ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಐವತ್ತನೇ ಪುಸ್ತಕದ ಸಂಭ್ರಮದಲ್ಲಿ ಎನ್.ಎಸ್.ಎಸ್.

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ನಾಡಿನ ಸುಪರಿಚಿತ ಲೇಖಕ ಎನ್.ಎಸ್.ಶ್ರೀಧರ ಮೂರ್ತಿ ಅವರು ತಮ್ಮ ಐವತ್ತನೆಯ ಪುಸ್ತಕ ‘ಅಂದದ ಹೆಣ್ಣಿನ ನಾಚಿಕೆ’ ಪುಸ್ತಕದ ಕುರಿತು ಬರೆದ ನುಡಿ ಬರಹ


ಬರವಣಿಗೆಯ ಆರಂಭದ ದಿನಗಳಿಂದಲೂ ಕೂಡ ನಾನು ಪ್ರಬಂಧಗಳನ್ನು
ಬರೆದವನಲ್ಲ. ಶಾಲಾ-ಕಾಲೇಜ್‍ಗಳ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಷ್ಟೇ ಆ ಕಾಲದ ಅನುಭವ! ವಿಮರ್ಶೆಯಿಂದಲೇ ನನ್ನ ಬರವಣಿಗೆ ಆರಂಭವಾಗಿದ್ದು. ಸೃಜನಶೀಲ ಬರವಣಿಗೆ ಎಂದರೆ ಕಥೆ-ಕವಿತೆಗಳನ್ನು ಬರೆದಿದ್ದು. ಪಿ.ಯು.ಸಿ ದಿನಗಳಿಂದಲೂ ಕಾದಂಬರಿ ಬರವಣಿಗೆ ಕುರಿತು ನನಗೆ ಆಕರ್ಷಣೆ. ಈಗಲೂ ಅದೇ ನನ್ನ ಪ್ರಧಾನ ಅಭಿವ್ಯಕ್ತಿ ಮಾಧ್ಯಮ ಎನ್ನಿಸುವುದು ಉಂಟು. ಆದರೆ ನಾನು ಬಹುಕಾಲ ಕಥೆ-ಕಾದಂಬರಿಗಳೇ ಪ್ರಧಾನವಾಗಿದ್ದ ಪತ್ರಿಕೆಗಳಿಗೆ ಸಂಪಾದಕನಾಗಿದ್ದವನು. ಹೀಗಾಗಿ ನನ್ನಲ್ಲಿ ರೂಪುಗೊಂಡಿದ್ದ ಅನೇಕ ಕಥೆ-ಕಾದಂಬರಿಗಳು ಪ್ರಕಟವಾಗದೆ ಹೋದವು.

ಬರಹದ ಯಾವ ಹಂತದಲ್ಲಿಯೂ ಪ್ರಬಂಧ ಬರೆಯಬಲ್ಲೆ ಎಂದು ನನಗೆ ಅನ್ನಿಸಿರಲಿಲ್ಲ. ಈ ಕುರಿತು ಮೊದಲು ಪ್ರಸ್ತಾಪ ಮಾಡಿದ್ದು ನನ್ನ ಹೆಂಡತಿ ರಾಧಾ. ಅವಳಿಗೆ ಪ್ರಬಂಧ ಪ್ರಿಯವಾದ ಪ್ರಕಾರ. “ನೀವು ಏಕೆ ಪ್ರಬಂಧ ಬರೆಯಬಾರದು?” ಎಂದು ಕೇಳುತ್ತಿದ್ದಳು. ಅದಕ್ಕೆ ನಾನು ನೀಡುತ್ತಿದ್ದ ಉತ್ತರ “ನನ್ನ ವ್ಯಕ್ತಿತ್ವವೇ ಅದಕ್ಕೆ ಹೊಂದುವಂತಹದಲ್ಲ” ಎನ್ನುವುದು. ಹೀಗೆ ಅನ್ನಿಸಲು ಮುಖ್ಯ ಕಾರಣ ಎಲ್ಲರನ್ನೂ ನಗಿಸುತ್ತಾ, ನಗುತ್ತಾ ಇರುವ ಲವಲವಿಕೆಯ ವ್ಯಕ್ತಿತ್ವ ನನ್ನದಲ್ಲ ಎಂಬ ಭಾವನೆ.

ಹೀಗಿರುವಾಗ ಒಮ್ಮೆ ನನ್ನ ಹಿರಿಯ ಮಿತ್ರರಾದ ಎಸ್.ದಿವಾಕರ್ ಅವರು ಯಾವುದೋ ಮಾತಿನ ನಡುವೆ “ಒಂದು ಪ್ರಬಂಧ ಕೊಡಿ” ಎಂದರು. ಆಗ ಅವರು “ಉಷಾ ಕಿರಣ” ಪತ್ರಿಕೆಯಲ್ಲಿ ಇದ್ದರು. “ಪ್ರಬಂಧ ನನ್ನ ಪ್ರಕಾರ ಅಲ್ಲ” ಎಂದು ಎಷ್ಟು ಹೇಳಿದರೂ ಅವರು ಒಪ್ಪಲಿಲ್ಲ. ಕೊನೆಗೆ ಅರ್ಧ ಮನಸ್ಸಿನಿಂದಲೇ “ಬಂಗಾರವೆನ್ನುವುದು ಬಣ್ಣನೆಯ ಮಾತಲ್ಲ” ಎಂಬ ಪ್ರಬಂಧ ಕೊಟ್ಟೆ. ಅದನ್ನು ಅವರು ಪ್ರಕಟಿಸಿದರು.
ಅದು ಎಲ್ಲರ ಮೆಚ್ಚುಗೆ ಪಡೆದಾಗ, ನಾನು ಈ ಮಾಧ್ಯಮದಲ್ಲಿಯೂ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಹುಟ್ಟಿತು.

ಮುಂದೆ ಮಂಗಳ ವಾರ ಪತ್ರಿಕೆಯಲ್ಲಿ “ಅಂದದ ಹೆಣ್ಣಿನ ನಾಚಿಕೆ” ಪ್ರಬಂಧವನ್ನು ನನ್ನ ಅಂಕಣದಲ್ಲಿ ಬರೆದಾಗ ಹಿರಿಯರಾದ ಡಾ.ಸಿ.ಪಿ.ಕೆಯವರು “ಅಂದವಾದ ಬರವಣಿಗೆ” ಎಂದು ಪ್ರೋತ್ಸಾಹ ನೀಡಿದ್ದರು.
ಇವೆಲ್ಲವೂ ನಾನು ಆಗಾಗ ಪ್ರಬಂಧ ಬರೆಯುವುದಕ್ಕೆ ಕಾರಣವಾಯಿತು.

ಮುನ್ನುಡಿಯಲ್ಲಿ ಮಿತ್ರರಾದ ಕೆ.ಸತ್ಯ ನಾರಾಯಣ ಅವರು ಗುರುತಿಸಿದ ಹಾಗೆ ಇವೆಲ್ಲವೂ ಪ್ರಬಂಧಗಳೇ ಎನ್ನುವುದರ ಕುರಿತು ನನಗೇ ಅನುಮಾನಗಳಿವೆ. ಪ್ರಬಂಧಗಳಲ್ಲಿ ಸ್ವಕೀಯ ಅನುಭವಗಳಿಗೆ ಒತ್ತು ಜಾಸ್ತಿ. ಅದರ ಮೇಲೆ ಲಹರಿ ಕಟ್ಟುವುದು ಸಾಮಾನ್ಯ ಕ್ರಮ. ಬಳಸಿದರೂ ನಿಜ ಜೀವನದ ಘಟನೆಗಳು, ಇಲ್ಲವೇ ಮಹನೀಯರ ಪ್ರಸಂಗಗಳನ್ನು ಬಳಸುವುದು ರೂಢಿ. ನನಗೆ ಚಿತ್ರರಂಗ ಪಕ್ಕದ ಮನೆಯ ಹಾಗೆ. ವೃತ್ತಿಯ ಕಾರಣದಿಂದ, ಆಸಕ್ತಿಯ ಕಾರಣದಿಂದ ಆ ಕ್ಷೇತ್ರದ ಕುರಿತು ಒಡನಾಟ ಇಟ್ಟು ಕೊಂಡು ಬಂದಿದ್ದೇನೆ. ಹಾಗೇ ನಿರಂತರವಾಗಿ ಅಂತರವನ್ನೂ ಇಟ್ಟು ಕೊಂಡಿದ್ದೇನೆ. ನನಗೆ ಮೊದಲಿಂದಲೂ ಆ ಕ್ಷೇತ್ರದ ಗಾಸಿಪ್-ಗ್ಲ್ಯಾಮರ್ ಪರದೆ ಸರಿಸಿ ಕಲೆಯ ನೆಲೆಯಲ್ಲಿ ನೋಡುವ ಹಂಬಲ. ಈ ಪ್ರಕಾರದಲ್ಲಿ ಅಂತಹ ಪ್ರಯತ್ನ ಮಾಡ ಬಾರದೇಕೆ? ಎಂಬ ಕುತೂಹಲವೇ “ಅಂದದ ಹೆಣ್ಣಿನ ನಾಚಿಕೆ” ಪ್ರಬಂಧಕ್ಕೆ ಪ್ರೇರಣೆ ಕೊಟ್ಟಿದ್ದು.

No photo description available.

ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಕಾರಣದಿಂದ ಅಂತಹ ಕೆಲವು ಪ್ರಯತ್ನಗಳನ್ನು ಸಮಯ ಸಿಕ್ಕಾಗಲೆಲ್ಲಾ ಮಾಡಿದೆ. ಅವನ್ನೆಲ್ಲಾ ಜೋಡಿಸಿ ಈಗ ಸಂಕಲನ ಮಾಡುತ್ತೇನೆ. ಇವು ಯಾವ ಪ್ರಕಾರ ಎಂದು ನೀವೇ ನಿರ್ಧರಿಸಬೇಕು.
ಹಾಗೆಂದ ಮಾತ್ರಕ್ಕೆ ಇಲ್ಲಿನ ಎಲ್ಲಾ ಪ್ರಬಂಧಗಳೂ ಅದೇ ಶೈಲಿಯಲ್ಲಿಯೇ ಇವೆ ಎಂದೆಲ್ಲ. ಭೀಮಸೇನ ಜೋಷಿ ಮತ್ತು ಲತಾ ಮಂಗೇಶ್ಕರ್ ಅವರ ಕುರಿತ ಲೇಖನಗಳು ಸಾಂದರ್ಭಿಕವಾಗಿ ಬರೆದಂತವು. ಅದರ ಬರವಣಿಗೆಯಲ್ಲಿ ಪ್ರಬಂಧದ ಗುಣ ಇದೆ ಎಂದು ಇಲ್ಲಿ ಸೇರಿಸಿ ಕೊಂಡಿದ್ದೇನೆ. “ಹಾರ್ಮೋನಿಯಂ ಪ್ರಕರಣ” ಮತ್ತು “ಹಕ್ಕಿ ಹಾಡಿಗೆ ಹಾಕಿದ ರಾಗ ಯಾವುದು ಹೇಳು” ಎರಡೂ ಕೂಡ ಗಂಭೀರ ವಿಷಯದ ಕುರಿತೇ ಬರೆದ ಸಂಶೋಧನಾ ಲೇಖನಗಳು. ಆದರೆ ಅವುಗಳಲ್ಲಿನ ಲಾಲಿತ್ಯ ಇಲ್ಲಿ ಸೇರಿಸುವಂತೆ ಮಾಡಿದೆ. ಈ ಪ್ರಬಂಧಗಳು ಸರಿ ಸುಮಾರು ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ಸೃಷ್ಟಿಯಾದಂಹವು. ಈ ಕಾರಣದಿಂದ ಅಲ್ಲಲ್ಲಿ ಬರಹದ ಶೈಲಿ, ವಿಷಯ ಪ್ರತಿಪಾದನೆಯಲ್ಲಿ ವ್ಯತ್ಯಾಸ ಕಾಣಬಹುದು. ಕೆಲವು ಪ್ರಸಂಗಗಳು ಎರಡು ಮೂರು ಪ್ರಬಂಧಗಳಲ್ಲಿ ಪುನರಾವರ್ತನೆಗೊಂಡಿರುವುದೂ ಇದೆ. ಇದು ನನ್ನ ಗಮನಕ್ಕೆ ಬಂದರೂ ಒಟ್ಟು ಪ್ರಬಂಧದ ಓದಿನ ಓಘಕ್ಕೆ ಅಡ್ಡಿಯಾಗಬಹುದು ಎಂದು ಹಾಗೇ ಉಳಿಸಿ ಕೊಂಡಿದ್ದೇನೆ. ಈ ತಪ್ಪನ್ನು ಓದುಗರು ಮನ್ನಿಸುತ್ತಾರೆ ಎನ್ನುವ ವಿಶ್ವಾಸ ನನ್ನದು.

ಇಲ್ಲಿನ ಪ್ರಬಂಧಗಳೆಲ್ಲವೂ ಪ್ರಜಾವಾಣಿ, ಮಯೂರ, ಉಷಾ ಕಿರಣ, ವಿಜಯ ಕರ್ನಾಟಕ, ಮಲ್ಲಿಗೆ, ಮಂಗಳಾ, ಕನ್ನಡ ಮಾಣಿಕ್ಯ, ಆಂದೋಲನ, ಪ್ರಾಫಿಟ್ ಪ್ಲಸ್, ಟಿ.ವಿ 9 ಕನ್ನಡ ಪೋರ್ಟಲ್‍ಗಳಲ್ಲಿ ಪ್ರಕಟವಾಗಿವೆ. ಬರೆಸಿದವರಿಗೆಲ್ಲರಿಗೂ ಈ ಮೂಲಕ ವಂದನೆಗಳನ್ನು ತಿಳಿಸುತ್ತಿದ್ದೇನೆ. ಕೆಲವು ಪ್ರಬಂಧಗಳನ್ನು ಮೆಚ್ಚಿ ನನ್ನ ವಿಶ್ವಾಸ ಹೆಚ್ಚಾಗುವಂತೆ ಮಾಡಿದವರು. ಎಸ್.ದಿವಾಕರ್, ಡಾ.ಸಿ.ಪಿ.ಕೆ, ದೀಪಾ ಹಿರೇಗುತ್ತಿ, ಶಮ ನಂದಿಬೆಟ್ಟ, ಡಾ.ಕೆ.ಎಸ್.ಪವಿತ್ರಾ, ಶ್ರೀದೇವಿ ಕಳಸದ, ಮಳವಳ್ಳಿ ಪ್ರಸನ್ನ, ಎಚ್.ಎಸ್.ನಂದ ಕುಮಾರ್, ಸುಧೀಂದ್ರ ಭಾರದ್ವಾಜ್, ನಾಗರೇಖ ಗಾಂವ್ಕರ್, ಸುಜಾತ ರಾವ್. ಇವರೆಲ್ಲರಿಗೂ ವಂದನೆಗಳು.

ನಾನು ಇತ್ತೀಚಿನ ದಿನಗಳಲ್ಲಿ ಯಾವ ಪುಸ್ತಕಕ್ಕೂ ಮುನ್ನುಡಿ ಎಂದು ಬರೆಸುತ್ತಾ ಇಲ್ಲ. ಮುನ್ನುಡಿ ಬರೆಯುವವರು ಪುಸ್ತಕಕ್ಕೆ ಗುಣಾತ್ಮಕ ಆಯಾಮ ನೀಡಬಲ್ಲರು ಎನ್ನುವ ವಿಶ್ವಾಸ ಹೊರಟು ಹೋಗಿರುವುದೇ ಇದಕ್ಕೆ ಕಾರಣ. ಈ ಬರಹಗಳು ಯಾವ ಮಾದರಿಗೆ ಸೇರುತ್ತವೆ ಎನ್ನುವುದರ ಕುರಿತು ನನ್ನಲ್ಲಿಯೇ ಅನುಮಾನ ಇದ್ದಿದ್ದರಿಂದ ನಾನು ಬಹಳ ಇಷ್ಟ ಪಡುವ ಪ್ರಬಂಧಕಾರರೂ ಆಗಿರುವ ಹಿರಿಯ ಮಿತ್ರ ಕೆ.ಸತ್ಯ ನಾರಾಯಣ ಅವರನ್ನು ಮುನ್ನುಡಿಗೆ ಕೇಳಿದೆ. ಅವರು ಸಾಕಷ್ಟು ಅಧ್ಯಯನ ಪೂರ್ಣ ಮುನ್ನುಡಿ ನೀಡಿದ್ದಾರೆ. ಅವರ ವಿಶ್ವಾಸದ ಮಾತುಗಳಿಗೆ ನಾನು ಎಷ್ಟು ಅರ್ಹನೋ ಗೊತ್ತಿಲ್ಲ. ಆದರೆ ಅವರ ಮಾತುಗಳು ಸಾಕಷ್ಟು ನನ್ನನ್ನೇ ನಾನು ಪ್ರಶ್ನಿಸಿ ಕೊಳ್ಳಲು ಪ್ರೇರಣೆ ನೀಡಿವೆ. ಅವರಿಗೆ ನನ್ನ ಕೃತಜ್ಞತೆಗಳು. ನನ್ನ ಮೇಲಿನ ವಿಶ್ವಾಸದಿಂದ ಕರಡು ತಿದ್ದಿದ ಶಮ ನಂದಿಬೆಟ್ಟ ಅವರಿಗೆ ವಂದನೆಗಳು.

ಮೂಲತಃ ನನ್ನನ್ನು ನಾನು ಗುರುತಿಸಿಕೊಳ್ಳುವುದು ಉತ್ತಮ ಓದುಗ ಎಂದು. ಓದಿದ್ದರ ಬಗ್ಗೆ ತೀವ್ರತೆ ದೊರಕದೆ ಹೋದರೆ ಬರೆಯಲಾರೆ. ಅದರಲ್ಲಿಯೂ ಬಾಹ್ಯ ಒತ್ತಡವಿಲ್ಲದೆ ಬರಯಲಾಗದ ಆಲಸಿ ನಾನು. ಇಂತಹ ನನ್ನ ಐವತ್ತನೆಯ ಪುಸ್ತಕ ಇದು ಎನ್ನುವುದು ನನಗೇ ಪರಮ ಅಚ್ಚರಿಯ ಸಂಗತಿ. 1995ರಲ್ಲಿ ನನ್ನ ಮೊದಲ ಪುಸ್ತಕ “ಅಭಿಮುಖ” ಪ್ರಕಟವಾದಾಗ ಐವತ್ತನೆಯ ಪುಸ್ತಕದವರೆಗೂ ಬರುತ್ತೇನೆ ಎಂದು ಕನಸನ್ನು ಕೂಡ ಕಂಡಿರಲಿಲ್ಲ.

ಈ ಪಯಣವೇ ಒಂದು ರೀತಿಯಲ್ಲಿ ದಿವ್ಯ ಅನುಭೂತಿ, ನನ್ನ ಹಲವು ಪ್ರಮುಖ ಪುಸ್ತಕಗಳನ್ನು ಪ್ರಕಟಿಸಿರುವ ಮಹೇಶ್ ಅವರೇ ಐವತ್ತನೇ ಪುಸ್ತಕವನ್ನು ಪ್ರಕಟಿಸುತ್ತಾ ಇರುವುದು ಯೋಗಾನುಯೋಗವೇ ಸರಿ. ನಾಡಿನ ಪ್ರಮುಖ ಪ್ರಕಾಶಕರಾದ ಸಪ್ನ, ಅಂಕಿತಾ, ವಸಂತ, ಉದಯ
ಪ್ರಕಾಶನ, ನವ ಕರ್ನಾಟಕ, ರಾಷ್ಟ್ರೋತ್ಥಾನ ಸೇರಿದಂತೆ ಅನೇಕ ಪ್ರಕಾಶಕರು ನನ್ನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ, ರಾಜ್ಯ ಸಾಹಿತ್ಯ ಅಕಾಡಮಿ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ಅಕಾಡಮಿಯಂತಹ ಪ್ರತಿಷ್ಟಿತ ಸಂಸ್ಥೆಗಳು ನನ್ನ ಪುಸ್ತಕಗಳನ್ನು ಪ್ರಕಟಿಸಿವೆ. ನನ್ನ ಬಹುತೇಕ ಪುಸ್ತಕಗಳು ಸಂಸ್ಥೆಗಳು, ಸರ್ಕಾರದ ಯೋಜನೆಯ ಅನ್ವಯ ಬಂದವುಗಳು. ಇಲ್ಲದಿದ್ದರೆ ಖಂಡಿತಾ ಈ ಪುಸ್ತಕಗಳನ್ನು ನಾನು ಬರೆಯುತ್ತಾ ಇರಲಿಲ್ಲ.

ಇದಕ್ಕೆ ಕಾರಣವಾದ ಎಲ್ಲರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಐವತ್ತು ಪುಸ್ತಕಗಳ ಗಡಿ ತಲುಪಿರುವುದು ದೊಡ್ಡ ಸಾಧನೆಯೇನು ಅಲ್ಲವೆಂದು ನನಗೆ ಗೊತ್ತಿದೆ. 200-300 ಪುಸ್ತಕಗಳನ್ನು ಬರೆದವರನ್ನು ನಾನು ಬಹು ಹತ್ತಿರದಿಂದ ನೋಡಿದ್ದೇನೆ. ಮತ್ತು ಬರವಣಿಗೆಯ ಗಟ್ಟಿತನ ಸಂಖ್ಯೆಯ ಮೇಲೆ ನಿರ್ಧಾರ ಆಗುವುದಿಲ್ಲ ಎನ್ನುವುದು ಸರಳ ಸಂಗತಿ. ಹೀಗಿದ್ದರೂ ಐವತ್ತು ತಲುಪಿದ ಧನ್ಯತೆಯನ್ನು ನಿರಾಕರಿಸುವುದೂ ಅಷ್ಟು ಸುಲಭವಲ್ಲ.