ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಪ್ಪು ಮಾಡಬೇಕಿಲ್ಲ

ನೂತನ ದೋಶೆಟ್ಟಿ
ಇತ್ತೀಚಿನ ಬರಹಗಳು: ನೂತನ ದೋಶೆಟ್ಟಿ (ಎಲ್ಲವನ್ನು ಓದಿ)

ತಪ್ಪು ಮಾಡಲೇಬೇಕೆಂದಿಲ್ಲ
ಇರದ ತಪ್ಪಿಗೆ ಒಪ್ಪಿಗೆ ಪತ್ರದ
ಅಡಿಯಲ್ಲಿ ರುಜುವಾತು
ಮಾಡಲು ಸಿದ್ಧವಿದ್ದುಬಿಡು
ಹಲವರ ಕಾವಲಿನಲ್ಲಿ

ಅಚ್ಚ ಬಿಳುಪಿನ ನಿನ್ನ ಬಟ್ಟೆಗೆ
ಅಂಟಿ ಬಿಡುತ್ತವೆ ಕಪ್ಪು ಕಲೆಗಳು
ತೊಳೆದು ಹರವುತ್ತಿರಬೇಕು
ಆಗಾಗ ಬಿಸಿಲಿಗೆ ಝಳಝಳವಾಗಲು

ಒಣಗಿದ ಗರಿಗರಿ ಉಡುಪಲ್ಲಿ
ತೂರಬೇಕು ಕೈ ಕಾಲು ದೇಹ
ಮನಸ್ಸು
ಕಣ್ಣು ಕಿವಿ ಬಾಯಿಗಳ ಜೊತೆಯಾಗಿಸಿ

ಒಂಟಿ ಆದರ್ಶದ ನಂಟನ್ನು
ಗಂಟು ಕಟ್ಟಿ ಅಟ್ಟಕ್ಕೇರಿಸಿಬಿಡು
ಗುಂಪಿನ ಗುದಿಮುರಿಗೆ ತಪ್ಪೀತು

ಬಿಟ್ಟೂ ಬಿಡದ ಅನಾಥಪ್ರಜ್ಞೆಯ ನರಳಿಕೆ
ಒಳಗೂ…ಹೊರಗೂ…
ವರ್ಷದ ದೀಪಾವಳಿ ಹಬ್ಬಕ್ಕೆ
ಗುಡಿಸಿ ಸಾರಿಸಿ ಬಿಡು
ರಂಗೋಲಿ ತಾನಾಗಿ ಮೂಡೀತು

ಪಗಡೆ ದಾಳಗಳಿರದ ಆಟವಿದು
ಹಾರು ಎಗರು ಕಣ್ಣಾ ಮುಚ್ಚಾಲೆ ಕಕ್ಕಾಬಿಕ್ಕಿ

ಓದು- ವಿದ್ಯೆಯ ಸುರುವಿಬಿಡು
ಅಂಗಳದಲ್ಲಿ
ಹುಳು- ಕಡ್ಡಿ ಬೇರೆಯಾಗಲಿ
ಆಗಾಗ ಕೈಯಾಡಿಸುವುದ ಮರೆಯಬೇಡ

ನಡೆಯುವುದೆಲ್ಲ ಈಗ ಕುರ್ಚಿಯುದ್ಧ
ದೂರವಿದ್ದು ಬಿಡು ಕಚ್ಚಿ ಹಿಡಿಯದಂತೆ
ಕೈಚಾಚಿದರೆ ಕುಣಿಕೆ ಕೊರಳ ಸೇರೀತು!
ಕತ್ತಿಗಳು ಬುದ್ಧಿಯೊಳಗೆ ಮಸೆತು ಸಿದ್ಧವಾಗಿವೆ
ಕಣ್ಣಿರದ ಬೆನ್ನ ಹಿಂದಿನ ಪ್ರಹಾರಕ್ಕೆ

ಕಾಲದೊಳಗೆ ಹೂತ ನಂಟು- ನೆಂಟ ಬಗೆಯ ಬೇಡ
ಲೇಪಿಸಿಕೊ ಹಗುರ ನಗುವೊಂದ
ಮಾತನ್ನು ಹೊಲಿದು ಬಿಡು ಮೌನದಿಂದ
ನಾನು-ನೀನುಗಳ
ಬಿರುಸು ಬಾಣಗಳು ಗುರಿ ತಪ್ಪಿಯಾವು
ನೀನು- ನಿನ್ನ ಸಗ್ಗದ
ಐಸಿರಿಯ ನೋಟ ದಕ್ಕೀತು.