ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಳಿವಿನಂಚಿನಲ್ಲಿರುವ ಮೀಟರ್ ಗಳು

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಒಬ್ಬ ಪ್ರಯಾಣಿಕ ಆಟೋಗಾಗಿ ಕಾಯುತ್ತಿದ್ದಾನೆ. ಆಟೋ ಅವನನ್ನು ಸಮೀಪಿಸುತ್ತದೆ. ಪ್ರಯಾಣಿಕ “ ಚಂದ್ರಮಂಡಲಕ್ಕೆ ಹೋಗೋದಕ್ಕೆ ಎಷ್ಟು ತೊಗೋತಿಯಾ?”ಎಂದು ಕೇಳಿದಾಗ ಆಟೋ ಚಾಲಕ “ಹನ್ನೆರಡು ನೂರು ಕೋಟಿ” ಎನ್ನುತ್ತಾನೆ. ಅದಕ್ಕೆ ಪ್ರಯಾಣಿಕ “ ಸರಕಾರನೇ 600 ಕೋಟಿ ಅಂತಿದೆ ಅಲ್ಲಯ್ಯಾ !” ಎಂದು ಉದ್ಗಾರ ತೆಗೆದಾಗ ಆಟೋ ಚಾಲಕ ತನ್ನ ಸಹಜ ಧೋರಣೆಯಲ್ಲಿ “ ಬರುವಾಗ ಖಾಲಿ ಬರಬೇಕಲ್ಲ ಅದಕ್ಕೆ” ಎನ್ನುವ ಉತ್ತರ ಕೊಡುತ್ತಾನೆ. ಇದು ಇತ್ತೀಚೆಗೆ ನಮ್ಮ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಾದ ಮೇಲಿನ ನಗೆಹನಿ. ಆದರೆ ಇದು ಬೆಂಗಳೂರು ಆಟೋ ಚಾಲಕರ ಸ್ಟಾಂಡರ್ಡ್ ಮಾತು. ಇಲ್ಲಿ ಯಾಕೆ ಈ ಮಾತು ಹೇಳಬೇಕಾಯಿತು ಅಂತೀರಾ ! ಈಗ ನಾನು ಚರ್ಚೆ ಮಾಡಲು ಹೊರಟಿರುವುದು ಆಟೋಗಳಲ್ಲಿ ಅಳವಡಿಸಿರುವ ಮತ್ತು ಬರೀ ಅಲಂಕಾರಿಕವಾಗಿ ಮಾತ್ರ ಕಾಣುವ ಆಟೋ ಮೀಟರ್ ಗಳ ಬಗ್ಗೆ. 

File:AutoRickshawMeter.JPG - Wikimedia Commons
ಎನ್ಡೇನ್ಜರ್ಡ್ ಸ್ಪೀಸೀಸ್ ಆಟೋ ಮೀಟರ್

ನಮಗೆ ಈ ಭೂಮಿಯ ಮೇಲೆ ಕಣ್ಮರೆಯಾಗುತ್ತಿರುವ ಅನೇಕ ಪ್ರಾಣಿಗಳು, ಕೀಟಗಳು, ಜಲಚರಗಳಲ್ಲಿ ಕೆಲ ಜಾತಿಗಳು ಇವುಗಳ ಬಗ್ಗೆ ಅರಿವಿದೆ. ಅವುಗಳನ್ನು ನಾವು ಎನ್ಡೇನ್ಜರ್ಡ್ ಸ್ಪೀಸೀಸ್(ಅಳಿವಿನಂಚಿನಲ್ಲಿರುವ ಪ್ರಬೇಧಗಳು)  ಅಂತ ಕರೆದು ಅವುಗಳ ಬಗ್ಗೆ ಅನೇಕ ಮಾಹಿತಿಗಳನ್ನು ಕಲೆಹಾಕಿದ್ದೇವೆ. ಅವುಗಳ ಪಟ್ಟಿಯಲ್ಲಿ ಸೇರಲು ಇನ್ನೂ ಕೆಲ ಪ್ರಾಣಿಗಳು, ಕೀಟಗಳು, ಜಲಚರಗಳು ತಯಾರಾಗಿವೆ. ಮನುಷ್ಯನ ದುರಾಸೆ ಮತ್ತು ನಗರೀಕರಣಗಳ ಫಲವಾಗಿ ಇವುಗಳೆಲ್ಲ ನಮಗೆ ಈಗ ಕಾಣದಾಗಿವೆ ಅಥವಾ ಇನ್ನು ಕೆಲವೇ ವರ್ಷಗಳಲ್ಲಿ ಕಾಣೆಯಾಗುತ್ತವೆ. 

ಇದೇ ರೀತಿ ವಸ್ತುಗಳು, ಉಪಕರಣಗಳಲ್ಲಿ, ವಾಹನಗಳಲ್ಲಿ  ಸಹ ಈ ತರದ ಅಳಿವಿನಂಚಿಗೆ ಹೋಗುವ ಅಥವಾ ಹೋಗಿರುವ ಉಪಕರಣಗಳು, ವಾಹನಗಳು ನಮ್ಮ ಅನುಭವಕ್ಕೆ ಬರುತ್ತವೆ.  ಆದರೆ ಇವು ಕಣ್ಮರೆಯಾಗುವುದಕ್ಕೆ ಬೇರೇ ಕಾರಣಗಳಿವೆ. ಸತತವಾಗಿ ನಡೆಯುತ್ತಿರುವ ಸಂಶೋಧನೆಗಳಿಂದಾಗಿ ಕೆಲ ವಸ್ತುಗಳನ್ನು ಅವುಗಳ  ನೂತನ ವಸ್ತುಗಳೊಂದಿಗೆ ಬದಲಾಯಿಸಿದಾಗ ಹಳೆಯ ವಸ್ತುಗಳು ಕಣ್ಮರೆಯಾಗುತ್ತವೆ. ಉದಾಹರಣೆಗೆ ಮುಂಚೆ ತುಂಬಾ ಬೇಡಿಕೆಯಲ್ಲಿದ್ದು ಕೆಲ ಸಮಯದ ನಂತರ ಕಾಣೆಯಾದ ಮೊಪೆಡ್ ಗಳು, ಗೇರುಗಳಿಂದ ಚಲಿಸುವ ಸ್ಕೂಟರ್ ಗಳು. ಹಾಗೆಯೇ ನಿತ್ಯ ಬಳಕೆಯಲ್ಲಿರುವ ಮನೆಯಲ್ಲಿಯ ಅನೇಕ ವಸ್ತುಗಳು ಸಹ ಬೇಡಿಕೆಗಳು ಬದಲಾದ ಹಾಗೆ ಅವುಗಳು  ಸಹ ಬದಲಾಗಿ ಅಳಿವಿಗೆ ಅಥವಾ ಅಳಿವಿನಂಚಿಗೆ ಸೇರಿವೆ. 

ನನಗನಿಸುವುದು ಈಗ ಇದೇ ಯಾದಿಗೆ ಸೇರಲಿರುವ ಆಟೋಗಳಲ್ಲಿಯ ಮೀಟರ್ ಎಂಬ ದೂರ ಮತ್ತು ಬಾಡಿಗೆಯ ಮಾಪಕ. ಭಾರತದಲ್ಲಿ ಆಟೋ ರಿಕ್ಷಾಗಳು ಬಳಕೆಗೆ ಬಂದು ಒಂದು ಶತಮಾನಕ್ಕೂ ಕಮ್ಮಿ ಅವಧಿಯಾಗಿರಬಹುದು. ಮುಂಚಿತವಾಗಿ ಬರೀ ನಗರಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಈ ಸ್ವಯಂ ಚಾಲಿತ ರಿಕ್ಷಾಗಳು ಅಲ್ಲಿಯ ವರೆಗೆ ಸ್ಥಳೀಯ ಸಾರಿಗೆಗಳನ್ನು ನಿಭಾಯಿಸುತ್ತಿದ್ದ ಜಟಕಾ, ಟಾಂಗಾ, ಸೈಕಿಲ್ ರಿಕ್ಷಾ ಮತ್ತು ಹಲವು ಕಡೆ ಬಳಕೆಯಲ್ಲಿದ್ದ ಮನುಷ್ಯರು ಎಳೆದುಕೊಂಡು ಹೋಗುವ ಕೈಗಾಡಿಗಳನ್ನು ಮೂಲೆಗೆ ತಳ್ಳಿ ಅವುಗಳನ್ನು ಮೂಲೆಗುಂಪಾಗಿಸಿದವು. ಈ ಆಟೋ ರಿಕ್ಷಾಗಳು ಭಾರತಕ್ಕೆ 1959 ರಲ್ಲಿ ಬಂದಿದ್ದು ಈಗ ಅವುಗಳು 50 ಲಕ್ಷ ಚಾಲಕರಿಗೆ ಉದ್ಯೋಗಾವಕಾಶವನ್ನು ಒದಗಿಸುತ್ತಿವೆ. 

ವಾಹನಗಳ ಚಾಲಕರ ಜೊತೆಗೆ ಬಾಡಿಗೆ ಕರಾರು ಮಾಡಿಕೊಂಡು ಹೋಗುವುದರ ಬದಲು ಆಟೋಗಳಲ್ಲಿ ಮೀಟರ್ ಅಳವಡಿಸಲಾಯಿತು. ಇದರಲ್ಲಿ ಬರುವ ಬಾಡಿಗೆಯ ಮೊತ್ತವನ್ನು ಸವಾರಿ ಕೊಡಬೇಕಾಗಿತ್ತು. ಹತ್ತಿ ಕೂತ ತಕ್ಷಣ ಮೀಟರ್ ಚಾಲೂ ಮಾಡಿದ ಚಾಲಕ ಅವರನ್ನು ಇಳಿಸುವಾಗ ಮೀಟರ್ ನಲ್ಲಿಯ ಮೊತ್ತವನ್ನು ತೆಗೆದುಕೊಳ್ಳುತ್ತಿದ್ದ. ಇದು ಚಾಲಕನಿಗೂ, ಸವಾರಿಗೂ ಒಪ್ಪಿಗೆಯಾಗಬಹುದಾದ ಏರ್ಪಾಡಾಗಿತ್ತು.  ಈ ಮೀಟರ್ ಗಳನ್ನು ತೂಕ ಮತ್ತು ಅಳತೆಯ ವಿಭಾಗ ತಪಾಸಿಸಿ ಅವುಗಳನ್ನು ಅಕ್ರಮವಾಗಿ ತಿದ್ದದಂತೆ ಸೀಲ್ ಮಾಡುವ ಕ್ರಮವನ್ನು ಸರಕಾರ ಜಾರಿಗೆ ತಂದಿತು. 

ಕಾಲಕ್ರಮೇಣ ರಾತ್ರಿ ಹತ್ತರ ಮೇಲೆ ಮತ್ತು ಮುಂಜಾನೆ ಆರರ ಒಳಗೆ ಓಡುವ ಗಾಡಿಗಳಿಗೆ ಒಂದೂವರೆಯಷ್ಟು ಬಾಡಿಗೆ ಕೊಡಬೇಕು ಎನ್ನುವ ಒಪ್ಪಂದ ಆಟೋ ಚಾಲಕರ ಸಂಘದ ಪದಾಧಿಕಾರಿಗಳಿಗೂ ಮತ್ತು ಸರಕಾರಕ್ಕೂ ಆಗಿದ್ದ ಒಪ್ಪಂದದ ಮೇರೆಗ ಜಾರಿಗೆ ಬಂತು. 

ಇವೆಲ್ಲ ಅಲ್ಲದೇ ಕೆಲ ದೂರ ಪ್ರದೇಶಗಳಿಗೆ ಹೋಗುವಾಗ ಅಥವಾ ತುಂಬ ಬೇಡಿಕೆ ಇರುವಾಗ ಆಟೋ ಚಾಲಕರು ಪರಿಸ್ಥಿತಿಯ ಲಾಭ ಪಡೆಯುತ್ತ ತಮಗೆ ತೋಚಿದ ಹಾಗೆ ಬಾಡಿಗೆ ಕೇಳುತ್ತಿದ್ದರು. ಹೀಗೆ ಅವರು ನಿಗದಿ ಮೊತ್ತವನ್ನು ಕೇಳುವುದು ನಾನು ಚೆನ್ನೈ ನಲ್ಲಿ ತುಂಬಾ ಸಮಯದ ಹಿಂದೆಯೇ ಅನುಭವಿಸಿದ್ದೆ. ಒಮ್ಮೆ ನಾನು ಹೀಗೆ ನಿಗದಿ ಮೊತ್ತದ ಮೇಲೆ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಟ್ರಾಫಿಕ್ಕಿನವರು ಮೀಟರ್ ಹಾಕದ ಕಾರಣ ಆಟೋದವನನ್ನು ನಿಲ್ಲಿಸಿ, ನನಗೆ ಮತ್ತೊಂದು ಆಟೋ ಹಿಡಿದು ಹೋಗಲಿಕ್ಕೆ ಹೇಳಿದ್ದರು.  ಆದರೆ ಬೆಂಗಳೂರು ಮತ್ತು ಹೈದರಾಬಾದ್ ನಂತಹ ಚಿಕ್ಕ (?) ನಗರಗಳಲ್ಲಿ ಇನ್ನೂ ಮೀಟರ್ ಗಳ ಬಳಕೆ ಇದ್ದಿತು. ಮೀಟರ್ ತೋರಿಸುವ ಚಾರ್ಜಿಗಿಂತ ಇಪ್ಪತ್ತೋ ಮೂವತ್ತೋ ಜಾಸ್ತಿ ಕೇಳುವ ವಿಧಾನ, ಮೀಟರ್ ಅನ್ನು ಅನಧಿಕೃತವಾಗಿ ಟ್ಯಾಂಪರ್ ಮಾಡಿ ಹೆಚ್ಚು ಬಾಡಿಗೆ ತೋರಿಸುವ ಹಾಗೆ ಮಾಡುವುದು ನಡೆದಿತ್ತು. ಆದರೆ ಈ ವಿಧಾನಗಳಿಗೆ ತಳಪಾಯ  ಮೀಟರ್ ಗಳು ಆಗಿದ್ದು ಅವುಗಳ ಅವಶ್ಯಕತೆ ಇದ್ದೇ ಇತ್ತು. .

 ಒಂದು ಸೋಜಿಗದ ಸಂಗತಿ ಸ್ನೇಹಿತರೇ ! ಮುಂಬೈಯಲ್ಲಿ ಆಟೋ ಮೀಟರ್ ಗಳು ತೋರುವ ಬಾಡಿಗೆಯ ಲೆಕ್ಕವೇ ಬೇರೇ. ನೀವು ಆಟೋದವನಿಗೆ ಎಲ್ಲಿಗೆ ಹೋಗಬೇಕು ಅಂತ ಹೇಳಿ ಕೂರುತ್ತೀರ. ಅವನು ಮೀಟರ್ ಚಾಲೂ ಮಾಡುತ್ತಾನೆ. ಅದು ಒಂದು ರುಪಾಯಿಯಿಂದ ಬಾಡಿಗೆ ತೋರಿಸಲು ಶುರು ಮಾಡುತ್ತದೆ. ನೀವು ಇಳಿಯುವಾಗ 40 ರುಪಾಯಿ ತೋರಿಸಿತೆನ್ನಿ. ಅದು ಬಾಡಿಗೆಯಲ್ಲ. ಅದಕ್ಕೆ ಒಂದು ಗುಣಕವಿರುತ್ತದೆ. ಅದನ್ನು ಚಾಲಕ ನಿಮಗೆ  ತನ್ನ ಹತ್ತಿರವಿರುವ  ಚಾರ್ಟಿನಲ್ಲಿ ತೋರಿಸುತ್ತಾನೆ. ಅದರ ಪ್ರಕಾರ ನೀವು ನಾಲ್ಕು ಪಟ್ಟೋ ಅಥವಾ ಐದು ಪಟ್ಟೋ ಕೊಡಬೇಕಾಗುತ್ತದೆ. ಇದೀಗ ಅದು ಜಾರಿಯಲ್ಲಿಲ್ಲ ಅಂತ ನನ್ನ ಒಬ್ಬ ಮುಂಬೈ ಮಿತ್ರರು ತಿಳಿಸಿದರು. ಆದರೆ ನನ್ನ ಅನುಭವದಲ್ಲಿ ಆಟೋದವರು ಹೆಚ್ಚು ಕೇಳುವುದು, ಮೀಟರ್ ತೋರಿದ್ದಕ್ಕಿಂತರ ಮೇಲೆ ಕೇಳುವುದು, ತಿದ್ದುಪಡೆ ಮಾಡುವುದು ಮುಂಬೈಯಲ್ಲಿ ತುಂಬ ಕಡಿಮೆ. ಅದೊಂದು ಸಮಾಧಾನದ ಸಂಗತಿ. 

ಈ ತರದ ಬಾಡಿಗೆ ಹೆಚ್ಚು ಕೇಳುವುದು  ಬಸ್ಟಾಂಡುಗಳಲ್ಲಿ ಮತ್ತು ರೈಲ್ವೇ ಸ್ಟೇಷನ್ ಗಳಲ್ಲಿ ಜಾಸ್ತಿ ನಡೆಯುತ್ತಿತ್ತು. ಹೆಂಗಸರು, ಮಕ್ಕಳು, ಸಾಮಾನು ಹೊತ್ತು ಇಳಿದ ಪ್ರಯಾಣಿಕರು ಬೇರೇ ಗತಿಯಿಲ್ಲದೇ ಚೌಕಾಶಿ ಮಾಡಿಕೊಂಡು ಮೀಟರ್ ತೋರಿಸುವ ಬಾಡಿಗೆಗಿಂತ ಜಾಸ್ತಿ ಹಣ ಕೊಟ್ಟು ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತು. ಅದನ್ನು ತಡೆಗಟ್ಟಲು ಈ ಪ್ರದೇಶಗಳಲ್ಲಿ ಆಟೋ ಸರತಿ ಸಾಲು, ಮುಂಗಡ ಹಣ ಪಾವತಿ ಮಾಡುವ ವಿಧಾನ ಜಾರಿಗೆ ಬಂದವು. ಆದರೂ ಮೀಟರ್ ಗಳು ಬಳಕೆಯಲ್ಲಿದ್ದವು. 

ಆದರೆ 2010 ರಲ್ಲಿ ಓಲಾ ಮತ್ತು ಊಬರ್ ಗಳು ತಮ್ಮ ಟ್ಯಾಕ್ಸಿ ಕ್ಯಾಬ್ ಯಾಪ್ ಗಳೊಂದಿಗೆ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಕಡಲಲ್ಲಿ ದುಮುಕಿದ ಮೇಲೆ ಆಧುನಿಕ ಜನಾಂಗಗಳೆಲ್ಲವೂ ಅವುಗಳ ಸೇವೆ ಪಡೆಯಲು ಶುರು ಮಾಡಿದವು. ಆಟೋಗಳಲ್ಲಿ ಹೋಗುವುದಕ್ಕಿಂತ ಹವಾ ನಿಯಂತ್ರಿತ ಕಾರುಗಳಲ್ಲಿ ಹೋಗುವುದು ಅವರಿಗೆ ಅನುಕೂಲ ಎನ್ನಿಸಿ ಆ ಸೇವೆಗಳನ್ನೇ ಹೆಚ್ಚೆಚ್ಚು ಪಡೆಯಲು ಆರಂಭಿಸಿದರು. ಮಳೆ ಬಂದರೆ ಅನುಕೂಲ, ತಮ್ಮ ದಿರಿಸಾಗಲಿ, ಮುಖಕ್ಕೆ ಹಾಕಿದ ಮೇಕಪ್ಪಾಗಲಿ ಒಂಚೂರೂ ಕೊಳೆಯಾಗದೆ ಸರಾಗವಾಗಿ ತಮ್ಮ ಕಚೇರಿಗೋ ಅಥವಾ ಅಲ್ಲಿಂದ ಮನೆಗೋ ಸೇರುವ ಅತ್ಯಂತ ಸೌಕರ್ಯವಂತವಾದ ಈ ಸಾರಿಗೆ ತುಂಬಾ ಮನ್ನಣೆ ಪಡೆಯಿತು. ಬೆಂಗಳೂರಿನಲ್ಲಿಯ ಚಳಿ ಸಹ ಈ ಸಾರಿಗೆ ವ್ಯವಸ್ಥೆಗೆ ಇಂಬು ಕೊಟ್ಟಿತು. ಅದರೊಂದಿಗೆ, ಬೆಂಗಳೂರು ಬೆಳಿತಾ ಹೋದಂತೆಲ್ಲ ಆಟೋಗಳಲ್ಲಿ ದೂರ ಕ್ರಮಿಸುವುದು ತುಂಬಾ ಆಯಾಸವೆನಿಸತೊಡಗಿತ್ತು. ಗರ್ಭಿಣಿ ಹೆಂಗಸರಿಗೆ, ವೃದ್ಧರಿಗೆ ಆಟೋ ಪ್ರಯಾಣ ತುಂಬಾ ಪ್ರಯಾಸವಾಗುತ್ತಿತ್ತು. ಇದರ ಮೇಲೆ ಆಟೋ ಡ್ರೈವರ್ ಗಳ ದುರುಸು ವರ್ತನೆ, ತಾವು ಕೇಳಿದ ಕಡೆಗೆ ಬರದೆ ಇರುವ ಉದಾಸೀನತೆ, ಹೆಚ್ಚು ಬಾಡಿಗೆ ಇವೆಲ್ಲವೂ ಆಟೋ ಚಾಲಕರಿಗಿಂತ ಬೇರೊಂದು ಸಾರಿಗೆಯೆಡೆ ದಿಶೆಯನ್ನು ಬದಲಾಯಿಸುವಂತೆ ಮಾಡಿದ್ದವು. ಆಗ ಆಟೋ ಚಾಲಕರು ಸಿಕ್ಕ ಗಿರಾಕಿಗಳಿಗೆ ಮುಗಿ ಬೀಳುತ್ತ,ಮೀಟರನ್ನ ಕಡೆಗಾಣಿಸಿ, ನಿಗದಿ ಮೊತ್ತವನ್ನು ಹೇಳಲಾರಂಭಿಸಿದರು. ಮೀಟರ್ ಹಾಕುವ ಪ್ರಶ್ಜೆಯೇ ಇಲ್ಲಂತಾಯಿತು. ಹಾಗಾಗಿ ಆಟೋ ಮೀಟರ್ ಗಳು ಬರೀ ಅಲಂಕಾರಕ್ಕೆ ಮಾತ್ರ ಮತ್ತು ಸಾರಿಗೆ ಇಲಾಖೆಯವರಿಗಾಗಿ ಮಾತ್ರ ಆಟೋಗಳಲ್ಲಿ ಕಾಣಲಾರಂಭಿಸಿದವು. 

ಮುಂದೆ ಮುಂದೆ ಈ ಆಟೋದವರುಗಳು ತಮ್ಮ ಆಟೋಗಳನ್ನು ಈ ಓಲಾ ಮತ್ತು ಊಬರ್ ಗಳಿಗಾಗಿ ಓಡಿಸಲು ಶುರು ಮಾಡಿದಮೇಲಂತೂ ಎಷ್ಟು ಬಾಡಿಗೆ ಅನ್ನೋದು ಯಾಪ್ ಗಳಲ್ಲೇ ಬಂದು ಬಿಡುವುದರಿಂದ ಮೀಟರ್ ನ ಉಸಾಬರಿಯೇ ಅನಾವಶ್ಯಕವಾಗಿದೆ. ಈಗ ಒಂದೋ ನಿಗದಿ ಮೊತ್ತಕ್ಕೆ ಮಾತನಾಡಿಕೊಂಡು ಕೊಟ್ಟು ಪ್ರಯಾಣ ಮಾಡುವುದು ಅಥವಾ ಓಲಾ ಊಬರ್ ಗಳ ಯಾಪ್ ನಲ್ಲಿ ಬುಕ್ ಮಾಡಿಕೊಂಡು ಪ್ರಯಾಣಿಸಿ ಆಯಾ ಯಾಪ್ ಗಳಲ್ಲಿ ಕಾಣುವ ಮೊತ್ತವನ್ನು ಚಾಲಕನಿಗೆ ಕೊಡುವುದು ಇವೆರಡೇ ನಡೆದಿವೆ. 

ಹೀಗಿರುವಾಗ ನೀವೇ ಹೇಳಿ ಸ್ನೇಹಿತರೇ, ಆಟೋ ಮೀಟರ್ ಗಳ ಅವಶ್ಯಕತೆ ಕಾಣುವುದೆಲ್ಲಿ? ನಮ್ಮ ನಿತ್ಯ ಜೀವನದ ಸ್ಥಳೀಯ ಪ್ರಯಾಣಗಳಲ್ಲಿ ಮೀಟರ್ ಗಳ ಪಾತ್ರ ಏನಿದೆ ? ಅಂದರೆ ಅವು ಕೆಲವೇ ದಿನಗಳಲ್ಲಿ ಅನವಶ್ಯಕವೆನಿಸಿ, ತೆರೆ ಮರೆಯಾಗಿ ಅಳಿವಿಗೆ ಜಾರುವ ಸಾಧ್ಯತೆಯೇ ಜಾಸ್ತಿ ಅಂತ ನಿಮಗನಿಸುವುದಿಲ್ಲವೇ ?