- ಮಾತಾಡುವ ಕನಸುಗಳು - ಅಕ್ಟೋಬರ್ 21, 2020
ಕನಸುಗಳು ಮಾತಾಡುತ್ತಿವೆ
ಮನಸು ಭಾರ ಮಾಡುವ ಇರುಳ ಮುಸುಕಿನ
ನಿದಿರೆಗನಸು
ಹರಿದ ಪುಟಗಳು
ಹೊಸ ಭಾಷೆಯೊಂದಿಗೆ ಹಾಕಿಕೊಂಡ ತಳಕು
ಕೆಲವು ಕನಸುಗಳೆ ಹಾಗೇ
ಮರೆಯಾಗುತ್ತವೆ
ಅಹಲ್ಯೆಯರ ಜೊತೆಗೆ ಪ್ರೀತಿಯರಳಿ ಕೂಟ ನಡೆಸಿದ್ದು
ಕತ್ತಲು ಗರ್ಭ ಸೀಳುವ ಭೂತದ ಬೇರು
ನಶೆಯೇರಿ ದಾರಿಗುಂಟ ನರಳಿ ಹಾಡುವ ಹಕ್ಕಿ
ದಿಮಿಗುಡುವ ಸೊಲ್ಲು ಸುದ್ದಿ
ಹೀಗೆ
ಮೈಚಾಚಿಕೊಳ್ಳುತ್ತವೆ
ಮರೆಯುತ್ತವೆ
ಮರೆಯಾಗುತ್ತವೆ
ಬೀಸದೇ ಹೊಸಗಾಳಿ ಕಬಳಿಸಿ
ಒಂದು ರೀತಿಯ ಮಟಮಟ ಮಧ್ಯಾಹ್ನದ ಕನಸೆ ಭೇಸಿ
ಉರಿವ ಬಿಸಲಲಿ
ಹೊಸಗಾಳಿ ಬೀಸುತ್ತಲೇ ಇರುವುದು
ವಿರಹಕ್ಕೆ ರಾತ್ರಿ ಗೆದ್ದ ವಾದ್ಯಗಾರನಂತೆ
ಈ ಸಮಯದ ಕನಸುಗಳೆ ಹೀಗೆ
ಗುರುತು ತೋರಲು
ಸಾಕ್ಷಿ ನುಡಿಯಲು
ರೆಕ್ಕೆ ಬಿಚ್ಚುವದಿಲ್ಲ ಅವು
ತೇಲಿಕೊಂಡು ಹಾಗೇ ಹೋಗುತ್ತವೆ
ಸುಖದ ಪ್ರೀತಿ ತಂದ ಬೆಳಕದಂತೆ
ಬಾಕಿ ಉಳಿಸಿದ ಕನಸುಗಳು
ರಾತ್ರಿ ಕಾಲಕೆ ಗೂಢು ಕಟ್ಟಿಕೊಳ್ಳುತ್ತವೆ
ಹಾಲಕ್ಕಿ ಸಂಕುಲ ನೋವ ಸ್ವರ
ಕೋಣ-ಕೋಳಿಗಳ ಮಿಲನ
ಮಲ್ಲಿಗೆ ದಳಗಳ ಮೇಲೆ ರಕ್ತದ ಹೂವು
ನನ್ನೊಡನೆ ಮಾತಾಡುತ್ತವೆ ಸಖಿಯರಾಗಿ
ನೋಡಿ
ಉರುಳುತ್ತಿವೆ ನೂರೊಂದು ರಾತ್ರಿಗಳು
ಕನಸುಗಳು ಅಷ್ಟೇ ಗಿರುಗುಟ್ಟುತ್ತಲೇ ಇರುತ್ತವೆ
ಹಾಡಿನೊಂದಿಗೆ ಹಾರುತ್ತವೆ
ಪಾಡಿನೊಂದಿಗೆ ಉಳಿಯುತ್ತವೆ
∆∆∆
[ ಟಿಪ್ಪಣಿ: ಈ ಕವಿತೆಯಲ್ಲಿ ಬಳಕವಾಗಿರುವ ಚಿತ್ರ ಪಬ್ಲಿಕ್ ಡೊಮೇನ್ ನಲ್ಲಿದೆ, ಇದನ್ನು ೧೮೯೭ ರಲ್ಲಿ ಎಡ್ವರ್ಡ್ ಮುಂಚ್ ಎಂಬಾತ ಬರೆದದ್ದು. ಶೀರ್ಷಿಕೆ: ರಹಸ್ಯ ಅಲೆಗಳು. ದೇವು ಮಾಕೊಂಡ ಅವರ ಕವಿತೆಯಲ್ಲಿ ಬರುವ ಕನಸುಗಳು ಕೂಡ ಹಾಗೆಯೇ ವಿಕ್ಷಿಪ್ತ, ಗೂಢ.]
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ