ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೂರೊಂದು ನೆನಪು ಎದೆಯಾಳದಿಂದ…

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ಇವತ್ತು (ಜೂನ್ ೪) ನಮ್ಮ ಕಾಲದ ಜೀವಂತ ದಂತಕತೆ ಎನ್ನಿಸಿಕೊಂಡಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ. ಅವರಿಲ್ಲದ ಮೊದಲ ಜನ್ಮದಿನ!
ಕೊನೆಯವರೆಗೂ ಸಕ್ರಿಯರಾಗಿದ್ದ ಅವರು ಬರೀ ಗಾಯಕರಷ್ಟೇ ಆಗಿರಲಿಲ್ಲ. ಸ್ವತ: ಹಾಡೇ ಆಗಿದ್ದರು. ನನಗೆ ಎಸ್.ಪಿ.ಬಿಯವರ ಒಡನಾಟ ಸಿಕ್ಕಿದ್ದು ಆರ್.ಎನ್. ಜಯಗೋಪಾಲ್ ಅವರ ಮೂಲಕ. ನನಗೆ ಸಿಕ್ಕಿದ್ದು ಬೊಗಸೆಯಷ್ಟಾದರೂ ಸಿಕ್ಕಷ್ಟರ ಮೂಲಕವೇ ಸಮುದ್ರವನ್ನು ಊಹಿಸಿಕೊಳ್ಳುವ ಪ್ರಯತ್ನವನ್ನು ನಾನು ಈ ಮೂಲಕ ಮಾಡಿದ್ದೇನೆ.

ಚಿತ್ರ ಕೃಪೆ : https://wallpapercave.com/s-p-balasubrahmanyam-wallpapers

ಆರ್.ಎನ್.ಜಯಗೋಪಾಲ್ ಅವರ ಎಪ್ಪತ್ತನೇ ವರ್ಷದ ಕಾರ್ಯಕ್ರಮವನ್ನು ನಾವು ಅದ್ದೂರಿಯಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸಿದೆವು. ವಿಚಾರ ಸಂಕಿರಣ, ಸಂಗೀತ ಕಾರ್ಯಕ್ರಮ ಎಲ್ಲವನ್ನೂ ರೂಪಿಸಿದ್ದೆವು. ವಾಣಿ ಜಯರಾಂ, ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್ ಮೊದಲಾದ ದಿಗ್ಗಜರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿದು ಒಂದು ತಿಂಗಳು ಕಳೆದಿರಬೇಕು ನನಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಪೋನ್ ಮಾಡಿ “ನನ್ನನ್ನು ಬಿಟ್ಟು ಜಯಗೋಪಾಲ್ ಅವರ ಕಾರ್ಯಕ್ರಮ ಹೇಗೆ ಮಾಡಿದಿರಿ, ನನಗೂ ಅವರು ಬಹಳ ಆತ್ಮೀಯರು” ಎಂದು ಹೆಚ್ಚು ಕಡಿಮೆ ತರಾಟೆಗೆ ತೆಗೆದುಕೊಂಡರು. “ಆಯಿತು ಸಾರ್, ಖಂಡಿತಾ ಇನ್ನೊಂದು ಪ್ರೋಗ್ರಾಂ ನಿಮಗಾಗಿ ಮಾಡ್ತೀವಿ” ಎಂದು ಹೇಳಿಯೂ ಬಿಟ್ಟೆ. ಆಗಲೇ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಗಿತ್ತು. ಮತ್ತೆ ಇಲ್ಲಿಯೇ ಮಾಡುವುದು ಬೇಡ ಎಂದುಕೊಂಡು ಮೈಸೂರನ್ನು ಆಯ್ಕೆ ಮಾಡಿಕೊಂಡೆವು. ಅರಮನೆ ಮೈದಾನದಲ್ಲಿ ಕಾರ್ಯಕ್ರಮ. ನಲವತ್ತು ಸಾವಿರ ಜನ ಸೇರಿದ್ದರು. ಅವತ್ತು ಪಿ.ಬಿ.ಶ್ರೀನಿವಾಸ್ ಕೂಡ ಬಂದಿದ್ದರು. ಎಸ್.ಪಿ ಮೊದಲು ಪಿಬಿಯವರೇ ಹಾಡಲಿ ಎಂದರು. ಬಂದಿದ್ದವರಲ್ಲಿ ಹೆಚ್ಚಿನವರು ಎಸ್.ಪಿಯವರ ಹಾಡು ಕೇಳಲೆಂದೇ ಬಂದಿದ್ದರು. ಸಭೆಯಲ್ಲಿ ಗುಜು ಗುಜು ಆರಂಭವಾಯಿತು. ಎಸ್.ಪಿ ಬೇಕು ಎನ್ನುವ ಬೇಡಿಕೆ ಕೂಡ ಜೋರಾಗಿಯೇ ಕೇಳಿ ಬಂತು. ಆಗ ವೇದಿಕೆ ಬಂದು ಮೈಕ್ ತೆಗೆದು ಕೊಂಡ ಎಸ್.ಪಿ “ನೋಡಿ ಪಿ.ಬಿ.ಶ್ರೀನಿವಾಸ್ ಹಿರಿಯ ಗಾಯಕರು. ನಾವೆಲ್ಲಾ ಅವರನ್ನ ನೋಡುತ್ತಾ ಬೆಳೆದವರು. ಹಿರಿಯರಿದ್ದಾಗ ನಾವು ಕಿರಿಯರು ಮೊದಲು ಹಾಡುವುದು ಸರಿ ಅಲ್ಲ. ನೀವು ಪಿ.ಬಿಯವರ ಹಾಡು ಕೇಳದಿದ್ದರೆ ನಾನೂ ಕೂಡ ಹಾಡುವುದಿಲ್ಲ. ಇದೋ ಹೊರಟೆ” ಎಂದು ಎಚ್ಚರಿಕೆ ಧ್ವನಿಯಲ್ಲಿಯೇ ಹೇಳಿದರು. ನನಗೆ ಎಸ್.ಪಿಯವರ ಹಿರಿಮೆ ಅರ್ಥವಾದ ಕ್ಷಣ ಅದು. ಇಂದಿಗೂ ಎಸ್.ಪಿ ಎಂದ ಕೂಡಲೇ ಕಣ್ಮುಂದೆ ಬರುವುದು ಈ ಘಟನೆಯೇ.. ಅಂದಿನ ಕಾರ್ಯಕ್ರಮದ ಕುರಿತು ಇನ್ನೊಂದು ಮಾತನ್ನು ಸೇರಿಸಬೇಕು ಎಸ್.ಪಿ ನಮ್ಮಿಂದ ಫ್ಲೈಟ್ ಚಾರ್ಜ್, ಹೋಟಲ್ ಬುಕಿಂಗ್ ಸೇರಿದಂತೆ ಬಿಡಿಗಾಸನ್ನೂ ಕೂಡ ಪಡೆಯಲಿಲ್ಲ. “ಇದು ಜಯಗೋಪಾಲ್ ಅವರ ಮೇಲಿನ ಪ್ರೀತಿಗಾಗಿ ನಾನು ಹಾಡುತ್ತಾ ಇರುವುದು” ಎಂದು ಖಚಿತವಾಗಿ ನುಡಿದರು. ಸ್ವತ: ಜಯಗೋಪಾಲ್ ಅವರು ಹೇಳಿದಾಗಲೂ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ. ಅದು ಅವರ ಇನ್ನೊಂದು ಹಿರಿಮೆ.

ಚಿತ್ರ ಕೃಪೆ : https://chaibisket.com/pb-sreenivas-best-songs/p-b-srinivas-33-pbs-with-s-janaki-s-p-balasubramaniam-and-p-susheesla/

ಹಿರಿಯ ಗಾಯಕರು ಎಂದರೆ ಎಸ್.ಪಿಯವರಿಗೆ ಅಪಾರ ಗೌರವ, ಯೇಸುದಾಸ್ ಅವರನ್ನ ‘ಅಣ್ಣಾ’ ಎಂದೇ ಕರೆಯುತ್ತಿದ್ದರು. ತಮಗೆ ‘ಶಂಕರಾಭರಣ’ದ ಅವಕಾಶ ಸಿಕ್ಕಾಗ ಯೇಸುದಾಸ್ ಅವರನ್ನು ಕೇಳಿ, ಅವರು “ಪರವಾಗಿಲ್ಲ ನೀನೇ ಹಾಡು” ಎಂದ ಮೇಲೆಯೇ ಎಸ್.ಪಿ ಹಾಡಿದ್ದರು. ಹಲವರ ವಿರೋಧದ ನಡುವೆಯೂ ಯೇಸುದಾಸ್ ಪಾದಪೂಜೆ ಮಾಡಿದ ಗಟ್ಟಿತನ ಅವರದು. ಹಾಗೆ ಎಸ್.ಪಿಯವರಲ್ಲಿ ತುಂಟತನ ಕೂಡ ಇತ್ತು. ಎಸ್.ಜಾನಕಿ ಹಾಡುವಾಗ ಒಂದು ಚಿಕ್ಕ ಕರ್ಚಿಫ್ ಸದಾ ಇಟ್ಟುಕೊಂಡಿರುತ್ತಿದ್ದರು. ಒಂದು ರೀತಿಯಲ್ಲಿ ಅದು ಅವರ ಗಾಯನದ ಸ್ಪೂರ್ತಿ ಆಗಿರುತ್ತಿತ್ತು. ಇಬ್ಬರೂ ಒಟ್ಟಿಗೆ ಹಾಡುವಾಗ ಎಸ್.ಪಿ ಯಾವ ಮಾಯದಲ್ಲೋ ಆ ಕರ್ಚೀಫನ್ನ ಎಗರಿಸಿ ಬಿಡ್ತಾ ಇದ್ದರು. “ನನ್ನ ವಾಯ್ಸ್ ಹಾಳು ಮಾಡೋಕೆ ಅವನು ಹಾಗೆ ಮಾಡ್ತಾನೆ” ಎಂದು ಜಾನಕಿ ಸದಾ ಜಗಳ ಮಾಡ್ತಾ ಇದ್ದರು.

ಚಿತ್ರ ಕೃಪೆ : https://timesofindia.indiatimes.com/entertainment/tamil/movies/news/spb-the-legend-with-the-legends-of-his-era/photostory/78309704.cms

ಪತ್ರಕರ್ತರು ಅಂದರೆ ಎಸ್.ಪಿ ಸದಾ ಹಿಂಜರಿಯುತ್ತಿದ್ದರು. ಎಲ್ಲಿ ವಿವಾದವಾಗುತ್ತದೆಯೋ ಎಂದು ಸಾಕಷ್ಟು ಯೋಚಿಸುತ್ತಿದ್ದರು. ಈ ವಿಷಯದಲ್ಲಿಯೂ ನಾನು ಅದೃಷ್ಟವಂತ ನನಗೆ ಮೂರು ಸಲ ಸಂದರ್ಶನ ಕೊಟ್ಟಿದ್ದರು. ಮೂರು ಸಲ ಕೂಡ ಬಹಳ ಒಳ್ಳೆಯ ಮೂಡ್‍ನಲ್ಲಿ ಇದ್ದರು. ಅವರು ಲಹರಿಗೆ ಬಂದರೆ ಮಾತೇ ಹಾಡಾಗಿ ಬಿಡುತ್ತಿತ್ತು. ಇನ್ನೊಂದು ಸಲ ನಾನು ‘ವಿಜಯವಾಣಿ’ಯಲ್ಲಿ ಇದ್ದೆ. ಹಿರಿಯ ಗಾಯಕ ಮನ್ನಾಡೆ ನಿಧನರಾಗಿದ್ದರು. ಅಭಿಪ್ರಾಯಕ್ಕಾಗಿ ನಾನು ಎಸ್.ಪಿಯವರಿಗೆ ಪೋನ್ ಮಾಡಿದೆ. ಅವರು ವಿವರವಾಗಿ ಮನ್ನಾಡೆ ನೆನಪುಗಳನ್ನು ಹಂಚಿಕೊಳ್ಳಲು ಆರಂಭಿಸಿದರು. ಸುಮಾರು ನಲವತ್ತೈದು ನಿಮಿಷ ಮಾತಾಡಿರಬೇಕು, ಸಾಕಷ್ಟು ಎಮೋಷನಲ್ ಕೂಡ ಆಗಿದ್ದರು. ಅಷ್ಟನ್ನು ಅಭಿಪ್ರಾಯದ ಬದಲು ಲೇಖನ ಮಾಡಬಹುದಲ್ಲ ಅನ್ನಿಸಿ ಅಂಜುತ್ತಲೇ ಕೇಳಿದೆ. “ಖಂಡಿತಾ ಮಾಡು, ನಿನ್ನ ಬಗ್ಗೆ ನಂಬಿಕೆ ಇದೆ. ಮತ್ತೆ ನನಗೆ ಕಳುಹಿಸುವುದು ಬೇಡ” ಎಂದರು. ಒಬ್ಬ ಮೇರು ಗಾಯಕ ಇನ್ನೊಬ್ಬ ಮೇರು ಗಾಯಕನ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ ಅದು ಬಹಳ ಮಹತ್ವಪೂರ್ಣ ಲೇಖನ ಅಂತ ಇವತ್ತಿಗೂ ನನಗೆ ಅನ್ನಿಸುತ್ತದೆ.

ಚಿತ್ರ ಕೃಪೆ : ಶ್ರೀ ಎನ್ ಎಸ್ ಶ್ರೀಧರ ಮೂರ್ತಿ

ಎಸ್.ಪಿ.ಬಾಲಸುಬ್ರಹ್ಮಣ್ಯಂ ೨೨ ಭಾಷೆಗಳಲ್ಲಿ ಹಾಡಿರುವುದು ಮಾತ್ರವಲ್ಲ ಆ ಭಾಷೆಗಳನ್ನು ಕಲಿತು ಹಾಡಿರುವುದು ಎಸ್.ಪಿಯವರ ವಿಶೇಷತೆ. ಮಧ್ಯಪ್ರದೇಶದ​ ಬುಡಕಟ್ಟಿನ ಭಾಷೆ ಜಗಪುರಿ ಅನ್ನು ಸಲೀಸಾಗಿ ಮಾತನಾಡಬಲ್ಲ ಗಾಯಕ ಎಂದರೆ ಎಸ್.ಪಿಯವರೊಬ್ಬರೇ. ಆ ಭಾಷೆಯನ್ನು ಮಧ್ಯಪ್ರದೇಶದ ಗಾಯಕರೇ ಕಲಿತಿಲ್ಲ. ಅಷ್ಟೇ ಅಲ್ಲ ಆ ಭಾಷೆಯಲ್ಲಿ ಚಿತ್ರಗಳೂ ತಯರಾಗುವುದಿಲ್ಲ. ಹಿಂದಿ ಚಿತ್ರ ‘ರಂಜನಿ’ಯಲ್ಲಿ ಆ ಭಾಷೆಯ ಹಾಡು ಬಳಕೆಯಾಗಿತ್ತು. ಅಷ್ಟೇ! ಆ ಕುತೂಹಲದಿಂದಲೇ ಭಾಷೆಯನ್ನು ಕಲಿತ ಎಸ್.ಪಿ ಆ ಬುಡಕಟ್ಟು ಭಾಷೆಯಲ್ಲಿ ಒಂದು ಟಿ.ವಿ ಕಾರ್ಯಕ್ರಮ ಕೂಡ ನಡೆಸಿಕೊಟ್ಟಿದ್ದಾರೆ. ಇಂತಹ ಕಲಿಕೆಯ ಹಸಿವು ಇರುವ ವ್ಯಕ್ತಿ ಚಿತ್ರರಂಗದಲ್ಲಿ ಮಾತ್ರವಲ್ಲ ಸಾಹಿತ್ಯದಲ್ಲಿ ಕೂಡ ಸಿಗುವುದು ಕಷ್ಟ. ಎತ್ತರಕ್ಕೆ ಏರಿದ್ದರೂ ಎಸ್.ಪಿ ತಮ್ಮ ಸರಳತೆ ಬಿಟ್ಟು ಕೊಟ್ಟವರಲ್ಲ. ಮೇರು ಗಾಯಕರಾಗಿದ್ದರೂ ಎಂತಹ ಷೋಗಳಿಗೂ ಎಂದಿಗೂ ರಿಹರ್ಸ್‍ಲ್ ಇಲ್ಲದೆ ಹಾಡ್ತಾ ಇರಲಿಲ್ಲ. ಸಾಂಗ್ ರೆಕಾರ್ಡಿಂಗ್‍ಗೆ ಮುಂಚೆ ಕೂಡ ಮೂರು ನಾಲ್ಕು ಸಲ ರಿಹರ್ಸಲ್ ಮಾಡ್ತಾ ಇದ್ದರು. ರೆಕಾರ್ಡಿಂಗ್‍ನಲ್ಲಿ ಕೂಡ ಕೊಂಚವೂ ತಪ್ಪಾಗಬಾರದು. ಅವರ ಮನಸ್ಸಿಗೆ ಸಮಧಾನವಾಗದೆ ಇದ್ದರೆ ತಾವೇ ಇನ್ನೊಂದು ಸಲ ಹಾಡಿ ಬಿಡ್ತಾ ಇದ್ದರು. ಆ ಮಟ್ಟಿಗಿನ ಪರ್‍ಫೆಕ್ಷನಿಸ್ಟ್ ಅವರು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಜನಿಸಿದ್ದು ೧೯೪೬ರ ಜೂನ್ ನಾಲ್ಕರಂದು ಕೊನಂಪೇಟೆ ಎಂಬ ಆಂಧ್ರ ಪ್ರದೇಶ​ದ ನೆಲ್ಲೂರು ಜಿಲ್ಲೆಯ ಕುಗ್ರಾಮದಲ್ಲಿ. ರಾಜ್ಯ ಮರುವಿಂಗಡಣೆಯ ನಂತರ ಈ ಹಳ್ಳಿ ಈಗ ತಮಿಳು ನಾಡಿನಲ್ಲಿದೆ. ತಂದೆ ಪಂಡಿತ ಸಾಂಬಶಿವನ್ ಹರಿಕಥಾ ವಿದ್ವಾಂಸರು. ಎಸ್.ಪಿಯವರಿಗೆ ಬಾಲ್ಯದಿಂದಲೂ ಸಂಗೀತದತ್ತ ಆಸಕ್ತಿ ಸಹಜವಾಗಿಯೇ ಮೂಡಿತು. ಅವರ ಆರಂಭಿಕ ಆಸಕ್ತಿ ಇದ್ದಿದ್ದು ಗಾಯನದ ಕಡೆ ಅಲ್ಲ. ಅವರ ಇಬ್ಬರು ಅಣ್ಣಂದಿರು ಮತ್ತು ಐವರು ಸೋದರಿಯರಲ್ಲಿ ಮೂವರು ಗಾಯನದ ಕಡೆ ಒಲವು ತೋರಿದ್ದರು. ಹೀಗಾಗಿ ಎಸ್.ಪಿ ಭಿನ್ನವಾಗಬೇಕು ಎನ್ನುವ ಕಾರಣಕ್ಕೆ ಹಾರ್ಮೋನಿಯಂನತ್ತ ಆಸಕ್ತಿ ಬೆಳೆಸಿಕೊಂಡರು. ಕಾಲೇಜ್ ದಿನಗಳಲ್ಲಿ ಕೊಳಲಿನ ಕುರಿತಾಗಿಯೂ ಅವರ ಆಸಕ್ತಿ ಬೆಳೆಯಿತು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಇಂಜಿನಿಯರ್ ಮಾಡಬೇಕು ಎನ್ನುವುದು ಹೆತ್ತವರ ಆಸೆಯಾಗಿತ್ತು. ಅದಕ್ಕೆ ಸರಿಯಾಗಿ ಎಸ್.ಪಿ ಕೈತುಂಬ ಅಂಕಗಳನ್ನೂ ಪಡೆದುಕೊಂಡರು. ಅನಂತ ಪುರದಲ್ಲಿದ್ದ ಜೆ.ಎನ್.ಟಿ.ಯು ಇಂಜಿನಿಯರಿಂಗ್ ಕಾಲೇಜ್‍ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಲಿಯಲು ಆರಂಭಿಸಿದರು. ವಿಧಿ ಅವರನ್ನು ಸಂಗೀತ ಕ್ಷೇತ್ರಕ್ಕೆ ತರಲು ಬಯಸಿತ್ತೋ ಏನೋ ಎನ್ನುವ ಘಟನೆಯೊಂದು ನಡೆಯಿತು. ನಾಲ್ಕನೇ ಸೆಮಿಸ್ಟರ್ ಓದುತ್ತಿರುವಾಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಟೈಫಾಯ್ಡ್ ಆಯಿತು. ಎರಡು ಪೇಪರ್ ಅನ್ನು ಅವರು ಬರೆಯಲಾಗಲಿಲ್ಲ. ಜೆ.ಎನ್.ಟಿಯಲ್ಲಿ ಯಾವ ಸಬ್ಜೆಕ್ಟಿನಲ್ಲಿ ಫೇಲ್ ಆದರೂ ಕೂಡ ಮುಂದಿನ ತರಗತಿಗೆ ಹೋಗಲು ಆಗುತ್ತಿರಲಿಲ್ಲ. ಆಗೆಲ್ಲಾ ಸೆಮಿಸ್ಟರ್ ಎಂದರೆ ಒಂದು ವರ್ಷ. ಹೀಗೆ ಒಂದು ವರ್ಷ ವ್ಯರ್ಥವಾಗುತ್ತಲ್ಲ ಎಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಯೋಚಿಸುತ್ತಿರುವಾಗ ಚೆನ್ನೈನಲ್ಲಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‍ನಲ್ಲಿ ಹೀಗೆ ಹಿಂದಿನ ವರ್ಷದ ಸಬ್ಜೆಕ್ಟ್ ಉಳಿಸಿಕೊಂಡೂ ಕೂಡ ಮುಂದಿನ ತರಗತಿಗೆ ಹೋಗಲು ಸಾಧ್ಯ ಎನ್ನುವ ಮಾಹಿತಿ ಸಿಕ್ಕಿತ್ತು. ಒಂದು ವರ್ಷ ವೇಸ್ಟ್ ಆಗಬಾರದು ಎನ್ನುವ ಉದ್ದೇಶದಿಂದ ಎಸ್.ಪಿ. ಆ ಕಾಲೇಜಿಗೆ ಸೇರಿದರು. ಹೀಗೆ ಅವರ ಜೀವನ ಚೆನ್ನೈ ಅನ್ನು ತಲುಪಿತು.

ಚಿತ್ರ ಕೃಪೆ : https://newdhool.blogspot.com/2016/03/spbs-first-song.html
ಚಿತ್ರ ಕೃಪೆ : http://spbindia.blogspot.com/2007/06/vintage-spb-telugu-song-his-first-solo.html

ಚೆನ್ನೈ ಅನ್ನುವುದು ಆಗ ದಕ್ಷಿಣ ಭಾರತ ಚಿತ್ರರಂಗದ ರಾಜಧಾನಿ ಎಂದು ಕರೆಸಿಕೊಂಡಿತ್ತು. ಎಲ್ಲಾ ಪ್ರಮುಖ ನಿಮಾಣ ಸಂಸ್ಥೆಗಳು ಸ್ಟುಡಿಯೋಗಳು ಅಲ್ಲಿದ್ದವು. ಇಲ್ಲಿಗೆ ಬಂದ ನಂತರ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಗಾಯನ ಪ್ರತಿಭೆ ಬೆಳಕಿಗೆ ಬಂದಿತು. ಅವರು ಆರಂಭದಲ್ಲಿ ಕಾಲೇಜಿನ ಕಾರ್ಯಕ್ರಮಗಳಲ್ಲಿ ಹಾಡಿದರು. ಕ್ರಮೇಣ ಇಂಟರ್ ಕಾಲೇಜ್ ಕಾಂಪಿಟೇಷನ್‍ಗಳಲ್ಲಿ ಹಾಡಿದರು. ಒಮ್ಮೆ ತೆಲುಗು ಭಾಷೆಯ ಮೂಲದವರಿಗಾಗಿ ಸಂಗೀತ ಸ್ಪರ್ಧೆ ಚೆನ್ನೈನಲ್ಲಿ ಏರ್ಪಾಟಾಗಿತ್ತು. ಇದರಲ್ಲಿ ಗೆಳೆಯ ಇಳಯ ರಾಜಾ ಅವರ ಒತ್ತಾಯದ ಮೇರೆಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಭಾಗವಹಿಸಿದರು. ಈ ಸ್ಪರ್ಧೆಯ ತೀರ್ಪುಗಾರರಾಗಿದ್ದವರು ಖ್ಯಾತ ತೆಲುಗು ಗಾಯಕ ಘಂಟಸಾಲ ಮತ್ತು ಸಂಗೀತ ನಿರ್ದೆಶಕ ಕೋದಂಡ ಪಾಣಿ. ಈ ಸ್ಪರ್ಧೆಯಲ್ಲಿ ಎಸ್.ಪಿಯವರ ಕಂಠ ಸಿರಿಯಿಂದ ಆಕರ್ಷಿತರಾದ ಕೋದಂಡ ಪಾಣಿ ಅವರನ್ನು ಚಿತ್ರರಂಗಕ್ಕೆ ತರಲು ಸಂಕಲ್ಪಿಸಿದರು. ಇದು ಎಸ್.ಪಿಯವರ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಎನ್ನಿಸಿಕೊಂಡಿತು.

ಕೋದಂಡಪಾಣಿಯವರು ಸಂಗೀತ ನೀಡಿದ ‘ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ‘ ಚಿತ್ರದ “ಏಮೀ ಏಮಂತ ಮೋಹಮು” ಅವರು ಹಾಡಿದ ಮೊದಲ ಹಾಡಾಯಿತು. ವಿಶೇಷ ಎಂದರೆ ಈ ಹಾಡನ್ನು ಘಂಟಸಾಲ ಅವರು ಹಾಡಬೇಕಿತ್ತು. ಆದರೆ ಅವರ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರಿಂದ ಈ ಅವಕಾಶ ಎಸ್.ಪಿಯವರಿಗೆ ದೊರಕಿತು. ಹೀಗೆ ೧೯೬೬ರಲ್ಲಿ ಎಸ್.ಪಿ ಚಿತ್ರರಂಗವನ್ನು ಪ್ರವೇಶಿಸಿದರೂ ಬೇಡಿಕೆಯ ಗಾಯಕ ಎನ್ನಿಸಿಕೊಳ್ಳಲು ೧೯೬೯ರಲ್ಲಿ ತೆರೆ ಕಂಡ ಜೆಮನಿ ಗಣೇಶ್ ಅಭಿನಯದ ‘ಶಾಂತಿ ನಿವಾಸಂ‘ ಸೂಪರ್ ಹಿಟ್ ಎನ್ನಿಸಿಕೊಂಡಿದ್ದಲ್ಲದೆ ಎಸ್.ಪಿಯವರಿಗೆ ಜನಪ್ರಿಯತೆಯನ್ನೂ ತಂದುಕೊಟ್ಟಿತು. ೧೯೬೭ರಲ್ಲಿಯೇ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡದಲ್ಲಿ ಹಾಡುವ ಅವಕಾಶ ಸಿಕ್ಕಿತು. ‘ನಕ್ಕರದೇ ಸ್ವರ್ಗ’ ಸಿನಿಮಾದಲ್ಲಿ “ಕನಸಿದೋ ಮನಸಿದೋ” ಅವರು ಹಾಡಿದ ಮೊದಲ ಹಾಡು. ೧೯೭೧ರಲ್ಲಿ ‘ನಾಗರ ಹಾವು‘ ಚಿತ್ರದಲ್ಲಿ ವಿಷ್ಣುವರ್ಧನ್ ಅವರಿಗೆ “ಹಾವಿನ ದ್ವೇಷ ಹನ್ನೆರಡು ವರ್ಷ” ಗೀತೆಯನ್ನು ಎಸ್.ಪಿ ಹಾಡಿದರು. ಅಲ್ಲಿಂದ ಮುಂದೆ ವಿಷ್ಣುವರ್ಧನ್ ಅವರ ಕೊನೆಯ ಚಿತ್ರ ‘ಆಪ್ತ ರಕ್ಷಕ‘ದವರೆಗೂ ಈ ಸಂಬಂಧ ಮುಂದುವರೆಯಿತು. ೮೧೨ ಗೀತೆಗಳನ್ನು ವಿಷ್ಣು ಅವರಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದಾರೆ. ವಿಷ್ಣುವರ್ಧನ್ ಅವರ ಸಿನಿಮಾಗಳು ತೆಲುಗಿಗೆ ಡಬ್ ಆದಾಗ ಕೂಡ ಎಸ್.ಪಿಯವರೇ ವಾಯ್ಸ್ ಕೊಟ್ಟಿದ್ದಾರೆ.

ಎಸ್.ಪಿ.ಬಾಲಸುಬ್ರಹಣ್ಯಂ ಕನ್ನಡದಲ್ಲಿ ವಿಷ್ಣುವರ್ಧನ್ ಅವರಿಗೆ ಶಾರೀರ ಎನ್ನಿಸಿಕೊಂಡ ಹಾಗೆ ತಮಿಳು ಮತ್ತು ತೆಲುಗಿನಲ್ಲಿ ಕಮಲ್ ಹಾಸನ್ ಅವರಿಗೆ ಶಾರೀರ ಎನ್ನಿಸಿಕೊಂಡರು. ಕಮಲ್ ಅಭಿನಯಿದ ‘ರಾಜ ಪಾರವೈ‘ ಚಿತ್ರ ತೆಲುಗಿನಲ್ಲಿ ‘ಅಮಾವಾಸ್ಯೆ ಚಂದ್ರುಡು‘ ಎಂದು ಡಬ್ ಆದಾಗ ಎಸ್.ಪಿ ಮೊದಲ ಸಲ ಕಂಠದಾನ ಮಾಡಿದರು. ಈ ಚಿತ್ರದಲ್ಲಿ ಅವರ ಧ್ವನಿ ಎಷ್ಟರ ಮಟ್ಟಿಗೆ ಕಮಲ್‍ಗೆ ಹೊಂದಿಕೊಂಡಿತು ಎಂದರೆ ಅಲ್ಲಿಂದ ಮುಂದೆ ಕಮಲ್ ಅವರ ತೆಲುಗಿಗೆ ಡಬ್ ಆದ ಎಲ್ಲಾ ಚಿತ್ರಗಳಿಗೂ ಎಸ್.ಪಿಯವರದೇ ಕಂಠ. ತಮಿಳು ಮತ್ತು ತೆಲುಗಿನಲ್ಲಿ ಅವರದೇ ಹಿನ್ನೆಲೆ ಗಾಯನ. ‘ಉನ್ನಾಲ್ ಮುದಿಯಾನ್ ತುಂಬಿ‘, ‘ಸ್ವಾತಿಮುತ್ಯಂ‘ ಮತ್ತು ‘ಸಾಗರ ಸಂಗಮಂ‘ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕಮಲ್ ಹಾಸನ್ ಕಾಂಬಿನೇಷನ್‍ನಲ್ಲಿ ಬಂದ ಶ್ರೇಷ್ಠಚಿತ್ರಗಳು ಎಂದು ಈಗಾಗಲೇ ಪರಿಗಣಿತವಾಗಿವೆ. ಕಮಲ್ ಹಾಸನ್ ಹಿಂದಿಯಲ್ಲಿ ಅಭಿನಯಿಸಿದ ಮೊದಲ ಚಿತ್ರ ‘ಏಕ್ ದೂಜೆ ಕೇ ಲಿಯೆ‘ನಲ್ಲಿ ಎಸ್.ಪಿ ಹಾಡಿದರು. ಈ ಚಿತ್ರ ಅವರಿಗೆ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟಿತು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಅತ್ಯಂತ ಬೇಡಿಕೆಯಲ್ಲಿದ್ದ ಕಾಲದಲ್ಲಿ ದಿನಕ್ಕೆ ಎಂಟು-ಹತ್ತು ಚಿತ್ರಗೀತೆಗಳನ್ನು ಹಾಡುವುದು ಸಾಮಾನ್ಯವಾಗಿತ್ತು. ೧೯೮೧ರ ಫೆಬ್ರವರಿ ೮ರಂದು ಬೆಳಗಿನ ೯ಗಂಟೆಯಿಂದ ರಾತ್ರಿ ೯ಗಂಟೆಯವರೆಗೆ ಸತತವಾಗಿ ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ೨೧ ಕನ್ನಡ ಚಿತ್ರಗೀತೆಗಳನ್ನು ಹಾಡಿರುವುದು ಇಂದಿಗೂ ದಾಖಲೆಯಾಗಿ ಉಳಿದಿದೆ. ಇದೇ ರೀತಿಯಲ್ಲಿ ಎಸ್.ಪಿ ತಮಿಳಿನಲ್ಲಿ ಒಂದೇ ದಿನದಲ್ಲಿ ೧೮ ತೆಲುಗು ಚಿತ್ರಗೀತೆಗಳನ್ನು ೧೪ ಹಿಂದಿ ಚಿತ್ರಗೀತೆಗಳನ್ನು ಹಾಡಿದ ದಾಖಲೆಯನ್ನು ಹೊಂದಿದ್ದಾರೆ.

ಗಾಯಕರಾಗಿ ಇಷ್ಟೆಲ್ಲಾ ಬೇಡಿಕೆಯನ್ನು ಪಡೆದಿರುವ ಎಸ್.ಪಿ ತೆಲುಗಿನ ‘ಕನ್ಯಾ ಕುಮಾರಿ‘ ಚಿತ್ರದ ಮೂಲಕ ಸಂಗೀತ ನಿರ್ದೆಶನವನ್ನು ಆರಂಭಿಸಿದರು. ಇದುವರೆಗೂ ೬೮ ಚಿತ್ರಗಳಿಗೆ ಅವರು ಸಂಗೀತ ನೀಡಿದ್ದಾರೆ. ಅವುಗಳಲ್ಲಿ ಕನ್ನಡದ ಸಂದರ್ಭ, ಬೇಟೆ, ರಾಮಣ್ಣ-ಶಾಮಣ್ಣ, ಕ್ಷೀರ ಸಾಗರ, ಮುದ್ದಿನ ಮಾವ ಕೂಡ ಸೇರಿಕೊಂಡಿದೆ. ಅದರಂತೆ ‘ಪಲ್ಲಂಟೆ ನೂರೆಲ್ಲ ಪಂಥ‘ ಚಿತ್ರದ ಮೂಲಕ ಅಭಿನಯವನ್ನು ಅವರ ಆರಂಭಿಸಿ ೮೨ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಬಾಳೊಂದು ಚದುರಂಗ, ಮುದ್ದಿನ ಮಾವ, ಕಲ್ಯಾಣೋತ್ಸವ, ಮಾಂಗಲ್ಯಂ ತಂತು ನಾನೇನ ಸೇರಿದಂತೆ ಕನ್ನಡದ ೧೬ ಚಿತ್ರಗಳೂ ಸೇರಿಕೊಂಡಿವೆ. ತೆಲುಗಿನ ‘ಮಿಥುನಂ‘ ಚಿತ್ರದಲ್ಲಿ ಅವರು ಅವಿಸ್ಮರಣೀಯ ಅಭಿನಯವನ್ನು ನೀಡಿದ್ದಾರೆ.

ದಾಖಲೆಯ ಸಂಖ್ಯೆಯಲ್ಲಿ ಹಾಡುಗಳನ್ನು ಗಾನ ಭಂಡಾರಕ್ಕೆ ಸೇರಿಸಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅನೇಕ ಪುರಸ್ಕಾರಗಳನ್ನೂ ಪಡೆದಿದ್ದಾರೆ. ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಹಲವು ಉನ್ನತ ನಾಗರೀಕ ಗೌರವಗಳು ಅವರಿಗೆ ದೊರಕಿವೆ. ಆರು ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಏಕೈಕ ಹಿನ್ನೆಲೆ ಗಾಯಕ ಎನ್ನುವ ಹೆಗ್ಗಳಿಕೆ ಕೂಡ ಅವರಿಗಿದೆ. ಶಂಕರಾಭರಣ, ಏಕ್ ದೂಜೆ ಕೇ ಲಿಯೆ, ಸಾಗರ ಸಂಗಮಂ, ರುದ್ರವೀಣಾ, ಗಾನಯೋಗಿ ಪಂಚಾಕ್ಷರಿ ಗವಾಯಿ ಮತ್ತು ಮಿನ್ಸಾರು ಕನವುಗಳ್ ಅವರಿಗೆ ಈ ಗೌರವವನ್ನು ತಂದು ಕೊಟ್ಟ ಚಿತ್ರಗಳು. ಆಂಧ್ರ​ ಪ್ರದೇಶ ಸರ್ಕಾರದಿಂದ ಶ್ರೇಷ್ಠ ಹಿನ್ನಲೆ ಗಾಯಕ ಎಂದು ೨೭ ಸಲ ನಂದಿ ಗೌರವವನ್ನು ಪಡೆದ ಹೆಗ್ಗಳಿಕೆ ಅವರದು ಈ ಹಿಂದೆ ೨೩ ಸಲ ಈ ಗೌರವನ್ನು ಪಡೆದು ಘಂಟಸಾಲ ಅವರು ಸ್ಥಾಪಿಸಿದ್ದ ದಾಖಲೆಯನ್ನು ಎಸ್.ಪಿ ಮುರಿದಿದ್ದರು. ಇದಲ್ಲದೆ ವಿವಿಧ ರಾಜ್ಯಗಳಿಂದ ೨೨ ಶ್ರೇಷ್ಠ ಹಿನ್ನೆಲೆಗಾಯಕ ಗೌರವಗಳು ಅವರಿಗೆ ದೊರಕಿವೆ. ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡಿದ ಮೂರು ಪ್ರಶಸ್ತಿಗಳೂ ಸೇರಿಕೊಂಡಿವೆ. ಅವರ ಮಕ್ಕಳಾದ ಪಲ್ಲವಿ, ಚರಣ್ ಇಬ್ಬರೂ ಗಾಯನ ಕ್ಷೇತ್ರದಲ್ಲಿ ತಂದೆಯ ಹಾದಿಯಲ್ಲಿ ಮುಂದುವರೆದಿದ್ದಾರೆ ಚರಣ್ ಅಭಿನಯದಲ್ಲಿಯೂ ಸಕ್ರಿಯರು. ೨೫ನೇ ಸೆಪ್ಟಂಬರ್, ೨೦೨೦ರಂದು ಮಧ್ಯಾಹ್ನ ೧ ಗಂಟೆ ೪ ನಿಮಿಷಕ್ಕೆ ಕರೋನಾದ ಕಾರಣದಿಂದ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಮ್ಮನ್ನೆಲ್ಲಾ ಬಿಟ್ಟು ಹೊರಟರು.

ಅವರ ನೆನಪುಗಳು ಸದಾ ಶಾಶ್ವತವಾಗಿರುತ್ತದೆ.