ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆ ದಿನ ಮುಗಿದ ಮೇಲೆ…

ಶಮ ನಂದಿಬೆಟ್ಟ
ಇತ್ತೀಚಿನ ಬರಹಗಳು: ಶಮ ನಂದಿಬೆಟ್ಟ (ಎಲ್ಲವನ್ನು ಓದಿ)

ಹರ್ ಘರ್ ತಿರಂಗಾ… ಅವರೋಹಣದ ಸುತ್ತ​

ಹರ್ ಘರ್ ತಿರಂಗಾ ನಿಮಿತ್ತ ಧ್ವಜ ಖರೀದಿಸಲು ಹೊರಟಿದ್ದೆ. ಮನೆಯ ಸಮೀಪದ ರೈಲ್ವೇ ಕ್ರಾಸಿಂಗ್ ದಾಟಿ ಮೈಸೂರು ರಸ್ತೆಗೆ ತಿರುಗೆಂದು ನನ್ನ ರಾಜರಥದ ಕಿವಿ ಹಿಂಡುವಷ್ಟರಲ್ಲಿ ಪಕ್ಕದಲ್ಲಿ ದೊಡ್ಡದೊಂದು ಧ್ವಜ ಹಾರುತ್ತಿದ್ದ ಐಷಾರಾಮಿ ಆಡಿ ಕಾರಿಂದ ಕೈಯೊಂದು ಜೋಳ ತಿಂದುಳಿದ ಕಸವನ್ನು ರಸ್ತೆಗೆ ಹಾಕಿತು. ಇನ್ನೆರಡು ನಿಮಿಷಗಳಲ್ಲಿ ದೊಡ್ಡವರ ಅನುಸರಿಸಿದ ಪುಟಾಣಿ ಕೈ ಸ್ವೀಟ್ ಕಾರ್ನ್ ತಿಂದುಳಿದ ಪ್ಲಾಸ್ಟಿಕ್ ಕಪ್ ರಸ್ತೆಗೆಸೆಯಿತು. ಅವರನ್ನು ತಡೆದು ಕೇಳುವಷ್ಟು ಸಿಟ್ಟು ಬಂದರೂ ನನ್ನ ದ್ವಿಚಕ್ರದ ರಾಜರಥದಲ್ಲಿ ಆ ಕಾರನ್ನು ಹಿಂಬಾಲಿಸುವ ಮಳ್ಳು ಸಾಹಸ ಬೇಡವೆನಿಸಿತು. ಮುಂದೆ ರಾಜರಾಜೇಶ್ವರಿ ನಗರದ ಗೇಟ್ ಬಳಿ ಸಿಗ್ನಲ್ ಬಿದ್ದು ನನ್ನ ಅದೃಷ್ಟವೆಂಬಂತೆ ಅದೇ ಕಾರು ಪಕ್ಕದಲ್ಲಿ ನಿಂತಿತು. ಕಿಟಕಿ ಗಾಜು ಏರಿಸಿದ್ದರೂ ಅವರತ್ತ ತಿರುಗಿ “ನಿಮ್ಮದು ಹರ್ ಕಾರ್ ತಿರಂಗಾನಾ?” ಅಂದೆ. ಗಾಜು ಕೆಳಗಿಳಿಯಿತು, ಮತ್ತದೇ ಪ್ರಶ್ನೆ ಕೇಳಿದೆ. “ಹೌದು ದೇಶಾಭಿಮಾನ ಮುಖ್ಯ ಅಲ್ವಾ?” ಹೆಮ್ಮೆಯ ಉತ್ತರ. “ದೇಶವನ್ನು ಸ್ವಚ್ಛವಾಗಿ ಇಟ್ಕೊಳೋದೂ ಅಷ್ಟೇ ಮುಖ್ಯವಲ್ವಾ? ರಸ್ತೆಗೆ ನೀವೆಸೆದ ಕಸ ನೋಡಿ ಮಗು ಕೂಡ ಅದನ್ನೇ ಮಾಡಿತು” ಅಂದೆ. ಅವರು ಉತ್ತರಿಸುವ ಮುನ್ನ ಸಿಗ್ನಲ್ ಬಿಟ್ಟ ಕಾರಣ ಮುಂದೋಡಿದೆವು.

ಇದು ನಮ್ಮ ಸ್ವಭಾವವನ್ನು ಹೇಳುವ ಒಂದು ಉದಾಹರಣೆಯಷ್ಟೇ. ದೇಶವಾಸಿಗಳನ್ನು ಭಾವನಾತ್ಮಕವಾಗಿ ದೇಶದೊಂದಿಗೆ ಬೆಸೆವ ಪ್ರಧಾನ ಮಂತ್ರಿಯವರ ಈ ವಿನೂತನ ಅಭಿಯಾನ ಹರ್ ಘರ್ ತಿರಂಗಾ ನನಗೂ ವಾಹ್ ಎನಿಸಿದೆ. ದಿನವೂ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದರೆ ಧ್ವಜ ಹಾರಿಸಲು ಇಷ್ಟೊಂದು ಸಮಸ್ಯೆ ಏನು ಎನಿಸಿತ್ತು. ದೇಶ ಸ್ವಾತಂತ್ರ್ಯೋತ್ಸವದ ಅಮೃತ ಹೊಸ್ತಿಲಲ್ಲಿರುವ ಹೊತ್ತಿನಲ್ಲಿ ಮನೆ ಮನೆಗಳಲ್ಲೂ ರಾಷ್ಟ್ರಧ್ವಜ ಹಾರುತ್ತಿರುವ ಚಿತ್ರ ಕಲ್ಪಿಸಿಕೊಂಡೇ ಪುಳಕಗೊಂಡ ಜೀವ ನನ್ನದು. ಒಂದಷ್ಟು ಮಂದಿ ಮನೆಯಲ್ಲಿ ಧ್ವಜ ಹಾರಿಸಿಯೇ ನನ್ನ ರಾಷ್ಟ್ರಪ್ರೇಮ ಸಾಬೀತಾಗಬೇಕಾ ಎಂದು ಬೊಬ್ಬಿಟ್ಟರೆ ಇನ್ನು ಕೆಲವರು ಧ್ವಜ ಹಾರಿಸದವರು ದೇಶದ್ರೋಹಿಗಳೆಂದು ಗೊತ್ತಾಗುತ್ತದೆ ಎಂಬ ಪೋಸ್ಟ್ ಹಾಕುವ ಮೂಲಕ ಲಕ್ಷಗಟ್ಟಲೇ ಲೈಕು ಗಿಟ್ಟಿಸಿಕೊಂಡರು. ಇದರ ನಡುವೆ ತಿರಂಗಾದ ಹಾಡಿನ ಟ್ರೈಲರ್ ಬಿಡುಗಡೆಯಾಗಿ ಪ್ರತಿ ಮನೆಯ ಮೇಲಷ್ಟೇ ಅಲ್ಲ ಮನದ ಮೂಲೆಯಲ್ಲೂ ದೇಶಭಕ್ತಿಯ ಹಣತೆ ಬೆಳಗಿಸುವ ಮತ್ತು ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ಆ ಬೆಳಕಿನಲ್ಲಿ ಕಾಣುವ ಮಹತ್ತರ ಉದ್ದೇಶ ಸ್ಪಷ್ಟವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಯೋಚನೆ ಇನ್ನಷ್ಟು ಆಪ್ತವಾಯಿತು.

ಈ ಭಾವನೆಗಳನ್ನು, ಎರಡು ಮೂರು ದಿನದ ಸಂಭ್ರಮಗಳನ್ನು ಮೀರಿದ ಪ್ರಶ್ನೆಯೊಂದಿದೆ. ಆಗಸ್ಟ್ ಹದಿನೈದು ಮುಗಿದ ನಂತರ ಕಾರಿಂದ ರಸ್ತೆಗುರುಳಿದ ಕಸದಂತೆ ದೇಶದ ತುಂಬೆಲ್ಲಾ ಅನಾಥವಾಗಿ ಬಿದ್ದ ಧ್ವಜಗಳೇ ಕಾಣಸಿಗಬಹುದಾ ? ಈ ಯೋಚನೆಯೇ ಕರುಳು ಹಿಂಡುತ್ತದೆ. ಮಕ್ಕಳು ಶಾಲೆಗೆ ಹೋಗಲಾರಂಭಿಸಿದ ದಿನಗಳಲ್ಲಿ ಕಲರಿಂಗ್ ಕ್ಲಾಸಿನಲ್ಲಿ ಮಾಡಿದ ಪುಟ್ಟ ಧ್ವಜಗಳನ್ನೇ ಕಸದ ಬುಟ್ಟಿಗೆಸೆಯಲು ಮನಸಾಗದೆ ವಾರ್ಡ್ʼರೋಬಿನಲ್ಲಿ ಜತನದಿಂದ ಕಾಪಿಡುವ ಮನೆ ನಮ್ಮದು. ಭಾವನೆಗಳೆಲ್ಲ ಬಹುತೇಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಸರಕಷ್ಟೇ ಆಗಿರುವ ಈ ದಿನಗಳಲ್ಲಿ ಎಷ್ಟು ಪ್ರತಿಶತ ಜನ ಹೃದಯದಿಂದ ಯೋಚಿಸಿಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ಎರಡಂಕಿಯನ್ನು ಹೇಳುವುದೂ ಕಷ್ಟವೆನಿಸುತ್ತದೆ

ಇದನ್ನೆಲ್ಲ ಆಲೋಚಿಸುತ್ತ ಹೋಗಿ ಖಾದಿ ಅಂಗಡಿ ಹೊಕ್ಕರೆ ಅಲ್ಲಿ ಕಂಡದ್ದು ಪೇರಿಸಿಟ್ಟ ಪಾಲಿಯೆಸ್ಟರ್ ಧ್ವಜಗಳ ರಾಶಿ. ಕೇಳಿದರೆ “ಬಿ.ಬಿ.ಎಂ.ಪಿಯಿಂದ ಕೊಟ್ಟು ಹಂಚಲೇಬೇಕೆಂದು ಹೇಳಿದ್ದಾರೆ ಮೇಡಂ. ಅಂಚೆ ಕಛೇರಿಗಳಲ್ಲೂ ಇದನ್ನೇ ಮಾರುತ್ತಿದ್ದಾರೆ” ಅಂದರು. ಅದನ್ನು ಬಿಟ್ಟು ಖರ್ಚು ಮಾಡಿ ಜನ ಖಾದಿ ಧ್ವಜ ಖರೀದಿ ಮಾಡಿಯಾರೇ ಎಂಬ ಪ್ರಶ್ನೆಗೆ ಉತ್ತರ ಹೇಳಬೇಕಿಲ್ಲ. ದೇಶದ ನೂರು ಕೋಟಿಯ ಕಾಲು ಭಾಗ ಜನರಲ್ಲಿ ಅರ್ಧಕ್ಕರ್ಧ ಮಂದಿ ಈ ಧ್ವಜ ಖರೀದಿಸಿ ಬಿಸುಟರೂ ಸಾಕು ಹನ್ನೆರಡೂವರೆ ಕೋಟಿ ಪಾಲಿಯೆಸ್ಟರ್ ಧ್ವಜಗಳು ಇನ್ನೂ ಸುಮಾರು ನೂರು ವರ್ಷಗಳವರೆಗೆ ಭೂಮಿತಾಯಿಯ ಹೊಟ್ಟೆ ಸೇರಿ ವ್ಯಾಧಿಯಾಗಿ ಉಳಿಯುತ್ತವೆ ಎಂದಾಯ್ತು. ಹಾಗಿದ್ದರೆ ದೇಶಭಕ್ತಿಯ ಹೆಸರಿನಲ್ಲಿ ಆಗುತ್ತಿರುವುದಾದರೂ ಏನು?

ಇದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಎಂದು ಮೊದಲೇ ಗೊತ್ತಿರುವ ಕಾರಣ ಇಂಥ ಯೋಜನೆ ರೂಪಿಸುವ ಮುನ್ನ ಸರ್ಕಾರವೂ ದೂರದೃಷ್ಟಿಯಿಂದ ಯೋಚನೆ ಮಾಡಬೇಕಿತ್ತು. ದೇಶಾದ್ಯಂತ ಒಂದಷ್ಟು ಲಕ್ಷ ಖಾದಿ ಉತ್ಪನ್ನ ಘಟಕಗಳ ಗುರುತಿಸಿ ಕಡ್ಡಾಯವಾಗಿ ಖಾದಿ ಧ್ವಜ ತಯಾರಿಸಬೇಕೆಂಬ ನಿಯಮ ರೂಪಿಸಿದ್ದರೆ ಮಾಲಿನ್ಯದ ಪರಿಣಾಮ ಎಷ್ಟೋ ಕಡಿಮೆ ಆಗುತ್ತಿತ್ತು. ಈ ಮೂಲಕ ಖಾದಿ ಉದ್ಯಮವನ್ನೂ ಬೆಳೆಸಬಹುದಾದ ಅಮೂಲ್ಯ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಬದಲಿಗೆ ಯಾವುದೋ ದೇಶದಿಂದ ಸರಬರಾಜಾಗುತ್ತಿದೆ ಎನ್ನಲಾದ ಪಾಲಿಯೆಸ್ಟರ್ ಧ್ವಜ ಎಲ್ಲೆಲ್ಲೂ ಬಿಕರಿಯಾಗುತ್ತಿರುವುದೇ ವಿಪರ್ಯಾಸ. ಇರಲಿ, ಆಗಿದ್ದರ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಭಾವಕ್ಕಿಂತ ಬುದ್ಧಿಯೇ ಪ್ರಧಾನವಾದ ಈ ಕಾಲದಲ್ಲಿ ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಧ್ವಜಕ್ಕೆ ಯಾವ ರೀತಿಯ ಸ್ಥಿತಿ ಬೇಕಾದರೂ ಬರಬಹುದು. ಹಾಗಾಗದಂತೆ ತಡೆಯಲು ಆಗಸ್ಟ್ ಹದಿನೈದರ ನಂತರ ಧ್ವಜಾವರೋಹಣ ಆದ ಮೇಲೆ ನಮ್ಮ ಅಮೂಲ್ಯ ಆಭರಣ ಬಟ್ಟೆಗಳ ಜೊತೆ ಧ್ವಜಕ್ಕೊಂಚೂರು ಜಾಗ ಕೊಡುವುದು ಪ್ರಥಮ ಆದ್ಯತೆಯಾಗಿರಲಿ. ಅದು ಅಸಾಧ್ಯ ಎನಿಸಿದಾಗ ವಿಲೇವಾರಿ ಮಾಡುವ ಬಗ್ಗೆ ನನ್ನ ಕೆಲವು ಯೋಚನೆಗಳು ಹೀಗಿವೆ.

  • ಹತ್ತಿರದ ಸರ್ಕಾರಿ ಕಛೇರಿಗೆ ಹಿಂತಿರುಗಿಸುವುದನ್ನು ಕಡ್ಡಾಯ ಮಾಡಿ ಇನ್ನಾದರೂ ಸರ್ಕಾರ ಆದೇಶಿಸಲು ಸಾಧ್ಯವೇ (ಪ್ರತಿಯಾಗಿ ಏನಾದರೂ ಕೊಟ್ಟರೆ ಈ ಕೆಲಸ ಮಾಡಬಹುದು; ಪ್ರತಿಫಲವಿಲ್ಲದೆ ದೇಶಕ್ಕಾಗಿ ಯಾಕೆ ಏನಾದರೂ ಮಾಡಬೇಕು? ಎಂದು ಯೋಚಿಸದಿರಿ ದಮ್ಮಯ್ಯ)
  • ಹತ್ತಿರದ ಶಾಲೆಗೆ ಹಿಂತಿರುಗಿಸಿದರೆ ಅವರು ಜೋಪಾನವಾಗಿಟ್ಟು ಪ್ರತಿ ವರ್ಷ ಸ್ವಾತಂತ್ರ್ಯದ ಹಬ್ಬದಂದು ಅದನ್ನರಳಿಸಲು ಸಾಧ್ಯವಾ? (ಮನೆ/ಪಕ್ಕದ ಮನೆಯ ಮಗುವಿನ ಮೂಲಕವೇ ಕಳಿಸಬಹುದು ಶಾಲೆಗೆ ಹೋಗುವ ಕಷ್ಟವೂ ಇಲ್ಲ)
  • ಫ್ಯಾಮಿಲಿ ಫೋಟೋ ಥರವೇ ಧ್ವಜಕ್ಕೂ ಕಟ್ಟು ಹಾಕಿಸಿ ಮನೆಯ ಗೋಡೆಯನ್ನು ಅಲಂಕರಿಸುವುದು. ನಿತ್ಯ ಭಾರ​ತಾಂಬೆಗೆ ನಮಿಸಲು ಇದೊಂದು ಅವಕಾಶ. (ಇದಕ್ಕೆ ತಗಲುವ ವೆಚ್ಚ ಒಳ್ಳೆಯ ಹೋಟೆಲಿನಲ್ಲಿ ಸಿಗುವ ಒಂದು ಪ್ಲೇಟ್ ಗೋಬಿ ಮಂಚೂರಿ, ಒಂದು ಸಾರ್ತಿಯ ಮೊಬೈಲ್ ಡೇಟಾ ದರದಷ್ಟು ಮಾತ್ರ)
  • ಬೆಂಗಳೂರಿನ ಮಟ್ಟಿಗೆ ಧ್ವಜವನ್ನು ಸಂಗ್ರಹಿಸಿ ಕಾಪಾಡುವ ಅಭಿಯಾನ ಮಾಡುವ ಕೆಲವರಿದ್ದಾರೆ. ಅವರ ವಿಳಾಸ ಹುಡುಕಿ ಸಾಧ್ಯವಾದಷ್ಟು ಬೇಗ ಅವರಿಗೆ ಮರಳಿಸುವುದು.

ಒಂದೇ ಧ್ವಜದಡಿಯ ಮಕ್ಕಳು ನಾವೆಲ್ಲರೂ ಒಂದು ಕುಟುಂಬ ಎಂಬ ಭಾವ ಬಿತ್ತಬಹುದಾದ ಹರ್ ಘರ್ ತಿರಂಗಾ ಯೋಜನೆಯಲ್ಲಿ ಭಾಗವಹಿಸುವುದು ಖಂಡಿತ ರಾಷ್ಟ್ರಪ್ರೇಮದ ಸಂಕೇತ. ಜೊತೆಗೇ ಗರಿಷ್ಟ ಪರಿಸರ ಕಾಳಜಿ ಮಾಡುವ ಮೂಲಕ ನಾವು ಕುಣಿದು ಕುಪ್ಪಳಿಸಿದ ಭಾರತ ಮಾತೆಯ ಮಡಿಲನ್ನೂ ಗೌರವಿಸಿ ಪೊರೆಯುವುದು ಅಷ್ಟೇ ಉನ್ನತ ಮಟ್ಟದ ರಾಷ್ಟ್ರಭಕ್ತಿ. ನೆನಪಿರಲಿ, ಇಂಥ ಆಚರಣೆ ಮತ್ತೆ ಬರುವುದು ಇನ್ನು ಇಪ್ಪತ್ತೈದು ವರ್ಷಗಳ ನಂತರ ಶತಮಾನೋತ್ಸವಕ್ಕೆ ಮಾತ್ರ. ಅಲ್ಲಿಯವರೆಗೂ ಈ ನೆನಪು ಅಮೃತವಾಗಿಯೇ ಉಳಿವಂತೆ ಆಚರಿಸೋಣ.