ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೂರ ಸಮೀಪಗಳ ನಡುವೆ…

ನರೇಂದ್ರ ಪೈ
ಇತ್ತೀಚಿನ ಬರಹಗಳು: ನರೇಂದ್ರ ಪೈ (ಎಲ್ಲವನ್ನು ಓದಿ)

ದೂರ ಸಮೀಪಗಳ ನಡುವೆ ಒಂದು ಪ್ರಶಸ್ತಿ ಮತ್ತು ಒಂದು ಪುಸ್ತಕ

ಶೀರ್ಷೇಂದು ಮುಖ್ಯೋಪಾಧ್ಯಾಯ (1935) ಅವರ ಕತೆಗಳು ಕನ್ನಡಕ್ಕೆ ಬರುತ್ತಿರುವುದು ಇದೇ ಮೊದಲು ಅನಿಸುತ್ತದೆ. ಅಷ್ಟೇಕೆ, ಅವರ ಇಂಗ್ಲೀಷಿಗೆ ಅನುವಾದಗೊಂಡಿರುವ ನಾಲ್ಕೈದು ಕೃತಿಗಳ ಕುರಿತೂ ವಿಶೇಷ ಗಮನ ಹರಿದಿದ್ದು ಕೂಡಾ ಈಗಲೇ ಎಂದರೆ ತಪ್ಪೇನಿಲ್ಲ. ಅವರ ಒಂದು ಪ್ರಸಿದ್ಧ ಕಾದಂಬರಿ, “ದ ಆಂಟ್ ಹೂ ವುಡಂಟ್ ಡೈ”ಯನ್ನು ಸ್ವತಃ ಅರುಣಾವ ಸಿನ್ಹ ಅವರೇ ಇಂಗ್ಲೀಷಿಗೆ ಅನುವಾದಿಸಿದ್ದರೂ, ಅವರೇ ಸಂಪಾದಕತ್ವ ವಹಿಸಿಕೊಂಡು ಹೊರತಂದ “ದ ಗ್ರೇಟೆಸ್ಟ್ ಬೆಂಗಾಲಿ ಸ್ಟೋರೀಸ್ ಎವರ್ ಟೋಲ್ಡ್” ಸಂಕಲನದಲ್ಲಿ ಶೀರ್ಷೇಂದು ಅವರ ಕತೆಯಿಲ್ಲ. ಬಹುಶಃ ಅವರ ಎಲ್ಲಾ ಕೃತಿಗಳಲ್ಲಿ ಅತ್ಯುತ್ತಮ ಎನಿಸಿಕೊಂಡ “ದ ವುಡ್‌ವರ್ಮ್” ಕಾದಂಬರಿಯಾದರೂ ಕನ್ನಡಕ್ಕೆ ಬರಬೇಕಿತ್ತು ಅನಿಸುತ್ತದೆ. ಆದರೆ ಅದರ ಇಂಗ್ಲೀಷ್ ಅನುವಾದದ ಒಂದು ಪ್ರತಿ ಕೂಡ ಸಿಗುವುದು ಕಷ್ಟವಿದೆ. ಉಳಿದಂತೆ “ಮೈ ಪೇಪರ್ ಹಾಫ್” ಮತ್ತು ಪಲ್ಪ್ ಫಿಕ್ಷನ್ ವರ್ಗಕ್ಕೆ ಸೇರುವ “ನೋ ಚೈಲ್ಡ್ಸ್ ಪ್ಲೇ” ಕಾದಂಬರಿಗಳಷ್ಟೇ ಇಂಗ್ಲೀಷ್ ಅನುವಾದದಲ್ಲಿ ಸಿಗುತ್ತಿವೆ. ಮಕ್ಕಳ ಕತೆಗಳ ಪುಸ್ತಕಗಳನ್ನೂ, ಪತ್ತೇದಾರಿ ಕಾದಂಬರಿಗಳನ್ನೂ ಸಾಕಷ್ಟು ಬರೆದಿರುವ ಶೀರ್ಷೇಂದು ಅವರ ವಿಶೇಷತೆ ಗಂಡು ಹೆಣ್ಣು ಸಂಬಂಧಗಳ ಸುತ್ತ ಕಥೆ ಹೆಣೆಯುವುದು.

ಶೀರ್ಷೇಂದು ಮುಖ್ಯೋಪಾಧ್ಯಾಯ

ಬಹುಶಃ ಈ ಎಲ್ಲ ಕಾರಣಗಳಿಂದಾಗಿಯೂ ಇರಬಹುದು, ಇದುವರೆಗೆ ಲಭ್ಯವಿರುವ ಪ್ರಮುಖ ದೇಶೀಯ ಕಥಾಸಂಕಲನಗಳಲ್ಲಿ ಆಗಲೀ, ಕಥಾ ಸಂಸ್ಥೆ ಹೊರತರುತ್ತಿದ್ದ ವಾರ್ಷಿಕ ಸಂಕಲನಗಳಲ್ಲಾಗಲೀ ಅವರ ಕತೆಗಳು ಕಾಣಿಸಿಕೊಂಡಿದ್ದಿಲ್ಲ. ಅಮಿತ್ ಚೌಧರಿ, ಅದಿಲ್ ಜುಸ್ವಾಲ್ ಸಂಪಾದಕತ್ವದ ಸಂಕಲನಗಳಲ್ಲಾಗಲೀ, ಸಾಹಿತ್ಯ ಅಕಾಡಮಿಯ ಪ್ರಾತಿನಿಧಿಕ ಸಂಕಲನಗಳಲ್ಲಾಗಲೀ ಅವರ ಹೆಸರಿಲ್ಲ. ಹಾಗಾಗಿ ಬಹುಶಃ ಕನ್ನಡದ ಓದುಗರಿಗೆ ಶೀರ್ಷೇಂದು ಅವರು ಬಹುಮಟ್ಟಿಗೆ ಅಪರಿಚಿತರೇ ಎಂದರೆ ತಪ್ಪಾಗಲಾರದು. ಅಪವಾದವೆಂಬಂತೆ ನ್ಯಾಶನಲ್ ಬುಕ್ ಟ್ರಸ್ಟ್ 1994ರಲ್ಲಿ ಹೊರತಂದ “ಇಪ್ಪತ್ತೊಂದು ಬಂಗಾಳಿ ಕಥೆಗಳು” ಸಂಕಲನದಲ್ಲಿ ಅವರ ಒಂದು ಕತೆ, “ನನ್ನನ್ನು ನೋಡಿ” ಸಿಗುತ್ತದೆ.

ನಾಗ ಎಚ್. ಹುಬ್ಳಿ

ಪ್ರಸ್ತುತ ಸಂಕಲನದಲ್ಲಿರುವುದು ಕೂಡ ಆರು ಕತೆಗಳಷ್ಟೆ. ಆದರೆ ಆಯ್ಕೆಯಲ್ಲಿ ಸಾಕಷ್ಟು ಮುತುವರ್ಜಿ ವಹಿಸಿರುವುದು ಕಂಡು ಬರುತ್ತದೆ. ಅನುವಾದಕರ ವಿಶೇಷವೆಂದರೆ ಇವರು ಯಾವುದೇ ಮಧ್ಯವರ್ತಿ ಭಾಷೆಯಿಲ್ಲದೆ, ನೇರವಾಗಿ ಬಂಗಾಳಿಯಿಂದಲೇ ಕನ್ನಡಕ್ಕೆ ಅನುವಾದಿಸಿರುವುದು. ಓದುಗರ ಸಮಸ್ಯೆ ಎಂದರೆ, ಇಂಗ್ಲೀಷಿನಲ್ಲಿ ಈ ಕತೆಗಳು ಸಿಗದ ಕಾರಣದಿಂದ, ಅನುವಾದದ ಬಗ್ಗೆ ಏನನ್ನೂ ಹೇಳುವುದು ಸಾಧ್ಯವಾಗದಿರುವುದು. ಅಂದರೆ, ಕತೆಗಳು ಕನ್ನಡದ್ದೇ ಕತೆಗಳೋ ಅನಿಸುವ ಮಟ್ಟಿಗೆ ಅನುವಾದ ಇದೆ ಎನ್ನುವುದು ಹೊಗಳಿಕೆಯಲ್ಲ ಎಂದವರಿದ್ದಾರೆ. ಅನುವಾದಿತ ಕತೆಗಳು ಅನುವಾದಿತ ಕತೆಗಳ ತರವೇ ಇರಬೇಕೆ ಹೊರತು ಕನ್ನಡದ ಕತೆಗಳ ತರ ಇರಬಾರದು, ಇರಲು ಸಾಧ್ಯವೂ ಇಲ್ಲ ಎನ್ನುವುದು ಈ ಮಾತಿನ ಇಂಗಿತ. ಇನ್ನು ಕತೆಗಳು ಅನುವಾದಿತ ಕತೆಗಳ ತರವೇ ಇದ್ದರೆ ನಮಗೆ ಶೀರ್ಷೇಂದು ಅವರ ವಾಕ್ಯಬಂಧ, ವಿಷಯವನ್ನು ನಿರೂಪಿಸುವ ಅವರದೇ ಆದ ವೈಶಿಷ್ಟ್ಯ ಏನೆಂದು ಅರಿವಾಗಬೇಕು. ಆದರೆ ಇಲ್ಲಿ ಅನುವಾದಕರ ನಿಲುವು ನಿರ್ಧಾರಕವಾಗುತ್ತದೆ. ಅನುವಾದವನ್ನು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಮಾಡಬೇಕೋ, ಮೂಲದ ವಾಕ್ಯರಚನಾ ಶೈಲಿ, ನಿರೂಪಣಾ ವಿಧಾನದ ವಿಶಿಷ್ಟ ಭಾಷಾಕ್ರಮ ಉಳಿಸಿಕೊಂಡೇ ಅನುವಾದಿಸಬೇಕೋ ಎನ್ನುವ ವಿಚಾರದಲ್ಲಿ ಬೇರೆ ಬೇರೆ ಅನುವಾದಕರ ನಿಲುವು ವಿಭಿನ್ನವಾಗಿರುವ ಸಾಧ್ಯತೆಯಿದೆ.

ನೇರವಾಗಿ ಕತೆಗಳ ವಿಚಾರಕ್ಕೆ ಬಂದರೆ, ‘ಔಷಧಿ’ ಎಂಬ ಒಂದು ಕತೆಯನ್ನು ಹೊರತುಪಡಿಸಿ ಉಳಿದ ಐದೂ ಕತೆಗಳು ಚೆನ್ನಾಗಿವೆ. ಎರಡನೆಯ ಕತೆ ‘ಸಾಮೀಪ್ಯ’ ಮತ್ತು ಐದನೆಯ ಕತೆ ‘ಮನೆಯ ಹಾದಿ’ ವಿಶಿಷ್ಟ ಎನ್ನಬಹುದಾದ ಕತೆಗಳಾಗಿದ್ದು ಮೂರನೆಯ ಕತೆ ‘ಸೈಕಲ್’ ತನ್ನ ವಿವರಗಳಿಂದ ಮೈದುಂಬಿಕೊಂಡು ಬಂದಿದೆ ಎನ್ನುವುದು ಮಾತ್ರ ಅದರ ವಿಶೇಷ. ಉಳಿದಂತೆ ಮೊದಲ ಕತೆ ‘ನಿರಾಳ’ ಮತ್ತು ಕೊನೆಯ ಕತೆ ‘ಔಷಧಿ’ ಸಾಮಾನ್ಯ ಕತೆಗಳು. ಅದರಲ್ಲೂ ‘ಔಷಧಿ’ ಕತೆಯ ಔಷಧಿಯೇ ವಿಷದಂತಿದೆ. ಈ ಕತೆ, ಕೈ ಹಿಡಿದ ಪತ್ನಿ ಕೋಪ, ಅಹಂಕಾರ, ದುಷ್ಟ ನಡವಳಿಕೆ (ಇವು ಯಾವೊಂದನ್ನೂ ಕತೆ ನಮಗೆ ತೋರಿಸುತ್ತಿಲ್ಲ, ಕೇವಲ ಹೇಳುತ್ತದೆ ಅಷ್ಟೆ )ತೋರಿಸಿದಲ್ಲಿ ಕೆನ್ನೆಗೆ ಎರಡು ಬಿಗಿಯುವುದೇ ಅದಕ್ಕೆ ಔಷಧಿ ಎನ್ನುತ್ತದೆ. ಅತ್ಯಂತ ದುರ್ಬಲ ಮತ್ತು ಕೈಲಾಗದ ವ್ಯಕ್ತಿ ಮಾತ್ರ ದೈಹಿಕ ಹಿಂಸೆಯ ಮೂಲಕ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಮುಂದಾಗುತ್ತಾನೆ ಎನ್ನುವುದು ಎಲ್ಲರಿಗೂ ತಿಳಿದೇ ಇರುವ ಸಾಮಾನ್ಯ ಮನಃಶ್ಶಾಸ್ತ್ರ. ಈ ಕತೆಯನ್ನು ಇಂಥ ಒಂದು ಪ್ರಾತಿನಿಧಿಕ ಸಂಕಲನಕ್ಕೆ ಆಯ್ದುಕೊಂಡಿರುವುದು ಅಚ್ಚರಿ ಹುಟ್ಟಿಸುತ್ತದೆ. ಯಾವ ಕಾಲಘಟ್ಟದಲ್ಲೂ ಇದು ಒಂದು ಮೌಲ್ಯವಾಗಿ ಕತೆಗಳಲ್ಲಿ ಬಂದಿದ್ದು ಕಾಣುವುದಿಲ್ಲ.

ಸಾಮೀಪ್ಯ’ ಕತೆ ತನ್ನ ನಿರೂಪಣೆಯ ಸಂಯಮದಿಂದ ಮನಸೆಳೆಯುತ್ತದೆ. ಇಲ್ಲಿಯೂ ಇರುವುದು ಗಂಡು ಹೆಣ್ಣು ಸಂಬಂಧದ ಬಿಕ್ಕಟ್ಟೇ ಹೌದಾದರೂ ಇಲ್ಲಿನ ಕೇಂದ್ರ ಪಾತ್ರಗಳನ್ನು ಶೀರ್ಷೇಂದು ಅವರು ಕಟ್ಟಿಕೊಟ್ಟ ರೀತಿ ಮತ್ತು ಇಡೀ ಕತೆಯ ನಿರೂಪಣೆಯಲ್ಲಿ ನಿಭಾಯಿಸಿರುವ ಒಂದು ಬಿಗಿ ಈ ಕತೆಯನ್ನು ಮೇಲ್ಮಟ್ಟಕ್ಕೊಯ್ಯುತ್ತದೆ. ಇಂಥ ಕತೆಗಳ ಅನುವಾದ ಸ್ವಲ್ಪ ಕಷ್ಟದ ಕೆಲಸ. ಏಕೆಂದರೆ, ಇಲ್ಲಿ ಭಾಷೆ ಎರಡು ಸ್ತರಗಳಲ್ಲಿ ಕೆಲಸ ಮಾಡುತ್ತಿರುತ್ತದೆ ಮತ್ತು ಮಾತಿಗಿಂತ ಮೌನ ಹೆಚ್ಚು ಹೇಳುತ್ತಿರುತ್ತದೆ. ಅನುವಾದಕ ಇದನ್ನು ಅರ್ಥಮಾಡಿಕೊಳ್ಳುವಷ್ಟು ಸೂಕ್ಷ್ಮಸಂವೇದಿಯಾಗಿರದೇ ಇದ್ದಲ್ಲಿ ಒಂದು ಶಬ್ದ ಹೆಚ್ಚು, ಒಂದು ಶಬ್ದ ಕಡಿಮೆಯಾದರೂ ಕತೆಯ ಒಟ್ಟಾರೆ ಪರಿಣಾಮ ಕೈಕೊಡುತ್ತದೆ. ನಾಗ ಎಚ್ ಹುಬ್ಳಿಯವರು ಇಲ್ಲಿ ಗೆದ್ದಿದ್ದಾರೆ ಎನ್ನಬೇಕು.

ಇದೇ ರೀತಿ ಮನಸೆಳೆಯುವ ಇನ್ನೊಂದು ಕತೆ ‘ಸೈಕಲ್’. ಶೀರ್ಷೇಂದು ಅವರ ನಿರೂಪಣೆಯಲ್ಲಿ ಓದುಗನನ್ನು ತುದಿಗಾಲಲ್ಲಿ ನಿಲ್ಲಿಸಿಕೊಳ್ಳುವ ಒಂದು ಸೆಳೆತ ಇದ್ದೇ ಇದೆ. ಇದು ಅವರಿಗೆ ಪಲ್ಪ್ ಫಿಕ್ಷನ್ ಬರೆಯುತ್ತ ಕರಗತವಾಗಿರಬಹುದು. ಅಲ್ಲದೆ ಸಣ್ಣಕತೆಯ ಒಂದು ಅನಿವಾರ್ಯ ಅಗತ್ಯ ಕೂಡ ಹೌದು ಅದು. ಆದರೆ, ಅದನ್ನು ಅವರು ‘ಸೈಕಲ್’ ತರದ ಕತೆಗಳಲ್ಲಿ ದುಡಿಸಿಕೊಂಡಾಗ ಅದಕ್ಕೊಂದು ಘನತೆ ಬರುವುದನ್ನು ಇಲ್ಲಿ ಕಾಣುತ್ತೇವೆ. ಇಲ್ಲಿನ ವಿವರಗಳು, ಉಸಿರು ಕಟ್ಟುವ ಕೌತುಕದ ತನಕ ಕತೆಯ ನಡೆಯನ್ನು ಕೊಂಡೊಯ್ಯುವ ಕೌಶಲ್ಯ ನಿಜಕ್ಕೂ ಗಮನಾರ್ಹವಾಗಿವೆ. ‘ಸಾಮೀಪ್ಯ’ ಕತೆಯ ಅಂತ್ಯವನ್ನು ಕತೆಯ ಯಶಸ್ಸಿಗೆ ದುಡಿಸಿಕೊಂಡಂತೆ ಇಲ್ಲಿಯೂ ತಮ್ಮ ಅಂತ್ಯದ ಮೂಲಕವೇ ಕತೆಯ ಗಮ್ಯ ಅದಲ್ಲ ಇದು ಎನ್ನುವಂತೆ ಓದುಗನನ್ನು ಮೇಲಕ್ಕೆತ್ತುವ ಶೀರ್ಷೇಂದು ಅವರ ಶೈಲಿ ಅದ್ಭುತವಾದದ್ದು.

ಮನೆಯ ಹಾದಿ’ ಕತೆ ಒಂದು ಕವಿತೆಯಂತಿದ್ದು ನಿಜಕ್ಕೂ ಈ ಸಂಕಲನದ ಒಂದು ಅದ್ಭುತವಾದ ಕತೆ. ಈ ಕತೆ ಇದ್ದಕ್ಕಿದ್ದಂತೆ ಪಡೆದುಕೊಳ್ಳುವ ಪಾರಮಾರ್ಥಿಕ ಆಯಾಮ ಮತ್ತು ಊರಿನ ಹಿರಿಯ ಹೇಳುವ ಒಂದು ಕತೆ ಮೂಲ ಕತೆಗೆ ಕೊಡುವ ಕಾಣ್ಕೆ ಎಲ್ಲವೂ ಕತೆಯ ಒಡಲಲ್ಲಿ ಸಹಜವಾಗಿ, ಸುಂದರವಾಗಿ ಸೇರಿಕೊಂಡು ಬಂದಿರುವುದು ಮೆಚ್ಚುಗೆ ಹುಟ್ಟಿಸುತ್ತದೆ. ಹಾಗೆಯೇ ಇಡೀ ಕತೆ ಸಾಧಿಸಿಕೊಂಡೇ ಬರುವ ರೂಪಕ ಶೈಲಿ ಕೂಡ ಶೀರ್ಷೇಂದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.

ತೊಟ್ಟಿ’ ಕತೆ ಕೂಡ ಮೇಲೆ ಹೇಳಿದ ‘ಸೈಕಲ್’ ಕತೆಯಷ್ಟೇ ಚಂದದ ಕತೆಯಾದರೂ ತನ್ನ ಸಾಂಕೇತಿಕತೆಯ ಭಾರಕ್ಕೆ ತಾನೇ ಕುಸಿಯುವ ಕತೆ.

ಪ್ರಶಸ್ತಿಗಳು ಒಂದು ಸಾಹಿತ್ಯ ಕೃತಿಯನ್ನು, ಈಗಾಗಲೇ ಬರೆದಿರುವುದನ್ನು ಮೇಲಕ್ಕೆತ್ತುವುದಿಲ್ಲ ಎನ್ನುವುದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅವು ಪ್ರಶಸ್ತಿ ಬರುವ ಮುನ್ನ ಹೇಗಿದ್ದವೋ ಹಾಗೆಯೇ ಇರುತ್ತವೆ, ಅದರಲ್ಲಿ ಒಂದಕ್ಷರ ಬದಲಾಗುವುದೂ ಇಲ್ಲ, ಆ ಪದಗಳ ಅರ್ಥವೂ ಪ್ರಶಸ್ತಿಯಿಂದ ವಿಸ್ತಾರಗೊಳ್ಳುವುದಿಲ್ಲ. ಆದರೆ ಪ್ರಶಸ್ತಿ ಬಂದದ್ದೇ ಆವರೆಗೆ ಮೂಲೆಗುಂಪಾಗಿದ್ದ ಕೆಲವು ಕೃತಿಗಳಿಗೆ ಎಲ್ಲಿಲ್ಲದ ಮಹತ್ವ ಹುಟ್ಟುವುದು ವಿಚಿತ್ರವಾದರೂ ನಿಜ. ಅಂದರೆ, ಯಾವುದು ಒಳ್ಳೆಯ ಕೃತಿ, ಯಾವುದು ಅಲ್ಲ ಎನ್ನುವುದನ್ನು ಇವತ್ತು ವಿಮರ್ಶೆ ನಿರ್ಣಯಿಸುತ್ತಿಲ್ಲ, ಬದಲಿಗೆ ಪ್ರಶಸ್ತಿಗಳು ನಿರ್ಣಯಿಸುತ್ತವೆ. ಆ ಪ್ರಶಸ್ತಿಗಳನ್ನು ನಿರ್ಣಯಿಸುವವರ ಬಗ್ಗೆ, ನಿರ್ಣಯಿಸಿದ ಕ್ರಮಬದ್ಧತೆಯ ಬಗ್ಗೆ ಪಾರದರ್ಶಕತೆ ಬರುವ ತನಕವೂ ಯಾವುದೇ ಭರವಸೆ ತಳೆಯುವುದು ಸಾಧ್ಯವೂ ಇಲ್ಲ.

ಹಾಗಿದ್ದೂ ಪ್ರಶಸ್ತಿ ಒಂದು ಕೃತಿಗೆ ಹೆಚ್ಚಿನ ಓದುಗರನ್ನು ದೊರಕಿಸಿ ಕೊಡುತ್ತದೆ ಎನ್ನುವುದು ನಿಜ. ಹಾಗೆ ಶೀರ್ಷೇಂದು ಅವರನ್ನು ಕನ್ನಡದ ಓದುಗರನ್ನು ಪರಿಚಯಿಸುವುದು, ಅವರ ಓದುಗವರ್ಗವನ್ನು ಹೆಚ್ಚಿಸುವುದು ಸ್ತುತ್ಯ ಕೆಲಸವೇ. ಈ ಕತೆಗಳನ್ನು ಓದಿದ ಬಳಿಕ ಕನ್ನಡದ ಓದುಗರಿಗೆ ಶೀರ್ಷೇಂದು ಅವರ ಇನ್ನಷ್ಟು ಕತೆಗಳನ್ನು, ಕಾದಂಬರಿಗಳನ್ನು ಓದಬೇಕು ಅನಿಸಿದರೆ ಅದಕ್ಕೆ ಬೇಕಾದ ಅನುಕೂಲ ಕನ್ನಡದಲ್ಲಿರಲಿ, ಇಂಗ್ಲೀಷಿನಲ್ಲೂ ಇಲ್ಲದಿರುವುದು ಕಣ್ಣಿಗೆ ಹೊಡೆದು ಕಾಣುತ್ತದೆ. ಬದಲಿಗೆ ಅವರ ಸಾಹಿತ್ಯ ಕೃಷಿಯ ಕೊಡುಗೆ ಎಲ್ಲಿ ವಿಪುಲವಾಗಿದೆ ಎನ್ನುವುದನ್ನು ಸರಿಯಾಗಿ ತಿಳಿಯದವರು ಇನ್ನೇನನ್ನೋ ನಿರೀಕ್ಷಿಸಿ ಅವರ ಪಲ್ಪ್ ಫಿಕ್ಷನ್ನುಗಳನ್ನೋ, ಮಕ್ಕಳ ಕೃತಿಗಳನ್ನೋ ಓದಬೇಕಾದ ಸ್ಥಿತಿ ಕೂಡಾ ಇದೆ. ಏಕೆಂದರೆ, ಮಾರುಕಟ್ಟೆಯಲ್ಲಿ ಲಭ್ಯ ಇರುವ ಅವರ ಕೃತಿಗಳು ಅಂಥವೇ.

ಈ ನಿಟ್ಟಿನಲ್ಲಿ ಶೀರ್ಷೇಂದು ಅವರ ಪ್ರಾತಿನಿಧಿಕ ಕೃತಿಗಳನ್ನು ಸರಿಯಾಗಿ ಗುರುತಿಸಬಲ್ಲ, ಬಂಗಾಳಿ ಬಲ್ಲ ನಾಗ ಎಚ್ ಹುಬ್ಳಿಯಂಥವರು ಕನ್ನಡದವರೇ ಆಗಿರುವುದು ನಮ್ಮ ಪಾಲಿನ ಭಾಗ್ಯವೆಂದೇ ಹೇಳಬೇಕು. ಹಿಂದೆ ಅಹೋಬಲ ಶಂಕರ ಅವರು ಬಂಗಾಳಿಯಿಂದ ನೇರವಾಗಿ ಕನ್ನಡಕ್ಕೆ ಅನುವಾದ ಮಾಡುತ್ತ ಬಂದಿದ್ದರು. ಕಲ್ಕತ್ತಾದಲ್ಲಿ ಲೈಬ್ರೇರಿಯನ್ ಆಗಿದ್ದ ಕುಮಾರಸ್ವಾಮಿ ಕೂಡಾ ಕನ್ನಡದ ಕೆಲವಾದರೂ ಕೃತಿಗಳನ್ನು ಬಂಗಾಳಿಗೆ ಅನುವಾದಿಸುವ ಕನಸು ಹೊತ್ತಿದ್ದರು. ಒಂದರ್ಥದಲ್ಲಿ ತುಂಬ ಹಿಂದಿನಿಂದಲೂ ಕನ್ನಡ ಸಾಹಿತ್ಯಕ್ಕೆ ಮಹತ್ತರವಾದ ಬೆಳಕು ಬೀರುತ್ತ ಬಂದ ಬಂಗಾಳಿ ಸಾಹಿತ್ಯದಿಂದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತರುವುದು ನಾಗ ಎಚ್ ಹುಬ್ಳಿಯವರಿಗೆ ಸಾಧ್ಯವಾಗಲಿ ಎನ್ನುವುದು ಹಾರೈಕೆ.

  • ನರೇಂದ್ರ ಪೈ

ಪುಸ್ತಕಕ್ಕಾಗಿ ಇಲ್ಲಿ ಸಂಪರ್ಕಿಸಿ 7091488490 ಸುಪ್ರ ಪುಸ್ತಕ