- ಮಿಣುಕು ದೀಪ - ಏಪ್ರಿಲ್ 10, 2020
ಇವನೆಂತ ಓತಿಕ್ಯಾತನ ತರ ಇದ್ದಾನೆ…..ಬದುಕುದಾದ್ರೂ ಹೌದ ಅಂತ? ಸಣ್ಣಕ್ಕಿದ್ದಾಗ ಮಾವ ಹೇಳಿದ್ದ. ಮಾವ ಹಂಗೆ…. ಮತ್ತೊಬ್ಬರ ಮನಸಿಗೆ ನೋವಾದೀತು ಎಂಬ ಪರಿಜ್ಞಾನ ಇಲ್ಲದವ. ಬದುಕಿದವರನ್ನೂ ಇರುವಾಗಲೇ ಮಾತಿನಿಂದ ಸಾಯಿಸಿ ಬಿಡ್ತಾನೆ ಅನಿಸಿದ್ದು, ದೊಡ್ಡವನಾಗಿ ಹೈಸ್ಕೂಲಿಗೆ ಹೋಗುವಾಗ ಅತ್ತೆಗೆ ಬೈಯ್ಯುವ ಬೈಗುಳದ ಮಾತು ಕೇಳಿ.
ನಾವೇನೊ ಸಣ್ಣವರು ಸರಿ. ಆದರೆ ಅತ್ತೆ….? ಪಾಪದವಳು. ಮತ್ತೊಬ್ಬರ ಮನೆಯಿಂದ ಬಂದು ಸೇರಿದವಳು. ಈ ಮಾವನ ಕರ್ಕೊಂಡು ಹೋಗಿ ಮತ್ತೊಬ್ವರ ಮನೆಯಲ್ಲಿ ಹಿಂಗೆ ಬಿಟ್ಟಿಕ್ಕಿ ಬರಬೇಕು. ಆಗ ಸಂಕಟ ಏನು? ಬಿಟ್ಟು ಇರುವದು ಅಂದ್ರೆ ಏನು? ಅಂತ ತಿಳಿತದೆ. ‘ಈ ಮಾವ ಇಷ್ಟಾನೆ ಇಲ್ಲ ನನಗೆ’ ಅಂದು ಕೊಳ್ಳುತ್ತಿದ್ದ.
ಬಹುಷಃ ಮಾವನ ಇಷ್ಟ ಪಟ್ಟವರು ಯಾರೂ ಇರಲಿಕ್ಕಿಲ್ಲ. ಚಿಕ್ಕಮ್ಮಂದಿರೂ ಕೂಡ ಅನಿಸಿತು. ಒಂದಿನ ಹೈಸ್ಕೂಲಿಗೆ ಹೋಗುವ ಹೊತ್ತಿಗೆ ವಿಪರೀತ ಹೊಟ್ಟೆನೋವು ಬಂದು ಹೊರಳಾಡ ತೊಡಗಿದ ಸಂಚಿತನಿಗೆ ಪ್ರಾಣವೇ ಹೋಗುವಷ್ಟು ತ್ರಾಸಾಗಿತ್ತು. ಮನೆಗೆ ಡಾಕ್ಟರ್ನ ಕರೆಸಿ, ತಪಾಸಣೆ ಮಾಡಿದ ಮೇಲೂ ಡಾಕ್ಟರ್ಗೂ ಇವನಿಗೆ ಹೀಗೆ ಆಗುವದಾದರೂ ಏನಕ್ಕೆ? ಎಂಬುದು ನಿಖರವಾಗಿ ತಿಳಿಯದೇ ಇದ್ದಿದ್ದರಿಂದ, ಅಲ್ಸರ್ ಆಗಿರಬಹುದಾ? ಇಲ್ಲ ಎಫೆಂಡಿಕ್ಸ್ ಏನಾದರೂ…….? ಎಂಬ ಪ್ರಶ್ನೆಯೊಂದು ತಲೆಗೆ ಬಂದು ಅದಕ್ಕೆ ಪೂರಕವಾಗಿ, “ಮಾತ್ರೆಯೆರಡು ಕೊಡುತ್ತೇನೆ. ಕಡಿಮೆ ಆದರೆ ಸರಿ. ಇಲ್ಲವಾದಲ್ಲಿ ನಾಡಿದು ನೋಡುವ” ಅನ್ನುತ್ತ ಗುಳಿಗೆಯ ಬಿಲ್ಲಿನ ಜೊತೆ ಬಾಡಿಗೆ ಬೈಕಿನ ಹಣ ಸ್ವಿಕರಿಸಿ ‘ಗುಟರ್ ಗುಂಯ್’ ಎಂಬ ಬೈಕಿನ ಸದ್ದಿನೊಂದಿಗೆ ಹೊರಟು ಹೋದರು.
ತಗ….. ಮಾವನ ಮಾತಿನ ಹೊಡ್ತವ…… ಅತ್ತ ಡಾಕ್ಟರ್ ಮರೆಯಾಗಿದ್ದೇ ಆಗಿದ್ದು; ಈ ಮಾವನಿಗೆ “ಈ ಮಾಣಿ ಸಾಯವ್ನೆಯ. ಅವಂಗೆಂತಕೆ ಔಷಧಿ. ಜೀವ ಕೈಲಿಡಿದು ಮಿಣಿ ಮಿಣಿ ಗುಡೊ ದೀಪದಂಗೆಯ. ಎಷ್ಟೊತ್ತಿಗೂ ಆರಲಕ್ಕು…..ಅವಂಗೆಂತ ಆರೈಕೆ?…. ಈ ಮಾತು ಕೇಳಿ ಅತ್ತೆ ವನಿತಾಳಿಗೆ ಸಿಟ್ಟು ಬಂದು ಕೂಗಾಡಿದ್ದಳು. “ಮನುಷ್ಯನೇ ಅಲ್ಲ” ಅನ್ನುವಂತ ಮಾತಾಡಿದ್ದಳು. ಆದರೂ ಅಂವ ಮಾತ್ರ ಬದಲಾಗಲಾರ. ಅವನು ಮಾತಲ್ಲೇ ಜೀವಂತ ಸಾಯಿಸಿಬಿಡ್ತಾನೆ. ಬದುಕುವವನೂ ಸಾವಿನತ್ತ ಮುಖ ಮಾಡಬೇಕು ; ಹಂಗಿರ್ತದೆ ಮಾತಿನ ಮೊನಚುತನ.
ಸಣಕಲು ಶರೀರದ ಸಂಚಿತ ‘ಗಾಳಿಯಲ್ಲಿ ಹಾರಿ ಹೋಗುವದು ಗ್ಯಾರಂಟಿ’ ಎಂಬ ಗೆಳೆಯರ ಹಾಸ್ಯದ ನುಡಿಗೆ ವಿಚಲಿತನಾಗದೆ ಓದು, ಹದವಾದ ಆಟದೊಳಗೆ ಬೆರೆತು, ತನ್ನ ಪಾಡಿಗೆ ತಾನಿದ್ದು ಓದುತ್ತ ಸಾಗುತ್ತಿದ್ದ. ಬಲಿಷ್ಠ ಆಳಂತೂ ಅಲ್ಲ. ಅಂತೂ ಹತ್ತನೆ ಇಯತ್ತೆ ಮುಗಿಸಿ ಐ.ಟಿ.ಐ ಓದುತ್ತೇನೆಂದು ಮನೆಯಿಂದ ಹೊರಹೋಗುವ ಸಂದರ್ಭ ಬಂದೆ ಬಂತು. ಬಹಳ ವರುಷದಿಂದ ಅಜ್ಜನ ಮನೆಯಲ್ಲಿದ್ದವ ‘ಒಮ್ಮೆಗೆ ದೂರ ಹೋಗುತ್ತಿರುವನಲ್ಲ’ ಅಂತ ಅತ್ತೆ ಬಹುವಾಗಿ ಅಲವತ್ತುಕೊಳ್ಳುವದರೊಂದಿಗೆ ಒಂಥರ ತಳಮಳದಲ್ಲಿ ಪದೇ ಪದೇ “ನೀನೂ ಹೊರಟುಬಿಟ್ಟೆ” ಅನ್ನುತ್ತಿದ್ದಳು. ಮಾವ, ಅಂವ ಹೊರಗಡೆ ಹೋಗಿ ಬದುಕುಳಿಯುವದಾದ್ರೂ ಹೌದ? ಕಲಿಯದಾದ್ರೂ ಹೌದ? ಅನ್ನುವ ಮಾಮೂಲಿ ಮಾತಿನ ವರೆಸೆಯಲ್ಲಿ ಯಾವ ಏರುಪೇರು ಇರಲಿಲ್ಲ. ಸಂಚಿತ ಮನೆಯಿಂದ ಹೊರಹೋದ….. ಕಲಿಕೆಯೇ ಅವನ ಇಂದಿನ ಅನಿವಾರ್ಯತೆ. ಬೇಗ ಓದು ಮುಗಿಸಿ ಉದ್ಯೋಗ ಹಿಡಿಯುವದೇ ಅತೀ ಅಗತ್ಯವಾದುದರಲ್ಲಿ ಒಂದು. ಹತ್ತು ಹದಿಮೂರು ಗುಂಟೆ ಜಮೀನಲ್ಲಿ ಬದುಕುವದು ಕಷ್ಟಕರವಾದದ್ದು ಹೌದು. ಸಂಚಿತನ ಓದು ಅನಾರೋಗ್ಯದ ನಡುವೆಯೇ ಸಾಗಿತ್ತಾದರೂ ಕಾಲಕ್ರಮೇಣ ಹೊಟ್ಟೆನೋವು ಅನ್ನುವದಂತೂ ಕಡಿಮೆಯಾಗುತ್ತ ಬಂತು. ದೈಹಿಕ ಬದಲಾವಣೆಯೂ ಆಗಿ ಯುವಕನಾಗಿ ಮನೆಗೆ ಮೊದಲ ಸಲ ಬಂದ. ತಾನೋದಲು ಕುಳಿತುಕೊಳ್ಳುವ ಕಿಟಕಿಯ ಗೋಡೆಗೆ ಸುಮ್ಮನೆ ಆತು ಕುಳಿತ. *****
ಮನೆಗೊಬ್ಬ ಮಗ ನಾನು. ಜವಾಬ್ದಾರಿ ಇದೆ ಅಂದಕೊಂಡರೂ ಜಮೀನು ಬಹಳವೇನಿಲ್ಲ. ಹತ್ತು ಗುಂಟೆ ತೋಟದಲ್ಲಿ ಇನ್ನೇನು ಮಾಡಬಹುದು? ಬೇಸಿಗೆಯಲ್ಲಿ ನೀರಿಲ್ಲ. ಅದಕ್ಕೆ ನೌಕರಿಯತ್ತ ಹೆಚ್ಚಿಗೆ ವಾಲಿದ್ದಂತೂ ಸುಳ್ಳಲ್ಲ…. ಹಾಗೆ ಯೋಚನೆ ಹರಿದಾಡಿತ್ತು.
ಸಣ್ಣ ಕೆಲಸ ಹಿಡಿದು ತನಗೆ ಬೇಕಾದುದೆಲ್ಲ ಮಾಡಿಕೊಳ್ಳುತ್ತ ಅಪ್ಪ ಅಮ್ಮನಿಗೂ ಸಹಕರಿಸುತ್ತ ತನ್ನದೇ ಆದ ಬದುಕಿನ ದಾರಿ ಕಂಡುಕೊಂಡು ಏನೇನೂ ಅಲ್ಲದ ಇದೇ “ಮಿಣುಕು ದೀಪ” ಇಂದು ತನ್ನದೇ ಸಂಭಂದಿಕರ ನಡುವೆ ಮೆಚ್ವಿಕೊಳ್ಳುವ ಹುಡುಗನಾದ.
ಮಾವ ಪೇಟೆಯಿಂದ ಬಂದ. ಶಿಸ್ತಾಗಿ ಕುಳಿತು ಮಾತುಕತೆಯಾಡುತ್ತ ಕುಳಿತಿರುವ ಸಂಚಿತನ ನೋಡಿ ; ಅರೇ! ಯಾವಾಗ ಬಂದೆ? ಹೆಂಗಿದ್ದಿ? ತಮಿಳುನಾಡಲ್ಲಿ ಕೆಲಸವಾತಡ, ಹೌದ? ಬಹು ಕಾಳಜಿಯಿಂದ ಮಾತಾಡಿದ ಮಾವನ ನೋಡಿ ಆಶ್ಚರ್ಯವಾದರೂ, ತೋರಗೊಡದೆ ಮಾಮೂಲಾಗೆ ಮಾತಿಗಿಳಿದ. ಅತ್ತೆ ಮಾತ್ರ ಸಿಕ್ಕಿದ್ದೇ ಛಾನ್ಸ್ ಅಂದುಕೊಂಡು “ಮಿಣುಕು ದೀಪ ಹೇಳಿ ಹಿಯ್ಯಾಳಿಸಿದ ನಿಮ್ಮ ಅಳಿಯ ಹ್ಯಾಂಗಾಗಿದ್ದಾನೆ ನೋಡಿ, ಕಣ್ ಬಿಟ್ಟು ನೋಡಿ. ನಂಗಂತೂ ಖುಷಿ. ರಾಶಿನೂ ಖುಷಿ…. ಅಂವ ತಮಿಳುನಾಡಿಂದ ಈಗ ಭದ್ರಾವತಿಗೆ ವರ್ಗ ಮಾಡಿಸಿಕೊಂಡು ಬರುವವನಡ. ಚಲೊತಾಗ್ಲಿ ಇವಂಗೆ. ನೋಡಿದ್ರ…. ನಿಮ್ಮೆದುರಿಗೆ ಹ್ಯಾಂಗ್ ಬೆಳೆದ… “ಹಳಿದವರ ಮುಂದೆ ಹೀಂಗ್ ಬೆಳೆಯವು” ಎಂಬ ಕೊಂಕು ನುಡಿಯೊಂದಿಗೆ ಮಾತು ಮುಗಿಸಿದಳು. ಮಾವ ಮಾತಾಡಲಿಲ್ಲ. ಸಂಚಿತನೂ ಅಷ್ಟೆ. ಕೆಲವು ಮಾತುಗಳಿಗೆ ಹೆಚ್ವಿನ ಪ್ರತಿಕ್ರಿಯೆ ಯಾವತ್ತೂ ನೀಡುವವನಲ್ಲ.
ಒಂದರ್ಥದಲ್ಲಿ ಮನೆಗವನೇ ದೀಪ. ಬೆಳಗುವ ದೀಪ.
ಹೆಚ್ಚಿನ ಬರಹಗಳಿಗಾಗಿ
ಅವಳು ಬಂದಿದ್ದಳು
ಬಿ.ಆರ್.ಲಕ್ಷ್ಮಣರಾವ್
ನವೋನ್ಮೇಷ ಪುಸ್ತಕ ಲೋಕಾರ್ಪಣೆ