ಡಾ. ಜಯಂತಿ ಮನೋಹರ್
ಡಾ. ಜಯಂತಿ ಮನೋಹರ್ ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಸಾಹಿತ್ಯಿಕ ಹಾಗೂ ಚಾರಿತ್ರಿಕ ಸಂಶೋಧನೆಗಳಿಗೆ ಹಲವು ಕೊಡುಗೆಗಳನ್ನು ಕೊಟ್ಟಿದ್ದಾರೆ. ದೇಶ ವಿದೇಶಗಳಲ್ಲಿ ಕನ್ನಡ ಭಾಷಾ ಶಿಕ್ಷಣವನ್ನು ನೀಡುವುದರ ಜೊತೆಗೆ, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿದ್ವತ್ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಋಗ್ವೇದವನ್ನು ಏಕೆ ಓದಬೇಕು, ಅಗ್ನಿ ಮಂತ್ರಗಳು, ಸಿದ್ಧಾಂಜನ ಭಾಗ -೧, ಸಿಂಬಾಲಿಸಮ್ ಆಫ್ ಋಗ್ವೇದ ಇತ್ಯಾದಿ ಕೃತಿಗಳ ಜೊತೆಗೆ, ಭಾರತೀಯ ಚಿಂತನೆಯಲ್ಲಿ ಮನೋವೈಜ್ಞಾನಿಕ ತತ್ತ್ವಗಳು, ರಾವಣಾಸುರನ ಕಣಸು ಎಂಬ ನಾಟಕ, ಸೀತಾಂತರಂಗ ಎನ್ನುವ ಕಾದಂಬರಿಯನ್ನು ಇವರು ಬರೆದಿದ್ದಾರೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಲೇಖನಗಳು, ಅಂಕಣ ಬರಹಗಳು ಪ್ರಕಟವಾಗಿವೆ.
ಮೂರು ದಶಕಗಳಿಂದಲೂ ಸಾಮಾಜಿಕ ಹಾಗೂ ಶೈಕ್ಷಣಿಕ ವಿಷಯಗಳ ಮೇಲೆ ಸಾಕ್ಷ್ಯಚಿತ್ರಗಳ ನಿರ್ದೇಶನ/ನಿರ್ಮಾಣದಲ್ಲಿ ಇವರು ಸಕ್ರಿಯರಾಗಿದ್ದಾರೆ. ೧೯೮೨ ರಲ್ಲಿ, ನಿರ್ಮಾಣ ಮಾಡಿರುವ `ಗೋಕಾಕ್ ಚಳುವಳಿಯಸಾಕ್ಷ್ಯಚಿತ್ರ'ವು ನಮ್ಮ ನಾಡಿನ ಭಾಷೆಯ ಉಳಿವಿಗಾಗಿ ನಡೆದ ಚಾರಿತ್ರಿಕ ಹೋರಾಟದ ಬಗ್ಗೆ ತಯಾರಿಸಿರುವ ಏಕಮೇವ ಸಾಕ್ಷ್ಯ ಚಿತ್ರವಾಗಿದೆ. ಡಾ.ರಾಜ್ ಕುಮಾರ್ ಅವರು ಚಳುವಳಿಯಲ್ಲಿ ಭಾಗವಹಿಸಿದ್ದ ಹಲವಾರು ನೈಜ ದೃಶ್ಯಗಳನ್ನು ಒಳಗೊಂಡಿರುವ ಈ ಚಿತ್ರದ ಬಹಳಷ್ಟು ಭಾಗಗಳು, ಕನ್ನಡದ ಹಲವಾರು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿವೆ.