ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ.ಎಸ್.ನ. ನೆನಪುಗಳು..

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ಇವತ್ತು ‘ಗಣ ರಾಜ್ಯೋತ್ಸವ’ ವಾದಂತೆ ಒಲವಿನ ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಜನ್ಮದಿನ ಕೂಡ ಹೌದು. ಎಲ್ಲರಂತೆ ನರಸಿಂಹ ಸ್ವಾಮಿಗಳು ನನಗೆ ಪ್ರಿಯವಾಗಿದ್ದು ‘ಮೈಸೂರು ಮಲ್ಲಿಗೆ’ ಕವಿತೆಗಳ ಮೂಲಕವೇ. ನಾನು ಎರಡನೇ ಬಿ.ಎಯಲ್ಲಿ ಇದ್ದಾಗ ಪಠ್ಯವಾಗಿದ್ದ ‘ಕಾವ್ಯ ಸಂಚಯ’ದಲ್ಲಿ ನರಸಿಂಹ ಸ್ವಾಮಿಯವರ ಕವಿತೆಗಳು ನಮಗೆ ಇದ್ದವು. ಅದರಲ್ಲಿ ‘ಗಡಿಯಾರದಂಗಡಿಯ ಮುಂದೆ’ ಕವಿತೆ ಒಂದು ದಿನ ಆಕಸ್ಮಿಕವಾಗಿ ನನ್ನ ಕಣ್ಣಿಗೆ ಬಿದ್ದಿತು. ಒಲವಿನ ಕವಿತೆಗಳಿಗಿಂತ ಭಿನ್ನವಾಗಿದ್ದ ಅದನ್ನು ಮತ್ತೆ ಮತ್ತೆ ಓದಿ ಚರ್ಚಿಸಿದ್ದೂ ಆಯಿತು. ಆಗ ನಮ್ಮ ಕಾಲೇಜಿನಲ್ಲಿ ಬಹಳ ಸಕ್ರಿಯವಾಗಿ ‘ಅಧ್ಯಯನ ಕೂಟ’ದಲ್ಲಿ ಅದರ ಬಗ್ಗೆ ಒಂದು ಪ್ರಬಂಧ ಮಂಡಿಸಿದ್ದೂ ಆಯಿತು. ಇದಕ್ಕಾಗಿ ನರಸಿಂಹ ಸ್ವಾಮಿಯವರ ಕಾವ್ಯ ಅದರ ಕುರಿತು ಬಂದ ವಿಮರ್ಶೆ ಎಲ್ಲವನ್ನೂ ಓದಿದೆ. ನರಸಿಂಹ ಸ್ವಾಮಿ ನನ್ನ ಅರಿವಿನ ಲೋಕವನ್ನು ಪ್ರವೇಶಿಸಿದ್ದು ಹೀಗೆ.

ಮೈಸೂರು ಮಲ್ಲಿಗೆ ಚಿತ್ರೀಕರಣ
ಚಿತ್ರ ಸೌಜನ್ಯ : ಶ್ರೀ ಎನ್.ಎಸ್.ಶ್ರೀಧರ ಮೂರ್ತಿ

ಬೆಂಗಳೂರಿಗೆ ಬಂದ ನಂತರ ಅಲ್ಲಲ್ಲಿ ಕಾರ್ಯಕ್ರಮಗಳಲ್ಲಿ ನರಸಿಂಹ ಸ್ವಾಮಿಯವರನ್ನು ನೋಡುತ್ತಿದ್ದೆ. ಭೇಟಿಯಾಗುವ ಕುತೂಹಲ ಏಕೋ ಹುಟ್ಟಿಯೇ ಇರಲಿಲ್ಲ. ಈ ಸಂದರ್ಭದಲ್ಲಿಯೇ ಒಂದು ಘಟನೆ ನಡೆಯಿತು. ಸುಧಾರಾಣಿ ‘ಮೈಸೂರು ಮಲ್ಲಿಗೆ’ ಚಿತ್ರದಲ್ಲಿ ಪದುಮಳ ಪಾತ್ರ ವಹಿಸಿದ್ದರು. ಕವಿಯ ಕಲ್ಪನೆಯ ಈ ಪಾತ್ರವನ್ನು ತಾನು ಹೇಗೆ ಮಾಡಿದ್ದೇನೆ ಎಂದು ಅವರಿಂದಲೇ ತಿಳಿದುಕೊಳ್ಳುವ ಕುತೂಹಲ ಅವರಿಗೆ. ದೊಡ್ಡವರಿಗೆಲ್ಲಾ ಅವರ ಆಸೆ ಮಹತ್ವದ್ದಲ್ಲ ಅನ್ನಿಸಿರಬೇಕು. ಯಾರೂ ಅದರ ಕಡೆ ಗಮನ ಕೊಡಲೇ ಇಲ್ಲ. ಸುಧಾರಾಣಿ ‘ಕರೆದು ಕೊಂಡು ಹೋಗಿ’ ಎಂದು ನನಗೆ ದುಂಬಾಲು ಬಿದ್ದರು. ಆಗಿನ್ನು ಚಿಕ್ಕ ವಯಸ್ಸು ಸ್ಕೋಪ್ ತೆಗೆದುಕೊಳ್ಳಲು ಆಯಿತು ಎಂದು ಬಿಟ್ಟೆ. ಅಸಲಿಗೆ ನನಗೆ ನರಸಿಂಹ ಸ್ವಾಮಿಯವರ ಪರಿಚಯವೇ ಇರಲಿಲ್ಲ. ಭರಣ ಅವರನ್ನು ಕೇಳಿದರೆ ‘ಅಯ್ಯೋ ಅವರ ಮನೆಗೆ ಯಾವಾಗ ಬೇಕಾದರೂ ಹೋಗಬಹುದು’ ಎಂದು ಬಿಟ್ಟರು. ಕೊನೆಗೆ ಎಚ್.ಎಸ್.ವಿಯವರ ಮೂಲಕ ಸಮಯ ನಿಗದಿಯಾಯಿತು. ನಾನು ಮತ್ತು ಸುಧಾರಾಣಿ ಕೆ.ಎಸ್.ನ ಅವರ ಮನೆಗೆ ಹೋದೆವು. ಕೆ.ಎಸ್.ನ ದಂಪತಿಗಳು ಸುಧಾರಾಣಿಯವರನ್ನು ಎಷ್ಟು ಪ್ರೀತಿಯಿಂದ ಸತ್ಕರಿಸಿದರು ಎಂದರೆ ಅದು ಮಾತಿನಲ್ಲಿ ಹೇಳಲು ಆಗುವಂತಹದೇ ಅಲ್ಲ . ‘ಸಿರಿಗೌರಿಯಂತೆ ಬಂದಳು ತಾಯೆ ಹಸೆಮಣೆಗೆ’ ಎಂದು ನಾನು ಕವಿತೆ ಬರೆದಿದ್ದೆ. ನೀನು ಸಿರಿಗೌರಿಯಂತೆಯೇ ಸಿನಿಮಾದಲ್ಲಿ ಕಂಗೊಳಿಸಿದ್ದೆ ಎಂದು ಕೆ.ಎಸ್.ನ ಮನದುಂಬಿ ವರ್ಣಿಸಿದ್ದರು. ವೆಂಕಮ್ಮನವರಂತೂ ಅರಿಸಿನ, ಕುಂಕುಮ ಸೀರೆ ಎಲ್ಲವನ್ನೂ ಕೊಟ್ಟು ಮನೆಗೆ ಬಂದ ಮಗಳಂತೆ ಸತ್ಕರಿಸಿದರು. ಅವರ ಮನೆಯಿಂದ ಬರುವವರೆಗೂ ಕಷ್ಟಪಟ್ಟು ಭಾವನೆಗಳನ್ನು ತಡೆದುಕೊಂಡಿದ್ದ ಸುಧಾರಾಣಿ ಹಿಂದಿರುಗುವಾಗ ಕಾರಿನಲ್ಲಿ ‘ಇದು ರಾಷ್ಟ್ರಪ್ರಶಸ್ತಿಗಿಂತಲೂ ದೊಡ್ಡದು’ ಎಂದು ನನ್ನ ಕೈ ಹಿಡಿದು ಅತ್ತಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ನರಸಿಂಹ ಸ್ವಾಮಿಯವರ ಮನೆಗೆ ನನ್ನ ಮುಂದಿನ ಅನಂತ ಭೇಟಿಗಳಿಗೆ ಇದು ನಾಂದಿ ಹಾಡಿತು. ಅಲ್ಲಿಂದ ಬೇಕು ಎನ್ನಿಸಿದಾಗಲೆಲ್ಲಾ ದಾಳಿ ಇಡುವುದು ಹೀಗೆ ಆರಂಭವಾಯಿತು.

ಕೆ.ಎಸ್.ನ. ಮಾತಿನವರಲ್ಲ. ನಾನು ಏನಾದರೂ ಹೇಳಿದರೆ ಬೆರಗು ಕಣ್ಣಿನಿಂದ ನೋಡುತ್ತಾ ಕುಳಿತು ಕೊಂಡುಬಿಡುತ್ತಿದ್ದರು. ಆದರೆ ವೆಂಕಮ್ಮನವರದ್ದೇ ಮಾತು. ಅಷ್ಟೇ ಅಲ್ಲ ಸೊಗಸಾದ ಆತಿಥ್ಯ. ನಾನು ‘ಮಲ್ಲಿಗೆ’ಗೆ ಬಂದ ನಂತರ ಕೆ.ಸಿ.ಶಿವಪ್ಪನವರು ಗೌರವ ಸಂಪಾದಕರಾಗಿದ್ದರು. ಅವರಿಗೆ ಕೆ.ಎಸ್.ನ ಆಪ್ತ ವಲಯದವರು. ಕೆ.ಎಸ್.ನ ಹೊಸ ಕವಿತೆಗಳನ್ನು ಮಾಲಿಕೆಯಾಗಿ ಪ್ರಕಟಿಸುವ ಯೋಜನೆ ಸಿದ್ದವಾಯಿತು. ಆಗ ನರಸಿಂಹ ಸ್ವಾಮಿಯವರಿಗೆ ಕಣ್ಣು ಬಹುಮಟ್ಟಿಗೆ ಕಾಣುತ್ತಿರಲಿಲ್ಲ ಸುಮನಾ (ಎಂ.ವಿ.ವೆಂಕಟೇಶ ಮೂರ್ತಿ) ಅವರಿಗೆ ಕಣ್ಣಾಗಿದ್ದರು. ಅಂದರೆ ಕವಿತೆಗಳನ್ನು ಹೇಳಿದರೆ ಬರೆದುಕೊಳ್ಳುತ್ತಿದ್ದರು. ಶಿವಪ್ಪನವರು ಬಿಟ್ಟ ಮೇಲೆ ಕೂಡ ಈ ಮಾಲಿಕೆಯನ್ನು ಮುಂದುವರೆಸಿದೆ. ಸುಮನಾ ಕವಿತೆ ಬರೆದುಕೊಳ್ಳುವಾಗ ಅವರ ಜೊತೆ ಹೋಗುವುದು ಅದರ ಸಂಭ್ರಮ ನೋಡುವುದು ಎಲ್ಲವೂ ನನ್ನ ಬದುಕಿನ ಪುಣ್ಯದಂತೆ ಬಂದೊದಗಿತು. ಒಂದು ದಿನ ನಾನೊಬ್ಬನೇ ನರಸಿಂಹ ಸ್ವಾಮಿಯವರ ಮನೆಗೆ ಹೋಗಿದ್ದೆ. ಏನೋ ಮಾತಿನ ನಡುವೆ ‘ಸರ್, ಮಲ್ಲಿಗೆ ನಿಮಗೆ ಪ್ರಿಯವಾದ ಹೂವು, ನಮ್ಮ ಪತ್ರಿಕೆಯೂ ಮಲ್ಲಿಗೆ.. ಒಂದು ಕವಿತೆ ಮಲ್ಲಿಗೆ ಬಗ್ಗೆ ಬರೆದು ಕೊಡಿ’ ಎಂದೆ.. ಹೀಗೆ ಹೇಳಿ ಒಂದು ಕ್ಷಣವೂ ಆಗಿಲ್ಲ

ಎಲ್ಲ ಹೂಗಳ ನಡುವೆ ಮಲ್ಲಿಗೆಯ ಮೆಚ್ಚುವೆನು
ಏಕೆಂದರಲ್ಲಿಲ್ಲ ಹಮ್ಮು-ಬಿಮ್ಮು
ತುಂಬೆ ವಿಷ್ಣುಕಾಂತಿ ಚೆಲುವ ಹನಿ, ಹೂವಲ್ಲ
ಮುಟ್ಟಿದರೆ ಸುಡುವುದು ಗುಲಾಬಿ ಹೂವು

ಕವಿತೆ ಆರಂಭವಾಗಿಯೇ ಬಿಟ್ಟಿತು. ಒಂದೇ ಓಘ… ನಾನು ಸಂಭ್ರಮದಿಂದ ಪೇಪರ್ ಪೆನ್ನು ಹುಡುಕಿ ಬರೆದು ಕೊಂಡೆ. ನೆಚ್ಚಿನ ಕವಿಯ ಕವಿತೆಯ ಲಿಪಿಕಾರನಾಗುವ ಸೌಭಾಗ್ಯ ಅಚಾನಕ್ಕಾಗಿ ಸಿಕ್ಕಿ ಬಿಟ್ಟಿತ್ತು. ಒಂದು ಅಕ್ಷರವೂ ವ್ಯತ್ಯಾಸವಿಲ್ಲ. ಒಂದೇ ಸಲಕ್ಕೆ ಕವಿತೆ ಸಿದ್ದವಾಗಿಯೇ ಬಿಟ್ಟಿತು. ‘ಸಂಜೆ ಹಾಡು’ ಸಂಕಲನದ ಬಹುತೇಕ ಕವಿತೆಗಳ ಮೊದಲ ಓದುಗನಾಗುವ ಅದೃಷ್ಟ ನನಗೆ ಸಿಕ್ಕಿತು. ಹೀಗೆ ಸುಮಾರು ಎಂಬತ್ತು ಕವಿತೆಗಳು ಆದಾಗ. ಎಲ್ಲವನ್ನೂ ಪ್ರಕಟಿಸಬೇಕೆ? ಎನ್ನುವ ಪ್ರಶ್ನೆ ಬಂದಿತು. ಒಳಗಣ್ಣು ತೆರೆದು ಬರೆದ ಕವಿಯ ಸಂಭ್ರಮ ಮುಖ್ಯ ಎಲ್ಲವನ್ನೂ ಪ್ರಕಟಿಸೋಣ ಎಂದು ನನ್ನ ವಾದ ಕೊನೆಗೆ ವಸ್ತುವಿನ ಪುನರಾವರ್ತನೆ ಹೊರತು ಪಡಿಸಿ ಐವತ್ತು ಕವಿತೆಗಳನ್ನು ಆರಿಸಿದೆವು. ಬಹುಷ: ಕೆ.ಎಸ್.ನ ಸಂಕಲನಗಳಲ್ಲಿ ಅತಿ ಹೆಚ್ಚು ಕವಿತೆಗಳಿರುವ ಸಂಕಲನ ಅದೇ ಇರಬೇಕು. ಅದೊಂದು ರೀತಿ ಕಾವ್ಯ ಸಂಭ್ರಮದ ಕಾಲ.. ನನ್ನ ಬದುಕಿ ಸಾರ್ಥಕ ಘಟ್ಟ.

ಚಿತ್ರ ಸೌಜನ್ಯ : ಶ್ರೀ ಎನ್.ಎಸ್.ಶ್ರೀಧರ ಮೂರ್ತಿ

ಕೆ.ಎಸ್.ನ ಹುಟ್ಟು ಹಬ್ಬ ಎಂದರೆ ಅದು ನಮ್ಮ ಮನೆ ಕಾರ್ಯಕ್ರಮದ ತರಹ ಹಿಂದಿನ ದಿನವೇ ಸಿದ್ದತೆ ಯಾರೆಲ್ಲಾ ಬರುತ್ತಾರೆ, ಏನು ತಿಂಡಿ, ಯಾರದು ಗಾಯನ, ಯಾವ್ಯಾವ ಕವಿತೆ ಹಾಡುವುದು ಎಂಬ ಪಟ್ಟಿ ಅದಕ್ಕಾಗಿ ಚರ್ಚೆ, ಕಿತ್ತಾಟ, ಹುಸಿ ಕೋಪ.. ಎಲ್ಲವೂ ಉತ್ಸವದ ಭಾಗವೇ. ಎಷ್ಟೋ ವರ್ಷ ನನಗೆ ಅದು ಗಣರಾಜ್ಯೋತ್ಸವ ಎನ್ನುವುದನ್ನೂ ಮರೆಯುವಂತಾಗುತ್ತಿತ್ತು. ಶುಭ್ರ ಬಿಳಿ ಬಣ್ಣ ಶರ್ಟ್ ಮತ್ತು ಪಂಚೆ ಧರಿಸಿ ಅದನ್ನೂ ಎಲ್ಲಾ ನಶ್ಯ ಮಾಡಿಕೊಂಡು ಒಂದು ಮೂಲೆಯಲ್ಲಿ ಚಿಕ್ಕ ಮಗುವಿನಂತೆ ನರಸಿಂಹ ಸ್ವಾಮಿ ಕುಳಿತಿರುತ್ತಿದ್ದರು. ವೆಂಕಮ್ಮನವರೇ ಮದುವೆ ಮನೆ ಸಂಭ್ರಮದಲ್ಲಿ ಓಡಾಡುತ್ತಾ. ಜಿ.ಎಸ್.ಎಸ್ ಬಂದರು, ಪುತಿನ ಬಂದರು, ಅಶ್ವಥ್ ಬಂದರು, ಭರಣ ಬಂದ,, ಇದೋ ಎಚ್.ಎಸ್.ವಿ, ಬಿ.ಆರ್.ಎಲ್ ಒಟ್ಟಿಗೆ ಬಂದರು ಅಂತ ಗಂಡನ ಕಿವಿಯಲ್ಲಿ ರಿಪೋರ್ಟ್ ಕೊಡ್ತಾ ಇದ್ದರು. ಬಂದವರಿಗೆ ಉಪ್ಪಿಟ್ಟು, ಕೇಸರಿ ಬಾತ್, ಕಾಫಿ ಸರಬರಾಜು ಮಾಡುವ ಹೊಣೆ ನಮಗೆ. ಇಂತಹ ಎಷ್ಟೊಂದು ಹುಟ್ಟು ಹಬ್ಬಗಳಲ್ಲಿ ನಾನು ಭಾಗಿ ಆಗಿದ್ದೇನೆ.
ಕೆ.ಎಸ್.ನ ಅವರ ತೊಂಬತ್ತನೇ ಹುಟ್ಟು ಹಬ್ಬಕ್ಕೆ ಅವರ ಸಮಗ್ರ ‘ಮಲ್ಲಿಗೆ ಮಾಲೆ’ ತರುವುದು ನಿಶ್ಚಯವಾಗಿತ್ತು. ಆದರೆ ಹುಟ್ಟು ಹಬ್ಬಕ್ಕೆ ಇನ್ನೂ ಒಂದು ತಿಂಗಳಿಲ್ಲ ಕೆ.ಎಸ್.ನ ಚಂದಿರನ ದಾಟಿ ಹೊರಟೇ ಬಿಟ್ಟರು. ಅಮೇಲೆ ಸಂಕಲವೂ ಬಂದಿತು. ಒಂದು ವರ್ಷವೂ ಕಳೆಯಿತು. ಒಂದು ದಿನ ಇದ್ದಕ್ಕಿದ್ದ ಹಾಗೆ ಅವರ ಮಗ ಹರಿಹರೇಶ್ವರ ನನ್ನನ್ನು ಹುಡುಕಿಕೊಂಡು ಬಂದರು. ಅದೂ ಇದು ಮಾತಿನ ನಂತರ ಹೊರಡುವಾಗ. ‘ಇವತ್ತು ಅಪ್ಪನ ವರ್ಷಾಂತಕ, ಅಮ್ಮ ನಿಮಗೆ ಪ್ರಸಾದ ಕೊಟ್ಟು ಬಾ’ ಎಂದು ಕಳುಹಿಸಿದಳು. ಎಂದರು. ಭಾವನೆಗಳನ್ನು ಎಂದಿಗೂ ಹಿಡಿತದಲ್ಲಿ ಇಟ್ಟು ಕೊಳ್ಳುವ ನನ್ನ ಕಣ್ಣಿನಲ್ಲಿ ನಿಯಂತ್ರಣ ತಪ್ಪಿ ಕಂಬನಿ ಚಿಮ್ಮಿತು. ಯಾವ ಜನ್ಮದ ಋಣ ಇದು..

ಹುಟ್ಟುಹಬ್ಬದ ದಿನದ ಭಾವಚಿತ್ರ.
ಪ್ರಾಯಶಃ ಅವರು ಸಜೀವ ಇರುವಾಗಿನ ಕೊನೆಯ ಹುಟ್ಟುಹಬ್ಬದ್ದು.
ಚಿತ್ರ ಸೌಜನ್ಯ : ಶ್ರೀ ಎನ್.ಎಸ್.ಶ್ರೀಧರ ಮೂರ್ತಿ

ಇವತ್ತು.. ಕೆ.ಎಸ್.ನರಸಿಂಹ ಸ್ವಾಮಿಯವರೂ ಇಲ್ಲ, ವೆಂಕಮ್ಮನವರೂ ಇಲ್ಲ. ಇಂದು ಇನ್ನೊಂದು ಹುಟ್ಟು ಹಬ್ಬ ಬಂದಿದೆ. ನನ್ನ ಬದುಕನ್ನು ಧನ್ಯಗೊಳಿಸಿದ ಆ ದಿವ್ಯಚೇತನಗಳಿಗೆ ಇದು ನನ್ನ ನುಡಿ ನಮನ.