ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಕ್ತಿ ಕೊಟ್ಟುಬಿಡು

ಮಾಲತಿ ಶಶಿಧರ್
ಇತ್ತೀಚಿನ ಬರಹಗಳು: ಮಾಲತಿ ಶಶಿಧರ್ (ಎಲ್ಲವನ್ನು ಓದಿ)

ಯಾವುದೋ ಗೊಡವೆಯ
ಗೋಡೆ ಹಿಂದೆ
ಕೈ ಹಿಸುಕಿಕೊಳ್ಳುತ್ತಾ
ಅವಿತುಕೊಳ್ಳುವ ಬದಲು
ಕಣ್ಣಲ್ಲಿ ಕಣ್ಣಿಟ್ಟು ನಾಲ್ಕು
ಮಾತನಾಡಿದ್ದರೆ ಈ
ಒಂಟಿ ಹಕ್ಕಿಗೊಂದು
ಗೂಡಾದರೂ ಸಿಗುತ್ತಿತ್ತೇನೋ..

ಬಂದ ಒಲವ ಹೊಸ್ತಿಲಲ್ಲೇ ನಿಲ್ಲಿಸಿ
ಕಲ್ಪನೆಗಳ ಕಾಳಗದಲ್ಲಿ
ಸೆಣಸಾಡಿ ಸೋಲುವ ಬದಲು
ವಾಸ್ತವದಲ್ಲೊಂದು ದಿಟ್ಟ ಹೆಜ್ಜೆ
ಇಟ್ಟುಬಿಟ್ಟಿದ್ದರೆ
ಜಗವನ್ನೇ ಗೆಲ್ಲಬಹುದಿತ್ತೇನೋ..

ಹಿಂಬಾಲಿಸಿ ಬಂದ ಕಣ್ಣ ಪಾಪೆಯ
ಒತ್ತಾಯದಿ ಕಟ್ಟುಹಾಕಿ,
ತೇಲಿ ಬಂದ ಭಾವಗಳ
ಪುಸ್ತಕದ ಮೂಲೆಯಲ್ಲೆಲ್ಲೋ
ಹಿಡಿದಿಡುವ ಬದಲು
ಅದಕ್ಕೊಂದು ರಾಗ ಕಟ್ಟಿ ಹಾಡಿದ್ದರೆ
ಹೊಸ ಲೋಕವೇ ಸೃಷ್ಟಿಯಾಗುತ್ತಿತ್ತೇನೋ..

ಕೊನೆಗೂ ಉಳಿದದ್ದು
ಹಿಡಿಯಲು ಹೋದಷ್ಟೂ
ಸಿಗದೇ ಸತಾಯಿಸುವ
ನೀನೆಂಬ ನೆನಪಿನ ತಂಗಾಳಿಯಷ್ಟೇ,
ನನ್ನದಾಗಿಸಿಕೊಳ್ಳುವ ಮೊದಲೇ
ಕೈಜಾರಿ ಹೋದ ಆ
ನಿನ್ನ ಮಂದಸ್ಮಿತ ರೂಪವಷ್ಟೇ,
ಸುಳಿದು ಸುಳಿದು ಬಂದು ಇರಿಯುವ
ಆ ನಿನ್ನ ಕುಡಿನೋಟವಷ್ಟೇ…

ಒಂದೇ ಒಂದು ಬಾರಿಯಾದರೂ
ಬಂದು ಕೆನ್ನೆ ಮೇಲೆ ಸುರುಳಿ
ಸುತ್ತಿ ಜೋತಾಡುವ
ನನ್ನ ಗುಂಗುರು ಮುಂಗುರುಳ
ನಿನ್ನ ಬೆರಳಿಂದ ಕಿವಿಯ
ಹಿಂದಕ್ಕೆ ಇರಿಸಿ
ಮೂರು ಪದಗಳ
ಉಸುರಿಬಿಡು,
ಎದೆಯಲ್ಲಿ ಕಿಕ್ಕಿರಿದು
ತುಂಬಿಕೊಂಡಿರುವ
ಕನಸುಗಳಿಗೆಲ್ಲಾ ಒಂದೇ ಬಾರಿ
ಮುಕ್ತಿ ಕೊಟ್ಟುಬಿಡು..