ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಮ್ಮ ನಡುವೆ

ನಾಗೇಶ ಮೈಸೂರು
ಇತ್ತೀಚಿನ ಬರಹಗಳು: ನಾಗೇಶ ಮೈಸೂರು (ಎಲ್ಲವನ್ನು ಓದಿ)

ನನಗು ನಿನಗು ಇರುವ ದೂರ, ಮನಸಿನ ತೀರ
ಆಚೆ ನೀನು ಈಚೆ ನಾನು, ನಡುವೆ ಅಪಾರ ||

ನಡುವ ಬೆಸೆದ ಜಲದ ಪಾರ, ಹರಿಯುವ ನೀರ
ಕೊಂಚ ನಿನದು ಕೊಂಚ ನನದು, ಬೆರೆತ ಸಾಗರ ||

ನಾನು ಉಪ್ಪು ನೀನು ಸಿಹಿಯು, ಕಡಲಲಿ ಖಾತೆ
ಮಿಳಿತ ಸೆಳೆತ ಸುಖದ ಸುರತ, ಮಿಲನ ಸಂಹಿತೆ ||

ನಾನು ಸಡಿಲ ನೀನು ಸಡಿಲ, ಉಸುಕಿನ ಕವಿತೆ
ಇರದ ಬಿಗಿತ ಸಹಜ ನಗುತ, ಬೆರಗು ಕೊನರುತೆ ||

ನಾನು ಬೆಳೆದೆ ನೀನು ಬೆಳೆದೆ, ಕೊಳಲಿನ ಗಾನ
ಕೊಡವಿ ಚಿಂತೆ ಹಿಡಿದ ಸಂತೆ, ಮರಳಿ ಯೌವನ ||

ನಾವು ಬರೆದ ನಮ್ಮ ಕಥನ, ಸಾಗರ ಸಂಗ
ನೋವು ಇರದ ಭಾವ ಜಗದ, ಬಂಧ ಸುಯೋಗ ||

ನಮ್ಮ ದೂರ ಮನಸ ತೀರ, ಶೂನ್ಯದ ಅಂಕ
ಹಿಗ್ಗಿ ಕುಗ್ಗಿ ಬರೆವ ಮಗ್ಗಿ, ಒಳಗಿದೆ ಪುಳಕ ||

ಇರದ ದೂರ ತರುವ ಭಾರ, ಕುಹಕದ ಮನಸು
ಇರಲಿ ದೂರ ಅರಿಯೆ ಸಾರ, ಸಮ ಹಿತ ಸೊಗಸು ||