ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಛಂದದ ಗೆಳತಿ

ಡಾ. ಶ್ರೀಶೈಲ ಮಾದಣ್ಣವರ
ಇತ್ತೀಚಿನ ಬರಹಗಳು: ಡಾ. ಶ್ರೀಶೈಲ ಮಾದಣ್ಣವರ (ಎಲ್ಲವನ್ನು ಓದಿ)


ಗೆಳತಿ! ಇಂದು ನಿನ್ನ ನೋಡುತ್ತಲೆ
ಕನ್ನಡ ಭಾಷೆಯಲ್ಲೊಂದು ಕವಿತೆ ಬರೆಯಲೇ?
ಅದಕ್ಕೊಂದು ಛಂದಸ್ಸಿನ ಸೀರೆ ಉಡಿಸಲೇ?
ನಿನ್ನ ಬಣ್ಣಬಣ್ಣದ ರವಿಕೆ ಪದಕ್ಕೂ ತೊಡಿಸಲೇ?
ವ್ಯಾಕರಣದ ಹಾಸು ತುಸು ನುಡಿಯಲ್ಲೇ ಹರಡಿ ಓದಿ ಬಿಡಲೇ?

ನಿನ್ನ ಕುಂಕುಮದ ಬೊಟ್ಟು
ಮೊಗಕ್ಕೆ ಸವರಿದ ಹೊನ್ನ ಹುಡಿಕಟ್ಟು:
ಮೂಗಿನಲಿ ಹೊಳೆವ ಹರಳಿನ ನತ್ತು
ಥೇಟ್ ಕನ್ನಡ ಭಾಷೆಯ ಅಲಂಕಾರದ ಗತ್ತು!

ಅಕ್ಷರದ ತದ್ಭವ ಅಕ್ಕರವೂ ಪ್ರೀತಿಗೆ ಸಮ
ಬಳಿ ಬಂದರೆ ನೀ ದ್ವಿರುಕ್ತಿ ಪದದಂತೆ ಘಮಘಮ:
ಕಂಡೆ ನಿನ್ನಲ್ಲೇ ಸಂಧಿ ಸಮಾಸಗಳ ಸಮಾಗಮ
ಪ್ರೀತಿ ಪ್ರೇಮಕೆ ಇನ್ನು ಹೊಸ ವ್ಯಾಖ್ಯಾನದ ಉಗಮ!

ಬದುಕೆಂದರೆ ಬರೀ ರಗಳೆ ಎಷ್ಟೊಂದು ಕುದಿಗಳು
ಮರೆತು ನಕ್ಕರೆ ಭೋಗ ಭಾಮಿನೀ ಷಟ್ಪದಿಗಳು:
ಸಕ್ಕರೆಯ ಮಾತು ಎರೆವ ನೀ ಎನಗೆ ಅಕ್ಷರ ದೀಪ
ಶಿಸ್ತು ಬದ್ಧತೆ ರೂಡಿಸಿ ಮೂಡಿಸಿದೆ ಕಾವ್ಯದ ರೂಪ!

ನಿನ್ನೊಳಗಿನ ಸೌಂದರ್ಯ ನಿತ್ಯ ಕಲಿಕೆಗೆ ಆಕರ
ನಿನ್ನಿಂದ ಹೊರಟ ಪ್ರತಿ ಹಿತಸದ್ದು ನನಗೀಗ ಸ್ವರ:
ನೀನಿಟ್ಟ ಹೆಜ್ಜೆಗೂ ಲಯ ಮೈಮಾಟವೇ ಪ್ರಾಸಾಕ್ಷರ
ನಿನ್ನೊಡನಾಟ ಲೋಪ ಆಗಮ ಆದೇಶಗಳ ಚಿತ್ತಾರ!

ನಿನ್ನ ‘ಕೆಂದುಟಿ’ ಗೆಳತಿ! ಇದು ಕರ್ಮಧಾರಯ ಕರಡು
ಸಂಸಾರ ಸಾಗರದಲ್ಲಿ ಯೋಗವಾಹಗಳು ಬರೀ ಎರಡು:
ನೋವಾದರೆ ‘ಅಮ್ಮ್’ ; ಖುಷಿಯಿದ್ದರೆ ‘ಅಹಾ’ ನೋಡು
ಅಂಅ:ಗಳ ಸಹಯೋಗ ಇಲ್ಲವಾದರೆ ಈ ಜಗವೇ ಬರಡು!