ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕರಗಿತು ಅರಗಿನ ಅರಮನೆ

ಶಮ ನಂದಿಬೆಟ್ಟ
ಇತ್ತೀಚಿನ ಬರಹಗಳು: ಶಮ ನಂದಿಬೆಟ್ಟ (ಎಲ್ಲವನ್ನು ಓದಿ)

ಅವತ್ತು ಉಜಿರೆಯಲ್ಲಿ ಬಸ್ಸಿಳಿದು ನೇರವಾಗಿ ಹೋಗಿದ್ದು ಆಸ್ಪತ್ರೆಗೆ. ಸಣ್ಣದೊಂದು ಆರೋಗ್ಯ ಸಮಸ್ಯೆ ಅವರನ್ನು ಸ್ವಲ್ಪ ಹೆಚ್ಚೇ ಕಾಡಿ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗಿತ್ತು. ಆ ಘಳಿಗೆಯಲ್ಲಿ ಅವರು ನನ್ನನ್ನು ಅಲ್ಲಿ ನಿರೀಕ್ಷಿಸಿರಲಿಲ್ಲ. ಅವರ ಬೆಡ್ ಮೇಲೆ ಕುಳಿತ ಕ್ಷಣದಲ್ಲೇ ನನ್ನ ಬಲಗೈ ಅವರ ಎಡಗೈಯೊಳಗಿತ್ತು. ಆ ಸ್ಪರ್ಶದಲ್ಲಿ ವೃಧ್ಧಾಪ್ಯದ ಸಾವಿರ ಕಂಪನಗಳು. ತುಂಬ ದಿನಗಳ ನಂತರ ಅಮ್ಮ ಬಂದಾಗ ಮಗುವೊಂದು ಬಾಯ್ತುಂಬಾ ವರದಿ ಒಪ್ಪಿಸುವ ತೆರದಲ್ಲಿ ಮಾತಾಡುತ್ತಿದ್ದರೆ ಸಾಹಿತ್ಯ ಲೋಕದಲ್ಲಿ ಅಂಬೆಗಾಲ ಕೂಸಾಗಿದ್ದ ನನಗೆ ಈ ಮಟ್ಟಿಗೆ ಅಕ್ಷರ ಸಾಮ್ರಾಟರೊಬ್ಬರ ಸಾನ್ನಿಧ್ಯ ಸಿಕ್ಕಿದ ಅದೃಷ್ಟಕ್ಕೆ ಧನ್ಯತೆಯಲ್ಲಿದ್ದೆ. ಅಲ್ಲಿಂದೆದ್ದು ಊಟಕ್ಕೆ ಹೋಗುವಾಗ ದಾರಿಯುದ್ದಕ್ಕೂ ನೆನಪಿನ ಕ್ಯಾಸೆಟ್ ರಿವೈಂಡ್ ಆಗುತ್ತಲೇ ಇತ್ತು.


ಹೈಸ್ಕೂಲ್ ಮುಗಿಸಿ ಪ್ರಥಮ ಪಿ.ಯು.ಸಿ. ಸೇರಿದ್ದ ದಿನಗಳವು. ನರನಾಡಿಗಳ ತುಂಬ ಹುರುಪು, ಕುತೂಹಲ, ಹುಮ್ಮಸ್ಸುಗಳೇ ಹರಿಯುತ್ತಿದ್ದ ಪರ್ವಕಾಲ. ಮಾರ್ಕ್ಸ್ ಕಾರ್ಡ್ ತುಂಬಿ ತುಳುಕುವಷ್ಟು ಅಂಕ ಗಳಿಸಿದ್ದೇನೆಂಬ ಸಣ್ಣ ಅಹಂಕಾರ. ಅದಕ್ಕೆ ಸರಿಯಾಗಿ ಎಸ್.ಡಿ.ಎಂ.ಕಾಲೇಜಿನಲ್ಲಿ ನಾನಾ ಪಠ್ಯೇತರ ಚಟುವಟಿಕೆಗಳ ಸುಗ್ಗಿ. ಯಾವುದರಲ್ಲಿ ಹೆಚ್ಚು ಸುತ್ತುವ ಅವಕಾಶ ಕೇಳಿ ವರ್ಷಕ್ಕೆ ಹತ್ತು ದಿನಗಳ ಕಾಲ ಊರಿಂದ ಹೊರಗೆ ಕ್ಯಾಂಪ್ ಇರುವ ಎನ್.ಎಸ್.ಎಸ್ ಸೇರಿಕೊಂಡಿದ್ದೆ. ಸೇರಿ ವಾರವಾಗುವಷ್ಟರಲ್ಲಿ ವನ ಮಹೋತ್ಸವದ ಸಂಭ್ರಮ. ಒಂದು ತಂಡಕ್ಕೆ ಗಿಡ ನೆಡುವ ಕೆಲಸವಿದ್ದರೆ ನಮ್ಮ ತಂಡಕ್ಕೆ ಕಾಲೇಜಿನ ಆಸುಪಾಸು ಸುತ್ತಿ ಪ್ಲಾಸ್ಟಿಕ್ ಹೆಕ್ಕುವ ಕೆಲಸ.

ಇಂಥ ಸುದಿನದಂದು ಕಾಲೇಜಿಗೆ ಸಮೀಪವಿದ್ದ ಅವರ ಮನೆ ʼವನಶ್ರೀʼಯ ಅಂಗಳಕ್ಕೆ ಕಾಲಿಟ್ಟಾಗ ಮಟ ಮಟ ಮಧ್ಯಾಹ್ನ. ಹಿರಿಯ ವಿದ್ಯಾರ್ಥಿಗಳು ಕೆಲವರು “ಅವರು ಬಹಳ ಗಂಭೀರ, ಶಿಸ್ತು; ತರಲೆ ಮಾಡಿದ್ರೆ ಇಷ್ಟ ಆಗಲ್ವಂತೆ” ಪಿಸುದನಿಯಲ್ಲಿ ಹೇಳಿದ್ದರು. ಹೀಗೆ ನಮ್ಮ ಕೆಲಸದ ನಡುವೆ ಯಾರಾದರೂ ಸಾಧಕರ ಮನೆಗೆ ಹೋದರೆ ಅವರ ಜೊತೆ ಕಿರು ಸಂವಾದ ಎನ್.ಎಸ್.ಎಸ್.ನಲ್ಲಿ ಅವತ್ತಿಗಿದ್ದ ಸತ್ಸಂಪ್ರದಾಯ. ಯಶೋದಮ್ಮ ತಂದಿಟ್ಟ ನೀರು ಕುಡಿದು ನಾವು ಬಿಸಿಲಿಗೆ ಬೈಯುತ್ತಿರುವ ಹೊತ್ತಿಗೆ ಜಗತ್ತಿನ ಗಾಂಭೀರ್ಯವನ್ನೆಲ್ಲ ತಾನೇ ಖರೀದಿ ಮಾಡಿದವರಂತೆ ನಡೆದು ಬಂದವರನ್ನು ಕಂಡಾಗ ಯಾಕಾದರೂ ಇವರ ಮನೆ ಹೊಕ್ಕೆನೋ ಅನಿಸಿದ್ದು ವನಶ್ರೀ ಮೇಲಾಣೆಗೂ ಸತ್ಯ. ನಂತರ ಜರುಗಿದ್ದು ಮ್ಯಾಜಿಕ್!

ಅವರು ಮಾತನಾಡಲು ಶುರುವಿಟ್ಟ ಮೂರನೇ ನಿಮಿಷಕ್ಕೆ ಮೋಡಿಗೆ ಒಳಗಾಗಿದ್ದೆ. ಸಾಮಾನ್ಯವಾಗಿ ಎಲ್ಲರೂ ವಿದ್ಯಾರ್ಥಿಗಳಿಗೆ ಮಾಡುವ ಚರ್ವಿತ ಚರ್ವಣ ಉಪದೇಶದ ಬದಲಿಗೆ ಇವರು ಸ್ನೇಹಿತರ ಜೊತೆ ಹರಟುವ ಧಾಟಿಯಲ್ಲಿ ಮಾತನಾಡುತ್ತ ಹೋದರು. ಹದಿನೈದಿಪ್ಪತ್ತು ನಿಮಿಷಗಳಲ್ಲಿ ಅವರ ಮಾತಿನ ಕೆಲವೊಂದು ಶಬ್ದಗಳ ಹೊರತು ಬೇರೇನೂ ಅರ್ಥವಾಗಿರಲಿಲ್ಲ. ಅಂಕಪಟ್ಟಿ ಅಣಕಿಸಿ ನನ್ನ ಅಹಂಕಾರ ಅವರ ವಿದ್ವತ್ತಿನ ಸಮುದ್ರದೊಳಗೆ ಕರಗಿ ಹೋಗಿತ್ತು. ರೊಮ್ಯಾಂಟಿಕ್ ಕಾದಂಬರಿಗಳನ್ನು ಮಾತ್ರ ಓದಿ ತುಂಬ ಓದುತ್ತೇನೆಂಬ ಮೂರ್ಖತನದ ದರ್ಶನ ಮಾಡಿಸಿ ಅದರಾಚೆಗಿನ ಜಗತ್ತನ್ನು ಕಾಣಲು ಅರಿವಿನ ಬೀಜ ಬಿತ್ತಿದ್ದರು. “ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಘೋಷವಾಕ್ಯ ಕೂಗುವುದರಲ್ಲೇ ಜಂಭ ಪಟ್ಟಿದ್ದ ನನಗೆ ಬದುಕುವುದರ ಅನಿವಾರ್ಯತೆ ಸ್ಪಷ್ಟವಾಗಿತ್ತು. ಮರುದಿನ ಲೈಬ್ರರಿಗೆ ಹೋಗಿ ಮಾಡಿದ್ದ ಮೊದಲ ಕೆಲಸ ಕೆ.ಟಿ.ಗಟ್ಟಿಯವರ ಪುಸ್ತಕಗಳ ಜಾಲಾಡಿದ್ದು. ಅರ್ಥವಾಯಿತೋ ಇಲ್ಲವೋ ಯೋಚಿಸದೆ ಸಿಕ್ಕಿದ ಅಷ್ಟೂ ಪುಸ್ತಕಗಳನ್ನು ಓದಿದ್ದೆ. ಅವರ ಪುಸ್ತಕಗಳನ್ನು ಓದಿದ ನಂತರ ಯಾವತ್ತೂ ನಾನು ಇತರ ಟೈಂ ಪಾಸ್ ಕಾದಂಬರಿಗಳನ್ನು ಮುಟ್ಟಿಯೂ ನೋಡಲಿಲ್ಲ. ಹೀಗೆ ನನ್ನ ಓದಿನ ನಿಜವಾದ ಪಯಣಕ್ಕೆ ದಾರಿ ತೋರಿದವರು. ಇದು ಗಟ್ಟಿಯವರು ಓದುಗರನ್ನು ಬೆಳೆಸುವ ಮ್ಯಾಜಿಕ್!!


ಆಸ್ಪತ್ರೆ ವಾಸ ಮುಗಿಸಿ ಮನೆಗೆ ಬರುವ ಹೊತ್ತಿಗಾಗಲೇ ಪೂರ್ಣ ಗೆಲುವಾಗಿದ್ದರು. ತುಂಬ ಶಿಸ್ತಿನ ಅವರನ್ನು ಕಾಡುತ್ತಿದ್ದುದು ಒಂದೇ ಚಿಂತೆ. “ನೋಡು ಇದೊಂದು ಔಷಧಿ ಈ ತಿಂಗಳು ಪೂರ್ತಿ ಸಂಜೆ ತೆಕ್ಕೊಳ್ಬೇಕು ಹೇಳಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಅಂದ್ರೆ ನೆನಪಾಗ್ತದೆ. ಇದು ಸಂಜೆಯದ್ದು ನೆನಪಾಗದಿದ್ದರೆ ಎಂತ ಮಾಡುವುದು?” ಆ ಕ್ಷಣ ಅವರಲ್ಲಿ ದೊಡ್ಡ ಬರಹಗಾರ, ಶಿಕ್ಷಕ, ಚಿಂತಕನ ಬದಲಿಗೆ ಪುಟ್ಟ ಕಂದನಿದ್ದ. “ನೀವೇನೂ ಯೋಚಿಸ್ಬೇಡಿ, ಅಷ್ಟೂ ದಿನ ಕರೆ ಮಾಡಿ ನೆನಪಿಸುವ ಕೆಲಸ ನನ್ನದು; ಬೆಂಗಳೂರಿಗೆ ಉಜಿರೆ ದೂರವಲ್ಲ” ಎಂದು ಇಬ್ಬರ ಬಿಗಿಯಪ್ಪುಗೆ ಪಡೆದು ಹೊರಟು ಬಂದಿದ್ದೆ. ತಿಂಗಳು ಕಳೆದ ಮೇಲೆ ಚೆಕಪ್ ಮುಗಿಸಿ ಬಂದ ದಿನ ಕರೆ ಮಾಡಿ ಹೇಳಿದ್ದರು “ಇನ್ನು ನಿಂಗೆ ಇದೊಂದು ಜವಾಬ್ದಾರಿ ಇಲ್ಲ; ಸಂಜೆಯ ಮಾತ್ರೆ ನಿಲ್ಲಿಸಿದ್ದಾರೆ” ಥಟ್ಟನೇ “ಅದು ಪ್ರೀತಿ ಜವಾಬ್ದಾರಿಯಲ್ಲ” ಮಾತು ತೇಲಿಸಿದೆ. “ಪ್ರೀತಿಯಷ್ಟು ದೊಡ್ಡ ಜವಾಬ್ದಾರಿ ಬೇರೆ ಯಾವುದೂ ಇಲ್ಲ” ಎಂಬ ಅವರ ಮಾತು ಪ್ರೀತಿ ಎಂಬ ಎರಡಕ್ಷರದ ನಿಜಾರ್ಥ ತೋರಿಸಿತ್ತು. ಎಂಭತ್ತಕ್ಕೂ ಮೀರಿದ ತಮ್ಮ ಜೀವಿತಾವಧಿಯಲ್ಲಿ ಅವರು ಹೀಗೆ ಪೊರೆದ ಜೀವಗಳೆಷ್ಟೋ ಕಾಣೆ.


ದೇಶದಾಚೆಗೂ ಹೋಗಿ ಅಧ್ಯಾಪನ ವೃತ್ತಿ ಕೈಗೊಂಡ ಅನುಭವ ಮತ್ತು ಶಿಕ್ಷಣ ಪದ್ಧತಿಯ ಅಪಸವ್ಯಗಳನ್ನು ಕಂಡ ಅವರಿಗೆ ತಮ್ಮದೇ ಆದ ಶಾಲೆ ತೆರೆದು ಅಲ್ಲಿ ಜೀವನ ಶಿಕ್ಷಣವನ್ನೇ ಪ್ರಧಾನವಾಗಿಸುವ ಕನಸಿತ್ತು. “ಮಕ್ಕಳು ಹುಲ್ಲು, ಕಲ್ಲು, ಮಣ್ಣಲ್ಲಿ ಆಡ್ಬೇಕು ಶಮ; ಆವಾಗಲೇ ಪ್ರಶ್ನೆಗಳು ಹುಟ್ಟುವುದು. ಅದಕ್ಕೆ ಉತ್ರ ಕೊಡ್ಲಿಕ್ಕೆ ಅಂತ ಟೀಚರ್ಸ್ ಇರಬೇಕು. ನೋಡು ಈ ಒಂದು ಭದ್ರಮುಷ್ಟಿ ಹುಲ್ಲು ತೆಕ್ಕೊಂಡ್ರೆ ಒಂದಿಡೀ ವಾರ ಪಾಠ ಮಾಡುವಷ್ಟು ವಿಷಯ ಉಂಟು ಗೊತ್ತುಂಟಾ? ಈಗ ಪ್ರಶ್ನೆ ಉತ್ತರ ಎರಡನ್ನೂ ಶಾಲೆಯಲ್ಲಿಯೇ ಕೊಡೂದು, ಅವರು ಬಾಯಿಪಾಠ ಮಾಡಿ ಬರಿಯೂದು” ಎನ್ನುವಾಗ ಬೇಸರವಿತ್ತೇ ಹೊರತು ದೂರುವ ಮನೋಭಾವ ಕಾಣಲಿಲ್ಲ. ಮಣ್ಣಿನ ಒಡನಾಡುತ್ತ ಸಹಜ ಬದುಕು ನಡೆಸುತ್ತಿದ್ದ ಅವರಿಗೆ ಸುಮಾರು ಇನ್ನೂರಕ್ಕೂ ಹೆಚ್ಚು ಗಿಡ ಬಳ್ಳಿಗಳನ್ನು ನಿಖರವಾಗಿ ಗುರುತಿಸಿ ಅವುಗಳ ಪ್ರಬೇಧ, ಔಷಧೀಯ ಗುಣಗಳನ್ನು ಹೇಳಬಲ್ಲಷ್ಟು ಜ್ಞಾನವಿತ್ತು. ಸಂಭಾಷಣೆಯ ನಡುವೆ “ಹಾಗಿದ್ರೆ ನೀವು ಶಿಕ್ಷಣ ತಜ್ಞರು…” ಅಂದ ನನ್ನ ಮಾತನ್ನು ತಡೆದು “ಅಲ್ಲಲ್ಲ, ನಾನು ಮಕ್ಕಳೊಡನೆ ಕಲಿಯಲು ಇಷ್ಟಪಡುವ ವಿದ್ಯಾರ್ಥಿ” ಎನ್ನುವಾಗಿನ ವಿನಮ್ರತೆ ಬಹು ವಿರಳ. ಆರ್ಥಿಕ ಕಾರಣಗಳಿಗಾಗಿ ಅವರು ಶಾಲೆ ತೆರೆಯಲಾಗಲಿಲ್ಲ ಎಂಬುದೂ ಅವರನ್ನು ಬಹಳ ಕಾಡಿರಲಿಲ್ಲ. “ಅದೇ ವಾಸ್ತವ ಅಲ್ವಾ ? ಕೊರಗಿ ಎಂತ ಮಾಡ್ಲಿಕ್ಕುಂಟು? ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಂಡರೆ ಬದುಕು ಆರಾಮ ಅಲ್ವಾ?” ಜೀವನ ಸಾರವನ್ನೇ ಹಿಡಿದಿಡುವ ಪ್ರಶ್ನೆಗೆ ಉತ್ತರ ಕಷ್ಟವಾಗಿತ್ತು.


ದಶಕಗಳ ಕಾಲ ಬದುಕಿನ ಬೇರುಗಳನ್ನು ಹಿಡಿದಿಟ್ಟ ಉಜಿರೆ ಬಿಟ್ಟು ಅನಿವಾರ್ಯವಾಗಿ ಮಂಗಳೂರಿಗೆ ಹೋಗಿ ನೆಲೆಸಿದ ನಂತರ ಅಲ್ಲಿ ಭೇಟಿಯಾದಾಗ ಅಮ್ಮ ಇಹದ ಪಯಣ ಮುಗಿಸಿದ್ದರು. “ಮಲಗಿದಲ್ಲೇ ಹೋದದ್ದಾ ? ಸುಖ ಮರಣ ಅಲ್ವಾ?” ಎಂದ ದನಿಯಲ್ಲಿ ಅದೆಂಥ ನಿರ್ಲಿಪ್ತತೆ! ಅಮ್ಮನ ದೇಹದಾನದ ನಂತರ ಎಲ್ಲರಿಂದಲೂ “ನೀವು ಮಕ್ಕಳು ಇದ್ರೂ ಯಾಕೆ ದಾನ ಮಾಡಿದ್ದು?” ಎಂಬ ಕುಹಕದ ಪ್ರಶ್ನೆ ಕೇಳುವವರ ನಡುವೆ “ಎಷ್ಟು ಒಳ್ಳೆಯ ಕೆಲಸ ಮಾಡಿದ್ರು ನೋಡು; ಸುಟ್ಟು ಹೋಗುವ ದೇಹದ ಮೇಲೆ ಯಾಕೆ ವ್ಯಾಮೋಹ? ಕೊಟ್ಟದ್ದು ಎಷ್ಟು ಮಕ್ಕಳಿಗೆ ಕಲೀಲಿಕ್ಕೆ ಉಪಯೋಗ ಆಯ್ತಲ್ಲ” ಎಂದು ನೋವಿನಲ್ಲೂ ನಗು ಮೂಡಿಸಿದ್ದರು. ದಂಪತಿಗಳು ಕ್ಷಣ ಮಾತ್ರವೂ ಯೋಚಿಸದೇ ತಾವೂ ದೇಹದಾನಕ್ಕೆ ನಿರ್ಧರಿಸಿದಾಗಿನ ಭಾವ ಅಕ್ಷರಕ್ಕೆ ನಿಲುಕದ್ದು. ಅಂದೂ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಿತ್ತು. ನಂಗೆ ಚಾ ತಂದು ಕೊಟ್ಟ ಯಶೋದಮ್ಮ ಅವರಿಗೆ ಕಿತ್ತಳೆ ಹಣ್ಣು ಕೊಟ್ಟರು. ಎಷ್ಟು ಬೇಡವೆಂದರೂ ಕೇಳದೆ ಅವತ್ತು “ಇದೊಂದು ಎಸಳಾದರೂ ತಿನ್ನು” ಎಂದು ಮಮತೆಯಿಂದ ಕೈಗೆ ತುರುಕಿದ ಕಿತ್ತಳೆ ಎಸಳಿನ ಘಮ ಇನ್ನೂ ಅಂಗೈಯಲ್ಲಿ ಹಾಗೇ ಇದೆ. ಅವರು ಅಕ್ಷರ ಲೋಕಕ್ಕೆ ಬಿಟ್ಟು ಹೋದ ಸೌಗಂಧ ನಮ್ಮ ನಾಳೆಗಳಿಗೆ ಆಹ್ಲಾದ ನೀಡುತ್ತಲೇ ಇರುತ್ತದೆ.

– ಶಮ ನಂದಿಬೆಟ್ಟ