ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೊರನಾಡ ಕನ್ನಡಿಗರು

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಹೊರನಾಡಿನ ಕನ್ನಡಿಗರು
ಹೊಟ್ಟೆಪಾಡಿಗಾಗಿ ಗಡಿದಾಟಿದವರು
ಅಡಿಗಡಿಗೂ ಅವಾಂತರಗಳನೆದುರಿಸಿ
ಹೋರಾಟ ನಡೆಸುವವರು

ಕಾವೇರಿಯ ಕಾವೇರಿದಾಗ ಬೆಳಗಾವಿಯಲ್ಲಿ ಚಳುವಳಿ ಬಿಸಿಯಾದಾಗಕಾಸರಗೋಡಲ್ಲಿ ಕಲಕಲವಾದಾಗಎದೆ ಡವಡವಗುಟ್ಟಿಸಿಕೊಂಡವರು

ಕನ್ನಡ ನಾಡಿನ ಮೂಲೆ ಮೂಲೆಗಳಿಂದ
ಗುಳೆ ಬಂದು ತಮ್ಮ ನೆಲೆ ಹುಡುಕಿಕೊಂಡವರು
ಅಲ್ಲಿಯ ಭಾಷೆ ಕಲಿತು ಮಾತು ಬೆರೆಸಿ
ಅಲ್ಲಿಯವರೇ ಆಗಲು ಪ್ರಯತ್ನಿಸುವವರು

ಮನೆಮಾತಿನ ಕನ್ನಡ ಎಲ್ಲಿಯದಾದರೇನು
ಇತರೆ ಕನ್ನಡಿಗರೊಂದಿಗೆ ಬೆರೆತಾಗ
ನುಡಿಗನ್ನಡವನ್ನಾಡಿ
ಕನ್ನಡತನವನ್ನಿರಿಸಿಕೊಳ್ಳುತ್ತಿರುವವರು

ಮನೆಮಾತಿನ ಕನ್ನಡಕ್ಕೆ
ನೆಲೆಯಿದ್ದ ಭಾಷೆಯ ಪದ ಬೆರೆಸಿ
ಕಲಬೆರಿಕೆ ಭಾಷೆಯಲ್ಲೇ
ಕನ್ನಡವನ್ನು ಕಂಡುಕೊಳ್ಳುತ್ತಿರುವವರು

ದಾಸವಾಣಿಯ ಹೂರಣ
ಶರಣವಚನಗಳ ತಿರುಳು
ಮನಕ್ಕೆ ಒಗ್ಗಿಸಿಕೊಂಡು
ಸುತ್ತಮುತ್ತಲಿನ ಜನಕ್ಕೆ ಮಾದರಿಯಾದವರು

ಕಲೆ ಶಾಲೆಗಳ ಮೂಲಕ
ತಮ್ಮ ಅಸ್ತಿತ್ವವನ್ನು ಸಾರುತ್ತಾ
ಸಭೆ ಸಮಾರಂಭಗಳಲ್ಲಿ
ಕನ್ನಡವನ್ನು ಹುಟ್ಟುಹಾಕುತ್ತಾ ಹೆಮ್ಮೆ ಪಡುವವರು

ಸಮಾಜದ ಹಿತಕ್ಕೆ ಕೈಲಾದ ನೆರವು ನೀಡುತ್ತಾ
ಎಲೆಮರೆಯ ಕಾಯಿಯಂತೆ
ಹೊಂದಾಣಿಕೆಯ ಜೀವನ ಸಾಗಿಸುತ್ತಾ
ಜನಜೀವನದಲ್ಲಿ ಬೆರೆತು ಅವರಂತಾದವರು

ಎಲ್ಲಿ ನೆಲೆಸಿದರೂ ಕನ್ನಡವನ್ನು ಕನ್ನಡತನವನ್ನು
ತಮ್ಮೊಂದಿಗೆ ಹೊತ್ತು ತಂದು
ಅಲ್ಲಿಯ ಪರಿಸರಗಳ ಮೇಲೆ ತಮ್ಮ
ನಿಷ್ಟಾವಂತ ಛಾಪನ್ನು ಒತ್ತಿ ಬದುಕುವವರು

ಅಲ್ಲಿಯವರಂತಾಗುವ ಸಂಭ್ರಮದಲ್ಲಿ
ತಮ್ಮ ತಾಯ್ನಾಡಿನ ಅಗಲಿಕೆಯನ್ನು ಮರೆಯಲೆತ್ನಿಸುವವರು