ಇತ್ತೀಚಿನ ಬರಹಗಳು: ವಿದ್ಯಾಶ್ರೀ ಅಡೂರ್ (ಎಲ್ಲವನ್ನು ಓದಿ)
- ಮುಚ್ಚಿಟ್ಟ ಹಣತೆ - ಏಪ್ರಿಲ್ 4, 2021
ಮುಗಿಲು ಜಿನುಗಿದೆ ನನ್ನ ಕಣ್ಣ ಎವೆಗಳಲಿ
ಆದರೂನು ನನ್ನ ಎದೆಗೆ ಬಾಯಾರಿದೆ
ಸಾಗರದಿ ಕಲೆತಿರುವ ನದಿಗಳಿದ್ದರೂ ಬಹಳ
ಮನ ಒಣಗಿ ಮರುಭೂಮಿಯಂತಾಗಿದೆ
ಹೂವ ತೋಟವು ಇಹುದು ಮುಳ್ಳ ಬೇಲಿಯ ನಡುವೆ
ಬೇಲಿಯದು ಕಾಯುತಿದೆ ಹೂವ ಹೊರಬೆಸೆಯದಂತೆ
ಸುಮದ ಘಮ ಬೆರೆಯುತ್ತ ಗಾಳಿಯ ಜೊತೆಗೂಡಿ
ಪಸರುತಿದೆ ತನ್ನಿರವ ಮೌನದಲು ಅರುಹುವಂತೆ
ಬೆಟ್ಟದ ಮೇಲಿರುವ ಪುಟ್ಟ ಮನೆಬಾಗಿಲಿಗೆ
ಇಟ್ಟ ರಂಗೋಲಿಯ ಕೈಯ ಕಟ್ಟಿರುವುದು
ಸುಟ್ಟು ತಿನಲೂ ಬರದ ಹೊಟ್ಟು ಶಾಸ್ತ್ರಗಳೆಲ್ಲ
ಕುಟ್ಟಿ ನೆತ್ತಿಯ ರಕ್ತ ಜಿನುಗುತಿಹುದು
ಮಾತುಮೀರಿದ ಮೌನ, ಮೌನದೊಳಗಿನ ಮಾತು
ಸೋರುತಿದೆ ತೂತು ಮಡಿಕೆಯ ಒಳಗ ನೀರಿನಂತೆ
ಹೊಸಕಿ ತುಳಿಯುವ ದುರುಳತನವೆಲ್ಲ ಮೀರುತ್ತ
ಉರಿಯುತಿದೆ ಮಂದ ಬೆಳಕಿನದೊಂದು ಹಣತೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ