ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಲ್ಲೆಲ್ಲೂ ಸಂಗೀತವನ್ನೇ ಕಂಡ:ಕೆ.ಜೆ.ಯೇಸುದಾಸ್

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

1971ರ ಡಿಸಂಬರ್ 9, ಮಧುರೈ ಬಳಿಯ ಲೆವೆಲ್ ಕ್ರಾಸಿಂಗ್‍ನಲ್ಲಿ ಯೇಸುದಾಸ್ ಅವರೇ ಸ್ವತ: ತಮ್ಮ ಕಾರ್ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ಆಗಿನ್ನೂ ಸಿಗ್ನಲ್ ಮ್ಯಾನ್‍ಗಳ ಕಾಲ. ರೈಲ್ ಬರುವುದನ್ನು ಸಿಗ್ನಲ್ ಮ್ಯಾನ್ ತನ್ನ ಅಜಾಗರೂಕತೆಯಿಂದ ಗಮನಿಸಿದೆ ಸಿಗ್ನಲ್ ಕ್ಲೋಸ್ ಮಾಡಿರಲಿಲ್ಲ. ಯೇಸುದಾಸ್ ಅವರ ಕಾರು ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಡಿಕ್ಕಿಯಾಗಿ ಅದು ಕಾರ್ ಎನ್ನುವುದು ಕೂಡ ಗುರುತು ಸಿಗದಂತೆ ನುಚ್ಚು ನೂರಾಯಿತು. ಆದರೆ ಅಚ್ಚರಿ ಎಂದರೆ ಯೇಸುದಾಸ್ ಅವರಿಗೆ ಒಂದು ಗೀರು ಕೂಡ ಗಾಯವಾಗಿರಲಿಲ್ಲ. ‘ಪವಾಡವಲ್ಲದೆ ಇನ್ಯಾವ ಕಾರಣದಿಂದಲೂ ನಾನು ಬದುಕಿ ಉಳಿಯಲು ಸಾಧ್ಯವಿರಲಿಲ್ಲ.’ ಎಂದು ನನಗೆ ಈ ಘಟನೆಯನ್ನು ಉಲ್ಲೇಖಿಸಿ ಯೇಸುದಾಸ್ ಹೇಳಿದರು. ಆಗ ಅವರ ಮನಸ್ಸಿನಲ್ಲಿ ಬಂದ ಭಾವನೆ ದೇವರು ಯಾವುದೋ ಒಂದು ವಿಶೇಷ ಕಾರಣಕ್ಕೆ ನನ್ನನ್ನು ಉಳಿಸಿದ್ದಾನೆ. ಆ ವಿಶೇಷ ಕಾರಣವೂ ಊಹಿಸಲು ಕಷ್ಟವಾದದ್ದಲ್ಲ. ಸಂಗೀತ, ನಾನು ಹುಟ್ಟಿರುವುದೇ ಹಾಡಲು, ಇನ್ನಷ್ಟು ಶ್ರದ್ದೆಯಿಂದ ಹಾಡು ಎಂದು ಭಗವಂತ ಹೇಳಿದ್ದಾನೆ ಎಂದು ನನಗೆ ಸ್ಪಷ್ಟವಾಯಿತು. ಇದು ಯೇಸುದಾಸ್ ಅವರ ನಂಬಿಕೆ.

ಅದಕ್ಕಾಗಿಯೇ ಅವರು ಎಲ್ಲೆಲ್ಲೂ ಸಂಗೀತವನ್ನೇ ಕಂಡರು. ತಮಗೆ ಬಾಗಿಲು ತೆಗೆಯುವುದಿಲ್ಲ ಎಂದ ಗುರುವಾಯೂರಿನ ಕೃಷ್ಣನ ದೇಗುಲದ ಎದುರೇ ಹಾಡಿದರು. ಜನ ಕೃಷ್ಣನನ್ನು ನೋಡುವ ಬದಲು ಅವರ ಹಾಡನ್ನು ಕೇಳಲು ಸೇರಿದರು. ತಮ್ಮ ಹುಟ್ಟು ಹಬ್ಬದ ದಿನ ಎಲ್ಲೇ ಇದ್ದರೂ ಯೇಸುದಾಸ್ ಕೊಲ್ಲೂರಿಗೆ ಬರುತ್ತಾರೆ. ದೇವಿಯ ಎದುರು ಹಾಡುತ್ತಾರೆ. ಹುಟ್ಟಿದ್ದೇ ಹಾಡಲು, ಹುಟ್ಟುಹಬ್ಬವೂ ಹಾಡಿಗಿಂತ ಬೇರೆಯಾಗುವುದು ಹೇಗೆ ಸಾಧ್ಯ? ಇಂದಿಗೂ ಶಬರಿ ಮಲೈನಲ್ಲಿ ಅವರ ‘ಹರಿವರಾಸನಂ’ ಇಲ್ಲದೆ ದೇಗುಲದ ಬಾಗಿಲು ತೆರೆಯುವುದಿಲ್ಲ. ಅದನ್ನು ಬದಲಿಸಲು ನೋಡಿದಾಗ ಜನರು ಸಿಡಿದು ಬಿದ್ದಿದ್ದರು. ಈ ಹಾಡನ್ನು ಕೇಳದಿದ್ದರೆ ಅಯ್ಯಪ್ಪನೇ ಅಲ್ಲಿರುವುದಿಲ್ಲ ಎನ್ನುವ ಮಟ್ಟಿಗೆ ಭಕ್ತರು ಅದಕ್ಕೆ ಬದ್ದರಾಗಿದ್ದರು.

ಜೇಸುದಾಸ್ ತಮ್ಮ ಪತ್ನಿಯೊಂದಿಗೆ ಅಯ್ಯಪ್ಪ ಸ್ವಾಮಿ ದರ್ಶನದಲ್ಲಿ

ಯೇಸುದಾಸ್ ಹುಟ್ಟಿದ್ದು 1940ರ ಜನವರಿ 10ರಂದು, ತಂದೆ ಆಗಸ್ಟಿನ್ ಜೋಸೆಫ್ ಗಾಯಕರು ಮತ್ತು ರಂಗಭೂಮಿ ಕಲಾವಿದರು. ತಂದೆಯಿಂದಲೇ ದೊರೆತಿದ್ದು ಸಂಗೀತದ ಪ್ರೇರಣೆ. ಮುಂದೆ ದಿಗ್ಗಜರ ಬಳಿ ಕಲಿಯುವ ಅವಕಾಶ ಸಿಕ್ಕಿತು. ಚೆಂಬೈ ವೈದ್ಯನಾಥ ಭಾಗವತರ್ ಅವರಂತಹ ಮೇರು ಸಾಧಕರಾಗುವ ಅವಕಾಶವೂ ದೊರಕಿತು. ಒಮ್ಮೆ ಚೆಂಬೈ ವೈದ್ಯನಾಥ ಭಾಗವತರ್ ಅವರಿಗೆ ಇದ್ದಕಿದ್ದಂತೆ ಧ್ವನಿ ಹೋಯಿತು. ಅವರು ಎದೆಗುಂದದೆ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ಭಕ್ತಿಯಿಂದ ಸೇವೆ ಸಲ್ಲಿಸಿದರು. 115 ಕೀರ್ತನೆಗಳನ್ನು ಈ ಅವಧಿಯಲ್ಲಿ ಬರೆದರು. ನಲವತ್ತನೇ ದಿನ ಅವರಿಗೆ ಮೊದಲಿನಂತೆಯೇ ಹಾಡಲು ಸಾಧ್ಯವಾಯಿತಂತೆ. ಈ ಕಥೆ ಯೇಸುದಾಸ್ ಅವರನ್ನು ಬಹಳ ಪ್ರಭಾವಿಸಿತ್ತು. ಇದನ್ನು ಅವರು ಕೆ.ಎಸ್.ಎಲ್.ಸ್ವಾಮಿ(ರವೀ)ಯವರ ಬಳಿ ಹೇಳಿದಾಗ ಸೃಷ್ಟಿಯಾಗಿದ್ದು ‘ಮಲಯ ಮಾರುತ’ ಚಿತ್ರ. ಅಷ್ಟೇ ಅಲ್ಲ ಈ ಚಿತ್ರ ರೂಪುಗೊಳ್ಳಲು ಯೇಸುದಾಸ್ ಎಲ್ಲಾ ರೀತಿಯ ಸಹಕಾರವನ್ನೂ ನೀಡಿದರು.

ಅವರು ಒಮ್ಮೆ ಕಾಶಿಯಲ್ಲಿ ಕಾರ್ಯಕ್ರಮ ನೀಡಿದ್ದಾಗ ಆಕಸ್ಮಿಕವಾಗಿ ಅಲ್ಲಿಗೆ ಆಗಿನ ಶೃಂಗೇರಿ ಜಗದ್ಗುರುಗಳಾದ ಅಭಿನವ ವಿದ್ಯಾತೀರ್ಥರು ಬಂದಿದ್ದರು. ಯೇಸುದಾಸ್ ಅವರ ಗಾಯನ ಕೇಳಿ ತುಂಬಾ ಸಂತೋಷ ಪಟ್ಟು. ‘ಭಗವಂತನ ಪೂರ್ಣ ಅನುಗೃಹ ನಿಮಗಿರಲಿ’ ಎಂದರು. ಇದು ಯೇಸುದಾಸ್ ಅವರ ಮೇಲೆ ಪ್ರಭಾವ ಬೀರಿತು. ‘ಮಲಯ ಮಾರುತ’ ಕ್ಲೈಮ್ಯಾಕ್ಸ್ ಗುರುವಾಯೂರಿನಿಂದ ಶೃಂಗೇರಿಗೆ ಬಂದಿತು. ‘ಶಾರದೆ ನೀ ದಯೆ ತೋರಿದೆ’ ಹಾಡು ಸೃಷ್ಟಿಯಾಯಿತು. ಅದು ಯೇಸುದಾಸ್ ಅವರಿಗೆ ಬಹಳ ಪ್ರಿಯವಾದ ಹಾಡು.

ಯೇಸುದಾಸ್ ಚಿತ್ರಗೀತೆ ಹಾಡಲು ಆರಂಭಿಸಿದ್ದು 1961ರಲ್ಲಿ ಮೊದಲು ಹಾಡಿದ್ದೂ ಕೂಡ ಬ್ರಹ್ಮರ್ಷಿ ನಾರಾಯಣ ಗುರುಗಳ ರಚನೆ ‘ಜಾತಿ ಭೇದಂ ಮತ ದ್ವೇಷಂ’ ಇದು ಯೇಸುದಾಸ್ ಅವರಿಗೆ ಭಾವುಕ ಸಂಗತಿ ಕೂಡ ಹೌದು ಅವರ ಆಶೀರ್ವಾದದಿಂದಲೇ ನಾನು ಇದೆಲ್ಲವನ್ನೂ ಸಾಧಿಸಲು ಸಾಧ್ಯವಾಯಿತು ಎನ್ನುವುದು ಅವರ ನಂಬಿಕೆ. ಹಾಡಲು ಆರಂಭಿಸಿದ ಮೇಲೆ ಅವರು ಎಲ್ಲಾ ಭಾಷೆಯ ಕಂಠವಾಗಿ ಬಿಟ್ಟರು. ಕಾಶ್ಮೀರಿ, ಪಂಜಾಬಿ ಹೊರತು ಪಡಿಸಿ ಇನ್ನೆಲ್ಲಾ ಭಾರತೀಯ ಭಾಷೆಗಳಲ್ಲಿಯೂ ಹಾಡಿರುವ ಯೇಸುದಾಸ್ ರಷ್ಯನ್, ಫ್ರೆಂಚ್, ಜಪಾನೀಸ್, ಲ್ಯಾಟಿನ್‍ಗಳೂ ಸೇರಿ ಒಟ್ಟು 36 ಭಾಷೆಗಳಲ್ಲಿ ಹಾಡಿರುವ ಹೆಗ್ಗಳಿಕೆ ಅವರದು. ಸೌದಿ ಅರೇಬಿಯಾದಲ್ಲಂತೂ ಅರಾಬಿಕ್ ಭಾಷೆಯಲ್ಲಿಯೇ ವಿವಿದೆಡೆ ಸಂಗೀತ ಕಚೇರಿಗಳನ್ನು ಕೂಡ ಅವರು ನಡೆಸಿದ್ದಾರೆ. 1969ರಿಂದ ಆರಂಭಿಸಿ 1998ರವರೆಗ ಸತತವಾಗಿ 19 ವರ್ಷ ಕೇರಳ ಸರ್ಕಾರದ ಶ್ರೇಷ್ಠ ಗಾಯಕ ಪುರಸ್ಕಾರ ಪಡೆದ ದಾಖಲೆ ಅವರದು. ಅಲ್ಲಿಂದ ಮುಂದೆ ತನ್ನ ಹೆಸರನ್ನು ಪರಿಗಣಿಸಬಾರದು ಎಂದು ಯೇಸುದಾಸ್ ಅವರೇ ವಿನಂತಿಸಿದ್ದರಿಂದಲೇ ಅದು ನಿಂತಿತು. ಕೇರಳ ಸರ್ಕಾರ ಇದುವರೆಗೂ ಆಸ್ಥಾನ ವಿದ್ವಾನ್ ಎಂಬ ಪುರಸ್ಕಾರವನ್ನು ನೀಡಿರುವುದು ಅವರೊಬ್ಬರಿಗೆ ಮಾತ್ರ. ಮೂವತ್ತನೇ ವರ್ಷದಲ್ಲಿಯೇ ಕೇರಳ ಸರ್ಕಾರ ಅವರನ್ನು ಸಂಗೀತ ನೃತ್ಯ ಅಕಾಡಮಿ ಅಧ್ಯಕ್ಷರನ್ನಾಗಿ ಮಾಡಿತ್ತು. ಅವರ 75ನೇ ವರ್ಷದ ಹುಟ್ಟು ಹಬ್ಬವನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸಿತ್ತು. ಇಂತಹ ಗೌರವವನ್ನು ಪಡೆದ ಬೇರೆ ಗಾಯಕರ ಉದಾಹರಣೆ ಸಿಕ್ಕುವುದು ಕಷ್ಟ. ರಾಷ್ಟ್ರಮಟ್ಟದಲ್ಲಿ ಕೂಡ ಎಂಟು ಸಲ ಶ್ರೇಷ್ಠ ಗಾಯಕ ರಾಷ್ಟ್ರಪ್ರಶಸ್ತಿಯನ್ನು ಪಡೆದು ದಾಖಲೆಯನ್ನು ಸ್ಥಾಪಿಸಿರುವ ಹೆಗ್ಗಳಿಕೆ ಅವರದು.


‘ಚಿತ್ರಚೋರ್’ ಚಿತ್ರದ ಮೂಲಕ ಯೇಸುದಾಸ್ ಅವರ ಪ್ರತಿಭೆಯನ್ನು ಬಾಲಿವುಡ್‍ನಲ್ಲಿ ಸಮರ್ಥವಾಗಿ ಬಳಸಿ ಕೊಂಡ ಸಂಗೀತ ನಿರ್ದೇಶಕ ರವೀಂದ್ರ ಜೈನ್ ಅವರನ್ನು ಒಮ್ಮೆ ಸಂದರ್ಶನದಲ್ಲಿ ದೇವರು ನಿಮಗೆ ವರವಾಗಿ ಕಣ್ಣನ್ನು ನೀಡಿದರೆ ಮೊದಲು ಯಾರನ್ನು ನೋಡಲು ಇಷ್ಟ ಪಡುತ್ತೀರಿ ಎಂದರೆ ಅವರು ಹೇಳಿದ್ದು ಯೇಸುದಾಸ್ ಅವರ ಹೆಸರನ್ನು. ಅವರು ಎಲ್ಲಾ ಸಂಗೀತ ನಿರ್ದೇಶಕರಿಗೂ ಪ್ರಿಯವಾದವರೆ. ಸ್ವತ: ತಾವೇ ಶ್ರೇಷ್ಠ ಸಂಗೀತಗಾರರಾದರೂ ಸೂಚನೆಗಳನ್ನು ಮೀರುವುದಿಲ್ಲ. ‘ನಾರದ ವಿಜಯ’ ಗೀತೆಗಳ ಧ್ವನಿ ಮುದ್ರಣದ ಸಂದರ್ಭ. ಯೇಸುದಾಸ್ ‘ಇದು ಎಂಥಾ ಲೋಕವಯ್ಯ’ ಗೀತೆಯನ್ನು ಹಾಡುತ್ತಿದ್ದರು. ತಿಲ್ಲಾಂಗ್ ರಾಗದಲ್ಲಿದ್ದ ಗೀತೆಯನ್ನು ಯೇಸುದಾಸ್ ಕ್ಲಾಸಿಕ್ ಟ್ರ್ಯಾಕ್‍ನಲ್ಲಿ ಹಾಡುತ್ತಿದ್ದರು. ಸಂಗೀತ ನಿರ್ದೇಶಕ ಸಿ.ಅಶ್ವತ್ಥ್ ಅವರಿಗೆ ಕೊಂಚ ಕಾಮಿಕ್ ಎಲಿಮೆಂಟ್ ಬರಲಿ ಎಂಬ ಉದ್ದೇಶ. ಎರಡು ಸರಿ ಸೂಚನೆ ನೀಡಿದರೂ ಯೇಸುದಾಸ್ ತೆಗೆದು ಕೊಳ್ಳಲಿಲ್ಲ. ಅಶ್ವತ್ಥ್ ಕೋಪ ಮಾಡಿ ಕೊಂಡು ಎದ್ದು ಹೋದರು. ವೈದ್ಯನಾಥನ್ ರೆಕಾರ್ಡಿಂಗ್ ಮುಂದುವರೆಸಿದರು. ರೆಕಾರ್ಡಿಂಗ್ ಮುಗಿಸಿ ಹೊರ ಬಂದ ಯೇಸುದಾಸ್ ಅಶ್ವತ್ಥ್ ಅವರ ಬಳಿಗೆ ಬಂದು ‘ಬೇಸರ ಮಾಡಿ ಕೊಳ್ಳ ಬೇಡಿ, ನಿಮ್ಮ ಕಂಪೋಸಿಷನ್ ತರಹವೇ ಹಾಡಿದ್ದೇನೆ, ಹೈವೇನಲ್ಲಿ ಹೋಗೋ ಕಾರನ್ನು ಇದ್ದಕಿದ್ದ ಹಾಗೆ ಗಲ್ಲಿ ರೋಡ್‍ಗೆ ಇಳಿಸಿದರೆ ಕಷ್ಟವಲ್ಲವೆ?’ ಎಂದು ನಕ್ಕಿದ್ದರು.

“ಸಾಹಿಬ್”ಚಿತ್ರದ ಕನ್ನಡ ಅವರತರಣಿಕೆ ‘ಕರ್ಣ’ ಮೂಲ ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ಬರುವ “ಕ್ಯಾ ಕಬರ್ ಕ್ಯಾ ಪಥಾ”ವನ್ನು ಕಿಶೋರ್ ಕುಮಾರ್ ಭಾವಪೂರ್ಣವಾಗಿ ಹಾಡಿದ್ದರು. ಆರು ನಿಮಿಷ 35 ಸೆಕೆಂಡ್‍ಗಳಷ್ಟಿದ್ದ ಗೀತೆ ಚಿತ್ರದ ಜೀವಧ್ವನಿಯನ್ನೇ ಬಿಂಬಿಸಿತ್ತು. ಅದನ್ನು “ಕರ್ಣ”ಚಿತ್ರದ ಧ್ವನಿಯನ್ನು ಬಿಂಬಿಸುವಂತೆ ಬದಲಾಯಿಸಿ ಕೊಳ್ಳಲು ಈ ಚಿತ್ರದ ಸಂಗೀತ ನಿರ್ದೇಶಕ ರಂಗರಾವ್ ಬಯಸಿದರು. ಮೂಲ ಚಿತ್ರಕ್ಕೆ ಪಾಪ್ ಹಿನ್ನೆಲೆಯ ಬಪ್ಪಿ ಲಹರಿ ಸಂಗೀತ ನಿರ್ದೇಶಕರು. ರಂಗರಾಯರಾದರೋ ಮಾಧುರ್ಯಕ್ಕೆ ಗಮನ ಕೊಟ್ಟವರು. ಅದಕ್ಕೆ ತಕ್ಕಂತೆ ಯೇಸುದಾಸ್ “ಆ ಕರ್ಣನಂತೆ ನೀ ದಾನಿಯಾದೆ” ಎನ್ನುವ ಗೀತೆಯನ್ನು ಮೂಲಕ್ಕಿಂತ ಭಿನ್ನವಾಗಿ ಆದರೆ ಅಷ್ಟೇ ಮಧುರವಾಗಿ ಹಾಡಿದರು.

2017 ರಲ್ಲಿ ರಾಷ್ಟ್ರಪತಿ ಗಳಿಂದ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕಾರದ ಸಂದರ್ಭ

ಯೇಸುದಾಸ್ ಅವರ ಪರಿಚಯ ನನಗೆ ಆಗಿದ್ದು ಬಹುತೇಕ ಎಲ್ಲಾ ಸಾಧಕರ ಪರಿಚಯ ಆದಂತೆಯೇ ಆರ್.ಎನ್.ಜಯಗೋಪಾಲ್ ಅವರ ಮೂಲಕ. ಬಹು ಬೇಗ ಬಿಗುಮಾನವಿಲ್ಲದೆ ಬೆರೆಯುವ ಸ್ವಭಾವದಿಂದ ಹತ್ತಿರವೂ ಆಗಿ ಬಿಟ್ಟರು. ಬರೀ ಗಾಯಕರಾಗಿ ಅವರನ್ನು ಅರಿತಿದ್ದ ನನಗೆ ತರಂಗಿಣಿ ಸ್ಟುಡಿಯೋವನ್ನು ತಿರುವನಂತ ಪುರ, ಚೆನ್ನೈ ಮತ್ತು ನ್ಯೂಯಾರ್ಕ್‍ಗಳಲ್ಲಿ ನಡೆಸುತ್ತಿರುವ ವಿಷಯ ತಿಳಿಯಿತು. ಮಲೆಯಾಳಂನಲ್ಲಿ ಚಿತ್ರಗೀತೆಗಳ ಕ್ಯಾಸೆಟ್ ಅನ್ನು ಮೊದಲು ತಂದ ಹೆಗ್ಗಳಿಕೆಯ ಈ ಸ್ಟುಡಿಯೋದಲ್ಲಿ ಇಂದಿಗೂ ಭಕ್ತಿ ಗೀತೆ ಗಾಯನದ ಸಿ.ಡಿಗಳನ್ನು ಉಚಿತವಾಗಿ ಮಾಡಿ ಕೊಡಲಾಗುತ್ತದೆ. ರಿಯಾಲಿಟಿ ಶೋಗಳ ಯುಗ ಆರಂಭವಾಗುವ ಎಷ್ಟೋ ವರ್ಷ ಮೊದಲೇ ವಾಯ್ಸ್ ಬ್ಯಾಂಕ್‍ನ ಪರಿಕಲ್ಪನೆ ತಂದು ಎಷ್ಟೋ ಯುವ ಗಾಯಕ-ಗಾಯಕಿಯರಿಗೆ ಯೇಸುದಾಸ್ ಅವಕಾಶಗಳನ್ನು ಕಲ್ಪಿಸಿದರು. ಜಗತ್ತಿನಲ್ಲೆಡೆ ಸಂಗೀತದ ಮೂಲಕ ಶಾಂತಿ ಹರಡುವ ಪ್ರಯತ್ನ ಮಾಡುತ್ತಿರುವ ಅವರಿಗೆ 1999ರಲ್ಲಿಯೇ ಯುನೆಸ್ಕೋ ವಿಶೇಷ ಶಾಂತಿ ಪುರಸ್ಕಾರವನ್ನು ನೀಡಿತ್ತು. ಸಂಸ್ಕೃತ, ಲ್ಯಾಟಿನ್ ಮತ್ತು ಅರಾಬಿಕ್ ಭಾಷೆಗಳನ್ನು ಬಳಸಿ ಕರ್ನಾಟಕಿ ಶೈಲಿಯಲ್ಲಿ ಅವರು ಸೃಷ್ಟಿಸಿದ ‘ಅಹಿಂಸಾ’ ಆಲ್ಭಂ ಸಂಗೀತ ಲೋಕದ ವಿಸ್ಮಯಗಳಲ್ಲಿ ಒಂದು ಎಂದು ಕರೆಸಿಕೊಂಡಿದೆ. ಚೆನ್ನೈನ ಸ್ವರ್ಣಲಾಯ 2000ದಿಂದಲೂ ಯೇಸುದಾಸ್ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರತಿ ವರ್ಷವೂ ‘ಗಂಧರ್ವ ಸಂಧ್ಯಾ’ ಕಾರ್ಯಕ್ರಮ ನಡೆಸುವ ಮೂಲಕ ಆ ಪ್ರಶಸ್ತಿಯನ್ನು ಯೇಸುದಾಸ್ ನೀಡುತ್ತಾರೆ.

ಕನ್ನಡದಲ್ಲಿ ಯೇಸುದಾಸ್ ಅವರ ಪ್ರತಿಭೆಯನ್ನು ಸಮರ್ಥವಾಗಿ ಬಳಸಿ ಕೊಂಡ ಹಂಸಲೇಖ ಅವರ ಮಟ್ಟಿಗೆ ಯೇಸುದಾಸ್ ಭೂಮಿಗೆ ಇಳಿದ ಗಂಧರ್ವರೇ! ‘ರಾಮಾಚಾರಿ’ ಚಿತ್ರಕ್ಕೆ ಅವರು ಹಾಡಿದ ‘ನಮ್ಮೂರ ಯುವರಾಣಿ’ ಒಂದು ಗಂಧರ್ವ ಗಾಯನ. ಹಲವು ಹೆಗ್ಗಳಿಕೆಯ ಯೇಸುದಾಸ್ ನಿಜ ಜೀವನದಲ್ಲಿ ಅಚ್ಚರಿ ಎನ್ನಿಸುವಷ್ಟರ ಮಟ್ಟಿಗೆ ಸರಳರು. ಅವರೊಡನೆ ಮಾತನಾಡುತ್ತಿದ್ದರೆ ಅದು ಲೇಖನ ರೂಪ ತಾಳುವುದು ಬಹು ಸುಲಭ, ಅಷ್ಟು ಸರಳ, ಸ್ಪಷ್ಟ…ಒಂದೊಂದು ಸಲ ಅನ್ನಿಸುವುದು ಉಂಟು ನಾನು ಬರೆಯುತ್ತಲೇ ಇರ ಬೇಕು.. ಕಾಲ ಹೀಗೇ ಸ್ತಬ್ಧವಾಗಿ ಬಿಡ ಬೇಕು!
ಅವರು ಹುಟ್ಟಿದ ಕಾಲದಲ್ಲಿಯೇ ಇರುವ ನಾವು ನಿಜಕ್ಕೂ ಪುಣ್ಯವಂತರಲ್ಲವೆ?


ಎನ್.ಎಸ್.ಶ್ರೀಧರ ಮೂರ್ತಿ