ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬೋಧಿ ವೃಕ್ಷ

ಮಂಜುವಾಣಿ ಎಸ್. ಡಿ.
ಇತ್ತೀಚಿನ ಬರಹಗಳು: ಮಂಜುವಾಣಿ ಎಸ್. ಡಿ. (ಎಲ್ಲವನ್ನು ಓದಿ)

ಒಂದು ಮಧ್ಯರಾತ್ರಿ ಇದ್ದಕ್ಕಿದ್ದಂತೆ
ಗಂಡ-ಮಗು-ಮನೆಯನ್ನು ಬಿಟ್ಟು
ಜ್ಞಾನದಾಹದ​ ಹಾದಿಯಲಿ
ಎದ್ದು ಹೋಗಿದ್ದರೆ,
ಬುದ್ಧನ ಹಾಗೆ, ಯಶೋಧರೆ
ಆಗುತ್ತಿತ್ತೇ ಸಾಧನೆ ಅವಳ ಕೈಸೆರೆ?

ಗುರಿಯಿಡುತ್ತಿದ್ದವು
ನೂರಾರು ತೋರ್ಬೆರಳ ಶರಗಳು
ಸತ್ಯ ಹುಡುಕಲು ಹೊರಟವಳ ಕಡೆಗೆ.
ಅರಿಷಡ್ವರ್ಗಗಳ ಜಯಿಸ ಹೊರಟವಳ
ಹೃದಯವನು ಜರಡಿ ಮಾಡಿಬಿಡುತ್ತಿದ್ದವು
ಮೊನಚು ಮಾತಿನ ಕತ್ತಿ ಇರಿತಗಳು.
ನಿರ್ಭಾರ ಸ್ಥಿತಿಗೆ ತಲುಪಬೇಕೆಂದವಳಿಗೆ
ಕನಿಕರ ತೋರದೇ ಶಿರವೇರುತ್ತಿದ್ದವು
ಹೊರಲಾಗದ ದುರ್ಬಿರುದುಗಳು.

ಒಂದು ವೇಳೆ ಇವೆಲ್ಲನ್ನೂ ಮೀರಿ
ಒಂದು ಕಡೆ ಧ್ಯಾನಕ್ಕೆ ಕುಳಿತುಕೊಂಡಿದ್ದರೆ
ನಾನು ಮಾಡಿದ್ದು ಸರಿಯೇ?
ನಾನು ನನ್ನ ಜವಾಬ್ದಾರಿಯಿಂದ
ಪಲಾಯನಗೈದೆನೇ?
ನಾನು ಸ್ವಾರ್ಥಿಯಾದೆನೇ?
ನಾನು ಆದರ್ಶ ಪತ್ನಿಯಾಗಲಿಲ್ಲವೇಕೆ?
ನಾನು ಮಮಕಾರವಿಲ್ಲದ ಮಾತೆಯಾದೆನೇ?
ಎಂಬ ಅಸಂಖ್ಯ ‘ಅಪರಾಧಿ ಭಾವ’ ಭ್ರಮರಗಳು
ಗುಂಯ್ಗುಟ್ಟು ಚಿತ್ತವನು ವಿಚಲಿತಗೊಳಿಸಿ
ಪಶ್ಚಾತ್ತಾಪದ ಕೂಪದಲ್ಲಿ ತಳ್ಳಿ
ತಮಾಷೆ ನೋಡುತ್ತಿರಲಿಲ್ಲವೇ?

ಅಂತರಂಗದಲಿ ನಿರಂತರ
ದ್ವಂದ್ವಗಳ ಅಂತರ್ಯುದ್ಧ​ ನಡೆಯುತ್ತಿರೆ
ಚಿತ್ತ ಏಕಾಗ್ರತೆ ಸಿದ್ದಿಸುತ್ತಿತ್ತೇ ಅವಳಿಗೆ?
ಅದೆಷ್ಟು ಬಾರಿ ತನಗೆ ತಾನೇ
ಪ್ರಶ್ನೆಯಾಗುತ್ತಿದ್ದಳೋ,
“ನನ್ನ ಸಾಧನೆಗೆ ಅಡ್ಡಿಯಾಗುತ್ತಿರುವುದು
ಹೆಣ್ಣು ತನುವೋ, ಹೆಣ್ಣು ಮನವೋ
ಅಥವಾ ಹೆಣ್ತನವೋ?” ಎಂದು.
ವಿಪರ್ಯಾಸವೆಂದರೆ
ಸಿಕ್ಕುಸಿಕ್ಕಾಗಿರುವ ಪ್ರಶ್ನೆಗಳಿಗೆ
ಉತ್ತರ ದಕ್ಕಿಸಿಕೊಳ್ಳಲು
ಹೊರಟ ಯಾವ ಹೆಣ್ಣಿಗೂ
ಇದುವರೆಗೂ ಬೋಧಿ ವೃಕ್ಷ ಸಿಕ್ಕಿಲ್ಲ.