ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅವಳು ಬಂದಿದ್ದಳು

ಟಿ ಎಸ್ ಶ್ರವಣ ಕುಮಾರಿ
ಇತ್ತೀಚಿನ ಬರಹಗಳು: ಟಿ ಎಸ್ ಶ್ರವಣ ಕುಮಾರಿ (ಎಲ್ಲವನ್ನು ಓದಿ)

ಬಂದವರೊಂದಿಗೆ ಅತ್ತೆಯವರ ಗುಣಗಾನವಾಯಿತು. ಎಲ್ಲರೂ ಹೊರಟರು. ಇವರೂ ಹೊರಡಲೆಂದು ಎದ್ದಾಗ ವನಜಾಕ್ಷಿ “ಹೀಗ್‌ ಕೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ. ನಿಮ್ಮನೆಗೆ ಈಗೊಂದು ತಿಂಗ್ಳಿಂದ ಅದ್ಯಾರೋ ಹೆಂಗಸು ಬಂದಿದಾರಂತಲ್ಲ. ಅವರ‍್ಯಾರು. ನೆಂಟ್ರಾ?” ಎಂದರು. ಇಬ್ಬರಿಗೂ ಜೀವವೇ ಬಾಯಿಗೆ ಬಂದ ಹಾಗಾಯಿತು. ಮಾತೇ ಹೊರಡಲಿಲ್ಲ. ಸರಳಾ ಧೈರ್ಯ ತೆಗೆದುಕೊಂಡು “ನಿಮಗ್ಯಾರು ಹೇಳಿದ್ದು, ಹಂಗೇನಿಲ್ವಲ್ಲಾ” ಎಂದಳು.

ಶ್ರೀಮತಿ ಟಿ. ಎಸ್.‌ ಶ್ರವಣ ಕುಮಾರಿ ಅವರ ‘ಅವಳು ಬಂದಿದ್ದಳು’ ಕಥೆಯಿಂದ..

ಅವಳು ಬಂದಿದ್ದಳು… ಹೀಗೇ… ಎಷ್ಟೋ ದಿನದಿಂದ ಪರಿಚಿತಳಾಗಿದ್ದವಳಂತೆ. ಕಾಲಿಂಗ್‌ ಬೆಲ್ ಸದ್ದಾದ ತಕ್ಷಣ ಒಳಗಿಂದ ಬಂದ ಸುಧಾಕರ ಬಾಗಿಲ ಗ್ರಿಲ್ಲಿನಿಂದ ಹೊರನೋಡುತ್ತಾ ಅವಳನ್ನು ಕಂಡು “ಯಾರು ನೀವು? ಯಾರು ಬೇಕು?” ಎಂದ. “ಇದು ಕೇಶವಮೂರ್ತಿಗಳ ಮನೆ ತಾನೇ” ಎಂದಳು ಬಂದವಳು. “ಹೌದು” ಎಂದ ತಕ್ಷಣ “ನಾನು ಅವರನ್ನು ನೋಡಲು ಬಂದೆ” ಅಂದಳು. ನಲವತ್ತರ ಆಸುಪಾಸಿನ ಹೆಂಗಸು. ಸ್ವಲ್ಪ ಸ್ಥೂಲವೆನಿಸಿದರೂ ಚೆಲುವೆಯೆಂದು ಧಾರಾಳವಾಗಿ ಹೇಳಬಹುದು. ʻಇವಳಿಗೆ ಅಪ್ಪನೊಂದಿಗೆ ಏನು ಕೆಲಸʼ ಎಂದು ಅನ್ನಿಸಿದರೂ ಬಾಗಿಲು ತೆರೆದ. ಒಳ ಬಂದವಳ ಕೈಯಲ್ಲಿ ಒಂದು ದೊಡ್ಡ ಸೂಟ್ಕೇಸಿತ್ತು. ನೆಂಟರೋ, ಇಷ್ಟರೋ, ಸ್ನೇಹಿತರೋ ಒಂದೂ ಅರ್ಥವಾಗಲಿಲ್ಲ. ಅಡುಗೆ ಮನೆಯ ಬಾಗಿಲಿಂದ ಸುಧಾಕರನ ಹೆಂಡತಿ ಸರಳಾ ಇಣುಕಿದಳು. ಅಷ್ಟರಲ್ಲಿ ಮಹಡಿಯ ಮೇಲ್ತುದಿಯಲ್ಲಿ ನಿಂತಿದ್ದ ಕೇಶವ ಮೂರ್ತಿಗಳು ಕೆಳಗಿಳಿದು ಅವಳ ಸೂಟ್ಕೇಸನ್ನು ತೆಗೆದುಕೊಂಡು “ಮೇಲೇ ಬಾ” ಎನ್ನುತ್ತಾ ಒಳಸರಿದರು. ಅವಳು ನಿಧಾನವಾಗಿ ಮೆಟ್ಟಿಲು ಹತ್ತಿದಳು… ಹಾಗೆಯೇ ಒಳಹೋದಳು…

ಸುಧಾಕರನಿಗೆ ಏನೂ ಅರ್ಥವಾಗದೇ ಸರಳಳ ಕಡೆಗೆ ತಿರುಗಿದರೆ ಅವಳ ಕಣ್ಣುಗಳಲ್ಲಿಯೂ ಪ್ರಶ್ನೆಯೇ ಕಾಣಿಸಿತು. ಬಟ್ಟೆ ಒಗೆಯುವುದನ್ನು ಮುಗಿಸಿಕೊಂಡು ಸೀರೆಯ ಸೆರಗಿಗೆ ಕೈಯನ್ನು ಒರೆಸುತ್ತಾ ಒಳಗೆ ಬಂದ ಪದ್ಮಾಗೆ ಗಂಡಹೆಂಡಿರಿಬ್ಬರೂ ಒಬ್ಬರ ಮುಖವನ್ನೊಬ್ಬರು ಪ್ರಶ್ನಾರ್ಥಕವಾಗಿ ನೋಡುತ್ತಾ ನಿಂತಿರುವುದನ್ನು ಕಂಡು ಅಚ್ಚರಿಯಾಗಿ “ಏನಾಯ್ತು?” ಎಂದು ಕಣ್ಣಲ್ಲೇ ಕೇಳಿದಳು. ಮೆಟ್ಟಿಲ ಕಡೆಯೇ ನೋಡುತ್ತಿದ್ದ ಸರಳಾ “ಯಾರೋ ಹೆಂಗಸು… ಯಾರೂಂತ ನಮ್ಮಿಬ್ರಿಗೂ ಗೊತ್ತಿಲ್ಲ ಮಾವನವರನ್ನು ಕೇಳ್ಕೊಂಡು ಬಂದ್ಳು. ಅವರು ಅವಳನ್ನ ಸೀದಾ ಮಹಡಿಯ ಮೇಲಕ್ಕೆ ಕರೆದುಕೊಂಡು ಹೋದ್ರು. ಏನೋ ವಿಚಿತ್ರ ಅನ್ನಿಸ್ತಿದೆಯಲ್ವಾ” ಮೆತ್ತಗೆ ಅಂದಳು. ಅಷ್ಟರಲ್ಲಿ ಮೂರ್ತಿಗಳು ಕೆಳಗಿಳಿಯುತ್ತಿದ್ದದ್ದು ಕಂಡು ಇಬ್ಬರೂ ಅಡುಗೆಮನೆಯ ಕಡೆಗೆ ಹೊರಟರು. ಸುಧಾಕರ ವರಾಂಡಕ್ಕೆ ನಡೆದ. ಅಡುಗೆಮನೆಯ ಬಾಗಿಲಲ್ಲಿ ನಿಂತ ಮೂರ್ತಿಗಳು “ಪದ್ಮಾ ಎರಡು ಲೋಟ ಕಾಫಿ ಬೆರಸ್ಕೊಡಮ್ಮ” ಎಂದು ಅಲ್ಲೇ ನಿಂತರು. ಪದ್ಮಾ ಕಾಫಿ ಬಿಸಿಮಾಡಿ ಎರಡು ಲೋಟಕ್ಕೆ ಸುರಿದು ತಟ್ಟೆಗೆ ಜೋಡಿಸಿಕೊಂಡು ಬಂದಳು. ಅವಳ ಕೈಯಿಂದ ಅದನ್ನು ತೆಗೆದುಕೊಂಡು “ಊಟಕ್ಕೆ ಆಕೇನೂ ಇರ‍್ತಾಳೆ” ಎಂದವರೇ ಮುಂದಿನ ಮಾತಿಗೆ ಅವಕಾಶವಿಲ್ಲದಂತೆ ಮಹಡಿಯನ್ನು ಹತ್ತಿದರು.
 
ಅವರು ಹೋಗಿದ್ದನ್ನು ಗಮನಿಸಿಕೊಂಡು ಒಳಬಂದ ಸುಧಾಕರ ಅಡುಗೆಮನೆಗೆ ಹೋಗಿ “ಏನಂತೆ” ಅಂದ. ಸರಳಾ “ಕಾಫಿ ಮಾಡಿಸ್ಕೊಂಡು ಹೋದ್ರು. ಆ ಹೆಂಗಸೂ ಊಟಕ್ಕಿರ‍್ತಾಳೆ ಅಂದ್ರಪ್ಪ” ಎನ್ನುತ್ತಾ ತರಕಾರಿಯನ್ನು ತೆಗೆದುಕೊಳ್ಳಲು ಫ್ರಿಜ್ಜಿನ ಬಾಗಿಲನ್ನು ತೆರೆದಳು. “ಯಾರೂಂತೇನಾದ್ರೂ ಹೇಳಿದ್ರಾ?” ತಿಂಡಿ ತಿನ್ನುತ್ತಲೇ ಕೇಳಿದವನಿಗೆ “ಹೇಳಿದ್ರೆ ಹೇಳ್ತಿರ‍್ಲಿಲ್ವಾ” ಎಂದಳು ತಿರುಗದೆ. “ಇಷ್ಟು ವರ್ಷದಲ್ಲಿ ನಾನು ಆಕೇನ ನೋಡಿದ್ದೇ ನೆನಪಿಲ್ಲಪ್ಪ; ಯಾರೋ ಏನ್ಕತೆಯೋ. ಅಪ್ಪನ್ನ ಹುಡುಕ್ಕೊಂಡು ಇದುವರ‍್ಗೂ ಯಾವ ಹೆಂಗ್ಸೂ ಬಂದಿದ್ದು ನಂಗೊತ್ತಿಲ್ಲ” ಎನ್ನುತ್ತಾ ತಟ್ಟೆಯಿಟ್ಟು ಕೈತೊಳೆದ. “ಸರಿ, ನಾನು ಹೋಗ್ಬರ‍್ತೀನಿ” ಎಂದು ಕೀಸ್ಟಾಂಡಿಗೆ ಸಿಕ್ಕಿಸಿದ್ದ ಸ್ಕೂಟರ್‌ ಕೀಯನ್ನು ತೆಗೆದುಕೊಂಡು ಹೊರ ನಡೆದ. ಇಷ್ಟು ಹೊತ್ತೂ ದೇವರ ಕೋಣೆಯಲ್ಲಿ ಪೂಜೆಯಲ್ಲಿ ತೊಡಗಿದ್ದ ರವಿಶಂಕರ ಅರ್ಘ್ಯಪಾತ್ರೆಯಲ್ಲಿದ್ದ ನೀರನ್ನು ಹಿತ್ತಲಿನ ಗಿಡದ ಬುಡಕ್ಕೆ ಚೆಲ್ಲಿಬಂದು ಆಫೀಸಿಗೆ ಹೋಗಲು ತಯಾರಾಗಿ ಅಡುಗೆಮನೆಗೆ ಬಂದು “ತಿಂಡಿ ಕೊಡು” ಎಂದು ಪದ್ಮಳನ್ನು ಕೇಳಿದ. ಅನ್ಯಮನಸ್ಕಳಾಗಿ ಏನೂ ಮಾತಾಡದೇ ಉಪ್ಪಿಟ್ಟನ್ನು ತಟ್ಟೆಗೆ ಬಡಿಸಿಕೊಂಡು ಬಂದು ಗಂಡನ ಕೈಯಲ್ಲಿಟ್ಟಳು. ಡೈನಿಂಗ್‌ ಟೇಬಲ್ಲಿನ ಮೇಲಿಟ್ಟುಕೊಂಡು ತಿನ್ನಲು ಶುರುಮಾಡಿದವನ ಮುಂದೆ ನೀರಿನ ಲೋಟವಿಟ್ಟು “ಏನಾಯ್ತಂತೆ ಗೊತ್ತಾ…” ಎನ್ನುತ್ತಾ ತನಗೆ ತಿಳಿದಷ್ಟು ವಿಷಯವನ್ನು ಗಂಡನ ಕಿವಿಗೆ ಹಾಕಿದಳು. ಅವನೂ ಅಚ್ಚರಿಯಿಂದ ಅವಳ ಮುಖ ನೋಡಿದ. “ಊಟಕ್ಕಿರ‍್ತಾರೆ ಅಂದಿದಾರಲ್ಲ, ಯಾರೂಂತ ಗೊತ್ತಾಗತ್ತೆ ಬಿಡು” ಎಂದವನು ಅತ್ತಿಗೆ ತಂದುಕೊಟ್ಟ ಕಾಫಿಯನ್ನು ಕುಡಿದು “ಹೋಗ್ಬರ‍್ತೀನಿ” ಎನ್ನುತ್ತಾ ಗಾಡಿಯ ಕೀ ತೆಗೆದುಕೊಂಡು ಆಫೀಸಿಗೆ ಹೊರಟ.


ಇಬ್ಬರು ಹೆಂಗಸರ ಮುಖದಲ್ಲೂ ನೂರು ಪ್ರಶ್ನೆಗಳು. ಅತ್ತೆ ಕಮಲಮ್ಮ ಹೋಗಿ ಎರಡು ತಿಂಗಳಾಗಿದೆಯಷ್ಟೇ. ಸುಮಾರು ಮೂವತ್ತೈದು ವರ್ಷಗಳ ಸುಧೀರ್ಘ ದಾಂಪತ್ಯ, ವರ್ಷದ ಕೆಳಗಷ್ಟೇ ಷಷ್ಟಿಪೂರ್ತಿ ಶಾಂತಿಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ವರ್ಷಕ್ಕೊಂದು ಗ್ರಾಮಿನಂತೆ ಲೆಕ್ಕಹಾಕಿ ಅರವತ್ತು ಗ್ರಾಮಿನ ಬಂಗಾರದ ಸರವನ್ನು ಮಾಡಿಸಿ ಹೆಂಡತಿಗೆ ತೊಡಿಸಿ ಸಂಭ್ರಮಿಸಿದ್ದರು. ಚೊಚ್ಚಲು ಹೆರಿಗೆಗೆ ಬಿಟ್ಟರೆ ಕಮಲಮ್ಮ ತವರಿಗೆ ಹೋದದ್ದೇ ಇಲ್ಲವೇನೋ. ತವರಿನಲ್ಲಿ ತಾಯಿ, ತಂದೆಯಿಲ್ಲದೆ ಅಷ್ಟೊಂದು ಆದರದಿಂದ ಬರಮಾಡಿಕೊಳ್ಳುವವರೂ ಇರಲಿಲ್ಲ. ಅಣ್ಣ-ತಮ್ಮಂದಿರ ಮಕ್ಕಳ ಮದುವೆ, ಮುಂಜಿಗೆಂದು ನಾಕುದಿನ ಹೋಗಿಬರುತ್ತಿದ್ದುದಷ್ಟೇ. ಈ ಮನೆಯೇ ಆಕೆಯ ಸರ್ವಸ್ವವಾಗಿತ್ತು. ಇಬ್ಬರು ಗಂಡುಮಕ್ಕಳು, ಒಬ್ಬ ಮಗಳು ಎಲ್ಲರ ಮದುವೆಯೂ ಆಗಿ ನೋಡಿದವರ ಕಣ್ಣು ಬೀಳುವಂತೆಯೇ ಇದ್ದರು ಗಂಡಹೆಂಡಿರು, ಹಾಗೆಯೇ ಅವರ ಸಂಸಾರ. ಮೊದಲಿನಿಂದಲೂ ಮಿತಭಾಷಿಗಳೇ ಆದ ಮೂರ್ತಿಗಳನ್ನು ಕಮಲಮ್ಮನವರೊಬ್ಬರೇ ಮಾತಾಡಿಸುತ್ತಿದ್ದುದು. ಯಾರ ಮೇಲೆಯೂ ಸಿಟ್ಟು, ಸೆಡವು ತೋರಿಸದಿದ್ದರೂ ಮಕ್ಕಳಿಗೆ ಅಪ್ಪನೊಂದಿಗೆ ಸಲುಗೆಯಿಲ್ಲ, ಸೊಸೆಯರಿಗಂತೂ ಇಲ್ಲವೇ ಇಲ್ಲ. ಮೊಮ್ಮಕ್ಕಳಿನ್ನೂ ಚಿಕ್ಕವರು. ತುಂಬಾ ಸಲುಗೆಯಲ್ಲದಿದ್ದರೂ ತಾತನೊಂದಿಗೆ ಒಂದಷ್ಟು ಕಾಲ ಕಳೆಯುತ್ತಾರೆ. ಆದರೆ ಹೆಂಡತಿ ಹೋದ ಮೇಲೆ ಮೂರ್ತಿಗಳು ಮಹಡಿ ಬಿಟ್ಟು ಇಳಿಯುತ್ತಿರುವುದು ತಿಂಡಿಯ, ಊಟದ ಹೊತ್ತಿಗಷ್ಟೇ; ಮಾತು ತುಂಬಾ ಕಡಿಮೆಯಾಗಿದೆ. ಮನೆಯ ಯಾರಿಗೂ ಅದೇಕೋ ಮಹಡಿ ಹತ್ತಿ ಹೋಗುವ ಅಭ್ಯಾಸ ಮೊದಲಿನಿಂದಲೂ ಇಲ್ಲ. ಈಗಂತೂ ಇಲ್ಲವೇ ಇಲ್ಲ. ಏನಿದ್ದರೂ ಅವರ ಆಪ್ತ ಸ್ನೇಹಿತರು ಯಾರಾದರೂ ಬಂದರೆ ಮಾತ್ರಾ ಮೇಲೆ ಹೋಗಿ ಒಂದಷ್ಟು ಹರಟಿ, ಕಾರ್ಡ್ಸ್‌ ಆಡುತ್ತಾ ಕುಳಿತುಕೊಳ್ಳುತ್ತಾರೆ. ಆಗ ತಿಂಡಿ, ಕಾಫಿಯನ್ನು ಮನೆಯವರು ಯಾರಾದರೂ ತೆಗೆದುಕೊಂಡು ಹೋಗುವುದು ಬಿಟ್ಟರೆ ಮಿಕ್ಕಂತೆ ಕೆಲಸದವರನ್ನು ಬಿಟ್ಟರೆ, ಬೇರೆ ಯಾರೂ ಮೇಲೆ ಹೋಗುವುದಿಲ್ಲ. ಮನೆಯವರೊಂದಿಗೆ ಅಷ್ಟು ಗಂಭೀರದಿಂದಿರುವ ರಾಯರು ಗೆಳೆಯರ ಜೊತೆಗೆ ನಗುತ್ತಾ ಹರಟುವುದು ಮನೆಯವರಿಗೆ ಒಂದು ಅಚ್ಚರಿಯೇ. ಹಾಗೆ ಮಗಳು ಶೈಲಜನೊಂದಿಗೆ ಒಂದಷ್ಟು ಪ್ರೀತಿಯಿಂದ ಹರಟುತ್ತಿದ್ದರಷ್ಟೇ.


ಇಬ್ಬರು ಸೊಸೆಯರೂ ಊಹಾಪೋಹದ ಇಟ್ಟಿಗೆ ಇಡುತ್ತಲೇ ಅಡುಗೆಯನ್ನು ಮುಗಿಸಿದರು. ಗಂಟೆ ಒಂದೂವರೆ… ಇನ್ನೇನು ಸುಧಾಕರ, ರವಿಶಂಕರ ಇಬ್ಬರೂ ಊಟಕ್ಕೆ ಬರುವ ಹೊತ್ತು. ಸುಧಾಕರನದು ಅಪ್ಪನಿಂದಲೇ ಬಂದ ಹೋಲ್ಸೇಲ್‌ ಕಿರಾಣಿ ಅಂಗಡಿ. ಹೆಂಡತಿಯ ಸಾವಿನ ನಂತರ ಮೂರ್ತಿಗಳು ಅಂಗಡಿಗೆ ಹೋಗುವುದನ್ನು ಬಿಟ್ಟಿದ್ದಾರೆ. ಇಲ್ಲದಿದ್ದರೆ ಬೆಳಗ್ಗೆ ಹೋಗಿ ಮಧ್ಯಾಹ್ನದ ಹೊತ್ತಿಗೆ ವಾಪಸಾಗುತ್ತಿದ್ದರು. ನಂತರ ಹೋಗುತ್ತಿರಲಿಲ್ಲವಷ್ಟೇ. ಅಂಗಡಿಯಲ್ಲಿ ಕೆಲಸಕ್ಕಿರುವ ವೀರೇಶನ ದಿನನಿತ್ಯದ ತಿಂಡಿ, ಊಟ ಎಲ್ಲಾ ಇಲ್ಲೇ. ಊಟ ಮುಗಿಸಿದ ತಕ್ಷಣ ಅವನು ಅಂಗಡಿಗೆ ವಾಪಸ್ಸು ಹೋಗುತ್ತಾನೆ. ಸುಧಾಕರ ಊಟದ ನಂತರ ಒಂದಿಷ್ಟು ಅಡ್ಡಾಗಿ ನಾಲ್ಕು ಗಂಟೆಗೆ ಕಾಫಿ ಕುಡಿದು ಅಂಗಡಿಗೆ ಹೋದರೆ ರಾತ್ರಿ ಒಂಭತ್ತಕ್ಕೆ ಮರಳಿ ಬರುತ್ತಾನೆ. ರವಿಶಂಕರ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್‌ ಆಗಿದ್ದಾನೆ. ಒಂದು ಗಂಟೆ ಊಟದ ಬಿಡುವಿನಲ್ಲಿ ಮನೆಗೆ ಬಂದು ಊಟಮಾಡಿ ತಕ್ಷಣವೇ ಮತ್ತೆ ಹೊರಡುತ್ತಾನೆ. ಸಂಜೆ ಆರೂವರೆಯ ಹೊತ್ತಿಗೆ ಮನೆಗೆ ವಾಪಸ್ಸು ಬರುತ್ತಾನೆ. ಮಧ್ಯಾಹ್ನ ಇವರೆಲ್ಲರದೂ ಊಟವಾದ ನಂತರ ಸರಳಾ ಪದ್ಮಾ ಇಬ್ಬರೂ ಅಡುಗೆ ಮನೆಯಲ್ಲೇ ಹರಟುತ್ತಾ ಊಟಮಾಡುತ್ತಾರೆ. ಕಾಫಿಯ ಸಮಯದ ತನಕ ಇಬ್ಬರಿಗೂ ಬೇರೇನೂ ಕೆಲಸವಿಲ್ಲ. ಮಕ್ಕಳು ಶಾಲೆಯಿಂದ ಬರುವ ವೇಳೆಗೆ ಏನಾದರೂ ತಿಂಡಿ ಮಾಡಿದರಾಯಿತು.
 
ಇಂದು ಇಬ್ಬರಿಗೂ ಬಂದಿರುವ ಆಕೆಯನ್ನು ನೋಡುವ ಕುತೂಹಲವಿದೆ. ರವಿಶಂಕರ, ಸುಧಾಕರ ಇಬ್ಬರೂ ಊಟಕ್ಕೆ ಬಂದಾಯಿತು. ವೀರೇಶ, ಮೂರ್ತಿಯವರನ್ನು ಕರೆಯಲು ಹೋದವನು ʻಸರಿʼ ಎನ್ನುತ್ತಾ ಒಬ್ಬನೇ ಕೆಳಗಿಳಿದ. “ಅಕ್ಕಾ ಇಬ್ರಿಗೂ ತಟ್ಟೇಲಿ ಬಡ್ಸಿ ಕೊಡ್ಬೇಕಂತೆ. ಮೇಲ್ ಕೊಟ್ಬರ‍್ತೀನಿ” ಎಂದ. ಸರಳಾ, ಪದ್ಮಾ ಮುಖಮುಖ ನೋಡಿಕೊಂಡು ಮಾತಿಲ್ಲದೆ ತಟ್ಟೆಯಲ್ಲಿ ಬಡಿಸಿ ಬೇರೆ ಬೇರೆ ಬಟ್ಟಲುಗಳಲ್ಲಿ ಸಾರು, ಹುಳಿ, ಮೊಸರು ಎಲ್ಲವನ್ನೂ ಜೋಡಿಸಿಕೊಟ್ಟರು. ವೀರೇಶ ಕೊಟ್ಟು ಬಂದು ತನ್ನ ತಟ್ಟೆಯನ್ನು ಕೈಗೆ ತೆಗೆದುಕೊಂಡು ಹಿತ್ತಲಿಗೆ ಹೋದ. ಅವನಿಗೆ ಎಲ್ಲರ ಎದುರು ತಿನ್ನಲು ಏನೋ ಸಂಕೋಚ. ಒಂದಷ್ಟು ಹೊತ್ತು ಒಂದು ಅಸ್ವಾಭಾವಿಕ ಮೌನ ಅವರೆಲ್ಲರ ಮಧ್ಯೆ ಕೂತುಬಿಟ್ಟಿತು. ಎಷ್ಟೋ ಹೊತ್ತಿನ ನಂತರ ಸುಧಾಕರ ʻಹ್ಞೂಂʼ ಎನ್ನುತ್ತಾ ತಟ್ಟೆಗೆ ಕೈ ಹಾಕಿದ. ರವಿಶಂಕರನೂ ಊಟ ಶುರುಮಾಡಿದ. ಇಬ್ಬರೂ ಬಡಿಸಿದರು. ಊಟವನ್ನು ಮುಗಿಸಿ ಬಂದ ವೀರೇಶ ಅಂಗಡಿಗೆ ಹೊರಡುವುದರಲ್ಲಿದ್ದಾಗ ಮೇಲಿಂದ ಮೂರ್ತಿಗಳು ಅವನನ್ನು ಕರೆದದ್ದು ಕೇಳಿಸಿತು. ಅವನು ಮೇಲೆ ಹೋಗಿ ಊಟವಾಗಿದ್ದ ತಟ್ಟೆಗಳನ್ನು ಕೆಳಗೆ ತಂದು ತೊಳೆದು ಅಡುಗೆಮನೆಯಲ್ಲಿಟ್ಟು ಹೊರಟ. ಅವನು ಹೊರಹೋದಮೇಲೆ “ಇದೇನು ಹೀಗೆ…, ವಿಚಿತ್ರ. ಮನೆಗೆ ಬಂದವ್ರು ಎಲ್ರ ಜೊತೆ ಕೂತು ಊಟಮಾಡ್ದೇ ದಿವಾನ್ರ ಥರ ಮೇಲೇ ಕೂತು ದರ್ಬಾರ್‌ ಮಾಡೋದು” ಎಂದಳು ಸರಳಾ ತಡೆಯಲಾಗದೆ. ಅವಳ ಮಾತನ್ನು ಒಪ್ಪಿ ಪದ್ಮಳೂ ತಲೆಯಾಡಿಸಿದಳು. “ಸರಿ, ಏನ್ಕತೆಯೋ… ಗೊತ್ತಾಗತ್ತೆ… ನೀವಿಬ್ರೂ ಊಟ ಮಾಡಿ, ಆಗ್ಲೇ ಎರಡೂವರೆ ಆಗ್ತಾ ಬಂತು” ಎನ್ನುತ್ತಾ ಅಣ್ಣತಮ್ಮಂದಿರಿಬ್ಬರೂ ಮೇಲೆದ್ದರು…
 
ಸಂಜೆ ಮೂರ್ತಿಗಳೇ ಕೆಳಗಿಳಿದು ಬಂದು ಕಾಫಿ ಬಿಸ್ಕತ್ತನ್ನು ಮೇಲೊಯ್ದರು. ಮಕ್ಕಳು ಸ್ಕೂಲಿನಿಂದ ಬಂದಾಯಿತು. ತಿಂಡಿ ತಿಂದು ಮುಗಿದ ಮೇಲೂ ದಿನವೂ ವರಾಂಡದಲ್ಲಿ ಕುಳಿತಿರುತ್ತಿದ್ದ ತಾತ ಕಾಣಲಿಲ್ಲ. “ತಾತ ಮನೇಲಿಲ್ವಾ?” ಎಂದು ಕೇಳಿದ ಮಕ್ಕಳಿಗೆ “ಯಾರೋ ಬಂದಿದಾರೆ. ಮೇಲ್ಗಡೆ ಮಾತಾಡ್ತಿದಾರೆ. ನೀವು ಆಟಕ್ಕೋಗಿ” ಎಂದು ಆಡಲು ಕಳಿಸಿದ್ದಾಯಿತು. ರಾತ್ರಿ ಊಟದ ಹೊತ್ತಿಗೆ ಮತ್ತೆ ಬೆಳಗಿನಂತೆ ವೀರೇಶ ಮೇಲುಗಡೆ ತೆಗೆದುಕೊಂಡು ಹೋಗಿ ಕೊಟ್ಟ. ಮಕ್ಕಳು “ತಾತ ಯಾಕೆ ಕೆಳಗೆ ಊಟಕ್ಕೆ ಬರ‍್ಲಿಲ್ಲ” ಎಂದು ಕೇಳಿದ್ದಕ್ಕೆ “ಬಂದವರಿಗೆ ಇಳಿಯಕ್ಕಾಗಲ್ವಂತೆ; ಅದಕ್ಕೇ ಅವರ‍್ಜೊತೆಗೆ ಮೇಲ್ಗಡೇನೇ ಊಟ ಮಾಡ್ತಿದಾರೆ” ಎಂದು ಸುಮ್ಮನಾಗಿಸಿದ್ದಾಯಿತು. ಪುಣ್ಯಕ್ಕೆ ʻಹಾಗಾದ್ರೆ ಮೇಲೆ ಹೇಗೆ ಹತ್ತಿದ್ರು?ʼಅನ್ನೋ ಪ್ರಶ್ನೆ ಮಕ್ಕಳ ತಲೆಯಲ್ಲಿ ಬರಲಿಲ್ಲ…

ರಾತ್ರಿ ಮಲಗಿದಾಗಲೂ ಗಂಡ ಹೆಂಡಿರಿಬ್ಬರ ತಲೆಯಲ್ಲೂ ಇದೇ ವಿಷಯ ಕೊರೆಯುತ್ತಿದ್ದರೂ ಇಬ್ಬರಿಗೂ ಸ್ಪಷ್ಟವಾಗಿ ಏನೂ ತಿಳಿದಿಲ್ಲ. “ಎಷ್ಟು ದಿನ ಇರ‍್ತಾರೋ… ಆದ್ರೂ ಮೇಲ್ಗಡೆ ಅವರಿಬ್ರೇ… ಏನೋ ಸರಿಯಿಲ್ಲ ಅನ್ನಿಸ್ತಿಲ್ವಾ?” ಎಂದಳು ಸರಳಾ ಮಕ್ಕಳು ಮಲಗಿದ ನಂತರ. “ಏನೂ ಗೊತ್ತಿಲ್ದೇ ಏನೇನೋ ಊಹೆ ಮಾಡ್ಕೊಳೋದು ಬೇಡ” ಎಂದ ಸುಧಾಕರ ನಿದ್ರೆ ಬಂದವನಂತೆ ಪಕ್ಕಕ್ಕೆ ತಿರುಗಿದ. ಎಷ್ಟೋ ಹೊತ್ತು ಸರಳನಿಗೆ ನಿದ್ರೆ ಬರದೇ ಹೊರಳಾಡುತ್ತಲೇ ಇದ್ದಳು. ಪದ್ಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಅತ್ತೆ ಹೋಗಿ ಇನ್ನೂ ಎರಡು ತಿಂಗಳಾಗಿದ್ಯೇನೋ ಅಷ್ಟೇ. ಇದೇನು ಚೆನ್ನ…” ಎಂದಳು ರವಿಶಂಕರನೊಡನೆ. “ಛೇ… ಹಾಗೆಲ್ಲಾ ಮಾತಾಡ್ಬೇಡ. ಅಂತದೇನೂ ಇರಲ್ಲ” ಎಂದ. “ಏನೋ ನಂಗನ್ಸಿದ್ದು ಹೇಳ್ದೆ” ಅಂದಳು. ರವಿಶಂಕರ ಮುಂದೆ ಮಾತಾಡಲಿಲ್ಲ.


ಅಂತೂ ಅಂದಿನಿಂದ ಮನೆಯಲ್ಲಿ ಈ ಹೊಸ ಪದ್ಧತಿ ಜಾರಿಗೆ ತಾನಾಗೇ ಬಂದು ಬಿಟ್ಟಿತು. ಕಾಫಿಯನ್ನೋ, ಜ್ಯೂಸನ್ನೋ ತೆಗೆದುಕೊಂಡು ಹೋಗಲು ಬಿಟ್ಟರೆ ಮಿಕ್ಕಂತೆ ಕೇಶವ ಮೂರ್ತಿಗಳು ಕೆಳಗಿಳಿಯುತ್ತಿರಲಿಲ್ಲ. ಊಟ, ತಿಂಡಿ ಎಲ್ಲವೂ ಮೇಲೆಯೇ. ವೀರೇಶನೊಬ್ಬನೇ ದಿನಕ್ಕೆ ಮೂರು ಸಲ ಹತ್ತಿಳಿಯುತ್ತಿದ್ದುದು. ಮಿಕ್ಕ ಹಾಗೆ ಎಂದಿನಂತೆ ಈಗಲೂ ಮನೆಯವರು ಯಾರಿಗೂ ಮೇಲೆ ಹೋಗಲು ಏನೋ ಹಿಂಜರಿಕೆ… ಯಾರೂ ಮಹಡಿ ಹತ್ತಲಿಲ್ಲ. ಮಹಡಿಯ ಮೇಲೆ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಅವರವರದೇ ಊಹಾಪೋಹ ಎಲ್ಲರ ಮನದಲ್ಲೂ ನಡೆಯತ್ತಿದೆ. ಒಬ್ಬರಿಗೊಬ್ಬರು ಹೇಳಿಕೊಳ್ಳಲಾಗುತ್ತಿಲ್ಲ. ಒಂದು ಬಗೆಯ ಮೂಗುಬ್ಬಸ ಮನೆಯನ್ನೆಲ್ಲಾ ತುಂಬಿದೆ. ಹಿತ್ತಲಿನ ಮಲ್ಲಿಗೆಯ ಚಪ್ಪರದ ಬಳಿ ನಿಂತರೆ ಮಹಡಿಯ ಹಿಂದಿನ ಬಿಸಿಲು ಮಚ್ಚು ಕಾಣುತ್ತದೆ. ಅಲ್ಲಿ ಒಣ ಹಾಕಿರುವ ಆಕೆಯ ಬಟ್ಟೆಗಳು ಕಾಣುತ್ತವೆ. ಹೀಗೇ ಹಿತ್ತಲಿಗೆ ಬಂದಿದ್ದಾಗ ಒಂದು ಬಾರಿ ಪದ್ಮನಿಗೆ ʻಅವಳುʼ ಪಕ್ಕಕ್ಕೆಲ್ಲೋ ತಿರುಗಿ ತಲೆಗೂದಲು ಒಣಗಿಸಿಕೊಳ್ಳುತ್ತಿರುವುದು ಕಂಡಿತ್ತು. ಮುಖ ಸರಿಯಾಗಿ ಕಾಣಲಿಲ್ಲ. ಹಿಂದಿನಿಂದ ಆಕರ್ಷಕ ಮೈಕಟ್ಟು, ಬಿಳುಪಲ್ಲದಿದ್ದರೂ ಕಪ್ಪಲ್ಲ ಎನ್ನಿಸಿತು; ಹೊರೆಗೂದಲಿದೆ ಎಂದು ತಿಳಿಯಿತು. ಸುಂದರಿಯೇ ಇರಬೇಕು ಎನ್ನುವ ತೀರ್ಮಾನಕ್ಕೆ ಬಂದಳು. ಒಳಬಂದು ಸರಳನ ಜೊತೆಗೂ ಅದನ್ನೇ ಹಂಚಿಕೊಂಡಳು. ತಕ್ಷಣವೇ ಸರಳ ಹೊರಬರುವಷ್ಟರಲ್ಲಿ ಆಕೆ ಒಳಗೆ ಹೋಗಿಯಾಗಿತ್ತು…
 
“ನಂಗೇನೋ ಅನುಮಾನಾನೇ ಪದ್ಮಾ” ಎಂದಳು ಸರಳಾ ತರಕಾರಿ ಹೆಚ್ಚುತ್ತಾ. “ನಂಗೂನೂ ಸರಳಾ. ನಾನು ಹಾಗಂದ್ರೆ ಇವ್ರು ʻಗೊತ್ತಿಲ್ದೇ ಸುಮ್ಸುಮ್ನೆ ಏನೇನೋ ಅನ್ಕೋಬಾರ‍್ದುʼ ಅಂತ ನನ್ನೇ ಬೈದ್ರು ಅಂದಳು ಪದ್ಮಾ ಅಕ್ಕಿ ತೊಳೆಯುತ್ತಾ. “ಬಂದಾಗ್ಲೇ ಹದ್ನೈದು ದಿನದ್‌ಮೇಲಾಯ್ತು. ಅಂತದೇನೂ ಇಲ್ದಿದ್ರೆ ಮಾವನವ್ರು ಆಕೇನ ಕೆಳಕ್ಕರ‍್ಕೊಂಡ್ಬಂದು ಎಲ್ರಿಗೂ ಪರಿಚಯ ಮಾಡ್ಕೊಡೋದ್‌ ತಾನೇ. ಅಷ್ಟೊಂದು ಗುಟ್ಟುಗುಟ್ಯಾಕೆ?” ಎಂದಳು ಸರಳಾ. “ಅತ್ತೇನ್ಕಂಡ್ರೆ ಅಷ್ಟು ಪ್ರೀತಿಯಿದ್ದವ್ರು ಅವ್ರು ಹೋಗಿ ಇನ್ನೂ ಮೂರ‍್ತಿಂಗ್ಳೂ ನೆಟ್ಟಗಾಗ್ಲಿಲ್ಲ. ಅಷ್ಟ್ರಲ್ಲಾಗ್ಲೇ ಹೀಗೆ ಯಾರೋ…. ಮುಂದೆ ಹೇಳಲಾಗದೇ ತಾನಂದುಕೊಂಡಿರುವುದು ಸರಿಯೋ, ತಪ್ಪೋ ನಿರ್ಧರಿಸಲಾಗದೇ ತಡವರಿಸಿದಳು ಪದ್ಮಾ. “ಏನೋಪ್ಪಾ ಎಲ್ಲಾ ಅಯೋಮಯವಾಗಿದೆ. ನಾಕ್‌ ಜನಕ್ಕೆ ವಿಷಯ ತಿಳಿದ್ರೆ ಏನನ್ಕೊಳಲ್ಲ ಹೇಳು. ಅತ್ತೆ ಹೋದಾಗ ಬಂದವ್ರೆಲ್ಲಾ ಮಾವನವ್ರನ್ನ ಸಂತೈಸಿದ್ದೇ ಸಂತೈಸಿದ್ದು…” ಸರಳಾ ಇನ್ನೂ ಏನು ಹೇಳ್ತಿದ್ಲೋ ಮೆಟ್ಟಲಿಳಿಯುವ ಸದ್ದು ಕೇಳಿತು ಮಾತು ನಿಲ್ಲಿಸಿ ಪದ್ಮನಿಗೆ ಸನ್ನೆ ಮಾಡಿ ತರಕಾರಿ ಹೆಚ್ಚುವುದನ್ನು ಮುಂದುವರೆಸಿದಳು. ಬಾಗಿಲಲ್ಲಿ ಬಂದು ನಿಂತ ಮೂರ್ತಿಗಳು “ಜ್ಯೂಸ್ ಮಾಡಿ ಕೊಡ್ತೀಯೇನಮ್ಮಾ” ಎಂದರು. ಪದ್ಮಾ “ಸರಿ ಮಾವ” ಎನ್ನುತ್ತಾ ಮಾಡಿಕೊಟ್ಟಳು.‌ ತೆಗೆದುಕೊಂಡು ಹೊರಟವರನ್ನೇ ಇಬ್ಬರೂ ನೋಡುತ್ತಾ ನಿಂತರು. ಹತ್ತುವ ಸದ್ದು ನಿಂತ ಮೇಲೆ ಪದ್ಮಾ “ಒಂದ್ಸಲ ʻಅವರ‍್ಯಾರು ಮಾವʼ ಅಂತ ಕೇಳಿದ್ರೆ ಹೇಗೆ?” ಎಂದಳು ಸರಳನ ಕಡೆ ನೋಡುತ್ತಾ. “ಕೇಳ್ನೋಡು ಯಾರು ಬೇಡಾಂದೋರು” ಎಂದ ಸರಳಾ ಈಳಿಗೆ ಮಣೆ ಎತ್ತಿಟ್ಟು ಪಲ್ಯ ಮಾಡಲು ಬಾಣಲಿಯನ್ನು ಒಲೆ ಮೇಲಿಟ್ಟಳು.


ಗಂಡು ಮಕ್ಕಳಿಗೂ ʻಇದೇಕೋ ಸರಿಯಿಲ್ಲʼ ಅನ್ನಿಸಿದರೂ ಮೊದಲೇ ಅನುಮಾನ ಪಡುತ್ತಿರುವ ಹೆಂಡತಿಯರೊಡನೆ ಹಾಗೆನ್ನಲಾರರು. ಇಂಥ ಸೂಕ್ಷ್ಮ ವಿಷಯವನ್ನು ಅಪ್ಪನಲ್ಲಿ ಕೇಳುವುದಾದರೂ ಹೇಗೆ? ಇದುವರೆಗೂ ಅಪ್ಪ ಮರ‍್ಯಾದೆಯಿಂದ ಬಾಳಿ ಬದುಕಿದವರು. ʻಗಂಡ ಹೆಂಡಿರಿದ್ದರೆ ಅವರಿಬ್ಬರ ಹಾಗಿರಬೇಕುʼ ಎನ್ನಿಸಿಕೊಂಡಿದ್ದರು. ಒಂದು ಕಾಲದಲ್ಲಿ ಅಮ್ಮನ್ನ ಯಾವುದೋ ಮದುವೆಮನೆಯಲ್ಲಿ ನೋಡಿದವರು ಇಷ್ಟಪಟ್ಟು ಕೇಳಿ ಮದುವೆ ಮಾಡಿಕೊಂಡಿದ್ದಂತೆ. ಅಷ್ಟೊಂದು ಅಮ್ಮನ್ನ ಹಚ್ಚಿಕೊಂಡಿದ್ದವರು, ಅಮ್ಮ ಹೋದ ಮೇಲೆ ಮಾತನ್ನೇ ಕಡಿಮೆ ಮಾಡಿ ಕೊರಗುತ್ತಿದ್ದವರು ಹೀಗೆ… ಯಾರೊಂದಿಗೂ ಏನನ್ನೂ ಹೇಳದೇ… ಏನು ನಡೆದಿದೆ ಅವರಿಬ್ಬರಲ್ಲಿ? ʻಇನ್ನೇನು ನಡೆಯುತ್ತದೆ ಗಂಡು ಹೆಣ್ಣು ಇಬ್ಬರೇ ಇದ್ದಲ್ಲಿʼ ಅನ್ನಿಸಿದರೂ ಆ ಯೋಚನೆ ಬಂದರೇ ಹೆದರುವಂತಾಗುತ್ತಿತ್ತು. ಒಬ್ಬರೊಡನೊಬ್ಬರು ಅದನ್ನು ಹೇಳಲಾರರು. ತಂದೆಯನ್ನು ಕೇಳಲಾರರು. ಏನೋ ಸರಿಯಿಲ್ಲ ಅಂತಷ್ಟೇ ಅನ್ನಿಸುತ್ತಿದೆ. ಅವರಿಂದ ಯಾರಿಗೂ ತೊಂದರೆಯಾಗುತ್ತಿಲ್ಲ ನಿಜ, ಅವರ ಪಾಡಿಗೆ ಅವರಿದ್ದಾರೆ ಆದರೂ…
 
ಅಂತೂ ವಾಕಿಂಗ್‌ ನೆಪದಲ್ಲಿ ಇಬ್ಬರೂ ಒಂದು ದಿನ ಹೊರಹೋಗಿ ಇದೇ ವಿಷಯವನ್ನು ಕುರಿತು ಸಾಕಷ್ಟು ಮಾತಾಡಿದರು. ಆದರೇನು? ಸಮಸ್ಯೆ ಏನೆನ್ನುವುದೇ ಗೊತ್ತಿಲ್ಲ, ಅಂದಮೇಲೆ ಉತ್ತರವನ್ನು ಹೇಗೆ ಹುಡುಕುವುದು? ಹಾಗೂ ರವಿಶಂಕರ ತನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ವಿಷಯವನ್ನು ಸುಧಾಕರನ ಮುಂದಿಟ್ಟ.

“ಅವರ‍್ಗಾಗ್ಲೇ ಅರವತ್ತೆರಡು ನಡೀತಿದೆ. ನಾಕು ಜನ ಮೊಮ್ಮಕ್ಳಿದಾರೆ. ಈ ವಯಸ್ಸಲ್ಲಿ… ಅದೂ ಇನ್ನೂ ಅಮ್ಮಾ ಹೋಗಿ ಎರ‍್ಡ್ಮೂರು ತಿಂಗ್ಳಲ್ಲೇ ಈ ಥರ… ಏನೋ ಸರಿಯಿಲ್ಲ ಅನ್ಸತ್ತಪ್ಪ” ಎಂದ. “ಅವ್ರನ್ನೇ ಕೇಳಿದ್ರೆ ಹೇಗೆ? ಆಕೆ ಯಾರು, ಆಕೆಗೂ ನಿಮ್ಗೂ ಏನ್ಸಂಬಂಧಾಂತ?” ರವಿಶಂಕರನೆಂದ. “ಅದ್ಸರಿ, ಬೆಕ್ಕಿಗೆ ಗಂಟೆ ಕಟ್ಟೋರ‍್ಯಾರು? ನೀನ್‌ ಕೇಳ್ತೀಯಾ?” ಸುಧಾಕರನೆಂದಿದ್ದಕ್ಕೆ ರವಿಶಂಕರ ಸ್ವಲ್ಪ ಹೊತ್ತು ಯೋಚನೆಯಲ್ಲಿ ಮುಳುಗಿದ್ದು “ಹೀಗ್ಮಾಡ್ಬೋದಾ. ಶೈಲಜಂಗೆ ಫೋನ್‌ ಮಾಡಿ ಬಂದ್ಹೋಗು ಅಂದ್ರೆ ಹೇಗೆ. ಅವ್ಳಿಗೆ ಅಪ್ಪನತ್ರ ಸ್ವಲ್ಪ ಸಲಿಗೆ. ಇನ್ನೇನಲ್ದಿದ್ರೂ ಮೇಲೆ ಹೋಗಿ ಒಂದ್ಸಲ ನೋಡ್ಕೊಂಡಾದ್ರೂ ಬರ‍್ತಾಳೆ. ಏನಾದ್ರೂ ಸುಳಿವು ಸಿಗ್ಬೋದು ಅನ್ಸತ್ತೆ” ಅಂದ. “ಇನ್ನು ಅವ್ಳ ಗಂಡಂಗೆ, ಅತ್ತೆ ಮಾವಂಗೆಲ್ಲಾ ಗೊತ್ತಾಗಿ ಅವರ ಮನೇಲೆಲ್ಲಾ ಗುಲ್ಲೋಗುಲ್ಲಾಗಲ್ವಾ? ನಾವೇ ಊರಿಗೆಲ್ಲಾ ಟಾಂ ಟಾಂ ಮಾಡ್ದ ಹಾಗಾಗಲ್ವಾ” ಸುಧಾಕರನೆಂದ. “ಅದೂ ನಿಜಾನ್ನು. ಒಂದ್ಕೆಲ್ಸ ಮಾಡೋಣ. ಅಪ್ಪನ ಕ್ಲೋಸ್ ಫ್ರೆಂಡ್‌ ಅಡ್ವೋಕೇಟ್‌ ಶ್ರೀಕಂಠ ಜೋಷಿಯವರ ಹತ್ರ ಸೂಕ್ಷ್ಮವಾಗಿ ಈ ವಿಷ್ಯ ಮಾತಾಡಿದ್ರೆ ಹೇಗೆ? ಎಲ್ಲೂ, ಮನೇಲೂ ಬಾಯ್ಬಿಡ್ಬೇಡಿ; ಸುಮ್ನೆ ಮಾತಿನ್ಮಧ್ಯೆ ತಿಳ್ಕೊಳಕ್ಕಾಗತ್ತಾ ನೋಡೀಂದ್ರೆ ಹೇಗೆ? ಆ ಥರಾ ಏನಾದ್ರೂ ಅವ್ರ ಮನಸ್ಸಲ್ಲಿದ್ರೆ ನೀವೊಂದೆರ‍್ಡು ಮಾತು ಹೇಳೀಂತಂದ್ರೆ?” ರವಿಶಂಕರನೆಂದ.
 
ಸ್ವಲ್ಪ ತಡೆದು ಸುಧಾಕರನೆಂದ “ಈಗ್ಲೇ ಹೊರಗಿನವ್ರ ತನ್ಕ ವಿಷ್ಯ ಹೋಗೋದ್ಬೇಡಾನ್ಸತ್ತೆ. ಶೈಲಜಂಗೆ ವಿಷಯ ಹೀಗೇಂತ ಮೊದ್ಲೇ ಹೇಳ್ದೆ ʻಅಪ್ಪಂಗೆ ಹುಷಾರಿಲ್ಲ, ಒಂದೆರ‍್ಡು ದಿನ ಬಂದೋಗುʼ ಅಂತ್ಹೇಳಿ ಕರಸ್ಕೊಂಡು, ಬಂದ್ಮೇಲೆ ನಿಮ್ಮನೇಲ್ ಹೇಳ್ಬೇಡ ಅಂತ ಸೂಕ್ಷ್ಮವಾಗಿ ಹೇಳಿದ್ರೆ… ಅವ್ಳು ನಮ್ಗಿಂತ ವಾಸಿ, ಸ್ವಲ್ಪ ಸಲಿಗೆಯಿಂದ ಅಪ್ಪನತ್ರ ಮಾತಾಡ್ತಾಳೆ” ಅಂದ. “ಅದೂ ನಿಜಾನ್ನು. ಇಲ್ಲೇ ಹಾಸನದಿಂದ ಬರಕ್ಕೇನು ಅಷ್ಟು ಕಷ್ಟವಿಲ್ಲ. ಒಬ್ಳೇ ಬಸ್ಸಲ್ಲಿ ಬಂದ್ಹೋಗ್ಬೋದು. ಹಂಗೇ ಮಾಡೋಣ” ಎಂದ ರವಿಶಂಕರ ಅಲ್ಲೇ ಆಗಲೇ ಫೋನ್‌ ಮಾಡಿ ಅವಳನ್ನು ಕರೆದ. “ಹುಷಾರಿಲ್ಲಾಂದ್ರೆ ಏನಾಗಿದ್ಯೋ?” ಎಂದು ಭಯಬಿದ್ದವಳಿಗೆ “ಅಂಥದೇನಿಲ್ಲ, ಅಮ್ಮನ ಯೋಚನೇಲಿ ಸ್ವಲ್ಪ ಸೊರಗಿದಾರೆ ಅನ್ಸುತ್ತೆ. ಯಾರತ್ರವೂ ಏನೂ ಹೇಳ್ಕೊಳಲ್ಲ; ಇರೋದ್ರಲ್ಲಿ ನಿನ್ಹತ್ರ ಸ್ವಲ್ಪ ಮಾತಾಡ್ತಾರೆ. ನೀ ಬಂದ್ಹೋದ್ರೆ ಸ್ವಲ್ಪ ಚೇತರಿಸಿಕೊಳ್ತಾರೇನೋಂತ” ಎಂದ. “ಸರಿ, ನಾಳೆ ಆಗಲ್ಲ, ನಾಡಿದ್ದು ಹೊರಟ್ಬರ‍್ತೀನಿ. ಆದ್ರೆ ತುಂಬಾ ದಿನ ಇರಕ್ಕಾಗಲ್ಲ; ಸೋಮವಾರ‍್ದಿಂದ ಶ್ರಾವಣ ಮಾಸ ಶುರುವಾಗ್ತಿದೆ. ಹಬ್ಬಸಾಲು. ನಾಡಿದ್ದು ಬುಧವಾರ ಬಂದು ಶನಿವಾರ ವಾಪಸ್ಸಾಗ್ತೀನಿ. ಒಂದ್ಸಲ ನಿಂಭಾವನ್ನೂ ಕೇಳಿ ಕನ್ಫರ್ಮ್‌ ಮಾಡ್ತೀನಿ” ಅಂದಳು. ʻಸರಿ, ಹೇಗೂ ಬರ‍್ತಾಳೆʼ ಎಂದುಕೊಂಡು ಇಬ್ಬರೂ ಮನೆಯ ಕಡೆ ಹೆಜ್ಜೆಹಾಕಿದರು. ರಾತ್ರಿ ಊಟದ ನಂತರ ಹೆಂಡತಿಯರಿಗೂ ಹೇಳಿ ಅವರಿಗೂ ಸ್ವಲ್ಪ ಸಮಾಧಾನ ತಂದರು.
 
ಈ ಪ್ರಸ್ತಾಪದಿಂದ ಸರಳಾ, ಪದ್ಮಾನಿಗೂ ಸ್ವಲ್ಪ ಸಮಾಧಾನವಾಯಿತು. ಇಬ್ಬರೂ ಬುಧವಾರಕ್ಕೆ ಎದುರು ನೋಡತೊಡಗಿದರು. ಹೇಳಿದಂತೆಯೇ ಶೈಲಜಾ ಬಂದಳು. ಬಂದವಳೇ ಸ್ವಲ್ಪ ಸುಧಾರಿಸಿಕೊಳ್ಳುವಷ್ಟರಲ್ಲಿ ಆಗಲೇ ಹನ್ನೆರಡೂವರೆ. “ತಿಂಡಿಯೇನೂ ಬೇಡ, ಎಲ್ರಜೊತೆ ಒಟ್ಗೇ ಊಟ ಮಾಡ್ಬಿಡ್ತೀನಿ ಅಪ್ಪ ಎಲ್ಲಿ, ಮೇಲೆ ಮಲ್ಗಿದಾರಾ?” ಅಂದಳು ಕಳಕಳಿಯಿಂದ. ಇಬ್ಬರು ಸೊಸೆಯರೂ ಮುಖಮುಖ ನೋಡಿಕೊಂಡು, ʻಬಂದ ತಕ್ಷಣ ಯಾಕೆ ಪುರಾಣ, ಅವಳ ಅಣ್ಣಂದಿರೇ ಬಂದು ವಿಷಯ ಹೇಳಲಿʼ ಎಂದುಕೊಂಡು ಎಲ್ಲರಿಗೂ ಕಾಫಿ ಬೆರೆಸಿಕೊಂಡು ತಂದು ಲೋಕಾಭಿರಾಮದ ಹರಟೆ ತೆಗೆದರು. ಕೆಳಗೆ ಶೈಲಜನ ದನಿ ಕೇಳಿದ್ದಕ್ಕೋ ಏನೋ ಮೂರ್ತಿಗಳೂ ಮಹಡಿಯಿಂದ ಇಳಿದುಬಂದು “ಎಷ್ಟೊತ್ತಿಗೆ ಬಂದ್ಯಮ್ಮಾ, ಹೇಗಿದೀಯ, ಮನೇಲೆಲ್ಲಾ ಹೇಗಿದಾರೆ?” ಎನ್ನುತ್ತಾ ಡೈನಿಂಗ್‌ ಟೇಬಲ್ಲಿನ ಮುಂದೆಯೇ ಅವಳ ಜೊತೆ ಕುಳಿತು ಮಾತನಾಡತೊಡಗಿದರು. ಸೊಸೆಯರಿಬ್ಬರೂ ಅಡುಗೆಮನೆಯ ಉಳಿಕೆ ಕೆಲಸಗಳ ನೆಪಮಾಡಿಕೊಂಡು ಅಲ್ಲಿಂದೆದ್ದರು.
 
ಅಷ್ಟು ಹೊತ್ತಿಗೆ ಸುಧಾಕರ, ರವಿಶಂಕರ ಇಬ್ಬರೂ ಊಟಕ್ಕೆ ಬಂದರು. ಕೈಕಾಲು ತೊಳೆದುಕೊಂಡು ಬರುವಷ್ಟರಲ್ಲಿ ಪದ್ಮಾ ಎಲ್ಲರಿಗೂ ತಟ್ಟೆಯಿಟ್ಟಳು. ಮಾವನವರಿನ್ನೂ ಅಲ್ಲೇ ಕುಳಿತು ಮಗಳೊಂದಿಗೆ ಮಾತಾಡುತ್ತಿದ್ದುದರಿಂದ ನೋಡೋಣವೆಂದು ಅವರಿಗೂ ತಟ್ಟೆಯಿಟ್ಟಳು. ಸಹಜವಾಗಿಯೇ ಎನ್ನುವಂತೆ ಅವರೂ ಎಲ್ಲರೊಡನೆಯೇ ಊಟಕ್ಕೆ ಕುಳಿತರು. ವೀರೇಶ ಅವರ ಮುಖ ನೋಡಿದ, ಅವರು ಪದ್ಮನ ಮುಖ ನೋಡಿದರು, ಪದ್ಮ ಒಂದು ತಟ್ಟೆಗೆ ಮಾತ್ರಾ ಜೋಡಿಸಿಕೊಟ್ಟಳು. ಮಾತಿನಲ್ಲಿ ಮುಳುಗಿದ್ದ ಶೈಲಜನಿಗೆ ಇದ್ಯಾವುದೂ ಗಮನಕ್ಕೆ ಬರಲಿಲ್ಲ. ಅಂತೂ ಮೂರುವಾರದ ನಂತರ ಮನೆಯವರೆಲ್ಲರೂ ಒಟ್ಟಿಗೇ ಕೂತು ಊಟಮಾಡಿದರು.
 
ಊಟದ ನಂತರ ರಾಯರು ಮಹಡಿಯನ್ನೇರಿದರು. ರವಿಶಂಕರನಿಗೆ ಆಫೀಸಿಗೆ ಹೊತ್ತಾಗಿದ್ದರಿಂದ ಅವನೂ ತಕ್ಷಣವೇ ಹೊರಟ. ಸುಧಾಕರ “ಸ್ವಲ್ಪ ಬಾ”, ಎನ್ನುತ್ತಾ ಶೈಲಜನ್ನ ತನ್ನ ರೂಮಿಗೆ ಕರೆದುಕೊಂಡು ಹೊರಟ, ಹಿಂದೆಯೇ ಸರಳಾನೂ ಬಂದಳು. ಪದ್ಮನಿಗೋ ಅಡುಗೆಮನೆ ಕಟ್ಟೆಯೊರಸಿ ಕ್ಲೀನ್‌ ಮಾಡುತ್ತಿದ್ದರೂ, ಕಿವಿ, ಕಣ್ಣು ಅವರು ಮಾತಾಡುತ್ತಿರುವುದರ ಬಗ್ಗೆಯೇ ಇತ್ತು. ಆಗಾಗ ಬಗ್ಗಿ ನೋಡಿದಳು. ಇನ್ನೊಬ್ಬರ ಕೋಣೆಗೆ ಹೋಗುವುದು ಸಮಂಜಸವಲ್ಲ ಎಂದು ಬಲವಂತದಿಂದ ತಡೆಹಿಡಿದುಕೊಂಡಳು. ಪಿಸುದನಿಯಲ್ಲೇ ಸುಧಾಕರ ಶೈಲಜನೊಂದಿಗೆ ಹಾವಭಾವಗಳೊಂದಿಗೆ ಹೇಳುತ್ತಿದ್ದ. ಸರಳಾನೂ ತಲೆಯಾಡಿಸುತ್ತಾ ಮಧ್ಯೆ ಮಧ್ಯೆ ತನ್ನ ಮಾತನ್ನೂ ಸೇರಿಸುತ್ತಿದ್ದ ಹಾಗಿತ್ತು. ಅಂತೂ ಅವರ ಮಾತು ಮುಗಿದು ಸರಳಾ, ಶೈಲಜಾ ಹೊರಬಂದರು. ಶೈಲಜನ ಮುಖದ ದುಗುಡ ಸೀದಾ ಕಾಣಿಸುವಂತಿತ್ತು. “ಇದೇನತ್ತಿಗೆ ಹೀಗೆ…” ಎನ್ನುತ್ತಾ ಪದ್ಮನ ಬಳಿ ಕುಳಿತುಕೊಂಡಳು. ಪದ್ಮಾ ʻಇಲ್ಲಿ ಮಾತು ಬೇಡʼ ಎನ್ನುವಂತೆ ತನ್ನ ರೂಮಿಗೆ ಕರೆದುಕೊಂಡು ಹೋದಳು. ಸಹಜವಾಗೇ ಸರಳಾನೂ ಹಿಂಬಾಲಿಸಿದಳು. ಮಾತು ಮತ್ತೂ ಹಾಗೆಯೇ ಮುಂದುವರೆಯಿತು…

ಹಾಲಿನ ಗಡಿಯಾರ ನಾಲ್ಕು ಗಂಟೆ ಹೊಡೆದಿದ್ದು ಕೇಳಿ ಎಲ್ಲರೂ ಮಾತು ನಿಲ್ಲಿಸಿ ಅಡುಗೆ ಮನೆ ಸೇರಿದರು. ಕಾಫಿ ಬೆರೆಸಿದ ಮೇಲೆ ಶೈಲಜಾ “ನಾನೇ ತೆಗೆದುಕೊಂಡು ಹೋಗಿ ಕೊಡ್ತೀನಿ” ಎನ್ನುತ್ತಾ ಜೋಡಿಸಿಕೊಂಡು ಹೊರಟಳು. ಅವಳಿನ್ನೂ ಮೆಟ್ಟಿಲ ಬಳಿಗೆ ಬರುವಾಗಲೇ ಮೂರ್ತಿಗಳು ಕೆಳಗಿಳಿದು ಬಂದಿದ್ದವರು ಅವಳ ಕೈಯಿಂದ ತಟ್ಟೆಯನ್ನು ತೆಗೆದುಕೊಂಡು ಮೇಲೆ ಹೋದರು. ಇನ್ನೇನೂ ತೋಚದೆ ಶೈಲಜಾ ವಾಪಸ್ಸಾದಳು. ಹೋದ ಸ್ಪೀಡಿನಲ್ಲೇ ವಾಪಸ್ಸು ಬಂದವಳನ್ನು ನೋಡಿದ ಅತ್ತಿಗೆಯರಿಬ್ಬರು ʻಏನಾಯಿತು?ʼ ಎನ್ನುವಂತೆ ಹುಬ್ಬು ಹಾರಿಸಿದರು. ವಿಷಯ ಹೇಳಿದ ಶೈಲಜಾ ತನ್ನ ಲೋಟವನ್ನು ತೆಗೆದುಕೊಂಡು ಅಲ್ಲಿದ್ದ ಸ್ಟೂಲಿನ ಮೇಲೆ ಕುಳಿತು ಹೀರುತ್ತಾ ಯೋಚನೆಗೆ ಬಿದ್ದಳು. ಅತ್ತಿಗೆಯರಿಬ್ಬರೂ ಸಂಜೆಯ ತಿಂಡಿಯನ್ನು ಮಾಡುವುದರಲ್ಲಿ ನಿರತರಾದರು. ಗಿಡಗಳನ್ನಾದರೂ ನೋಡಿಕೊಂಡು ಬರೋಣವೆಂದು ಶೈಲಜಾ ಹಿತ್ತಲಿಗೆ ಹೊರಟಳು. ಗಿಡದ ತುಂಬಾ ಮೊಲ್ಲೆ ಮೊಗ್ಗಿತ್ತು. ಖುಷಿಯಾಗಿ ಹಾಗೇ ಕಿತ್ತು ಸೀರೆಯ ಮಡಿಲಿಗೇ ಹಾಕಿಕೊಳ್ಳತೊಡಗಿದಳು. ಒಂದು ಭಾಗದ್ದೆಲ್ಲಾ ಮುಗಿದ ನಂತರ ಇನ್ನೊಂದು ಭಾಗಕ್ಕೆ ಹೋದವಳು ಅಚಾನಕ್ಕಾಗಿ ತಲೆಯೆತ್ತಿದರೆ ಅಪ್ಪ ಬಿಸಿಲುಮಚ್ಚಿನಲ್ಲಿ ನಿಂತಿದ್ದು, ಬಾಗಿಲಲ್ಲಿ ವಾರೆಯಾಗಿ ನಿಂತಿದ್ದ ಆ ಹೆಂಗಸಿನೊಂದಿಗೆ ಏನೋ ಮಾತಾಡುತ್ತಿರುವುದು ಕಂಡಿತು. ಅಪ್ಪ ಸ್ವಲ್ಪ ಅಡ್ಡ ಇದ್ದುದರಿಂದಲೂ, ಆಕೆ ವಾರೆಯಾಗಿ ನಿಂತಿದ್ದರಿಂದಲೂ ಅವಳಿಗೆ ಸರಿಯಾಗಿ ಕಂಡಿದ್ದು ಕೆಂಪಂಚಿನ ಹಸಿರು ಸೀರೆಯೊಂದೇ. ಗಿಡದ ಮರೆಗೆ ಜರುಗಿ ಅಲ್ಲಿಂದಲೇ ಗಮನಿಸತೊಡಗಿದಳು. ಒಂದೈದು ನಿಮಿಷದ ನಂತರ ಆಕೆ ಒಳಸರಿದಳು. ಅಪ್ಪನೂ ಹಿಂಬಾಲಿಸಿದರು.


ರಾತ್ರಿಯೆಲ್ಲಾ ಯೋಚನೆಯಿಂದಾಗಿ ನಿದ್ರೆಯಿಲ್ಲದೆ ಹೊರಳಾಡಿದಳು ಶೈಲಜಾ. ಯಾರೀಕೆ… ಅವಳ್ಯಾಕೆ ಬಂದಳು… ಅವಳಿಗೂ ಅಪ್ಪನಿಗೂ ಏನು ಸಂಬಂಧ… ಅಣ್ಣ ಅತ್ತಿಗೆಯರಿಗೆ ಅನುಮಾನವಿರುವ ಹಾಗೆ ಅಪ್ಪ ಏನಾದರೂ ಅವಳನ್ನು ಮದುವೆಯಾಗಿಬಿಟ್ಟರೆ…. ಆ ಯೋಚನೆಯಿಂದಲೇ ನಡುಗಿಬಿಟ್ಟಳು. ತಾನು ಗಂಡನನ್ನು, ಅತ್ತೆ, ಮಾವಂದಿರನ್ನು ಎದುರಿಸುವುದು ಹೇಗೆ! ಇದುವರೆಗೂ ಗಂಡನ ಮನೆಯಲ್ಲಿ ಅಪ್ಪನೆಂದರೆ ತುಂಬಾ ಗೌರವವಿದೆ. ಈಗ, ಅಮ್ಮ ಹೋದತಕ್ಷಣವೇ ಹೀಗೆ ಯಾರೋ… ಬಂದು… ಮನೆಯ ಮಹಡಿಯ ಮೇಲೆ… ಅಪ್ಪನೊಂದಿಗೇ(?)… ಇದ್ದಾಳೆ ಅಂತ ತಿಳಿದರೆ ಮನೆಯ ಮರ್ಯಾದೆಯ ಗತಿಯೇನು?! ಇಷ್ಟು ವಯಸ್ಸಾಗಿ, ಅಮ್ಮನೊಂದಿಗೆ ಅಷ್ಟು ಚೆನ್ನಾಗಿ ಇಷ್ಟು ವರ್ಷ ಸಂಸಾರ ಮಾಡಿ, ಮೂವರು ಮಕ್ಕಳ ಮದುವೆ ಮಾಡಿ, ನಾಲ್ಕು ಮೊಮ್ಮಕ್ಕಳನ್ನು ನೋಡಿದ ಮೇಲೂ ಅಪ್ಪನಿಗೆ ಈ ಯೋಚನೆ ಹೇಗ್ಬಂತು? ಆ ಹೆಂಗಸು ನಲವತ್ತರ ಆಸುಪಾಸಿನಲ್ಲಿರಬಹುದೇನೋ ಅಷ್ಟೇ ಅಂದ ಅಣ್ಣ, ಅವಳಿಗೇನಾದರೂ ಅಕಸ್ಮಾತ್‌ ಮಗುವಾಗಿಬಿಟ್ರೆ??! ಶೈಲಜಾನಿಗೆ ತಲೆಚಚ್ಚಿಕೊಳ್ಳುವ ಹಾಗನ್ನಿಸಿತು. ತಮಗೆಲ್ಲಾ ಅಷ್ಟು ಪುಟ್ಟ ತಮ್ಮನೋ, ತಂಗಿಯೋ… ತನ್ನ ಮಗನಿಗಿಂತ ಚಿಕ್ಕ ಮಗು… ಇಲ್ಲ… ಅಯ್ಯಯ್ಯೋ… ಹೀಗಾಗ್ಬಾರದು ಅನ್ನಿಸಿತು. ಆದರೆ ಅವರನ್ನು ಕೇಳುವುದು ಹೇಗೆ. ಏನೇ ಆದರೂ ನಾಳೆ ಹೇಗಾದರೂ ಒಂದು ಅವಕಾಶ ಮಾಡಿಕೊಂಡು ಕೇಳಿಬಿಡಬೇಕು… ʻಅಪ್ಪ, ಇದು ನಮಗ್ಯಾರಿಗೂ ಇಷ್ಟವಿಲ್ಲ, ನೀವು ಹೀಗ್ಮಾಡ್ಬೇಡಿʼ ಅನ್ಬೇಕು. ʻನಿಮಗೆಲ್ಲಾ ಕಷ್ಟ ಆದ್ರೆ ಬೇರೆ ಮನೇ ಮಾಡ್ಕೊಂಡು ಹೋಗ್ತೀನಿʼ ಅಂದುಬಿಟ್ರೆ. ಅಸಲಿಗೆ ಇಂಥಾ ಸೂಕ್ಷ್ಮವಾದ ವಿಷಯಾನ ನಾನು ಸೀದಾ ಕೇಳಕ್ಕಾಗತ್ತಾ…. ಯೋಚನೆಯಲ್ಲೇ ಬೆಳಗಾಯಿತು.
 
ಇನ್ನೆರಡು ದಿನವಿದ್ದರೂ ಶೈಲಜಾನಿಂದ ಏನನ್ನೂ ಕೇಳಲಾಗಲಿಲ್ಲ. ಅಸಲಿಗೆ ಅವಳು ಆ ಮಾತು ತೆಗೆಯುವ ಅವಕಾಶವನ್ನು, ಮಹಡಿ ಹತ್ತುವ ಅವಕಾಶವನ್ನು ಕೊಡಲೇ ಇಲ್ಲ ಮೂರ್ತಿಗಳು. ಅವಳಿರುವ ತನಕ ಊಟ, ತಿಂಡಿ ಎಲ್ಲವನ್ನೂ ಸಹಜವಾಗಿ ಎಲ್ಲರೊಂದಿಗೇ ಮಾಡಿದರು. ಮಗಳೊಂದಿಗೆ ಲೋಕಾಭಿರಾಮವಾಗಿ ಮಾತಾಡುತ್ತಾ ಒಂದಷ್ಟು ಕಾಲ ಕಳೆದರು. ಕಾಫಿಯನ್ನು ತಾವೇ ಬಂದು ತೆಗೆದುಕೊಂಡು ಹೋದರು. ಶನಿವಾರ ಹೊರಡುವ ವೇಳೆಗೆ ʻಇದು ತನ್ನಿಂದ ಆಗದ ಕೆಲಸʼ ಎಂದು ಶೈಲಜಾ ತೀರ್ಮಾನಿಸಿಬಿಟ್ಟಳು. “ನನ್ಕೈಲಾಗಲ್ಲ ಕಣಪ್ಪ; ನಮ್ಮನೆಗೆ ವಿಷಯ ತಿಳಿಯೋ ಮೊದ್ಲು ನೀವು ಹೇಗಾದ್ರೂ ಇದನ್ನ ನಿವಾರಿಸಿಕೊಳ್ಳಿ” ಎಂದು ಹೊರಟಳು. ಹೊರಡುವ ಹೊತ್ತಿಗೆ ಕೆಳಗಿಳಿದ ಮೂರ್ತಿಗಳು ಮಗಳ ತಲೆಸವರಿ, “ಅಮ್ಮ ಇಲ್ಲಾಂತ ಬರೋದು ಬಿಟ್ಬಿಡ್ಬೇಡಮ್ಮ, ಹೀಗೇ ಆಗಾಗ ಬರ‍್ತಿರು. ನಮ್ಗೂ ಸ್ವಲ್ಪ ಬದಲಾವಣೆ ಇರತ್ತೆ. ಶ್ರಾವಣ ಮಾಸ ಬಂತು, ಹಬ್ಬಕ್ಕೇಂತ ಇಟ್ಕೋಮ್ಮ” ಎನ್ನುತ್ತಾ ಐದು ಸಾವಿರ ರೂಪಾಯಿ ಸರಳಳ ಕೈಯಲ್ಲಿಟ್ಟು ಅರಿಶಿನ ಕುಂಕುಮದೊಂದಿಗೆ ಕೊಡಿಸಿ ಕಣ್ದುಂಬಿ ಬೀಳ್ಕೊಟ್ಟರು. ಏನೂ ಮಾತಾಡಲಾಗದೆ ಶೈಲಜಾ ಅಪ್ಪನ ಕಾಲಿಗೆ ನಮಸ್ಕರಿಸಿ ಊರಿಗೆ ಹೊರಟಳು.


ವರಮಹಾಲಕ್ಷ್ಮಿ ಪೂಜೆಯಂದು ಮುಂದಿನ ಬೀದಿಯ ಅತ್ತೆಯ ಸ್ನೇಹಿತೆ ವನಜಾಕ್ಷಿ ಅರಿಶಿನ ಕುಂಕುಮಕ್ಕೆ ಕರೆದಿದ್ದಕ್ಕೆ ಸರಳಾ, ಪದ್ಮಾ ಸಂಜೆ ಹೊರಟರು. ಎಂದಿನಂತೆ ತುಂಬಾ ಚೆನ್ನಾಗಿ ಅಲಂಕಾರ ಮಾಡಿದ್ದರು. ಸಾಕಷ್ಟು ಜನರನ್ನು ಕರೆದಿದ್ದರು. ಬಹಳ ದಿನಗಳ ಮೇಲೆ ಇವರಿಬ್ಬರಿಗೂ ಒಂದು ಬದಲಾವಣೆಯಾದಂತೆ ಒಂದಷ್ಟು ಹೊತ್ತು ಕುಳಿತರು. ಬಂದವರೊಂದಿಗೆ ಅತ್ತೆಯವರ ಗುಣಗಾನವಾಯಿತು. ಎಲ್ಲರೂ ಹೊರಟರು. ಇವರೂ ಹೊರಡಲೆಂದು ಎದ್ದಾಗ ವನಜಾಕ್ಷಿ “ಹೀಗ್‌ ಕೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ. ನಿಮ್ಮನೆಗೆ ಈಗೊಂದು ತಿಂಗ್ಳಿಂದ ಅದ್ಯಾರೋ ಹೆಂಗಸು ಬಂದಿದಾರಂತಲ್ಲ. ಅವರ‍್ಯಾರು. ನೆಂಟ್ರಾ?” ಎಂದರು. ಇಬ್ಬರಿಗೂ ಜೀವವೇ ಬಾಯಿಗೆ ಬಂದ ಹಾಗಾಯಿತು. ಮಾತೇ ಹೊರಡಲಿಲ್ಲ. ಸರಳಾ ಧೈರ್ಯ ತೆಗೆದುಕೊಂಡು “ನಿಮಗ್ಯಾರು ಹೇಳಿದ್ದು, ಹಂಗೇನಿಲ್ವಲ್ಲಾ” ಎಂದಳು. ವನಜಾಕ್ಷಿ ಅಷ್ಟಕ್ಕೇ ಬಿಡದೆ “ನಿಮ್ಮ ಕೆಲಸದ ಬಾಯಮ್ಮ, ನಮ್ಮ ಮುನಿಯಮ್ಮನ ಹತ್ರ ಹಂಗಂದ್ಲಂತೆ ಅದಕ್ಕೇ ಕೇಳ್ದೆ ಅವ್ಳು ಯಾರನ್‌ ಕಂಡ್ಳೋ, ಏನ್‌ ನೋಡಿದ್ಲೋ, ಹೋಗ್ಲಿ ಬಿಡಿ” ಎಂದು ಕುಂಕುಮ ಎಲೆಯಡಿಕೆ ಕೊಟ್ಟರು. ದಾರಿಯಲ್ಲಿ ಬರುತ್ತಾ ಪದ್ಮಾ “ಇದೇನು ಸರಳಾ, ಈ ಕತೆ ಇನ್ನೂ ಎಲ್ಲೆಲ್ಲಿ ಹಾರಾಡ್ತಿದ್ಯೋ” ಎಂದು ಅಲವತ್ತುಕೊಂಡಳು. “ಅದೇ ನಂಗೂ ಯೋಚನೆಯಾಗ್ತಿದೆ” ಎಂದಳು ಸರಳಾ. ಏನೋ ಬದಲಾವಣೆಗೆಂದು ಹೋಗಿದ್ದವರು ಒಂದಿಷ್ಟು ಚಿಂತೆಯನ್ನು ಹೊತ್ತುಕೊಂಡು ಮನೆಗೆ ಬಂದರು.
 
ರಾತ್ರಿ ಊಟದ ನಂತರ ಇಬ್ಬರ ಗಂಡಂದಿರಿಗೂ ಇದರ ವರದಿಯಾಯಿತು. ಏನು ಮಾಡಬಹುದು ಎಂದು ಮತ್ತೆ ಮತ್ತೆ ಯೋಚನೆ ಮಾಡಿದ್ದಾಯಿತು. ಮಹಡಿಯ ಮೇಲಿದ್ದಾರೆನ್ನುವುದು ಬಿಟ್ಟರೆ ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಿಲ್ಲ. ಮಿಕ್ಕಿದ್ದೆಲ್ಲಾ ಊಹೆಯೇ. ಒಪ್ಪಿತ ಜೀವನದ ರೀತಿಗೆ ಇದು ಸಲ್ಲುವಂತದಲ್ಲ. ಸುಧಾಕರ ಮಾರನೆಯ ದಿನ ಏನಾದರಾಗಲಿ, ಶ್ರೀಕಂಠ ಜೋಷಿಯವರ ಜೊತೆಗೆ ಮಾತನಾಡುವುದೇ ವಾಸಿ ಎನ್ನುವ ತೀರ್ಮಾನಕ್ಕೆ ಬಂದ. ಅವರಾದ್ರೆ ಅಪ್ಪನಿಗಿಂತ ಒಂದು ನಾಲ್ಕೈದು ವರ್ಷಕ್ಕೆ ದೊಡ್ಡೋರು. ನಡುವಯಸ್ಸಲ್ಲೇ ಹೆಂಡ್ತೀನ ಕಳ್ಕೊಂಡ್ರೂ ಇನ್ನೊಂದು ಮದ್ವೆ ಮಾಡ್ಕೊಳ್ದೇ ಮಕ್ಕಳನ್ನ ಸಾಕಿದವ್ರು. ಅವ್ರ ಮಾತಿಗೆ ಖಂಡಿತ್ವಾಗ್ಲೂ ಬೆಲೆಯಿರತ್ತೆ. ಏನೋ ಹೊರಗಿನವ್ರ ತಂಕ ಹೋಗೋದ್ಬೇಡ ಅಂದ್ಕೊಂಡ್ರೂ ಈಗ ಬೇರೆ ವಿಧಿಯಿಲ್ಲ ಅಂದುಕೊಂಡ. ಮಾರನೆಯ ದಿನ ಅದನ್ನೇ ರವಿಶಂಕರನ ಹತ್ತಿರವೂ ಹೇಳಿದ. ಅವನೂ ಅದೇ ಸರಿ ಎಂದ.


ಅಂದು ಸಂಜೆ ಹಿಂಜರಿಯುತ್ತಲೇ ಅಂತೂ ಶ್ರೀಕಂಠ ಜೋಷಿಯವರ ಹತ್ತಿರ ಈ ವಿಷಯವನ್ನು ಹೇಳಿದ. ಎಲ್ಲವನ್ನೂ ಕೇಳಿಸಿಕೊಂಡ ಅವರು “ನೋಡು ಸುಧಾಕರ, ನಂಗೂ ಯಾರಿಂದ್ಲೋ ʻಹೀಗಂತೆʼ ಅನ್ನೋ ಸಮಾಚಾರ ಬಂತು. ಇದು ತುಂಬಾ ಸೂಕ್ಷ್ಮವಾದ ವಿಷಯ ಕಣಯ್ಯ. ಅವನು ನಂಗೆ ತುಂಬಾ ಹತ್ತಿರದ ಗೆಳೆಯ ಅನ್ನೋದು ನಿಜ, ಆದ್ರೂನೂ ಇಂಥ ವಿಚಾರಗಳಲ್ಲಿ ಬೇರೆ ಯಾರೂ ಏನೂ ಮಾತಾಡಕ್ಕಾಗಲ್ಲ. ಅವ್ರವ್ರ ದೇಹ ಧರ್ಮ ಅವರವರದ್ದು. ನಂಗೇನೋ ನಲವತ್ತೈದು ವರ್ಷಕ್ಕೇ, ಸಂಸಾರ ಸುಖ ಸಾಕು ಅನ್ನಿಸ್ತು, ಅಷ್ಟೊತ್ತಿಗೆ ಮಕ್ಳೂ ಹೆಚ್ಚುಕಮ್ಮಿ ಕಾಲೇಜಿಗೆ ಬಂದಿದ್ರು. ಅವ್ರನ್ನ ನೋಡ್ಕೋಬೇಕಾದ್ದೇನೂ ಇರ‍್ಲಿಲ್ಲ. ಅಡುಗೆಗೊಬ್ರನ್ನಿಟ್ಕೊಂಡು ಹಾಗೇ ನಡೆಸ್ಬುಟ್ಟೆ. ಆದ್ರೆ, ಅವ್ನಿಗೆ ಇನ್ನೂ ಬೇಕು ಅನ್ನಿಸ್ತಿದ್ರೆ, ಹೇಗಯ್ಯಾ ಇಂಥ ವಿಷ್ಯ ಮಾತಾಡಕ್ಕಾಗತ್ತೆ?” ಅಂದು ಯೋಚನೆಗೆ ಬಿದ್ದರು. “ನೋಡಿ ಅಂಕಲ್‌, ನಿಮ್ಮಾತಿಗೆ ಅವ್ರು ತುಂಬಾ ಬೆಲೆ ಕೊಡ್ತಾರೆ ಅಂತ ನಮಗನ್ಸುತ್ತೆ. ನಾವ್ಯಾರೂ ಅವರಿರೋ ಮಹಡಿ ಕೂಡಾ ಹತ್ತಲ್ಲ; ನಿಮಗೊಬ್ರಿಗೆ ಆ ಸಲುಗೆ ಇದೆ. ಈ ವಯಸ್ನಲ್ಲಿ ಆಕೆಗೇನಾದ್ರೂ ಮಗೂಗಿಗೂ ಆಗ್ಬಿಟ್ರೆ… ನಮ್ಗೆಲ್ಲಾ ಒಂಥರಾ… ಏನೋ ಸರಿಹೋಗ್ತಿಲ್ಲ… ಯಾವ್ದುಕ್ಕೂ ನೀವು ಒಂದು ಪ್ರಯತ್ನ ಮಾಡ್ನೋಡಿ” ಎಂದು ಕೈಮುಗಿದ. “ಬಂದ್ನೋಡ್ತೀನಿ, ಅವ್ಕಾಶ ಸಿಕ್ರೇ, ಹೇಳ್ನೋಡ್ತೀನಿ. ಅಲ್ಲಾ…, ಮಾತಿಗ್ಹೇಳ್ತೀನಿ. ಮಾಡ್ಕೊಂಡ್ರೆ ಮಾಡ್ಕೊಳ್ಳಿ ಬಿಡು, ಏನೇನೋ ಮಾಡೋಕ್ಕಿಂತಾ ಮದ್ವೆ ಮಾಡ್ಕೊಳೋದು ವಾಸಿ ಅಲ್ವಾ. ಆದ್ರೆ ಆಗತ್ತೆ ಇನ್ನೊಂದು ಮಗು. ಮೊದಲ ಹೆಂಡ್ತಿ ಸತ್ಮೇಲ್ತಾನೇ ಮಾಡ್ಕೋತಿದಾನೆ ತಪ್ಪೇನದರಲ್ಲಿ?” ಎಂದರು. “ಇದೇನಂಕಲ್‌ ಹೀಗ್ಹೇಳ್ತೀರಾ, ಮೊನ್ನೆ ಮೊನ್ನೆ ಇನ್ನೂ ನಮ್ಮಮ್ಮನ್ನ ಕಳ್ಕೊಂಡಿದೀವಿ. ನಮ್ಗೇ ಹತ್ತು ಹನ್ನೆರ್ಡು ವರ್ಷದ ಮಕ್ಳಿದಾರೆ. ಈಗವ್ರಿಗೆ ಮಗು ಹುಟ್ಟಿದ್ರೆ ಅದನ್ನ ತಮ್ಮ, ತಂಗೀಂತ ಒಪ್ಕೊಳಕ್ಕೆ ನಮ್ಮಿಂದಾಗತ್ತಾ” ತಲೆಯಾಡಿಸಿದ. ಅಲ್ಲಯ್ಯಾ ನಮ್ತಾತನ ಮೂವರು ಮಕ್ಳು ನಂಗಿಂತಾ ಚಿಕ್ಕೋರು. ಆಗೆಲ್ಲಾ ಅದು ಸಹಜವಾಗಿತ್ತು. ಈಗ್ಲೇ… ನೀವ್ಗಳು ಇದನ್ನ ಕಾಂಪ್ಲಿಕೇಟ್‌ ಮಾಡ್ಕೋತಿದೀರಿ ಅನ್ಸತ್ತಪ್ಪ ನಂಗೆ. ಏನೋ ನಿನ್ನ ಮನಸ್ಸಮಾಧಾನಕ್ಕೆ ಬರ‍್ತೀನಿ. ನಾನೂ ನಿಮ್ಮಮ್ಮ ಹೋಗಿದ್ದಾಗ ಬಂದಿದ್ಬಿಟ್ರೆ ಮತ್ತೆ ಬರಕ್ಕಾಗಿಲ್ಲ. ಭಾನ್ವಾರ ಬಂದು ಮಾತಾಡಿಸ್ಕೊಂಡು ಹೋಗ್ತೀನಿ. ನೀನು ಹೊರ‍್ಡು” ಎನ್ನುತ್ತಾ ಕಳಿಸಿಕೊಟ್ಟರು.
 
ಹೇಳಿದಂತೆ ಬಂದರು. ಮಹಡಿ ಹತ್ತಿ ಹೋದರು. ಗಂಟೆಗಟ್ಟಲೆ ಅವರೊಂದಿಗೆ ಹರಟುತ್ತಾ ಕುಳಿತರು. ಸುಧಾಕರನೇ ಕಾಫಿ, ತಿಂಡಿ, ನೀರು ಎಂತೆಲ್ಲಾ ಎರಡು ಮೂರು ಸಲ ಮೇಲೆ ಕೆಳಗೆ ಓಡಾಡಿದರೂ ಆಕೆ ಕಾಣಲೇ ಇಲ್ಲ. ಕೋಣೆಯ ಬಾಗಿಲು ಹಾಕಿತ್ತು. ಮತ್ತೆಮತ್ತೆ ಮೇಲೆ ಹೋಗುವಂತಿಲ್ಲ. ತಳಮಳಿಸುತ್ತಾ ವರಾಂಡದಲ್ಲಿ ಇಬ್ಬರು ಅಣ್ಣತಮ್ಮಂದಿರೂ, ಅಡುಗೆಮನೆಯಲ್ಲಿ ಸೊಸೆಯರಿಬ್ಬರೂ ಕಾಯುತ್ತಾ ಕುಳಿತರು. ಅಂತೂ ಏಳು ಗಂಟೆಗೆ ಜೋಷಿಯವರು ಹೊರಟಾಗ ಮೂರ್ತಿಗಳೇ ಗೇಟಿನ ತನಕ ಬಂದು ಗೆಳೆಯನನ್ನು ಬೀಳ್ಕೊಟ್ಟರು. ಅಪ್ಪ ಒಳಹೋಗುವುದನ್ನೇ ಕಾಯುತ್ತಿದ್ದ ಸುಧಾಕರ ಸರಸರನೆ ಹೋಗಿ ಬೀದಿಯ ಕೊನೆಯಲ್ಲಿದ್ದ ಜೋಷಿಯವರನ್ನು ಸೇರಿಕೊಂಡು “ಏನಾಯ್ತು ಅಂಕಲ್”‌ ಎಂದ. “ಏನೋಪ್ಪ, ಅವ್ನು ಆ ವಿಷ್ಯ ಮಾತಾಡಕ್ಕೇ ಅವ್ಕಾಶ ಕೊಡ್ಲಿಲ್ಲ. ʻಹೀಗೇ ಏನೋ ವಿಷ್ಯ ಕೇಳ್ಬಂತಪ್ಪಾʼ ಅಂದ್ರೆ ಮಾತು ಹಾರಿಸಿಬಿಟ್ಟ. ಪಟ್ಟು ಹಿಡಿದು ಅದ್ನೇ ಕೇಳಕ್ಕಾಗತ್ಯೇ. ಸ್ನೇಹಕ್ಕೆ ಎರವಾಗತ್ತಷ್ಟೇ. ನನಗನ್ಸೋದು, ಅವ್ನು ಮದ್ವೆ ಮಾಡ್ಕೊಂಡ್ರೇ ಒಳ್ಳೇದು, ಹೀಗೆ ಸುಮ್ನೆ ಮನೇಲಿಟ್ಕೊಳೋಕಿಂತ. ಅದೇ ಹೆಚ್ಚು ಮರ್ಯಾದೆ ಅಲ್ವೇ. ನೀವು ನಿಮ್ಮ ಮನೋಭಾವಾನ ಬದಲಾಯಿಸ್ಕೋಬೇಕಷ್ಟೇ. ಸರಿ, ನೀನು ವಾಪಸ್ಸು ಹೋಗು, ನಂಗೆ ಪೇಟೆ ಬೀದೀಲಿ ಕೆಲ್ಸ ಇದೆ, ಮುಗಿಸ್ಕೊಂಡು ಮನೆಗ್ಹೋಗ್ತೀನಿ ಎನ್ನುತ್ತಾ ಪೇಟೆ ಬೀದಿಯ ಕಡೆಗೆ ತಿರುಗಿದರು.
 
ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದವನು ಪಕ್ಕದ ಪಾರ್ಕಿನ ಮುಂದಿದ್ದ ಕಲ್ಲುಬೆಂಚಿನ ಮೇಲೆ ಕುಳಿತು ಯೋಚನೆಗೆ ಬಿದ್ದ. ಇವನಿಗಾಗಿ ಕಾದು ಕುಳಿತಿದ್ದ ರವಿಶಂಕರ ಎಷ್ಟು ಹೊತ್ತಾದರೂ ಬರದಿದ್ದವನನ್ನು ಹುಡುಕಿಕೊಂಡು ಹೊರಟ. ಕಲ್ಲುಬೆಂಚಿನ ಮೇಲೆ ಒಬ್ಬನೇ ಯೋಚಿಸುತ್ತಾ ಕುಳಿತಿದ್ದವನ ಪಕ್ಕದಲ್ಲಿ “ಏನಾಯಿತು?” ಎನ್ನುತ್ತಾ ಕುಳಿತ. ಎಲ್ಲವನ್ನೂ ಹೇಳಿದ ಸುಧಾಕರ ಒಂದಷ್ಟು ಹೊತ್ತು ಬಿಟ್ಟು ತನ್ನಂತೆಯೇ ಯೋಚನೆಯಲ್ಲಿ ಮುಳುಗಿದ್ದ ರವಿಶಂಕರನೊಂದಿಗೆ “ಅಪ್ಪ ಮದ್ವೆ ಆಗ್ಬಿಟ್ರೇ ವಾಸೀನೇನೋ ಅಲ್ವೇನೋ. ಜೋಷಿ ಅಂಕಲ್‌ ಹೇಳಿದ್ಕೇಳಿದ್ರೆ ನಂಗೂ ಹಾಗೇ ಅನ್ನಿಸ್ತಿದೆ. ಹೀಗಿರೋದಕ್ಕಿಂತ ಅದೇ ಪರವಾಗಿಲ್ವೇನೋ” ಎಂದ. “ಏನೋಪ್ಪ, ನಂಗೊಂದೂ ಅರ್ಥವಾಗ್ತಿಲ್ಲ; ಈ ಹೆಂಗಸ್ರನ್ನ ಒಪ್ಸೋದು ಹೇಗಪ್ಪಾ. ಅವರ್‌ತಾನೆ ಮನೇಲಿರೋರು” ಎಂದ. “ಅದೂ ನಿಜಾನ್ನು” ಎನ್ನುತ್ತಾ ಟೈಂ ನೋಡಿಕೊಂಡವನು “ಆಗ್ಲೇ ಎಂಟೂವರೆಯಾಗ್ತಿದೆ. ನಡಿ, ಹೊರಡೋಣ. ಏನೇನಾಗತ್ತೋ ನೋಡೋಣ” ಎಂದ. ಇಬ್ಬರೂ ಎದ್ದು ಮನೆಯ ಕಡೆ ಹೊರಟರು.
 
ರಾತ್ರಿ ಹೆಂಡತಿಯರಿಗೆ ಹೇಳಿದಾಗ ಇಬ್ಬರಿಗೂ ಕೋಪವೇ ಬಂತು. “ಏನ್ಮಾತೂಂತ ಹೇಳ್ತೀರಿ. ನಾವು ಏನನ್ನ ಅಡ್ಜಸ್ಟ್‌ ಮಾಡ್ಕೋಬೇಕು? ಅಡ್ಗೆಮನೆ ಬಿಟ್ಕೊಟ್ಟು ಅವ್ರು ಮಾಡ್ಹಾಕಿದ್ದಕ್ಕೆ ಕಾಯ್ತಾ ಕೂತ್ಕೋಬೇಕಾ, ಇಲ್ಲಾ ನೀವು ಅಂತಃಪುರದಲ್ಲಿರಿ. ನೀವು ಕೂತಲ್ಲಿಗೆ ನಾವು ಸಪ್ಲೈ ಮಾಡ್ತೀವಿ ಅನ್ಬೇಕಾ. ನೀವು ಹೇಳೋದ್‌ ಚೆನ್ನಾಗಿದೆ. ಅಕ್ಕಪಕ್ಕದೋರತ್ರ ತಲೆಯೆತ್ಕೊಂಡು ತಿರಗಕ್ಕಾಗ್ತಿಲ್ಲ ನಮ್ಗೆ….” ಬೈದುಕೊಳ್ಳುತ್ತಾ ಪಕ್ಕಕ್ಕೆ ತಿರುಗಿ ಮಲಗಿದಳು ಸರಳಾ. “ಅಲ್ರೀ, ನಾಳೆ ಮಗುವಾದ್ರೆ ಅದ್ರ ಹೇಲು ಉಚ್ಚೆ ಬಳ್ದು, ಸ್ನಾನ ಮಾಡ್ಸಿ, ಊಟ ಮಾಡ್ಸಿ ಎಲ್ಲಾ ನಾವ್‌ ಮಾಡ್ಬೇಕಾ? ಈಗ್ಲೇ ಅವ್ರಿಗೆ ಅರವತ್ತೆರಡಾಯ್ತು ಅಂತಿದೀರಿ. ಆ ಮಗೂನ ದೊಡ್ಡದು ಮಾಡೋ ಜವಾಬ್ದಾರಿ ಯಾರ‍್ದು?” ಪದ್ಮಾ ಇನ್ನೋ ಒಂದು ಹೆಜ್ಜೆ ಮುಂದೆ ಹೋದಳು. ಹೆಂಡತಿಯರ ಪ್ರಶ್ನೆಗೆ ಉತ್ತರಿಸಲಾಗದೇ ಇಬ್ಬರೂ ಮುಸುಕು ಬೀರಿ ಮಲಗಿದರು ʻಮುಂದೇನಾಗತ್ತೋ ನೋಡ್ಕೋಳೋಣಾʼ ಎಂದುಕೊಳ್ಳುತ್ತಾ.
 
ಹೀಗೇ ಮತ್ತೂ ಎರಡು ತಿಂಗಳೂ ಕಳೆಯಿತು. ಮನೆಯ ವಾತಾವರಣ ಇನ್ನೂ ಬಿಗಿಯಾಗುತ್ತಾ ಹೋಯಿತು. ಅಣ್ಣ ತಮ್ಮಂದಿರಿಬ್ಬರು ಅವರವರೇ, ಸೊಸೆಯರಿಬ್ಬರೂ ಅವರವರೇ ಮುಂದಿನ ಯೋಚನೆಗಳನ್ನು ಮಾಡುತ್ತಿದ್ದರು. ಯಥಾ ಪ್ರಕಾರ ಮಹಡಿಗೇ ಊಟ, ತಿಂಡಿ ಸಪ್ಲೈ ವೀರೇಶನಿಂದ ನಡೆಯಿತು. ಯಾರಿಗೂ ಮಾತಿನಲ್ಲೂ ಉತ್ಸಾಹವಿಲ್ಲ; ಕೆಲಸದಲ್ಲೂ ಉತ್ಸಾಹವಿಲ್ಲ. ಸಂಜೆ ಯಾವಾಗಲಾದರೊಂದೊಂದು ಸಲ ಮೂರ್ತಿಗಳು ಕೆಳಗೆ ಬಂದು ಮೊಮ್ಮಕ್ಕಳೊಂದಿಗೆ ಒಂದಷ್ಟು ಕಾಲ ಸಂತೋಷವಾಗಿ ಕಳೆಯುತ್ತಿದ್ದರು. ಮತ್ತೆ ಯಥಾ ಸ್ಥಿತಿ.
 
ಹೀಗಿರುವಾಗಲೇ ಒಂದು ಬೆಳಗ್ಗೆ ತಿಂಡಿಯಾದ ಮೇಲೆ ಕೆಳಗಿಳಿದು ಬಂದ ಮೂರ್ತಿಗಳು, “ಸುಧಾಕರ, ಒಂದು ಊಬರ್‌ ಗೊತ್ಮಾಡ್ತೀಯಾ” ಎನ್ನುತ್ತಾ ಕೆಳಗೆ ಬಂದರು. “ಎಲ್ಲಿಗೆ?” ಎಂದವನಿಗೆ “ಏರ್‌ಪೋರ್ಟಿಗೆ” ಎನ್ನುತ್ತಾ ಮತ್ತೆ ಮೇಲೆ ಹತ್ತಿದರು. ಮೂರ್ತಿಗಳಿಗೆ ನಮಸ್ಕರಿಸಿ “ತುಂಬಾ ಉಪ್ಕಾರವಾಯ್ತು. ಇಷ್ಟ್ದಿನ್ವೂ ನನ್ನ, ಹೊಟ್ಟೇಲಿರೋ ಮಗೂನ ಯಾರ‍್ಕಣ್ಗೂ ಬೀಳ್ದಂಗೆ ಕಾಪಾಡಿದ್ರಿ. ನಾನು, ನನ್ನ ಗಂಡ ನಿಮ್ಮನ್ಯಾವತ್ತೂ ಮರೆಯಲ್ಲ”‌ ಎನ್ನುತ್ತಾ ಕೈಮುಗಿದಳು. “ಫ್ಲೈಟ್‌ ಮಧ್ಯಾಹ್ನ ಎರಡು ಗಂಟೆಗಂತೆ. ನಿಮ್ಮಪ್ಪ ಊರಿಂದ ಸೀದಾ ಏರ್‌ಪೋರ್ಟಿಗೇ ಬರ‍್ತೀನಿ ಕಳಿಸ್ಕೊಡಕ್ಕೆ ಅಂದಿದಾನೆ. ನೀನು ತಲ್ಪೋಷ್ಟರಲ್ಲಿ ಅವ್ನೂ ಬರ‍್ತಾನೇನ್ಸತ್ತೆ. ಹೋಗ್ಬಾಮ್ಮ, ಒಳ್ಳೇದಾಗ್ಲಿ” ಎನ್ನುತ್ತಾ ಮೂರ್ತಿಗಳೂ ಕೈಮುಗಿದು ಸೂಟ್ಕೇಸನ್ನು ಕೈಗೆತ್ತಿಕೊಂಡು, ಟ್ಯಾಕ್ಸಿ ಬಂದಿರುವುದನ್ನು ಹೇಳಲು ಮಹಡಿಯನ್ನು ಹತ್ತಿದ ಸುಧಾಕರನ ಕೈಗೆ ಕೊಟ್ಟರು. ಕಡೆಯ ಎರಡು ಪದವಷ್ಟೇ ಅವನಿಗೆ ಕೇಳಿದ್ದು. ಎಲ್ಲರೂ ಕೆಳಗಿಳಿದು ಬಂದರು. ಅಚ್ಚರಿಯಿಂದ ನೋಡುತ್ತಾ ನಿಂತಿದ್ದ ಸರಳಾ ಪದ್ಮನಿಗೂ, ಸುಧಾಕರನಿಗೂ ಕೈಮುಗಿದಳು. ಸೂಟ್ಕೇಸನ್ನು ಸುಧಾಕರ ತೆಗೆದುಕೊಂಡು ಹೋಗಿ ಟ್ಯಾಕ್ಸಿಯಲ್ಲಿಟ್ಟ. ಹತ್ತಿ ಕುಳಿತವಳು ಮೂರ್ತಿಗಳಿಗೆ ಕೈಬೀಸಿದಳು. ಬೀದಿ ಕೊನೆಯಲ್ಲಿ ತಿರುಗುವ ತನಕ ನೋಡುತ್ತಾ ನಿಂತಿದ್ದ ಮೂರ್ತಿಗಳು ಒಳಬಂದು ಮಹಡಿ ಹತ್ತಿದರು.
 
ಹೆಂಗಸರಿಬ್ಬರ ಮುಖದಲ್ಲೂ ನೂರು ಪ್ರಶ್ನೆ. ಸಾವರಿಸಿಕೊಂಡು ಸುಧಾಕರ ಸರಳನಿಗೆ “ಕಾಫಿ ಬೆರಸು. ಹೊರಡ್ತೀನಿ” ಎನ್ನುತ್ತಾ ಸ್ಕೂಟರ್‌ನ ಕೀ ತೆಗೆದುಕೊಂಡ. ಸರಳ ಕಾಫಿ ಬೆರಸುತ್ತಿರುವಾಗ ಮೂರ್ತಿಗಳೂ ತಯಾರಾಗಿ ಕೆಳಗೆ ಬಂದರು. “ಅಪ್ಪನಿಗೂ ಕೊಡು” ಎನ್ನುತ್ತಾ ಅಡುಗೆಮನೆಗೆ ಬಂದ. “ಏನಾಯ್ತು? ಏನಿದೆಲ್ಲಾ? ಅವಳೆಲ್ಲಿಗೆ ಹೋದಳು?” ಪ್ರಶ್ನೆಗಳನ್ನು ಎದುರಿಟ್ಟು ಅಚ್ಚರಿಯಿಂದ ನೋಡುತ್ತಿದ್ದವಳಿಗೆ “ನಂಗೂ ಸರ‍್ಯಾಗಿ ಗೊತ್ತಾಗ್ಲಿಲ್ಲ, ಮೊದ್ಲು ಕಾಫಿ ಕೊಡು. ಅಪ್ಪಾನೂ ಅಂಗಡಿಗೆ ಬರ‍್ತಾರನ್ಸುತ್ತೆ, ರೆಡಿಯಾಗಿದಾರೆ” ಎನ್ನುತ್ತಾ ಎರಡು ಲೋಟವನ್ನೂ ಹಿಡಿದುಕೊಂಡು ಹೊರಬಂದ. ಇಬ್ಬರೂ ಕುಡಿದು ಹೊರಟರು. ಮೂರ್ತಿಗಳೂ ಹೆಲ್ಮೆಟ್‌ ಹಾಕಿಕೊಂಡು ಹಿಂದಿನ ಸೀಟಿನಲ್ಲಿ ಕುಳಿತರು…
 
ಅಡುಗೆಮನೆಯಿಂದ ತಮ್ಮಿಬ್ಬರಿಗೂ ಕಾಫಿ ತೆಗೆದುಕೊಂಡು ಬಂದ ಪದ್ಮಾ ಡೈನಿಂಗ್‌ ಟೇಬಲ್ಲಿನ ಮುಂದೆ ಕುಳಿತು “ಇದೇನಾಯ್ತು? ಕಡೆಗೂ ಆಕೆ ಯಾರೂಂತಾನೇ ಗೊತ್ತಾಗ್ಲಿಲ್ವಲ್ಲ” ಎಂದಳು ಅಚ್ಚರಿಯಿಂದ. ಇನ್ನೂ ಶಾಕಿಂದ ಹೊರಬಂದಿಲ್ಲದ ಸರಳ “ಅದೇ ನಂಗೂ ಅರ್ಥವಾಗ್ತಿಲ್ಲ; ಯಾರಾದ್ರೂ ಆಕ್ಕೊಂಡೋಗ್ಲಿ, ಅಂತೂ ಹೊರಟ್ಳಲ್ಲ ಬಿಡು” ಎನ್ನುತ್ತಾ ಕುಡಿದ ಲೋಟ ಟೇಬಲ್ಲಿನ ಮೇಲಿಟ್ಟಳು. “ಪ್ರೆಗ್ನೆಂಟ್‌ ಇದ್ಹಾಗಿತ್ತು. ಗಮನಿಸಿದ್ಯಾ…? ಮತ್ತೆ ಬರೋದಿಲ್ಲಾಂತೀಯಾ….?” ಪದ್ಮಾ ಅವಳ ಮುಖವನ್ನೇ ನೋಡುತ್ತಾ ಕೇಳಿದಳು. “ಆ… ಹಂಗಂತೀಯಾ?” ಎಂದ ಸರಳಾ ದಿಗಿಲಿನಿಂದ ಪದ್ಮನ ಮುಖವನ್ನೇ ನೋಡುತ್ತಾ ತಲೆಗೆ ಕೈಹಚ್ಚಿದಳು. ಪದ್ಮನೂ ಯೋಚನೆಗೆ ಬಿದ್ದಳು…
 
ಅವಳ ಟ್ಯಾಕ್ಸಿ ವಿಮಾನ ನಿಲ್ದಾಣವನ್ನು ತಲುಪಿತು…‌ ಮೂರ್ತಿಗಳು ಎಂದಿನಂತೆ ಅಂಗಡಿಯ ತಮ್ಮ ಜಾಗದಲ್ಲಿ ಕುಳಿತು ದಿನನಿತ್ಯದ ವ್ಯವಹಾರದಲ್ಲಿ ತೊಡಗಿಕೊಂಡರು…

***


ಕಥೆಗಾರ್ತಿ ಶ್ರೀಮತಿ ಟಿ. ಎಸ್.‌ ಶ್ರವಣ ಕುಮಾರಿ.

ಚಿತ್ರಕೃಪೆ : ಮೋಹನ್ ಮಣಿಮಾಲ pinterest ಪೇಜ್.