಿಟ್ಟುಕೊಂಡ ಸತ್ಯವನ್ನು ಹೇಗೋ ತಿಳಿಸುತ್ತಾನೆ. ಅದುವರೆಗೂ ಮಗನ ಬಗ್ಗೆ ಎಷ್ಟೆಲ್ಲಾ ಕನಸುಗಳನ್ನು ಹೊತ್ತಿದ್ದ ಅಮ್ಮನಿಗೆ ಈ ಸುದ್ದಿಯನ್ನು ಕೇಳಿದ ತಕ್ಷಣ ಆಘಾತವಾಗಿ, ಸತ್ಯವನ್ನು ಅರಗಿಸಿಕೊಳ್ಳಲಾಗದೆ ತತ್ತರಿಸುತ್ತಾಳೆ. ಈ ಮೊದಲು, ಹೆಂಡತಿಯನ್ನ ಕಳೆದುಕೊಂಡ ಪರಿಚಿತ ವ್ಯಕ್ತಿಯೊಬ್ಬ ಈಕೆಯೊಂದಿಗೆ ಮಾತಾಡಿ, ಈ ವಯಸ್ಸಿನಲ್ಲಿ ತನಗೊಬ್ಬ ಸಂಗಾತಿಯ ಅಗತ್ಯವಿರುವುದರಿಂದ ಮದುವೆಯಾಗಲು ಬಯಸಿ ಈಕೆಯ ಒಪ್ಪಿಗೆಗಾಗಿ ಕಾದಿರುವ ವಿಷಯವನ್ನು ಮಗನ ಗಮನಕ್ಕೆ ತಂದಿದ್ದನ್ನು, ಮಗ ಅದಕ್ಕೆ ಒಪ್ಪಿ, ಬೆಂಬಲಿಸಿದ್ದೆಲ್ಲವೂ ಅವಳನ್ನು ಆಲೋಚನೆಗೆ ಹಚ್ಚುತ್ತದೆ.

ಬದಲಾದ ಕಾಲದಲ್ಲಿ ಬದುಕಿನ ಆಲೋಚನೆಗಳ ದಿಕ್ಕೂ ಬದಲಾಗುತ್ತಿವೆ ಎಂಬುದು ಅವಳ ಅರಿವಿಗೆ ಬರುತ್ತದೆ. ಇಂಥವೆಲ್ಲಾ ಅವಳಿಗೆ ಅನಿರೀಕ್ಷಿತವೆನಿಸಿದರೂ, ಕ್ಷಣ ಕಾಲ ಯೋಚಿಸಿ, ನಿಧಾನವಾಗಿ ವಾಸ್ತವ ಅರಿವಾಗುತ್ತದೆ. ಮಗನ ಸಂತೋಷಕ್ಕೆ ಅಡ್ಡಿಯಾಗದೆ, ಟಿಪಿಕಲ್ ಅಮ್ಮನೇ ತಾನಾಗಿ, ಮಗನ ನಿರ್ಧಾರಕ್ಕೆ ಜೊತೆ ನಿಲ್ಲುತ್ತಾಳೆ.

ಇತ್ತ ಮಗನಿಗೂ ತನ್ನೊಳಗನ್ನು ಅಮ್ಮನಿಗೆ ತಲುಪಿಸಿದ ನಿರಾಳತೆ. ಜೊತೆಗೆ ಅಮ್ಮನಿಗೂ. ಮಗ ಮದುವೆಗೆ ಒಪ್ಪಿಕೊಳ್ಳಲೆಂದು ಕಟ್ಟಿಕೊಂಡಿದ್ದ ಹರಕೆಗೆ ಈಗ ಅರ್ಥವಿಲ್ಲದೆ ಆ ಹೊತ್ತಿಗೆ ಕೆಟ್ಟ ಕಾರೂ ರಿಪೇರಿಯಾಗಿ ಇಬ್ಬರೂ ಹಗುರವಾಗಿ ಕಾರಿನತ್ತ ಹೆಜ್ಜೆ ಹಾಕುವುದರೊಂದಿಗೆ ನಾಟಕ ಕೊನೆಗೊಳ್ಳುತ್ತದೆ.

ನಾಟಕ ಮುಗಿದರೂ ಪ್ರೇಕ್ಷಕರು ಅದರ ಗುಂಗಿನಿಂದ ಹೊರಬರಲಾಗದೆ ಇನ್ನೂ ಕುಳಿತೇ ಇದ್ದುದು ನಾಟಕದ ಯಶಸ್ಸಿಗೆ ಸಾಕ್ಷಿ.

ಒಂದು ಕಾಲಕ್ಕೆ ಊಹಿಸಲೂ ಆಗದಿದ್ದ ತಾಯಿ-ಮಗನ ನಡುವಿನ ಮುಕ್ತ ಮನೋಭಾವದಿಂದಾಗಿ, ಅವರೊಳಗೇ ಬಚ್ಚಿಟ್ಟುಕೊಂಡಿದ್ದ ಗುಟ್ಟು ನಿಧಾನವಾಗಿ ಹೊರಬಂದು, ಅವರೊಳಗಿನ ಸಂಘರ್ಷಗಳು ಕಳೆದು, ಇಬ್ಬರ ಬದುಕಿಗೂ ಒಂದು ಹೊಸ ತಿರುವು ಸಿಗುವ, ಇಬ್ಬರ ಮನಸ್ಸುಗಳೂ ಹಗುರವಾಗುವ ಕಥಾಹಂದರವುಳ್ಭ ‘By 2 ಕಾಫಿ’, ಅದರ ಆಲೋಚನೆಯನ್ನು ಎಲ್ಲಿಯೂ ಪ್ರೇಕ್ಷಕರ ಮೇಲೆ ಹೇರುವುದಿಲ್ಲ. ಬದಲಿಗೆ ಚೆಂದದ ಸಂಭಾಷಣೆಯಿಂದಾಗಿ ಪ್ರೇಕ್ಷಕರಲ್ಲಿ ನಗೆಯುಕ್ಕಿಸುತ್ತಿದ್ದರೂ ಗಂಭೀರವಾದ ಚಿಂತನೆಗೆ ಹಚ್ಚುತ್ತದೆ.

ಇದುವರೆಗಿನ ‘ಸಿದ್ಧ ಸಮಾಜ’ದ ನಡಾವಳಿಗಳನ್ನು ಪ್ರಶ್ನಿಸುವ, ಉತ್ತರವೇ ಇರದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ, ಆ ಮೂಲಕ ಸಮಾಜದ ಕಟ್ಟುಗಳನ್ನು ನಿಧಾನವಾಗಿ ಮೀರಿಕೊಳ್ಳುವ ಪ್ರಯತ್ನ ಈ ನಾಟಕದಲ್ಲಿದೆ.

ಎರಡು ತಲೆಮಾರುಗಳ ನಡುವಿನ ಆಲೋಚನೆಗಳ ದಿಕ್ಕನ್ನೇ ಬದಲಾಯಿಸುವುದರೊಂದಿಗೆ ಅಮ್ಮ-ಮಗ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ತಮ್ಮ ಬದುಕನ್ನು ಗ್ರಹಿಸುವ ಮತ್ತು ಕಟ್ಟಿಕೊಳ್ಳುವ ರೀತಿಯನ್ನು ಅತ್ಯಂತ ಸಹಜವಾಗಿ, ಲವಲವಿಕೆಯಿಂದ ಕೂಡಿದ ಸಂಭಾಷಣೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಾಟಕ ಯಶಸ್ವಿಯಾಗಿದೆ.

ನಿತ್ಯ ಚಲನಶೀಲತೆಯಿಂದ ಕೂಡಿದ ಬದುಕಿನ ಪಯಣದಲ್ಲಿ ನಮಗೊಗ್ಗದ ಕಟ್ಟುಗಳನ್ನು ಹೇರಿಕೊಳ್ಳದೆ ಸಹಜವಾಗಿ ನಮಗೊಪ್ಪುವ ‘ಸಂಗಾತಿ’ಯನ್ನು ಆಯ್ಕೆ ಮಾಡಿಕೊಂಡು ಮುಂದೆ ಸಾಗದಿದ್ದಲ್ಲಿ ಕಾರಿನಂತೆ ಬದುಕೂ ಕೆಟ್ಟುನಿಲ್ಲುತ್ತದೆನ್ನುವುದನ್ನು, ಹೊಸತನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದಾಗ ಮಾತ್ರ, ಕೆಟ್ಟ ಕಾರೂ ರಿಪೇರಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆನ್ನುವುದನ್ನು ಸೂಚಿಸುತ್ತದೆ. ರಾತ್ರಿಯ ಹೊತ್ತು ಮತ್ತು ಬಯಲಿನಲ್ಲಿ ನಡೆಯುವ ಕಥೆ ತಲೆತಲಾಂತರದಿಂದ ಬಂಧಿತಗೊಂಡ ಆಲೋಚನೆಗಳು ಮನದಾಳದ ಕತ್ತಲೆಯ ಚೌಕಟ್ಟನ್ನು ಮೀರಿ ಮುಕ್ತಗೊಂಡು ಬೆಳಕಿನೆಡೆಗೆ ಸಾಗುವುದರ ಸಂಕೇತವೆನಿಸುತ್ತದೆ.

ರಂಗದ ನಡುವೆ ಆಗಾಗ್ಗೆ ಮೇಲಿಂದ ಉದುರುವ ಒಣಗಿದ ಎಲೆ, ಎಲ್ಲರೂ ಒಂದಲ್ಲಾ ಒಂದು ದಿನ ಎಲೆಯಂತೆ, ತೊಟ್ಟು ಕಳಚಿ ಉದುರಿಬೀಳುವವರೇ; ಈ ಮಣ್ಣಲ್ಲಿ ಮಣ್ಣಾಗುವವರೇ ಎನ್ನುವುದನ್ನು ಮಾರ್ಮಿಕವಾಗಿ ಹೇಳುತ್ತದೆ. ನಾಲ್ಕು ದಿನದ ಈ ಬದುಕಿನಲ್ಲಿ ಜಾತಿ, ಧರ್ಮ, ಹಣ, ಅಂತಸ್ತು, ಜಾತಕ, ಶಾಸ್ತ್ರ ಇವೆಲ್ಲವನ್ನೂ ಮೀರಿ, ತಮಗೊಗ್ಗುವ ‘ಸಂಗಾತಿ’ಯನ್ನು ತಾವೇ ಆಯ್ಕೆ ಮಾಡಿಕೊಂಡು ಬದುಕಬಾರದೇ? ಎನ್ನುವ ಸಂದೇಶವನ್ನೂ ಕೊಡುವಂತಿದೆ.

ಅಮ್ಮನ ಪಾತ್ರದಲ್ಲಿ ನುರಿತ ಕಲಾವಿದೆ ಡಾ. ಎಂ.ಸ್. ವಿದ್ಯಾ ಹಾಗೂ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂರಜ್ ಕಿರಣ್ ಅವರ ಸಹಜತೆಯಿಂದ ಹಾಗೂ ಲವಲವಿಕೆಯಿಂದ ಕೂಡಿದ ಅಭಿನಯ, ಇಲ್ಲಿನ ರಂಗಸಜ್ಜಿಕೆ, ಬೆಳಕು ಎಲ್ಲವೂ ಪ್ರೇಕ್ಷಕರ ಗಮನ ಸೆಳೆಯುತ್ತದೆ. ನಾಟಕದುದ್ದಕ್ಕೂ ಗಮನಸೆಳೆಯುವ ‘ಸೈಲೆನ್ಸ್’ ಇಲ್ಲಿನ ಹೈಲೈಟ್‌ಗಳಲ್ಲಿ ಒಂದು ಎಂದು ಧಾರಾಳವಾಗಿ ಹೇಳಬಹುದು.

ಸರಿ ತಪ್ಪುಗಳ ನಡುವೆ ಚಲಿಸುವ ಈ ಕಾಲವೆಂಬ ಕಾಲ ತನ್ನೊಡಲೊಳಗೆ ಅದೇನೇನನ್ನು ಬಚ್ಚಿಟ್ಟುಕೊಂಡಿದೆಯೋ?!