ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಷ್ಣು ಸರ್.. ನನ್ನನ್ನು ದಯವಿಟ್ಟು ಕ್ಷಮಿಸಿ

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ನಾನು ವಿಷ್ಣುವರ್ಧನ್ ಅವರನ್ನು ಮೊದಲು ನೋಡಿದ್ದು ನನ್ನ ಕಾಲೇಜ್ ದಿನಗಳಲ್ಲಿ ಶೃಂಗೇರಿಯಲ್ಲಿ ‘ಮಲಯ ಮಾರುತ’ ಚಿತ್ರದ ಚಿತ್ರೀಕರಣ ನಡೆದಿತ್ತು. ಸರಿ ಸುಮಾರು ಒಂದು ವಾರಗಳ ಕಾಲ ಕಾಲೇಜ್‍ಗೆ ಚಕ್ಕರ್ ಹಾಕಿ ಗುಂಪಿನ ನಡುವೆ ವಿಷ್ಣುವರ್ಧನ್ ಅವರನ್ನು ಕಣ್ಣು ತುಂಬಿಸಿ ಕೊಂಡಾಗ ನಾನು ಅವರನ್ನು ಮುಂದೊಮ್ಮೆ ಭೇಟಿ ಮಾಡುತ್ತೇನೆ, ಅವರ ಕುರಿತು ಪುಸ್ತಕವನ್ನು ಬರೆಯುತ್ತೇನೆ ಎಂಬ ಚಿಕ್ಕ ಕಲ್ಪನೆ ಕೂಡ ಇರಲಿಲ್ಲ. ಆದರೆ ನನ್ನ ಬದುಕಿನಲ್ಲಿ ವಿಷ್ಣುವರ್ಧನ್ ಅಚ್ಚಳಿಯದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ ಎನ್ನುವುದನ್ನು ಗಮನಿಸಿದಾಗ ಬದುಕು ಎಷ್ಟು ಅಚ್ಚರಿಯದು ಎನ್ನುವ ಭಾವ ಕಾಡುತ್ತದೆ.

ವಿಷ್ಣುವರ್ಧನ್ ಮತ್ತು ರಾಜ್ ಕುಮಾರ್ ನಡುವೆಯ ಭಿನ್ನಾಭಿಪ್ರಾಯಗಳ ಕುರಿತು ಹಲವು ಕಥೆಗಳಿವೆ. ಸತ್ಯವೆಂದರೆ ಅವರಿಬ್ಬರ ನಡುವೆ ಉತ್ತಮ ಸಂಬಂಧವಿತ್ತು. ಚಲನಚಿತ್ರದ ಕುರಿತ ಮುಖ್ಯವಾದ ಸಮಸ್ಯೆಗಳೇನೇ ಇದ್ದರೂ ಸದಾಶಿವ ನಗರದ ತಮ್ಮ ಮನೆಗೆ ವಿಷ್ಣುವರ್ಧನ್ ಅವರನ್ನು ರಾಜ್ ಕುಮಾರ್ ಕರೆಸುತ್ತಿದ್ದರು. ವಿಷ್ಣುವರ್ಧನ್ ಅವರ ಅಣ್ಣನ ಮದುವೆಗೆ ರಾಜ್ ಕುಮಾರ್ ಬಂದಿದ್ದರು. ಡೈನಿಂಗ್ ರೂಂಗೆ ಕರೆದು ಕೊಂಡು ಹೋಗಿ ‘ವೆಜ್ ಊಟ ಅಣ್ಣಾ’ ಎಂದು ವಿಷ್ಣುವರ್ಧನ್ ಹೇಳಿದಾಗ ರಾಜ್ ಕುಮಾರ್ ‘ಇರ್ಲಿ ಬಿಡ್ರೀ, ನನಗೂ ವೆಜ್ ಊಟ ಇಷ್ಟ’ ಎಂದರು. ವಿಷ್ಣುವರ್ಧನ್ ಅವರೇ ಬಡಿಸಿದರು. ಬೇಳೆ ಸಾರು ಮತ್ತು ಕೋಸಂಬರಿಯನ್ನು ರಾಜ್ ಕುಮಾರ್ ಚಪ್ಪರಿಸಿ ಕೊಂಡು ತಿಂದಿದ್ದರು. ಊಟವಾದ ನಂತರ ಕೂಡ ಎರಡು ಘಂಟೆಗಳ ಕಾಲ ವಿಷ್ಣುವರ್ಧನ್ ಅವರ ಜೊತೆಗೇ ಕಾಲ ಕಳೆದಿದ್ದರು.

‘ಬಭ್ರುವಾಹನ’ ಚಿತ್ರೀಕರಣಕ್ಕೆ ವಿಷ್ಣುವರ್ಧನ್ ಬಂದಿದ್ದಾಗ ಅವರ ಜೊತೆ ಇದ್ದ ರಾಜೇಂದ್ರ ಸಿಂಗ್(ಬಾಬು) ಅವರ ಬಳಿ ನಮ್ಮಿಬ್ಬರನ್ನೂ ಹಾಕಿಕೊಂಡು ಒಂದು ಸಿನಿಮಾ ಮಾಡಿ ಎಂದು ರಾಜ್ ಕುಮಾರ್ ಅವರೇ ಸೂಚಿಸಿದ್ದರು. ‘ಶೋಲೆ’ ಮಾದರಿಯಲ್ಲಿ ಕಥೆ ಮಾಡಿ ತೋರಿಸಿದರೆ ರಾಜ್ ಕುಮಾರ್ ಅವರಿಗೆ ಒಪ್ಪಿಗೆ ಆಗಲಿಲ್ಲ. ಇದಾದ ಹದಿನೈದು ವರ್ಷಗಳ ನಂತರ ಸುಧಾ ವಾರಪತ್ರಿಕೆಯಲ್ಲಿ ‘ಯುದ್ಧ’ ಎಂಬ ಕಾದಂಬರಿ ಬಂದಿತು. ವಿಜಯ ಸಾಸನೂರ ಕಾದಂಬರಿಕಾರರು. ರಾಜೇಂದ್ರ ಸಿಂಗ್(ಬಾಬು) ಹಕ್ಕುಗಳನ್ನು ಪಡೆದರು. ಮೂವರು ಪ್ರಧಾನ ನಟರಿಗೆ ಅವಕಾಶ ಇದ್ದ ವಸ್ತು ಅದು. ರಾಜ್ ಕುಮಾರ್ ಅವರನ್ನು ಈ ಕುರಿತು ಬಾಬು ಭೇಟಿ ಮಾಡಿದಾಗ ಥ್ರಿಲ್ ಆದರು. ‘ಒಳ್ಳೆಯ ಸಬ್ಜೆಕ್ಟ್, ನಾನು ಖಂಡಿತಾ ಅಭಿನಯಿಸುತ್ತೇನೆ, ವಿಷ್ಣು, ಅಂಬರೀಷ್ ಅವರಿಗೆ ಇನ್ನೆರಡು ಪಾತ್ರಗಳನ್ನು ನೀಡಿ. ದೊಡ್ಡ ಬಜೆಟ್ ಚಿತ್ರ ತುಂಬಾ ಖರ್ಚು ಬರುತ್ತೆ. ನನಗೆ ಒಂದು ರೂಪಾಯಿ ಸಂಭಾವನೆ ಕೊಡಿ’ ಎಂದರು. ವಿಷಯ ತಿಳಿದು ವಿಷ್ಣುವರ್ಧನ್ ಅವರೂ ಥ್ರಿಲ್ ಆದರು. ಉದಯಶಂಕರ್ ಸಂಭಾಷಣೆ ಆರಂಭಿಸಿದರು. ಚಿತ್ರ ಆಗಲಿಲ್ಲ ಎನ್ನುವುದು ಬೇರೆ ಮಾತು ಆದರೆ ಅಂತಹ ಪ್ರಯತ್ನ ನಡೆದಿತ್ತು ಎನ್ನುವುದೂ ಕೂಡ ಇತಿಹಾಸದಲ್ಲಿ ದಾಖಲಾಗಲಿಲ್ಲ. ನಿಜವಾದ ವಿಷಾದ ಎಂದರೆ ಇದು.

‘ಸಿನಿಮಾ ಮತ್ತು ಕ್ರಿಕೆಟ್ ಎರಡೂ ಟೀಂವರ್ಕ್ ಇದ್ರೆ ಮಾತ್ರ ಗೆಲ್ಲುತ್ರೆ, ಯಾರೂ ಒಬ್ಬನು ಸೆಂಚುರಿ ಹೊಡ್ದ ಕೂಡ್ಲೆ ಒಂದು ಟೀಂ ಗೆಲ್ಲಲ್ಲ, ಹಾಗೆ ಹೀರೋ ಒಬ್ಬನೇ ಚೆನ್ನಾಗಿ ಪರ್‍ಫಾರ್ಮ್ ಮಾಡ್ದ ಕೂಡ್ಲೆ ಸಿನಿಮಾ ಗೆಲ್ಲಲ್ಲ’ ಈ ಮಾತನ್ನು ಯಾರು ಹೇಳಿದ್ರು ಅಂತ ಹಳೇ ತಲೆಮಾರಿನ ಪತ್ರಕರ್ತರಿಗೆ ತಕ್ಷಣ ಗೊತ್ತಾಗಿ ಬಿಡುತ್ತೆ, ವಿಷ್ಣುವರ್ಧನ್ ಎಲ್ಲಾ ಪತ್ರಿಕಾ ಗೋಷ್ಠಿಯಲ್ಲೂ ಈ ಮಾತುಗಳನ್ನೇ ಹೇಳ್ತಾನೆ ಇದ್ರು, ಹೀಗಾಗಿ ಈ ಮಾತುಗಳು 80-90ರ ದಶಕದ ಸಿನಿಮಾ ಪುರವಣಿಗಳನ್ನು ತೆಗೆದರೆ ನೂರಾರು ಸಲ ಸಿಕ್ಕುತ್ತೆ. ಇದಕ್ಕೆ ಇನ್ನೊಂದು ಕಾರಣಾನೂ ಇದೆ. ವಿಷ್ಣು ಹಾಗೆ ನೋಡಿದರೆ ಮೀಡಿಯಾ ಫ್ರೆಂಡ್ಲಿ ಪರ್ಸನಾಲಿಟಿ ಅಲ್ಲವೇ ಅಲ್ಲ. ಮಾತುಗಳನ್ನು ಎಚ್ಚರಿಕೆಯಿಂದ ಅಳೆದು ತೂಗೂ ಚತುರತೆ ತೋರಿದವರೂ ಅಲ್ಲ. ಪತ್ರಕರ್ತರ ಬಾಣದಂತ ಪ್ರಶ್ನೆಗಳನ್ನು ಎಷ್ಟೋ ಸಲ ಎದುರಿಸೋಕೆ ಹೋಗದೆ ರಕ್ಷಣಾತ್ಮಕ ಆಟ ಆಡ್ತಾ ಇದ್ದರು. ಹೀಗಾಗಿ ಅನಿವಾರ್ಯವಾಗಿ ಅವರು ಹೇಳಿದ್ದನ್ನೇ ಪತ್ರಕರ್ತರು ಬರೆಯ ಬೇಕಾಗುತ್ತಿತ್ತು.

ಅಧ್ಯಾತ್ಮ ಎನ್ನುವುದು ಅವರ ಜೀವನದ ಕೊನೆಯ ದಿನಗಳಲ್ಲಿ ಮೊಳೆತ ಆಸಕ್ತಿ ಅಲ್ಲ. ಅವರ ಬದುಕಿನ ಸೆಲೆಯೇ ಆಗಿತ್ತು. ಕಾಕ್‍ಟೈಲ್ ಪಾರ್ಟಿಯಲ್ಲೂ ಅಧ್ಯಾತ್ಮದ ಮಾತು ಬಂದಂತೆ ಸಚಿನ್ ಶತಕದ ಕುರಿತ ಚರ್ಚೆಯಲ್ಲೂ ಅದರ ಎಳೆ ಇರುತ್ತಿತ್ತು. ಸಂಖ್ಯಾಶಾಸ್ತ್ರದಲ್ಲಿ ಅಪಾರ ನಂಬಿಕೆ ಇದ್ದ ಅವರ ಜೀವನದಲ್ಲಿ ‘321’ ಮುಖ್ಯಪಾತ್ರ ವಹಿಸಿತ್ತು. ಅವರ ಕಾರಿನ ಸಂಖ್ಯೆ ಮೊಬೈಲ್ ಸಂಖ್ಯೆ ಎಲ್ಲದರಲ್ಲೂ ಇದು ಇದ್ದೇ ಇರುತ್ತಿತ್ತು. ಈ ಕಾರಣದಿಂದಲೇ ಏನೋ ವಿಷ್ಣು ಅಲ್ಪ ತೃಪ್ತರಾಗಿದ್ದರು. ಅವರ ಜೊತೆ ಗಂಟೆಗಟ್ಟಲೆ ಕಳೆದಾಗಲೂ ಇನ್ನೊಬ್ಬರ ಕುರಿತು ಕಹಿ ಮಾತು ಬಂದಿದ್ದನ್ನು ನಾನು ನೋಡಲಿಲ್ಲ.

ವಿಷ್ಣುವರ್ಧನ್ ಅವರಿಗೆ ಬರಹಗಾರರ ಕುರಿತು ಅಪಾರ ಗೌರವ. ‘ಬಂಧನ’ದಂತಹ ಹಿಟ್ ಹಾಡುಗಳನ್ನು ಕೊಟ್ಟ ಆರ್.ಎನ್.ಜಯಗೋಪಾಲ್ ಅವರ ಕುರಿತಂತೂ ವಿಶೇಷ ಆದರ. ನಾವು ಆರ್.ಎನ್.ಜಯಗೋಪಾಲ್ ಅವರ 70ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದಾಗ ಅವರ ಮನೆಗೇ ಹೋಗಿ ಆಹ್ವಾನಿಸಿದ್ದೆವು. ಸುರಾನಾ ಕಾಲೇಜ್‍ನಲ್ಲಿ ಇಡೀ ದಿನ ಜಯಗೋಪಾಲ್ ಅವರ ಕೊಡುಗೆ ಕುರಿತ ವಿಚಾರ ಸಂಕಿರಣ. ಮರುದಿನ ಸನ್ಮಾನ ಕಾರ್ಯಕ್ರಮ. ವಿಷ್ಣುವರ್ಧನ್ ಅವರನ್ನು ಆಹ್ವಾನಿಸಿದ್ದು ಸನ್ಮಾನ ಕಾರ್ಯಕ್ರಮಕ್ಕೆ ಆದರೆ ಅವರು ನಮ್ಮ ನಿರೀಕ್ಷೆಯನ್ನು ಮೀರಿ ವಿಚಾರ ಸಂಕಿರಣಕ್ಕೆ ಬಂದರು. ಸಾಮಾನ್ಯ ಪ್ರೇಕ್ಷಕರ ನಡುವೆ ಕುಳಿತರು. ಒತ್ತಾಯ ಮಾಡಿ ವೇದಿಕೆಗೆ ಕರೆದಾಗ ‘ಕನ್ನಡ ನಾಡಿನ ಜೀವನದಿ ಕಾವೇರಿಯಂತಹ ಅಮರ ಗೀತೆಯನ್ನು ನನಗೆ ನೀಡಿದ ಜಯಗೋಪಾಲ್ ಅವರೇ’ ಎಂದು ಮಾತನ್ನು ಆರಂಭಿಸಿದ್ದರು. ಜಯಗೋಪಾಲ್ ಅವರಿಗೆ ಬರೆದ ಬಹುತೇಕ ಹಾಡುಗಳು ಅವರ ನೆನಪಿನಲ್ಲಿ ಸ್ಪುಟವಾಗಿದ್ದವು. ಅಂದಿನ ಅವರ ಮಾತನ್ನು ಕೇಳಿದರೆ ಸಿದ್ದತೆ ಇಲ್ಲದೆ ಮಾತಾಡಿದ್ದಾರೆ ಎಂದು ಯಾರೂ ಹೇಳುವಂತೆ ಇರಲಿಲ್ಲ. ಲಹರಿಯಲ್ಲಿ ಇದ್ದರೆ ನಾನು ಗಮನಿಸಿದಂತೆ ವಿಷ್ಣುವರ್ಧನ್ ಅವರನ್ನು ಸರಿಗಟ್ಟಬಲ್ಲ ಮಾತುಗಾರ ಇನ್ನೊಬ್ಬರು ಸಿಕ್ಕಲಾರರು.

‘ಮಹಾಕ್ಷತ್ರಿಯ’ ಸಂಗೀತ ಕಂಪನಿ ಲಹರಿ ಅವರ ನಿರ್ಮಣದ ಚಿತ್ರ. ಇದರಲ್ಲಿ ಒಂದು ಅಮರ ಗೀತೆ ಬೇಕು ಎನ್ನುವುದು ವಿಷ್ಣುವರ್ಧನ್ ಅವರ ಆಸೆ. ಹಂಸಲೇಖಾ ಅವರನ್ನು ಕೋರಿ ಕೊಂಡರು. ಆಗ ಎಸ್.ಪಿ ಅಮೆರಿಕಾದಲ್ಲಿ ಮ್ಯೂಸಿಕ್ ನೈಟ್ ಮಾಡುತ್ತಿದ್ದರು. ಅಲ್ಲಿ ‘ಮುತ್ತಿನ ಹಾರ’ ಚಿತ್ರದ ಹಾಡಿಗೆ ಪ್ರೇಕ್ಷಕರು ನೀಡಿದ ಸ್ಪಂದನವನ್ನು ಹೇಳಿ ‘ಈ ಸಿನಿಮಾದಲ್ಲಿ ಒಂದು ಲ್ಯಾಂಡ್ ಮಾರ್ಕ್ ಸಾಂಗ್ ಬೇಕು’ ಎಂದರು. ಎರಡೂ ಒತ್ತಡ ಹಂಸಲೇಖಾ ಅವರಿಗೆ ಗಲಿಬಿಲಿ ತಂದಿತ್ತು. ಟೆನ್ನಿಸನ್ ಕವಿಯ ಒಂದು ಕವನ. ‘ಲೈಫ್ ಇಸ್ ಎ ಗಾರ್ಡ್‍ನ್’ ಇದರ ಎಳೆ ಇಟ್ಟು ಕೊಂಡು ‘ಈ ಬಾಳು ಸುಂದರ ನಗರಿ’ ಎಂಬ ಹಾಡು ಬರೆದರು. ಇದು ಸಿದ್ದವಾಗುವ ವೇಳೆಗೆ ಎಸ್.ಪಿ ರೆಕಾರ್ಡಿಂಗ್‍ಗೆ ಬಂದರು. ಅವರು ಹಾಡುವ ಮೊದಲು ಒಮ್ಮೆ ಲಿರಿಕ್ಸ್ ನೋಡುವ ಅಭ್ಯಾಸ ನೋಡಿದವರೇ ‘ಇನ್ನೂ ಏನೋ ಬೇಕು’ ಎಂದು ಸಿದ್ದರಾಗಲು ಒಳ ಹೋದರು. ಅವರು ಫ್ರೆಷ್ ಆಗಿ ಬರುವಷ್ಟರಲ್ಲಿ ಹೊಸ ಪಲ್ಲವಿ ಬೇಕು ಎಂಬ ಒತ್ತಡದಲ್ಲಿ ಬಂದಿದ್ದು ‘ಕಾಲ ಕ್ಷಣಿಕ ಕಣೋ’ ಎನ್ನುವ ಸಾಲು ಇದ್ದನ್ನು ಹೊಂದಿ ಕೊಂಡೇ ‘ಈ ಭೂಮಿ ಬಣ್ಣದ ಬುಗುರಿ’ ಸಾಲೂ ಬಂದಿತು. ಅದು ಅಮರ ಗೀತೆ ಆದ ಕಥೆ ನಮಗೆಲ್ಲರಿಗೂ ಗೊತ್ತು. ರಾಜ್ ಕುಮಾರ್ ಅವರಿಗೆ ಹೇಗೆ ಪಿ.ಬಿ.ಶ್ರೀನಿವಾಸ್ ಕಂಠವೋ ವಿಷ್ಣುವರ್ಧನ್ ಅವರಿಗೆ ಎಸ್.ಪಿ. ಅವರಿಬ್ಬರ ಕಾಂಬಿನೇಷನ್‍ನಲ್ಲಿ ಬಂದಿರುವುದು 812 ಗೀತೆಗಳು.

ನಮ್ಮಲ್ಲಿ ಸಿನಿಮಾ ವಿಮರ್ಶೆಯ ಕಲ್ಚರ್ ಇಲ್ಲ ಎಂದು ವಿಷ್ಣುವರ್ಧನ್ ಸದಾ ಹೇಳುತ್ತಿದ್ದರು. ‘ಅದನ್ನು ಸಾಂಸ್ಕøತಿಕ ನೆಲೆಯಾಗಿಸಿ ನೋಡುವುದೇ ಇಲ್ಲ’ ಎಂದು ಅವರು ಎರಡು ಮೂರು ಸಲ ಹೇಳಿದಾಗ ‘ನಿಮ್ಮ ಸಿನಿಮಾಗಳ ಕುರಿತೇ ಇಂತಹ ಅಧ್ಯಯನ ಮಾಡುತ್ತೇನೆ’ ಎಂದೆ. ಅದು ಅವರ ಸಂತೋಷಕ್ಕೆ ಹೇಳಿದ್ದ ಮಾತು , ಆದರೆ ಅವರು ಬಿಡಲೇ ಇಲ್ಲ. ಸಿಕ್ಕಾಗಲೆಲ್ಲಾ ನೆನಪು ಮಾಡಿತ್ತಿದ್ದರು. ಕೊನೆಗೆ ‘ಮಲಯ ಮಾರುತ’ ಚಿತ್ರದ ಬಗ್ಗೆ ಅಂತಹ ಲೇಖನ ಮಾಡಿದೆ. ಅದು ಅವರಿಗೆ ಎಷ್ಟು ಸಂತೋಷ ಕೊಟ್ಟಿತ್ತು ಎಂದರೆ ಎಷ್ಟು ಜನರಿಗೆ ಅದನ್ನು ತೋರಿಸಿದ್ದರೂ ಲೆಕ್ಕವೇ ಇಲ್ಲ. ಅವರಿದ್ದಾಗ ನನ್ನ ಸೋಮಾರಿತನದಿಂದ ಆ ಮಾಲಿಕೆ ಮುಂದುವರೆಸಲೇ ಇಲ್ಲ. ಅವರು ಹಠಾತ್ ಆಗಿ ನಮ್ಮನ್ನು ಆಗಲಿದಾಗ ಒಂದು ರೀತಿಯ ಪಶ್ಚಾತ್ತಾಪ ಭಾವದಿಂದಲೇ ಆ ಮಾಲಿಕೆಯನ್ನು ಬರೆದೆ. ಅದನ್ನು ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಕರ್ನಾಟಕ ಚಲನಚಿತ್ರ ಅಕಾಡಮಿಯ ಸಹಯೋಗದಲ್ಲಿ ‘ಸಿಂಹಾವಲೋಕನ’ಎನ್ನುವ ಹೆಸರಿನಲ್ಲಿ ಆ ಪುಸ್ತಕವನ್ನು ಪ್ರಕಟಿಸಿದರು. ದೆಹಲಿಯಲ್ಲಿ ನಡೆದ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವದಲ್ಲಿ ಅದು ಬಿಡುಗಡೆಯಾಯಿತು. ಬಹಳ ಜನರ ಮೆಚ್ಚಿಗೆಯನ್ನೂ ಪಡೆಯಿತು. ಆದರೆ ನೋಡಿ ಸಂತೋಷ ಪಡಲು ವಿಷ್ಣುವರ್ಧನ್ ಅವರೇ ಇರಲಿಲ್ಲ.
ವಿಷ್ಣು ಸರ್ ನನ್ನನ್ನು ದಯವಿಟ್ಟು ಕ್ಷಮಿಸಿ..