ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಟಿ ಎಸ್ ಶ್ರವಣ ಕುಮಾರಿ
ಇತ್ತೀಚಿನ ಬರಹಗಳು: ಟಿ ಎಸ್ ಶ್ರವಣ ಕುಮಾರಿ (ಎಲ್ಲವನ್ನು ಓದಿ)

ದಿನಾಂಕ 18.04.2021 ಭಾನುವಾರ ಬೆಳಗ್ಗೆ 10.00 ಗಂಟೆಗೆ ಬಿ ಪಿ ವಾಡಿಯಾ ಸಭಾಂಗಣದಲ್ಲಿ ಮೈತ್ರಿ ಪ್ರಕಾಶನದವರಿಂದ ನನ್ನ ಪ್ರಬಂಧ ಸಂಕಲನ ‘ಸಂಜೆಯ ಮಳೆ’ಯೂ ಲೋಕಾರ್ಪಣೆಯಾಗುತ್ತಿದೆ. ಎಲ್ಲರಿಗೂ ಆತ್ಮೀಯವಾದ ಸ್ವಾಗತ.

ಲೇಖಕರು: ಶ್ರೀಮತಿ ಟಿ.ಎಸ್. ಶ್ರವಣ ಕುಮಾರಿ
ಲೇಖಕರು: ಶ್ರೀಮತಿ ಟಿ.ಎಸ್. ಶ್ರವಣ ಕುಮಾರಿ

ಈಗಾಗಲೇ ರಾಜ್ಯದೆಲ್ಲೆಡೆ ಮಳೆಯಾದ ಸುದ್ದಿ ಬಂದಿದೆ.. ಬರುವ ಹದಿನೆಂಟರಂದು ನಮ್ಮ ಕತೆಗಾರ, ಲೇಖಕರಾದ ಶ್ರೀಮತಿ ಟಿ.ಎಸ್. ಶ್ರವಣ ಕುಮಾರಿ ಅವರ ‘ಸಂಜೆ ಮಳೆ’ ಬಿಡುಗಡೆ ಆಗ್ತಿದೆ ಎನ್ನುವ ಸಂತಸದ ಸಮಾಚಾರ ಸಿಕ್ಕಿದೆ. ಅವರಿಗೆ ಶುಭ ಕೋರುತ್ತಾ ಇನ್ನಷ್ಟು ಪುಸ್ತಕಗಳ ಮಳೆ ಆಗಲಿ ಎಂದು ಆಶಿಸುತ್ತೇವೆ. ಈ ಪುಸ್ತಕದ ಮುನ್ನುಡಿ ಶ್ರೀಮತಿ ಜಯಶ್ರೀ ಕಾಸರವಳ್ಳಿಯವರದು, ಬೆನ್ನುಡಿ ಶಶಿಧರ ಹಾಲಾಡಿಯವರದು. ಈ ಕೆಳಗೆ ಮುನ್ನುಡಿಯನ್ನು ಪ್ರಕಟಿಸಲಾಗಿದೆ

ನಸುಕು ಸಂಪಾದಕ ಬಳಗ

ಮುನ್ನುಡಿ

ವರ್ತಮಾನದ ಹೊಸ್ತಿಲಲ್ಲಿ ನಿಂತಿರುವ ನಮಗೆಲ್ಲರಿಗೂ ಗತಕಾಲದ ಸ್ಮರಣೆಯೆಂಬುದು ಜೀವಜಲವಿದ್ದಂತೆ. ಮನುಷ್ಯನಿಗೆ ಗತಕಾಲವೆಂಬುದಾಗಲಿ, ಅಂತಹದೊಂದು ಸ್ಮರಣೆಯಾಗಲಿ ಇಲ್ಲದಿದ್ದಲ್ಲಿ ಬದುಕು ಹೇಗಿರಬಹುದೆನ್ನುವ ಕಲ್ವನೆಯೇ ಊಹಿಸಲಸಾಧ್ಯ. ದಿನವೊಂದು ಬೆಳಕು ಕಳೆದು ಕತ್ತಲಾಗುವಷ್ಟು ಸಹಜ ಗತಿಯಲ್ಲಿ ವರ್ತಮಾನದ ಬದುಕು ಗತಕಾಲದ ನೆನಪಿನ ತಳಹದಿಯಲ್ಲಿ ದೈನಂದಿನ ಆಗು ಹೋಗುಗಳೊಂದಿಗೆ ತಳುಕು ಹಾಕಿಕೊಂಡು ಬದುಕಿಗೊಂದು ಮಧುರ ಅನುಭೂತಿಯನ್ನೂ, ವಿಸ್ಮಿತವನ್ನೂ, ವಿಸ್ತರವನ್ನೂ ನೀಡಿ ಹಸನುಗೊಳಿಸುತ್ತಿರುತ್ತವೆ. ಹಾಗೆ ಬದುಕು ದಯಪಾಲಿಸಿದ ಕೆಲವೊಂದು ವಿಷಾದವನ್ನೂ, ವಿಸ್ಮೃತಿಯನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಬಲವೂ ಕಾಲದೊಂದಿಗಿನ ಒಡನಾಟದೊಡನೆ ಬಲಿತು ಬದುಕುವ ಕಲೆಯನ್ನೂ ಕಲಿಸುತ್ತಿರುತ್ತದೆ. ಬಹುಶಃ ಬದುಕೊಂದು ಅರ್ಥಪೂರ್ಣವಾಗುವುದು ಕಾಲದೊಂದಿಗೆ ಮಿಳಿತಗೊಂಡ ಮನುಷ್ಯ ಸಹಜ ಭಾವಗಳ ಏರಿಳಿತ ಹಾಗೂ ಮಾನವ ಸಹಜ ತುಡಿತಗಳಿಂದಲೇ.

ಹಾಗಾಗಿ ಸ್ಮೃತಿಯಿಲ್ಲದ ಬದುಕಿಲ್ಲ. ಗತ ಬದುಕೆಂಬುದು ನಮ್ಮೆಲ್ಲರ ಸ್ಮೃತಿಯಲ್ಲಿ ಚಿರಂತನವಾಗಿ ಉಳಿದುಹೋಗಿರುವಂತಹದ್ದು. ಅದೊಂದು ಅಕ್ಷಯ ಪಾತ್ರೆ. ನಮ್ಮ ಮನಸ್ಸನ್ನು ಸದಾ ಬೆಚ್ಚಗಿಡುವ ಎಲ್ಲಾ ನೆನಪುಗಳು ಕೇವಲ ಆಗಿ ಹೋದ ಬದುಕನಷ್ಟೇ ಹೇಳುತ್ತಿರುವುದಿಲ್ಲ, ಕಳೆದುಕೊಂಡದನ್ನು ಜ್ಞಾಪಿಸುತ್ತಲೇ, ಎಚ್ಚರದಿಂದ ಬದುಕು ಕಟ್ಟಿಕೊಳ್ಳಲು ನಮ್ಮನ್ನು ಪೂರ್ವಭಾವಿಯಾಗಿ ಸಿದ್ಧಗೊಳಿಸುತ್ತಿರುತ್ತವೆ. ಹಳೆ ಮೆಲುಕುಗಳನ್ನು ಹಾಕುತ್ತಲೇ, ಹೊಸ ಬದುಕಿನ ಸವಾಲನ್ನು, ಬದಲಾವಣೆಯನ್ನು ಸ್ವೀಕರಿಸುವಂತೆ ಪ್ರೇರೇಪಿಸುತ್ತಿರುತ್ತವೆ. ಮಾಂತ್ರಿಕನೊಬ್ಬ ತನ್ನ ಬಾಯಿಯಿಂದ ಬಣ್ಣ ಬಣ್ಣದ ಕಾಗಗದುಂಡೆಯನ್ನು ನಿರಂತರವಾಗಿ ಎಳೆದಂತೆ, ಬಾಲ್ಯದ ಅಕ್ಷಯ ಪಾತ್ರೆಯನ್ನು ತಡಕಿ, ಸಂದಿಮೂಲೆಯನ್ನೆಲ್ಲಾ ಹುಡುಕಿ, ಎಂದೆಂದಿನದೋ ಸಂಗತಿಗಳಿಗೆಲ್ಲಾ ನಿರ್ದಿಷ್ಟ ಸ್ವರೂಪ ಕೊಟ್ಟು ವಾಸ್ತವದಲ್ಲಿ ಮತ್ತೊಮ್ಮೆ ಭಟ್ಟಿಯಿಳಿಸಿ, ಬಾಲ್ಯದ ಮುಗ್ಧತೆಯನ್ನೋ, ವಿಸ್ಮಯವನ್ನೋ ಮತ್ತೊಮ್ಮೆ ಅನುಭವಿಸಲು ಹಾತೊರೆಯುತ್ತಿರುತ್ತೇವೆ. ವಯಸ್ಸಾಗುತ್ತಾ ಮನಸ್ಸು ಮಾಗಿದ ಹಾಗೆ ಗತಕಾಲ, ವರ್ತಮಾನ, ಭವಿಷ್ಯಗಳೆಲ್ಲಾ ಸರಳವಾಗುತ್ತಾ, ಬದುಕನ್ನು ಕೂಲಂಕಷವಾಗಿ ವಿಶ್ಲೇಷಿಸುತ್ತಾ, ಯಾವ ಹಳಹಳಿಯೂ ಇಲ್ಲದೆ ಕಾಲದಿಂದ ಕಾಲಕ್ಕೆ ಬದಲಾಗುವ ಜೀವನಕ್ರಮಕ್ಕೆ ಅನುಸರಿಸಿಕೊಂಡು ಹೋಗುವ ಜೀವನಮಾರ್ಗವನ್ನಷ್ಟೇ ಕುರಿತು ಯೋಚಿಸುತ್ತಿರುತ್ತೇವೆ.

ಶ್ರವಣಕುಮಾರಿಯವರು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ತೀರಾ ಇತ್ತೀಚೆಗೆ. ಕೆಲಸದಿಂದ ನಿವೃತ್ತಿ ಹೊಂದಿ, ಬದುಕಿನ ಮಹತ್ತರವಾದ ಜವಾಬ್ದಾರಿಗಳನ್ನು ಮುಗಿಸಿ ಆರಾಮವಾದ ಮೇಲೆ. ಸಹಜವಾಗಿಯೇ ಅರವತ್ತು ವರುಷಗಳಲ್ಲಿ ಸಾಕಷ್ಟು ಪಕ್ವಗೊಂಡ ಮನಃಸ್ಥಿತಿ ಅವರದ್ದು. ಬದುಕಿನ ಒಳಿತು ಕೆಡುಕನ್ನು ಕಂಡು ಮಾಗಿದ ಬಾಳಿನಲ್ಲಿ ಬರವಣಿಗೆಯನ್ನು ಕೈಗೆತ್ತಿಕೊಂಡಿರುವುದರಿಂದಲೇ, ‘ಸಂಜೆ ಮಳೆ’ ಅವರ ಪ್ರಥಮ ಪ್ರಬಂಧ ಸಂಕಲನವಾದರೂ, ಬದುಕಿನ ನಿಷ್ಠುರತೆಯನ್ನು ತೋರದೇ, ಬಾಲ್ಯ ಕಾಲವನ್ನು ನೆನೆಯುತ್ತಲೇ ಆರ್ದ್ರತೆಯನ್ನಷ್ಟೇ ಹೊಳೆಯಿಸುವ ಪ್ರಯತ್ನವನ್ನು ಮಾಡಿದ್ದಾರೆ.

‘ಸಂಜೆಯ ಮಳೆ’ ಪ್ರಬಂಧ ಸಂಕಲನವನ್ನು ಓದಿದ ಯಾರಿಗಾದರೂ ಇವರ ಬಾಲ್ಯದ ಅಕ್ಷಯ ಪಾತ್ರೆ ಅದೆಷ್ಟು ಸಮೃದ್ಧವಾಗಿದೆಯೆಂದು ಅನ್ನಿಸದೇ ಇರದು. ಇಲ್ಲಿ ಶಿವಮೊಗ್ಗೆಯ ನೆನಪಿದೆ, ಚಿತ್ರದುರ್ಗದ ಕೋಟೆ ಕೊತ್ತಳೆಯ ರಣ ಬಿಸಿಲಿದೆ, ಮೈಸೂರಿನ ದಸರಾ ವೈಭವವಿದೆ, ಸಂಜೆ ಸುರಿವ ಮಳೆಯ ಆರ್ದ್ರತೆಯಿದೆ, ‘ಅದೆಷ್ಟು ಪ್ರೇಮಿಗಳನ್ನು ಕೂಡಿಸುವ ಮಧ್ಯವರ್ತಿಯಾಗಿದೆಯೋ.. ನಿಜ ಜೀವನದಲ್ಲಿ ಅದೆಷ್ಟು ಪ್ರೇಮಿಗಳು ಅದಕ್ಕೆ ಕೃತಜ್ಞರಾಗಿದ್ದಾರೋ..’ ಎಂಬ ಅರ್ಪಣಾಭಾವದಲ್ಲಿ ನೆನೆವ ಸಂಜೆ ಮಳೆ ಮನಸ್ಸಿಗೆ ತಂಪು ಎರೆಚುತ್ತಿರುವಾಗಲೇ, ರಜೆಗಳಲ್ಲಿ ಒಬ್ಬರಿಗೊಬ್ಬರು ನವಿಲುಗರಿ, ಹಕ್ಕಿಪುಕ್ಕ, ಒಣಗಿದೆಲೆಗಳನ್ನು ಗುಟ್ಟಾಗಿ ಹಂಚಿಕೊಳ್ಳುತ್ತಾ, ಸುಡು ಬಿಸಿಲಿನ ಕಾಲದಲ್ಲಿ ನಕ್ಷತ್ರಗಳನ್ನು ಎಣಿಸುತ್ತಾ ತಾತನ ಮನೆಯ ತಾರಸಿಯಲ್ಲಿ ಬೇಸಿಗೆಯ ರಾತ್ರಿಗಳನ್ನು ಕಳೆವ ಕೂಡು ಕುಂಟುಂಬದೊಂದಿಗಿನ ಬೆಚ್ಚನೆಯ ಅನುಭೂತಿಯೂ ಇಲ್ಲಿದೆ.

ಈ ಸಂಕಲನದಲ್ಲಿರುವ ‘ಕೈತುತ್ತು’ ಮತ್ತು ‘ಅಕ್ಕಿರೊಟ್ಟಿ’ ಓದುತ್ತಿದ್ದಂತೇ ಅವು ಸುನಂದಾ ಬೆಳಗಾವಂಕರರ ನೆನಪನ್ನೂ, ನನ್ನ ಬಾಲ್ಯವನ್ನೂ ಏಕ ಕಾಲದಲ್ಲಿ ಮುನ್ನಲೆಗೆ ತಂದಿದ್ದವೆಂದರೂ ಸರಿ. ಮಕ್ಕೆಳೆಲ್ಲಾ ಕಲೆತಾಗ ಸಂಜೆಯಾಗುತ್ತಿದ್ದಂತೇ ಅಜ್ಜಿ ಹಾಕುತ್ತಿದ್ದ ಅತ್ಯಂತ ಸರಳ ಅಡುಗೆಯಾದ ಹುಳಿಯನ್ನ ಹಾಗೂ ಮೊಸರನ್ನದ ಕೈ ತುತ್ತು ಅಮೃತ ಸಮಾನವೆನ್ನಿಸುತ್ತಿದ್ದಂತಹ ಕಾಲವದು. ಸಂಜೆಯ ಅರೆಗತ್ತಲ ಹೊತ್ತಿನಲ್ಲಿ ಯಾರೋ ಹೇಳಿದ ಯಾವುದೋ ಕತೆ, ಮತ್ಯಾವುದೋ ಆಪ್ತ ಸನ್ನಿವೇಶ, ಮೊಮ್ಮಕ್ಕಳನ್ನೆಲ್ಲಾ ಬಗುಲಲ್ಲಿ ಕೂರಿಸಿಕೊಂಡು ಅಜ್ಜಿ ಕಟ್ಟುತ್ತಿದ್ದ ಕಾಗಕ್ಕ, ಗುಬ್ಬಕ್ಕನ್ನ ಎಂದಿನ ಅವವೇ ಕತೆಗಳು ಪಡೆದುಕೊಳ್ಳುತ್ತಿದ್ದ ವಿಶೇಷ ಮೆರುಗುಗಳು ‘ಕೈತುತ್ತು’ ಪ್ರಬಂಧ ಓದುವಾಗ ಮನಸ್ಸಿನಲ್ಲಿ ಮೂಡಿ, ಒಂದು ಸುಂದರವಾದ ಜೀವನ ವಿಧಾನವನ್ನು ಕಳೆದುಕೊಂಡಿದ್ದರ ಮಧುರ ನೆನಪಿನಿಂದ ನಮ್ಮನ್ನು ಆರ್ದ್ರಗೊಳಿಸಿಬಿಡುತ್ತವೆ. ಇಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳಷ್ಟೇ ಅಲ್ಲ, ನೆರೆಹೊರೆಯ ಮಕ್ಕಳೂ, ಮೊಮ್ಮಕ್ಕಳೂ ಅಜ್ಜಿಯ ಕೈತುತ್ತಿನಲ್ಲಿ ಕೂತು ಸಮಾನರಾಗಿ ಉಣ್ಣುವ ಸೌಹಾರ್ದಯುತ ಜೀವನ ಶೈಲಿಯಿದೆ. ‘ಅವರ ಮನೆಯ ಕೈತುತ್ತು ತಿಂದು ಬೆಳೆದವನು,’ ನೆರೆಹೊರೆಯ ಮಕ್ಕಳು ಹೇಳಿಕೊಳ್ಳುತ್ತಾ ಬೆಳೆದು ದೊಡ್ಡವರಾದವರಲ್ಲಿ ಯಾವ ಕಲ್ಮಶವೂ ಇಲ್ಲದ ನಿರ್ಮಲ ಪ್ರೀತಿಯನ್ನಷ್ಟೇ ಕಾಣಲು ಸಾಧ್ಯ. ಹೃದಯದಿಂದ ಬಂದಂತಹ ಇಂತಹ ಅಕರಾಸ್ಥೆಯ ಮಾತುಗಳಲ್ಲಿ ಕೈತುತ್ತು ನೀಡಿದವರ ಬಗ್ಗೆ ಅಪಾರವಾದ ಗೌರವ ಮತ್ತು ಮಾತೃ ಸಮಾನ ಪ್ರೀತಿಯ ಮನೋಭಾವವಿದೆ. ಹಿಂದಿನ ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳು, ಮೊಮ್ಮಕ್ಕಳು ಒಟ್ಟಿಗೆ ಕಲೆತಾಗ, ಬೆಳಗು ಕಂತುತ್ತಿರುವ ಮುಸ್ಸಂಜೆಗಳಲ್ಲಿ ಅಂಗಳದಲ್ಲೋ, ತಾರಸಿಯಲ್ಲೋ ಹಿರಿ ಕಿರಿಯರೆಲ್ಲಾ ಕೂತು ಸವಿಯುವ ಈ ‘ಕೈತುತ್ತು’, ಹಳಬರು ಅನುಸರಿಕೊಂಡು ಬಂದ ಕೇವಲ ಜೀವನ ವಿಧಾನವಷ್ಟೇ ಅಲ್ಲ, ನಮ್ಮ ಸಂಸ್ಕೃತಿಯ ಪ್ರತೀಕವೂ ಹೌದು. ಕೇವಲ ಒಂದು ತಲೆಮಾರಿನ ಹಿಂದಿದ್ದ ಜೀವನ ಪದ್ಧತಿ, ಹಿರಿಯರಲ್ಲಿರುತ್ತಿದ್ದ ಅದಮ್ಯ ಚೈತನ್ಯ ಹಾಗೂ ಸಂತಸದ ಬದುಕಿನ ಸರಳ ಜೀವನೋಪಾಯದ ಮಾರ್ಗಗಳು, ಇಂದಿನ ಏಕ ಕುಟುಂಬ ಪರಿವಾರದವರಿಗೆ ಮರೀಚಿಕೆಯೇ ಅಗಿರುವುದನ್ನೂ ಈ ಲೇಖನದಲ್ಲಿ ಕಾಣುತ್ತೇವೆ. ಮನ ವಿಕಸನಕ್ಕೆ ದಾರಿ ಮಾಡಬಹುದಾದಂತಹ ಒಟ್ಟು ಕುಟುಂಬದ ಸೌಂದರ್ಯ, ಸಾಮರಸ್ಯ, ಸೌಹಾರ್ದಯುತ ಸಹಬಾಳ್ವೆಯಂತಹ ಸ್ವಾರಸ್ಯಮಯ ಜೀವನ ಶೈಲಿಯಿಂದ ಇಂದಿನ ಮಕ್ಕಳು ವಂಚಿತರಷ್ಟೇ ಅಲ್ಲ, ಇಂತಹ ಜೀವನಪಾಠವೂ ದಕ್ಕದಷ್ಟು ಬದಲಾದ ಕುಟುಂಬ ವ್ಯವಸ್ಥೆಯಲ್ಲಿ ತೀರಾ ಒಂಟಿಯಾಗಿ ಬೆಳೆಯುತ್ತಿರುವುದು ವಿಷಾದನೀಯ ಸ್ಥಿತಿ.

‘ಅಕ್ಕಿರೊಟ್ಟಿ’ ಒಂದು ಹದವಾದ ಸುಲಲಿತವಾಗಿ ಓದಿಸಿಕೊಂಡು ಹೋಗುವ ಪ್ರಬಂಧ .ನಮ್ಮ ಹಿರಿಯರು ಪಾಕಪ್ರವೀಣರು. ರಸವಿದ್ಯೆಯಲ್ಲಿ ಚಾಕಚಕ್ಯರು. ಮನೆಯಲ್ಲಿರುವ ಸಾಮಾಗ್ರಿಗಳಿಂದಲೇ ತಯಾರಿಸುತ್ತಿದ್ದ ಹದವರಿತ ಹಿತವಾದ ಅಡುಗೆಗಳು. ಕಣ್ಣಳತೆಯಲ್ಲೇ ಹಾಕಿ ಬೆರೆಸುವ ಲವಾಜಮೆಯೊಡನೆ ಒಂದಾಗಿ ಮಿಳಿತ ಆ ಅಡುಗೆಗಳ ರುಚಿಯೇ ಬೇರೆ. ಇವತ್ತಿನ ಯುವ ಜನಾಂಗದವರು ಟ್ಯೂಬ್ ನೋಡಿ ಪ್ರತಿಯೊಂದನ್ನೂ ಕರಾರುವಕ್ಕಾಗಿ ಅಳೆದು, ಹಂತ ಹಂತದ ತಯಾರಿಯನ್ನು ವಿಡಿಯೋ ನೋಡಿ ಸ್ಟೆಪ್ ಬೈ ಸ್ಟೆಪ್ ಅನುಸರಿಸಿಯೂ ಅಡುಗೆ ಕೆಡುವುದಿದೆ. ಆದರೆ ನಮ್ಮ ಪೂರ್ವಿಕರು ಹಾಗೆ ಕೆಡಿಸಿದ ಉದಾಹರಣೆಗಳೇ ವಿರಳ. ಅಂತಹ ಅನ್ನಪೂರ್ಣೆಯರು.

ಮನೆಯಲ್ಲಿ ಮಾಡುವ ಅಕ್ಕಿರೊಟ್ಟಿಗೆ ಸಮಾನವಾದ ತಿನಿಸು ಎಷ್ಟು ದುಡ್ಡು ಕೊಟ್ಟರೂ ಹೋಟೆಲ್‍ಗಳಲ್ಲಿ ಸಿಗುವುದಿಲ್ಲವೆಂದು ಹೇಳುತ್ತಲೇ, ತಮ್ಮ ಬಾಲ್ಯದಲ್ಲಿ ದೊಡ್ಡಮ್ಮ ಮಾಡಿದ ಅಕ್ಕಿರೊಟ್ಟಿಯ ರುಚಿ, ಪಕ್ಕದಮನೆ ಸುಶೀಲಮ್ಮನವರ ರೊಟ್ಟಿಯ ಸ್ವಾದವನ್ನೂ ಲೇಖಕಿ ನೆನೆದಿದ್ದಾರೆ. ಈ ಎಲ್ಲಾ ನೆನೆಕೆಯೇ ನಮ್ಮನ್ನು ಬಾಲ್ಯಕಾಲಕ್ಕೆ ಓಡಿಸಿ, ನಮ್ಮ ಮನೆಯಂಗಳದಲ್ಲಿಯ ಅಮ್ಮನದೋ, ಅಜ್ಜಿಯದೋ ನೆನಪನ್ನು ಹರವುತ್ತಾ ರೊಟ್ಟಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ಬಿಚ್ಚುತ್ತಾ ಬರುವುದೊಂದು ವಿಶೇಷ. ‘ಇದೊಂದು ವಾಣಿಜ್ಯ ಉಪಾಹಾರವಾಗದೇ, ಅಮ್ಮಂದಿರ ಕೈಯ ಅಕ್ಕರೆಯ ತಿಂಡಿಯಾಗೇ ಉಳಿಯಲಿ..’ ಎಂಬ ಆಶಯವೂ ಮಿಳಿತವಾಗಿ, ಇದಕ್ಕೊಂದು ಪಾವಿತ್ರ್ಯತೆ ದಕ್ಕಿದೆ. ಮತ್ತದು ಹಾಗೇ ಉಳಿದಿದೆ ಮತ್ತು ಉಳಿಯಲಿ ಎಂಬುದೇ ನಮ್ಮೆಲ್ಲರ ಮನದ ಇಂಗಿತ ಕೂಡಾ.

ಹೂ ಕುರಿತು ಇವರು ಬರೆದ ‘ಹೂವಿನ ಭಾಷೆ’ ಎಂಬ ಚಂದದ ಪ್ರಬಂಧವೂ ಈ ಸಂಕಲನದಲ್ಲಿದೆ. ತನ್ನಷ್ಟಕ್ಕೆ ತಾನು ಅರಳಿ ಉದುರಿ ಹೋಗುವ ಹೂವಿಗೂ ಒಂದು ಭಾಷೆಯಿದೆಯೇ? ತನ್ನ ಸೌಂದರ್ಯದ ಕಲ್ವನೆಯೇ ಇರದೇ ಅತ್ಯಂತ ಸಹಜವಾಗಿ ಹೂ ತಳೆದು ತನ್ನ ಸೌರಭವನ್ನೋ, ಮಕರಂದವನ್ನೋ ಜಗತ್ತಿಗೆ ಪಸರಿಸಿ ತಾನು ಮಾತ್ರ ನೇಪಥ್ಯದಲ್ಲುಳಿದು ಜಗತ್ತನ್ನೇ ಮೈ ಮರೆಸುವ ತಾಕತ್ತಿರುವ ಅವಕ್ಕೇನಾದರೂ ತನ್ನರಿವು ಇದ್ದಿದ್ದರೆ ಹೂಗಳು ಯಾವ ರೀತಿಯಲ್ಲಿ ಮೆರೆಯಲು ಸಾಧ್ಯ? ಎಂಬ ಜಿಜ್ಞಾಸೆಯೂ ಇಲ್ಲಿದೆ. ಮನುಷ್ಯನ ಕಲ್ಪನಾ ಶಕ್ತಿಗೆ ಹೂಗಳ ಕೊಡುಗೆ ಅಪಾರ. ಪುರಾಣಗಳಲ್ಲಿ, ಆಧುನಿಕ ಕತೆ, ಕಾವ್ಯಗಳಲ್ಲಿ, ಚಲನಚಿತ್ರ ಗೀತೆಗಳಲ್ಲಿ, ಮನುಷ್ಯನ ಭಾವಗಳೊಂದಿಗೆ ಸಮೀಕರಿಸುತ್ತಾ ಹೂಗಳು ನಮ್ಮ ನಿತ್ಯ ಒಡನಾಡಿಯಾಗಿವೆ. ಹೆಣ್ಣಿನ ಸೌಂದರ್ಯ ಇಮ್ಮಡಿಸುವಲ್ಲಿ ಹೂವಿನದು ಮಹತ್ವದ ಪಾತ್ರ. ಹಾಗೇ ಪ್ರೇಮಿಗಳಲ್ಲಿ, ವಿರಹಿಗಳಲ್ಲಿ, ಮನುಷ್ಯ ಸಹಜ ಸಂಬಂಧಗಳ ರಹಸ್ಯ ಭಾಷೆಯಾಗಿ ಹಲವು ಬಣ್ಣದ ಹೂಗಳು ಮೌನ ಸಂವಾದಿಯಾಗಿ ಅಂತರಂಗದ ನಿವೇದನೆಯನ್ನು ಬಹಳ ಯಶಸ್ವಿಯಾಗಿ ರವಾನಿಸಬಲ್ಲಷ್ಟು ಶಕ್ತವಾಗಿವೆ. ನಮ್ಮ ಆಚರಣೆ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಕಲಾಪಗಳಲ್ಲಿ ಹೂವಿಗೆ ಅತ್ಯಂತ ಪ್ರಶಸ್ತ ಹಾಗೂ ಪ್ರಧಾನ ಸ್ಥಾನವಿದೆ. ಭಾಷೆಯ ಹಂಗಿಲ್ಲದೇ ನಮ್ಮ ಬದುಕಿನ ಉದ್ದಗಲಕ್ಕೂ ಹಾಸುಹೊಕ್ಕಿರುವ ಸುಕೋಮಲ ಹೂಗಳು ನಮ್ಮನ್ನು ಅದೆಷ್ಟು ಪ್ರಫುಲ್ಲಗೊಳಿಸುತ್ತವೆ. ಪ್ರತಿನಿತ್ಯ ತನ್ನ ಸಿಗ್ಧ ಸೌಂದರ್ಯದಿಂದಲೇ ಜೀವನೋತ್ಸಾಹ ತುಂಬುತ್ತಿರುವಾಗ ಅದಕ್ಕೊಂದು ಪ್ರತ್ಯೇಕ ಭಾಷೆಯ ಅಗತ್ಯವಾದರೂ ಎಲ್ಲಿದೆ ಅಲ್ಲವೇ?

ಇವಲ್ಲದೇ ‘ದೀಪದ ಹಬ್ಬದ ಸಡಗರ’, ‘ಶಿವರಾತ್ರಿಯ ಶಿವ ಪುರಾಣ’, ‘ಸಲಾಮನ ಗಾಡಿಯೂ, ಸಂಕ್ರಾಂತಿ ಹಬ್ಬವೂ’ ಪ್ರಬಂಧಗಳಲ್ಲಿ ಮಕ್ಕಳ ಮುಗ್ಧ ಲೋಕದಲ್ಲಿ ಹಬ್ಬಗಳು ತರುತ್ತಿದ್ದಂತ ಸಂಭ್ರಮ, ಸಡಗರಗಳಿವೆ. ಬಾಲ್ಯಕಾಲದ ಮಕ್ಕಳ ಹುಮ್ಮಸ್ಸು, ಗಲಗಲವೆನ್ನುವ ಹಬ್ಬದಾಚರಣೆಯ ವಿಶೇಷಗಳು, ಜಾಗರಣೆ ತಂದೊಡ್ಡಿದ ಅವಾಂತರಗಳನ್ನು ಓದುವಾಗ, ನಮ್ಮ ಕಾಲದ ದೈನಂದಿನ ಬದುಕಿನ ಒತ್ತಡವೇನೇ ಇರಲಿ, ಹಬ್ಬಗಳು ಬಂದಾಗ ಕುಟುಂಬದ ಸರ್ವರೂ ಏಕ ರೀತಿಯಲ್ಲಿ ಸಂಭ್ರಮಿಸಿ ಮನೋಲ್ಲಾಸದಿಂದ ಆಚರಿಸುತ್ತಿದ್ದಂತಹ ಸಂತಸದ ಅತ್ಯಂತ ಸರಳ ಜೀವನೋದ್ದೇಶವನ್ನು ನಾವು ಕಳೆದುಕೊಂಡವೆನೋ ಎಂಬ ಭಾವ ಸುಳಿಯುವುದುಂಟು. ಹಬ್ಬ ಮೊದಲಿನ ಸಂಭ್ರಮದ ಆಚರಣೆಯಾಗಿ ಯಾಕೆ ಉಳಿದಿಲ್ಲವೆಂಬ ಪ್ರಶ್ನೆಯೂ ಮನದಲ್ಲಿ ಮೂಡದೇ ಇರುವುದಿಲ್ಲ.
‘ಎಲೆಗಳ ಬಲೆಯಲ್ಲಿ..’ ಪ್ರಬಂಧ ನನ್ನ ಬಾಲ್ಯ ಕಾಲದ ನೆನಪೂ ಹೌದು. ಸಭೆ, ಸಮಾರಂಭವೆಂದು ಕಲೆತಾಗ ಆಗಿದ್ದ ಮನೋರಂಜನೆಯೆಂದರೆ ಮನೆಯ ಅಟ್ಟದಲ್ಲೋ, ಮಹಡಿಯಲ್ಲೋ ಮನೆಯ ಗಂಡಸರು ಜಮಖಾನ ಹಾಸಿಕೊಂಡು ಹಚ್ಚಿಕೊಳ್ಳುತ್ತಿದ್ದ ಎಲೆಗಳಾಟದ ಉಮೇದೇ ಬೇರೆ. ಮದುವೆಯಂತಹ ಶುಭ ಕಾರ್ಯವಾಗಿರಬಹುದು, ಸೂತಕದ ಮನೆಯಾಗಿರಬಹುದು, ಇಸ್ಪೀಟಿನಾಟಕ್ಕೆ ಯಾರ ಅಭ್ಯಂತರವೂ ಇರುತ್ತಿರಲಿಲ್ಲ. ಕೂತಲ್ಲೇ ಅವರಿಗೆ ನೀರು, ಶರಬತ್ತು, ಕಾಫಿ ಚಹಾಗಳ ಸಮಾರಾಧನೆಗಳೇನು? ಕುರುಕಲು ತಿಂಡಿಗಳ ಸರಬರಾಜೇನು? ಈಗಲೂ ಮಲೆನಾಡಿನಲ್ಲಿ ಕೆಲವು ಕಡೆ ಮನೆಯ ಮುಖ್ಯಸ್ಥರೆಲ್ಲಾ ಸೇರಿದಾಗ ಇಂತಹ ಇಸ್ಪೀಟಿನ ಕಂಬಳಗಳೇಳುವುದಿದೆ. ಇವೆಲ್ಲವೂ ಮನ ಹಗುರ ಮಾಡಿಕೊಳ್ಳಲು ಗಂಡಸರು ಕಂಡುಕೊಂಡಂತಹ ಸುಲಭ ಮಾರ್ಗ. ದುಡ್ಡಿಟ್ಟು ಆಡುವ ಜೂಜಾಗಿರದೇ ಕೆಲ ಹೊತ್ತು ಮನೋರಂಜನೆಗಾಗಿ ಆಡುವಂತಹ ಆಟವಿದು.

ಬಾಲ್ಯದ ಬಗ್ಗೆ ತೀವ್ರವಾಗಿ ಬರೆಯುವಾಗ ಕೆಲವೊಮ್ಮೆ ಕಳೆದುಕೊಂಡಿದ್ದಕ್ಕಾಗಿ ಪರಿತಪಿಸುವುದುಂಟು. ‘ಅಯ್ಯೋ ನಮ್ಮ ಕಾಲವದೆಷ್ಟು ಸಮೃದ್ಧವಾಗಿತ್ತು!’ ಎಂಬ ಪೀಠಿಕೆಯೊಂದಿಗೆ ಪ್ರಸುತ್ತ ಬದುಕಿನೊಂದಿಗಿನ ಅನಾವಶ್ಯಕ ಹೋಲಿಕೆಯೊಂದಿಗೆ ಹಳಹಳಿಕೆಯಾಗಿ ಕಾಣಿಸುವ ಸಾಧ್ಯತೆಯೂ ಉಂಟು. ಆದರೆ ಇಲ್ಲಿನ ಪ್ರಬಂಧಗಳನ್ನು ಓದುವಾಗ ಶ್ರವಣಕುಮಾರಿಯವರಲ್ಲಿ ಆ ಎಚ್ಚರವಿರುವುದು ಸ್ಪಷ್ಟ. ಸಾಮಾನ್ಯವಾಗಿ ಗತಕಾಲವೆಂಬುದು ಅಡುಗೆಮನೆಯ ಕಲಾಪದಲ್ಲಿ, ಯಾವುದೋ ಸಾಮಗ್ರಿಯಲ್ಲಿ ಜೀವಂತವಾಗಿ ಸ್ಮೃತಿಯಲ್ಲಿ ಮೂಡಿ ಬಂದರೆ, ಮನೆಯ ಹೊಸ್ತಿಲಲ್ಲಿ ವರ್ತಮಾನದ ಪ್ರಸ್ತುತತೆ ಅದಕ್ಕೊಂದು ನಿರ್ದಿಷ್ಟ ಸ್ವರೂಪವನ್ನು ನೀಡುತ್ತಿರುತ್ತದೆ. ವರ್ತಮಾನ ತನ್ನ ಬೇರನ್ನು ಭೂತದ ಗರ್ಭದಲ್ಲೋ ನಮ್ಮ ಅಗಾಧ ಸ್ಮೃತಿಯಲ್ಲೋ ಸದಾ ತಡಕಾಡುತ್ತಿರುತ್ತದೆ. ಶ್ರವಣಕುಮಾರಿ ಅವರ ಸ್ಮೃತಿಯಲ್ಲಿ ಹಾಗೆ ಸ್ಥಿರವಾಗಿ ಉಳಿದ ನೆನಪುಗಳೆಲ್ಲಾ ವಾಸ್ತವದಲ್ಲಿ ಅಕ್ಷರ ರೂಪ ಧರಿಸಿ, ವರ್ತಮಾನದಲ್ಲಿ ಖಚಿತ ಆಕಾರ ತಾಳಿ ನಿಂತಿರುವುದನ್ನು ಕಾಣುತ್ತೇವೆ. ಶ್ರವಣಕುಮಾರಿಯವರ ಈ ಪ್ರಬಂಧ ಸಂಕಲನದ ಲೇಖನಗಳು ಭೂತದೊಂದಿಗೆ ರಾಜಿ ಮಾಡಿಕೊಂಡು ವರ್ತಮಾನದಲ್ಲಿ ಸಂದಂತವುಗಳು. ಹಾಗಾಗಿ ಇಲ್ಲಿ ಹಳೇ ಬೇರೂ ಹೊಸ ಚಿಗುರೂ ಸಮ್ಮಿಲನಗೊಂಡು ಪ್ರಸುತ್ತ ಬದುಕಿಗೆ ಸಾಕ್ಷಿಯಾಗಿವೆ.

ಶ್ರವಣಕುಮಾರಿ ಉತ್ತಮ ಕತೆಗಾರ್ತಿ ಕೂಡಾ. ತೀರಾ ತಡವಾಗಿ ಲೇಖನಿ ಹಿಡಿದರೂ ಒಳ್ಳೆಯ ಸದಭಿರುಚಿಯ ಸಾಹಿತ್ಯವನ್ನೇ ಅವರು ನೀಡುತ್ತಾ ಬಂದಿದ್ದಾರೆ. ಅವರಿಂದ ಇನ್ನಷ್ಟು ಮೌಲಿಕ ಬರಹಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.

ಶ್ರೀಮತಿ ಜಯಶ್ರೀ ಕಾಸರವಳ್ಳಿ.