ವಿಜಯ್ ಹೆಮ್ಮಿಗೆ
ವಿಜಯ್ ಹೆಮ್ಮಿಗೆಯವರ ಮೂಲ ಹೆಸರು ಎಂ.ಎಸ್. ವಿಜಯರಾಘವನ್. ವಿಜಯ್ ಹೆಮ್ಮಿಗೆ ಎನ್ನುವುದು ಅವರು ಬರವಣಿಗೆಗಾಗಿ ಇಟ್ಟುಕೊಂಡ ಹೆಸರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಕಾಂ ಡಿಗ್ರಿ ಪಡೆದು, ಎಂ.ಕಾಂ, ಎಲ್.ಎಲ್.ಬಿ, ಪಿಜಿ ಡಿಪ್ಲಮೊ ಇನ್ ಮಾರ್ಕೆಟಿಂಗ್ ಮ್ಯಾನೇಜ‍್ಮೆಂಟ್, ಪಿಜಿ ಡಿಪ್ಲೊಮೊ ಇನ್ ಬುಸಿನೆಸ್ ಅಡ್ಮಿನ್, ಪಿಜಿ ಡಿಪ್ಲೊಮೊ ಇನ್ ಹೆಚ್.ಆರ್.ಡಿ ಯನ್ನು ಗಳಿಸಿದ್ದಾರೆ. ಅವರು ವಿಕ್ರಾಂತ್ ಟೈರ್ಸ್, ಕರ್ನಾಟಕ ಅಲ್ಯುಮಿನಿಯಂ, ಆಟೊಮೊಟಿವ್ ಆಕ್ಸಲ್ ನಂತಹ ಕಾರ್ಖಾನೆಗಳಲ್ಲಿ ಕೆಲಸ ಮಾಡಿ, ನಂತರ ೨೨ ವರ್ಷಗಳ ಕರ್ನಾಟಕ ರಾಜ್ಯ ಹಾಲು ಮಹಾಮಂಡಳದಲ್ಲಿ ಅಧಿಕಾರಿಯಾಗಿ ಹೆಸರು ಮಾಡಿ ಕರ್ನಾಟಕದ ಬೆಂಗಳೂರು, ಧಾರವಾಡ, ಬೆಳಗಾವಿ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ, ೨೦೦೬ ರಲ್ಲಿ ಸ್ವಯಂ ನಿವೃತ್ತಿ ಹೊಂದಿ, ಪ್ರಸ್ತುತ ಜೆ.ಎಸ್.ಎಸ್. ವಿಶ್ವವಿದ್ಯಾನಿಲಯದಲ್ಲಿ ಅಧೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
೧೯೮೫ರಿಂದ ಬರೆಯುತ್ತಿರುವ ಇವರ ಕಥೆಗಳು, ಹಾಸ್ಯ ವಿಡಂಬನೆಗಳು ಕವನಗಳು, ಚುಟುಕುಗಳು, ಸಂದರ್ಶನ, ಪ್ರವಾಸ ಕಥನ, ವೈಜ್ಞಾನಿಕ, ಪತ್ತೇದಾರಿ, ಕೃಷಿ, ಸಂಬಂಧಿತ ಲೇಖನಗಳು ಆಗಿಂದಾಗ್ಗೆ ವಾರ, ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಅವರ ಮೊದಲ ಹನಿಗವನ ಸಂಕಲನವಾದ ‘ಕಚಗುಳಿ’ಯನ್ನು ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ ಡಾ. ಎಂ.ಜಿ.ಆರ್. ಅರಸ್ ರವರು ೨೦೦೫ ರಲ್ಲಿ ಡಾ. ಹೆಚ್.ಎಸ್.ಕೆ. ಅವರಿಂದ ಲೋಕಾರ್ಪಣೆ ಮಾಡಿಸಿದ್ದರು,
‘ಭಾವಸ್ಪಂದನ’ ಕವನ ಸಂಕಲನ, ‘ಅಜ್ಜಿ ಮನೆ’ ಕಾದಂಬರಿ, 'ಗುಬ್ಬಚ್ಚಿ ಗೂಡು' ಕಥಾ ಸಂಕಲನ, ‘ಒಂದಿಷ್ಟು ನಕ್ಕು ಬಿಡಿ’ ಹಾಸ್ಯ ವಿಡಂಬನೆಗಳ ಸಂಕಲನ, ‘ಮೂಢ ಮನುಜ’ ಹನಿಗವನ ಸಂಕಲನ ಇತ್ಯಾದಿ ಕೃತಿಗಳನ್ನು ಇವರು ರಚಿಸಿದ್ದಾರೆ. ಹಾಗೆಯೇ ಇವರು ಹಲವು ಬಹುಮಾನಗಳಿಂದ ಪುರಸ್ಕೃತರಾಗಿದ್ದಾರೆ.