ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

“ನಾದದ ನೆರಳು” ಮೂಡಿದ ಬಗೆ

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ಶ್ರೀ ಎನ್ ಎಸ್ ಶ್ರೀಧರಮೂರ್ತಿ ಅವರ ಬಹುನಿರೀಕ್ಷಿತ ಕಾದಂಬರಿ ‘ನಾದದ ನೆರಳು’ ಲೋಕಾರ್ಪಣೆಗೊಂಡಿದೆ. ಈ ಕಾದಂಬರಿ ಮೂಡಿದ ಬಗೆಯನ್ನು ಸ್ವತಃ ಲೇಖಕರೇ ಈ ಲೇಖನದಲ್ಲಿ ಓದುಗರೊಡನೆ ಹಂಚಿಕೊಂಡಿದ್ದಾರೆ.

ನಸುಕು ಸಂಪಾದಕ ವರ್ಗ


ಈ ಕಾದಂಬರಿಯನ್ನು ನಾನು ಬರೆಯಲು ಉದ್ದೇಶಿಸಿದ್ದು 2008ರ ಸುಮಾರಿಗೆ. ಆಗ ನಾನು ಆಕಾಶವಾಣಿಯ ವಿವಿಧ ಭಾರತಿ ಕೇಂದ್ರಕ್ಕೆ ‘ಸುವರ್ಣ ಚಿತ್ರ ಭಾರತಿ’ ಎಂಬ ಮಾಲಿಕೆ ರೂಪಿಸುತ್ತಿದ್ದೆ. ಇದಕ್ಕಾಗಿ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರನ್ನು ಸಂದರ್ಶಿಸಿದೆ. ಧ್ವನಿಮುದ್ರಣ ಮುಗಿಸಿ ಹಿಂದಿರುಗಿ ಬರುವಾಗ ಅವರೂ ಮಲೆನಾಡಿನಿಂದಲೇ ಬಂದವರಾಗಿದ್ದರಿಂದ ಸಾಕಷ್ಟು ಅಂದಿನ ಮಲೆನಾಡು-ಇಂದಿನ ಮಲೆನಾಡು, ಬದಲಾಗುತ್ತಿರುವ ಮಲೆನಾಡು ಹೀಗೆ ಮಾತಾಡಿದವು. ಕೊನೆಯಲ್ಲಿ ಕಾಸರವಳ್ಳಿ ‘ನೀವಿದ್ದನ್ನೆಲ್ಲಾ ಕಾದಂಬರಿ ರೂಪದಲ್ಲಿ ಬರೆಯ ಬೇಕು’ ಎಂದರು. ಈ ಮಾತು ಮನದೊಳಗೆ ಇಳಿಯಿತು. ಈ ಸಂದರ್ಭದಲ್ಲಿಯೇ ನನ್ನ ಹೆಂಡತಿ ರಾಧಾ ಕೂಡ ‘ನೀವು ವಿಮರ್ಶೆ ಬರೆದಿದ್ದು ಸಾಕು ಒಂದು ಕಾದಂಬರಿ ಬರೆಯಿರಿ’ ಎಂದು ಪದೇ ಪದೇ ಹೇಳುತ್ತಿದ್ದಳು. ಹೀಗೆ ಕಾದಂಬರಿಯ ಪೂರ್ವ ಭೂಮಿಕೆ ಸಿದ್ದವಾಯಿತು.
ನಾನು ಮೊದಲು ಬರೆಯಲು ಆರಂಭಿಸಿದಾಗ ನನ್ನ ಮನಸ್ಸಿನಲ್ಲಿ ಇದ್ದ ತಾತ್ವಿಕತೆ ಶ್ರೀವಿದ್ಯೆಯ ಕುರಿತಾಗಿದ್ದು. ಮೂರು ತಲೆಮಾರುಗಳು ಶ್ರೀವಿದ್ಯೆಯನ್ನು ಭಿನ್ನ ನೆಲೆಯಲ್ಲಿ ನೋಡಿದ ಕಥೆ ಆರಂಭದಲ್ಲಿ ನನ್ನ ಮನಸ್ಸಿನಲ್ಲಿ ಇದ್ದಿದ್ದು. ಶ್ರೀವಿದ್ಯೆಯ ಕುರಿತು ನನ್ನ ಗಮನವನ್ನು ಮೊದಲು ಸೆಳೆದಿದ್ದು ನಾನು ಶೃಂಗೇರಿಯ ಜಿ.ಸಿ.ಬಿ.ಎಂ ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ಉಪನ್ಯಾಸಕರಾಗಿದ್ದ (ಹಿರಿಯ ಬರಹಗಾರ ತ.ಸು.ಶಾಮರಾಯರ ಮಗ) ಟಿ.ಎಸ್.ವೆಂಕಣ್ಣಯ್ಯನವರು. ಅವರು ಸಂಸ್ಕøತದಲ್ಲಿದ್ದ ಟಿ.ವಿ.ಕಪಾಲಿ ಶಾಸ್ತ್ರಿಗಳ ‘ಮಹಾ ಮನುಸ್ತವ:’ ವನ್ನು ‘ಶ್ರೀವಿದ್ಯೆಯ ಸಾರ ಸರ್ವಸ್ವ’ ಎಂದು ಕನ್ನಡಕ್ಕೆ ಅನುವಾದಿಸಿದ್ದರು. ಈ ಕೃತಿ ನನ್ನನ್ನು ಆಕರ್ಷಿಸಿತ್ತು. ಅವರ ಜೊತೆಗೆ ಈ ಕುರಿತು ಒಂದಿಷ್ಟು ಮಾತುಕತೆಗಳೂ ನಡೆದವು. ಆಗ ಅದನ್ನು ಅರ್ಥ ಮಾಡಿ ಕೊಳ್ಳುವ ವಯಸ್ಸಲ್ಲವಾದರೂ ಕುತೂಹಲವನ್ನಂತೂ ಅದು ಸೆಳೆದಿತ್ತು. ಬೆಂಗಳೂರಿಗೆ ಬಂದ ಮೇಲೆ ಪ್ರೊ.ಸಾ.ಕೃ.ರಾಮಚಂದ್ರ ರಾಯರ ಪರಿಚಯವಾಯಿತು. ಅವರು ನಾನು ಸಂಪಾದಕತ್ವ ವಹಿಸಿದ್ದ ‘ಮಲ್ಲಿಗೆ’ ಮಾಸ ಪತ್ರಿಕೆಗೆ ‘ವೇದಕಾಲದ ಕಥೆಗಳು’ ಮಾಲಿಕೆ ಬರೆಯಲು ಅರಂಭಿಸಿದರು. ಈ ಸಂದರ್ಭದಲ್ಲಿ ತಿಂಗಳಿಗೊಮ್ಮೆಯಾದರೂ ದೀರ್ಘ ಮಾತುಕತೆ ಸಾಧ್ಯವಾಗುತ್ತಿತ್ತು. ಆಗ ಶ್ರೀವಿದ್ಯೆಯ ಕುರಿತು ಅವರು ಸಾಕಷ್ಟು ಮಾಹಿತಿ ನೀಡಿದರು. ಶ್ರೀಚಕ್ರದ ಯಂತ್ರ-ಮಂತ್ರ-ತಂತ್ರದ ನೆಲೆಗಳ ಬಗ್ಗೆ ಅವರು ನನ್ನ ಪಾಲಿಗೆ ಹೊಸ ಲೋಕವನ್ನೇ ತೆರೆದಿದ್ದರು. ನಾನು ನೋಡಿದ ಇನ್ನೊಬ್ಬ ಶ್ರಿಚಕ್ರಾರಾಧಕರು ಎಂದರೆ ಗೀತರಚನೆಕಾರರಾದ ವಿಜಯನಾರಸಿಂಹ ಅವರೂ ಕೂಡ ಹಲವು ಮಹತ್ವದ ಸಂಗತಿಗಳನ್ನು ನನಗೆ ತಿಳಿಸಿ ಕೊಟ್ಟರು. ಗೆಳತಿ ವೀಣಾ ಬನ್ನಂಜೆಯವರ ಮೂಲಕ ಪರಿಚಿತರಾದ ಬರಹಗಾರ ಸತ್ಯಕಾಮ ಹಿಮಾಲಯದ ಕಥೆಗಳನ್ನು ಅದರಲ್ಲಿಯೂ ಅಘೋರಿಗಳ ಪ್ರಪಂಚವನ್ನು ಅವರು ಮೈ ಜುಂ ಎನ್ನಿಸುವಂತೆ ವರ್ಣಿಸುತ್ತಿದ್ದರು. ಇವೆಲ್ಲವೂ ಸೇರಿ ಮನಸ್ಸಿನಲ್ಲಿ ಕಥೆ ಬೆಳೆಯಲು ಆರಂಭಿಸಿತು.ನಾನು ಶ್ರೀಚಕ್ರದ ಕುರಿತು ತ.ರಾ.ಸು, ಇಂದಿರಾತನಯ ಮತ್ತು ವಿಜಯನಾರಸಿಂಹ ಅವರು ಬರೆದ ಕಾದಂಬರಿಗಳನ್ನು ಓದಿದ್ದೆ. ಆದರೆ ನನ್ನ ಮನಸ್ಸಿನಲ್ಲಿ ಇದ್ದಿದ್ದು ಮಲೆನಾಡಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಹಿನ್ನೆಲೆಯಲ್ಲಿ ಬೆಳೆಯುವ ಕಾದಂಬರಿ. ಇದಕ್ಕಾಗಿ ನಾನು ಶ್ರೀವಿದ್ಯೆಯ ಕುರಿತು ಸಂಗ್ರಹಿಸಿದ್ದ ಮಾಹಿತಿಯನ್ನು ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹ ಪೀಠದ ಜಗದ್ಗುರುಗಳಾದ ಶ್ರೀಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿಗಳಿಗೆ ಶ್ರೀವಿದ್ಯೆಯ ಕುರಿತು ನಾನು ಸಂಗ್ರಹಿಸಿದ್ದ ಮಾಹಿತಿಗಳನ್ನು ತೋರಿಸಿದೆ. ಅವರು ಸೂಕ್ತ ಮಾರ್ಗದರ್ಶನ ನೀಡಿ ಅದಕ್ಕೆ ಒಂದು ರೂಪ ನೀಡಿದರು.
ಕಥೆ ಒಂದು ರೂಪಕ್ಕೆ ಬಂದಿದೆ ಎನ್ನಿಸಿದ ಮೇಲೆ 2010ರ ಜನವರಿ ಮೊದಲ ವಾರ ಕಚೇರಿಗೆ ರಜೆ ಹಾಕಿ ಕಾದಂಬರಿ ಮುಗಿಸುತ್ತೇನೆ ಎಂದು ಕುಳಿತೆ. ಕಾದಂಬರಿ ಮುಗಿಯಲಿಲ್ಲವಾದರೂ ಸುಮಾರು ಇನ್ನೂರು ಪುಟಗಳ ಬರವಣಿಗೆ ಆಗಿತ್ತು. ಅಷ್ಟನ್ನು ಹಿರಿಯ ವಿಮರ್ಶಕರೂ ನನ್ನ ಹಿತೈಷಿಗಳೂ ಆದ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರಿಗೆ ನೀಡಿದೆ. ಅವರು ಓದಿ ‘ಕಥೆ ಚೆನ್ನಾಗಿದೆ, ಆದರೆ ಇಷ್ಟೊಂದು ಪಾತ್ರಗಳನ್ನು ಇಟ್ಟು ಕೊಂಡರೆ ನಿಮಗೆ ದಡ ಸೇರಿಸುವುದು ಕಷ್ಟ’ ಎಂದರು. ನನಗೆ ಮೊದಲ ಮಾತು ಮನಸ್ಸಿನೊಳಗೆ ಇಳಿಯಿತು; ಎರಡನೆಯದು ಅಷ್ಟಾಗಿ ಆಗ ಅರ್ಥವಾಗಿರಲಿಲ್ಲ. ಹೀಗಾಗಿ ಬರವಣಿಗೆ ಮುಂದುವರೆಸಿದೆ. ಸುಮಾರು ಆರು ನೂರು ಪುಟಗಳ ಬರವಣಿಗೆ ಮುಗಿದಾಗ ನಾನು ದಾರಿ ತಪ್ಪಿದ್ದು ಖಚಿತವಾಯಿತು. ಪಾತ್ರಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಮತ್ತು ಸಂಬಂಧಗಳು ಕಗ್ಗಂಟಾಗಿದ್ದರಿಂದ ಹೇಗೆ ಮುಗಿಸುವುದು ಎನ್ನುವುದೇ ಸಮಸ್ಯೆ ಆಯಿತು. ಆಗ ನನ್ನಿಂದಾಗದು ಎಂದು ಕೈ ಚೆಲ್ಲಿದೆ.


ಕಾದಂಬರಿ ನಿಲ್ಲಿಸಿದರೂ ಕಥನ ಮನದೊಳಗೆ ಕೊರೆಯುತ್ತಿತ್ತು. ಹೀಗಿರುವಾಗ 2012ರ ಸುಮಾರಿಗೆ ಅನಿರೀಕ್ಷಿತವಾಗಿ ನನ್ನ ತಾತ ನುಲೇನೂರು ಶಂಕರಪ್ಪನವರು ಬರೆದಿಟ್ಟುಕೊಂಡಿದ್ದ ಕೆಲವು ಟಿಪ್ಪಣಿಗಳು ನನ್ನ ಕೈ ಸೇರಿದವು. ಶ್ರೀವಿದ್ಯೆ, ಸಂಗೀತ, ಛಂದಸ್ಸು, ಜ್ಯೋತಿಷ ನಾಲ್ಕರ ಹಿಂದಿನ ಮೂಲಗಣಿತವನ್ನು ಹುಡುಕುವ ಅಲ್ಲಿನ ಪ್ರಯತ್ನ ನನ್ನ ಗಮನ ಸೆಳೆಯಿತು. ಈ ಟಿಪ್ಪಣಿಗಳನ್ನು ಲೇಖನವಾಗಿಸುವಷ್ಟು ವಿಸ್ತಾರ ಅವುಗಳಲ್ಲಿ ಇರಲಿಲ್ಲ. ಅವು ಲೇಖನಕ್ಕೆ ಬರೆದ ಟಿಪ್ಪಣಿಗಳೂ, ಸಂಶೋಧನೆ ಅಥವಾ ಗ್ರಂಥಕ್ಕೆ ಬರೆದ ಟಿಪ್ಪಣಿಗಳೂ ಎನ್ನುವುದೂ ಖಚಿತವಾಗಿ ಗೊತ್ತಿರಲಿಲ್ಲ. ಅಲ್ಲಿನ ಎಷ್ಟೋ ಕ್ಷೇತ್ರಗಳಲ್ಲಿ ನನಗೆ ಪ್ರವೇಶ ಇರಲಿಲ್ಲ. ಆದರೆ ಇವುಗಳು ಮುಂದಿನ ಪೀಳಿಗೆಗೆ ತಲುಪ ಬೇಕು ಅಂತ ಮಾತ್ರ ತೀವ್ರವಾಗಿ ಅನ್ನಿಸಿತು. ಇದನ್ನು ಕಾದಂಬರಿಯೊಳಗೆ ತರಬಾರದೇಕೆ ಅನ್ನಿಸಿದಾಗ ನಿಂತಿದ್ದ ಕಥನಕ್ಕೆ ಮರು ಚಾಲನೆ ಸಿಕ್ಕಿತು. ಹೀಗಾಗಿ ಸಂಗೀತ ಕಾದಂಬರಿಯ ಮುಖ್ಯವಾದ ನೆಲೆಯಾಗಲಿ ಎಂದು ನಿರ್ಧರಿಸಿದೆ. ಹಾಗೆ ಅನ್ನಿಸಿದ್ದೇನೋ ಹೌದು ಆದರೆ ನಾನು ಸಂಗೀತ ಕಲಿತವನಲ್ಲ. ನನ್ನ ತಂದೆಯೇ ದೊಡ್ಡ ಸಂಗೀತಗಾರರಾಗಿದ್ದರೂ ಅವರಿಂದ ಪಾಠ ಹೇಳಿಸಿ ಕೊಳ್ಳಲಿಲ್ಲ. ಆ ವಯಸ್ಸಿನಲ್ಲಿ ಸಂಗೀತದ ಕುರಿತು ನನಗೆ ಆಸಕ್ತಿ ಬೆಳೆಯಲೇ ಇಲ್ಲ. ಮುಂದೆ ಸಂಗೀತದ ಕುರಿತು ಒಲವು ಬಂದಿದ್ದೂ ಕೂಡ ಚಿತ್ರಗೀತೆಗಳ ಕಾರಣದಿಂದ. ಜಿ.ಕೆ.ವೆಂಕಟೇಶ್ ಸಂಗೀತದ ಕುರಿತು ಹೇಳುತ್ತಿದ್ದ ಅನೇಕ ಸಂಗತಿಗಳು ನನ್ನ ಕುತೂಹಲವನ್ನು ಹೆಚ್ಚಿಸಿದವು. ಹೀಗಿದ್ದರೂ ಇಂದಿಗೂ ನನ್ನ ಸಂಗೀತದ ಗ್ರಹಿಕೆ ಓದಿನಿಂದ ರೂಪುಗೊಂಡಿದ್ದು. ನಾನು ಗಾಯಕನಲ್ಲ. ಅದರ ಸೂಕ್ಷ್ಮಗಳನ್ನೂ ಅರಿತವನಲ್ಲ. ಹೀಗಾಗಿ ಸಂಗೀತದ ಕಾದಂಬರಿಯಲ್ಲಿ ಪ್ರವೇಶ ಪಡೆಯಲು ಸಾಕಷ್ಟು ಸಿದ್ದತೆ ಬೇಕಾಯಿತು. ಹಿರಿಯರು ಮತ್ತು ನನ್ನ ಹಿತೈಷಿಗಳೂ ಆದ ಗಾನಕಲಾ ಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭ, ಪಂಡಿತ್ ಡಾ.ನಾಗರಾಜರಾವ್ ಹವಾಲ್ದಾರ್ ಮತ್ತು ಆಕಾಶವಾಣಿ ಸಹ ನಿರ್ದೇಶಕ ಡಾ.ಎನ್.ರಘು ಅವರ ಬಳಿ ಸಾಕಷ್ಟು ಚರ್ಚೆಗಳನ್ನು ನಡೆಸಿದೆ. ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅವರು ಹೇಳಿದ ಘಟನೆಗಳು, ನೀಡಿದ ಸಲಹೆ, ಸೂಚನೆಗಳು ಕಾದಂಬರಿ ಹೊಸ ರೂಪ ಪಡೆಯುವಲ್ಲಿ ಮುಖ್ಯ ಪಾತ್ರ ವಹಿಸಿದವು. ಮಂಗಳಾಳನ್ನು ಸಂಗೀತ ಕ್ಷೇತ್ರದ ಸಾಧಕಿಯಾಗಿಸಲು ನಿರ್ಧರಿಸಿದಾಗ ಕಾದಂಬರಿಯ ಸ್ವರೂಪವೇ ಬದಲಾಗಿ ಹೋಯಿತು.ಅವಳನ್ನು ಕಾದಂಬರಿಯ ಪ್ರಧಾನ ನೆಲೆಗೆ ತರುವುದು ಇದರಿಂದ ಸಾಧ್ಯವಾಯಿತು.ಮೂರು ತಲೆಮಾರುಗಳನ್ನು ಉಳಿಸಿ ಕೊಂಡರೂ ಈಗ ನಾನು ಮೊದಲು ಬರೆದಿದ್ದ ಅರ್ಧದಷ್ಟು ಪಾತ್ರಗಳನ್ನು ಕೈ ಬಿಟ್ಟೆ, ಕೆಲವು ಪಾತ್ರಗಳ ವ್ಯಾಪ್ತಿಯನ್ನು ಸೀಮಿತಗೊಳಿಸಿದೆ. ಅಲ್ಲಿಗೆ ಕಾದಂಬರಿಗೆ ಒಂದು ಚೌಕಟ್ಟು ಬಂದಿತು.
ಕಾದಂಬರಿ ಇನ್ನೇನು ಮನಸ್ಸಿನಲ್ಲಿ ಸ್ಪಷ್ಟ ರೂಪ ಪಡೆಯುತ್ತಿದೆ ಎನ್ನಿಸಿದಾಗ ಈ ವರ್ಷದ ಆರಂಭದಲ್ಲಿ ಎರಡು ಮುಖ್ಯ ಘಟನೆಗಳು ನಡೆದವು. ಕಳೆದ ಕೆಲವು ವರ್ಷಗಳಿಂದ ಒಂದು ಕ್ಷಣವೂ ಬಿಡುವಿಲ್ಲದ ಒತ್ತಡಗಳಿಂದ ಕಂಗೆಟ್ಟಿದ್ದ ನನಗೆ ಕರೊನಾ ಒಂದು ಅನಿರೀಕ್ಷಿತ ವಿರಾಮ ಒದಗಿಸಿತು. ಸುಮಾರು ಎರಡು ತಿಂಗಳ ಕಾಲ ಎಲ್ಲಾ ಕೆಲಸಗಳೂ ಇದ್ದಕಿದ್ದಂತೆ ನಿಂತು ಹೋಗಿ ಬದುಕು ಹೊಸ ನೆಲೆಗೆ ಬಂದಿತು. ಇದೇ ಸಂದರ್ಭದಲ್ಲಿ ನನ್ನ ಜೆ.ಸಿ.ಬಿ.ಎಂ ಕಾಲೇಜಿನ ಗೆಳೆಯರು ಒಂದು ವಾಟ್ಸಪ್ ಗ್ರೂಪ್ ಮಾಡಿದರು. ಸತ್ಯ ಹೇಳ ಬೇಕೆಂದರೆ ನಾನು ಕಾಲೇಜ್ ದಿನಗಳನ್ನು ಮರೆತೇ ಬಿಟ್ಟಿದ್ದೆ. ಆಗ ಕೂಡ ನಾನು ಸಹಪಾಠಿಗಳಲ್ಲಿ ಕೆಲವರನ್ನು ಬಿಟ್ಟರೆ ಹೆಚ್ಚಿನವರನ್ನು ಹಚ್ಚಿಕೊಂಡವನಲ್ಲ. ನನ್ನ ತರಗತಿಯಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದು ಕೂಡ ಸರಿಯಾಗಿ ಗೊತ್ತಿರಲಿಲ್ಲ. ಈಗ ಬಿಡುವಿನ ಕಾಲದಲ್ಲಿ ವಾಟ್ಸಪ್ ಗ್ರೂಪ್‍ನ ಚಟುವಟಿಕೆಗಳನ್ನು ಕುತೂಹಲದಿಂದ ನೋಡುತ್ತಾ ನನ್ನೊಳಗಿನ ಕಥನಕ್ಕೆ ಮರು ಚಾಲನೆ ದೊರಕಿತು. ಮರೆತೇ ಹೋಗಿದ್ದ ಎಷ್ಟೋ ಊರುಗಳು ಅದಕ್ಕೆ ಸಂಬಂಧಿಸಿದ ಘಟನೆಗಳು ನೆನಪಾದವು. ಹರಿಹರಪುರಕ್ಕೆ ಸೀಮಿತವಾದ ಕಥೆಯನ್ನು ವಿಸ್ತರಿಸಬಹುದು ಎನ್ನಿಸಿತು. ಶೃಂಗೇರಿಯ ವಿದ್ಯಾರಣ್ಯಪುರ ಈಗ ಹೊಸದಾಗಿ ಸೇರಿಕೊಂಡಿತು. ಬಾಲ್ಯದ ನೆನಪುಗಳನ್ನು ಮತ್ತೆ ಮತ್ತೆ ಕೆದಕುತ್ತಾ ಹೋದಂತೆ ನಾರ್ವೆ ನನ್ನನ್ನು ಕಾಡಲು ಆರಂಭಿಸಿತು. ನಾನು ನಾರ್ವೆಯಲ್ಲಿ ಓದಿದ್ದು ನಾಲ್ಕನೇ ತರಗತಿಯವರೆಗೆ ಮಾತ್ರ. ನಂತರ ಕೂಡ ಆ ಊರಿಗೆ ಹೋಗಿದ್ದು ಕಡಿಮೆ. ಆದರೆ ನಾರ್ವೆ ನನ್ನ ತಂದೆ ಎನ್.ಎಸ್.ಸೀತಾರಾಮ ರಾವ್ ಅವರು ಅತ್ಯಂತ ಚಟುವಟಿಕೆಯಿಂದ ಇದ್ದ ಊರು. ಅವರ ಅನೇಕ ಪ್ರಮುಖ ಸಂಗೀತ ಕಚೇರಿಗಳು ನಡೆದಿದ್ದು ಅಲ್ಲಿಯೇ. ಹಲವು ನಾಟಕಗಳಲ್ಲಿ ಅಭಿನಯಿಸಿ ಅವರು ಜನರ ಗಮನ ಸೆಳೆದಿದ್ದು ಕೂಡ ಅಲ್ಲಿಯೇ. ಈಗಲೂ ನಾರ್ವೆಯಲ್ಲಿ ಅವರನ್ನು ನೆನಪು ಮಾಡಿ ಕೊಳ್ಳುವವರು ಬಹಳ ಜನ ಇದ್ದಾರೆ. ನಾರ್ವೆಯನ್ನು ಕಥೆಯೊಳಗೆ ತರಬೇಕು ಎಂದೇನೋ ತೀರ್ಮಾನ ಮಾಡಿದೆ. ಆದರೆ ಕರೋನಾದ ಈ ದುರಿತ ಕಾಲದಲ್ಲಿ ಅಲ್ಲಿಗೆ ಹೋಗುವಂತಿರಲಿಲ್ಲ. ಹೇಗೆ ಅಥೆಂಟಿಸಿಟಿ ತರುವುದು ಎಂದು ಚಿಂತಿಸುವಾಗ ನಾರ್ವೆಯ ನನ್ನ ನೆರೆಮನೆಯವರೂ ಮತ್ತು ಪ್ರಾಥಮಿಕ ಶಾಲಾ ಸಹಪಾಠಿಯೂ ಆಗಿದ್ದ ಜಯಂತಿ ಅವರ ನೆನಪಾಯಿತು. ಅವರು ನಾರ್ವೆಯಲ್ಲಿ ಬಹು ದಿನ ಕಳೆದವರು ಮಾತ್ರವಲ್ಲ ಈಗಲೂ ನಾರ್ವೆಯ ಸಂಪರ್ಕವನ್ನು ಇಟ್ಟುಕೊಂಡವರು. ಅವರು ಹಲವು ಮುಖ್ಯವಾದ ವಿವರಗಳನ್ನು ಕಳುಹಿಸಿದರು. ನನ್ನ ಪದವಿ ತರಗತಿ ಸಹಪಾಠಿ ಸತ್ಯಭಾಮಾ.ಎಚ್.ಎಸ್ ಕೂಡ ನಾರ್ವೆಯ ಕುರಿತು ಕೆಲವು ಮಹತ್ವದ ಮಾಹಿತಿಗಳನ್ನು ಕಳುಹಿಸಿದರು. ದೇವಾಲಯಗಳ ಕುರಿತು ವಿಶೇಷವಾಗಿ ಅಧ್ಯಯನ ಮಾಡುತ್ತಿರುವ ನನ್ನ ತಮ್ಮ ಎನ್.ಎಸ್.ಶ್ರೀನಿವಾಸಮೂರ್ತಿ ಕೊಪ್ಪ ತಾಲ್ಲೋಕಿನ ದೇವಾಲಯಗಳ ವಿವರಗಳನ್ನು ನೀಡಿದ. ಈಗ ನಾರ್ವೆಯ ಚಿತ್ರ ನನ್ನ ಮನಸ್ಸಿನಲ್ಲಿ ಸ್ಪಷ್ಟವಾಯಿತು. ನಾರ್ವೆ ಪ್ರವೇಶಿಸಿದ್ದು ಕಾದಂಬರಿಗೆ ಹೊಸ ರೂಪವನ್ನಂತೂ ನೀಡಿತು.


ಕಥನಕ್ಕೆ ಇನ್ನೊಂದು ಊರು ಬೇಕಿತ್ತು. ಹರಿಹರಪುರಕ್ಕೆ ಹತ್ತಿರವಿರುವ ಆದರೆ ತನ್ನದೇ ಆದ ಭಿನ್ನತೆ ಹೊಂದಿರುವ ಊರು ಅದಾಗಬೇಕಿತ್ತು. ಕೊಪ್ಪ, ಆಗುಂಬೆ, ತೀರ್ಥಹಳ್ಳಿ, ಕಮ್ಮರಡಿ ಮೊದಲಿಗೆ ನನ್ನ ಮನಸ್ಸಿನಲ್ಲಿ ಬಂದ ಊರುಗಳು. ತೀರ್ಥಹಳ್ಳಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದರೂ ಕುವೆಂಪು ಅವರಿಂದ ಹಿಡಿದು ವಸುಮತಿ ಉಡುಪ ಅವರವರೆಗೆ ಈ ಭಾಗದ ಕುರಿತು ಹಲವು ಕಾದಂಬರಿಗಳು ಬಂದಿವೆ. ಇದರ ಜೊತೆಗೆ ಸಾಂಸ್ಕøತಿಕವಾಗಿ ಕೂಡ ಶೃಂಗೇರಿ ಮತ್ತು ತೀರ್ಥಹಳ್ಳಿ ಭಾಗದ ನಡುವೆ ಸಾಕಷ್ಟು ವ್ಯತ್ಯಾಸಗಳೂ ಇವೆ. ಹೀಗೆ ಕೊಪ್ಪ ತಾಲ್ಲೋಕಿನ ದೇವಸ್ಥಾನಗಳ ವಿವರ ನೋಡುತ್ತಾ ಜಯಪುರ ನನ್ನ ಗಮನ ಸೆಳೆಯಿತು. ಹರಿಹರಪುರಕ್ಕೇ ಶ್ರೀವಿದ್ಯೆಯ ಗಟ್ಟಿ ಹಿನ್ನೆಲೆ ಇದ್ದರೂ ಅದು ಈಗಾಗಲೇ ಕಾದಂಬರಿಯ ಮುಖ್ಯ ನೆಲೆಯಲ್ಲಿ ಇದ್ದಿದ್ದರಿಂದ ಇನ್ನೊಂದು ಊರು ಎಂದು ಯೋಚಿಸಿದಾಗ ಶ್ರೀಚಕ್ರದ ಹಿನ್ನೆಲೆ ಇರುವ ಕಾರಣದಿಂದ ಜಯಪುರ ನನ್ನ ಗಮನ ಸೆಳೆಯಿತು. ಆದರೆ ನನಗೆ ಆ ಊರಿನ ಪರಿಚಯವೇ ಇರಲಿಲ್ಲ. ನೋಡಿದ್ದರೂ ಕಥೆ ಕಟ್ಟುವಷ್ಟು ವಿವರಗಳು ಗೊತ್ತಿರಲಿಲ್ಲ. ಆಗ ನೆನಪಾಗಿದ್ದು ನನ್ನ ಪದವಿ ತರಗತಿ ಸಹಪಾಠಿ ಸುನೀತಾ ಶ್ರೀನಿವಾಸ್ ಆ ಊರಿನಲ್ಲಿ ಇದ್ದಾರೆ ಎನ್ನುವುದು. ಹಿಂಜೆರೆಯುತ್ತಲೇ ಅವರಿಂದ ಮಾಹಿತಿ ಕೇಳಿದೆ. ಅವರು ಜಯಪುರದ ಕುರಿತು ಸಾಕಷ್ಟು ವಿವರಗಳನ್ನು ಕಳುಹಿಸಿದ್ದು ಮಾತ್ರವಲ್ಲದೆ; ಆ ಊರನ್ನು ಪರಿಚಯಿಸುವ ಎರಡು ವೀಡಿಯೋಗಳನ್ನು ಕಳುಹಿಸಿದರು. ಇದು ಆ ಊರನ್ನು ಕಣ್ಮುಂದೆ ತಂದುಕೊಂಡು ಕಥೆ ಕಟ್ಟಲು ನೆರವು ನೀಡಿತು. ಇನ್ನು ನನಗೆ ಮುಳುಗಡೆಯ ಆಯಾಮ ತರಬೇಕಿತ್ತು. ಸ್ವತ: ಮುಳುಗಡೆ ಪ್ರದೇಶದಿಂದ ಬಂದು ಬದುಕನ್ನ ಕಟ್ಟಿ ಕೊಂಡಿದ್ದ ನನ್ನ ಪದವಿ ತರಗತಿ ಸಹಪಾಠಿ ಶಿವಸ್ವಾಮಿ ಕಾರಂತರನ್ನು ಈ ವಿವರಗಳನ್ನು ಕೇಳಿದೆ. ಅವರು ಕೊಟ್ಟ ಮಾಹಿತಿಗಳು ನನಗೆ ಅರವಿಂದನ ಪಾತ್ರವನ್ನು ರೂಪಿಸಲು ನೆರವು ನೀಡಿದವು.


ಕರೊನಾದ ಬಿಡುವೂ ಇದ್ದಿದ್ದರಿಂದ ಆರಂಭದಲ್ಲಿ ಕಾದಂಬರಿಯ ಬರವಣಿಗೆ ವೇಗವಾಗಿ ಆರಂಭವಾಯಿತು. ಮೊದಲ ಇನ್ನೊರು ಪುಟಗಳ ಬರವಣಿಗೆ ಮುಗಿದಾಗ ಹಿಂದಿನ ಸಲದಂತೆ ಈ ಸಲವೂ ಆದರೆ ಎನ್ನುವ ಭಯ ಕಾಡಿತು. ನನ್ನ ಗುರುಗಳಾಗಿದ್ದ ಎಚ್.ಎಲ್.ಸುಬ್ರಹ್ಮಣ್ಯ ಅವರ ಮಗ ಮತ್ತು ಮಿತ್ರರಾದ ಎಚ್.ಎಸ್.ನಂದ ಕುಮಾರ್, ಸಂಗೀತಕ್ಷೇತ್ರದಲ್ಲಿ ಸಕ್ರಿಯರಾದ ಡಾ.ಎನ್.ರಘು ಮತ್ತು ನನ್ನ ಬರಹಗಳನ್ನು ಆಪ್ತವಾಗಿ ಓದುತ್ತಾ ಬಂದಿರುವ ಕವಯತ್ರಿ ನಂದಿನಿ ವಿಶ್ವನಾಥ್ ಹೆದ್ದರ್ಸ ಅವರಿಗೆ ಆಗಿದ್ದಷ್ಟು ಬರವಣಿಗೆಯನ್ನು ಕಳುಹಿಸಿದೆ. ಅವರು ನೀಡಿದ ಉತ್ಸಾಹದ ಪ್ರತಿಕ್ರಿಯೆಗಳು ಆತ್ಮವಿಶ್ವಾಸ ತಂದಿತು. ಅವರು ಸೂಚಿಸಿದ ಬದಲಾವಣೆಗಳು ಕೂಡ ಕಥೆಯನ್ನು ಸೂಕ್ತ ಚೌಕಟ್ಟಿಗೆ ತಂದಿತು. ಮುಂದಿನ ದಿನಗಳಲ್ಲಿ ಕೆಲಸದ ಒತ್ತಡ ಎಂದಿನಂತೆ ಹೆಚ್ಚಾಯಿತು. ಕಾದಂಬರಿಯ ಬರವಣಿಗೆ ವೇಗವಾಗಿ ಸಾಗಲಿಲ್ಲ, ಜೊತೆಗೆ ಕೆಲವು ಭಾಗಗಳನ್ನು ಮತ್ತೆ ಮತ್ತೆ ಬರೆಯ ಬೇಕು ಎನ್ನಿಸಿತು. ಬರವಣಿಗೆ ಕೊನೆಯ ಹಂತಕ್ಕೆ ಬಂದಿದೆ ಎನ್ನಿಸಿದಾಗ ಸಂವೇದನಾಶೀಲವಾಗಿ ಓದ ಬಲ್ಲವರು ಅದರಲ್ಲಿಯೂ ಸಂಗೀತ ಹಿನ್ನೆಲೆ ಇರುವವವರು ಓದಿದರೆ ಕೃತಿಯ ಅಥೆಂಟಿಸಿಟಿ ಸರಿಯಾಗಿದೆಯಾ ಗೊತ್ತಾಗುತ್ತದೆ ಎನ್ನಿಸಿತು. ಹಿರಿಯ ಮಿತ್ರರಾದ ಶ್ರೀಪತಿ ಮಂಜನಬೈಲು ನನ್ನ ಬರವಣಿಗೆಗೆ ನಿರಂತರವಾಗಿ ಬೆಂಬಲವಾದವರು. ಸಂಗೀತ ಮತ್ತು ಸಾಹಿತ್ಯದ ಅಗಾಧವಾದ ಹಿನ್ನೆಲೆ ಇರುವವರು. ಅವರಿಗೆ ಕಾದಂಬರಿ ಕಳುಹಿಸಿದೆ. ಅವರು ಸೂಕ್ತ ಸಲಹೆ ನೀಡಿದ್ದು ಮಾತ್ರವಲ್ಲ ಕಾದಂಬರಿ ಕುಟ್ಟುವ ಓಘದಲ್ಲಿ ಬಂದಿದ್ದ ವ್ಯಾಕರಣ ದೋಷಗಳನ್ನೂ ತಿದ್ದಿ ಕೊಟ್ಟರು, ನನ್ನ ಪದವಿ ಸಹಪಾಠಿ ಮಲೆನಾಡು ಭಾಗದಿಂದಲೇ ಬಂದವರು ಮತ್ತು ಗಾಯಕಿ ಕೂಡ ಆಗಿರುವ ಸುಜಾತಾ ರಾವ್ ಅವರಿಗೂ ಕಳುಹಿಸಿ ಕೊಟ್ಟೆ. ಅವರೂ ಕೂಡ ಸೂಕ್ತ ಸಲಹೆಗಳನ್ನು ನೀಡಿದರು. ಅಂತೂ ಹನ್ನೆರಡು ವರ್ಷದಿಂದ ನನ್ನನ್ನು ಕಾಡಿಸುತ್ತಾ ಇದ್ದ ಕಾದಂಬರಿ ಮುಕ್ತಾಯದ ಹಂತವನ್ನು ತಲುಪಿತು. ಕಾದಂಬರಿಯನ್ನು ಪ್ರಕಟಿಸುವವರು ಯಾರು? ಎಂದು ಯೋಚಿಸಿ ಸಪ್ನ ಬುಕ್ ಹೌಸ್‍ನ ದೊಡ್ಡೆಗೌಡರನ್ನು ಕೇಳಿದೆ. ಅವರು ಒಂದು ನಿಮಿಷವೂ ಯೋಚಿಸದೆ ‘ನಾವು ಪ್ರಕಟಿಸುತ್ತೇವೆ’ ಎಂದು ಬಿಟ್ಟರು. ಅಲ್ಲಿಗೆ ದೊಡ್ಡ ಭಾರವೊಂದು ಇಳಿದಂತಾಯಿತು.
ಕಾದಂಬರಿ ಬರೆಯುವ ಕಾಲದಲ್ಲಿ ಉತ್ಸಾಹ ತುಂಬಿ ಸೂಕ್ತ ಸಲಹೆಗಳನ್ನು ನೀಡಿದ ಡಾ.ಎಚ್.ಎಸ್.ರಾಘವೇಂದ್ರ ರಾವ್, ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ, ಕೆ.ಸತ್ಯನಾರಾಯಣ, ಎಸ್.ಆರ್.ವಿಜಯಶಂಕರ್, ಎನ್.ವಿದ್ಯಾಶಂಕರ್, ಪ್ರೊ. ಹಯವದನ ಉಪಾದ್ಯ, ಡಾ.ಬಿ.ಆರ್.ಮಂಜುನಾಥ್, ಪ್ರಕಾಶ ರಾಜ ಅರಸ್. ಕಾದಂಬರಿಯನ್ನು ಬರೆಯುವಾಗಲೇ ಅದನ್ನು ಓದಿ ಸೂಕ್ತ ಸಲಹೆಗಳನ್ನು ನೀಡಿದ ಎಚ್.ಎಸ್.ನಂದ ಕುಮಾರ್, ಡಾ.ಎನ್.ರಘು, ನಂದಿನಿ ವಿಶ್ವನಾಥ್ ಹೆದ್ದರ್ಸೆ, ಶ್ರೀಪತಿ ಮಂಜನಬೈಲು, ಸುಜಾತಾ ರಾವ್. ಕಾದಂಬರಿಗೆ ಅಗತ್ಯ ಮಾಹಿತಿಗಳನ್ನು ನೀಡಿದ ಎಚ್.ಎಸ್. ಅರ್ಪಣಾ, ಭಾರತಿ ಹೆಗಡೆ, ರಮೇಶ್ ಬೇಗಾರ್, ನಾಗರಾಜ್ ರಾವ್ ಕಲ್ಕಟ್ಟೆ, ಕೆ.ಸತೀಶ್, ಜಯಂತಿ, ಸತ್ಯಭಾಮಾ.ಎಚ್.ಎಸ್, ಸುನೀತಾ ಶ್ರೀನಿವಾಸ್, ಶಿವಸ್ವಾಮಿ ಕಾರಂತ್ ಅವರಿಗೆ ಕೃತಜ್ಞತೆಗಳು.


ಈ ಕಾದಂಬರಿಯನ್ನು ‘ಸಪ್ನ ಬುಕ್ ಹೌಸ್’ ನ ನಿತಿನ್ ಷಾ ಮತ್ತು ಆರ್.ದೊಡ್ಡೆಗೌಡ ಅವರ ವಿಶ್ವಾಸ ದೊಡ್ಡದು ಅವರಿಗೆ ನನ್ನ ನಮನಗಳು. ಮುಖಪುಟ ವಿನ್ಯಾಸಗೊಳಿಸಿದ ಶ್ರೀಪಾದ, ಅಕ್ಷರ ಜೋಡಣೆ ಮಾಡಿದ ದಿವ್ಯ ಪ್ರಿಟ್ರಾನಿಕ್ಸ್ ಮತ್ತು ಮುದ್ರಣ ಮಾಡಿದ ಪ್ರಿಂಟ್ ಫಾಸ್ಟ್ ಅವರಿಗೆ ನನ್ನ ಕೃತಜ್ಞತೆಗಳು.
ನನ್ನ ಬರಹವನ್ನು ಸದಾ ಬೆಂಬಲಿಸುವ ಈ ಕಾದಂಬರಿ ವಿಷಯದಲ್ಲಿ ವಿಶೇಷ ಆಸಕ್ತಿ ತೋರಿ ಅದರ ಬೆನ್ನುಲುಬಾಗಿ ನಿಂತ ಮಡದಿ ರಾಧಾ ಮತ್ತು ಮಗ ಭರತ್ ಅವರ ಪ್ರೀತಿ ಅಕ್ಕರೆಯನ್ನು ಇಲ್ಲಿ ನೆನೆಯುತ್ತೇನೆ.
ಕಾದಂಬರಿಯ ಕುರಿತ ನಿಮ್ಮ ಅಭಿಪ್ರಾಯಗಳಿಗೆ ಉತ್ಸಾಹದಿಂದ ಕಾದಿದ್ದೇನೆ.

“ನಾದದ ನೆರಳು ” ಕಾದಂಬರಿಕಾರರು :ಎನ್.ಎಸ್.ಶ್ರೀಧರ ಮೂರ್ತಿ,