ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬುದ್ಧ ಗುರುವಿಗೆ

ಡಿ ಎಸ್ ರಾಮಸ್ವಾಮಿ

ಬುದ್ಧ ಗುರುವಿಗೆ
ಎಲ್ಲರಂತೆ ನಾನು ನಮಿಸುವಾಗಲೂ
ಮುಖದ ಮೇಲಣ ಅವನ ಮಂದಹಾಸದ ಹಿಂದೆ
ಯಶೋಧರೆಯ ದುಃಖದ ಕಡಲು
ತಬ್ಬಲಿ ರಾಹುಲನ ಬಿಕ್ಕು
ಶುದ್ಧೋಧನನ ಪುತ್ರವಾತ್ಸಲ್ಯದ ಕುರುಡು
ದಟ್ಟವಾಗಿ ಕಾಣಿಸುತ್ತವೆ…

ಬುದ್ಧ ಗುರುವಿನ
ಬೋಧನೆಗೆ ಕಿವಿ ತೆರೆದಿಟ್ಟಾಗಲೂ
ಕಿಸಾಗೌತಮಿಯ ತಾಯಿ ಕರುಳಿನ ಸಂಕಟ
ಅಂಗುಲಿಮಾಲನ ಕೋಪ ಪ್ರತೀಕಾರದ ಪಣ
ಆಮ್ರಪಾಲಿಯ ಔತಣದ ಕಾರಣ
ಲುಚ್ಛವಿಯ ರಾಜನ ಅಹಂಕಾರಗಳೂ
ಕಣ್ಮುಂದೆ ಸುಳಿದು ಕಿವಿಯ ಮುಚ್ಚುತ್ತವೆ….

ಬುದ್ಧಂ ಶರಣಂ ಗಚ್ಛಾಮಿ
ಎಂದು ಪಠಿಸುವ ಮೊದಲು ಕತ್ತಿ ಹಿರಿದ ಚಂಡ ಅಶೋಕ
ತುಂಡರಿಸಿದ ಅವನ ಸೋದರರ ಜೀವಗಳು
ಸಂಘಂ ಶರಣಂ ಗಚ್ಛಾಮಿ
ಎನ್ನುತ್ತೆನ್ನುತ್ತಲೇ ನಿರ್ನಾಮವಾದ ಕಳಿಂಗದ ಉಸಿರ ಬಿಸಿ
ತಾಗಿಯೂ ಸಮರಾಂಗಣದಲ್ಲಿ ನೀರು ಹಂಚಿದ ಸಂತ
ತತ್ವೋಪದೇಶಗಳಿಗಿಂತಲೂ ಮಿಗಿಲಾಗಿ ತೋರುತ್ತಾನೆ…

ಬುದ್ಧನೆನ್ನುವುದು ಬರಿಯ ಹಸನ್ಮುಖ ಮುದ್ರೆಯಲ್ಲ
ಬೌದ್ಧಿಕತೆಯನಾವರಿಸುವ ತತ್ವ ಶಾಸ್ತ್ರ ಸಂಕೀರ್ತನೆಯಲ್ಲ
ಅವರಿವರನ್ನು ಕತ್ತಿಯ ಮೊನೆಯಲ್ಲಿ ಹೆದರಿಸುವುದೂ ಸಲ್ಲ
ಶತಮಾನಗಳ ಕೊಳೆ ಸುಲಭಕ್ಕೆ ಜಗ್ಗುವುದಿಲ್ಲ
ಅಂತ ಗೊತ್ತಿದ್ದೂ ಮತ್ತೆ ಮತ್ತೆ ಆಡಿದ ಮಾತಿನ ಅರ್ಥ-
ಇವತ್ತಿಗೂ ದಕ್ಕದೇ ಇನ್ನೂ ಆ ಅದೇ ಕತ್ತಲಲ್ಲೇ
ನರಳುತ್ತಿರುವಾಗ ಕಂಡ ಬೆಳದಿಂಗಳು!!