ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೊಯ್ಸಳ ಕಾಲದ ಅಮೂಲ್ಯ ನಿಧಿ ಈ ದೇಗುಲ

ಟಿ. ವಿ. ನಟರಾಜ್ ಪಂಡಿತ್

ಹೆಸರೇ ಹೇಳುವಂತೆ ಬೆಳಗುಲಿಯೆಂಬುದು ಒಂದು ಕಾಲಕ್ಕೆ ಅಗ್ರಹಾರವಾಗಿ ಅಭಿವೃದ್ಧಿ ಹೊಂದಿದ ಸ್ಥಳ. ಎರಡನೇ ಹೊಯ್ಸಳ ಬಲ್ಲಾಳನ ಕಾಲದಲ್ಲಿ ಎಂದರೆ ಸಾ.ಯು. 1210ರಲ್ಲಿ ಆತನ ಕೇಶವ ದಂಡನಾಯಕ ಅಥವಾ ಕೇಶಿರಾಜನು ಇದನ್ನು ಸ್ಥಾಪಿಸಿ, ದೇವಾಲಯವನ್ನು ನಿರ್ಮಿಸಿದನು.

ಇಲ್ಲಿನ ದೇವಾಲಯವು ಹರಿ-ಹರರ ಸಂಗಮ. ಏಕೆಂದರೆ ಈ ದೇವಾಲಯವು ಬೆಟ್ಟೇಶ್ವರವೆಂದು ಪ್ರಸಿದ್ಧವಾಗಿರುವಂತೆ ಕೇಶವೇಶ್ವರವೆಂದೂ ಕರೆಯಲ್ಪಡುತ್ತದೆ. ದೇವಾಲಯಕ್ಕೆ ಸಂಬಂಧಿಸಿದಂತೆ ಲಕ್ಷ್ಮೀಸಮುದ್ರ ಮತ್ತು ಕೇಶವಸಮುದ್ರ ಎಂಬ ಹೆಸರಿನ ಎರಡು ದೊಡ್ಡ ಕೆರೆಗಳನ್ನು ನಿರ್ಮಿಸಲಾಗಿದೆ.

ಇದೊಂದು ದ್ವಿಕೂಟ ದೇವಾಲಯವಾಗಿದ್ದು ಕೇಶವ ಗರ್ಭಗುಡಿಯು ದಕ್ಷಿಣಾಭಿಮುಖವಾಗಿದೆ ಹಾಗೂ ಶಿವ ದೇವಾಲಯವು ಪೂರ್ವಾಭಿಮುಖವಾಗಿದೆ. ಇವೆರಡನ್ನೂ ಸೇರಿಸಿದಂತಿರುವ ಮಂಟಪವು ವಿಶಾಲವಾಗಿದ್ದು ಅನೇಕ ತಿರುಗಣಿ ಕಂಬಗಳನ್ನು ಹೊಂದಿದೆ. ಅವು ಒಂದನ್ನೊಂದು ಹೋಲುವಂತಿಲ್ಲದಿರುವುದು ವಿಶೇಷ.

ಸಾಧಾರಣವಾಗಿ ಹೊಯ್ಸಳ ದೇವಾಲಯಗಳು ಜಗುಲಿಯ ಮೇಲೆ ನಿರ್ಮಾಣವಾಗಿರುತ್ತದೆ. ಆದರೆ ಈ ದೇವಾಲಯದ ತಳಪಾಯವು ನೇರವಾಗಿ ನೆಲದಿಂದಲೇ ಆರಂಭವಾಗಿದೆ. ನವರಂಗಕ್ಕೆ ಎರಡು ಪ್ರವೇಶದ್ವಾರಗಳಿವೆ. ಪಶ್ಚಿಮದ ಗರ್ಭಗೃಹವು ಚೌಕಾಕೃತಿಯದಾಗಿದೆ. ಬೆಟ್ಟೇಶ್ವರ ದ್ವಾರದಲ್ಲಿರುವ ದ್ವಾರಪಾಲಕರನ್ನು ಹೆಚ್ಚಾಗಿ ಅಲಂಕರಿಸಲಾಗಿಲ್ಲ. ಚತುರ್ಬಾಹುಗಳ ಕೇಶವನ ವಿಗ್ರಹವು ಆರೂವರೆ ಅಡಿ ಎತ್ತರವಾಗಿದ್ದು, ಸುಸ್ಥಿತಿಯಲ್ಲಿದೆ.

ಹೆಚ್ಚಿನಂಶ ದೇವಾಲಯದ ಒಳಭಾಗದಲ್ಲಿರುವ ಸರಸ್ವತಿ, ಗಣಪತಿ, ಕಾರ್ತಿಕೇಯ, ಪಾರ್ವತಿಯ ಶಿಲ್ಪಗಳ ಗಾತ್ರ ಮತ್ತು ಸೌಂದರ್ಯಗಳು ಕಣ್ಮನ ಸೆಳೆಯುವಂತಿವೆ ಹಾಗೂ ಸುಸ್ಥಿತಿಯಲ್ಲಿರುವುದು ಸಂತಸದ ಸಂಗತಿ.

ಮುಖಮಂಟಪದಲ್ಲಿರುವ ಶಾಸನ ಕೂಡ ಸುಂದರವಾಗಿದೆ. ದೇವಾಲಯದ ಹೊರಭಿತ್ತಿಯಲ್ಲಿ ಸರಳ ರೇಖಾಕೃತಿಯ ಸ್ತಂಭಗಳನ್ನು ತೋರಿಸಲಾಗಿದೆ. ಗಾರೆಯಿಂದ ರಚಿಸಲಾದ ಶಿಖರಗಳು ಇನ್ನೂ ಉಳಿದುಕೊಂಡಿವೆ. ಕೀರ್ತಿಮುಖಗಳ ಅಲಂಕಾರಗಳಿಲ್ಲದ ಮಾಡಿನ ಸುತ್ತ ಇರುವ ರಚನೆ ಸರಳ ಫಲಕಗಳನ್ನು ಅಳವಡಿಸಿದಂತಿದೆ.

ಕಾಲನ ಆಘಾತಕ್ಕೆ ಸಿಕ್ಕಿದ್ದರೂ, ಆಸಕ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಈ ದೇವಾಲಯದ ಬಗ್ಗೆ ತಳೆದಿರುವ ಪ್ರೀತಿಯಿಂದಾಗಿ ಆಗೀಗ ಸ್ವಚ್ಛಗೊಳ್ಳುತ್ತಿರುವುದರಿಂದ ಈ ಸ್ಥಿತಿಯಲ್ಲಿರಲು ಸಾಧ್ಯವಾಗಿದೆ.

ಇದರ ಪುನರುಜ್ಜೀವನವನ್ನು ಕೈಗೊಳ್ಳುವ ಕಾಲವೂ ಸಮೀಪಿಸಿರುವುದರಿಂದ, ಭಾರತೀಯ ಪ್ರಾಚ್ಯವಸ್ತುಗಳ ಇಲಾಖೆ, ರಾಜ್ಯದ ಪುರಾತತ್ತ್ವ ಇಲಾಖೆಗಳು ಇತ್ತ ಗಮನಹರಿಸಿ, ಆದಷ್ಟು ಬೇಗ ದುರಸ್ತಿ, ಪುನರ್ ನಿರ್ಮಾಣದ ಕಾರ್ಯಗಳನ್ನು ಕೈಗೊಳ್ಳುವಂತಾಗಲಿ ಎನ್ನುವದು ಕಲಾಪ್ರೇಮಿಗಳ ಆಶಯ.

ಇಲ್ಲಿರುವ ಚಿತ್ರಗಳನ್ನು ಯುವಮಿತ್ರರಾದ ರಾಕೇಶ್ ಹೊಳ್ಳ ಅವರ ಬ್ಲಾಗ್ ನಿಂದ ಆರಿಸಿಕೊಳ್ಳಲಾಗಿದೆ. ಅವರಿಗೆ ಕೃತಜ್ಞತೆಗಳು.

ದೇವಾಲಯಗಳನ್ನು ಕುರಿತಂತೆ ಶಿಲ್ಪಗಳು, ವಿನ್ಯಾಸ, ರಚನಾಶೈಲಿಗಳು ಮುಂತಾಗಿ ಓದುವುದು, ಮಾತನಾಡುವುದು, ಚರ್ಚಿಸುವುದು ಇವೆಲ್ಲ ನಡೆಯುತ್ತದೆ.

ಆದರೆ ಹಾಸನ ಜಿಲ್ಲೆಯಲ್ಲಿರುವ ಅಗ್ರಹಾರ ಬೆಳಗುಲಿ ದೇವಾಲಯಕ್ಕೆ ಸಂಬಂಧಿಸಿದಂತೆ ಇರುವ ಒಂದು ಶ್ಲೋಕವು ಎಲ್ಲರ ಗಮನ ಸೆಳೆಯುತ್ತದೆ. ಹರಿ ಹರರನ್ನು ಸ್ತುತಿಸಿರುವ ಶ್ಲೋಕದಲ್ಲಿ ಕವಿಯ ಪ್ರೌಢಿಮೆ ಸುಂದರವಾಗಿ ವ್ಯಕ್ತವಾಗಿದೆ.

ಕಾವ್ಯಾತ್ಮಕ ಶೈಲಿ ಹಾಗೂ ಪದ ಸಂಯೋಜನೆಯ ಚಮತ್ಕಾರಗಳು ಅದ್ಭುತವಾಗಿವೆ. ಇದರ ಸ್ವಾರಸ್ಯವನ್ನು ಅರಿಯಲು, ಮೂಲ ಪದ್ಯವನ್ನು ಹಾಗೆಯೇ ಓದಿದರೆ ಅದು ಶಿವನನ್ನು ಸ್ತುತಿಯಿದ್ದಂತಿದೆ,

ಮೊದಲಿನ ಒಂದು ಅಕ್ಷರವನ್ನು ಬಿಟ್ಟು ಓದಿದರೆ ಅದು ವಿಷ್ಣುಪರವಾದ ಸ್ತುತಿಯಾಗುತ್ತದೆ. ಸ್ವಾರಸ್ಯಕರವಾಗಿರುವ ಈ ಪದ್ಯವನ್ನು ನಿಧಾನವಾಗಿ ಓದಿ ಆನಂದಿಸಿ.

ಪಾಯಾತ್ಕುಮಾರ ಜನಕಃ ಶಶಿಖಂಡಮೌಳೀ |
ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ ||

ಇದು ಮೊದಲ ಪಾದ. ಇದರ ಅರ್ಥ ಹೀಗಿದೆ.

ಕುಮಾರ ಜನಕಃ – ಷಣ್ಮುಖನ ತಂದೆ (ಶಿವ)
ಮೊದಲಿನ ಅಕ್ಷರ ಕು ಅನ್ನು ಬಿಟ್ಟು ಓದಿದರೆ ಅದು
ಮಾರ ಜನಕಃ – ಮನ್ಮಥನ ತಂದೆ (ವಿಷ್ಣು)

ಅದೇ ರೀತಿ

ಶಶಿಖಂಡ ಮೌಳೀ – ತಲೆಯಲ್ಲಿ ಚಂದ್ರನನ್ನು ಧರಿಸಿರುವವ (ಶಿವ)
ಶಿಖಂಡ ಮೌಳೀ – ತಲೆಯಲ್ಲಿ ನವಿಲುಗರಿಯನ್ನು ಧರಿಸಿರುವವ (ವಿಷ್ಣು)

ನಂತರ

ಶಂಖ ಪ್ರಭ – ಶಂಖದಂತೆ ಬಿಳಿ ಬಣ್ಣದವ (ಶಿವ)
ಖಪ್ರಭ – ಆಕಾಶದಂತೆ ನೀಲವರ್ಣದವ (ವಿಷ್ಣು)

ಹಾಗೂ

ಗವೀಶಯಾನಃ – ಎತ್ತನ್ನು ವಾಹನವಾಗಿರುವವ (ಶಿವ)
ವೀಶಯಾನಃ – ಗರುಡವಾಹನವುಳ್ಳವ (ವಿಷ್ಣು)

ಈಗ ಎರಡನೇ ಪಾದ

ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ |
ಆದ್ಯಕ್ಷರೇಣ ಸಹಿತೋ ರಹಿತೋಹಿ ದೇವಃ ||

ಮೊದಲಿಗೆ

ಗಂಗಾಂ – ತಲೆಯಲ್ಲಿ ಗಂಗೆ ಧರಿಸಿದವ (ಶಿವ)
ಗಾಂ – ಭೂಮಿಯನ್ನು ಧರಿಸಿದವ (ವಿಷ್ಣು)

ನಂತರದಲ್ಲಿ

ಪನ್ನಗಧರಶ್ಚ – ಹಾವನ್ನು ಧರಿಸಿರುವವ (ಶಿವ)
ನಗಧರಶ್ಚ – ಆಭರಣಗಳನ್ನು ಧರಿಸಿರುವವ (ವಿಷ್ಣು)

ಹಾಗೂ

ಉಮಾ ವಿಲಾಸಃ – ಪಾರ್ವತಿಯನ್ನು ಪತ್ನಿಯನ್ನಾಗಿ ಉಳ್ಳವ (ಶಿವ)
ಮಾ ವಿಲಾಸಃ – ಲಕ್ಮ್ಮಿಯನ್ನು ಪತ್ನಿಯನ್ನಾಗಿ ಉಳ್ಳವ (ವಿಷ್ಣು)

ಇವರೀರ್ವರೂ

ಆದ್ಯಕ್ಷರೇಣ – ಆರಂಭದ ಅಕ್ಷರದಿಂದ

ಸಹಿತೋ ರಹಿತೋಹಿ ದೇವಃ – ಸಹಿತನಾಗಿರುವ ಹಾಗೂ ರಹಿತನಾಗಿರುವ

ದೇವನು ನಮ್ಮನ್ನು ಸಂರಕ್ಷಿಸಲಿ.