ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೂರ ತೀರದಿಂದ ಮುತ್ತುಗಳ ತಂದ ನಾವಿಕ

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ಬೆಂಗಳೂರಿನ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಬಹುಮಟ್ಟಿಗೆ ಧಾರ್ಮಿಕ ಸ್ವರೂಪದ ಕಾರ್ಯಕ್ರಮ. ಇದರ ನಡುವೆ ಪುಸ್ತಕ ಬಿಡುಗಡೆ ಕೂಡ ಸೇರಿತ್ತು. ಅದರಲ್ಲಿ ಕೆ.ಟಿ.ಗಟ್ಟಿಯವರ ಪುಸ್ತಕವೂ ಇತ್ತು. ಅವರೊಬ್ಬರೆ ಒಂಟಿಯಾಗಿ ಒಂದು ಮೂಲೆಯಲ್ಲಿ ಕುಳಿತಿದ್ದರು. ಆ ಕಾರ್ಯಕ್ರಮದ ಸ್ವರೂಪಕ್ಕೂ ಅವರಿಗೂ ಒಂದು ರೀತಿಯಲ್ಲಿ ಸಂಬಂಧವೇ ಇರಲಿಲ್ಲ ಎನ್ನುವಂತಿತ್ತು. ನಾನು ಮೆಲ್ಲನೆ ಹೋಗಿ ಅವರ ಪಕ್ಕ ಕುಳಿತೆ ‘ಸರ್ ನೀವೇಕೆ ಈ ಕಾರ್ಯಕ್ರಮಕ್ಕೆ ಬರುವುದಕ್ಕೆ ಹೋದಿರಿ’ ಎಂದೆ. ಅವರು ಮುಗುಳ್ನಕ್ಕು ‘ನನ್ನ ಪುಸ್ತಕವೂ ಇದೆಯಲ್ಲಪ್ಪ’ ಎಂದರು. ಹೀಗೆ ಮಾತು ಮುಂದುವರೆಯಿತು. ಗಟ್ಟಿ ಕೊಂಚ ಧ್ವನಿ ತಗ್ಗಿಸಿ ‘ಮನುಷ್ಯರು ಆವರಣಗಳನ್ನು ಕಟ್ಟಿ ಕೊಳ್ಳುತ್ತಲೇ ಇರುತ್ತಾರೆ, ಎಷ್ಟರ ಮಟ್ಟಿಗೆ ಎಂದರೆ ಆವರಣಕ್ಕೂ ಅವರಿಗೂ ವ್ಯತ್ಯಾಸವೇ ಇರುವುದಿಲ್ಲ’ ಎಂದರು. ಅಷ್ಟು ಹೊತ್ತಿಗೆ ಅವರ ಸರದಿ ಬಂದಿತು. ವೇದಿಕೆ ಹೋಗಿ ಹಾರ ಹಣ್ಣಿನ ಬುಟ್ಟಿ ಜೊತೆ ಬಂದರು. ನನ್ನ ಬಳಿ ತುಸು ಬಗ್ಗಿ ‘ನೋಡಿ, ನನಗೆ ಬೆಂಗಳೂರು ಬಹಳ ಚೆನ್ನಾಗಿ ಗೊತ್ತಿಲ್ಲ, ಎಲ್ಲಿಯಾದರೂ ಒಳ್ಳೆಯ ಹೋಟಲ್ ನಲ್ಲಿ ಊಟ ಮಾಡೋಣ,ಅದಕ್ಕಿಂತ ಮುಖ್ಯ ಒಂದಿಷ್ಟು ಮಾತಾಡೊಣ’ ಎಂದರು. ‘ಸರ್, ಇಲ್ಲಿಯೇ ಊಟದ ವ್ಯವಸ್ಥೆ ಇದೆ’ ಎಂದರೆ ‘ಇಲ್ಲಿ ಬೇಡ’ ಎಂದು ಕೊಂಚ ಕುಗ್ಗಿದ ಧ್ವನಿಯಲ್ಲಿ ಹೇಳಿದರು. ನನಗೆ ಅವರ ಮನಸ್ಸು ಅರ್ಥವಾಯಿತು.

ಅವತ್ತು ರಾತ್ರಿ ಬಹಳ ಹೊತ್ತಿನವರೆಗೆ ಮಾತನಡಿದೆವು.. ಅದು ಏನು ಎಂದು ವಿವರಿಸುವುದೇ ಕಷ್ಟ. ಏಕೆಂದರೆ ಗಟ್ಟಿಯವರ ಮಾತು ಎಂದೂ ಇಷ್ಟು ಅರ್ಥ ಎಂದು ಬಿಡಿಸಿಡುವಷ್ಟು ಸರಳವಾಗಿ ಇರುವುದಿಲ್ಲ . ಅದೊಂದು ರೀತಿ ಕಡಲಿನ ಬದಿಯ ನೀರವ ಮೌನದಲ್ಲಿ ಅಲೆಗಳ ಸಪ್ಪಳವನ್ನು ಕೇಳುತ್ತಾ ನಮ್ಮ ಹೆಜ್ಜೆ ಸಪ್ಪಳಕ್ಕೆ ನಾವೇ ಬೆಚ್ಚಿ ಬೀಳುತ್ತಾ ಸಾಗುವ ಹಾಗೆ.

**

ಬಾಲ್ಯದಲ್ಲಿಯೇ ಸಾಹಿತ್ಯದ ನಂಟನ್ನು ಹೊಂದಿದ ಗಟ್ಟಿಯವರಿಗೆ ಹೆತ್ತವರೇ ಪ್ರೇರಣೆ. ತಂದೆ ಧೂಮಪ್ಪ ಯಕ್ಷಗಾನ ಪ್ರಿಯರು. ಮನೆಯಲ್ಲಿ ಪುಸ್ತಕದ ರಾಶಿ, ತಾಯಿ ಪರಮೇಶ್ವರಿ ಒಳ್ಳೆಯ ಗಾಯಕಿ ತುಳು-ಮಲೆಯಾಳಂ ಗೀತೆಗಳನ್ನು ಹಾಡುತ್ತಿದ್ದರು.

ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಉಡುಪಿ ಮತ್ತು ಮಣಿಪಾಲಗಳಲ್ಲಿ ಶಿಕ್ಷಕರಾಗಿದ್ದರು. ಅಲ್ಲಿಂದ ಇಥಿಯೋಪಿಯಾಕ್ಕೆ ತೆರಳಿದರು. ಅನುಭವ ಪ್ರಪಂಚ ವಿಸ್ತಾರವಾದಂತೆ ಅವರೊಳಗೆ ಕತೆಗಳು ಹುಟ್ಟಿ ಕೊಂಡವು, ‘ಶಬ್ದಗಳು’ ಸುಧಾ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಅಪಾರ ಜನಪ್ರಿಯತೆಯನ್ನು ಪಡೆಯಿತು. ಜನಪ್ರಿಯತೆಗೆ ಗಟ್ಟಿ ಮರುಳಾಗಲಿಲ್ಲ, ತನ್ನ ಗಟ್ಟಿತನವನ್ನು ಬಿಡಲಿಲ್ಲ. ನಿರಂತರವಾಗಿ ಬರೆಯುತ್ತಾ ಹೋದರು. ಏನೇ ಬರೆದರೂ ಗಟ್ಟಿಯವರಿಗೆ ಮುಖ್ಯವಾಗಿದ್ದು ಮನುಷ್ಯ. ಸಮಾಜದ ಜೊತೆಗಿನ ಅವನ ಸಂಪರ್ಕ. ಗಟ್ಟಿಯವರ ಕಾದಂಬರಿಗಳಲ್ಲಿ ಸಂಘರ್ಷವೂ ಇದೆ ಸಂಕ್ರಮಣವೂ ಇದೆ ಸಮ್ಮಿಲನವೂ ಇದೆ. ಅದೊಂದು ರೀತಿ ನಿರಂತರ ಮಾನವೀಯತೆಯ ಶೋಧ. ‘ಮನೆ’ ಕಾಮಯಜ್ಞ’ಗಳು ಬಹಿರಂಗದ ಪ್ರಶ್ನೆಗಳನ್ನು ಎತ್ತಿ ಕೊಂಡರೆ ‘ಅಬ್ರಾಹ್ಮಣ’ ‘ಮೃತ್ಯೂರ್ಮ ಅಮೃತಂಗಮಯ’ ‘ಕರ್ಮಣ್ಯೇ ವಾದಿಕಾರಸ್ತೆ’ ಅಂತರಂಗದ ಪ್ರಶ್ನೆಗಳನ್ನು ಎತ್ತಿ ಕೊಂಡವು. ‘ನಿರಂತರ’ದಲ್ಲಿ ಕಾಲದ ಮಿತಿಯನ್ನೇ ಮೀರಿ ಅನಂತದಲ್ಲಿ ಮಾನವೀಯತೆಯ ಪ್ರಶ್ನೆಯನ್ನು ತಂದರು. ‘ಅರಗಿನ ಅರಮನೆ’ ಸ್ವರ್ಣಮೃಗ’ ‘ನವಂಬರ್ 10’ ಎಲ್ಲವೂ ವ್ಯಕ್ತಿ ಮತ್ತು ಸಮಾಜದ ಸಂಬಂಧವನ್ನು ಶೋಧಿಸಿದವು. ಜನಪ್ರಿಯ ಆವರಣದಲ್ಲಿದ್ದರೂ ಗಟ್ಟಿಯವರ ಕಾದಂಬರಿಗಳ ವೈಚಾರಿಕ ಹೂರಣ ಗಟ್ಟಿಯಾಗಿತ್ತು. ಇದು ಕನ್ನಡ ಸಾಹಿತ್ಯ ಲೋಕದ ಪರಿಧಿಯನ್ನು ಗಮನಾರ್ಹವಾಗಿ ವಿಸ್ತರಿಸಿತು.

**

ನಾನು ಮಂಗಳೂರಿನಲ್ಲಿ ಎಂ.ಎ ಮಾಡುತ್ತಿದ್ದಾಗ ಕೆ.ಟಿ.ಗಟ್ಟಿಯವರು ಉಜಿರೆಯಲ್ಲಿದ್ದರು. ಅವರ ಮನೆ ‘ವನಸಿರಿ’ಗೆ ನನಗೆ ಸದಾ ತೆರೆದ ಆಹ್ವಾನ ಹೊತ್ತು ಗೊತ್ತಿಲ್ಲದೆ ನುಗ್ಗುವುದು ಸಮಯದ ಮಿತಿಯಿಲ್ಲದೆ ಹರಟುವುದು.ಗಟ್ಟಿಯವರ ಆಸಕ್ತಿಯ ಹಲವು ಕ್ಷೇತ್ರಗಳಲ್ಲಿ ಸಿನಿಮಾ ಕೂಡ ಒಂದು. ಅವರ ‘ಶಬ್ದಗಳು’ ಸಿನಿಮಾ ಆದಾಗ ಅವರು ಅದಕ್ಕೆ ಸಂಭಾಷಣೆ ಮಾತ್ರವಲ್ಲದೆ ಹಾಡುಗಳನ್ನು ಕೂಡ ಬರೆದಿದ್ದರು. ಸಿನಿಮಾವನ್ನು ಅಕಾಡಮಿಕ್ ಆಗಿ ನೋಡುವುದು ಹೇಗೆ ಎಂದು ಅವರು ಕಲಿಸಿದರು. ಅದರ ಮನೋರಂಜನಾತ್ಮಕ ನೆಲೆಗಳು ತರುವ ಅಪಾಯದ ಬಗ್ಗೆ ಅವರಿಗೆ ಆತಂಕವಿತ್ತು.

ಗಟ್ಟಿ ಹೇಳುತ್ತಿದ್ದರು. ಈಗ ಸಿನಿಮಾ, ರಾಜಕೀಯ, ಕ್ರೀಡೆ ಮೂರೇ ಕ್ಷೇತ್ರದಲ್ಲಿನ ಪ್ರತಿಭೆಗಳಿಗೆ ಬೆಲೆ. ಯುವಕರು ಈ ಮೂರು ಕ್ಷೇತ್ರಗಳನ್ನೇ ತಮ್ಮ ಆದರ್ಶ ಎಂದು ಭಾವಿಸುತ್ತಾರೆ. ನಾವು ಅವರಿಗೆ ಒಳ್ಳೆಯ ಆದರ್ಶಗಳನ್ನು ಕೊಡ ಬೇಕು.

ಕೆ.ಟಿ.ಗಟ್ಟಿ ಅನೇಕ ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ. ಅದ್ಯವುದೂ ಕೂದಲು ಸೀಳುವ ಪಾಂಡಿತ್ಯವಲ್ಲ. ಬದುಕಿನ ನಿಜದ ನೆಲೆ ಹುಡುಕಿದ ಪ್ರಯತ್ನಗಳು.

**

ಕೆ ಟಿ ಗಟ್ಟಿಯವರು ಹಲವಾರು ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದವರು ಈ ಅನುಭವದಿಂದ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಭಾಷ್ಯಾಧ್ಯಯನ, ವ್ಯಾಕರಣ, ಇಂಗ್ಲಿಷ್ ಭಾಷೆಯ ಪ್ರಯೋಗ ಉಚ್ಚಾರಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ತಂದೆತಾಯಿಗಳಿಗೂ ಉಪಯುಕ್ತವಾಗುವಂತಹ ಅನೇಕ ಕೃತಿಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ. ಕನ್ನಡ ಕೃತಿಗಳೆಂದರೆ ಉತ್ಕೃಷ್ಟತೆಗಾಗಿ ತಾಯಿ-ತಂದೆ, ಗುರುಗಳಾಗಿ ತಾಯಿ-ತಂದೆ, ಇಂಗ್ಲಿಷ್ ಮತ್ತು ಕನ್ನಡ ಭಾಷಾಧ್ಯಯನ, ನಿಮ್ಮ ಮಗುವಿಗೆ ಇಂಗ್ಲಿಷ್ ಹಾಗೂ ಕನ್ನಡ ಕಲಿಸುವ ವಿಧಾನ, ಕನ್ನಡ ಆಲಿಸಿ ಕಲಿಸಿ, ಇಂಗ್ಲಿಷ್ ಆಲಿಸಿ ಕಲಿಸಿ ಮುಂತಾದ ಪುಸ್ತಕಗಳಲ್ಲದೆ ಇಂಗ್ಲಿಷ್ನಲ್ಲಿ ಇಂಗ್ಲಿಷ್ ಕನ್ನಡ ಬೈಲಿಂಗ್ಟಲ್, ಪೇರೆಂಟಿಂಗ್ ಫಾರ್ ಎಕ್ಸೆಲೆನ್ಸಿ, ಬೈಲಿಂಗ್ವಲ್ ಮಾಸ್ಟರ್, ಹೌಟು ಟೀಚ್ ಯುವರ್ ಚೈಲ್ಡ್ ಇಂಗ್ಲಿಷ್ ಅಂಡ್ ಕನ್ನಡ, ಲರ್ನ್ ಕನ್ನಡ ಥ್ರೂ ಇಂಗ್ಲಿಷ್, ಲರ್ನ್ ಇಂಗ್ಲಿಷ್ ಥ್ರೂ ಕನ್ನಡ ಇವೇ ಮೊದಲಾದ ಕೃತಿಗಳನ್ನು ರಚಿಸಿದ್ದು ಇವು ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಉಪಕಾರಿ ಎನಿಸಿವೆ.ಈ ನೆಲೆಯಲ್ಲಿ ಅವರ ಜೊತೆಗೆ ಮಾತಿಗೆ ಕುಳಿತರೆ ಹೊಸ ಪ್ರಪಂಚವೇ ತೆರೆದು ಕೊಳ್ಳುತ್ತಿತ್ತು.

**

ನಾನು ಮಲ್ಲಿಗೆ ಮಾಸಪತ್ರಿಕೆಯಲ್ಲಿದ್ದಾಗ ಕೆ.ಟಿ.ಗಟ್ಟಿ ಕೇಳಿದಾಗಲೆಲ್ಲಾ ಕತೆಗಳನ್ನು ನೀಡಿದರು. ಯಾವ ಮಾದರಿ ಕತೆ ಎಂದರೆ ಸಾಕು ಡೆಡ್ ಲೈನ್ ಎಂದಿಗೂ ತಪ್ಪುತ್ತಿರಲಿಲ್ಲ. ಹೀಗೆ ಪ್ರಕಟವಾಗ ಬೇಕು ಎಂದವರಲ್ಲ.ಒಮ್ಮೆ ಕೂಡ ಸಂಭಾವನೆ ವಿಷಯ ಕೇಳಿದವರಲ್ಲ. ಆದರೆ ಬದಲಾವಣೆಗೆ ಒಪ್ಪುತ್ತಿರಲಿಲ್ಲ. ನಾನು ಒಮ್ಮೆ ಕೊಂಚ ಚಿಕ್ಕದು ಮಾಡಲು ಸಾದ್ಯವೆ? ಎಂದು ಕೇಳಿ ಬೈಸಿಕೊಂಡಿದ್ದೆ. ‘ನಿಮಗೆ ಪ್ರಕಟಿಸಲು ಆಗದಿದ್ದರೆ ಹಿಂದಿರುಗಿಸಿ’ ಎಂದಿದ್ದರು ಕಟುವಾಗಿ.

ಅವರ ‘ನವಂಬರ್ 10’ ಕಾದಂಬರಿ ಬಹಳ ಹಿಂದೆ ಮಲ್ಲಿಗೆಯಲ್ಲಿಯೇ ಪ್ರಕಟವಾಗಿತ್ತು. ‘ಸರ್ ಅದನ್ನು ಮರು ಮುದ್ರಣ ಮಾಡುತ್ತೇನೆ’ ಎಂದರೆ ಒಂದು ರೀತಿಯಲ್ಲಿ ಅದು ಫ್ಯಾಂಟಸಿಯನ್ನು ವಿಭಿನ್ನವಾಗಿ ಬಳಸಿದ ಕಾದಂಬರಿ. ಆದರೆ ಗಟ್ಟಿ ಒಪ್ಪಲಿಲ್ಲ. ‘ಈಗ ನನ್ನ ಮನಸ್ಸು ಆ ಕಾದಂಬರಿ ವೈಚಾರಿಕತೆಗಿಂತ ಭಿನ್ನವಾಗಿದೆ. ಅದು ಆ ಕಾಲದ ಸತ್ಯ. ನಿಮಗೆ ಬೇರೆ ಕಾದಂಬರಿ ಕೊಡುತ್ತೇನೆ’ ಎಂದರು. ಇಂತಹ ಅಂತರಂಗದ ನಿರೀಕ್ಷೆ ಇರುವ ಬರಹಗಾರರು ನಮ್ಮಲ್ಲಿ ಎಷ್ಟು ಜನ ಸಿಗ ಬಹುದು.

***

ಕೆ.ಟಿ.ಗಟ್ಟಿಯವರ ಎರಡು ಕಾದಂಬರಿಗಳ ಮರು ಮುದ್ರಣದಲ್ಲಿ ನನಗೆ ಮಾತನಾಡುವ ಅವಕಾಶ ಸಿಕ್ಕಿತು. ಎರಡೂ ನನಗೆ ಪ್ರಿಯವಾದವೇ. ಕರ್ಮಣ್ಯೇ ವಾದಿಕಾರಸ್ತೇ ಸಾಮಾಜಿಕ ವಲಯದ ಅಧ್ಯಾತ್ಮಿಕ ನೆಲೆಗಳನ್ನು ಹುಡುಕುವ ಕೃತಿ. ನನಗೆ ಬಹಳ ವಿಸ್ತಾರವಾಗಿ ಮಾತನಾಡಲು ಅವಕಾಶ ಸಿಕ್ಕಿತು. ಗಟ್ಟಿಯವರಿಗೂ ನನ್ನ ಮಾತು ಖುಷಿ ಕೊಟ್ಟಿತ್ತು. ‘ನಿನ್ನೆ ಇಂದು ನಾಳೆ’ ಒಂದು ರೀತಿಯಲ್ಲಿ ಕರ್ನಾಟಕದ ರಾಜಕೀಯ ಕ್ಷೇತ್ರದ ಸಾಂಸ್ಕೃತಿಕ ಒಳಗಣ್ಣನ್ನು ಹುಡುಕುವ ಪ್ರಯತ್ನ. ಈ ಕಾದಂಬರಿ ರೂಪುಗೊಳ್ಳುವಾಗ ಕೆ.ಟಿ.ಗಟ್ಟಿಯವರ ಜೊತೆ ನಡೆದ ಚರ್ಚೆಯಲ್ಲಿ ಕೂಡ ನಾನು ಭಾಗಿಯಾಗಿದ್ದೆ. ನಾನು ಮಾತನಾಡುವಾಗ ಇದನ್ನೆಲ್ಲಾ ಹೇಳಿದೆ. ಅವತ್ತು ಗಟ್ಟಿಯವರು ಬಂದಿರಲಿಲ್ಲ. ಈ ಕಾದಂಬರಿಯ ಪ್ರಕಾಶಕರಾದ ಇಂದಿರಾ ಸುಂದರ್ ಗಟ್ಟಿಯವರಿಗೆ ಇದನ್ನುಹೇಳಿದರಂತೆ. ಮರು ದಿನ ಗಟ್ಟಿಯವರು ಪೋನ್ ಮಾಡಿದರು. ಬಹಳ ಹೊತ್ತು ಮಾತನಾಡಿದರು. ಉಜಿರೆ ದಿನಗಳನ್ನು ನೆನಪು ಮಾಡಿ ಕೊಂಡರು. ನಾನು ಅವರ ಜೊತೆ ದೀರ್ಘವಾಗಿ ಮಾತನಾಡಿದ್ದು ಅದೇ ಕೊನೆ. ಮುಂದೆ ಅವರ ಆರೋಗ್ಯ.. ನೆನಪು ಕುಸಿಯುತ್ತಲೇ ಹೋಯಿತು

**

ನಮ್ಮ ಪುರಾಣಗಳಲ್ಲಿ ಕಡಲಿನಲ್ಲಿ ಬಹು ದೂರ ಪ್ರಯಾಣ ಮಾಡಿ ಮುತ್ತುಗಳನ್ನು ತರುವ ನಾವಿಕರ ಚಿತ್ರಣ ಬರುತ್ತದೆ. ಗಟ್ಟಿಯವರೂ ಹಾಗೆ ನಮ್ಮ ಜೊತೆ ಇದ್ದರೂ ಆಗಾಗ ನಮ್ಮಿಂದ ದೂರವಿರುವ ದ್ವೀಪಗಳಿಗೆ ಹೋಗಿ ಮುತ್ತುಗಳನ್ನು ತರುತ್ತಿದ್ದರು.

ನನ್ನ ಬಳಿ ಅವರು ಕೊಟ್ಟು ಹೋದ ಇಂತಹ ಮುತ್ತಗಳ ಚೀಲವಿದೆ. ಅದನ್ನು ನಾನು ಸದಾ ಜೋಪಾನವಾಗಿ ಇಟ್ಟು ಕೊಳ್ಳುತ್ತೇನೆ.

**

ಗಟ್ಟಿ ಎಲ್ಲಿ ಹೋಗಿದ್ದಾರೆ.. ಇನ್ನೊಂದು ದೂರ ತೀರದ ಯಾನಕ್ಕೆ ಅಷ್ಟೇ!

-ಎನ್.ಎಸ್.ಶ್ರೀಧರ ಮೂರ್ತಿ