ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎನ್.ಎಸ್.ಶ್ರೀಧರ ಮೂರ್ತಿ
ಇತ್ತೀಚಿನ ಬರಹಗಳು: ಎನ್.ಎಸ್.ಶ್ರೀಧರ ಮೂರ್ತಿ (ಎಲ್ಲವನ್ನು ಓದಿ)

ಸ್ವಪ್ನ ಬುಕ್ ಹೌಸ್ ಪ್ರಕಟಿಸಿರುವ ಶ್ರೀ ಎನ್.ಎಸ್. ಶ್ರೀಧರ ಮೂರ್ತಿ ಅವರ ಹೊಸ ಕಾದಂಬರಿ “ನಾದದ ನೆರಳು” ಪುಸ್ತಕದ ಒಂದು ಅಧ್ಯಾಯವನ್ನು ಇಲ್ಲಿ ಪ್ರಕಟಿಸಿದ್ದೇವೆ. ಅಧ್ಯಾಯದ ಕೊನೆಯಲ್ಲಿ ಪುಸ್ತಕವನ್ನು ಕೊಳ್ಳುವ ಬಗ್ಗೆ ಮಾಹಿತಿ ಹಾಗೂ ಓರ್ವ ಸಹೃದಯಿ ಓದುಗರ ಪ್ರತಿಕ್ರಿಯೆಯನ್ನೂ ಸೇರಿಸಿದ್ದೇವೆ. ಮೊದಲ ಅಧ್ಯಾಯ ಓದಿ ಮುಗಿಸುತ್ತಿದ್ದಂತೆ ನಾದಲೋಕದ ಸುತ್ತ ಹೆಣೆದ ಒಂದು ವಿಶಿಷ್ಟ ಕಥಾನಕವು ತೀವ್ರ ಆಸಕ್ತಿ ಹಾಗೂ ಮಾಹಿತಿಪೂರ್ಣವಾಗಿ ಓದುಗರ ಮುಂದೆ ತೆರೆದುಕೊಳ್ಳುತ್ತಾ ನಿಧಾನವಾಗಿ ಆವರಿಸುವುದನ್ನು ಕಾಣುತ್ತೇವೆ.

  • ನಸುಕು ಸಂಪಾದಕ ಬಳಗ

“ಈ ಕಥೆ ನಿನಗೆ ಏಕೆ ಹೇಳಿದೆ ಗೊತ್ತಾ, ನಿನ್ನ ಸ್ವರ ಸ್ಥಾನ ಬಹಳ ದೃಢವಾಗಿದೆ, ಇತ್ತೀಚೆಗೆ ಇಂತಹ ಶಕ್ತಿ ಇರೋರನ್ನ ನಾನು ಹೊಸ ಪೀಳಿಗೆಯಲ್ಲಿ ಅಪರೂಪಕ್ಕೆ ನೋಡ್ತಾ ಇದ್ದೀನಿ, ನೀನು ಬಹಳ ಎತ್ತರಕ್ಕೆ ಹೋಗ ಬೇಕು.’ ಇಷ್ಟು ಮಾತನ್ನ ಮುಗಿಸುವಾಗ ಅವರು ಭಾವುಕರಾಗಿದ್ದರು. ಅವರು ತನ್ನನ್ನು ಹೊಗಳಿದ್ದರಿಂದ ಆಗಿದ್ದ ಮುಜುಗರ, ವಹಿಸಿದ ಸವಾಲಿನಿಂದ ಆದ ಹೆದರಿಕೆ, ಹೇಳಿದ ಕಥೆಯಿಂದ ಉಂಟಾಗಿದ್ದ ಅಚ್ಚರಿ ಎಲ್ಲವೂ ಸೇರಿ ಒಂದು ರೀತಿಯ ವಿಚಿತ್ರ ಗೊಂದಲದಲ್ಲಿ ಮಂಗಳಾ ಕುಳಿತಿದ್ದಳು….”

ಶ್ರೀ ಎನ್ ಎಸ್ ಶ್ರೀಧರ ಮೂರ್ತಿ ಅವರ ಹೊಸ ಕಾದಂಬರಿ “ನಾದದ ನೆರಳು” ಆರನೇ ಅಧ್ಯಾಯದಿಂದ

ಅಧ್ಯಾಯ –

ಪುಣೆಯ ಸರಸ್ವತಿ ಸ್ಟುಡಿಯೋದಲ್ಲಿ ‘ನವಾವರಣ ಕೀರ್ತನೆ’ಗಳ ರೆಕಾರ್ಡಿಂಗ್ ಮೂರು ದಿನಗಳ ಕಾಲ ನಡೆಯಿತು. ಸಾಕಷ್ಟು ಅಪ್ ಡೇಟ್ ಆಗಿದ್ದ ಸ್ಟುಡಿಯೋದಲ್ಲಿ ಹಾಡುವುದೇ ಮಂಗಳಾಳ ಪಾಲಿಗೆ ಸಂತೋಷದ ವಿಷಯವಾಗಿತ್ತು. ಹಾಡುತ್ತಲೇ ಮಿಕ್ಸಿಂಗ್ ನಡೆಯುತ್ತಾ ಇದ್ದ ಕ್ರಮವನ್ನು ಅವಳು ಬೆರಗಿನಿಂದ ನೋಡ್ತಾ ಇದ್ದಳು. ಇದರ ಜೊತೆಗೆ ಪುಣೆಯ ಹೆಸರಾಂತ ವಾದ್ಯಗಾರರ ಸಾಥ್ ಬೇರೆ. ಅದರಲ್ಲಿಯೂ ಸಿತಾರ್ ನುಡಿಸಲು ಪಂಡಿತ್ ರಾಜೀವ್ ತಾರಾನಾಥ್ ಅವರ ನೇರ ಶಿಷ್ಯ ವೆಂಕಟರಾವ್ ಬಂದಾಗ ನಿಜಕ್ಕೂ ನರ್ವಸ್ ಆಗಿದ್ದಳು. ಆದರೆ ಅವರ ಬೆಂಬಲದಿಂದಲೇ ಅನೇಕ ತಾಂತ್ರಿಕ ಸೂಕ್ಷ್ಮಗಳನ್ನು ಮಂಗಳಾ ಕಲಿತಿದ್ದಳು. ಅಷ್ಟೇ ಅಲ್ಲ ಅವರ ಕಾರಣದಿಂದಲೇ ಪುಣೆಯ ಪ್ರಸಿದ್ಧ ಜೋಗೇಶ್ವರಿಯ ‘ದಗಡೂ ಸೇಠ್ ಹಲ್ವಾಯಿ ಗಣಪತಿ ಮಂಡಲ’ದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಪುಣೆಯ ಸುಮಾರು 125 ವರ್ಷ ಹಳೆಯ ಮತ್ತು ಅತ್ಯಂತ ಶ್ರೀಮಂತ ಈ ಮಹಾಮಂಡಲದಲ್ಲಿ ಹಾಡುವುದು ಎಂತಹ ಗಾಯಕರಿಗಾದರೂ ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ ಮಂಗಳಾಗೆ ಈ ವಿಷಯ ಸಂತೋಷದ ಬದಲು ಆತಂಕ ತಂದಿತ್ತು. ಇದಕ್ಕೆ ಕಾರಣವೂ ಇತ್ತು.

ಪುಣೆ ಎನ್ನುವುದು ಸಾಂಸ್ಕೃತಿಕ ನಗರಿ ಅದರಲ್ಲಿಯೂ ಹಿಂದೂಸ್ತಾನಿ ಸಂಗೀತದ ತವರೂರು. ಅದರಲ್ಲಿಯೂ ದಗಡೂ ಸೇಠ್ ಗಣಪತಿ ಮಂಡಲದಲ್ಲಿ ಕೇಳಲು ಸೇರುವ ಪ್ರೇಕ್ಷಕರ ಸಂಖ್ಯೆ ಕೂಡ ದೊಡ್ಡದೇ! ಅಂತಹ ಕಡೆ ಕರ್ನಾಟಕಿ ಸಂಗೀತವನ್ನು ಹಾಡುವುದು ನಿಜಕ್ಕೂ ಸವಾಲಾಗಿತ್ತು. ಆಗುವುದಿಲ್ಲ ಎಂದು ಖಚಿತವಾಗಿಯೇ ಹೇಳಿದ್ದರೂ ರಘುರಾಂ ಸರ್ ಇಂತಹ ಅವಕಾಶ ಬಿಡ ಬಾರದು ಎಂದು ಒತ್ತಾಯಿಸಿ ಒಪ್ಪಿಸಿದ್ದರು.
ಮಂಗಳಾ ಉಳಿದು ಕೊಂಡಿದ್ದು ಜೋಗೀಶ್ವರಿಗೆ ಹತ್ತಿರವೇ ಇದ್ದ ಕೋರಿಯಾ ಗಾಂವ್‍ನ ‘ಸೂರ್ಯ ವಿಲ್ಲಾ’ ಹೋಟಲ್‍ನಲ್ಲಿ. ನವಾವರಣ ಕೀರ್ತನೆ ರೆಕಾರ್ಡಿಂಗ್ ಆಗುವವರೆಗೆ ಇದ್ದ ನಿರಂಜನ್ ಸರ್ ತುರ್ತು ಕೆಲಸ ಎಂದು ಕೊಲ್ಕತ್ತಾಗೆ ಹೊರಟಿದ್ದರು. ರಘುರಾಂ ಸರ್ ಇದ್ದರೂ ಅವರಿಗೆ ನೂರೆಂಟು ಕೆಲಸಗಳು. ಜೊತೆಗೆ ಅವರು ಕೆಲವು ಕಾಲ ಮುಂಬೈ ಆಕಾಶ ವಾಣಿಯಲ್ಲಿ ಅಸಿಸ್ಟಂಟ್ ಸ್ಟೇಷನ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರಿಂದ ಸಾಕಷ್ಟು ಗೆಳೆಯರೂ ಅವರಿಗೆ ಅಲ್ಲಿ ಇದ್ದರು. ದಿನಕ್ಕೆ ಒಬ್ಬರ ಮನೆಗೆ ಅಂತ ಹೋಗ್ತಾ ಇದ್ದರು. ಹೀಗಾಗಿ ಬಹುಪಾಲು ಕೀರ್ತನೆಗಳನ್ನು ಆರಿಸಿ ಕೊಳ್ಳುವ ಕೆಲಸವನ್ನು ಮಂಗಳಾಳೇ ಮಾಡಬೇಕಾಯಿತು. ರಘುರಾಂ ಸರ್ ಗೊತ್ತು ಮಾಡಿ ಕೊಟ್ಟಿದ್ದ ಪಕ್ಕ ವಾದ್ಯದವರು ಬೇರೆ ಹೊಸಬರು, ಅದರಲ್ಲಿಯೂ ಹಿಂದೂಸ್ತಾನಿ ಬಳಕೆ ಹೆಚ್ಚಾಗಿ ಇದ್ದವರು. ಇದೇ ಮಂಗಳಾಗೆ ಈ ಕಾರ್ಯಕ್ರಮದ ಕುರಿತು ಇದ್ದ ಆತಂಕ.


ಹಾಡಲು ಒಂದು ರೀತಿಯಲ್ಲಿ ಎಲ್ಲಾ ಮಾದರಿಗಳೂ ಇರುವಂತಹ ಲಿಸ್ಟ್ ಮಾಡಲು ಅವಳು ಆರಂಭಿಸಿದಳು. ಪುರಂದರ ದಾಸರ ‘ಲಂಬೋದರ ಲಕುಮಿಕರ’ವಂತೂ ಮೊದಲ ಕೀರ್ತನೆಯಾಗಿ ಸುಲಭವಾಗಿ ಆಯ್ಕೆಯಾಗಿ ಬಿಟ್ಟಿತು. ಮುತ್ತುಸ್ವಾಮಿ ದೀಕ್ಷಿತರದ್ದೇ ಗಣಪತಿ ಪರವಾದ ಹದಿನೈದು ಕೀರ್ತನೆಗಳು ಅವಳಿಗೆ ಸಿಕ್ಕವು. ಅದರಲ್ಲಿ ಹಂಸಧ್ವನಿ ರಾಗದ ‘ವಾತಾಪಿ ಗಣಪತಿಂ ಭಜೆ’ ಜನಪ್ರಿಯತೆಯ ಕಾರಣಕ್ಕೇ ಮೊದಲ ಆಯ್ಕೆ ಎನ್ನಿಸಿಕೊಂಡಿತು. ಇದರಲ್ಲಿ ಬರುವ ‘ಅನಾದಿ ಗುರುಗುಹ ತೋಷಿತ ಬಿಂಬಿಂ’ ಎಂಬ ಸಾಹಿತ್ಯವನ್ನು ರಘುರಾಂ ಸರ್ ‘ಹರಾದಿ ಗುರುಗುಹ’ ಎಂದು ತಿದ್ದಿದ್ದಿನ್ನು ಮಂಗಳಾ ಎಚ್ಚರಿಕೆಯಿಂದ ಗಮನಿಸಿ ಕೊಂಡಿದ್ದಳು. ಏಕೆಂದರೆ ಅವಳು ಬಲ್ಲವರೆಲ್ಲರೂ ಅದನ್ನು ‘ಅನಾದಿ’ ಎಂದೇ ಹೇಳುತ್ತಿದ್ದರು. ಹೀಗೆ ಹೇಳುವುದರಿಂದ ದ್ವಿತೀಯಾಕ್ಷರ ಪ್ರಾಸ ‘ರ’ಕ್ಕೆ ಲೋಪ ಬರುತ್ತದೆ, ಮೂಲ ಸಾಹಿತ್ಯ ಹೀಗಿರಲು ಸಾಧ್ಯವಿಲ್ಲ ಎಂದು ತಿಳಿದಾಗ ಇನ್ನಷ್ಟು ಬೆರಗಾಗಿದ್ದಳು.

ಇನ್ನೊಂದು ಮುತ್ತುಸ್ವಾಮಿ ದೀಕ್ಷಿತರ ರಚನೆ ‘ಶ್ರೀ ಮೂಲಾಧಾರ ಚಕ್ರವಿನಾಯಕ’ಯನ್ನು ಆಯ್ಕೆ ಮಾಡಿಕೊಂಡಳು. ಶ್ರೀರಾಗದ ಈ ರಚನೆಯಲ್ಲಿ ದೈವತವನ್ನು ಬಳಸಿರುವ ಕ್ರಮ ಚಾಲೆಂಜಿಂಗ್ ಎನ್ನಿಸಿ ಕೊಂಡರೂ ಈ ಸವಾಲನ್ನು ಒಪ್ಪಿ ಕೊಳ್ಳಬಹುದು ಎನ್ನಿಸಿತು. ಸ್ವಾತಿ ತಿರುನಾಳರ ‘ಪರಿಪಾಹಿ ಗಣಾಧಿಪ’ ಮತ್ತು ಗೋಪಾಲ ದಾಸರ ಹಂಸಧ್ವನಿ ರಾಗದ ಕೃತಿ ‘ವಿನಾಯಕ ನಿನುವಿನಾ ಬೋಚುಟುಕು’ ಇನ್ನೆರಡು ಮಂಗಳಾಗೆ ಪ್ರಿಯವಾದದ್ದು ಎನ್ನುವ ಕಾರಣಕ್ಕೆ ಆಯ್ಕೆಯಾದವು. ಇದರ ಜೊತೆಗೆ ಕನಕ ದಾಸರ ‘ನಮ್ಮಮ್ಮ ಶಾರದೆ’ ಎಸ್.ಜಾನಕಿ ಹಾಡಿ ಜನಪ್ರಿಯಗೊಳಿಸಿದ್ದ ‘ಗಜಮುಖನೆ ಗಣಪತಿಯೆ’ ಮತ್ತು ಲತಾ ಮಂಗೇಶ್ಕರ್ ಜನಪ್ರಿಯಗೊಳಸಿದ್ದ ‘ಸುಖದಾತಾರ ದು:ಖದಾತಾರ’ ಎಂಬ ಮರಾಠಿ ಹಾಡು ಅವರ ಪ್ಯಾಕೇಜ್‍ನಲ್ಲಿ ಸೇರಿ ಕೊಂಡವು. ಬೇರೆ ಭಾಷೆಯ ನೆಲ ಮತ್ತು ಕರ್ನಾಟಕಿ ಸಂಗೀತ ಇವೆರಡೂ ಕಾರಣದಿಂದ ಮಂಗಳಾ ಭಯಗೊಂಡಿದ್ದರೂ ಅವೆರಡೂ ಸಮಸ್ಯೆ ಆಗಲೇ ಇಲ್ಲ. ಸರಳ ರಚನೆಗಳಿಗಿಂತಲೂ ಅವಳು ಆರಿಸಿ ಕೊಂಡಿದ್ದ ಕ್ಲಿಷ್ಟಕರ ರಚನೆ ‘ಶ್ರೀ ಮೂಲಾಧಾರ ವಿನಾಯಕ’ಕಕ್ಕೇ ಹೆಚ್ಚಿನ ಮೆಚ್ಚುಗೆ ಸಿಕ್ಕಿತು. ಮಂಗಳಾಗೆ ಸಿಕ್ಕ ಬಹು ದೊಡ್ಡ ಸರ್ಟಿಫಿಕೇಟ್ ಎಂದರೆ ಅವಳಿಗಿಂತ ಮುಂಚೆ ಹಾಡಿದ್ದ ಖ್ಯಾತ ಗಾಯಕ ಜಗನ್ನಾಥ ಜೋಶಿಯವರು ಮೊದಲು ಹತ್ತು ನಿಮಿಷಕ್ಕೆ ಎಂದು ಇದ್ದರೂ ಅವಳ ಕಾರ್ಯಕ್ರಮವನ್ನು ಕೇಳಿ ಪೂರ್ತಿ ಇದ್ದು ಸಂತೋಷ ಪಟ್ಟು ಸ್ವಂತ ಇಚ್ಚೆಯಿಂದಲೇ ಸನ್ಮಾನ ಮಾಡಿದ್ದರು. ಮರಾಠಿ ಅಭಂಗ್‍ಗಳಿಗೆ ಹೆಚ್ಚು ಹೆಸರಾಗಿದ್ದ ಅವರು ಮೂಲ ಕನ್ನಡದವರೇ ಎಂದು ತಿಳಿದು ಮಂಗಳಾಗೆ ಅಚ್ಚರಿ. ‘ಬೆಂಗಳೂರಿಗೆ ಹೋಗುವುದರೊಳಗೆ ಒಮ್ಮೆ ಮನೆಗೆ ಬಂದು ಹೋಗು’ ಎಂದು ಪ್ರೀತಿಯಿಂದ ಹೇಳಿದ್ದರು. ಮಿಕ್ಸಿಂಗ್ ಕೆಲಸಗಳಿಗೆ ಮಂಗಳಾ ಇನ್ನೂ ಕೆಲವು ದಿನ ಇರಲೇ ಬೇಕಾಯಿತು. ಅಷ್ಟರಲ್ಲಿ ಜೋಷಿಯವರು ಮತ್ತೊಮ್ಮೆ ಕರೆ ಕಳಿಸಿದ್ದರಿಂದ ಮಂಗಳಾ ಕಲ್ಯಾಣ್ ನಗರದಲ್ಲಿ ಇದ್ದ ಅವರ ಮನೆಗೆ ಬಂದಿದ್ದಳು.

ಜಗನ್ನಾಥ್ ಜೋಷಿಯವರದು ಹಳೆಯ ಕಾಲದ ಬಂಗಲೆ, ಅವರ ಹೆಂಡತಿ ಮಹಾರಾಷ್ಟ್ರದವರು, ಅವರು ಪುಣೆಗೆ ಬಂದು ನೆಲೆ ನಿಂತು ಐವತ್ತು ವರ್ಷಗಳೇ ಆಗಿದ್ದವು. ಹೀಗಾಗಿ ಮಕ್ಕಳು ಯಾರಿಗೂ ಕನ್ನಡ ಬರುತ್ತಿರಲಿಲ್ಲ. ಆದರೆ ಟಿಪಿಕಲ್ ಧಾರವಾಡ ಶೈಲಿಯ ಜೋಷಿಯವರ ಕನ್ನಡ; ತುಂಬಾ ಚೆನ್ನಾಗಿಯೇ ಇತ್ತು.
‘ಸರ್, ಪುಣೆ ಹಿಂದೂಸ್ತಾನಿ ಸಂಗೀತದ ತವರು, ನಾನು ಕರ್ನಾಟಕಿ ಹಾಡಲು ಬಹಳ ಭಯ ಪಟ್ಟಿದ್ದೆ, ಆದರೆ ಇಲ್ಲಿನ ಜನ ಮೆಚ್ಚಿ ಕೊಂಡಿದ್ದು ಮಾತ್ರ ಅಲ್ಲ, ಮರುದಿನ ಮೀಡಿಯಾದಲ್ಲಿ ಕೂಡ ಒಳ್ಳೆಯ ರಿವ್ಯೂ ಬಂದಿದ್ದು ನೋಡಿ ಆಶ್ಚರ್ಯ ಅನ್ನಿಸಿತು’ ಎಂದು ತಾನೇ ಕೇಳಲೇ ಬೇಕು ಎಂದು ಕೊಂಡ ಪ್ರಶ್ನೆಯನ್ನು ಸ್ವಲ್ಪ ಅವಸರ ಮತ್ತು ಉದ್ವೇಗದಲ್ಲಿ ಕೇಳಿ ಬಿಟ್ಟಳು.

ಜಗನ್ನಾಥ್ ಜೋಶಿಯವರು ಅವಳ ಪ್ರಶ್ನೆಗೆ ಒಂದು ಕ್ಷಣ ಗಟ್ಟಿಯಾಗಿ ನಕ್ಕು ಬಿಟ್ಟರು ನಂತರ ‘ಹಿಂದೂಸ್ತಾನಿ ಮತ್ತು ಕರ್ನಾಟಕಿ ಈ ಎರಡೂ ಪದ್ದತಿಗಳ ನಡುವೆ ತೀರಾ ಭಿನ್ನವಾದದ್ದು ಅನ್ನೋ ಆಗ್ರ್ಯಮೆಂಟ್ ಇರೋ ಹಾಗೆ, ನಮ್ಮದೇ ಒರಿಜಿನಲ್ ಮ್ಯೂಸಿಕ್ ಅನ್ನೋ ಅಹಂಕಾರದ ಮಾತುಗಳೂ ಇದೆ. ಇವೆಲ್ಲಾ ಪಂಡಿತರ ಸಮಸ್ಯೆಗಳು, ಆದರೆ ನನ್ನ ಪ್ರಕಾರ ಎರಡರ ನಡುವೆ ದೊಡ್ಡ ವ್ಯತ್ಯಾಸ ಇಲ್ಲ, ಇವೆರಡಕ್ಕೂ ಭರತನ ನಾಟ್ಯಶಾಸ್ತ್ರ, ಸಂಗೀತ ರತ್ನಾಕರ ಮೊದಲಾದ ಶಾಸ್ತ್ರಗ್ರಂಥಗಳೇ ಆಧಾರ. ಸ್ವರ ಸ್ಥಾನದ ಸ್ವರೂಪ ಕೂಡ ಒಂದೇ, ಕರ್ನಾಟಕಿಯ ಹಿಂದೋಳವನ್ನು ಹಿಂದೂಸ್ತಾನಿಯಲ್ಲಿ ಮಾಲ್‍ಕೌಂಸ್ ಎನ್ನುತ್ತಾರೆ. ಎರಡೂ ಪದ್ದತಿಯಲ್ಲೂ ಇದು ಔಢವ ರಾಗವೇ, ವ್ಯತ್ಯಾಸವಿರುವುದು ನಿರ್ವಹಣೆಯಲ್ಲಿ ಮಾತ್ರ. ಹಿಂದೂಸ್ತಾನಿ ಪದ್ದತಿಯಲ್ಲಿ ಶ್ರುತಿಗೆ ಮಹತ್ವ, ಅಲ್ಲಿ ಹನ್ನೆರಡೂ ಸ್ವರಗಳನ್ನು ಆಧಾರ ಷಡ್ಜಕ್ಕೆ ಸಂವಾದಿಯಾಗಿ ನಿಲ್ಲಿಸಲಾಗುತ್ತದೆ. ಕರ್ನಾಟಕಿಯಲ್ಲಿ ಶ್ರುತಿ ಕಡೆ ಅಷ್ಟು ಗಮನವಿಲ್ಲ. ಇಲ್ಲಿ ‘ಕಂಪಿತ’ ಎನ್ನುವ ಗಮಕವಿದೆ. ಇದರಿಂದ ಪ್ರತಿಸ್ವರವೂ ಬಿಗಿಯಾಗುತ್ತದೆ, ಖಚಿತವಾಗುತ್ತದೆ, ಸೂಕ್ಷ್ಮ ಸ್ವರಗಳ ಹುಡುಕಾಟ ಸಾಧ್ಯವಾಗುತ್ತದೆ. ಕರ್ನಾಟಕಿ ಸಂಗೀತದಲ್ಲಿ ತಾಳಕ್ಕೆ ಪ್ರಾಮುಖ್ಯತೆ ಇರುತ್ತದೆ. ಕರ್ನಾಟಕ ಸಂಗೀತದಲ್ಲಿ ತಾಳಕ್ಕೆ ಬೇಕಾದ ಸಮಯ ನಿಗಧಿಯಾಗುವುದರಿಂದ ಸ್ಪಷ್ಟವಾಗಿ ನಿರ್ಣಯಿಕವಾಗಿ ಎಲ್ಲರಿಗೂ ಅನುಭವಕ್ಕೆ ಬರುವಂತೆ ಹಾಡುತ್ತಾರೆ. ಹಿಂದೂಸ್ತಾನಿಯಲ್ಲಿ ಕಾಲ ಪ್ರಮಾಣವನ್ನು ಮಾತ್ರ ನಿಷ್ಕರ್ಷೆ ಮಾಡಿ ಅದನ್ನು ಬಿಡಿ ಭಾಗ ಮಾಡದೆ ಯಥಾನಕೂಲ ಸ್ವರಗಳನ್ನು ಎಳೆದು ವಿಸ್ತರಿಸುತ್ತಾರೆ. ಇವೆರಡೂ ನಿರ್ವಹಣೆಯ ದೃಷ್ಟಿಯ ವ್ಯತ್ಯಾಸಗಳೇ ಹೊರತು; ಮೂಲ ನೆಲೆಯದಲ್ಲ.

ಹೀಗಾಗಿ ಭಾರತೀಯ ಸಂಗೀತವೆಂದರೆ ಹಿಂದೂಸ್ತಾನಿ ಮತ್ತು ಕರ್ನಾಟಕಿ ಎರಡನ್ನೂ ಒಡಗೂಡಿದ ಪರಂಪರೆಯಿಂದ ಮೂಡಿದ ಸಂಗೀತ ಪದ್ಧತಿ. ಕರ್ನಾಟಕಿ ಸಂಗೀತಗಾರರು ಹಿಂದೂಸ್ತಾನಿ ನೆಲದಲ್ಲಿ ಏಕೆ ಸೋಲ್ತಾರೆ ಅಂದರೆ ಅವರು ಇಲ್ಲಿ ಬಂದ ಕೂಡಲೇ ತಮ್ಮ ಒರಿಜಿನಾಲಿಟಿ ಬಿಟ್ಟು ಜನರನ್ನ ರಂಜಿಸೋಕೆ ಹೋಗ್ತಾರೆ, ಎಷ್ಟೋ ಸಲ ಅದು ಮಿಮಿಕ್ರಿ ಮಟ್ಟಕ್ಕೆ ಕೂಡ ಇಳಿದು ಬಿಡುತ್ತೆ, ಆದರೆ ನೀನು ಹಾಗೆ ಮಾಡಲಿಲ್ಲ, ನಿನ್ನ ಸಂಗೀತ ಏನಿದೆ ಅದನ್ನ ನಿಷ್ಟೆಯಿಂದ ಹಾಡಿದೆ. ಪುಣೆ ಜನ ಸಂಗೀತ ಪ್ರಿಯರು, ಅದನ್ನ ಇಷ್ಟ ಪಟ್ಟರು.’ ಎಂದು ಸುದೀರ್ಘವಾಗಿ ತಮ್ಮ ವಿವರಣೆಯನ್ನು ನೀಡಿದರು. ಹೀಗೆ ಮಾತು ಹಲವು ವಿಷಯಗಳ ಸುತ್ತ ಬೆಳೆಯಿತು. ಜೋಷಿಯವರ ಮನೆತನದಲ್ಲಿ ಯಾರಿಗೂ ಸಂಗೀತದ ಹಿನ್ನೆಲೆ ಇರಲಿಲ್ಲ ಎಂದು ತಿಳಿದ ಮಂಗಳಾ ಕುತೂಹಲದಿಂದಲೇ ‘ನೀವು ಶಾಸ್ತ್ರೀಯ ಸಂಗೀತಕ್ಕೆ ಹೇಗೆ ಬಂದಿರಿ’ ಎಂದು ಕೇಳಿದಳು.

‘ಎಲ್ಲಿ ಸಂಗೀತಾ ತಾಯಿ, ನಮ್ಮೂರು ಸರಸ್ವತಿಪುರ ಅಂತ ಬಳ್ಳಾರಿ ಜಿಲ್ಲೆಯೊಳಗೆ ಇದೆ. ನಮ್ಮಪ್ಪ ಗುರಪ್ಪ ಫೋಕ್ ಅರ್ಟಿಸ್ಟ್, ಇನ್ನು ಅವರ ಅಕ್ಕ ಅಂದರೆ ನನ್ನ ಸೋದರತ್ತೆ ಸಂಗೀತ ಕಲೀದೆ ಇದ್ದರೂ ಚಲೋ ಹಾಡ್ತಾ ಇದ್ದಳು. ಅವಳೇ ಹಂಗ್ ನೋಡಿದ್ರೆ ನನಗೆ ಮೊದಲ ಗುರು. ಈ ಕ್ಲಾಸಿಕಲ್‍ನ ಬೇಸ್ ಇರೋದು ಫೋಕ್‍ನಲ್ಲೇ ಅಂತ ನನಗೆ ಅನ್ನಿಸೋಕೆ ಕಾರಣವೇ ಅವಳು. ಅವಳು ಹಾಡಿದ್ದನ್ನು ನಾನು ಹಂಗೇ ಫಾಲೋ ಮಾಡ್ತಾ ಇದ್ದೆ. ನಮ್ಮ ಹಳ್ಳಿಯಿಂದ ಸ್ಕೂಲ್‍ಗೆ ಬರೊಬ್ಬರಿ ಹನ್ನೆರಡು ಕಿಲೋಮೀಟರ್ ನಡೆದೇ ಹೋಗ ಬೇಕಿತ್ತು. ನಮ್ಮ ಹಳ್ಳಿಯಿಂದಲೇ ದೊಡ್ಡ ಮಕ್ಕಳ ದಂಡು ಸ್ಕೂಲ್‍ಗೆ ಅಂತ ಮೆರವಣಿಗೆ ತರಹ ಹೋಗ್ತಾ ಇದ್ದಿವಿ, ಬಹಳ ಕಷ್ಟಪಟ್ಟು ಆರನೇ ಕ್ಲಾಸ್ ತನಕ ಬಂದೆ ಅಷ್ಟರೊಳಗೇ ಕುರಿ-ಕೋಣ ಬಿದ್ದು ಹೋಗಿದ್ದವು.’ ಎಂದು ಗಟ್ಟಿಯಾಗಿ ನಕ್ಕರು ಜೋಷಿಯವರು. ನಕ್ಕಾಗ ಕೂಡ ಅವರ ಧ್ವನಿಯಲ್ಲಿ ಸಂಗೀತದ ತರಂಗಗಳು ಎದ್ದ ಹಾಗೆ ಮಂಗಳಾಗೆ ಭಾಸವಾಗಿತ್ತು.

‘ನಾನು ಇನ್ನು ಸ್ಕೂಲ್‍ಗೆ ಹೋಗಲ್ಲ ಅಂತ ಹಠಕ್ಕೆ ಬಿದ್ದೆ, ನಮ್ಮ ದೊಡ್ಡಪ್ಪ ‘ಇವನ ಅವಾಜ್ ಭೇಷ್ ಐತಿ, ಗದುಗಿನ ಆಶ್ರಮಕ್ಕೆ ಬಿಡೋಣ’ ಅಂತ ಡಿಸೈಡ್ ಮಾಡಿದರು. ನಮ್ಮದು ಅವಿಭಕ್ತ ಕುಟುಂಬ ಅವರ ಮಾತೇ ಫೈನಲ್. 1966ನೇ ಇಸವಿ, ಆಗ 65 ರೂಪಾಯಿ ಗದುಗಿನ ಆಶ್ರಮದ ಫೀಸು. ಕನಿಷ್ಟ ಆರು ವರ್ಷ ಮತ್ತು ಹೆಚ್ಚು ಅಂತ ಹನ್ನೆರಡು ವರ್ಷ ಅಲ್ಲಿ ಇರೋದಕ್ಕೆ ಆಶ್ರಯ ಸಿಕ್ತಾ ಇತ್ತು. ಆಶ್ರಮದಲ್ಲಿ ಇರೋದಕ್ಕೆ ಜಮಖಾನ, ತಾಟು, ತಂಬಿಗೆ, ಒಂದು ವಾದ್ಯ ಮತ್ತು 65 ರೂಪಾಯಿ ಇಷ್ಟೇ ಸೇರೋದಕ್ಕೆ ಬೇಕಾಗಿದ್ದು. ಆದರೆ ಮನೆಯಲ್ಲಿ ಕಡು ಬಡತನ, ಇದ್ಯಾವುದಕ್ಕೂ ದುಡ್ಡು ಇರಲಿಲ್ಲ. ಕೊನೆಗೆ ನಾಲ್ಕು ಎಕರೆ ಹೊಲಾನ ಮೂರು ವರ್ಷಕ್ಕೆ ಅಂತ ಏಳು ನೂರು ರೂಪಾಯಿಗೆ ಅಡ ಇಟ್ಟು ದುಡ್ಡ ಹೊಂದಿಸಿದರು. ‘ಇಲ್ಲಿ ಹೆಂಗೂ ಮಳೆ ಇಲ್ಲ, ಬೆಳಿ ಇಲ್ಲ, ಬೇಸಾಯದ ಬದುಕು ಕಷ್ಟ, ನೀನೊಬ್ಬನಾದರೂ ಉದ್ದಾರ ಆಗು’ ಅಂತ ಹಿರೀಕರು ಹೀಗೆ ಮಾಡಿದರು.’ ಇದನ್ನು ಹೇಳುವಾಗ ಐವತ್ತು ವರ್ಷ ಕಳೆದಿದ್ದರೂ ಹಿರಿಯರನ್ನು ನೆನಪಿಸಿ ಕೊಂಡು ಜೋಷಿಯವರ ಕಣ್ಣಿನಲ್ಲಿ ನೀರಾಡಿದ್ದನ್ನು ಮಂಗಳಾ ಗಮನಿಸಿದಳು.


‘ಮೊದ್ಲಿಗೆ ಕಲಿಕೆ ದಿನಗಳು ಚೆನ್ನಾಗಿಯೇ ಇದ್ದವು. ಆದರೆ ದಿನಾ ಬೆಳಗಿನ ಜಾವ ನಾಲ್ಕು ಗಂಟೆಗೇ ಏಳ ಬೇಕು, ಮಳೆ ಇರಲಿ, ಚಳಿ ಇರಲಿ ಐದು ತಾಸು ಪ್ರಾಕ್ಟಿಸ್ ಮಾಡ್ಬೇಕು ಅನ್ನೋದು ನನಗೆ ಕಷ್ಟ ಅನ್ನಿಸೋಕೆ ಶುರುವಾಯಿತು. ಜೊತೆಗೆ ವಿಪರೀತ ಶಿಸ್ತು, ನಾನು ಚಿಕ್ಕ ಹುಡುಗ, ಮನೆಯಲ್ಲಿ ಬಹಳ ಮುದ್ದಿನಿಂದ ಬೆಳೆದಿದ್ದವನು. ಮೂರು ಸಲ ಆಶ್ರಮದಿಂದ ಹೇಳದೆ ಕೇಳದೆ ಮನೆಗೆ ಓಡಿ ಹೋಗಿದ್ದೆ, ಆದರೆ ಹಿರಿಯರು ಮತ್ತೆ ಮತ್ತೆ ತಂದು ಬಿಟ್ಟಿದ್ದರು. ಅದು ಆಶ್ರಮದ ಕಾನೂನಿಗೆ ವಿರುದ್ದ. ಹೀಗಿದ್ದರೂ ಅಜ್ಜಾ ಅವರು ಅಂದರೆ ಪುಟ್ಟರಾಜ ಗವಾಯಿಗಳು “ಆವಾಜ್ ಚಲೋ ಐತಿ, ಹುಡುಗ ಚೂಟಿ ಇದ್ದಾನ ಅಂತ್ಹೇಳಿ ಕ್ಷಮಾ ಮಾಡಿ” ಮತ್ತೆ ಆಶ್ರಮದೊಳಗೆ ಸೇರಿಸಿಕೊಂಡರು.’ ಇದನ್ನು ಹೇಳುವಾಗ ಜೋಷಿಯವರ ಕಂಠದಲ್ಲಿ ತುಂಬು ಕೃತಜ್ಞತೆ ಕಾಣಿಸ್ತಾ ಇತ್ತು.


“ಅಲ್ಲೋ! ಹಿಂಗ್ಯಾಕ್ ಬಿಟ್ಗೊಟ್ಟು ಬಿಟ್ಗೊಟ್ಟು ಆಶ್ರಮನ್ಯಾಗಿಂದ ಓಡಿ ಹೋಗ್ತಿಯೋ ತಮ್ಮಾ’ ಅಂತ ಅಜ್ಜಾರು ಪ್ರೀತಿಯಿಂದಲೇ ತಲೆ ಸವರಿ ಕೇಳಿದರು. ನನಗೆ ಏನು ಹೇಳ ಬೇಕು ತಿಳಿಯದೆ ‘ಮನ್ಯಾಗ ಭಾಳ ಬಡತನರೀ, ನಾನೂ ಒಂದೀಟ್ ದುಡದ್ರ ಸಹಾಯ ಆಕ್ಕೇತಿ’ ಅಂದೆ. ಅವರು ನಕ್ಕು ‘ಮೊದಲ ನೀ ಸಂಗೀತದ ಅಭ್ಯಾಸ ಚಲೋತ್ನಾಗ್ ಮಾಡು, ಅಂದಾಗ ನಿನಗ ಎಲ್ಲಾರ್ನೂ ಸಾಕೋ ಶಕ್ತಿ ಬರತೈತಿ’ ಅಂದರು. ಅದೇ ಕೊನೆ ನಾನು ಮತ್ತೆ ಓಡಿ ಹೋಗಲಿಲ್ಲ. ನಮ್ಮ ಗುರುಗಳು ಅಂದರೆ ಸಂಗೀತದ ಕಣಜ ಇದ್ದ ಹಾಗೆ, ಒಂದು ರಾಗ ಕಲಿಸಿದರೆ ಹತ್ತು ರಾಗ ಸಲೀಸಾಗಿ ಬರ್ತಾ ಇತ್ತು.. ಗುರು-ಶಿಷ್ಯ ಸಂಬಂಧ ಅಂದರೆ ಅವರದು ಮಾಡಲ್! ಸಲಿಗೆಯೂ ಇಲ್ಲ, ಕಟ್ಟು ನಿಟ್ಟು ಕೂಡ ಇಲ್ಲ. ಬೆಳಗಾಂನಲ್ಲಿ ಒಂದು ಪ್ರೋಗ್ರಾಂ ಹಾಡು ಹೋಗು ಅಂತ ಗುರುಗಳೇ ಕಳುಹಿಸಿದರು. ಗುರುಗಳು ಕಲಿಸಿದ ಯಮನ್, ಮಾಲ್‍ಕೌಂಸ್, ಕೇದಾರ್, ಅಹಿರ್ ಭೈರವ್ ಎಲ್ಲವನ್ನೂ ಬರೊಬ್ಬರಿ ಹಾಡಿದೆ. ಅವಾಜ್ ಛಲೋ ಅದ, ಆದ್ರ ಶಾಸ್ತ್ರದ ಪರಿಚಯ ಬರೋಬ್ಬರಿ ಆಗ ಬೇಕು ಅನ್ನೋ ಮಾತು ಬಂತಂತೆ, ಏಕೆ ಅಂತ ನನ್ನನ್ನು ಗುರುಗಳು ಕೇಳಿದರು. ‘ಇಲ್ರೀ, ಬರೋಬ್ಬರಿ ಪದ್ದತಿ ಪ್ರಕಾರನ ಹಾಡಿದ್ನಿ, ನೀವು ಕಲಿಸಿದ ರಿಯಾಜ್ ತಪ್ಪಿಸಿಲ್ಲ’ ಎಂದೆ. ಗುರುಗಳು ಏನೂ ಹೇಳಲಿಲ್ಲ. ಎರಡು ದಿನ ಬಿಟ್ಟು ಮತ್ತೆ ಹೇಳಿ ಕಳುಹಿಸಿದರು. ‘ಅಹಿರ್ ಭೈರವ್ ಹಾಡು’ ಎಂದರು. ಈ ರಾಗಕ್ಕೆ ನಿಮ್ಮ ಕರ್ನಾಟಕಿಯಲ್ಲಿ ಏನು ಅಂತ ಕರೆಯುತ್ತೀರಿ.’ ಎಂದು ತಟಕ್ಕನೆ ಮಾತನ್ನು ನಿಲ್ಲಿಸಿ ಜೋಶಿಯವರು ಕೇಳಿದರು. ಮಂಗಳಾಗೆ ಇದ್ದಕಿದ್ದ ಹಾಗೆ ಬಂದ ಅವರ ಪ್ರಶ್ನೆಯಿಂದ ಗಲಿಬಿಲಿ ಆಯಿತಾದರೂ ಸಾವರಿಸಿಕೊಂಡು ಕೊಂಚ ಯೋಚಿಸಿ ‘ಚಕ್ರವಾಕ’ ಎಂದಳು. ಜೋಷಿಯವರ ಕಣ್ಣಲ್ಲಿ ಒಂದು ಮಿಂಚು ಕಾಣಿಸಿಕೊಂಡಿತು. ‘ಹೌದು, ‘ಚಕ್ರವಾಕ’! ಅಂದು ಅವರು ಹೇಳಿದ ಕ್ರಮದಲ್ಲಿಯೇ ಅವರಿಗೆ ಕರ್ನಾಟಕಿ ಪ್ರವೇಶ ಕೂಡ ಇದೆ ಎನ್ನುವುದು ಮಂಗಳಾಗೆ ಖಚಿತವಾಯಿತು. ಅವಳ ಗೊಂದಲ ಗಮನಿಸಿದಂತೆ ಒಂದು ಕ್ಷಣ ಸುಮ್ಮನಿದ್ದ ಜೋಷಿ ಮತ್ತೆ ಮಾತನ್ನು ಮುಂದುವರೆಸಿದರು.

‘ಅಹಿರ್ ಹಾಡುವಾಗ ನಿಷಾದದಲ್ಲಿ ನಿಲ್ಲಿಸು ಅಂತ ಗುರುಗಳು ಹೇಳಿದರು, ನಿಲ್ಲಿಸಿದಾಗ ನಕ್ಕು, ಇಲ್ಲಿ ಬರೋದು ಶುದ್ಧ ನಿಷಾಧ ಅಲ್ಲ ಕೋಮಲ ನಿಷಾದ. ಶಾಸ್ತ್ರದ ಕಲಿಕೆ ಅಂದರೆ ಹೀಗೆ, ಒಂದು ಸ್ವರದ ವ್ಯತ್ಯಾಸ ರಾಗದ ಸ್ವರೂಪವನ್ನೇ ಬದಲಾಯಿಸಿ ಬಿಡುತ್ತೆ ಎಂದು ಹೇಳಿ ನಂತರ ಇದಕ್ಕೊಂದು ಕಥೆ ಇದೆ ಅಂತ ಮಾತನ್ನು ಮುಂದುವರೆಸಿದರು. ಭಾಗವತದಲ್ಲಿ ಶ್ರೀಕೃಷ್ಣ ಹಸುಗಳನ್ನು ಕರೆದುಕೊಂಡು ಕಾಡಿಗೆ ಮೇಯಿಸಲು ಹೋಗುತ್ತಿದ್ದ ಅನ್ನೋದು ನಿನಗೆ ಗೊತ್ತು ತಾನೆ? ಆಗ ಅವನು ಕೊಳಲನ್ನು ನುಡಿಸುತ್ತಾ ಇದ್ದನಂತೆ ಒಂದು ಸಲ ಭೈರವ್ ನುಡಿಸಲು ಆರಂಭಿಸಿದಾಗ ಆಕಸ್ಮಾತ್ ಸ್ವರ ಜಾರಿ ದೈವತ ಶುದ್ಧವಾಗಿ ಬಿಟ್ಟಿತು. ನಂತರ ನಿಷಾದ ಕೋಮಲವಾಯಿತು, ಭೈರವದಲ್ಲಿ ದೈವತ ಕೋಮಲ, ನಿಷಾಧ ಶುದ್ಧ. ಇದು ಬೇರೆ ಅನ್ನಿಸಿ ಕೃಷ್ಣ ಗೆಳೆಯರನ್ನು ಕೇಳಿದ. ಅವರು ಈ ರಾಗ ಚೆನ್ನಾಗಿದೆ ಎಂದರು. ಸಂಸ್ಕøತದಲ್ಲಿ ಅಭಿರ ಎಂದರೆ ಗೊಲ್ಲ, ಅದು ಅಹಿರವಾಗಿ ಹೊಸ ರಾಗ ಹುಟ್ಟಿತು. ಇದರಲ್ಲಿ ನಿಷಾಧ ಹಾಡೋದೇ ದೊಡ್ಡ ಚಾಲೆಂಜ್, ಅದಕ್ಕ್ ಆಗ ಗರುಗಳಂದಿದ್ರು “ ನೀ ತಪ್ಪಿದ್ದ ಅಲ್ಲಿ! ಅದಕ್ಕ ಮಂದಿ ಶಾಸ್ತ್ರ ತಿಳಿಬೇಕು ಅಂದಾರ, ಒಂದು ಮಾತು ಹೇಳ್ತೀನು ಕೇಳು, ಈ ರಾಗ ಅನ್ನೋದು ಅದಲ್ಲಾ! ಅದು ಪ್ರೇಯಸಿ ಹಾಂಗ, ಕಾಡಿಸ್ತೈತಿ, ಆಡಸ್ತೈತಿ, ದೂರ ತಳ್ಳತೈತಿ, ವಶೀಲಿ ಬೇಡತ್ಯತಿ. ಅದ್ರ ನೀ ಒಲುಸ್ಕೊಂಡಿ ಅಂದ್ರ ಹೇಂಣ್ತಿ ಹಾಂಗ ಜೊತಿಯಾಗತೈತಿ” ಎಂದು ಜೋಷಿಯವರು ಒಂದು ಕ್ಷಣ ಮೌನವಾಗಿ ‘ಒಂದು ಹಳೆ ಚಿತ್ರಗೀತೆ ಇದೆ ಮನ್ನಾಡೆ ಹಾಡಿರೋದು ಈ ರಾಗದಲ್ಲಿ ‘ಪೂಛೋನ ಕೈಸೇ ಮೇನೆ, ರೈ ನ ಬಿತಾಯಿ’ ಅಂತ ಅದರಲ್ಲಿ ‘ಅಪನೇ ಜೀವನಕೀ ಉಲಝನಕೋ ಕೈಸೇ ಮೇ ಸುಲ ಝಾಂವೋ’ ಎನ್ನುವಲ್ಲಿ ಅಹಿರ್ ಭೈರವಿಯ ಆಳದಲ್ಲಿನ ವಿಷಾದ ಗಾಢವಾಗಿ ಚಿಮ್ಮಿದೆ.’ ಎಂದರು.
ಜೋಷಿಯವರಂತಹ ಹಿರಿಯ ಸಂಗೀತಗಾರರು ಚಿತ್ರಗೀತೆ ಕುರಿತು ಮಾತಾಡಿದ್ದು ಮಂಗಳಾಗೆ ಅಚ್ಚರಿ ಉಂಟು ಮಾಡಿತ್ತು. ಅವರು ಚಿತ್ರಗೀತೆಗಳನ್ನು ಕೂಡ ಗಂಭೀರವಾಗಿ ಪರಿಗಣಿಸುತ್ತಾರೆ ಅನ್ನವುದು ಕೊಟ್ಟ ಉದಾಹರಣೆಯಲ್ಲಿಯೇ ಸ್ಪಷ್ಟವಾಗಿತ್ತು. ಚಂದ್ರಪ್ಪ ಗೌಡರ ಪರಿಚಯ ಆದ ನಂತರ ಚಿತ್ರಗೀತೆಗಳಲ್ಲಿನ ರಾಗಗಳ ಬಳಕೆಯ ಬಗ್ಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾ ಇದ್ದಳು. ಅದೂ ಕೂಡ ಒಂದು ಕುತೂಹಲದ ಅಧ್ಯಯನ ಎಂದು ಅವಳಿಗೆ ಅನ್ನಿಸಿತ್ತು. ಬೇರೆ ಬೇರೆ ರಾಗಗಳಲ್ಲಿ ಬಂದಿರುವ ಚಿತ್ರಗೀತೆಗಳ ಒಂದು ಪಟ್ಟಿಯನ್ನೂ ಕೂಡ ತನಗೆ ತಿಳಿದ ಮಟ್ಟಿಗೆ ಮಾಡ್ತಾ ಇದ್ದಳು.
ಅವಳ ಈ ಯೋಚನೆಗೆ ಹೊಂದುವಂತೆ ಜೋಷಿಯವರು ಇದ್ದಕಿದ್ದ ಹಾಗೆ ‘ಕನ್ನಡದಲ್ಲಿ ಈ ರಾಗದಲ್ಲಿ ಬಂದಿರುವ ಕೆಲವು ಚಿತ್ರಗೀತೆಗಳು ನೆನಪಿದ್ದರೆ ಹೇಳು’ ಎಂದು ಬಿಟ್ಟರು. ಅವರು ಗಂಭೀರವಾಗಿ ಕೇಳ್ತಾ ಇದ್ದಾರೋ ಇಲ್ಲವೆ ಹಾಸ್ಯ ಮಾಡ್ತಾ ಇದ್ದಾರೋ ತಿಳಿಯದೆ ಮಂಗಳಾ ಗೊಂದಲಕ್ಕೆ ಒಳಗಾದಳು. ಈ ನಡುವೆ ಅವಳು ಹಾಡುಗಳನ್ನು ಕೂಡ ನೆನಪು ಮಾಡಿ ಕೊಳ್ತಾ ಇದ್ದಳು. ಅವರ ಮುಖ ಭಾವ ನೋಡಿದರೆ ಸಾಕಷ್ಟು ಗಂಭೀರವಾಗಿಯೇ ಈ ಪ್ರಶ್ನೆ ಕೇಳಿದ್ದಾರೆ ಎನ್ನಿಸಿ ‘ಶ್ರೀನಿವಾಸ ಕಲ್ಯಾಣ’ ಸಿನಿಮಾದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ‘ಪವಡಿಸು ಪರಮಾತ್ಮ’ ಅನ್ನೋ ಹಾಡಿದೆ. ಅದು ದೇವರ ಜೋಗುಳ, ಪೂರ್ತಿ ಈ ರಾಗದಲ್ಲಿಯೇ ಹೋಗುತ್ತೆ, ‘ನಾರಿ ಮುನಿದರೆ ಮಾರಿ’ ಸಿನಿಮಾದಲ್ಲಿ ‘ಗೋಪಿಲೋಲ ಹೇ ಗೋಪಾಲ’ ಅಂತ ಮೀರಾ ಭಜನ್ ಸ್ಟೈಲ್‍ನಲ್ಲಿ ಪಿ.ಸುಶೀಲಾ ಹಾಡಿರೂ ಹಾಡಿದೆ. ‘ದೀಪಾ’ ಸಿನಿಮಾದಲ್ಲಿ ‘ಕಂಡ ಕನಸು ನನಸಾಗಿ’ ಅಂತ ವಾಣಿ ಜಯರಾಂ ಹಾಡಿರುವ ಹಾಡಿದೆ, ಇನ್ನೊಂದು ‘ಕಿಟ್ಟು ಪುಟ್ಟು’ ಸಿನಿಮಾದ್ದು ‘ಮಾತೊಂದು ಹೇಳುವೆ ಹತ್ತಿರ ಹತ್ತಿರ ಬಾ’ ಇದರಲ್ಲಿ ನಿಷಾಧ ಕೊಂಚ ಬದಲಾಗುತ್ತೆ’ ಎಂದು ತನಗೆ ತಕ್ಷಣಕ್ಕೆ ನೆನಪಾದ ಹಾಡುಗಳನ್ನು ಹೇಳಿದಳು.
ಜಗನ್ನಾಥ ಜೋಷಿಯವರು ‘ನಾನು ಪವಡಿಸು ಪರಮಾತ್ಮ ಕೇಳಿದ್ದೇನೆ, ಗೋಪಿಲೋಲ ಕೂಡ ಕೇಳಿದ ನೆನಪು ಹಾಗೇ ಪಿ.ಸುಶೀಲಾ ಅವರೇ ಹಾಡಿರೋ ‘ವೆಂಕಟಾಚಲವಾಸ, ಹೇ ಶ್ರೀನಿವಾಸ’ ಅಂತ ಒಂದು ಹಾಡು ಕೇಳಿದ ನೆನಪು. ನಾನು ಈ ಪ್ರಶ್ನೆ ನಿನ್ನ ಹತ್ತಿರ ಕೇಳಿದ್ದು ಉದ್ದೇಶ ಪೂರ್ವಕವಾಗಿ, ನಿನ್ನನ್ನು ಇಲ್ಲಿಗೆ ಬರೋದಕ್ಕೆ ಹೇಳಿದ್ದೂ ಕೂಡ ಅದೇ ಕಾರಣಕ್ಕೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಮೊದಲ ಭಾಗದಲ್ಲಿ ನಾನು ದೆಹಲಿಯಲ್ಲಿ ‘ಮ್ಯೂಸಿಕ್ ಇನ್ ಸಿನಿಮಾ’ ಅಂತ ಒಂದು ಸಿಂಪೋಸಿಯಂ ಮಾಡ್ತಾ ಇದ್ದೀನಿ, ಅದಕ್ಕೆ ಟೈಟಲ್ ಇನ್ನೂ ಫೈನಲ್ ಆಗ್ಬೇಕು, ಎಲ್ಲಾ ಭಾಷೆಯಲ್ಲಿಯೂ ಕೂಡ ಸಿನಿಮಾದಲ್ಲಿ ಮ್ಯೂಸಿಕ್‍ನ ಪ್ರಯೋಗಗಳು ಹೇಗೆ ಆಗಿವೆ ಅನ್ನೋ ಲೆಕ್ಚರ್ ಮತ್ತು ಡಮಾನ್‍ಸ್ಟ್ರೇಷನ್ ನನ್ನ ಉದ್ದೇಶ. ಬಹುತೇಕ ಎಲ್ಲಾ ಲಾಂಗ್ವೇಜ್ ಸ್ವೀಕರ್‍ಗಳು ಫೈನಲ್ ಆಗಿದ್ದಾರೆ, ಕನ್ನಡದಿಂದ ನೀನು ಮಾತಾಡ್ಬೇಕು’ ಎಂದರು.

ಅವರು ಹೀಗೆ ಹೇಳಿದ ತಕ್ಷಣ ಮಂಗಳಾ ಗಾಭರಿಯಿಂದ ಎದ್ದು ನಿಂತು ಬಿಟ್ಟಳು. ‘ಸರ್, ನನಗೆ ಅಂತಹ ಪಾಂಡಿತ್ಯ ಇಲ್ಲ, ನಮ್ಮಲ್ಲಿ ಡಾ.ಚಂದ್ರಪ್ಪ ಗೌಡ ಅಂತ ಇದ್ದಾರೆ ಅವರು ಪಿ.ಎಚ್.ಡಿ ಸಬ್ಜಕ್ಟ್ ಇದೇ, ಅವರು ಇನ್‍ಫರ್‍ಮೇಷನ್ ಡಿಪಾರ್ಟಮೆಂಟ್ ಡೈರೆಕ್ಟರ್, ಗವರ್ನಮೆಂಟ್ ಆಫಿಷಿಯಲ್ ಆದರೆ ಇಂತಹದಕ್ಕೆ ಪರ್ಮಿಷನ್ ಸಿಕ್ಕುತ್ತೆ, ಅವರೇ ಇದಕ್ಕೆ ಸೂಕ್ತರು’ ಎಂದಳು. ಅವಳ ಹಣೆಯ ಮೇಲೆ ಸ್ಪಷ್ಟವಾಗಿ ಬೆವರು ಕಾಣಿಸಿ ಕೊಂಡಿತ್ತು. ಎದೆ ಅವಳಿಗೇ ಕೇಳುವಂತೆ ಗಟ್ಟಿಯಾಗಿ ಹೊಡೆದು ಕೊಳ್ಳುತ್ತಾ ಇತ್ತು.
ಜಗನ್ನಾಥ ಜೋಷಿ ನಕ್ಕು ‘ಮೊದಲು ನೀನು ಕುಳಿತುಕೋ, ಒಂದು ಗ್ಲಾಸ್ ನೀರು ಕುಡಿ’ ಎಂದರು. ನಂತರ ‘ನಾನು ಮೊದಲು ಕಾಂಟ್ಯಾಕ್ಟ್ ಮಾಡಿದ್ದೇ ಅವರನ್ನು, ಆದರೆ ನಿನ್ನ ಹೆಸರನ್ನು ಸಜೆಸ್ಟ್ ಮಾಡಿದರು. ಜೊತೆಗೆ ನೀನು ಪುಣೆಯಲ್ಲಿ ಇರೋ ವಿಷಯ ಕೂಡ ಹೇಳಿದರು. ನಿನಗೆ ಸಂಗೀತ ಗೊತ್ತು, ನಿನ್ನ ಇಂಗ್ಲೀಷ್ ತುಂಬಾ ಚೆನ್ನಾಗಿದೆ. ವಿಷ್ಯೂವಲ್ ಮೀಡಿಯಾ ಕೂಡ ಚೆನ್ನಾಗಿ ಗೊತ್ತು, ಮತ್ತೇಕೆ ಭಯ’ ಎಂದರು.
‘ಸರ್, ಅಲ್ಲಿ ಎಷ್ಟೊಂದು ದೊಡ್ಡವರು ಬಂದಿರ್ತಾರೆ, ಅವರ ನಡುವೆ ಕನ್ನಡ ಸಿನಿಮಾ ರೆಪ್ರೆಸೆಂಟ್ ಮಾಡೋ ಅರ್ಹತೆ ನನಗೆ..’ಎಂದು ಮಂಗಳಾ ರಾಗ ಎಳೆದಳು.
ಜಗನ್ನಾಥ್ ಜೋಷಿಯವರು ಕೆಲವು ಹೊತ್ತು ಮೌನವಾದವರು.. ‘ನಿನಗೂ ಹದಿನೈದು ದಿನಗಳಿಂದ ಹೋಟಲ್ ಊಟ ಮಾಡಿ ಬೇಜಾರಾಗಿರುತ್ತೆ ಅನ್ನೋದು ನನಗೆ ಗೊತ್ತು, ಅದಕ್ಕೆ ನಮ್ಮ ಧಾರವಾಡ ಕಡೆ ಭಕ್ರಿ ಮಾಡಿಸಿದ್ದೇನೆ, ಊಟಕ್ಕೆ ಏನಿಲ್ಲ ಅಂದರೂ ಇನ್ನೂ ಅರ್ಧ-ಮುಕ್ಕಾಲು ಗಂಟೆ ಬೇಕು, ಅದರೊಳಗೆ ನಿನಗೆ ಒಂದು ಕಥೆ ಹೇಳ್ಬೇಕು’ ಎಂದು ತಮ್ಮಷ್ಟಕ್ಕೇ ತಾವು ಹೇಳಿ ಕೊಂಡರು.

ಒಂದು ಹತ್ತು ನಿಮಿಷ ಬಿಟ್ಟು ಜೋಷಿಯವರು ತಮ್ಮ ಮಾತನ್ನು ಮುಂದುವರೆಸಿದರು. ‘ಇಂದೂರಿನ ಸಮೀಪದ ಅರಣ್ಯ ಪ್ರದೇಶದಲ್ಲಿ ನಾನು ಈಗ ಸುಮಾರು ನಲವತ್ತು ವರ್ಷಗಳ ಕೆಳಗೆ ಸುಮ್ಮನೆ ಸಂಚಾರ ಮಾಡ್ತಾ ಇದ್ದೆ, ಆಗ ಭಗ್ನದೇಗುಲದಲ್ಲಿ ಒಬ್ಬ ಸಂನ್ಯಾಸಿಯು ಹಾಡ್ತಾ ಇರೋದು ನನ್ನ ಕಣ್ಣಿಗೆ ಕಾಣಿಸಿತು, ಅವನ ವಾಯ್ಸ್‍ನಲ್ಲಿ ಇದ್ದ ಡೆಪ್ತ್ ನನ್ನನ್ನು ಆಕರ್ಷಣೆ ಮಾಡ್ತು, ಆಗ ನನ್ನ ಕಣ್ಣಿಗೆ ಆ ಭಗ್ನ ದೇಗುಲವು ಸಂನ್ಯಾಸಿಯ ಹಾಡುಗಾರಿಕೆಯಿಂದ ಪ್ರಜ್ವಲಿಸುತ್ತಿರುವ ಜ್ಯೋತಿ ತರಹ ಕಾಣಿಸಿತು. ನಾನು ಸಹಜವಾಗಿಯೇ ಆ ಸಂನ್ಯಾಸಿಯ ಬಳಿ ಸಂಗೀತವನ್ನು ಕಲಿಯೋಕೆ ಇಷ್ಟಪಟ್ಟೆ, ಆದರೆ ಅವನು ನನ್ನ್ನ ಶಿಷ್ಯ ಅಂತ ಒಪ್ಪಿಕೊಳ್ತಾನ ಅನ್ನೋ ಡೌಟ್ ಬಂತು. ಸಂನ್ಯಾಸಿಯ ಬಳಿ ಹೋಗಿ ಮಾತನಾಡಿದಾಗ; ಅವನೇನು ಇದರ ಬಗ್ಗೆ ಇಂಟರೆಸ್ಟ್ ತೋರಿಸಲಿಲ್ಲ. ಕೊನೆಗೆ ನಾನು ಶಿಷ್ಯತ್ವಕ್ಕಾಗಿ ತಾವು ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ದರಿರುವುದಾಗಿ ತಿಳಿಸಿದೆ. ‘ಇಲ್ಲ’ ಎಂದು ದೃಢವಾಗಿ ಹೇಳಿದ ಆ ಸಂನ್ಯಾಸಿ; ‘ನಿಮ್ಮ ಸ್ವರ ದೃಢವಾಗಿದ್ದರೆ ಸಹಜವಾಗಿಯೇ ನೀವು ಸಂನ್ಯಾಸಿಯಾಗುತ್ತೀರಿ, ನಂತರ ಯಾವ ಲೌಕಿಕ ಬಂಧನಗಳೂ ನಿಮಗೆ ಉಳಿದಿರುವುದಿಲ್ಲ’ ಅಂತ ಹೇಳಿ ಬಿಟ್ಟ. ನಾನು ಬಿಡದೆ ಅವನ ಬೆನ್ನು ಹತ್ತಿ ಒಂದು ವರ್ಷ ಸಂಗೀತ ಕಲಿತೆ. ಅವನು ಎರಡು-ಮೂರು ದಿನ ಹಾಡ್ತಾನೆ ಇರಲಿಲ್ಲ. ಸುಮ್ಮನೆ ಭಂಗಿ ಸೇದ್ತಾ ಕುಳಿತಿರ್ತಾ ಇದ್ದ, ನನ್ನ ಹತ್ತಿರ ಕಾಲು ಒತ್ತಿಸಿ ಕೊಳ್ತಾ ಇದ್ದ. ಆದರೆ ಇದ್ದಕಿದ್ದ ಹಾಗೆ ಹಾಡೋಕೆ ಶುರುಮಾಡ್ತಾ ಇದ್ದ, ನಾನು ಅದಕ್ಕೆ ಕಾಯ್ತಾ ಇದ್ದೆ, ತಮಾಷೆ ಅಂದರೆ ಅವನು ಹೆಚ್ಚಿಗೆ ಹಾಡ್ತಾ ಇದ್ದಿದ್ದು ಚಿತ್ರಗೀತೆಗಳನ್ನೇ, ಅದರಲ್ಲಿಯೇ ನಿಜವಾದ ಸಂಗೀತ ಇದೆ ಅನ್ನುತ್ತಾ ಇದ್ದ. ನಾನು ಅವನ ಬಳಿ ಕಲಿತಿದ್ದು ಏನು ಅಂದರೆ ಸ್ವರ ಗಟ್ಟಿಯಾಗಿದ್ದರೆ ಮಾತ್ರ ಸಂಗೀತ ನಿಮ್ಮ ಕೈಗೆ ಸಿಕ್ಕುತ್ತೆ.

ಈ ಕಥೆ ನಿನಗೆ ಏಕೆ ಹೇಳಿದೆ ಗೊತ್ತಾ, ನಿನ್ನ ಸ್ವರ ಸ್ಥಾನ ಬಹಳ ದೃಢವಾಗಿದೆ, ಇತ್ತೀಚೆಗೆ ಇಂತಹ ಶಕ್ತಿ ಇರೋರನ್ನ ನಾನು ಹೊಸ ಪೀಳಿಗೆಯಲ್ಲಿ ಅಪರೂಪಕ್ಕೆ ನೋಡ್ತಾ ಇದ್ದೀನಿ, ನೀನು ಬಹಳ ಎತ್ತರಕ್ಕೆ ಹೋಗ ಬೇಕು.’ ಇಷ್ಟು ಮಾತನ್ನ ಮುಗಿಸುವಾಗ ಅವರು ಭಾವುಕರಾಗಿದ್ದರು. ಅವರು ತನ್ನನ್ನು ಹೊಗಳಿದ್ದರಿಂದ ಆಗಿದ್ದ ಮುಜುಗರ, ವಹಿಸಿದ ಸವಾಲಿನಿಂದ ಆದ ಹೆದರಿಕೆ, ಹೇಳಿದ ಕಥೆಯಿಂದ ಉಂಟಾಗಿದ್ದ ಅಚ್ಚರಿ ಎಲ್ಲವೂ ಸೇರಿ ಒಂದು ರೀತಿಯ ವಿಚಿತ್ರ ಗೊಂದಲದಲ್ಲಿ ಮಂಗಳಾ ಕುಳಿತಿದ್ದಳು.

ಎನ್.ಎಸ್. ಶ್ರೀಧರಮೂರ್ತಿ ಅವರ ಹೊಸ ಕಾದಂಬರಿ ನಾದದ ನೆರಳು ಬಗ್ಗೆ ಓದುಗರ ಪ್ರತಿಕ್ರಿಯೆ..

ನಾದದ ಅಲೆಗಳ ಕೃತಿ

★ ಸುಜಾತರಾವ್, ಮೈಸೂರು


ನಾದದ ನೆರಳು ….ಹೆಸರೇ ಹೇಳುವಂತೆ ನಾದದ ನೆರಳಿನಲ್ಲಿಯೇ ಬೆಳೆಯುವ ಕಾದಂಬರಿ. ಈ ಕಾದಂಬರಿಯ ತುಂಬಾ ನಾದದ ಅಲೆಗಳು ಮೇಳೈಸಿವೆ.. ಸುಂದರ ಮಲೆನಾಡಿನ ಸ್ನಿಗ್ಧ ಸೌಂದರ್ಯ, ನಿಗೂಢತೆ, ಸಂಕೀರ್ಣತೆ ಎಲ್ಲವನ್ನೂ ಕಾದಂಬರಿಕಾರರಾದ ಶ್ರೀಧರ ಮೂರ್ತಿ ಅವರು ಮನೋಜ್ಞವಾಗಿ ಹಿಡಿದಿಟ್ಟಿದ್ದಾರೆ.
.ಕಾದಂಬರಿಯ ಪ್ರಧಾನಪಾತ್ರ ಮಂಗಳಾ ಮಲೆನಾಡಿನ ಚಿಕ್ಕಹಳ್ಳಿ ಹರಿಹರಪುರದಿಂದ ಬೆಂಗಳೂರು ಮಹಾನಗರಿಗೆ ಬಂದು ತನ್ನ ಬದುಕನ್ನು ರೂಪಿಸಿಕೊಳ್ಳುವ ಕ್ರಮ ಗಮನಸೆಳೆಯುತ್ತದೆ. ಅವಳು ಪ್ರತಿಹಂತದಲ್ಲಿಯೂ ಎದುರಿಸುವ ಸವಾಲುಗಳು ಓದುಗರಲ್ಲಿ ಕುತೂಹಲವನ್ನು ಮೂಡಿಸುತ್ತವೆ. ದೊರಕಿದ ಅವಕಾಶಗಳನ್ನು ಮೆಟ್ಟಿಲಾಗಿ ಬಳಸಿಕೊಂಡು ಅವಳು ಮೇಲೇರಿದ ರೀತಿ ಮೆಚ್ಚಿಗೆಯಾಗುವುದು ಮಾತ್ರವಲ್ಲ ಬೇರೆಯವರಿಗೂ ಪ್ರೇರಣೆಯಾಗಿದೆ. ಮಂಗಳಾ ತಾನು ನಡೆದು ಬಂದ ಹಾದಿಯನ್ನು ಕೊನೆಯವರೆಗೂ ಮರೆಯದೆ ಬೆಳೆದ ಕ್ರಮ ಗಮನ ಸೆಳೆಯುವಂತಿದೆ. ಈ ಕಾದಂಬರಿಯ ಎಲ್ಲಾ ಪಾತ್ರಗಳೂ ಕೂಡ ಕಾಡುವಂತೆ ಮೂಡಿಬಂದಿವೆ. ತಮ್ಮದೇ ಆದ ರೀತಿಯಲ್ಲಿ ಅವುಗಳು ಓದುಗರ ಮನಸ್ಸಿನಲ್ಲಿ ಇಳಿದು ಕಾದಂಬರಿಯ ಕಥನ ಆಪ್ತವಾಗುವಂತೆ ಮಾಡುತ್ತವೆ.
ಮೂರ್ತಿಯವರು ಮಲೆನಾಡು ಬಿಟ್ಟು ಅನೇಕ ವರ್ಷವಾದರೂ ಕಾದಂಬರಿಯಲ್ಲಿ ಅಲ್ಲಿನ ವಾತಾವರಣವನ್ನು ತುಂಬಾ ಸುಂದರವಾಗಿ ವರ್ಣಿಸಿದ್ದಾರೆ. ಅಲ್ಲಿನ ಸಮಸ್ಯೆಗಳ ಕುರಿತೂ ಕೂಡ ಬೆಳಕು ಚೆಲ್ಲುವ ಪ್ರಯತ್ನ ಕಾದಂಬರಿಯಲ್ಲಿರುವುದು ವಿಶೇಷ. ಇದರ ಜೊತೆಗೆ ಶ್ರೀವಿದ್ಯೆಯ ಬಗೆಗಿನ ಅವರ ಜ್ಞಾನ ನನ್ನನ್ನು ಮೂಕ ವಿಸ್ಮಿತಗೊಳಿಸಿದೆ. ಅದನ್ನು ಕಾದಂಬರಿಯೊಳಗೆ ಅಳವಡಿಸಿರುವ ಕ್ರಮ ಕೂಡ ವಿಶಿಷ್ಟವಾಗಿದೆ. ಸಂಗೀತದ ಇನ್ನೊಂದು ನೆಲೆಯಾಗಿ ಶ್ರೀಚಕ್ರ ಈ ಕಾದಂಬರಿಯನ್ನು ಆವರಿಸಿಕೊಂಡಿದೆ. ಸಂಗೀತದ ಬಗೆಗಂತೂ ಮೂರ್ತಿಯವರ ಅಪಾರವಾದ ಅಧ್ಯಯನ ಕಾದಂಬರಿಯ ಉದ್ದಕ್ಕೂ ಕಂಡುಬರುತ್ತದೆ. ಅದು ಒಂದು ರೀತಿಯಲ್ಲಿ ಕಾದಂಬರಿಯ ವಿನ್ಯಾಸ ಕೂಡ ಆಗಿದೆ. ವಿಶೇಷ ಎಂದರೆ ಇಷ್ಟೆಲ್ಲಾ ಶಾಸ್ತ್ರೀಯ ಸಂಗತಿಗಳಿದ್ದರೂ… ಕಾದಂಬರಿಯು ಮೊದಲಿನಿಂದ ಕೊನೆಯವರೆಗೂ ಸ್ವಾರಸ್ಯಕರವಾಗಿ ಓದಿಸಿಕೊಂಡು ಹೋಗುತ್ತದೆ. ಅಲ್ಲದೇ ಕಾದಂಬರಿಯ ತುಂಬೆಲ್ಲಾ ರಾಗ ,ತಾನ, ಪಲ್ಲವಿಗಳು ಮೇಳೈಸಿರುವುದು ಅದರ ಸೊಗಸನ್ನು ಇನ್ನಷ್ಟು ಹೆಚ್ಚಿಸಿದೆ.
ನನ್ನ ಸಹಪಾಠಿಯಾದ ಎನ್. ಎಸ್.  ಶ್ರೀಧರ ಮೂರ್ತಿಯವರ ಈ ಹೊಸ ಸೃಜನಶೀಲ ಸಾಹಸಕ್ಕೆ ಎಲ್ಲಾ ರೀತಿಯಲ್ಲಿಯೂ ಶ್ರೇಯಸ್ಸು ಸಿಗಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ.